ಮತಾಂತರ ನಿಷೇಧ; ಅಂತರರಾಜ್ಯ ಪರಿಷತ್‌ ಸ್ಥಾಯಿ ಸಮಿತಿ ಅಭಿಪ್ರಾಯ ಬದಿಗಿರಿಸಿದ ಸರ್ಕಾರ

ಬೆಂಗಳೂರು; ಕೋಮು ಉದ್ವಿಗ್ನ ಮತ್ತು ಹಿಂಸಾಚಾರಕ್ಕೆ ಕಾರಣವಾಗುವ ಸಂಘಟಿತ ಸಾಮೂಹಿಕ ಮತಾಂತರ ಪ್ರಕರಣಗಳನ್ನು ತಡೆಗಟ್ಟಲು ಹಾಲಿ ಜಾರಿಯಲ್ಲಿರುವ ಕಾನೂನು ಕ್ರಮದ ಜತೆ ಕೇಂದ್ರ ಸರ್ಕಾರವೇ ಒಂದು ಕಾಯ್ದೆ ರೂಪಿಸಬೇಕು ಎಂದು ಜಸ್ಟೀಸ್‌ ಎಂ ಎಂ ಪುಂಚಿ ಆಯೋಗವು 2010ರಲ್ಲಿ ಮಾಡಿದ್ದ ಶಿಫಾರಸ್ಸಿಗೆ ದೇಶದ 9 ರಾಜ್ಯಗಳು 10 ವರ್ಷದ ಬಳಿಕ (2020) ಅಸಮ್ಮತಿ ವ್ಯಕ್ತಪಡಿಸಿದ್ದವು ಎಂಬುದು ಇದೀಗ ಬಹಿರಂಗವಾಗಿದೆ.

ಕೋಮು ಸೌಹಾರ್ದ ಕಾಪಾಡುವುದಕ್ಕೆ ಸಂಬಂಧಿಸಿದಂತೆ ಬಲವಂತದ ಮತಾಂತರ ನಿಯಂತ್ರಿಸಲು ಜಸ್ಟೀಸ್‌ ಎಂ ಎಂ ಪುಂಚಿ ಆಯೋಗವು ಮಾಡಿದ್ದ (9.2.07. ಪುಟ ಸಂಖ್ಯೆ 124) ಶಿಫಾರಸ್ಸನ್ನು ಅವಲೋಕಿಸಿ ಪ್ರತಿಕ್ರಿಯಿಸಿದ್ದ ಅಂತರ ರಾಜ್ಯ ಪರಿಷತ್‌ನ ಸ್ಥಾಯಿ ಸಮಿತಿಯು ತನ್ನ 12ನೇ ಸಭೆಯಲ್ಲಿ ‘ಮತಾಂತರವು ವ್ಯಕ್ತಿಯ ಆಯ್ಕೆಯಾಗಿದೆ ಮತ್ತು ಅದನ್ನು ಯಾರಿಂದಲೂ ನಿಯಂತ್ರಿಸಬಾರದು,’ ಎಂದು ಹೇಳಿತ್ತು.

ಧಾರ್ಮಿಕ ಸ್ವಾತಂತ್ರ್ಯವನ್ನು ನಿಯಂತ್ರಿಸುವುದು ಮತ್ತು ಹಸ್ತಕ್ಷೇಪ ಮಾಡುವ ಯಾವುದೇ ಶಾಸನವು ಸಾಮಾಜಿಕ ದ್ರೋಹವೆಂದು ಪ್ರತಿಕ್ರಿಯಿಸಿದ್ದ ಮಿಜೋರಾಂ ಸರ್ಕಾರವು ಆಯೋಗದ ಶಿಫಾರಸ್ಸನ್ನು ಬಲವಾಗಿ ವಿರೋಧಿಸಿತ್ತು.
ಜಸ್ಟೀಸ್‌ ಎಂ ಎಂ ಪುಂಚಿ ಆಯೋಗದ ಶಿಫಾರಸ್ಸುಗಳನ್ನು ಅಂತರ ರಾಜ್ಯ ಪರಿಷತ್‌ ಸಭೆಯಲ್ಲಿಯೂ ಚರ್ಚಿಸಲಾಗಿತ್ತು. ಆಯೋಗವು ಮಾಡಿದ್ದ ಶಿಫಾರಸ್ಸುಗಳ ಕುರಿತು ಚರ್ಚಿಸಬಹುದಾದ ವಿಷಯಗಳ ಬಗ್ಗೆ ಕರ್ನಾಟಕ ಸರ್ಕಾರದ ಒಳಾಡಳಿತ ಇಲಾಖೆಯು ಕಂಡಿಕೆವಾರು ಅಭಿಪ್ರಾಯವನ್ನು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ (ಆಡಳಿತ ಸುಧಾರಣೆ-ತರಬೇತಿ)ಗೆ ಅಭಿಪ್ರಾಯವನ್ನು 2020ರ ಸೆಪ್ಟಂಬರ್‌ 8ರಂದು ಕಳಿಸಿತ್ತು.

ಹಾಗೆಯೇ ಕಾನೂನು ಇಲಾಖೆಯು ಈ ಸಂಬಂಧ ಒಪ್ಪಿಗೆ ಸೂಚಿಸಿ 2020ರ ಸೆ.15ರಂದು ಡಿಪಿಎಆರ್‌ಗೆ ಪತ್ರ ಬರೆದಿತ್ತು. ಇದರ ಪ್ರತಿಯನ್ನು ‘ದಿ ಫೈಲ್‌’ ಮಾಹಿತಿ ಹಕ್ಕಿನ ಅಡಿಯಲ್ಲಿ ಪಡೆದುಕೊಂಡಿದೆ. ಅದೇ ರೀತಿ ಅಂತರರಾಜ್ಯ ಪರಿಷತ್‌ ಸ್ಥಾಯಿ ಸಮಿತಿಯ ನಡವಳಿಗಳೂ ಲಭ್ಯವಾಗಿವೆ.

ಜಸ್ಟೀಸ್‌ ಎಂ ಎಂ ಪುಂಚಿ ಆಯೋಗದ ಶಿಫಾರಸ್ಸುಗಳನ್ನು ರಾಜ್ಯ ಸರ್ಕಾರಗಳು ಅಂಗೀಕರಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಮಾದರಿ ಕಾನೂನು ಜಾರಿಗೊಳಿಸಬೇಕು ಎಂಬ ಶಿಫಾರಸ್ಸಿನ ಕುರಿತು ಕೇಂದ್ರ ಗೃಹ ಇಲಾಖೆಯು ರಾಜ್ಯ ಸರ್ಕಾರಗಳ ಅಭಿಪ್ರಾಯವನ್ನು ಕೋರಿತ್ತು. ಇದಕ್ಕೆ ಕರ್ನಾಟಕ ಸೇರಿದಂತೆ 24 ರಾಜ್ಯಗಳು ಪ್ರತಿಕ್ರಿಯಿಸಿದ್ದವು.
‘ಬಲವಂತದ ಮತಾಂತರ ತಡೆಗಟ್ಟುವ ಸಂಬಂಧ ಕಾನೂನುಗಳನ್ನು ಜಾರಿಗೊಳಿಸುವುದನ್ನು ಆಯಾ ರಾಜ್ಯಗಳಿಗೆ ಬಿಡಬೇಕು ಮತ್ತು ನಿರ್ದಿಷ್ಟ ಸ್ಥಳೀಯ ಪರಿಸ್ಥಿತಿಗಳ ಆಧಾರದ ಮೇಲೆ ಅದನ್ನು ನಿರ್ಧರಿಸಬಹುದು,’ ಎಂದು ಸ್ಥಾಯಿ ಸಮಿತಿಯು ಮಾಡಿದ್ದ ಶಿಫಾರಸ್ಸನ್ನು ಕರ್ನಾಟಕ ಸರ್ಕಾರದ ಒಳಾಡಳಿತ ಇಲಾಖೆಯು ಒಪ್ಪಿಕೊಂಡಿತ್ತು.

ಮತಾಂತರ ತಡೆಗಟ್ಟುವ ಸಂಬಂಧ ಕಾನೂನು ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಸ್ವಾತಂತ್ರ್ಯವನ್ನು ನಿಯಂತ್ರಿಸುವ ಮತ್ತು ಹಸ್ತಕ್ಷೇಪ ಮಾಡುವ ಯಾವುದೇ ಶಾಸನವು ಸಾಮಾಜಿಕ ದ್ರೋಹವೆಂದು ಮಿಜೋರಾಂ ರಾಜ್ಯ ಸರ್ಕಾರವು ಪ್ರತಿಕ್ರಿಯಿಸಿತ್ತು ಎಂಬುದು ಅಂತರರಾಜ್ಯ ಪರಿಷತ್‌ನ ಸ್ಥಾಯಿ ಸಮಿತಿ ಸಭೆ ನಡವಳಿಯಿಂದ ಗೊತ್ತಾಗಿದೆ.

ಸ್ಥಾಯಿ ಸಮಿತಿಯ ಅವಲೋಕನದಲ್ಲೇನಿದೆ

ಕೆಲವು ರಾಜ್ಯಗಳು ಈಗಾಗಲೇ ಮತಾಂತರ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿವೆ ಎಂಬುದನ್ನು ಸ್ಥಾಯಿ ಸಮಿತಿಯು ಗಮನಿಸಿದೆ. ಮತಾಂತರವು ವ್ಯಕ್ತಿಯ ಆಯ್ಕೆಯಾಗಿದೆ ಮತ್ತು ಅದನ್ನು ಯಾರಿಂದಲೂ ನಿಯಂತ್ರಿಸಬಾರದು ಎಂದು ಗಮನಿಸಿದೆ. ಆದಾಗ್ಯೂ ಬಲವಂತದ ಮತಾಂತರವು ಕಾನೂನುಬಾಹಿರವಾಗಿದೆ. ಬಲಾತ್ಕಾರದಿಂದ, ಆಮಿಷದಿಂದ ಅಥವಾ ಒತ್ತಡದಿಂದ ಯಾವುದೇ ಮತಾಂತರವು ಸ್ವಯಂಪ್ರೇರಿತವಲ್ಲ ಮತ್ತು ಸಂವಿಧಾನವು ಅದನ್ನು ಒಪ್ಪಿಕೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಕಾನೂನುಗಳನ್ನು ಜಾರಿಗೊಳಿಸುವುದನ್ನು ರಾಜ್ಯಗಳಿಗೆ ಬಿಡಬೇಕು ಮತ್ತು ಅವರು ತಮ್ಮ ನಿರ್ದಿಷ್ಟ ಸ್ಥಳೀಯ ಪರಿಸ್ಥಿತಿಗಳ ಆಧಾರದ ಮೇಲೆ ನಿರ್ಧರಿಸಬಹುದು ಎಂದು ಸ್ಥಾಯಿ ಸಮಿತಿಯು ಶಿಫಾರಸ್ಸು ಮಾಡಿತ್ತು ಎಂಬುದು ತಿಳಿದು ಬಂದಿದೆ.

ಕರ್ನಾಟಕ, ಆಂಧ್ರ ಪ್ರದೇಶ, ಅಸ್ಸಾಂ, ಛತ್ತೀಸ್‌ಗಡ್‌, ಗೋವಾ, ಗುಜರಾತ್‌, ಹರ್ಯಾಣ, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಜಾರ್ಖಂಡ್‌, ಮಧ್ಯಪ್ರದೇಶ, ರಾಜಸ್ಥಾನ, ಸಿಕ್ಕೀಂ, ತಮಿಳುನಾಡು ಮತ್ತು ಉತ್ತರ ಪ್ರದೇಶ ಸರ್ಕಾರವು ಈ ಶಿಫಾರಸ್ಸನ್ನು ಒಪ್ಪಿವೆ.

ಅಸಮ್ಮತಿ ವ್ಯಕ್ತಪಡಿಸಿರುವ ರಾಜ್ಯಗಳು ನೀಡಿರುವ ಪ್ರತಿಕ್ರಿಯೆ

ಅರುಣಾಚಲ ಪ್ರದೇಶ; ಬಲಾತ್ಕಾರದ ಆಮಿಷದ ಮೂಲಕ ಮತಾಂತರವು ಕೋಮು ಉದ್ವಿಗ್ನತೆ ಮತ್ತು ಹಿಂಸಾಚಾರಕ್ಕೆ ಕಾರಣವಾಗಬಹುದು. ಬಲಾತ್ಕಾರ ಅಥವಾ ಆಮಿಷದ ಮೂಲಕ ಯಾವುದೇ ಪರಿವರ್ತನೆಯ ಪ್ರಯತ್ನವನ್ನು ಕಟ್ಟುನಿಟ್ಟಾಗಿ ವ್ಯವಹರಿಸಬೇಕು.

ಬಿಹಾರ; ಅಂತಹ ಕಾಯಿದೆಯು ಅಂಗೀಕಾರಗೊಂಡರೆ ಬಹುಸಂಖ್ಯಾತ ಧರ್ಮದಿಂದ ಅಲ್ಪ ಸಂಖ್ಯಾತ ಧರ್ಮಕ್ಕೆ ಮತ್ತು ಪ್ರತಿಯಾಗಿ ಮತಾಂತರಕ್ಕೆ ಸಮಾನವಾಗಿ ನೋಡುವಂತೆ ಸಮತೋಲಿತವಾಗಿರಬೇಕು. ಯಾವುದೇ ಬಲಾತ್ಕಾರ ಅಥವಾ ಆಮಿಷವಿಲ್ಲದೆ ನಿಜವಾದ ನಂಬಿಕೆಯ ಬದಲಾವಣೆಯನ್ನು ಶಿಕ್ಷೆಯಿಂದ ರಕ್ಷಿಸಬೇಕು

ಮಹಾರಾಷ್ಟ್ರ; ಪ್ಯಾರಾ 9.2.07 ಅನ್ನು ಒಪ್ಪುವ ಬದಲು ಕೇಂದ್ರ ಸರ್ಕಾರವೇ ಪ್ರಸ್ತಾವನೆ ತಯಾರಿಸಬೇಕು.
ಮಣಿಪುರ; ಹೆಚ್ಚಿನ ಪರಿಶೀಲನೆ ಅಗತ್ಯವಿದೆ.

ಮಿಜೋರಾಂ; ಪ್ರತಿಯೊಬ್ಬ ನಾಗರಿಕನು ತನ್ನ ಆಯ್ಕೆಯ ಯಾವುದೇ ನಂಬಿಕೆಯನ್ನು ಮತ್ತು ಸ್ವಾತಂತ್ರ್ಯವನ್ನು ಹೊಂದಿರಬೇಕು. ಧಾರ್ಮಿಕ ಸ್ವಾತಂತ್ರ್ಯವನ್ನು ನಿಯಂತ್ರಿಸುವ ಮತ್ತು ಹಸ್ತಕ್ಷೇಪ ಮಾಡುವ ಯಾವುದೇ ಶಾಸನವು ಸಾಮಾಜಿಕ ದ್ರೋಹದ ಹೆಜ್ಜೆಯಾಗಿದೆ.

ನಾಗಾಲ್ಯಾಂಡ್‌; ಮತಾಂತರ ವಿರೋಧಿ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ದುರುಪಯೋಗಪಡಿಸಿಕೊಳ್ಳಲಾಗುತ್ತದೆ. ಆದ್ದರಿಂದ ಅಂತಹ ಕಾನೂನನ್ನು ಶಿಫಾರಸು ಮಾಡುವುದಿಲ್ಲ ಅಥವಾ ಒಪ್ಪುವುದಿಲ್ಲ.

ಪಂಜಾಬ್‌; ಈ ವಿಷಯವು ರಾಜ್ಯದ ಪಟ್ಟಿಯ ಅಡಿಯಲ್ಲಿ ಬರುತ್ತದೆ. ಯಾವುದೇ ಕೇಂದ್ರೀಯ ಕಾಯಿದೆಯನ್ನು ಪ್ರಸ್ತಾಪಿಸಿದರೆ ವಿಷಯವನ್ನು ಮೊದಲು ಅಂತರರಾಜ್ಯ ಪರಿಷತ್‌ನಲ್ಲಿ ಚರ್ಚಿಸಬೇಕು ಮತ್ತು ಬಹುಮತದಿಂದ ಅನುಮೋದಿಸಬೇಕು. ಆದ್ದರಿಂದ ಈ ವಿಷಯದಲ್ಲಿ ಸಮತೋಲಿತ ದೃಷ್ಟಿಕೋನವನ್ನು ತೆಗೆದುಕೊಳ್ಳಬೇಕು.

ತ್ರಿಪುರ ಮತ್ತು ಉತ್ತರಾಖಂಡ್‌ ಈವಿಷಯದ ಕುರಿತು ಯಾವುದೇ ಕಾರಣಗಳನ್ನು ನೀಡದೇ ಆಯೋಗದ ಶಿಫಾರಸ್ಸನ್ನು ವಿರೋಧಿಸಿರುವುದು ತಿಳಿದು ಬಂದಿದೆ.

ಜಸ್ಟೀಸ್‌ ಎಂ ಎಂ ಪುಂಚಿ ಆಯೋಗವು 2010ರಲ್ಲಿ ಮಾಡಿದ್ದ ಶಿಫಾರಸ್ಸುಗಳಿಗೆ ಸಂಬಂಧಿಸಿದಂತೆ ಕೇಂದ್ರದ ಬಿಜೆಪಿ ಸರ್ಕಾರವು 2020ರಲ್ಲಿ ಚರ್ಚೆಗೆ ಕೈಗೆತ್ತಿಕೊಂಡಿತ್ತು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ರಾಜನಾಥ್‌ ಸಿಂಗ್‌ ಅವರು ಅಂತರರಾಜ್ಯ ಪರಿಷತ್‌ ಸಭೆಯಲ್ಲಿ ಪಾಲ್ಗೊಂಡಿದ್ದ ವೇಳೆಯಲ್ಲಿ ಆಯೋಗದ ಶಿಫಾರಸ್ಸುಗಳ ಕುರಿತು ಚರ್ಚೆಯಾಗಿತ್ತು.

ರಾಜ್ಯದಲ್ಲಿ ಬಲವಂತ ಮತ್ತು ಸಾಮೂಹಿಕ ಮತಾಂತರ ಕೃತ್ಯಗಳು ನಡೆಯುತ್ತಿರುವುದರಿಂದಲೇ ಕರ್ನಾಟಕ ಧಾರ್ಮಿಕ ಹಕ್ಕುಗಳ ಸಂರಕ್ಷಣಾ ವಿಧೇಯಕ ಮಂಡಿಸಲಾಗಿದೆ ಎಂದು ಸಚಿವ ಆರಗ ಜ್ಞಾನೇಂದ್ರ ಅವರು ಸಮರ್ಥಿಸಿಕೊಂಡಿದ್ದಾರಾದರೂ ಒಳಾಡಳಿತ ಇಲಾಖೆಯ ಕಾನೂನು ಸುವ್ಯವಸ್ಥೆ ವಿಭಾಗದಲ್ಲಿ ಈ ವಿಧೇಯಕ ಕುರಿತಂತೆ ಯಾವ ಮಾಹಿತಿಯೂ ಲಭ್ಯವಿಲ್ಲ.

ರಾಜ್ಯದಲ್ಲಿ 2018, 2019, 2020, 2021ರ ಫೆಬ್ರುವರಿ ಅಂತ್ಯಕ್ಕೆ 16 ಪ್ರಕರಣಗಳಷ್ಟೇ ದಾಖಲಾಗಿದೆ. ವಿಶೇಷವೆಂದರೆ ಕರ್ನಾಟಕ ಧಾರ್ಮಿಕ ಹಕ್ಕುಗಳ ಸಂರಕ್ಷಣಾ ವಿಧೇಯಕ ತರಲು ವಿಧಾನಸಭೆ ಅಧಿವೇಶನದಲ್ಲಿ ಕೂಗೆಬ್ಬಿಸಿದ್ದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್‌ ಅವರು 2021ರ ಫೆಬ್ರುವರಿ 2ರಂದು ಕೇಳಿದ್ದ ಪ್ರಶ್ನೆಗೆ ಅಂದಿನ ಗೃಹ ಸಚಿವ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಈ ಅಂಕಿ ಅಂಶಗಳನ್ನು ಸದನಕ್ಕೆ ಉತ್ತರಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts