Monday | March 16, 2026 |

ಶೈಕ್ಷಣಿಕ ಸಂಯೋಜಕ ಹುದ್ದೆ; 88.06 ಕೋಟಿ ಹೊರೆ, ಅರ್ಹ 1,500 ಅತಿಥಿ ಉಪನ್ಯಾಸಕರ ಹುದ್ದೆ ಕಿತ್ತುಕೊಂಡಿತೇ?

Support THE-FILE

spot_img

ಬೆಂಗಳೂರು; ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ದ  ನಿಗದಿತ ವಿದ್ಯಾರ್ಹತೆ ಹೊಂದದ ಮತ್ತು ಇದೇ ಕಾರಣದಿಂದ ಆಯ್ಕೆ ಪ್ರಕ್ರಿಯೆಯಿಂದ ಹೊರಗುಳಿಯಲಿರುವ 3,853, ಅತಿಥಿ ಉಪನ್ಯಾಸಕರಿಗಾಗಿಯೇ  ಶೈಕ್ಷಣಿಕ ಸಂಯೋಜಕರು ಹೆಸರಿನಲ್ಲಿ  ಹುದ್ದೆಗಳನ್ನು ಸೃಜಿಸಲು ಮುಂದಾಗಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು, ಅರ್ಹತೆ ಹೊಂದಿರುವ ಅಂದಾಜು 1,500 ಸಂಖ್ಯೆಯ ಸ್ನಾತಕೋತ್ತರ ಪದವೀಧರರನ್ನು  ಅತಿಥಿ ಉಪನ್ಯಾಸಕರ ಹುದ್ದೆಯಿಂದ ವಂಚಿತರನ್ನಾಗಿಸಲಿದೆ!

ಸರ್ಕಾರದ ಈ ನಿರ್ಧಾರದಿಂದಾಗಿ ಅರ್ಹತೆ ಹೊಂದಿರುವ ಇಷ್ಟೇ ಸಂಖ್ಯೆಯ ಸ್ನಾತಕೋತ್ತರ ಪದವೀಧರರು ಅತಿಥಿ ಉಪನ್ಯಾಸಕರ ಹುದ್ದೆಗಳನ್ನೇ ಕಿತ್ತುಕೊಂಡಂತಾಗಿದೆ. ನ್ಯಾಯಾಲಯದ ನಿರ್ದೇಶನದ ವಿರುದ್ಧ ಬೇರೊಂದು ಮಾರ್ಗದಿಂದ ನಿಗದಿತ ವಿದ್ಯಾರ್ಹತೆಯಿಲ್ಲದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಹೊರಟಿದೆ.  ಅಲ್ಲದೇ ಸರ್ಕಾರವು, ಶೈಕ್ಷಣಿಕ ಸಂಯೋಜಕರ ಹುದ್ದೆಯನ್ನು ಸೃಜಿಸುವುದರಿಂದ ಮೊದಲ ವರ್ಷದಲ್ಲೇ ಅಂದಾಜು 88.06 ಕೋಟಿಯಷ್ಟು ಆರ್ಥಿಕ ಹೊರೆಯನ್ನು ಮೈ ಮೇಲೆ ಎಳೆದುಕೊಂಡಿದೆ. ಅಷ್ಟೇ ಅಲ್ಲ,  ಆರ್ಥಿಕ ಹೊರೆ ಮೊತ್ತವು ಮುಂದಿನ ವರ್ಷಗಳಲ್ಲಿ ದುಪ್ಪಟ್ಟಾಗಲಿದೆ.

ಈ ಸಂಬಂಧ ‘ದಿ ಫೈಲ್‌’ ಸಮಗ್ರ ಕಡತವನ್ನು ಆರ್‍‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

ವಿದ್ಯಾರ್ಹತೆ ಹೊಂದಿರದ ಅತಿಥಿ ಉಪನ್ಯಾಸಕರನ್ನು ಶೈಕ್ಷಣಿಕ ಸಂಯೋಜಜಕರುಗಳನ್ನಾಗಿ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ಆರ್ಥಿಕ ಇಲಾಖೆಯು ಬಲವಾಗಿ ಆಕ್ಷೇಪಿಸಿತ್ತು. ಮತ್ತು ಈ ಪ್ರಸ್ತಾವನೆಯನ್ನು ಪರಿಗಣಿಸುವುದು ಸೂಕ್ತವಾಗಿಲ್ಲ ಎಂದು ಆರ್ಥಿಕ ಇಲಾಖೆಯು ಸ್ಪಷ್ಟವಾಗಿ ನೀಡಿದ್ದ ಅಭಿಪ್ರಾಯವನ್ನೂ ಬದಿಗೊತ್ತಿರುವುದು ಟಿಪ್ಪಣಿ ಹಾಳೆಗಳಿಂದ ತಿಳಿದು ಬಂದಿದೆ.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರ ಪ್ರಥಮದರ್ಜೆ ಕಾಲೇಜುಗಳು ಮತ್ತು ಇಂಜಿನಿಯರಿಂಗ್‌ ಕಾಲೇಜು, ಹಾಗೂ ಪಾಲಿಟೆಕ್ನಿಕ್‌ಗಳಲ್ಲಿ ಕಳೆದ 2003ರಿಂದಲೂ  ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಯುಜಿಸಿ ನಿಯಮಾವಳಿಗಳ ಪ್ರಕಾರ ಉಪನ್ಯಾಸಕರ ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ ಆಧಾರದ ಮೇಲೆ 2012ರಿಂದಲೂ ಸೇವಾ ಅನುಭವ ಹಾಗೂ ಎನ್‌ಇಟಿ, ಎಸ್‌ಎಲ್‌ಇಟಿ, ಪಿಎಚ್‌ಡಿ, ಎಂಫಿಲ್ ವಿದ್ಯಾರ್ಹತೆಗಳಿಗೆ ಅದ್ಯಂತಾ ಅಂಕಗಳ ಮಾನದಂಡಗಳನ್ನು ಅನುಸರಿಸಿ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುತ್ತಿದೆ.

 

 

2022ರಲ್ಲಿ ಅತಿಥಿ ಉಪನ್ಯಾಸಕರಿಗೆ ಗರಿಷ್ಠ ಗಂಟೆಗಳ ಕಾರ್ಯಭಾರವನ್ನು ಹೆಚ್ಚಿಸಿತ್ತಲ್ಲದೇ ಗೌರವಧನದಲ್ಲಿ ಏರಿಕೆ ಮಾಡಿ ಆದೇಶ ಹೊರಡಿಸಿತ್ತು.

 

 

ಇದೇ ಆದೇಶದಲ್ಲಿಯೇ ಯುಜಿಸಿ ನಿಗದಿಪಡಿಸಿದ್ದ ವಿದ್ಯಾರ್ಹತೆ ಹೊಂದಿಲ್ಲದ ಅತಿಥಿ ಉಪನ್ಯಾಸಕರಿಗೆ ನಿಗದಿತ ವಿದ್ಯಾರ್ಹತೆ ಹೊಂದಲು 3 ವ‍ರ್ಷಗಳ ಕಾಲಾವಧಿ ನೀಡಲಾಗಿತ್ತು. ಅಲ್ಲದೇ ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಸಂಪುರ್ಣವಾಗಿ ನಿರ್ಬಂಧಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಿತ್ತು.

 

 

ಈ ಮಧ್ಯೆ ಅತಿಥಿ ಉಪನ್ಯಾಸಕರ ಆಯ್ಕೆಗೆ ನೀಡಲಾಗುತ್ತಿದ್ದ  100 ಅಂಕಗಳ ಮಾನದಂಡಗಳ ಪ್ರಕ್ರಿಯೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಯುಜಿಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು, ಯುಜಿಸಿ ವಿದ್ಯಾರ್ಹತೆಯ ಅನ್ವಯ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿಯು (ಸಂಖ್ಯೆ 23600/2023) ದಾಖಲಾಗಿತ್ತು. ಈ ಅರ್ಜಿಗೆ ಸಂಬಂಧಿಸಿದಂತೆ 2024ರ ಸೆ.5ರಂದು ನ್ಯಾಯಾಲಯವು ತೀರ್ಪು ನೀಡಿತ್ತು.

 

 

ಈ ತೀರ್ಪಿನ ಕುರಿತು ರಾಜ್ಯ ಸರ್ಕಾರವು ಉಚ್ಛ ನ್ಯಾಯಾಲಯದಲ್ಇ ರಿಟ್‌ ಅಪೀಲು (ಸಂಖ್ಯೆ 1578/2024)  ಸಲ್ಲಿಸಿತ್ತು. ಆದರೆ ಹೈಕೋರ್ಟ್‌ 2025ರ ಅಕ್ಟೋಬರ್‍‌ 8ರಂಂದು ಈ ರಿಟ್ ಅಪೀಲನ್ನು ವಜಾಗೊಳಿಸಿತ್ತು. ಅಲ್ಲದೇ 2024ರ ಸೆ.5ರಂದು ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿತ್ತು.  ಈ ನಿರ್ದೇಶನದ ಪ್ರಕಾರ 2025-26ನೇ ಸಾಲಿನಲ್ಲಿ ಯುಜಿಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನಷ್ಟೇ ಸೇವಾ ಅನುಭವ ಅಧಾರದ ಮೇಲೆ ಆನ್‌ಲೈನ್‌ ಕೌನ್ಸಲಿಂಗ್ ಮೂಲಕ ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಂಡಿತ್ತು.

ಹೀಗಾಗಿ ಕಳೆದ ಹಲವಾರು ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದ್ದ ಯುಜಿಸಿ ವಿದ್ಯಾರ್ಹತೆ ಹೊಂದಿರದ ಸುಮಾರು 3,853ಕ್ಕೂ ಹೆಚ್ಚಿನ ಸಂಖ್ಯೆಯ ಅತಿಥಿ ಉಪನ್ಯಾಸಕರು ಆಯ್ಕೆ ಪ್ರಕ್ರಿಯೆಯಿಂದ ಹೊರಗುಳಿದಿದ್ದರು. ಇಂತಹ ಅತಿಥಿ ಉಪನ್ಯಾಸಕರಿಗೆ ಜೀವನ ನಿರ್ವಹಣೆಯು ದುಸ್ತರವಾಗಲಿದೆ ಎಂದು ಹಲವರು ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿದ್ದರು. ಈ ಮನವಿಗಳನ್ನು ಪುರಸ್ಕರಿಸಿರುವ ಸರ್ಕಾರವು ಯುಜಿಸಿ ನಿಗದಿಪಡಿಸಿದ್ದ ವಿದ್ಯಾರ್ಹತೆ ಹೊಂದಿರುವ ಸ್ನಾತಕೋತ್ತರ ಪದವೀಧರರನ್ನು ಅತಿಥಿ ಉಪನ್ಯಾಸಕ ಹುದ್ದೆಯಿಂದ ದೂರವುಳಿಯುವಂತೆ ಮಾಡಿದೆ.

 

 

ಶೈಕ್ಷಣಿಕ ಸಂಯೋಜಕರ ಹುದ್ದೆ ಸೃಜನೆಯೇಕೆ?

ಯುಜಿಸಿ ನಿಗದಿತ ವಿದ್ಯಾರ್ಹತೆ ಹೊಂದಿಲ್ಲದೇ ಆಯ್ಕೆ ಪ್ರಕ್ರಿಯೆಯಿಂದ ಹೊರಗುಳಿಯಲಿರುವ, ಕನಿಷ್ಠ 5 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಸೇವಾ ಅನುಭವ ಹೊಂದಿರುವ ಸುಮಾರು 2,677 ಅತಿಥಿ ಉಪನ್ಯಾಸಕರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಶೈಕ್ಷಣಿಕ ಸಂಯೋಜಕರ ಹುದ್ದೆಯನ್ನು ಸೃಜಿಸಲು ಹೊರಟಿದೆ. ಅರ್ಹತೆ ಹೊಂದಿರದ ಅತಿಥಿ ಉಪನ್ಯಾಸಕರ ಹಿತಾಸಕ್ತಿ ಕಾಪಾಡಲು ಪರ್ಯಾಯ ವ್ಯವಸ್ಥೆ ಕಲ್ಪಿಸಲು ಶೈಕ್ಷಣಿಕ ಸಂಯೋಜಕರ ಹುದ್ದೆಗಳನ್ನು ಹೊಸದಾಗಿ ಸೃಜಿಸಲಿದೆ.

 

 

ಯೋಜನೆ ಉದ್ದೇಶವೇನು? 

ಯುಜಿಸಿ, ಎಇಸಿಟಿಇ ವಿದ್ಯಾರ್ಹತೆ  ಹೊಂದಿರದ ಅತಿಥಿ ಉಪನ್ಯಾಸಕರನ್ನು ಶೈಕ್ಷಣಿಕ ಸಂಯೋಜಕರುಗಳನ್ನಾಗಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಉನ್ನತ ಶಿಕ್ಷಣ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಯೋಜನೆಯನ್ನು 2026-27ನೇ ಸಾಲಿನಲ್ಲಿ ಜಾರಿಗೊಳಿಸಲು ಉದ್ದೇಶಿಸಿದೆ. 2026-27ನೇ ಶೈಕ್ಷಣಿಕ ಸಾಲಿನಲ್ಲಿ ನಡೆಯುವ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಲ್ಲಿ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅನುಗುಣವಾಗಿ ನೇಮಕ ಮಾಡಿಕೊಳ್ಳಲಿದೆ.

ಯುಜಿಸಿ ನಿಗದಿತ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಆಯ್ಕೆಗೊಂಡ ನಂತರ ಹಾಗೂ ಕೆಲವು ವಿಷಯಗಳಲ್ಲಿಲ ಯುಜಿಸಿ ನಿಗದಿತ ವಿದ್ಯಾರ್ಹತೆಯ ಅಭ್ಯರ್ಥಿಗಳು ಅಲಭ್ಯವಾದಲ್ಲಿ  ಯುಜಿಸಿ ನಿಗದಿತ ವಿದ್ಯಾರ್ಹತೆ ಹೊಂದಿರದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡ ನಂತರವೂ ಅತಿಥಿ ಉಪನ್ಯಾಸಕರ ಆಯ್ಕೆಯಿಂದ ಹೊರಗುಳಿಯುವ ಯುಜಿಸಿ ನಿಗದಿತ ವಿದ್ಯಾರ್ಹತೆ ಹೊಂದಿರದ ಅತಿಥಿ ಉಪನ್ಯಾಸಕರಿಗಾಗಿಯೇ ಶೈಕ್ಷಣಿಕ ಸಂಯೋಜಕರು ಹುದ್ದೆಯನ್ನು ಸೃಜಿಸುವ ಉದ್ದೇಶ ಹೊಂದಿದೆ. ಈ ಯೋಜನೆಯು ದೀರ್ಘಕಾಲದಿಮದ ಪೂರ್ಣಕಾಲಿಕ ಕಾರ್ಯಭಾರ ನಿರ್ವಹಿಸಿರುವ ಅತಿಥಿ ಉಪನ್ಯಾಸಕರನ್ನು ಗಮನದಲಿಟ್ಟುಕೊಂಡು ರೂಪಿಸಲಾಗಿದೆ ಎಂದು ಇಲಾಖೆಯು ವಿವರಿಸಿತ್ತು.

 

 

ಶೈಕ್ಷಣಿಕ ಸಂಯೋಜಕರ ಗೌರವಧನವೆಷ್ಟು?

ಅತಿಥಿ ಉಪನ್ಯಾಸಕರ ಸೇವೆಯನ್ನು ಸಲ್ಲಿಸುತ್ತಿರುವ ಅಭ್ಯರ್ಥಿಗಲಿಗೆ ನೀಡಲಾಗುತ್ತಿರುವ ಗೌರವ ಧನವನ್ನೇ ಶೈಕ್ಷಣಿಕ ಸಂಯೋಜಕರಿಗೂ ನಿಗದಿಪಡಿಸಲಿದೆ. 5ರಿಂದ 10 ವರ್ಷ ಸೇವಾ ಅನುಭವ ಹೊಂದಿದವರಿಗೆ 31,000 ರು., 11ರಿಂದ 15 ವರ್ಷ ಸೇವೆ ಸಲ್ಲಿಸಿದವರಿಗೆ 32,000 ರು., 15 ವರ್ಷ ಸೇವೆ ಸಲ್ಲಿಸಿರುವವರಿಗೆ 33,000 ರು ಗೌರವ ಧನ ಎಂದು ಇಲಾಖೆಯು ನಿಗದಿಪಡಿಸಿದೆ. ಹಾಗೆಯೇ 60 ವರ್ಷ ಪೂರೈಸುವ ಶೈಕ್ಷಣಿಕ ಸಂಯೋಜಕರಿಗೆ ಅವರು ಈ ಹಿಂದೆ ಅತಿಥಿ ಉಪನ್ಯಾಸಕರಾಗಿ ನಿರ್ವಹಿಸಿದ ಕರ್ತವ್ಯದ ಅವಧಿಯನ್ನು ಸೇರಿಸಲಿದೆ. ಪ್ರಸ್ತುತ ನಿರ್ವಹಿಸುವ ಸೇವೆಗೆ ಸೇರಿಸಿ ಜಾರಿಯಲ್ಲಿರುವ ಇಡುಗಂಟು ಯೋಜನೆಗೆ ಪರಿಗಣಿಸಲಾಗುವುದು ಎಂದು ಇಲಾಖೆಯು ತಿಳಿಸಿತ್ತು.

ಯಾರಿಗೆ ವಿಶೇಷ ಅವಕಾಶ?

ಯುಜಿಸಿ ನಿಗದಿತ ವಿದ್ಯಾರ್ಹತೆ ಹೊಂದದಿರುವ ಅತಿಥಿ ಉಪನ್ಯಾಸಕರಲ್ಲಿ 59 ವರ್ಷಕ್ಕಿಂತ ಹೆಚ್ಚಿನ ವಯೋಮಾನ ಅಥವಾ ಶೈಕ್ಷಣಿಕ ಸಂಯೋಜಕರಾಗಿ ನಿಗದಿತ 10 ತಿಂಗಳ ಸೇವೆಯನ್ನು ಪೂರೈಸಲು ಅವಕಾಶವಿರದ ಅತಿಥಿ ಉಪನ್ಯಾಸಕರನ್ನು ಈ ಯೋಜನೆಯಿಂದ ಹೊರಗಿಡಲಿದೆ. ಅಂತಹವರನ್ನು ಜಾರಿಯಲ್ಲಿರುವ ಅತಿಥಿ ಉಪನ್ಯಾಸಕರ ಇಡಿಗಂಟು ಯೋಜನೆಗೆ ಒಳಪಡಿಸಲಿದೆ.

 

 

ಶೈಕ್ಷಣಿಕ ಸಂಯೋಜಕರ ಹುದ್ದೆ ಸೃಜನೆಗೆ ಅನುದಾನವೆಷ್ಟು ?

ಇದೇ 2026-27ನೇ ಸಾಲಿನಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಿದೆಯಾದರೂ ಪ್ರಸ್ತಾಪಿಸಿರುವ ಅಂಕಿ ಅಂಶಗಳು 2023-24ನೇ ಸಾಲಿನಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಗಳ ಅಂಕಿ ಅಂಶಗಳನ್ನು ಪರಿಗಣಿಸಿದೆ. ಹೀಗಾಗಿ 2026-27ನೇ ಶೈಕ್ಷಣಿಕ ಸಾಲಿನಿಂದ ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಅಂಕಿ ಅಂಶಗಳು ವ್ಯತ್ಯಾಸಗಳಾಗಬಹುದು. ಇದಕ್ಕೆ ಅಂದಾಜು ವಾರ್ಷಿಕ 88.06 ಕೋಟಿ ಅನುದಾನ ಅಗತ್ಯವಿದೆ ಎಂದು ಹೇಳಿದೆ.

ಇಎಂಐಎಸ್‌ನಲ್ಲಿ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ 2,677 ಅಭ್ಯರ್ಥಿಗಳಿದ್ದಾರೆ. ವಾರ್ಷಿಕ 84.66 ಕೋಟಿ ಅನುದಾನ ಅಗತ್ಯವಿದೆ. ಇಡಗಂಟು ಯೋಜನೆಯಲ್ಲಿ 68 ಮಂದಿ ಅಭ್ಯರ್ಥಿಗಳಿದ್ದಾರೆ. ಇವರಿಗೆ ಗೌರವ ಧನ ನೀಡಲು ವಾರ್ಷಿಕ 3.4 ಕೋಟಿ ರು ಸೇರಿ ಒಟ್ಟಾರೆ 88.06 ಕೋಟಿ ರು ಅನುದಾನ ಅಗತ್ಯವಿದೆ ಎಂದು ಅಂದಾಜಿಸಿದೆ.

 

 

ಆರ್ಥಿಕ ಇಲಾಖೆಯು ಆಕ್ಷೇಪಿಸಿದ್ದೇಕೆ?

ಉನ್ನತ ಶಿಕ್ಷಣ ಇಲಾಖೆಯು ನೀಡಿದ್ದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಪರಿಶೀಲಿಸಿದೆ. ಅಲ್ಲದೇ ಈ ಪ್ರಸ್ತಾವನೆಗೆ ಸಹಮತಿ ವ್ಯಕ್ತಪಡಿಸಿರಲಿಲ್ಲ.

‘ಯುಜಿಸಿ ನಿಗದಿಪಡಿಸಿದ್ದ ವಿದ್ಯಾರ್ಹತೆ ಹೊಂದದ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು ಎಂದು ನ್ಯಾಯಾಲಯವು ಆದೇಶ ಹೊರಡಿಸಿದ್ದರೂ ಸಹ ಅದನ್ನು ಉಲ್ಲಂಘಿಸಿ ಶೈಕ್ಷಣಿಕ ಸಂಯೋಜಕರ ಹುದ್ದೆ ಹೆಸರಿನಲ್ಲಿ ಹಿಂಬಾಗಿಲಿನಿಂದ ನೇಮಕಾತಿ ಮಾಡಿಕೊಳ್ಳಲು ಹೊರಟಿದೆ. ಹಾಗೆಯೇ ಯುಜಿಸಿ ನಿಗದಿಪಡಿಸಿದ್ದ ವಿದ್ಯಾರ್ಹತೆ ಪಡೆಯಲು ಸಾಕ‍ಷ್ಟು ಕಾಲಾವಕಾಶ ನೀಡಿದ್ದರೂ ಸಹ ಕಾಲಮಿತಿಯಲ್ಲಿ ನಿಗದಿತ ವಿದ್ಯಾರ್ಹತೆ ಪಡೆದಿಲ್ಲ. ಇದು ಅಭ್ಯರ್ಥಿಗಳ ದೌರ್ಬಲ್ಯವಾಗಿದೆ. ಇದಕ್ಕೆ ಸರ್ಕಾರ ಹೊಣೆಯಲ್ಲ, ಹೀಗಾಗಿ ಅಂತಯಹ ಅಭ್ಯರ್ಥಿಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಪರಿಗಣಿಸುವುದು ಸೂಕ್ತವಲ್ಲ ,’ ಎಂದು ಸ್ಪಷ್ಟವಾಗಿ ಅಭಿಪ್ರಾಯಿಸಿತ್ತು.

 

 

ಕರ್ತವ್ಯಗಳ ಬಗ್ಗೆಯೇ  ಸ್ಪಷ್ಟತೆಯೇ ಇಲ್ಲ

ಕಾಲೇಜು ಶಿಕ್ಷಣ ಇಲಾಖೆಯಲ್ಲಿನ ಪ್ರಥಮದರ್ಜೆ ಕಾಲೇಜುಗಳ ಸಿಬ್ಬಂದಿ ನಮೂನೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬೋಧಕೇತರ ಹುದ್ದೆಗಳನ್ನು ಸೃಜಿಸಬಹುದು. ಆದರೆ ಶೈಕ್ಷಣಿಕ ಸಂಯೋಜಕರು ಎಂಬ ಹುದ್ದೆಯೇ ಇಲ್ಲ. ಅಲ್ಲದೇ ಪ್ರಸ್ತಾಪಿತ ಶೈಕ್ಷಣಿಕ ಸಂಯೋಜಕರು ಎಂಬ ಹುದ್ದೆಯನ್ನು ಬೋಧಕ ವೃಂದದಲ್ಲಿ ಪರಿಗಣಿಸಲಾಗುವುದೋ ಅಥವಾ ಬೋಧಕೇತರ ವೃಂದದಲ್ಲಿ ಪರಿಗಣಿಸಲಾಗುವುದೋ ಎಂಬ ಬಗ್ಗೆಯೂ ಸ್ಪಷ್ಟತೆಯನ್ನೂ ಹೊಂದಿಲ್ಲ ಎಂದು ಆರ್ಥಿಕ ಇಲಾಖೆಯು ಹೇಳಿತ್ತು.

ಅಲ್ಲದೇ ಈ ಅತಿಥಿ ಉಪನ್ಯಾಸಕರು ಶೈಕ್ಷಣಿಕ ಸಂಯೋಜಕರು ಎಂಬ ಪದನಾಮದಡಿಯಲ್ಲಿ ನೇಮಕಗೊಂಡು ಪ್ರಾಂಶುಪಾಲರ ಅಧೀನದಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದೆ. ಆದರೆ ಇವರು ನಿರ್ವಹಿಸುವ ಕರ್ತವ್ಯಗಳ ಬಗ್ಗೆಯೇ ಸ್ಪಷ್ಟತೆಯನ್ನೇ ಹೊಂದಿಲ್ಲ. ಒಬ್ಬ ಪ್ರಾಂಶುಪಾಲರ ಅಧೀನದಲ್ಲಿ ಎಷ್ಟು ಜನ ಶೈಕ್ಷಣಿಕ ಸಂಯೋಜಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ ಎಂದು ಆರ್ಥಿಕ ಇಲಾಖೆಯು ಪರಿಶೀಲನೆ ವೇಳೆ ಅಭಿಪ್ರಾಯಿಸಿತ್ತು.

 

 

ಪೂರ್ವ ನಿದರ್ಶನವಾಗಲಿದೆಯೇ?

ಹಾಗೆಯೇ ಇಂತಹ ಪ್ರಸ್ತಾವನೆಯನ್ನು ಒಂದೊಮ್ಮೆ ಪರಿಗಣಿಸಿದಲ್ಲಿ ಇದೇ ತೆರನಾಗಿ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿಗದಿತ ವಿದ್ಯಾರ್ಹತೆ ಹೊಂದಿಲ್ಲದೇ ಹಾಗೂ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿಗದಿತ ಅರ್ಹತೆ ಹೊಂದಿಲ್ಲದೇ ತಾತ್ಕಾಲಿಕ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳೂ ಇಂತಹ ಹಕ್ಕನ್ನು ಸ್ಥಾಪಿಸಬಹುದು.

 

 

ಅಲ್ಲದೇ ಭವಿಷ್ಯದಲ್ಲಿ ಅರ್ಹತೆ ಇಲ್ಲದೇ ಕಾರಣಕ್ಕೆ ಉದ್ಯೋಗದಿಂದ ಬಿಡುಗಡೆಗೊಳಿಸಿದಾಗ ಅಂತಹ ಅಭ್ಯರ್ಥಿಗಳು ಸಹ ಈ ಪ್ರಸ್ತಾವನೆಯನ್ನು ಪೂರ್ವ ನಿದರ್ಶನವನ್ನಾಗಿ ಪರಿಗಣಿಸಿಕೊಳ್ಳಲಿದ್ದಾರೆ. ಹಾಗೆಯೇ ತಮಗೂ ಮಾನವೀಯ ನೆಲೆಯಲ್ಲಿ ಉದ್ಯೋಗ ಕಲ್ಪಿಸಿಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಬಹುದು. ಒಂದೊಮ್ಮೆ ಈ ಮನವಿಯನ್ನು ಪರಿಗಣಿಸದೇ ಇದ್ದಾಗ ನ್ಯಾಯಾಲಯದ ಮೊರೆ ಹೋಗಬಹುದು. ಇದಕ್ಕೆ ಸರ್ಕಾರವೇ ಅವಕಾಶ ಕಲ್ಪಿಸಿದಂತಾಗುತ್ತದೆ. ಹಾಗೆಯೇ ಅನಗತ್ಯ ಆರ್ಥಿಕ ಹೊರೆಯನ್ನು ಭರಿಸಬೇಕಾಗುತ್ತದೆ ಎಂದೂ ಎಚ್ಚರಿಸಿತ್ತು.

‘ಈ ಎಲ್ಲಾ ವಾಸ್ತಾವಂಶಗಳ ಹಿನ್ನೆಲೆಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳು, ಇಂಜಿನಿಯರಿಂಗ್‌ ಕಾಲೆಜುಗಳು ಹಾಗೂ ಪಾಲಿಟೆಕ್ನಿಕ್‌ಗಳಲ್ಲಿ ಕಳೆದ ಹಲವಾರು ವ‍ರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಯುಜಿಸಿ, ಎಐಸಿಟಿಇ ವಿದ್ಯಾರ್ಹತೆ ಹೊಂದಿರದ ಅತಿಥಿ ಉಪನ್ಯಾಸಕರನ್ನು ಶೈಕ್ಷಣಿಕ ಸಂಯೋಜಕರುಗಳನ್ನಾಗಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳುವ ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಗಣಿಸುವುದು ಸೂಕ್ತವಲ್ಲ,’ ಎಂದು ಆರ್ಥಿಕ ಇಲಾಖೆಯು ಸ್ಪಷ್ಟವಾಗಿ ಅಭಿಪ್ರಾಯಿಸಿತ್ತು.

ನ್ಯಾಯಾಂಗ  ನಿಂದನೆಗೆ ದಾರಿಯಾಗಲಿದೆಯೇ?

2024ರ ಸೆ.5ರಂದು ಹೈಕೋರ್ಟ್‌ ನೀಡಿದ್ದ ತೀರ್ಪಿನಲ್ಲಿ ಹಾಗೂ  ರಿಟ್‌ ಅಪೀಲು ಅರ್ಜಿ ಸಂಖ್ಯೆಯಲ್ಲಿ 2025ರ ಅಕ್ಟೋಬರ್‍‌ 8ರಂದು ನೀಡಿದ್ದ ತೀರ್ಪಿನಲ್ಲಿ 2024ರಲ್ಲಿ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ. ಹೀಗಾಗಿ 2018ರ ಯುಜಿಸಿ ನಿಯಮಾವಳಿಗಳಲ್ಲಿ ನಿಗದಿಪಡಿಸಿದ ವಿದ್ಯಾರ್ಹತೆಯನ್ನು ಹೊಂದಿಲ್ಲದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳದಂತೆ ನಿರ್ದೇಶನ ನೀಡಿದೆ. ನ್ಯಾಯಾಲಯದ ನಿರ್ದೇಶನದ ವಿರುದ್ಧ ಬೇರೊಂದು ಮಾರ್ಗದಿಂದ ನಿಗದಿತ ವಿದ್ಯಾರ್ಹತೆಯಿಲ್ಲದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವುದು ನ್ಯಾಯಾಂಗ ನಿಂದನೆಯಾಗಲಿದೆ ಎಂದು ಎಚ್ಚರಿಸಿತ್ತು.

 

 

ತನ್ನದೇ ಇಲಾಖೆಯು ನೀಡಿದ್ದ ಅಭಿಪ್ರಾಯವನ್ನು ಬದಿಗೊತ್ತಿದ ಸಿಎಂ

ಆರ್ಥಿಕ ಇಲಾಖೆಯು ಶೈಕ್ಷಣಿಕ ಸಂಯೋಜಕರ ಹುದ್ದೆಗಳನ್ನು ಸೃಜಿಸಲು ಸ್ಪಷ್ಟವಾಗಿ ಮತ್ತು ಸಕಾರಣಗಳನ್ನು ಮುಂದಿಟ್ಟು ಪ್ರಸ್ತಾವನೆಗೆ ಸಹಮತಿಸಿರಲಿಲ್ಲ.

 

 

ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೈಕ್ಷಣಿಕ ಸಂಯೋಜಕರ ಹುದ್ದೆಯನ್ನು ಸೃಜಿಸಲು ಅನುಮೋದನೆ ನೀಡಿರುವುದು ತಿಳಿದು ಬಂದಿದೆ.

Hot this week

ಅರಣ್ಯ ಜಮೀನಿನ ಖಾತೆ ಬದಲಾವಣೆ, ಅಸಮರ್ಪಕ ವರದಿ; ತಡವಾಗಿ ವಿಚಾರಣೆ, ನೋಟೀಸ್ ಜಾರಿ

ಬೆಂಗಳೂರು; ಭಾರತ ಸರ್ಕಾರದ ಅರಣ್ಯ ಸಚಿವಾಲಯದಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಅಂದಾಜು...

ಸಾಮಾಜಿಕ ಭದ್ರತಾ ಯೋಜನೆ; ಖರ್ಚಾಗದ ಪೂರ್ಣ ಅನುದಾನ, 676.16 ಕೋಟಿ ಉಳಿಕೆ

ಬೆಂಗಳೂರು; ವೃದ್ಧಾಪ್ಯ, ಸಂಧ್ಯಾ ಸುರಕ್ಷಾ ಸೇರಿದಂತೆ ಒಟ್ಟಾರೆ 12 ಸಾಮಾಜಿಕ ಭದ್ರತಾ...

ಎಪಿಎಂಸಿಯಲ್ಲಿ ಅಕ್ರಮ; ನಿಯಮಬಾಹಿರವಾಗಿ 2,132 ಕಮಿಷನ್ ಏಜೆಂಟ್ ಲೈಸೆನ್ಸ್ ಮಂಜೂರು,

ಬೆಂಗಳೂರು; ಕೃಷಿ ಉತ್ಪನ್ನ ಮಾರುಕಟ್ಟೆ  ಸ್ವಂತ ಪ್ರಾಂಗಣ ಹೊಂದದೇ ಇದ್ದರೂ ಸಹ...

ರಾಜ್ಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಬೇಕು 10,000 ಕೋಟಿ ಹೆಚ್ಚುವರಿ ಅನುದಾನ; ಸಚಿವ ಸಂಪುಟಕ್ಕೆ ಪ್ರಸ್ತಾವ

ಬೆಂಗಳೂರು; ರಾಜ್ಯ ಶಿಕ್ಷಣ ನೀತಿ ಆಯೋಗವು ಮಾಡಿರುವ  ಒಟ್ಟು 72 ಪ್ರಮುಖ...

ಸರ್ಕಾರಿ ಜಮೀನು ಭೂಗಳ್ಳರ ಪಾಲು; ಪಿ ನಂಬರ್ ದುರಸ್ತಿ ಹೆಸರಿನಲ್ಲಿ ಅಕ್ರಮ, ತಹಶೀಲ್ದಾರ್‍‌ಗಳೇ ಭಾಗಿ, ಕ್ರಮವೇ ಇಲ್ಲ

ಬೆಂಗಳೂರು;  ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಲಕ್ಕೂರು ಹೋಬಳಿ ಸಂಪಂಗೆರೆ ಗ್ರಾಮದಲ್ಲಿನ...

Topics

ಅರಣ್ಯ ಜಮೀನಿನ ಖಾತೆ ಬದಲಾವಣೆ, ಅಸಮರ್ಪಕ ವರದಿ; ತಡವಾಗಿ ವಿಚಾರಣೆ, ನೋಟೀಸ್ ಜಾರಿ

ಬೆಂಗಳೂರು; ಭಾರತ ಸರ್ಕಾರದ ಅರಣ್ಯ ಸಚಿವಾಲಯದಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಅಂದಾಜು...

ಸಾಮಾಜಿಕ ಭದ್ರತಾ ಯೋಜನೆ; ಖರ್ಚಾಗದ ಪೂರ್ಣ ಅನುದಾನ, 676.16 ಕೋಟಿ ಉಳಿಕೆ

ಬೆಂಗಳೂರು; ವೃದ್ಧಾಪ್ಯ, ಸಂಧ್ಯಾ ಸುರಕ್ಷಾ ಸೇರಿದಂತೆ ಒಟ್ಟಾರೆ 12 ಸಾಮಾಜಿಕ ಭದ್ರತಾ...

ಎಪಿಎಂಸಿಯಲ್ಲಿ ಅಕ್ರಮ; ನಿಯಮಬಾಹಿರವಾಗಿ 2,132 ಕಮಿಷನ್ ಏಜೆಂಟ್ ಲೈಸೆನ್ಸ್ ಮಂಜೂರು,

ಬೆಂಗಳೂರು; ಕೃಷಿ ಉತ್ಪನ್ನ ಮಾರುಕಟ್ಟೆ  ಸ್ವಂತ ಪ್ರಾಂಗಣ ಹೊಂದದೇ ಇದ್ದರೂ ಸಹ...

ರಾಜ್ಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಬೇಕು 10,000 ಕೋಟಿ ಹೆಚ್ಚುವರಿ ಅನುದಾನ; ಸಚಿವ ಸಂಪುಟಕ್ಕೆ ಪ್ರಸ್ತಾವ

ಬೆಂಗಳೂರು; ರಾಜ್ಯ ಶಿಕ್ಷಣ ನೀತಿ ಆಯೋಗವು ಮಾಡಿರುವ  ಒಟ್ಟು 72 ಪ್ರಮುಖ...

ಸರ್ಕಾರಿ ಜಮೀನು ಭೂಗಳ್ಳರ ಪಾಲು; ಪಿ ನಂಬರ್ ದುರಸ್ತಿ ಹೆಸರಿನಲ್ಲಿ ಅಕ್ರಮ, ತಹಶೀಲ್ದಾರ್‍‌ಗಳೇ ಭಾಗಿ, ಕ್ರಮವೇ ಇಲ್ಲ

ಬೆಂಗಳೂರು;  ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಲಕ್ಕೂರು ಹೋಬಳಿ ಸಂಪಂಗೆರೆ ಗ್ರಾಮದಲ್ಲಿನ...

7ನೇ ವೇತನ ಆಯೋಗ ಶಿಫಾರಸ್ಸು; ಬದ್ಧ ವೆಚ್ಚದಲ್ಲಿ ಹೆಚ್ಚಳ, 15,000 ಕೋಟಿಯಿಂದ 20,000 ಕೋಟಿಗೆ ಏರಿಕೆ

ಬೆಂಗಳೂರು;  7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಿದಲ್ಲಿ  ಮುಂಬರುವ ವರ್ಷಗಳಲ್ಲಿ ಬದ್ಧ...

ವಿಚಾರಣೆಗಳಿಗೆ ಹಾಜರಾಗದಿದ್ದರೂ ಸಂಭಾವನೆ ಕೋರಿದ ಪಬ್ಲಿಕ್ ಪ್ರಾಸಿಕ್ಯೂಟರ್ಸ್‌: 590 ಪ್ರಕರಣ ಪತ್ತೆ

ಬೆಂಗಳೂರು; ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ...

ಹುದ್ದೆಗಳ ಸಂಖ್ಯೆಯಲ್ಲಿ ಗಣನೀಯ ಕಡಿತ, ಸಾಮಾಜಿಕ ನ್ಯಾಯಕ್ಕೆ ಪೆಟ್ಟು; ವಿವಿಗಳ ಅಭಿಪ್ರಾಯ ಬಹಿರಂಗ

ಬೆಂಗಳೂರು; ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ಸಂದರ್ಭದಲ್ಲಿ  ವಿಶ್ವವಿದ್ಯಾಲಯವನ್ನು ಘಟಕವನ್ನಾಗಿ ಪರಿಗಣಿಸಿದ್ದಲ್ಲಿ ...

Related Articles

Popular Categories

error: Content is protected !!