ಬೆಂಗಳೂರು; ಒತ್ತುವರಿ ಮಾಡಿಕೊಂಡಿರುವ ಜಮೀನಿಗೆ ಪ್ರತಿಯಾಗಿ ತಮ್ಮ ಸ್ವಂತ ಭೂಮಿಯನ್ನು ಸರ್ಕಾರಕ್ಕೆ ಬಿಟ್ಟುಕೊಡಲು ಬಾಗ್ಮನೆ ಟೆಕ್ ಕಂಪನಿಯ ಪ್ರಸ್ತಾವವನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ತಿರಸ್ಕರಿಸಿದೆ.
ಕಂದಾಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ನೇತೃತ್ವದಲ್ಲಿ 2026ರ ಫೆ.20ರಂದು ನಡೆದಿದ್ದ ಸಭೆಯು, ಬಾಗಮನೆ ಡೆವಲಪರ್ಸ್ ಪ್ರೈವೈಟ್ ಲಿಮಿಟೆಡ್‌ನ ಪ್ರಸ್ತಾವವನ್ನು ಪರಿಗಣಿಸದಿರಲು ನಿರ್ಧರಿಸಿದೆ.
ವಿಶೇಷವೆಂದರೇ ಬೆಂಗಳೂರು ನಗರ ಜಿಲ್ಲಾಧಿಕಾರಿಯವರು, ಬದಲಿಯಾಗಿ ಜಮೀನನ್ನು ಮಂಜೂರು ಮಾಡಬಹುದು ಎಂದು ವರದಿ ನೀಡಿದ್ದರು. ಆದರೆ ಈ ವರದಿಯನ್ನು ಕಂದಾಯ ಇಲಾಖೆಯು ಸರ್ಕಾರದ ಮಟ್ಟದಲ್ಲಿ ಒಪ್ಪಿಲ್ಲ. ಅಧಿಕಾರಿಗಳ ಮಟ್ಟದಲ್ಲಿ ಪ್ರಸ್ತಾವವು ತಿರಸ್ಕೃತವಾಗಿದ್ದರೂ ಸಹ ಇದುವರೆಗೂ ಜಾಗವನ್ನು ವಶಕ್ಕೆ ಪಡೆಯಲು ಮಂದಾಗಿಲ್ಲ. ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರಾದರೂ ವಶಕ್ಕೆ ಪಡೆಯುವ ಸಂಬಂಧ ಯಾವುದೇ ಕ್ರಮ ಜರುಗಿಸಿಲ್ಲ.
2026ರ ಫೆ.20ರಂದು ನಡೆದಿದ್ದ ಸಭೆಯ ನಡವಳಿ ಮತ್ತು ಈ ಸಂಬಂಧ ಕಾನೂನು ಇಲಾಖೆಯು ನೀಡಿರುವ ಅಭಿಪ್ರಾಯದ ಪ್ರತಿಗಳೂ ‘ದಿ ಫೈಲ್’ಗೆ ಲಭ್ಯವಾಗಿವೆ.

ಬೆಂಗಳೂರು ಪೂರ್ವ ತಾಲೂಕು ವರ್ತೂರು ಹೋಬಳಿಯ ಬೈರಸಂದ್ರ ಗ್ರಾಮದ ಸರ್ವೆ ನಂಬರ್ 112ರಲ್ಲಿ ಬೈರಸಂದ್ರ ಕೆರೆಗೆ ಸೇರಿರುವ 36 ಗುಂಟೆ ಜಾಗವನ್ನು ಭಾಗಮನೆ ಡೆವಲಪರ್ಸ್ ಪ್ರೈವೈಟ್ ಲಿಮಿಟೆಡ್ ಒತ್ತುವರಿ ಮಾಡಿತ್ತು. ವಿಧಾನಸಭಾಧ್ಯಕ್ಷರಾಗಿದ್ದ ಕೆ ಬಿ ಕೋಳಿವಾಡ ಅಧ್ಯಕ್ಷತೆಯಲ್ಲಿದ್ದ ಸದನ ಸಮಿತಿಯ ಮುಂದೆಯೂ ಒಪ್ಪಿಕೊಂಡಿತ್ತು. ಒತ್ತುವರಿ ಮಾಡಿಕೊಂಡಿರುವ ಜಾಗಕ್ಕೆ ಬದಲಿಯಾಗಿ ತಮ್ಮ ಸ್ವಂತ ಜಾಗವನ್ನು ನೀಡಲಾಗುವುದು ಎಂದು ಸದನ ಸಮಿತಿಗೆ ಭರವಸೆ ನೀಡಿತ್ತು.
ಸಿ.ವಿ.ರಾಮನ್‌ನಗರದ ಬಳಿಯ ಬೈರಸಂದ್ರ ಕೆರೆಗೆ ಸೇರಿದ 36 ಗುಂಟೆ ಜಾಗವನ್ನು ಬಾಗ್ಮನೆ ಕಂಪನಿ ಒತ್ತುವರಿ ಮಾಡಿಕೊಂಡಿತ್ತು. ಈ ಭೂಮಿಯನ್ನು ವಶಕ್ಕೆ ಪಡೆಯಲು ಜಿಲ್ಲಾಡಳಿತ ಹಲವು ಬಾರಿ ಮುಂದಾಗಿದ್ದರೂ, ಕಾನೂನು ವ್ಯಾಪ್ತಿಯಲ್ಲಿ ಸಾಧ್ಯವಾಗಿರಲಿಲ್ಲ. ಈಗಾಗಲೇ 27 ಗುಂಟೆ ಜಾಗವನ್ನು ಬಿಟ್ಟುಕೊಟ್ಟಿದ್ದರೂ, ಉಳಿದ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಇದರಿಂದಾಗಿ ತನ್ನದೇ ಜಮೀನು ಬಿಟ್ಟುಕೊಡಲು ಬಾಗ್ಮನೆ ಕಂಪನಿ ಮುಂದಾಗಿತ್ತು.

ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವವನ್ನು ಸಲ್ಲಿಸಿತ್ತು. ಈ ಪ್ರಸ್ತಾವದ ಕುರಿತು ಕಂದಾಯ ಇಲಾಖೆಯು ಹಲವು ಬಾರಿ ಸಭೆಗಳನ್ನು ನಡೆಸಿತ್ತು. ಆದರೆ ತನ್ನ ನಿರ್ಧಾರವನ್ನು ಪ್ರಕಟಿಸಿರಲಿಲ್ಲ. 2026ರ ಫೆ.20ರಂದು ನಡೆದಿದ್ದ ಸಭೆಯಲ್ಲಿ ಈ ಕುರಿತು ತನ್ನ ತೀರ್ಮಾನವನ್ನು ಪ್ರಕಟಿಸಿದೆ. ಸಭೆಯಲ್ಲಿ ಕೈಗೊಂಡಿರುವ ತೀರ್ಮಾನವನ್ನು ಸಚಿವ ಕೃಷ್ಣಬೈರೇಗೌಡ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ಪ್ರಕರಣದ ವಿವರ
ಬೆಂಗಳೂರು ಪೂರ್ವ ತಾಲೂಕು ಬೈರಸಂದ್ರ ಗ್ರಾಮದ ಸರ್ವೆ ನಂಬರ್ 112ರಲ್ಲಿನ ಜಮೀನು ಮೂಲತಃ ಸರ್ಕಾರಿ ಕೆರೆ ಅಂಗಳದ ಜಮೀನಾಗಿತ್ತು. ಆರ್‍ಟಿಸಿ ಮತ್ತು ಆಕಾರ್ ಬಂದ್‌ನಂಗತೆ ಒಟ್ಟು 12 ಎಕರೆ 21 ಗುಂಟೆ ಜಮೀನಿದೆ. ಈ ಪೈಕಿ 3 ಎಕರೆ 9.04 ಗುಂಟೆ ಒತ್ತುವರಿಯಾಗಿತ್ತು. ಇನ್ನು 9 ಎಕರೆ 11.05 ಗುಂಟೆ ಜಮೀನು ಖಾಲಿ ಇತ್ತು. ಅಲ್ಲದೇ ಈ ಪ್ರದೇಶವು ನೀರಿನಿಂದ ತುಂಬಿಕೊಂಡಿತ್ತು. ಈ ಜಮೀನು ಈಗಾಗಲೇ ಎ ಟಿ ರಾಮಸ್ವಾಮಿ ಅವರ ಆಯೋಗವು ನೀಡಿದ್ದ ಒತ್ತುವರಿ ಪಟ್ಟಿಯಲ್ಲಿಯೂ ದಾಖಲಾಗಿದೆ.

ಈ ಜಮೀನಿನ ಒತ್ತುವರಿ ತೆರವುಗೊಳಿಸಲು ಒತ್ತುವರಿದಾರರಿಗೆ ಹಲವು ನೋಟೀಸ್‌ಗಳನ್ನು ನೀಡಿ ವಿಚಾರಣೆ ನಡೆಸಿತ್ತು. ತಹಶೀಲ್ದಾರ್ ನ್ಯಾಯಾಲಯವು (ಪ್ರಕರಣ ಸಂಖ್ಯೆ; 24/09-10, 361/09-10) 2013ರ ಮೇ 20ರಂದು ಆದೇಶ ಹೊರಡಿಸಿತ್ತು. ಈ ಆದೇಶದ ವಿರುದ್ಧ ಭಾಗಮನೆ ಟೆಕ್ ಪಾರ್ಕ್ ಮತ್ತು ಕಾಗ್ನಿಜೆಂಟ್ ಟೆಕ್ನಾಲಜಿ ಪ್ರೈವೈಟ್ ಲಿಮಿಟೆಡ್ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ (ಸಂಖ್ಯೆ 46391/2013, 58374/2013, 56623/2014, 57213/2014, 56017/2014, 56096/100/2014, 44158/2013, 44758/2013, 34953/2009) ದಾಖಲಿಸಿದ್ದರು. ಈ ಪೈಕಿ ರಿಟ್ ಅರ್ಜಿ 46381/2013ರ ಪ್ರಕರಣದಲ್ಲಿ ಭೂಮಾಪನ ಮತ್ತು ಭೂ ಕಂದಾಯ ವ್ಯವಸ್ಥೆಯ ಆಯುಕ್ತರ ಸಮ್ಮುಖದಲ್ಲಿ ಅಳತೆ ಮಾಡಿ ಒತ್ತುವರಿಯನ್ನು ದೃಢೀಕರಿಸಲು ಹೈಕೋರ್ಟ್ ಸೂಚಿಸಿತ್ತು.

ಬ್ಲಾಕ್ 1, 2, 3 ರಲ್ಲಿ ಒಟ್ಟು 0-36 ಗುಂಟೆ ವಿಸ್ತೀರ್ಣದ ಜಮೀನನ್ನು ಬಾಗಮನೆ ಟೆಕ್ ಪಾರ್ಕ್ ಒತ್ತುವರಿ ಮಾಡಿರುವುದು ದೃಢಪಟ್ಟಿತ್ತು. ನಂತರ 2014ರ ಜೂನ್ 19ರಂದು ನೋಟೀಸ್ ಜಾರಿಗೊಳಿಸಿತ್ತು. ಈ ನೋಟೀಸ್‌ಗೆ ಉತ್ತರಿಸಿದ್ದ ಬಾಗಮನೆ ಟೆಕ್ ಪಾರ್ಕ್, ಮನವಿ ಸಲ್ಲಿಸಿತ್ತು.

‘ಬೈರಸಂದ್ರ ಗ್ರಾಮದಲ್ಲಿ ಖರೀದಿಸಿದ್ದ ಒಟ್ಟು 52 ಎಕರೆ ಪೈಕಿ ಕಡಿಮೆ ವಿಸ್ತೀರ್ಣದಲ್ಲಿ ಅನುಭವದಲ್ಲಿದ್ದೇವೆ. ಆಧದರಿಂದ ಕೆರೆ ಒತ್ತುವರಿ ನಕ್ಷೆ ಕುರಿತು ತಮ್ಮ ಅಹವಾಲು ಸಲ್ಲಿಸಲು ಪರಿಗಣಿಸಬೇಕು,’ ಎಂದು ಮನವಿಯಲ್ಲಿ ಕೋರಿತ್ತು.

ಅಲ್ಲದೇ ಬೈರಸಂದ್ರ ಗ್ರಾಮದ ಸರ್ವೆ ನಂಬರ್ 112ರಲ್ಲಿನ 03-0 ಗುಂಟೆ ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ಸಂಸ್ಥೆಗೆ ಮಂಜೂರು ಮಾಡಿ, ಇದರ ಬದಲಾಗಿ ಇದೇ ಕಂಪನಿಯ ಹಕ್ಕಿನಲ್ಲಿರುವ ಇದೇ ಬೈರಸಂದ್ರ ಗ್ರಾಮದ ಸರ್ವೆ ನಂಬರ್ 41/2ರಲ್ಲಿಲನ ಒಟ್ಟು 0-30 ಗುಂಟೆ ಜಮೀನನ್ನು ಬಿಟ್ಟುಕೊಡಲಾಗುವುದು ಎಂದು ಹೇಳಿತ್ತು. ಆದರೆ ಒತ್ತುವರಿಯಾಗಿರುವ ಜಮೀನನ್ನು ನಿಯಮಗಳ ಪ್ರಕಾರ ಮಂಜೂರು ಮಾಡಲು ಅವಕಾಶವಿಲ್ಲವೆಂದು ಈ ಹಿಂದೆಯೂ ಪ್ರಸ್ತಾವ ತಿರಸ್ಕರಿಸಿತ್ತು.

ಕಾನೂನು ಇಲಾಖೆಯೂ ಸಹ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಅನ್ವಯ ಜಲಮೂಲಗಳಲ್ಲಿ ಅತಿಕ್ರಮಣವಾಗಿ ನಡೆಸಿರುವ ಕಟ್ಟಡ ನಿರ್ಮಾಣಗಳನ್ನು ಕಾನೂನಿನ ಅನ್ವಯ ತೆರವುಗೊಳಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿತ್ತು.

ಆದರೂ ಪ್ರಸ್ತಾವವನ್ನು ಪರಿಗಣಿಸಬೇಕು ಎಂದು ಮತ್ತೊಮ್ಮೆ ಕೋರಿತ್ತು. ಒತ್ತುವರಿ ಮಾಡಿಕೊಂಡಿರುವ ಜಮೀನಿಗೆ ಬದಲಾಗಿ ಸರ್ವೆ ನಂಬರ್ 41/2ರಲ್ಲಿನ 03-0 ಗುಂಟೆ ಜಮೀನನ್ನು ಈಗಾಗಲೇ ಕೆರೆ ಅಭಿವೃದ್ಧಿಗಾಗಿ ನೀಡಿದೆ ಮತ್ತು ಈ ಜಮೀನನ್ನು ಸರ್ಕಾರದ ಸ್ವಾಧೀನಕ್ಕೆ ಪಡೆದುಕೊಳ್ಳಲು ಭೂ ಮಾಪನ ಕಂದಾಯ ವ್ಯವಸ್ಥೆ, ಭೂ ದಾಖಲೆಗಳ ಇಲಾಖೆಗೆ ಸ್ಥಳ ಪರಿಶೀಲನೆ ಮತ್ತು ಜಂಟಿ ಸಮೀಕ್ಷೆ ಕಾರ್ಯ ನಡೆಸಿ ವಾಸ್ತವಾಂಶದ ಸಮಗ್ರ ವರದಿ ಮತ್ತು ಸ್ಪಷ್ಟ ಅಭಿಪ್ರಾಯ ನೀಡಬೇಕು ಎಂದು ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚಿಸಿತ್ತು.
ವರದಿಯಲ್ಲೇನಿದೆ?
ಬೈರಸಂದ್ರ ಗ್ರಾಮದ ಸರ್ವೆ ನಂಬರ್ 112 ಮೂಲತಃ ಕೆರೆ ಜಮೀನಾಗಿದೆ. ಆಕಾರ್ ಬಂದ್ ಹಾಗೂ ಪಹಣಿಯಂತೆ 12 ಎಕರೆ 21 ಗುಂಟೆ ಇದೆ. ಈ ಪೈಕಿ 3 ಎಕರೆ 09.08 ಎಕರೆ ಒತ್ತುವರಿಯಾಗಿದೆ ಎಂದು ಸರ್ವೆ ವರದಿಯಿಂದ ಸ್ಪಷ್ಟವಾಗಿದೆ. ಉಳಿಕೆ 9-11.08 ಎಕರೆ ಖುಲ್ಲಾ ಇದ್ದು ನೀರು ತುಂಬಿಕೊಂಡಿದೆ. ಒತ್ತುವರಿಯಾಗಿರುವ 3-09.08 ಎಕರೆ ಕೆರೆ ಜಮೀನಿನ ಪೈಕಿ 0-30 ಗುಂಟೆ ಜಮೀನನ್ನು ಭಾಗಮನೆ ಟೆಕ್ ಪಾರ್ಕ್ ಉಪಯೋಗಿಸಿಕೊಂಡಿದೆ.

ಸಂಸ್ಥೆಯು ಒತ್ತುವರಿ ಮಾಡಿರುವ ಕೆರೆ ಜಮೀನಿನ ಬದಲಾಗಿ ಇದೇ ಕೆರೆಯ ಅಂಚಿನಲ್ಲಿ ಸಂಸ್ಥೆಯು ಹೊಂಧಿರುವ ಸರ್ವೆ ನಂಬರ್ 41/2ರಲ್ಲಿನ 0-30 ಗುಂಟೆ ತನ್ನ ಮಾಲೀಕತ್ವದ ಜಮೀನನ್ನು ಕೆರೆ ಅಭಿವೃದ್ಧಿಗೆ ಬಿಟ್ಟುಕೊಡಲಾಗಿದೆ. ಹೀಗಾಗಿ ಸರ್ವೆ ನಂಬರ್ 112ರಲ್ಲಿನ ಸಂಸ್ಥೆಯು ಒತ್ತುವರಿ ಮಾಡಿರುವ 0-30 ಗುಂಟೆ ಜಮೀನನ್ನು ಸಂಸ್ಥೆಯ ಹೆಸರಿಗೆ ಮಂಜೂರು ಮಾಡುವ ಕುರಿತು ಸರ್ಕಾರದ ನಿರ್ದೇಶನ ಕೋರಿದ್ದರು.

ಅಲ್ಲದೇ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 28 ಎ (1) (i) ಮತ್ತು 28 ಎ (1) (iv) ಪ್ರಕಾರ ಖಾಸಗಿ ಭೂಮಿಯು ಏನಾದರೂ ಜಲಮಾರ್ಗದ ಭಾಗವಾಗಿದ್ದಲ್ಲಿ ಸರ್ಕಾರಿ ದಾಖಲೆಗಳಲ್ಲಿ ಜಲಮಾರ್ಗವೆಂದು ನಮೂದಾಗಿರುವ ಭೂಮಿಯನ್ನೇ (ಅದಕ್ಕೆ ಸಮನಾದ ವಿಸ್ತೀರ್ಣವನ್ನು) ಬದಲಿಯಾಗಿ ಮಂಜೂರು ಮಾಡಬಹುದು ಎಂದೂ ಜಿಲ್ಲಾಧಿಕಾರಿ ತಮ್ಮ ವರದಿಯಲ್ಲಿ ತಿಳಿಸಿದ್ದರು. ಅಲ್ಲದೇ ನೆರೆಮಣ್ಣಿನ ಭೂಮಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 81ಕ್ಕೆ ಅಗತ್ಯವಿರುವ ತಿದ್ದುಪಡಿಗಳನ್ನು ತರಬೇಕು ಎಂಬ ಪ್ರಸ್ತಾವನೆಯನ್ನೂ ಸಲ್ಲಿಸಿದ್ದರು.

ಜಿಲ್ಲಾಧಿಕಾರಿಗಳು ಸಲ್ಲಿಸಿದ್ದ ವರದಿಯನ್ನು ಪ್ರಾದೇಶಿಕ ಆಯುಕ್ತರು ಪರಿಶೀಲಿಸಿದ್ದರು. ಜಮೀನನ್ನು ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲವೆಂದು 2023ರ ಜೂನ್ 12 ಮತ್ತು 2023ರ ಜುಲೈ 5ರಂದು ಭಾಗಮನೆ ಡೆವಲಪರ್ಸ್‌ಗೆ ಹಿಂಬರಹ ನೀಡಲಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ಜಮೀನಿನ ಪ್ರಕರಣದಲ್ಲಿ ಕಾನೂನು ಅಡೆತಡೆಗಳಿದ್ದರೂ ಸಹ ನೆರೆ ಮಣ್ಣಿನ ಭೂಮಿಗಳಿಗೆ ಸಂಬಂಧಿಸಿದಂತೆ ಇದ್ದ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರಕಲಂ 81ಕ್ಕೆ 2025ರಲ್ಲಿ ತಂದಿದ್ದ ತಿದ್ದಪಡಿಯಂತೆ ಬದಲಿ ಜಮೀನನ್ನು ಮಂಜೂರು ಮಾಡಬೇಕು ಎಂದು ಸರ್ಕಾರಕ್ಕೆ ಪುನಃ ಪ್ರಸ್ತಾವ ಸಲ್ಲಿಕೆಯಾಗಿತ್ತು.
ಈ ಪ್ರಸ್ತಾವದ ಕುರಿತು ಕಾನೂನು ಇಲಾಖೆಯಿಂದಲೂ ಅಭಿಪ್ರಾಯ ಪಡೆದಿತ್ತು.

ಸರ್ವೋಚ್ಛ ನ್ಯಾಯಾಲಯವು ಹಿಂಚ್ ಲಾಲ್ ತಿವಾರಿ/ಕಮಲಾ ದೇವಿ ಮತ್ತಿತರರು (3215) ಪ್ರಕರಣ, ಸೂಪರ್ ಟೆಕ್ ಲಿಮಿಟೆಡ್ /ಎಮೆರಾಲ್ಡ್ ಕೋರ್ಟ್ ಓನರ್ ರೆಸಿಡೆಂಟ್ ಅಸೋಸಿಯೇಷನ್ (ಸಿವಿಲ್ಅಪೀಲ್ 5041/2021), ಫ್ರೆಂಡ್ಸ್ ಕಾಲೋನಿ ಡೆವಲೆಪ್‌ಮೆಂಟ್ ಕಮಿಟಿ/ಒರಿಸಾ ರಾಜ್ಯ ಸರ್ಕಾರ, ಈಶ ಏಕ್ತಾ ಅಪಾರ್ಟ್‌ಮೆಂಟ್ಸ್ ಹೌಸಿಂಗ್ ಸೊಸೈಟಿ/ಮುಂಬೈ ಮುನ್ಸಿಪಲ್ ಕಾರ್ಪೋರೇಷನ್, ಕೇರಳ ಕೋಸ್ಟಲ್ ಝೋನ್ ಮ್ಯಾನೇಜ್‌ಮೆಂಟ್ ಅಥಾರಿಟಿ/ಕೇರಳ ಸರ್ಕಾರದ ಪ್ರಕರಣದಲ್ಲಿ ನೀಡಿದ್ದ ತೀರ್ಪುಗಳನ್ನು ಅವಲೋಕಿಸಿ ತನ್ನ ಅಭಿಪ್ರಾಯ ನೀಡಿದೆ.
ಕಾನೂನು ಅಭಿಪ್ರಾಯದಲ್ಲೇನಿದೆ?
ಸುಪ್ರೀಂ ಕೋರ್ಟ್ ನೀಡಿರುವ ಈ ಎಲ್ಲಾ ತೀರ್ಪುಗಳನ್ನು ಅವಲೋಕಿಸಿರುವ ಕಾನೂನು ಇಲಾಖೆಯು ಜಲಮೂಲಗಳಲ್ಲಿ ಅತಿಕ್ರಮಣವಾಗಿ ನಡೆಸಿರುವ ಕಟ್ಟಡ ನಿರ್ಮಾಣಗಳನ್ನು ಕಾನೂನಿನ ಅನ್ವಯ ತೆರವುಗೊಳಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ. ಅಲ್ಲದೇ ಅಲಹಾಬಾದ್ ಉಚ್ಛ ನ್ಯಾಯಾಲಯವೂ ಸಹ ವಿಜಯಕುಮಾರ್/ಉತ್ತರ ಪ್ರದೇಶ (ಎಂಐಎಸ್‌ಸಿ ಸಿಂಗಲ್ ನಂ 16032/2017) ಪ್ರಕರಣದಲ್ಲಿ ಜಲಮೂಲಗಳಿಗೆ ಹೊಂದಿಕೊಂಡಿರುವ ಜಮೀನನ್ನು ನೀಡಲು ಪ್ರಸ್ತಾಪಿಸಿದರೂ ಕೂಡಾ ಅದು ಕಾನೂನು ಸಮ್ಮತವಲ್ಲ ಎಂದು ಆದೇಶಿಸಿದೆ.

ಅದರಂತೆ ಯಾವುದೇ ಕಾಯ್ದೆ, ನಿಯಮಗಳಲ್ಲಿ ಜಲಮೂಲದ ಜಮೀನನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಪರ್ಯಾಯವಾಗಿ ಅದೇ ಕೆರೆಗೆ ಹೊಂದಿಕೊಂಡಿರುವ ಜಮೀನನ್ನು ಬದಲಿಯಾಗಿ ಕೊಡಲು ಅವಕಾಶವಿಲ್ಲ.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿನ ಕೆರೆ ಒತ್ತುವರಿ ಸಂಬಂಧ ರಚಿಸಿದ್ದ ಸದನ ಸಮಿತಿಯ ವರದಿ ಬಗ್ಗೆ ನಿರ್ಣಯ ಕೈಗೊಳ್ಳುವುದು ಆಡಳಿತಾತ್ಮಕ ವಿಷಯವಾಗಿದೆ. ಈ ಬಗ್ಗೆ ಆಡಳಿತ ಇಲಾಖೆಯೇ ಸೂಕ್ತ ಆಡಳಿತಾತ್ಮಕ ನಿರ್ಣಯ ಕೈಗೊಳ್ಳಬೇಕು ಎಂದು ಕಾನೂನು ಇಲಾಖೆಯು ತನ್ನ ಅಭಿಪ್ರಾಯದಲ್ಲಿ ತಿಳಿಸಿತ್ತು.

ಈ ಪ್ರಕರಣದ ಕುರಿತು ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ ಮತ್ತು ಕಾನೂನು ಇಲಾಖೆಯು ನೀಡಿದ್ದ ಅಭಿಪ್ರಾಯದ ಕುರಿತು ತೀರ್ಮಾನ ಕೈಗೊಳ್ಳಲು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯ ಅವರ ನೇತೃತ್ವದಲ್ಲಿ 2026ರ ಫೆ.20ರಂದು ಸಭೆ ಸೇರಿತ್ತು.
ಸಭೆ ನಿರ್ಣಯವೇನು?
ನಗರ ವ್ಯಾಪ್ತಿಯಲ್ಲಿ ಬರುವ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ ಸಂರಕ್ಷಿಸುವ ಕುರಿತು ಸರ್ವೋಚ್ಛ ನ್ಯಾಯಾಲಯವು ಜಗಪಾಲ್ ಸಿಂಗ್ ಮತ್ತಿತರರು/ ಪಂಜಾಬ್ ರಾಜ್ಯ ಸರ್ಕಾರ (2011), ಜೋಗಿಂದರ್ ಸಿಂಗ್ ಮತ್ತು ಮತ್ತಿತರರು/ ಹರಿಯಾಣ ರಾಜ್ಯ ಸರ್ಕಾರ, ವಿಶೇಷ ಮೇಲ್ಮನವಿ (1829/2021) ಪ್ರಕರಣಗಳ ಅನ್ವಯ ಪೊರಂಬೋಕು, ಗೋಮಾಳ ಖರಾಬು ಜಮೀನುಗಳಂತಹ ಜಮೀನುಗಳನ್ನು ಸಾರ್ವಜನಿಕ ಉಪಯೋಗಕ್ಕಾಗಿ ಸಂರಕ್ಷಿಸಬೇಕು.
ಹಾಗೆಯೇ ಸರ್ವೋಚ್ಛ ನ್ಯಾಯಾಲಯವು ಹಿಂಚ್ ಲಾಲ್ ತಿವಾರಿ ವಿರುದ್ಧ ಕಮಲಾದೇವಿ (ಸಿವಿಲ್ ಅಪೀಲ್ ಸಂಖ್ಯೆ 4787/2001)ರಲ್ಲಿ ಕೆರೆ ಕಂಟೆ, ಕಟ್ಟೆ ಅಥವಾ ಯಾವುದೇ ಇತರ ಹೆಸರಿನಿಂದ ಕರೆಯುವ ಜಲಮೂಲಗಳ ಒತ್ತುವರಿಯನ್ನು ತೆರವುಗೊಳಿಸುವುದು ಹಾಗೂ ಅವುಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡಿದ್ದರೂ ಅವುಗಳನ್ನು ಸಂರಕ್ಷಿಸಿ ಯಥಾಸ್ಥಿತಿ ಕಾಪಾಡಬೇಕು ಎಂದು ಎಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಭಾಗಮನೆ ಡೆವಲಪರ್ಸ್ ಪ್ರಸ್ತಾವನೆಯನ್ನು ಪರಿಗಣಿಸಲು ಸಾಧ್ಯವಿರುವುದಿಲ್ಲ ಎಂಬ ತೀರ್ಮಾನ ಪ್ರಕಟಿಸಿದೆ.

