ಉದ್ಯಾನಗಳ ಒತ್ತುವರಿ ತೆರವಿಗೆ ಕ್ರಮವಹಿಸದೇ 800 ಕೋಟಿ ವೆಚ್ಚದ ಹೊಸ ಉದ್ಯಾನಕ್ಕೆ ಪ್ರಸ್ತಾವನೆ

ಬೆಂಗಳೂರು; ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ 1, 410 ಎಕರೆ ವಿಸ್ತೀರ್ಣದ ಅರಣ್ಯ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲು ಬಿಗಿಕ್ರಮ ಕೈಗೊಳ್ಳದ ಸರ್ಕಾರ ಇದೀಗ ಯಲಹಂಕ ಬಳಿ ಇರುವ ಜಾರಕ್‌ಬಂಡೆ ಕಾವಲ್‌ ಪ್ರದೇಶದಲ್ಲಿ ಹೊಸದಾಗಿ ವಿವಿದೋದ್ದೇಶ ಉದ್ಯಾನ ನಿರ್ಮಾಣಕ್ಕೆ ಹಿಡುವಳಿ ಜಮೀನು ಖರೀದಿ, ಅಭಿವೃದ್ಧಿ ಮತ್ತು ಇತರೆ ವೆಚ್ಚಗಳಿಗೆಂದು 800.52 ಕೋಟಿ ರು. ಅಂದಾಜನ್ನು ಸಿದ್ಧಪಡಿಸಿದೆ.

ಅಲ್ಲದೆ ಜಾರಕಬಂಡೆ ಕಾವಲ್‌ನಲ್ಲಿ ಸರ್ವೆ ನಂಬರ್‌ 59ರಲ್ಲಿನ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ 175 ಎಕರೆ ಪ್ರದೇಶವನ್ನು ತೋಟಗಾರಿಕೆ ಇಲಾಖೆಗೆ ವರ್ಗಾಯಿಸಿ ಇದಕ್ಕೆ ಬದಲಿಗೆ ಬನ್ನೇರುಘಟ್ಟ ಬಳಿಯ ಶಿವನಹಳ್ಳಿಯ ಸರ್ವೆ ನಂಬರ್‌ 69ರಲ್ಲಿರುವ 1,129 ಎಕರೆ ಪೈಕಿ 175 ಎಕರೆ ಪ್ರದೇಶವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲು ಚಿಂತನೆ ನಡೆಸಿದೆ.

ಬೆಂಗಳೂರು ನಗರದಲ್ಲಿ ಒತ್ತುವರಿಯಾಗಿರುವ ಒಟ್ಟು ಅರಣ್ಯ ಜಮೀನಿನ ಪೈಕಿ ಇನ್ನು 2,109 ಎಕರೆಗೂ ಹೆಚ್ಚಿನ ಅರಣ್ಯ ಭೂಮಿಯನ್ನು ಒತ್ತುವರಿಯಿಂದ ತೆರವುಗೊಳಿಸದ ಅಧಿಕಾರಶಾಹಿಯು 800 ಕೋಟಿ ರು. ವೆಚ್ಚದಲ್ಲಿ ಹೊಸದಾಗಿ ಉದ್ಯಾನ ನಿರ್ಮಾಣಕ್ಕೆ ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ವಿವಿದೋದ್ದೇಶ ಉದ್ಯಾನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಂದಾಜು ವೆಚ್ಚ ಸೇರಿದಂತೆ ಇನ್ನಿತರೆ ವಿವರಗಳು ಮತ್ತು ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

ಗುಜರಾತ್‌ನ ಅಹಮದಾಬಾದ್‌ನಲ್ಲಿ 260 ಎಕರೆ ಜಾಗದಲ್ಲಿರುವ ಸೈನ್ಸ್ ಸಿಟಿ ಪಾರ್ಕ್ ಮಾದರಿಯಂತೆ ಪಾರ್ಕ್ ನಿರ್ಮಿಸುವ ಉದ್ದೇಶ ಹೊಂದಿರುವ ತೋಟಗಾರಿಕೆ ಇಲಾಖೆಯು ನಂದಿ ಹಿಲ್ಸ್, ದೊಡ್ಡಬಳ್ಳಾಪುರ ಸುತ್ತಮುತ್ತ ಸೇರಿ ಒಟ್ಟು ನಾಲ್ಕು ಕಡೆ ಬೇರೆ ಬೇರೆ ವಿಸ್ತೀರ್ಣದಲ್ಲಿ ಸರ್ಕಾರಿ ಜಮೀನಿನಲ್ಲಿ ಪಾರ್ಕ್ ನಿರ್ಮಾಣದ ಬಗ್ಗೆ ಸಿದ್ದತೆ ನಡೆಸಿತ್ತು. ಆದರೀಗ ಸರ್ಕಾರಿ ಜಾಗಕ್ಕೆ ಹೊಂದಿಕೊಂಡಿರುವ 76.24 ಎಕರೆ ಹಿಡುವಳಿ ಜಮೀನನ್ನೂ ಖರೀದಿಸಲು ಯೋಜನೆ ಸಿದ್ಧಪಡಿಸಿದೆ.

ಅರಣ್ಯ ಇಲಾಖೆಯ 175 ಎಕರೆ, ಕಂದಾಯ ಇಲಾಖೆಯ 177.65 ಎಕರೆ ಹಾಗೂ ಹಿಡುವಳಿ ಜಮೀನು 76.24 ಎಕರೆ ಸೇರಿ ಒಟ್ಟಾರೆ 430.09 ಎಕರೆ ವಿಸ್ತೀರ್ಣದಲ್ಲಿ ವಿವಿದೋದ್ದೇಶ ಉದ್ಯಾನ ನಿರ್ಮಾಣ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಈ ಸಂಬಂಧ ಬೆಂಗಳೂರು ನಗರದ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಒಟ್ಟಾರೆ ಪ್ರದೇಶದ ನಕ್ಷೆಯನ್ನು ನೀಡಿರುವುದು ತಿಳಿದು ಬಂದಿದೆ.

ಬೆಂಗಳೂರು ಉತ್ತರ ಭಾಗವು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ಧಾಣಕ್ಕೆ ಸಮೀಪವಾಗಿರುವುದರಿಂದ ಭವಿಷ್ಯದ ದಿನಗಳಲ್ಲಿ ಸರ್ವರನ್ನೂ ಆಕರ್ಷಿಸುವ ನಗರದ ಪ್ರಮುಖ ಉದ್ಯಾನವಾಗಿ ಹೊರಹೊಮ್ಮಲಿದೆ ಎಂದು ಸರ್ಕಾರವು ಯೋಜಿಸಿದೆ. 76.24 ಎಕರೆ ವಿಸ್ತೀರ್ಣದ ಹಿಡುವಳಿ ಜಮೀನಿನ ಸರ್ಕಾರಿ ಮೌಲ್ಯ ಎಕರೆಗೆ 5.25 ಕೋಟಿಯಂತೆ ಒಟ್ಟು 76.24 ಎಕರೆಗೆ 400.26 ಕೋಟಿ ವೆಚ್ಚ ಮಾಡಬೇಕಿದೆ. ಇದು 1:2ರ ಅನುಪಾತದಲ್ಲಿ ಈ ಮೊತ್ತವು 800.52 ಕೋಟಿ ರು.ಆಗಲಿದೆ ಎಂದು ಸರ್ಕಾರವು ಅಂದಾಜಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.

ಇದರಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 300 ಕೋಟಿ, ಉದ್ಯಾನ ಅಭಿವೃದ್ಧಿಗೆ 500 ಕೋಟಿ, ನಿರ್ವಹಣೆಗೆ 3 ಕೋಟಿಯೂ ಇದೇ ಮೊತ್ತದಲ್ಲಿ ಸೇರಿದೆ. ಜಾರಕ್‌ ಬಂಡೆ ಕಾವಲ್‌ ಪ್ರದೇಶವು ಸಂರಕ್ಷಿತ ಅರಣ್ಯ ಪ್ರದೇಶವಾಗಿದೆಯಲ್ಲದೆ ಇದು ಫೆರಿಫೆರಲ್‌ ರಸ್ತೆಗೆ ಹೊಂದಿಕೊಂಡಿದೆ. ಅರಣ್ಯ ಪ್ರದೇಶಕ್ಕೆ ಪರ್ಯಾಯವಾಗಿ 175 ಎಕರೆ ಪ್ರದೇಶವನ್ನು ಬೆಂಗಳೂರು ನಗರ ಜಿಲ್ಲೆಯ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಬಳಿಯ ಕಂದಾಯ ಇಲಾಖೆ ವ್ಯಾಪ್ತಿಗೊಳಪಡುವ ಸರ್ಕಾರಿ ಜಮೀನು ಶಿವನಹಳ್ಳಿ ಸರ್ವೆ ನಂಬರ್‌ 69ರಲ್ಲಿನ 175 ಎಕರೆ ಪ್ರದೇಶವನ್ನು ನೀಡುವ ಮೂಲಕ ಈ ಪ್ರದೇಶವನ್ನು ತೋಟಗಾರಿಕೆ ಇಲಾಖೆಗೆ ಪಡೆಯಬಹುದು ಎಂದು ಯೋಜಿಸಿದೆ.

ಅರಣ್ಯ ಪ್ರದೇಶವನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಲು ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಉದ್ದೇಶಿತ ಅರಣ್ಯ ಪ್ರದೇಶವನ್ನು ಉದ್ಯಾನ ಅಭಿವೃದ್ಧಿಪಡಿಸಲು ಬಳಸಬಹುದು. ಎರಡೂ ಸ್ಥಳಗಳಲ್ಲಿ ಹಿಡುವಳಿ ಪ್ರದೇಶವು ಸಂರಕ್ಷಿತ ಅರಣ್ಯ ಪ್ರದೇಶದ 175 ಎಕರೆಗೆ ಹೊಂದಿಕೊಂಡಿದ್ದು ಮುಂದಿನ ದಿನಗಳಲ್ಲಿ ಹಿಡುವಳಿ ಪ್ರದೇಶವನ್ನು ಹೊರತುಪಡಿಸಿ ಅರಣ್ಯ ಇಲಾಖೆಯ ಪ್ರದೇಶದಲ್ಲಿ ಮಾತ್ರ ಉದ್ಯಾನ ಅಭಿವೃದ್ಧಿಪಡಿಸಿದಲ್ಲಿ ಈ ಪ್ರದೇಶಕ್ಕೆ ಹೊಂದಿಕೊಂಡಿರುವ ಹಿಡುವಳಿ ಸ್ಥಳದಲ್ಲಿ ವಾಣಿಜ್ಯ ಚಟುವಟಿಕೆಗಳು ಆರಂಭವಾಗಿ ಉದ್ದೇಶಿತ ಉದ್ಯಾನಕ್ಕೆ ಧಕ್ಕೆಯಾಗಲಿದೆ ಎಂದೂ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಈ ಹಿನ್ನೆಲೆಯಲ್ಲಿ ಅವಶ್ಯವಿರುವ ಒಟ್ಟಾರೆ 76.24 ಎಕರೆ ಹಿಡುವಳಿ ಪ್ರದೇಶವು ಸೇರಿದಂತೆ ಉದ್ಯಾನ ಅಭಿವೃದ್ಧಿಪಡಿಸುವುದು ಸೂಕ್ತವಾಗಿದೆ. ಒಟ್ಟಾರೆ ಹಿಡುವಳಿ ಪ್ರದೇಶವಾದ 76.24 ಎಕರೆ ಪ್ರದೇಶವನ್ನು ಪ್ರಸ್ತುತ ಚಾಲ್ತಿಯಲ್ಲಿರುವ ಸರ್ಕಾರಿ ಮೌಲ್ಯದ ಪ್ರಕಾರ ಎಕರೆಗೆ 5.25 ಕೋಟಿಯಂತೆ 76.24 ಎಕರೆ ಖರೀದಿಸಲು 400.26 ಕೋಟಿ ರು. ಮೊತ್ತವಾಗುತ್ತದೆ. ಇದು 1:2ರ ಅನುಪಾತದಲ್ಲಿ ಈ ಮೊತ್ತವು ಒಟ್ಟಾರೆ 800.52 ಕೋಟಿ ಆಗಲಿದೆ. ಈ ಮೊತ್ತವನ್ನು ಆರ್ಥಿಕ ಇಲಾಖೆಯಿಂದ ಪಡೆದು ನಿಯಮಾನುಸಾರ ಪಾವತಿಸಿ ಸಚಿವ ಸಂಪುಟದ ಅನುಮೋದನೆ ಮೇರೆಗೆ ಉದ್ದೇಶಿತ ಪ್ರದೇಶವನ್ನು ತೋಟಗಾರಿಕೆ ಇಲಾಖೆಗೆ ಹಸ್ತಾಂತರಿಸಬಹುದಾಗಿದೆ,’ ಎಂದು ಆಡಳಿತ ಇಲಾಖೆಯು ಪ್ರಸ್ತಾಪಿಸಿರುವುದು ಗೊತ್ತಾಗಿದೆ.

ಜಾರಕಬಂಡೆ ಕಾವಲ್‌ನ ಸರ್ವೆ ನಂ 59ರಲ್ಲಿನ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿರುವ 175 ಎಕರೆ ಪ್ರದೇಶವನ್ನು ತೋಟಗಾರಿಕೆ ಇಲಾಖೆಗೆ ವರ್ಗಾಯಿಸಲು ಅನುವಾಗುವಂತೆ ಅರಣ್ಯ ಇಲಾಖೆಗೆ ಪರ್ಯಾಯವಾಗಿ ಬೆಂಗಳೂರಿನ ಬನ್ನೇರುಘಟ್ಟ ಬಳಿಯ ಶಿವನಹಳ್ಳಿ ಸರ್ವೆ ನಂಬರ್‌ 69ರಲ್ಲಿರುವ ಒಟ್ಟು 1,129 ಎಕರೆಗಳ ಪೈಕಿ 175 ಎಕರೆ ಪ್ರದೇಶವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲು ಕಾರ್ಯಯೋಜನೆ ಸಿದ್ಧಪಡಿಸಿರುವುದು ತಿಳಿದು ಬಂದಿದೆ.

ಅದೇ ರೀತಿ ಜಾರಕಬಂಡೆ ಪ್ರದೇಶಕ್ಕೆ ಹೊಂದಿಕೊಂಡಿರುವ ಕೃಷ್ಣರಾಜಪುರದ ಸರ್ವೆ ನಂಬರ್‌ 23ರಲ್ಲಿ 71.26 ಎಕರೆ, ಮೈಲಪ್ಪನಹಳ್ಳಿಯ ಸರ್ವೆ ನಂಬರ್‌ 22ರಲ್ಲಿ 61.04 ಎಕರೆ ಹಾಗೂ ಆವಲಹಳ್ಳಿ ಸರ್ವೆ ನಂಬರ್‌ 79ರಲ್ಲಿ 45.35 ಎಕರೆ ಒಟ್ಟಾರೆ 177.65 ಎಕರೆ ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗವನ್ನು ತೋಟಗಾರಿಕೆ ಇಲಾಖೆಗೆ ವರ್ಗಾಯಿಸಲು ನೀಲನಕ್ಷೆ ತಯಾರಿಸಿರುವುದು ಗೊತ್ತಾಗಿದೆ.

ಹಾಗೆಯೇ ಜಾರಕಬಂಡೆ ಕಾವಲ್‌ ಪ್ರದೇಶಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್‌ 23/1, 23/2,23/3, 23/4, 23/5 ಮತ್ತು 25ಕ್ಕೆ ಸೇರಿದ 26.15 ಎಕರೆ ಮತ್ತು ಸರ್ವೆ ನಂಬರ್‌ 101/1 ಮತ್ತು 101/2ಕ್ಕೆ ಸೇರಿದ 50.09 ಎಕರೆ ಸೇರಿ ಒಟ್ಟಾರೆ 76.24 ಎಕರೆ ಹಿಡುವಳಿ ಜಮೀನಿನ ಅವಶ್ಯಕತೆ ಇದೆ.

ಬೆಂಗಳೂರು ನಗರ ವಿಭಾಗದಲ್ಲಿ 5310.73 ಹೆಕ್ಟೇರ್ ಮತ್ತು ಗ್ರಾಮಾಂತರದಲ್ಲಿ 16415 ಹೆಕ್ಟೇರ್ ಅರಣ್ಯ ಜಮೀನು ಇದೆ. ಈ ಪೈಕಿ ಎರಡೂ ವಿಭಾಗದಲ್ಲಿ 254 ಪ್ರಕರಣದಲ್ಲಿ 1212.23 ಎಕರೆ ತೆರವುಗೊಳಿಸಲಾಗಿದೆ. ಇದರ ಹೊರತಾಗಿಯೂ 2109 ಎಕರೆ ಜಮೀನು ತೆರವಿಗೆ ಬಾಕಿ ಇರುವುದು ತಿಳಿದು ಬಂದಿದೆ.

SUPPORT THE FILE

Latest News

Related Posts