ಮೈಸೂರಿನಲ್ಲಿ 2.30 ಎಕರೆ ಜಮೀನು; ಆಸ್ತಿದಾಯಿತ್ವಪಟ್ಟಿಯಲ್ಲಿ ಘೋಷಿಸದ ರವಿಚನ್ನಣ್ಣವರ್

ಬೆಂಗಳೂರು; ಸಿಐಡಿ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್‌ ಅವರು ತಮ್ಮ ತಾಯಿ ರತ್ನವ್ವ ಚನ್ನಣ್ಣನವರ್‌ ಮೈಸೂರು ತಾಲೂಕಿನಲ್ಲಿ 2019ರಲ್ಲಿ ಖರೀದಿಸಿದ್ದ 2.30 ಎಕರೆ ಜಮೀನಿನ ವಿವರವನ್ನು 2020 ಮತ್ತು 2021ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಆಸ್ತಿ ದಾಯಿತ್ವ ಪಟ್ಟಿಯಲ್ಲಿ ಘೋಷಿಸದಿರುವುದು ಇದೀಗ ಬಹಿರಂಗವಾಗಿದೆ. ಆದರೆ ತಾಯಿ ರತ್ನವ್ವ ಚನ್ನಣ್ಣವರ್‌ ಅವರು ಗದಗ್‌ನ ನೀಲಗುಂದ, ಮುಂಡರಗಿಯಲ್ಲಿ ಪಿತ್ರಾರ್ಜಿತವಾಗಿ ಹೊಂದಿರುವ ಸ್ಥಿರಾಸ್ತಿ ವಿವರಗಳನ್ನಷ್ಟೇ ಆಸ್ತಿದಾಯಿತ್ವ ಪಟ್ಟಿಯಲ್ಲಿ ಘೋಷಿಸಿದ್ದಾರೆ.

ರವಿ ಡಿ ಚನ್ನಣ್ಣನವರ್‌ ಅವರ ವಿರುದ್ಧ ಹಲವು ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರಕ್ಕೆ ಅವರು ಸಲ್ಲಿಸಿರುವ ಆಸ್ತಿ ದಾಯಿತ್ವ ಪಟ್ಟಿಯು ಮುನ್ನೆಲೆಗೆ ಬಂದಿದೆ.

ಕೇಂದ್ರ ಸರ್ಕಾರದ ಅಧಿಕೃತ ಜಾಲತಾಣಕ್ಕೆ ರವಿ ಡಿ ಚನ್ನಣ್ಣನವರ್‌ ಅವರು ಅಪ್‌ಲೋಡ್‌ ಮಾಡಿರುವ ಮೂರು ವರ್ಷಗಳ ಆಸ್ತಿ ದಾಯಿತ್ವ ಪಟ್ಟಿ ಮತ್ತು ಅವರ ತಾಯಿ ರತ್ನವ್ವ ಚನ್ನಣ್ಣನವರ್‌ ಅವರು ಮೈಸೂರು ತಾಲೂಕಿನಲ್ಲಿ ಖರೀದಿಸಿರುವ ಜಮೀನಿಗೆ ಸಂಬಂಧಿಸಿದ ಆರ್‌ಟಿಸಿ, ತಿಳಿವಳಿಕೆ ಚೀಟಿ, ಮ್ಯುಟೇಷನ್‌ ಆದೇಶ, ಸ್ಥಿರ ಸ್ವತ್ತಿನ ಶುದ್ದ ಕ್ರಯಪತ್ರದ ಪ್ರತಿಗಳು ‘ದಿ ಫೈಲ್’ಗೆ ಲಭ್ಯವಾಗಿದೆ.

ಮೈಸೂರು ತಾಲೂಕಿನಲ್ಲಿ ಖರೀದಿಸಿರುವ ಜಮೀನಿನ ದಾಖಲೆಗಳನ್ನು ಭೂ ದಾಖಲೆಗಳ ಇಲಾಖೆಯ ಅಧಿಕೃತ ಜಾಲತಾಣ (ಭೂಮಿ) ಮತ್ತು ಮೈಸೂರಿನ ಪಶ್ಚಿಮ ಉಪ ನೋಂದಾಣಾಧಿಕಾರಿಗಳ ಕಚೇರಿಯಲ್ಲಿ ನೋಂದಾಯಿಸಿರುವ ಸ್ಥಿರ ಸ್ವತ್ತಿನ ಶುದ್ಧ ಕ್ರಯಪತ್ರವನ್ನು ಪಡೆದುಕೊಂಡಿದೆ.

ಮೈಸೂರಿನ ಸ್ಥಿರಾಸ್ತಿ ಖರೀದಿ ವಿವರ ಆಸ್ತಿದಾಯಿತ್ವ ಪಟ್ಟಿಯಲ್ಲಿ ಘೋಷಿಸಿಲ್ಲವೇಕೆ?

ತಮ್ಮ ತಾಯಿ ರತ್ನವ್ವ ಚನ್ನಣ್ಣನವರ್‌ ಅವರು ಗದಗ್‌ನ ನೀಲಗುಂದದಲ್ಲಿ ಪಿತ್ರಾರ್ಜಿತವಾಗಿ ಹೊಂದಿರುವ ಮತ್ತು ಖರೀದಿಸಿರುವ ಜಮೀನಿನ ವಿವರಗಳನ್ನು 2018-19ರಿಂದ 2020-21ನೇ ಸಾಲಿನವರೆಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಆಸ್ತಿ ದಾಯಿತ್ವ ಪಟ್ಟಿಯಲ್ಲಿ ಘೋಷಿಸಲಾಗಿದೆ. ಆದರೆ ಮೈಸೂರು ತಾಲೂಕಿನ ಜಯಪುರ ಹೋಬಳಿಯ ತಳೂರು ಗ್ರಾಮದಲ್ಲಿ 2019ರಲ್ಲಿ ಕ್ರಯಕ್ಕೆ ಪಡೆದಿದ್ದ 2 ಎಕರೆ 30 ಗುಂಟೆ ಜಮೀನಿನ ವಿವರಗಳನ್ನು 2020 ರಲ್ಲೂ ಘೋಷಿಸದಿರುವುದು ಅವರು ಸಲ್ಲಿಸಿರುವ ಆಸ್ತಿದಾಯಿತ್ವ ಪಟ್ಟಿಯಿಂದ ತಿಳಿದು ಬಂದಿದೆ.

ಅಲ್ಲದೆ 2021ರ ಆಸ್ತಿದಾಯಿತ್ವ ಪಟ್ಟಿಯಲ್ಲಿ ಘೋಷಿಸದಿರುವುದು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಿರುವ ಆಸ್ತಿ ದಾಯಿತ್ವ ಪಟ್ಟಿಯಿಂದ ಗೊತ್ತಾಗಿದೆ.

ಮೈಸೂರು ಜಿಲ್ಲೆ ಮೈಸೂರು ತಾಲೂಕಿನ ಜಯಪುರ ಹೋಬಳಿಯ ತಳೂರು ಗ್ರಾಮದಲ್ಲಿ ಸರ್ವೆ ನಂಬರ್‌ 79/1 ಮತ್ತು 79/2 ರಲ್ಲಿ ಕೆಂಪು ಮಣ್ಣಿನ ನಮೂನೆ ಇರುವ 2.30 ಎಕರೆ ಜಮೀನನ್ನು (MR H42/2018-19, 21/03/2019) (11361/2018-19ರಂತೆ- ದಿನಾಂಕ 2019ರ ಜನವರಿ 31ರಂದು ) ಸೋಮನಾಯಕ ಮತ್ತು ಅವರ ಕುಟುಂಬದವರಿಂದ ರವಿ ಚನ್ನಣ್ಣವರ್‌ ಅವರ ತಾಯಿ ರತ್ನವ್ವ ಡಿ ಚನ್ನಣ್ಣವರ್‌ ಅವರು ಖರೀದಿಸಿರುವುದು ತಿಳಿದು ಬಂದಿದೆ.

ಈ ಜಮೀನನ್ನು 40,50,000 ರು.ಗಳಿಗೆ ಖರೀದಿಸಿರುವುದು ಸ್ಥಿರ ಸ್ವತ್ತಿನ ಶುದ್ಧ ಕ್ರಯಪತ್ರದಿಂದ ತಿಳಿದು ಬಂದಿದೆ. ಇದನ್ನು ಮೈಸೂರಿನ ಪಶ್ಚಿಮ ಉಪ ನೋಂದಾಣಾಧಿಕಾರಿಗಳ ಕಚೇರಿಯಲ್ಲಿ ನೋಂದಾಯಿಸಲಾಗಿದೆ.

ತಲಾ ಎಕರೆಗೆ 14, 72,727 ರು.ನಂತೆ ಘೋಷಿಸಿಕೊಂಡು ಒಟ್ಟು 2 ಎಕರೆ 30 ಗುಂಟೆಯನ್ನು 40,50,000 ರು.ಗಳಂತೆ ಖರೀದಿಸಿದ್ದಾರೆ. ಇದೇ 2 ಎಕರೆ 30 ಗುಂಟೆಗೆ ಸರ್ಕಾರಿ ಮಾರ್ಗಸೂಚಿ ದರ 60,50,000 ರು.ಗಳಾಗಿದ್ದು ಇದಕ್ಕೆ ತಗುಲುವ ನೋಂದಣಿ ವೆಚ್ಚ, ಮುದ್ರಾಂಕ ಶುಲ್ಕ ಸೇರಿ 3, 98, 275 ರು.ಗಳನ್ನು ( ಮುದ್ರಾಂಕ ಶುಲ್ಕ 3,37,775 ರು., ನೋಂದಣಿ ಶುಲ್ಕ 60,500) ಪಾವತಿಸಿರುವುದು ಕಂಡು ಬರುತ್ತದೆ. ಈ ಜಮೀನಿಗೆ ಮುಕ್ತ ಮಾರುಕಟ್ಟೆಯಲ್ಲಿ ಎಕರೆಗೆ ಅಂದಾಜು 70 ಲಕ್ಷ ರು. ವರೆಗೆ ದರವಿದೆ ಎಂದು ಗೊತ್ತಾಗಿದೆ.

ಈ ಜಮೀನು 2002-2003ರವರೆಗೆ ಸಣ್ಣ ಮಂಚಮ್ಮ (ಭೂಪರಿಹಾರ) ಅವರ ಹೆಸರಿನಲ್ಲಿತ್ತು ಎಂಬುದು ಮ್ಯುಟೇಷನ್‌ ಆದೇಶದಿಂದ (ರಿ ನಂ 6001/02-03- ದಿನಾಂಕ 06-09-02ರ ವಿಭಾಗ ಪತ್ರ ಅನುಸರಿಸಿ) ತಿಳಿದು ಬಂದಿದೆ. 2.30 ಎಕರೆ ವಿಸ್ತೀರ್ಣದ ಜಮೀನನ್ನು ಸಣ್ಣ ಮಂಚಮ್ಮ ಅವರು ತಮ್ಮ ಮಕ್ಕಳಾದ ರಾಮನಾಯಕ ಎಂಬುವರಿಗೆ 0.30 ಗುಂಟೆ ಮತ್ತು ಸೋಮನಾಯಕ ಎಂಬುವರ ಹೆಸರಿಗೆ 2.00 ಎಕರೆ ಜಮೀನನ್ನು 2002ರ ಸೆಪ್ಟಂಬರ್‌ 6ರಂದು ಹಕ್ಕು ಬದಲಾವಣೆ (ವಹಿವಾಟು ಸಂಖ್ಯೆ 6182, ಸಂಖ್ಯೆ MCR 224/02-03) ಮಾಡಿರುವುದು ಮ್ಯುಟೇಷನ್‌ ರಿಜಿಸ್ಟರ್‌ ಪ್ರತಿಯಿಂದ ಗೊತ್ತಾಗಿದೆ.

2002ರ ಸೆಪ್ಟಂಬರ್‌ 6ರಂದು ವಿಭಾಗ ಪತ್ರ ಅನುಸರಿಸಿ ಗ್ರಾಮದಲ್ಲಿ ನಮೂನೆ 12 ಮತ್ತು 21ನ್ನು ಜಯಪುರ ಹೋಬಳಿಯ ರಾಜಸ್ವ ನಿರೀಕ್ಷಕರು ಪ್ರಚುರಪಡಿಸಿದ್ದರು. ಈ ಸಂಬಂಧ ಗ್ರಾಮದಲ್ಲಿ ಯಾರೊಬ್ಬರಿಂದಲೂ ಆಕ್ಷೇಪಣೆ ಬಂದಿರುವುದಿಲ್ಲ. ಸರ್ವೆ ನಂಬರ್‌ 78 ಮತ್ತು 79 ಖಾತೆಯು ಸಣ್ಣ ಮಂಚಮ್ಮನ ಹೆಸರಿನಲ್ಲಿದ್ದು ತಾಳೆ ಇತ್ತು ಎಂಬುದು ದಾಖಲೆಯಿಂದ ತಿಳಿದು ಬಂದಿದೆ. ವಿಭಾಗ ಪತ್ರದಂತೆ ಅವರ ಮಕ್ಕಳಿಗೆ ಎ.ಬಿ.ಸಿ.ಡಿ ರಂತೆ ಖಾತೆ (ಮ್ಯುಟೇಷನ್‌ ಆದೇಶದ ದಿನಾಂಕ 2002ರ ಡಿಸೆಂಬರ್‌ 18 ) ಅಂಗೀಕರಿಸಿರುವುದು ಗೊತ್ತಾಗಿದೆ.

16 ವರ್ಷಗಳ ತರುವಾಯ ಸರ್ವೆ ನಂಬರ್‌ 79/1 ರಲ್ಲಿ ಸೋಮನಾಯಕ ಎಂಬುವರ ಹೆಸರಿನಲ್ಲಿದ್ದ 2.00 ಎಕರೆ ಮತ್ತು ಸರ್ವೆ ನಂಬರ್‌ 79/2ರಲ್ಲಿದ್ದ 0.30 ಗುಂಟೆ ಜಮೀನು ರತ್ನವ್ವ ಡಿ ಚನ್ನಣ್ಣವರ ಕೋಂ ದ್ಯಾಮಪ್ಪ ಅವರ ಹೆಸರಿಗೆ ಹಕ್ಕು ಬದಲಾವಣೆಯಾಗಿದೆ. ಈ ಜಮೀನನ್ನು ಕ್ರಯ ಮಾಡಿಕೊಟ್ಟಿರುವ ಸಂಬಂಧ (ಸಬ್‌ ರಿಜಿಸ್ಟರ್‌ ನೋಂದಣಿ ಸಂಖ್ಯೆ (MYW-1-11361-2018-19) 2019ರ ಜನವರಿ 31ರಂದು ತಿಳಿವಳಿಕೆ ಚೀಟಿ ಹೊರಡಿಸಲಾಗಿರುತ್ತದೆ.

ಈ ಮ್ಯುಟೇಷನ್‌ ಆದೇಶವನ್ನು ರಾಜಸ್ವ ನಿರೀಕ್ಷಕರ ಆದೇಶದಂತೆ 2019ರ ಮಾರ್ಚ್ 2019ರಂದು ಹೊರಡಿಸಲಾಗಿದೆ. ಉದ್ದೇಶಿತ ಮ್ಯುಟೇಷನ್‌ ನಮೂನೆ 12ನ್ನು ಗ್ರಾಮದಲ್ಲಿ ಪ್ರಚುರಪಡಿಸಲಾಗಿತ್ತು. ನಮೂನೆ 21ರನ್ನು ಆಸಕ್ತರಿಗೆ ಜಾರಿ ಮಾಡಲಾಗಿತ್ತು. ನಿಗದಿತ ಅವಧಿಯೊಳಗೆ ಯಾರಿಂದಲೂ ಆಕ್ಷೇಪಣೆ ಬಂದಿಲ್ಲ. ಅಲ್ಲದೆ ನ್ಯಾಯಾಲಯದಿಂದ ತಡೆಯಾಜ್ಞೆಯೂ ಬಂದಿಲ್ಲ. ಈ ಜಮೀನು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಂಜೂರಾದ ಜಮೀನಾಗಿರುವುದಿಲ್ಲ. ಭೂ ಮಂಜೂರಾತಿ ಅಥವಾ ಇತರೆ ನಿಯಮಗಳು ಉಲ್ಲಂಘನೆ ಆಗಿರುವುದಿಲ್ಲ. ಭೂ ಸುಧಾರಣೆ ಶಾಸನದ ಉಲ್ಲಂಘನೆಯ ಸಂಶಯವಿರುವುದಿಲ್ಲ ಎಂದು ಮ್ಯುಟೇಷನ್‌ ಆದೇಶದಲ್ಲಿ ಹೇಳಲಾಗಿದೆ.

ಮೈಸೂರು ತಾಲೂಕಿನ ಜಯಪುರ ಹೋಬಳಿಯ ತಳೂರು ಗ್ರಾಮದಲ್ಲಿನ 2.30 ಎಕರೆ ಜಮೀನನ್ನು ರತ್ನವ್ವ ಡಿ ಚನ್ನಣ್ಣವರ ಅವರು 2019ರಲ್ಲೇ ಕ್ರಯಕ್ಕೆ ಪಡೆದುಕೊಂಡಿದ್ದರೂ ರವಿ ಡಿ ಚನ್ನಣ್ಣವರ ಅವರು 2020 ಮತ್ತು 2021ನೇ ಸಾಲಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಆಸ್ತಿದಾಯಿತ್ವ ಪಟ್ಟಿಯಲ್ಲಿ ಘೋಷಿಸದಿರುವುದು ಅಚ್ಚರಿ ಮೂಡಿಸಿದೆ.

ಈ ಕುರಿತು ಪ್ರತಿಕ್ರಿಯೆಗಾಗಿ ರವಿ ಡಿ ಚನ್ನಣ್ಣವರ್‌ ಅವರಿಗೆ 2022ರ ಜನವರಿ 24ರಂದು ಬೆಳಗ್ಗೆ 10;57ಕ್ಕೆ ವಾಟ್ಸಾಪ್‌ ಮತ್ತು ಅವರ ಈ-ಮೈಲ್‌ಗೆ ‘ದಿ ಫೈಲ್‌’ ಸಂದೇಶ ಕಳಿಸಿತ್ತು. ಆದರೆ ಇವೆರಡಕ್ಕೂ ರವಿ ಚನ್ನಣ್ಣವರ್‌ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಸಂಬಂಧ ‘ದಿ ಫೈಲ್‌’ ಮಾಡಿದ್ದ ಕರೆಯನ್ನೂ ಸ್ವೀಕರಿಸಲಿಲ್ಲ. ಅವರು ಈ ಕುರಿತು ಪ್ರತಿಕ್ರಿಯೆ ನೀಡಿದಲ್ಲಿ ಅದನ್ನು ವರದಿಯಲ್ಲಿ ಸೇರ್ಪಡೆಗೊಳಿಸಲಾಗುವುದು.

ಕೇಂದ್ರಕ್ಕೆ ಸಲ್ಲಿಸಿರುವ ಆಸ್ತಿದಾಯಿತ್ವ ಪಟ್ಟಿಯಲ್ಲೇನಿದೆ?

2019ನೇ ಸಾಲಿಗೆ ಸಂಬಂಧಿಸಿದಂತೆ 2020ರ ಜನವರಿ 28ರಂದು ಸಲ್ಲಿಸಿದ್ದ ಆಸ್ತಿದಾಯಿತ್ವ ಪಟ್ಟಿಯಲ್ಲಿ ತಮ್ಮ ತಾಯಿ ರತ್ನವ್ವ ಡಿ ಚನ್ನಣ್ಣನವರ ಅವರು ಗದಗ್‌ನ ನೀಲಗುಂದದಲ್ಲಿ ಹೊಂದಿದ್ದ ಮನೆ (2019ರಲ್ಲಿ ಚಾಲ್ತಿಯಲ್ಲಿದ್ದ ಇದರ ಮೌಲ್ಯ 1,00,000 ರು.) ಗದಗ್‌ನ ಮುಂಡರಗಿಯ ಕೇಲೂರಿನ ಸರ್ವೆ ನಂಬರ್‌ 29/2ರಲ್ಲಿ ರತ್ನವ್ವ ಚನ್ನಣ್ಣನವರ್‌ (ಪಿತ್ರಾರ್ಜಿತ) ಅವರ ಹೆಸರಿನಲ್ಲಿ 1 ಎಕರೆ 5 ಗುಂಟೆ, ಇದೇ ಕೇಲೂರಿನಲ್ಲಿ ಸರ್ವೆ ನಂಬರ್‌ 30/1 ರಲ್ಲಿ 1 ಎಕರೆ 24 ಗುಂಟೆ ವಿಸ್ತೀರ್ಣದ ಜಮೀನು (ಪಿತ್ರಾರ್ಜಿತ) ಹೊಂದಿರುವ ವಿವರವನ್ನು ನಮೂದಿಸಿರುವುದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಆಸ್ತಿದಾಯಿತ್ವ ಪಟ್ಟಿಯಿಂದ ತಿಳಿದು ಬಂದಿದೆ.

ಅದೇ ರೀತಿ ಧಾರವಾಡದ ಕುಂದಗೋಳ ತಾಲೂಕಿನ ಯರೆಬೂದಿಹಾಳ್‌ನಲ್ಲಿ ತಮ್ಮ ತಂದೆ ದ್ಯಾಮಪ್ಪ ಚನ್ನಣ್ಣನವರ್‌ ಅವರು ಸರ್ವೆ ನಂಬರ್‌ 263/12 ರಲ್ಲಿ 4 ಗುಂಟೆ ಜಮೀನು (ಪಿತ್ರಾರ್ಜಿತ) ಹೊಂದಿರುವುದನ್ನು ಆಸ್ತಿ ದಾಯಿತ್ವ ಪಟ್ಟಿಯಲ್ಲಿ ನಮೂದಿಸಿದ್ದಾರೆ. ಈ ಪಟ್ಟಿಯನ್ನು ಸಲ್ಲಿಸಿದ್ದ ಅವಧಿಯಲ್ಲಿ 4,50,000 ರು. ಚಾಲ್ತಿ ಮೌಲ್ಯವಿತ್ತು ಎಂಬುದು ಆಸ್ತಿದಾಯಿತ್ವ ಪಟ್ಟಿಯಿಂದ ಗೊತ್ತಾಗಿದೆ.

ಹಾಗೆಯೇ ರಾಯಚೂರು ಅಸ್ಕಿಹಾಳ್‌ನ್‌ ಸರ್ವೆ ನಂಬರ್‌ 16/3ರಲ್ಲಿ ( ಪ್ಲಾಟ್‌ ನಂಬರ್ 2) ರವಿ ಚನ್ನಣ್ಣನವರ್‌ ಅವರ ಪತ್ನಿ ಡಾ ತ್ರೀವೇಣಿ ಪಾಟೀಲ್‌ ಅವರು ಹೊಂದಿರುವ ಸ್ಥಿರಾಸ್ತಿ ವಿವರವನ್ನು ಆಸ್ತಿದಾಯಿತ್ವ ಪಟ್ಟಿಯಲ್ಲಿ ನಮೂದಿಸಿದ್ದಾರೆ. ಈ ಸ್ಥಿರಾಸ್ತಿಯು ಡಾ ತ್ರಿವೇಣಿ ಪಾಟೀಲ್‌ ಅವರ ಸೋದರ ಶರಣ್‌ಗೌಡ ಅವರು ಉಡುಗೊರೆ ನೀಡಿದ್ದಾರೆ ಎಂದು ಘೋಷಿಸಲಾಗಿದೆ. 2019ರಲ್ಲಿ 12,00,000 ರು. ಚಾಲ್ತಿ ಮೌಲ್ಯವಿತ್ತು ಎಂಬುದು ಪಟ್ಟಿಯಿಂದ ತಿಳಿದು ಬಂದಿದೆ.

ತೆಲಂಗಾಣದ ಮೆಹಬೂಬ್‌ ನಗರದ ಚೆಂಗುಂಟದಲ್ಲಿ ಸರ್ವೆ ನಂಬರ್‌ 205ರಲ್ಲಿ 5 ಎಕರೆ ಜಮೀನು ಡಾ ತ್ರಿವೇಣಿ ಪಾಟೀಲ್‌ ಅವರ ಹೆಸರಿನಲ್ಲಿತ್ತು. ಈ ಜಮೀನು ಅವರಿಗೆ ಪಿತ್ರಾರ್ಜಿತವಾಗಿ ಬಂದಿದೆ. 2019ರ ಚಾಲ್ತಿಯಲ್ಲಿ ಇದಕ್ಕೆ 25,00,000 ರು. ಮೌಲ್ಯವಿತ್ತು ಎಂಬುದು ಗೊತ್ತಾಗಿದೆ.

2020ರ ಜನವರಿ 28ರಂದು ಸಲ್ಲಿಸಿದ್ದ ಆಸ್ತಿದಾಯಿತ್ವ ಪಟ್ಟಿಯಲ್ಲಿ ರವಿ ಚನ್ನಣ್ಣವರ್‌ ಅವರು ತಮ್ಮ ಹೆಸರಿನಲ್ಲಿ ಮೆಟ್ರೋಪಾಲಿಟಿನ್‌ ಹೌಸಿಂಗ್‌ ಸೊಸೈಟಿ ಯಶವಂತಪುರದ ಸೀಗೆಹಳ್ಳಿಯಲ್ಲಿ ನಿರ್ಮಿಸಿರುವ ಬಡಾವಣೆಯಲ್ಲಿ ನಿವೇಶನ (ಸಂಖ್ಯೆ 44- 3396.3 ಸ್ಕೈಯರ್‌ ಫೀಟ್‌) ಇರುವುದನ್ನು ನಮೂದಿಸಿದ್ದರು. ಇದರ ಮೌಲ್ಯ 2019ರಲ್ಲಿದ್ದ ಚಾಲ್ತಿ ಬೆಲೆ 49, 24,635. ರು. ಎಂದು ಘೋಷಿಸಿದ್ದರು.

2019, 2020, 2021ನೇ ಸಾಲಿನ ಅಂತ್ಯಕ್ಕೆ ಹೊಂದಿದ್ದ ಸ್ಥಿರಾಸ್ತಿ ವಿವರಗಳಿಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆ ಇರಲಿಲ್ಲ. 2019ನೇ ಸಾಲಿಗೆ ಸಂಬಂಧಿಸಿದಂತೆ 2020ರಲ್ಲಿ ಸಲ್ಲಿಸಿದ್ದ ಆಸ್ತಿದಾಯಿತ್ವ ಪಟ್ಟಿಯಲ್ಲಿದ್ದ ವಿವರಗಳನ್ನೇ 2021ರ ಜನವರಿ 25ರಂದು ಘೋಷಿಸಿದ್ದರು ಎಂಬುದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಆಸ್ತಿ ದಾಯಿತ್ವ ಪಟ್ಟಿಯಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts