ಬೆಂಗಳೂರು; ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಜೀವನ ಕಥನವನ್ನು ರಚಿಸಿರುವ ಪ್ರೊ ಎಚ್ ಟಿ ಪೋತೆ ಅವರು ಕಲ್ಬುರ್ಗಿ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿದ್ದ ಅವಧಿಯಲ್ಲಿ ಪುಸ್ತಕಗಳ ಖರೀದಿಯಲ್ಲಿ ವಂಚನೆ ಎಸಗಿದ್ದಾರೆ ಎಂಬ ಗುರುತರವಾದ ಆರೋಪಕ್ಕೆ ಗುರಿಯಾಗಿದ್ದಾರೆ.
ಈ ಆರೋಪಕ್ಕೆ ಸಂಬಂಧಿಸಿದಂತೆ ದೂರು ಸಲ್ಲಿಸಿದ್ದರೂ ಸಹ ಕ್ರಮಕೈಗೊಳ್ಳುವಲ್ಲಿ ಉನ್ನತ ಶಿಕ್ಷಣ ಇಲಾಖೆಯು ಕಾಲಹರಣ ಮಾಡುತ್ತಿದೆ ಎಂಬ ಆಪಾದನೆ ಕೇಳಿ ಬಂದಿದೆ.
ಪ್ರೊ ಎಚ್ ಟಿ ಪೋತೆ ಅವರು ಕಲ್ಬುರ್ಗಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಮತ್ತು ಪ್ರಸಾರಾಂಗದ ನಿರ್ದೇಶಕರಾಗಿದ್ದ ಅವಧಿಯಲ್ಲಿ ಒಂದು ಲಕ್ಷ ರುಪಾಯಿ ವಂಚನೆ ಆಗಿದೆ ಎಂದು ಕರ್ನಾಟಕ ಜನ ಜಾಗೃತಿ ರಕ್ಷಣಾ ವೇದಿಕೆಯು ರಾಜ್ಯಪಾಲರಿಗೆ ದೂರು ಸಲ್ಲಿಸಿತ್ತು. ಈ ದೂರನ್ನಾಧರಿಸಿ ಕ್ರಮ ಕೈಗೊಳ್ಳಬೇಕು ಎಂದು ರಾಜಭವನ ಕಚೇರಿಯು ಉನ್ನತ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿತ್ತು. ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಯು 2025ರ ಸೆ.22ರಂದು ವಿಶ್ವವಿದ್ಯಾಲಯದ ಕುಲಸಚಿವರಿಗೆ ಅಂತಿಮ ನೆನಪೋಲೆಯನ್ನೂ ಕಳಿಸಿತ್ತು.
ಈ ನೆನಪೋಲೆಯು ಸ್ವೀಕೃತವಾಗಿ 6 ತಿಂಗಳ ನಂತರ, ಆರೋಪಿತ ಪ್ರೊ ಎಚ್ ಟಿ ಪೋತೆ ಅವರಿಗೆ ವಿಶ್ವವಿದ್ಯಾಲಯವು ವಿವರಣೆ ಕೇಳಿ ನೋಟೀಸ್ ಜಾರಿಗೊಳಿಸಿದೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ ಹೆಚ್ ಬಿ ವಾಲಿಕಾರ್, ಪರೀಕ್ಷಾಂಗ ಕುಲ ಸಚಿವ ಹೆಚ್ ಟಿ ಪೋತೆ ಸೇರಿದಂತೆ ಇನ್ನಿತರರ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಹಾಗೂ ಸಿವಿಲ್ ಮೊಕದ್ದಮೆ ಸಂಬಂಧದ ಕಾರ್ಯನಿರ್ವಹಣಾ ವರದಿ ಸಲ್ಲಿಸಬೇಕು ಎಂದು ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದರು. ಆದರೆ ಈ ಪ್ರಕರಣದಲ್ಲಿ ಕ್ರಮ ವಹಿಸಲು ಮೀನಮೇಷ ಎಣಿಸುತ್ತಿದೆ.
‘ಪ್ರೊ ಎಚ್ ಟಿ ಪೋತೆ ಅವರು ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಸಾರಾಂಗಕ್ಕೆ ಒಂದು ಲಕ್ಷ ರುಪಾಯಿ ವಂಚನೆ ಮತ್ತು ಭ್ರಷ್ಟಾಚಾರ ಮಾಡಿರುವ ಇವರ ವಿರುದ್ಧ ದೂರು ದಾಖಲಿಸುವಂತೆ ಕೋರಿರುವ ಬಗ್ಗೆ 2024ರ ಏಪ್ರಿಲ್ 1 ಮತ್ತು 2024ರ ಆಗಸ್ಟ್ 9ರಂದು ನೆನಪೋಲೆಯಲ್ಲಿ ಮಾಹಿತಿ ಕೋರಿತ್ತು. ಅಪೇಕ್ಷಿತ ಮಾಹಿತಿಯನ್ನು 07 ದಿನದೊಳಗೆ ಸಲ್ಲಿಸಬೇಕು. ತಪ್ಪಿದ್ದಲ್ಲಿ ತಮ್ಮ ಜವಾಬ್ದಾರಿ ಮೇಲೆ ಸರ್ಕಾರದ ಹಂತದಲ್ಲಿ ಕಡತ ಮುಕ್ತಾಯಗೊಳಿಸಲಾಗುವುದು,’ ಎಂದು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ 2025ರ ಸೆ.22ರಂದೇ ಅಂತಿಮ ನೆನಪೋಲೆಯಲ್ಲಿ ಎಚ್ಚರಿಸಿದ್ದರು.

ಈ ಅಂತಿಮ ನೆನಪೋಲೆಯು ರವಾನೆಯಾಗಿ ಏಳೆಂಟು ತಿಂಗಳಾದರೂ ಸಹ ಕಲ್ಬುರ್ಗಿ ವಿಶ್ವವಿದ್ಯಾಲಯವು ಈ ಸಂಬಂಧ ಯಾವುದೇ ಮಾಹಿತಿ, ವರದಿಯನ್ನು ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಿಲ್ಲ ಎಂದು ಗೊತ್ತಾಗಿದೆ. ಅಂತಿಮ ನೆನಪೋಲೆ ಕಳಿಸಿದ 6 ತಿಂಗಳ ನಂತರ ಗುಲ್ಬರ್ಗಾ ವಿಶ್ವವಿದ್ಯಾಲಯವು 2026ರ ಏಪ್ರಿಲ್ 1ರಂದು ಪ್ರೊ ಎಚ್ ಟಿ ಪೋತೆ ಅವರಿಗೆ ನೋಟೀಸ್ ಜಾರಿಗೊಳಿಸಿತ್ತು.

ವಿಶ್ವವಿದ್ಯಾಲಯವು ಸಹ ವಿಳಂಬವಾಗಿ ನೋಟೀಸ್ ಜಾರಿಗೊಳಿಸಿರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ರಮೇಶ್ ಲಂಡನಕರ್ ಅವರು ‘ ಪ್ರೊ ಪೋತೆ ಅವರು ತಮ್ಮ ವಿವರಣೆಯನ್ನು ವಿಶ್ವವಿದ್ಯಾಲಯಕ್ಕೆ ನೀಡಿದ್ದಾರೆ. ಅವರು ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ. ಅವರು ನೀಡಿರುವ ವಿವರಣೆಯನ್ನು ಕುಲಪತಿಗಳಿಗೆ ಮಂಡಿಸಲಾಗುವುದು,’ ಎಂದು ದಿ ಫೈಲ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.
ದೂರಿನಲ್ಲೇನಿತ್ತು?
ಪ್ರೊ ಎಚ್ ಟಿ ಪೋತೆ ಅವರು ಕಲ್ಬುರ್ಗಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಮತ್ತು ಪ್ರಸಾರಾಂಗದ ನಿರ್ದೇಶಕರಾಗಿದ್ದ ಅವಧಿಯಲ್ಲಿ ಪುಸ್ತಕಗಳನ್ನು ಪ್ರಕಟಿಸಿದ್ದರು. ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಆಯ್ಕೆಯಾಗಿದ್ದ ಪುಸ್ತಕಗಳ ಹಣವನ್ನು ತಮ್ಮ ಸ್ವಂತ ಖಾತೆಗೆ ಜಮೆ ಮಾಡಿಕೊಂಡಿದ್ದರು. ಈ ಮೂಲಕ ರಾಜ್ಯ ಸಾರ್ವಜನಿಕ ಗ್ರಂಥಾಲಯಕ್ಕೆ ಮತ್ತು ಕಲ್ಬುರ್ಗಿ ವಿಶ್ವವಿದ್ಯಾಲಯದ ಪ್ರಸಾರಾಂಗಕ್ಕೂ ವಂಚನೆ ಮಾಡಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಕರ್ನಾಟಕ ಜನಜಾಗೃತಿ ರಕ್ಷಣಾ ವೇದಿಕೆಯು 2023ರ ಅಕ್ಟೋಬರ್ 30ರಂದು ದೂರು ಸಲ್ಲಿಸಿತ್ತು.
ಜನಪದ ಕಲೆ ಸಮಸ್ಯೆ ಸವಾಲುಗಳು, ಡಾ ಅಂಬೇಡ್ಕರ್ ವಾಚಿಕೆ ಪುಸ್ತಕಗಳನ್ನು ಕಲ್ಬುರ್ಗಿ ವಿಶ್ವವಿದ್ಯಾಲಯದ ಪ್ರಸಾರಾಂಗವು ಪ್ರಕಟಿಸಿತ್ತು. ಈ ಪುಸ್ತಕಗಳನ್ನು ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯಮಟ್ಟದ ಆಯ್ಕೆ ಸಮಿತಿಯು ಆಯ್ಕೆ ಮಾಡಿ ಖರೀದಿಸಿತ್ತು. ಇದರಲ್ಲಿ ಜನಪದ ಕಲೆ ಸಮಸ್ಯೆ ಮತ್ತು ಸವಾಲುಗಳು ಪುಸ್ತಕಕ್ಕೆ 16,500 ರು. ಗಳನ್ನು ಕಲ್ಬುರ್ಗಿ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರ ಹೆಸರಿನಲ್ಲಿದ್ದ ಬ್ಯಾಂಕ್ ಖಾತೆಗೆ ಜಮೆ ಮಾಡಿತ್ತು.

ಅದೇ ರೀತಿ ಡಾ ಅಂಬೇಡ್ಕರ್ ವಾಚಿಕೆ ಪುಸ್ತಕಗಳ ಮೊತ್ತ 1,00,000 ರು.ಗಳು ಪ್ರೊ ಎಚ್ ಟಿ ಪೋತೆ ಅವರ ಅವರು ಎಸ್‌ಬಿಐನಲ್ಲಿ ಹೊಂದಿದ್ದ ಖಾತೆಗೆ ಜಮೆ ಆಗಿತ್ತು ಎಂದು ಕರ್ನಾಟಕ ಜನ ಜಾಗೃತಿ ರಕ್ಷಣಾ ವೇದಿಕೆಯು ಆರೋಪಿಸಿತ್ತು. ಈ ಆರೋಪಕ್ಕೆ ಸಂಬಂಧಿಸಿದಂತೆ ಡಾ ಶಿವಪುತ್ರ ಹೋಳಕರ್ ಅವರು ಮಾಹಿತಿ ಹಕ್ಕಿನ ಅಡಿಯಲ್ಲಿ ಪಡೆದಿದ್ದ ದಾಖಲೆಗಳನ್ನು ಒದಗಿಸಿತ್ತು.
2017ರಿಂದ 2023ರವರೆಗೆ ಕಲ್ಬುರ್ಗಿ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಖರೀದಿಯಾಗಿದ್ದ ಪುಸ್ತಕಗಳ ಮುಖಪುಟ, ಟೆಕ್ನಿಕಲ್ ಪೇಜ್ ನಕಲು ಪ್ರತಿ ಮತ್ತು ಖರೀದಿಯಾದ ಪುಸ್ತಕಗಳ ಹಣ ಯಾವ ಖಾತೆಗೆ ಸಂದಾಯವಾಗಿದೆ ಎಂಬ ಮಾಹಿತಿಯನ್ನೂ ಡಾ ಶಿವಪುತ್ರ ಹೋಳಕರ್ ಪಡೆದುಕೊಂಡಿದ್ದರು.


ಈ ಸಂಬಂಧ ವಿಶ್ವವಿದ್ಯಾಲಯವು 2023ರ ಸೆ.18ರಂದು ನೀಡಿದ್ದ ಮಾಹಿತಿ ಪ್ರಕಾರ ಡಾ ಅಂಬೇಡ್ಕರ್ ವಾಚಿಕೆ ಹೆಸರು ಪಟ್ಟಿಯಲ್ಲಿ ನೀಡಿರಲಿಲ್ಲ ಎಂದು ವೇದಿಕೆಯು ದೂರಿನಲ್ಲಿ ಆಪಾದಿಸಿತ್ತು.

ಅದೇ ರೀತಿ 18 ಪುಸ್ರಕಗಳು ತಲಾ ಮೂರು ಪುಸ್ತಕಗಳೊಂದಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಕಳಿಸಿತ್ತು ಎಂದು ದೂರಿನಲ್ಲಿ ವಿವರಿಸಿದೆ. ಈ 18 ಪುಸ್ತಕಗಳ ತಲಾ ಮೂರು ಪ್ರತಿಗಳ ಮೊತ್ತವನ್ನು ವಿಶ್ವವಿದ್ಯಾಲಯದ ಖಾತೆಗೆ (ಸಂಖ್ಯೆ; 52008642070) ಜಮೆ ಮಾಡಲಾಗಿದೆ ಎಂದು ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರು ಮಾಹಿತಿ ಒದಗಿಸಿದ್ದರು.


‘1 ಮತ್ತು 2ನೇ ದೂರನ್ನು ಪರಿಶೀಲಿಸಿದಾಗ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಸಾರಾಂಗಕ್ಕೆ ವಂಚನೆ ಮಾಡಿ ಭ್ರಷ್ಟಾಚಾರ ಎಸಗಿರುವುದು ಕಂಡು ಬರುತ್ತದೆ,’ ಎಂದು ವೇದಿಕೆಯು ದೂರಿನಲ್ಲಿ ಅರೋಪಿಸಿತ್ತು.
ಹಾಗೆಯೇ ಕಲ್ಬುರ್ಗಿ ವಿಶ್ವವಿದ್ಯಾಲಯದ ಪ್ರಸಾರಾಂಗವು ಖರೀದಿಸಿದ್ದ ಪುಸ್ತಕಗಳ ಮುಖಪುಟ ಮತ್ತು ಟೆಕ್ನಿಕಲ್ ಪೇಜ್ ಗಳ ವಿವರಗಳನ್ನು ವೇದಿಕೆಯುಕ ಪಡೆದಿತ್ತು. ಈ ಮಾಹಿತಿ ಪ್ರಕಾರ ಕಲ್ಬುರ್ಗಿ ವಿಶ್ವವಿದ್ಯಾಲಯದ ಪ್ರಸಾರಾಂಗವು ಪ್ರಕಟಿಸಿದ್ದ ಪುಸ್ರಕಗಳು ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಯಾವ ಪುಸ್ತಕವೂ ಆಯ್ಕೆಯಾಗಿಲ್ಲ . ಆದರೆ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ನೀಡಿದ್ದ ಮಾಹಿತಿ ಪ್ರಕಾರ ಜನಪದ ಕಲೆ ಸಮಸ್ಯೆ ಸವಾಲುಗಳೂ ಮತ್ತು ಡಾ ಅಂಬೇಡ್ಕರ್ ವಾಚಿಕೆ ಈ ಎರಡೂ ಪುಸ್ತಕಗಳನ್ನು 2018-19ನೇ ಸಾಲಿನಲ್ಲಿ ಆಯ್ಕೆ ಮಾಡಿತ್ತು. ಅಲ್ಲದೇ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಪ್ರೊ ಎಚ್ ಟಿ ಪೋತೆ ಅವರ ಸ್ವಂತ ಖಾತೆಗೆ 1 ಲಕ್ಷ ರು ಜಮೆ ಮಾಡಿತ್ತು ಎಂದು ದೃಢೀಕರಿಸಿದ್ದ ಮಾಹಿತಿ ಒದಗಿಸಿತ್ತು.


ಕರ್ನಾಟಕ ವಿಶ್ವವಿದ್ಯಾಲಯದ ಹಿಂದಿನ ಕುಲಪತಿ ವಾಲೀಕಾರ್ ಅವರು ಸೇರಿದಂತೆ ವಿವಿಯ ಹಣಕಾಸು ವಿಭಾಗದ ಅಧಿಕಾರಿ ರಾಜಶ್ರೀ, ಕುಲಪತಿಗಳ ಆಪ್ತ ಕಾರ್ಯದರ್ಶಿ ಎಸ್.ಎಲ್.ಬೀಳಗಿ, ವಿವಿ ಪರೀಕ್ಷಾ ವಿಭಾಗದ ಕುಲಸಚಿವ ಹೆಚ್.ಟಿ ಪೋತೆ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಅಲ್ಲದೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸೇರಿದಂತೆ ಇನ್ನಿತರೆ ವಿಶ್ವವಿದ್ಯಾಲಯಗಳಲ್ಲಿನ ವಿವಿಧ ಸ್ವರೂಪದ ಭ್ರಷ್ಟಾಚಾರ ಪ್ರಕರಣಗಳ ಕುರಿತು ಕುಲಪತಿಗಳ ವಿರುದ್ಧ ನ್ಯಾಯಾಂಗ ತನಿಖಾ ಸಮಿತಿಗಳು ವರದಿ ನೀಡಿದ್ದವು. ಆದರೆ ಈ ಯಾವ ಪ್ರಕರಣಗಳ ಬಗೆಗಿನ ಕಾರ್ಯನಿರ್ವಹಣಾ ವರದಿ ಕೇಳದ ರಾಜ್ಯಪಾಲರು ಇದೀಗ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ ಹೆಚ್ ಬಿ ವಾಲೀಕಾರ್, ಪ್ರೊ ಹೆಚ್ ಟಿ ಪೋತೆ ಮತ್ತಿತರರ ವಿರುದ್ಧದ ಪ್ರಕರಣದಲ್ಲಿ ಕಾರ್ಯನಿರ್ವಹಣಾ ವರದಿ ಸಲ್ಲಿಸಲು ಸೂಚಿಸಿದ್ದರು.

ಪ್ರಕರಣದ ಹಿನ್ನೆಲೆ
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಇಲ್ಲಿ ನಡೆದಿದೆ ಎನ್ನಲಾಗಿರುವ ನೇಮಕಾತಿ, ಅಂಕಪಟ್ಟಿ ಹಗರಣ, ಕಾಮಗಾರಿ ಮತ್ತು ಖರೀದಿ ಹಗರಣಗಳ ಬಗ್ಗೆ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಬಿ ಪದ್ಮರಾಜ್ ಅವರ ನೇತೃತ್ವದ ತನಿಖಾ ಆಯೋಗ ರಚಿಸಿತ್ತು.
ಈ ಆಯೋಗದ ವರದಿಯನ್ವಯ ರಾಜ್ಯಪಾಲರು ಹಾಗೂ ಕುಲಾಧಿಪತಿಗಳ ಆದೇಶದಂತೆ ಧಾರವಾಡದ ಲೋಕಾಯುಕ್ತ ಠಾಣೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಅಂದಿನ ಕುಲಪತಿ ಪ್ರೊ. ಹೆಚ್ ಬಿ .ವಾಲಿಕರ್ ಮತ್ತಿತರ ವಿರುದ್ಧ 2014ರ ಅಕ್ಟೋಬರ್ 7ರಂದು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಮತ್ತು ಐಪಿಸಿ ಯಡಿಯಲ್ಲಿ ಎಫ್ ಐ ಆರ್ (Cr.11/2014) ದಾಖಲಾಗಿತ್ತು.
ತಮ್ಮ ವಿರುದ್ಧದ ಕ್ರಮವನ್ನು ಪ್ರೊ ಹೆಚ್ ಬಿ ವಾಲೀಕಾರ್ ಅವರು ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ ಅನ್ವಯ ಮತ್ತು ತನಿಖಾ ವರದಿ ಅನ್ವಯ ಸರ್ಕಾರ ಕ್ರಮ ವಹಿಸಬೇಕಿತ್ತು. ಆದರೆ ನೇರವಾಗಿ ಕುಲಾಧಿಪತಿಗಳೇ ಕ್ರಮಕ್ಕೆ ಆದೇಶ ಹೊರಡಿಸಿದ್ದರು. ಇದು ತಾಂತ್ರಿಕವಾಗಿ ಸಿಂಧುವಲ್ಲ ಎಂಬ ಕಾರಣಕ್ಕೆ ಕುಲಾಧಿಪತಿಗಳ ಆದೇಶ ಮತ್ತು ಎಫ್‌ಐಆರ್‍ನ್ನು ರದ್ದುಗೊಳಿಸಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು. ಆದರೆ ಹಗರಣಗಳ ಬಗ್ಗೆ ನಿಯಮಾನುಸಾರ ಪ್ರಕ್ರಿಯೆ ಅನುಸರಿಸಿ ಕಾನೂನುಕ್ರಮ ಜರುಗಿಸಬಹುದು ಎಂದೂ ತೀರ್ಪಿನಲ್ಲಿ ಹೇಳಿತ್ತು.
ವಿಶ್ರಾಂತ ಕುಲಪತಿ ವಾಲೀಕಾರ್ ವಿರುದ್ಧ ಕ್ರಿಮಿನಲ್, ಸಿವಿಲ್ ಮೊಕದ್ದಮೆ; ವರದಿ ಸಲ್ಲಿಸಲು ರಾಜ್ಯಪಾಲರ ಸೂಚನೆ
ಉಚ್ಛ ನ್ಯಾಯಾಲಯದ ಆದೇಶವನ್ನು ಅಂದಿನ ಕುಲಾಧಿಪತಿಗಳು ಪ್ರಶ್ನಿಸಿದ್ದರು. ನಂತರ ಈ ಪ್ರಕರಣವು ಸರ್ವೋಚ್ಛ ನ್ಯಾಯಾಲಯದ (SLP) ಸಂ:4324-4338/2016) ಮೆಟ್ಟಿಲೇರಿತ್ತು. ಪ್ರೊ ಹೆಚ್ ಬಿ ವಾಲೀಕಾರ್ ಮತ್ತಿತರರ ವಿರುದ್ಧ ಕಾನೂನು ಕ್ರಮ ಜರುಗಿಸಲು ಯಾವುದೇ ಅಡೆತಡೆ ಇಲ್ಲ ಎಂದು 2019ರ ಸೆ.4ರಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎನ್ ವಿ ರಮಣ, ಮೋಹನ ಶಾಂತನಗೌಡರ, ಅಜಯ್ ರಸ್ತೋಗಿ ನೇತೃತ್ವದ ತ್ರಿ ಸದಸ್ಯ ಪೀಠವು ಆದೇಶ ನೀಡಿದ್ದನ್ನು ಸ್ಮರಿಸಬಹುದು.




