ಬೆಂಗಳೂರು; ಮತಾಂತರವನ್ನು ನಿಗ್ರಹಿಸುವ ಉದ್ದೇಶಿತ ಕರ್ನಾಟಕ ಧಾರ್ಮಿಕ ಹಕ್ಕುಗಳ ಸಂರಕ್ಷಣಾ ಮಸೂದೆಯನ್ನು ಕಳೆದ ಡಿಸೆಂಬರ್‌ನಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಿ ಅಂಗೀಕಾರ ಪಡೆದು ಮೇಲ್ಮನೆಯಲ್ಲಿ ಮುಖಭಂಗಕ್ಕೊಳಗಾಗಿರುವ ಸರ್ಕಾರವು, ಮಸೂದೆಯನ್ನು ಕಾಯ್ದೆಯಾಗಿ ಜಾರಿಗೊಳಿಸಲು ಹೊರಡಿಸಲಿರುವ ಸುಗ್ರೀವಾಜ್ಞೆಗೆ ಅಂತಿಮ ಸ್ವರೂಪ ನೀಡಿದೆ.
ಮಸೂದೆಯನ್ನು ವಿಧಾನಪರಿಷತ್ತಿನಲ್ಲಿ ಮಂಡಿಸದ ಕಾರಣ ಮಸೂದೆ ಅನುಷ್ಠಾನದಲ್ಲಿ ವಿಳಂಬವಾಗಬಾರದು ಎಂಬ ಉದ್ದೇಶದಿಂದ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ. ಈಗಾಗಲೇ ಸುಗ್ರೀವಾಜ್ಞೆಯ ಕರಡು ಪ್ರತಿಯನ್ನು ಇಲಾಖೆಯು ಸಿದ್ಧಪಡಿಸಿದೆ. ಸಚಿವ ಸಂಪುಟದ ಅನುಮೋದನೆ ಪಡೆದು ಅಂಗೀಕಾರಕ್ಕೆ ಶೀಘ್ರದಲ್ಲಿಯೇ ರಾಜ್ಯಪಾಲರಿಗೆ ಕಳಿಸಲಿದೆ ಎಂದು ಗೊತ್ತಾಗಿದೆ. ಸುಗ್ರೀವಾಜ್ಞೆಯ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ವಿಧೇಯಕ (2021) ವು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ಸುಗ್ರೀವಾಜ್ಞೆ 2022 ಹೆಸರಿನಲ್ಲಿ ಜಾರಿಗೊಳ್ಳಲಿದೆ. ಒಳಾಡಳಿತ ಇಲಾಖೆಯು ಮಂಡಿಸಿದ್ದ ಕರಡು ವಿಧೇಯಕವನ್ನು 2021ರ ಡಿಸೆಂಬರ್ 16ರಂದು ಪರಿಶೀಲನಾ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿತ್ತು. ಇದನ್ನು 2021ರ ಡಿಸೆಂಬರ್ 21ರಂದು ನಡೆದ ಸಚಿವ ಸಂಪುಟವು ಅನುಮೋದಿಸಿತ್ತು.
ಸಚಿವ ಸಂಪುಟದ ಪ್ರಸ್ತಾವನೆಯಲ್ಲೇನಿತ್ತು?
ರಾಜ್ಯದ ವಿವಿಧ ಭಾಗಗಳಲ್ಲಿ ಆಮಿಷಗಳು, ಬಲ ಪ್ರಯೋಗ, ದುಮಾರ್ಗಗಳ ಮೂಲಕ ಮತಾಂತರ ಮತ್ತು ಸಾಮೂಹಿಕ ಮತಾಂತರ ಕೃತ್ಯಗಳು ನಡೆದಿರುವ ಬಗ್ಗೆ ಅನೇಕ ಪ್ರಕರಣಗಳು ಬೆಳಕಿಗೆ ಬಂದಿರುತ್ತವೆ. ಇಂತಹ ಕೃತ್ಯಗಳು ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿ ಸಾಮಾಜಿಕ ಕ್ಷೋಭೆಗಳಿಗೆ ಕಾರಣವಾಗಲಿದೆ. ಇದು ಸಾರ್ವಜನಿಕ ರಕ್ಷಣೆ ಹೊತ್ತಿರುವ ಸಿಬ್ಬಂದಿಗಳಿಗೆ ಸವಾಲಿನ ಕೆಲಸವೂ ಆಗಿರುತ್ತದೆ. ಪ್ರಸ್ತುತ ಇಂತಹ ದುಷ್ಕೃತ್ಯಗಳಲ್ಲಿ ತೊಡಗಿರುವ ವ್ಯಕ್ತಿಗಳನ್ನು ದಂಡಿಸಲು ರಾಜ್ಯದಲ್ಲಿ ಯಾವುದೇ ಕಾನೂನು ಅಸ್ತಿತ್ವದಲ್ಲಿ ಇರುವುದಿಲ್ಲ. ಸಮಾಜವನ್ನು ಒಡೆಯುತ್ತಿರುವ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಯಾವುದೇ ವಿಳಂಬಕ್ಕೆ ಅವಕಾಶವಾಗದಂತೆ ತಕ್ಷಣ ಕಾನೂನುಕ್ರಮ ವಹಿಸಿ ನಿಯಂತ್ರಣಕ್ಕೆ ತರಬೇಕೆಂಬ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ಕಾಯ್ದೆ ತರುವ ಅಗತ್ಯವಿದೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಲಾಗಿತ್ತು.
ಅದೇ ರೀತಿ ವಿಧೇಯಕಕ್ಕೆ ರೆ.ಸ್ಟಾನಿಸುಲ್ಯಸ್/ ಮಧ್ಯಪ್ರದೇಶ ಮತ್ತು ಒರಿಸ್ಸಾ ಪ್ರಕರಣ (Rev.Stanislaus V/S State of Madhya Pradesh and Orissa) (1977) 1 ಎಸ್‌ಎಸ್‌ಸಿ 677ರಲ್ಲಿ ಸರ್ವೋಚ್ಛ ನ್ಯಾಯಾಲಯವು ಅನುಚ್ಛೇಧ 25ರಡಿಯಲ್ಲಿ ಧರ್ಮ ಪ್ರಚಾರದ ಹಕ್ಕು ಒಬ್ಬ ವ್ಯಕ್ತಿಯನ್ನ ಮತ್ತೊಂದು ಧರ್ಮಕ್ಕೆ ಮತಾಂತರಗೊಳಿಸುವ ಹಕ್ಕನ್ನು ಹೊಂದಿಲ್ಲ,’ ಎಂದು ನೀಡಿದ್ದ ತೀರ್ಪನ್ನು ಪ್ರಸ್ತಾವನೆಯಲ್ಲಿ ಉಲ್ಲೇಖಿಸಿರುವುದು ಮಾಹಿತಿ ಹಕ್ಕಿನಿಂದ ಪಡೆದಿರುವ ದಾಖಲೆಯಿಂದ ತಿಳಿದು ಬಂದಿದೆ.
ಹಾಗೆಯೇ ಉತ್ತರ ಪ್ರದೇಶವು (2020), ಉತ್ತರಾಖಂಡ್ (2018), ಹಿಮಾಚಲ ಪ್ರದೇಶವು (2019), ಮಧ್ಯಪ್ರದೇಶವು (2020)ರಲ್ಲಿ ಜಾರಿಗೊಳಿಸಿದ್ದ ಮತಾಂತರ ನಿಷೇಧ ಮಸೂದೆಯನ್ನು ಉಲ್ಲೇಖಿಸಿದ್ದ ಕಾನೂನು ಇಲಾಖೆಯು ವಿಧೇಯಕವನ್ನು ಅನುಮೋದಿಸಿತ್ತು.
ಬೆಳಗಾವಿಯಲ್ಲಿ ಕಳೆದ ಡಿಸೆಂಬರ್‌ನಲ್ಲಿ ನಡೆದ ವಿಧಾನಮಂಡಲ ಅಧಿವೇಶನದ ಕೊನೆಯ ದಿನವಾದ ಶುಕ್ರವಾರದಂದು ವಿರೋಧ ಪಕ್ಷಗಳ ಸದಸ್ಯರು ತಮ್ಮ ತಮ್ಮ ಊರುಗಳತ್ತ ತೆರಳಿದ್ದ ಸಮಯವನ್ನೇ ಬಳಸಿಕೊಡಿದ್ದ ಸರ್ಕಾರವು ವಿಧಾನ ಪರಿಷತ್‌ನಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಮಸೂದೆಗೆ ಅಂಗೀಕಾರ ಪಡೆಯಲು ಯತ್ನಿಸಿತ್ತು. ಆದರೆ ಪ್ರತಿಪಕ್ಷಗಳ ಬಿಗಿ ಪಟ್ಟಿನಿಂದಾಗಿ ತೀವ್ರ ಮುಖಭಂಗಕ್ಕೊಳಗಾಗಿದ್ದನ್ನು ಸ್ಮರಿಸಬಹುದು.
ವಾಸ್ತವದಲ್ಲಿ ರಾಜ್ಯದಲ್ಲಿ 2018, 2019, 2020, 2021ರ ಫೆಬ್ರುವರಿ ಅಂತ್ಯಕ್ಕೆ 16 ಪ್ರಕರಣಗಳಷ್ಟೇ ದಾಖಲಾಗಿದೆ. ವಿಶೇಷವೆಂದರೆ ಕರ್ನಾಟಕ ಧಾರ್ಮಿಕ ಹಕ್ಕುಗಳ ಸಂರಕ್ಷಣಾ ವಿಧೇಯಕ ತರಲು ವಿಧಾನಸಭೆ ಅಧಿವೇಶನದಲ್ಲಿ ಕೂಗೆಬ್ಬಿಸಿದ್ದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರು 2021ರ ಫೆಬ್ರುವರಿ 2ರಂದು ಕೇಳಿದ್ದ ಪ್ರಶ್ನೆಗೆ ಅಂದಿನ ಗೃಹ ಸಚಿವ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಈ ಅಂಕಿ ಅಂಶಗಳನ್ನು ಸದನಕ್ಕೆ ಉತ್ತರಿಸಿದ್ದರು.
ಮತ್ತೊಂದು ವಿಶೇಷ ಸಂಗತಿ ಎಂದರೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಕಳೆದ 10, 15 ವರ್ಷಗಳಿಂದ ಬಲವಂತವಾಗಿ ಜನರನ್ನು ಮತಾಂತರಗೊಳಿಸಲಾಗುತ್ತಿದೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಸದನಲ್ಲಿ ಎತ್ತರಿಸಿದ ದನಿಯಲ್ಲಿ ಮಾತನಾಡಿದ್ದರು. ಆದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಬಲವಂತವಾಗಿ ಮತಾಂತರ ಮಾಡಿರುವ ಬಗ್ಗೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಇನ್ನು ಗೂಳಿಹಟ್ಟಿ ಶೇಖರ್ ಅವರ ಸ್ವಕೇತ್ರ ಹೊಸದುರ್ಗ ತಾಲೂಕಿನಲ್ಲಿ ಯಾವುದೇ ಬಲವಂತವಾಗಿ ಅಥವಾ ಆಮಿಷವೊಡ್ಡಿ ಮತಾಂತರವನ್ನು ಮಾಡಿದ ಬಗ್ಗೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಬಸವರಾಜ ಬೊಮ್ಮಾಯಿ ಅವರು ಲಿಖಿತ ಉತ್ತರ ನೀಡಿದ್ದರು.
ಕೋಮು ಉದ್ವಿಗ್ನ ಮತ್ತು ಹಿಂಸಾಚಾರಕ್ಕೆ ಕಾರಣವಾಗುವ ಸಂಘಟಿತ ಸಾಮೂಹಿಕ ಮತಾಂತರ ಪ್ರಕರಣಗಳನ್ನು ತಡೆಗಟ್ಟಲು ಹಾಲಿ ಜಾರಿಯಲ್ಲಿರುವ ಕಾನೂನು ಕ್ರಮದ ಜತೆ ಕೇಂದ್ರ ಸರ್ಕಾರವೇ ಒಂದು ಕಾಯ್ದೆ ರೂಪಿಸಬೇಕು ಎಂದು ಜಸ್ಟೀಸ್ ಎಂ ಎಂ ಪುಂಚಿ ಆಯೋಗವು ಮಾಡಿದ್ದ ಶಿಫಾರಸ್ಸುಗಳಿಗೆ ದೇಶದ 9 ರಾಜ್ಯಗಳು ಅಸಮ್ಮತಿ ವ್ಯಕ್ತಪಡಿಸಿದ್ದವು.
ಜಸ್ಟೀಸ್ ಎಂ ಎಂ ಪುಂಚಿ ಆಯೋಗದ ಶಿಫಾರಸ್ಸುಗಳನ್ನು ಅಂತರ ರಾಜ್ಯ ಪರಿಷತ್ ಸಭೆಯಲ್ಲಿಯೂ ಚರ್ಚಿಸಲಾಗಿತ್ತು. ಆಯೋಗವು ಮಾಡಿದ್ದ ಶಿಫಾರಸ್ಸುಗಳ ಕುರಿತು ಚರ್ಚಿಸಬಹುದಾದ ವಿಷಯಗಳ ಬಗ್ಗೆ ಕರ್ನಾಟಕ ಸರ್ಕಾರದ ಒಳಾಡಳಿತ ಇಲಾಖೆಯು ಕಂಡಿಕೆವಾರು ಅಭಿಪ್ರಾಯವನ್ನು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ (ಆಡಳಿತ ಸುಧಾರಣೆ-ತರಬೇತಿ)ಗೆ ಅಭಿಪ್ರಾಯವನ್ನು 2020ರ ಸೆಪ್ಟಂಬರ್ 8ರಂದು ಕಳಿಸಿತ್ತು. ಹಾಗೆಯೇ ಕಾನೂನು ಇಲಾಖೆಯು ಈ ಸಂಬಂಧ ಒಪ್ಪಿಗೆ ಸೂಚಿಸಿ 2020ರ ಸೆ.15ರಂದು ಡಿಪಿಎಆರ್‌ಗೆ ಪತ್ರ ಬರೆದಿತ್ತು.