ಜಲಮೂಲಗಳಿಗೆ ಹೊಂದಿಕೊಂಡಿರುವ ಜಮೀನುಗಳನ್ನು ನೀಡಲು ಪ್ರಸ್ತಾಪಿಸಿದರೂ ಸಹ ಅದು ಕಾನೂನು ಸಮ್ಮತವಲ್ಲ ಎಂದು ಉತ್ತರ ಪ್ರದೇಶ ಪ್ರಕರಣದಲ್ಲಿ ಅಲಹಾಬಾದ್ ಉಚ್ಛ ನ್ಯಾಯಾಲಯವು ಹೇಳಿದೆ. ಹೀಗಾಗಿ ಯಾವುದೇ ಕಾಯ್ದೆ, ನಿಯಮಗಳಲ್ಲಿ ಜಲಮೂಲದ ಜಮೀನನ್ನು ಒತ್ತುವರಿ ಮಾಡಿಕೊಂಡಿರುವುದಕ್ಕೆ ಪರ್ಯಾಯವಾಗಿ ಅದೇ ಕೆರೆಗೆ ಹೊಂದಿಕೊಂಡಿರುವ ಜಮೀನನ್ನು ಬದಲಿಯಾಗಿ ಕೊಡಲು ಅವಕಾಶವಿಲ್ಲ ಎಂದು ಹೇಳಿದೆ. ಹೀಗಾಗಿ ಭಾಗಮನೆ ಡೆವಲಪರ್ಸ್ ಪ್ರಸ್ತಾವನೆಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಸಭೆಯು ನಿರ್ಣಯ ಕೈಗೊಂಡಿದೆ.
ಮಹಾನಗರದಲ್ಲಿ ಸರಕಾರಿ ಭೂಮಿಯನ್ನು ಸಾವಿರಾರು ಮಂದಿ ಒತ್ತುವರಿ ಮಾಡಿಕೊಂಡಿದ್ದು, ಈ ಪೈಕಿ ಗಣ್ಯರು ಹಾಗೂ ಪ್ರಸಿದ್ಧ ಕಂಪನಿಗಳು ಸೇರಿವೆ. ಇಂತಹ ಪ್ರಕರಣಗಳಲ್ಲಿ ಜಿಲ್ಲಾಡಳಿತ ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದು, ಒತ್ತುವರಿ ದೃಢಪಟ್ಟ ಬಳಿಕ ಹಲವು ನೂರು ಎಕರೆಯನ್ನು ವಶಕ್ಕೆ ಪಡೆದಿದೆ. ಆದರೆ, ಒತ್ತುವರಿ ಮಾಡಿಕೊಂಡಿದ್ದಕ್ಕೆ ಪ್ರತಿಯಾಗಿ ತನ್ನದೇ ಸ್ವಂತ ಜಮೀನನ್ನು ಸರಕಾರಕ್ಕೆ ಬಿಟ್ಟುಕೊಡಲಿರುವ ಪ್ರಕರಣ ಇದೇ ಮೊದಲಾಗಿತ್ತು.








