ಬೆಂಗಳೂರು; ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಲಕ್ಕೂರು ಹೋಬಳಿ ಸಂಪಂಗೆರೆ ಗ್ರಾಮದಲ್ಲಿನ ಸರ್ಕಾರಿ ಜಮೀನನ್ನು ಕಾನೂನುಬಾಹಿರವಾಗಿ ಇಂಡೀಕರಿಸಿ ಭೂಗಳ್ಳರ ಪಾಲಾಗಿಸಿರುವ ಅಧಿಕಾರಿಗಳ ವಿರುದ್ಧ ಸರ್ಕಾರವು ಇನ್ನೂ ಕಠಿಣ ಕ್ರಮಕೈಗೊಂಡಿಲ್ಲ.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಲಕ್ಕೂರು ಹೋಬಳಿ ಸೇರಿದಂತೆ ವಿವಿಧೆಡೆ ಸರ್ಕಾರಿ ಜಮೀನುಗೋಮಾಳ ಹಾಗೂ ಶಾಲೆಗೆ ದಾನ ನೀಡಿದ ಭೂಮಿಯನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲಾಗುತ್ತಿದೆ. ಪ್ರಭಾವಿಗಳು ಮತ್ತು ಅಧಿಕಾರಿಗಳ ಶಾಮೀಲಿನಿಂದ 50 ಎಕರೆಗೂ ಹೆಚ್ಚು ಭೂಮಿ ಲೂಟಿಯಾಗಿದೆ. ನಕಲಿ ಪಿ ನಂಬರ್ (P-number) ದುರಸ್ತಿ ಅಕ್ರಮ ಸಾಗುವಳಿ ದಂಧೆ ಹಾಗೂ ಮರಣ ಹೊಂದಿದವರಿಗೆ ಭೂಮಿ ಮಂಜೂರು ಮಾಡಿದ ಪ್ರಕರಣಗಳಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ದೋಷಾರೋಪಣೆ ಪಟ್ಟಿಯೂ ಸಲ್ಲಿಕೆಯಾಗಿಲ್ಲ.
ಈ ಮಧ್ಯೆ ಮಾಲೂರು ತಾಲೂಕಿನ ಲಕ್ಕೂರು ಹೋಬಳಿಯ ಸಂಪಂಗೆರೆ ಗ್ರಾಮದ ಪ್ರಕರಣವೂ ಮುನ್ನೆಲೆಗೆ ಬಂದಿದೆ. ಈ ಪ್ರಕರಣದಲ್ಲಿಯೂ ಹಿಂದಿನ ತಹಶೀಲ್ದಾರ್ ಮತ್ತು ಇತರೆ ನೌಕರರ ವಿರುದ್ಧ ಕ್ರಮಕೈಗೊಳ್ಳುವ ಆಡಳಿತಾತ್ಮಕ ಪ್ರಕ್ರಿಯೆಗಳು ತೆವಳುತ್ತಲೇ ಇವೆ.
ಮಾಲೂರು ತಾಲೂಕಿನ ವಿವಿಧ ಸರ್ವೆ ನಂಬರ್‍ಗಳಲ್ಲಿನ ಸರ್ಕಾರಿ ಜಮೀನು ಭೂಗಳ್ಳರ ಪಾಲಾಗಿರುವ ಪ್ರಕರಣಗಳಲ್ಲಿ ಹಿಂದಿನ ತಹಶೀಲ್ದಾರ್ ಸುಧಾ ಫಾಯಿಷ್ ಮತ್ತು ತಾಲೂಕು ಕಚೇರಿಯ ದ್ವಿತೀಯ ದರ್ಜೆ ಗುಮಾಸ್ತ ವೆಂಕಟೇಶ್ ಮತ್ತಿತರರು ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಅಧಿಕಾರಿಗಳ ವಿರುದ್ಧ ಜಂಟಿ ಇಲಾಖೆ ವಿಚಾರಣೆ ನಡೆಸಲು ಕ್ರಮ ಕೈಗೊಂಡಿದೆಯಾದರೂ ದೋಷಾರೋಪಣೆ ಪಟ್ಟಿ ತಯಾರಿಕೆಯಲ್ಲಿಯೇ ಕಾಲಹರಣ ಮಾಡಲಾಗುತ್ತಿದೆ.
ಸದ್ಯ ಇದರ ಕಡತವು ಕಂದಾಯ ಇಲಾಖೆಯ ಶಾಖಾಧಿಕಾರಿ ಲಾಗಿನ್‌ನಲ್ಲಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಪ್ರಕರಣದ ವಿವರ
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಲಕ್ಕೂರು ಹೋಳಿಯ ಸಂಪಂಗೆರೆ ಗ್ರಾಮದ ಸರ್ವೆ ನಂಬರ್ 94, 94/ಪಿ 14ರ ಹೊಸ ಸರ್ವೆ ನಂಬರ್ 283, ಸರ್ವೆ ನ ಂಬರ್ 99/ಪಿ 14 ಹೊಸ ಸರ್ವೆ ನಂಬರ್ 274, ಸರ್ವೆನಂಬರ್ 94/ಪಿ5 ರ ಹೊಸ ಸರ್ವೆನಂಬರ್ 282, ಸರ್ವೆ ನಂಬರ್ 94/ಪಿ 14ರ ಹೊಸ ಸರ್ವೆ ನಂಬರ್ 284 ಪಹಣಿಯನ್ನು ಕಾನೂನುಬಾಹಿರವಾಗಿ ಇಂಡೀಕರಿಸಲಾಗಿದೆ.

ಅಕ್ರಮ ದಾಖಲೆಗಳ ಮೂಲಕ ಸರ್ಕಾರಿ ಜಮೀನು ಭೂಗಳ್ಳರ ಪಾಲಾಗಿತ್ತು. ಹಾಗೆಯೆ ಕಂದಾಯ ದಾಖಲೆಗಳಲ್ಲಿ ನಮೂದಿಸಿದ್ದಲ್ಲದೇ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಮಾಲೂರು ತಾಲೂಕಿನ ಹಿಂದಿನ ತಹಶೀಲ್ದಾರ್ ಸುಧಾ ಫಾಯಿಷ್ ಅವರನ್ನು ಅಮಾನತುಗೊಳಿಸಲು ಮತ್ತು ಇಲಾಖೆ ವಿಚಾರಣೆ ನಡೆಸಲು ಮುಂದಾಗಿತ್ತು. ಈ ಪ್ರಕ್ರಿಯೆಯು ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ.
ಈ ಮಧ್ಯೆ ಸುಧಾ ಫಾಯಿಷ್ ಮತ್ತು ತಾಲೂಕು ಕಚೇರಿಯ ದ್ವಿತೀಯ ದರ್ಜೆ ಸಹಾಯಕ ವೆಂಕಟೇಶ್ ಎಂಬುವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ದಾಖಲಿಸಿದ್ದರು. ಮೇಲ್ಮನವಿಯನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್, ಈ ಅಧಿಕಾರಿ, ನೌಕರರ ಇರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವ ಆದೇಶವನ್ನು ರದ್ದುಗೊಳಿಸಿತ್ತು. ಬದಲಿಗೆ ಅಧಿಕಾರಿ, ನೌಕರರ ವಿರುದ್ಧ ಇಲಾಖೆ ವಿಚಾರಣೆ ನಡೆಸಲು ಆದೇಶಿಸಿತ್ತು.

ಇವರ ವಿರುದ್ಧ ಕರ್ನಾಟಕ ನಾಗರಿಕ ಸೇವೆ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ 1957ರ ನಿಯಮ 11ರ ಪ್ರಕ್ರಿಯೆಗಳೊಂದಿಗೆ ನಿಯಮ 13ರ ಅಡಿ ಜಂಟಿ ಇಲಾಖೆ ವಿಚಾಋಣೆ ನಡೆಸಲು ದೋಷಾರೋಪಣೆ ಪಟ್ಟಿ ತಯಾರಿಸಿತ್ತು. ಇದಕ್ಕೆ ಪ್ರತಿಯಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಯಿಂದ ಸ್ವೀಕೃತವಾಗಿದ್ದ ಯಾವುದೇ ಅನಧಿಕೃತ ಸಹಿ ಇಲ್ಲದ ಕರಡು ದೋಷಾರೋಪಣೆ ಪಟ್ಟಿ ಅನುಬಂಧ 1-4ನ್ನು ಯಥಾವತ್ತಾಗಿ ಮುಂದಿನ ಕ್ರಮಕ್ಕೆ ಸಲ್ಲಿಸಲಾಗಿತ್ತು.

ಆದರೆ ಕರಡು ದೋಷಾರೋಪಣೆ ಪಟ್ಟಿ ಅನುಬಂಧ 1-4ನ್ನು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಯ ಅನಧಿಕೃತ ಸಹಿಯೊಂದಿಗೆ ತಯಾರಿಸಿರಲಿಲ್ಲ. ಅಲ್ಲದೇ ಅನುಬಂಧ 3ರಲ್ಲಿ ನಮೂದಿಸಿದ್ದ ಆರೋಪಗಳನ್ನು ಸಮರ್ಥಿಸುವಂತಹ ದಾಖಲೆಗಳನ್ನು ಒದಗಿಸಿರಲಿಲ್ಲ.
ಈ ಪ್ರಕರಣದಲ್ಲಿನ ಮತ್ತೊಬ್ಬ ಆರೋಪಿತ ದ್ವಿತೀಯ ದರ್ಜೆ ಸಹಾಯಕ ವೆಂಕಟೇಶ್ ಅವರು ಇದೇ 2026ರ ಮಾರ್ಚ್ 31ರಂದು ನಿವೃತ್ತಿಯಾಗಲಿದ್ದಾರೆ. ಆದರೂ ಕೋಲಾರ ಜಿಲ್ಲಾಧಿಕಾರಿಯವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿಯಾದ ಮಾಹಿತಿಯು ಕಂದಾಯ ಇಲಾಖೆಗೆ ಸ್ವೀಕೃತವಾಗಿಲ್ಲ.

ಮಾಲೂರು ಹಾಗೂ ಕೋಲಾರ ತಾಲೂಕುಗಳಲ್ಲಿ ಭೂಮಿ ಬೆಲೆ ಗಗನಮುಖಿಯಾಗಿದೆ. ಸಹಜವಾಗಿಯೇ ಭೂಗಳ್ಳರ ಕಣ್ಣು ಈ ಎರಡೂ ತಾಲೂಕುಗಳ ಸರಕಾರ ಜಮೀನುಗಳ ಮೇಲೆ ಬಿದ್ದಿವೆ. ಪರಿಣಾಮ ಕೋಟ್ಯಂತರ ಬೆಲೆಬಾಳುವ ಸರ್ಕಾರಿ ಸ್ವತ್ತುಗಳು ಖಾಸಗಿಯವರ ಪಾಲಾಗಿದ್ದರೂ ಸಹ ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಿಲ್ಲ.

ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡಬೇಕಾದ ಅಧಿಕಾರಿಗಳೇ ಖಾಸಗಿಯವರೊಂದಿಗೆ ಶಾಮೀಲಾಗಿದ್ದಾರೆ. ಅಲ್ಲದೇ ಕೋಟ್ಯಂತರ ರೂ. ಮೌಲ್ಯದ ಆಸ್ತಿಗಳನ್ನು ಪರಭಾರೆ ಮಾಡಲು ಅನುಕೂಲಕರವಾದ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. ಹತ್ತು ಹದಿನೈದು ವರ್ಷಗಳಿಂದ ಸರಕಾರಿ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ರೈತರು ಜಮೀನು ಮಂಜೂರಿಗೆ ಅರ್ಜಿ ಸಲ್ಲಿಕೆ ಮಾಡಿ ವರ್ಷಗಳು ಕಳೆದಿವೆ. ಆದರೆ, ಮೂಲ ದಾಖಲೆಗಳೇ ದೊರೆಯುತ್ತಿಲ್ಲ. ಕಚೇರಿಯಲ್ಲಿ ಕಡತಗಳಿಲ್ಲ ಎಂದು ಅಧಿಕಾರಿಗಳು ಕುಂಟು ನೆಪವೊಡ್ಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಮಾಲೂರಿನಲ್ಲಿ ಕೋಟ್ಯಂತರ ರೂ ಮೌಲ್ಯದ 6 ಎಕರೆ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪರಭಾರೆ ಮಾಡಲಾಗಿತ್ತು. ಬೇತಮಂಗಲದ ಆಸ್ತಿಯೊಂದನ್ನು ಮಾಲೀಕರ ಗಮನಕ್ಕೇ ಬಾರದೆ ಬೇರೆಯೊಬ್ಬರಿಂದ ನಕಲಿ ಬಯೋಮೆಟ್ರಿಕ್ ಪಡೆದು ನೋಂದಣಿ ಮಾಡಿಕೊಡಲಾಗಿತ್ತು.
ಮಾಲೂರು ತಾಲೂಕಿನ ಕಸಬಾ ಹೋಬಳಿ ದೊಂಬ್ರಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 173ರ 6.19 ಎಕರೆ ಸರಕಾರಿ ಜಮೀನಿಗೆ ಅಕ್ರಮ ದಾಖಲೆಗಳನ್ನು ಸೃಷ್ಟಿಸಿ ಅಧಿಕಾರಿಗಳು ಖಾತೆ ಮಾಡಿದ್ದರು. ಈ ಕುರಿತು ಸಲ್ಲಿಕೆಯಾಗಿದ್ದ ದೂರಿನಿಂದಾಗಿ ದಾಖಲೆಗಳನ್ನು ಪರಿಶೀಲಿಸಿತ್ತು. ಅಗ ಈ ಜಮೀನು ಸರ್ಕಾರಿ ಬಂಜರು ಪ್ರದೇಶ ಎಂಬ ಸಂಗತಿ ಬೆಳಕಿಗೆ ಬಂದಿತ್ತು.
ಈ ಪ್ರಕರಣದಲ್ಲಿಯೂ ಹಿಂದಿನ ತಹಸೀಲ್ದಾರ್ ಎಚ್.ವಿ.ಗಿರೀಶ್, ಹಕ್ಕು ದಾಖಲೆ ಶಿರಸ್ತೇದಾರ್ ಎಸ್.ಎಂ.ನಾರಾಯಣಸ್ವಾಮಿ, ಆರ್‌ಆರ್‌ಟಿ ಶಾಖೆಯ ವಿಷಯ ನಿರ್ವಾಹಕ ಪ್ರಥಮ ದರ್ಜೆ ಸಹಾಯಕ ಪ್ರಸಾದ್ ಕುಮಾರ್, ಹಿಂದಿನ ಆರ್‌ಐ ಎಂ.ಕೆ.ಶ್ರೀಪತಿ, ಗ್ರಾಮಲೆಕ್ಕಿಗ ಶಿವಾನಂದ ಪಡಸಲೆಗೆ ಸೇರಿಕೊಂಡು ಅಕ್ರಮವಾಗಿ ಖಾತೆ ಮಾಡಿರುವುದು ಬಯಲಾಗಿತ್ತು. ಆ ನಂತರ ಜಿಲ್ಲಾಧಿಕಾರಿಗಳು ಈ ಮಂಜೂರಾತಿಯನ್ನು ರದ್ದುಪಡಿಸಿದ್ದರು.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಲಕ್ಕೂರು ಹೋಬಳಿ ಸೇರಿದಂತೆ ವಿವಿಧೆಡೆ ಸರ್ಕಾರಿ ಜಮೀನು, ಗೋಮಾಳ ಹಾಗೂ ಶಾಲೆಗೆ ದಾನ ನೀಡಿದ್ದ ಭೂಮಿಯನ್ನೂ ನಕಲಿ ದಾಖಲೆಗಳ ಮೂಲಕ ಕಬಳಿಸಲಾಗಿತ್ತು. ಪ್ರಭಾವಿಗಳು ಮತ್ತು ಅಧಿಕಾರಿಗಳು ಶಾಮೀಲಾಗಿದ್ದರಿಂದ 50 ಎಕರೆಗೂ ಹೆಚ್ಚು ಭೂಮಿ ಭೂಗಳ್ಳರ ಪಾಲಾಗಿತ್ತು.
ನಕಲಿ ಪಿ ನಂಬರ್ ದುರಸ್ತಿ ಅಕ್ರಮ ಸಾಗುವಳಿ ದಂಧೆ ಮತ್ತು ಮರಣ ಹೊಂದಿದವರಿಗೆ ಭೂಮಿ ಮಂಜೂರು ಮಾಡಿದ ಪ್ರಕರಣಗಳೂ ಬೆಳಕಿಗೆ ಬಂದಿದ್ದವು. 2004ರಲ್ಲಿ ನಿಧನರಾಗಿದ್ದ ವ್ಯಕ್ತಿಯ ಹೆಸರಿನಲ್ಲಿ 2019ರಲ್ಲಿ ಭೂಮಿ ಮಂಜೂರು ಮಾಡಲಾಗಿತ್ತು. ಮಾಲೂರು ತಾಲೂಕಿನಲ್ಲಿ ಪಿ- ನಂಬರ್ ದುರಸ್ತಿ, ಅಕ್ರಮ ಸಾಗುವಳಿ ಕುರಿತು ಸಿಬಿಐನಿಂದ ತನಿಖೆ ನಡೆಸಬೇಕು ಎಂಬ ಬೇಡಿಕೆಯೂ ಕೇಳಿ ಬಂದಿತ್ತು.
ಈ ಅಕ್ರಮಗಳ ವಿರುದ್ಧ ಉಚ್ಛ ನ್ಯಾಯಾಲಯವೂ ತನಿಖೆಗೆ ಆದೇಶಿಸಿದೆ. ಆದರೂ ಮಾಲೂರು ವಿಭಾಗದಲ್ಲಿ ನಡೆಯುತ್ತಿರುವ ಭಾರೀ ಪ್ರಮಾಣದ ಭೂ ಹಗರಣಗಳಿಗೆ ಕಡಿವಾಣ ಬಿದ್ದಿಲ್ಲ.






