ಬೆಂಗಳೂರು; ರಾಜ್ಯದಲ್ಲಿ ಪ್ರಭಾವಿ ಚುನಾಯಿತ ಪ್ರತಿನಿಧಿಗಳು ತವರು ಜಿಲ್ಲೆಯಲ್ಲಿಯೇ ಪದೇಪದೇ ಪ್ರವಾಹಗಳು ಸಂಭವಿಸುತ್ತಿದ್ದರೂ ಸಹ ರಾಜ್ಯ ಸರ್ಕಾರವು ಈವರೆಗೂ ಪ್ರವಾಹ ಪ್ರದೇಶ ವಲಯ ನಿಯಮಗಳನ್ನು ರೂಪಿಸಿ ಜಾರಿಗೆ ತಂದಿಲ್ಲ. ಅದೇ ರೀತಿ ಜಲಮಾರ್ಗಗಳ ಉದ್ದಕ್ಕೂ ಅತಿಕ್ರಮಣ ಜನವಸತಿ, ಯೋಜಿತವಲ್ಲದ ಬೆಳವಣಿಗೆ ಇತ್ಯಾದಿಗಳನ್ನು ರಾಜ್ಯದಲ್ಲಿ ನಿಯಂತ್ರಿಸಿಲ್ಲ.
ಸಚಿವ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ್, ರಮೇಶ್ ಜಾರಕಿಹೊಳಿಯಂತಹ ಪ್ರಭಾವಿಗಳ ತವರು ಜಿಲ್ಲೆಯಾಗಿರುವ ಬೆಳಗಾವಿಯಲ್ಲಿಯೂ ಪ್ರವಾಹ ಪಿಡುಗಿನ ಪರಿಣಾಮವನ್ನು ಶಮನಗೊಳಿಸಲು ಶಾಶ್ವತ ರಚನಾತ್ಮಕ ಕ್ರಮಗಳನ್ನು ಕೈಗೊಂಡಿಲ್ಲ. ಈ ಬಗ್ಗೆ ಸಿಎಜಿ ವರದಿಯಲ್ಲಿಯೂ ಗಮನ ಸೆಳೆದಿದ್ದರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಅಧಿಕಾರಿಗಳೊಂದಿಗೆ ಇದುವರೆಗೂ ಚರ್ಚೆ ನಡೆಸಿಲ್ಲ ಎಂದು ತಿಳಿದು ಬಂದಿದೆ.
ಪ್ರವಾಹಗಳ ನಿಯಂತ್ರಣ ಸೇರಿದಂತೆ ಮತ್ತಿತರೆ ಕ್ರಮಗಳನ್ನು ಕೈಗೊಳ್ಳುವಲ್ಲಿ ದಕ್ಷಿಣ ಕನ್ನಡ, ದಾವಣಗೆರೆ ಮತ್ತು ಕೊಡಗು ಜಿಲ್ಲಾಧಿಕಾರಿಗಳು ರಚನಾತ್ಮಕ ಕ್ರಮಗಳನ್ನು ಕೈಗೊಂಡಿಲ್ಲ. ಅಪಾಯಗಳ ದುಷ್ಪರಿಣಾಮಗಳನ್ನು ತಪ್ಪಿಸಲು, ಶಮನಗೊಳಿಸಲು ವಿಪತ್ತು ಅಪಾಯಗಳನ್ನು ಕಡಿಮೆಗೊಳಿಸುವುದರತ್ತ ಅಧಿಕಾರಿಗಳು ಸಾಕಷ್ಟು ಒಲವು ಹೊಂದಿಲ್ಲ.
2025ರ ಡಿಸೆಂಬರ್‍ನಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆಯಾಗಿರುವ ವರದಿಯು ಕರ್ನಾಟಕದಲ್ಲಿ ವಿಪತ್ತು ನಿರ್ವಹಣೆಯ ಕಾರ್ಯನಿರ್ವಹಣೆಯಲ್ಲಿ ಕರ್ನಾಟಕವು ಹೇಗೆ ನಿರ್ಲಕ್ಷ್ಯಿಸಿದೆ ಎಂದು ವಿವರಿಸಿದೆ.
ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ಪ್ರವಾಹದ ಅಪಾಯದ ಮೌಲ್ಯಮಾಪನವು, ವಿಪತ್ತಿನ ನಿರ್ವಹಣೆಯಲ್ಲಿ ಮೂಲಭೂತ ಅವಶ್ಯಕತೆಯಾಗಿದೆ. ಮಳೆ ಮತ್ತು ಹವಾಮಾನ, ಜಲಾನಯನ ಪ್ರದೇಶದ ಗಾತ್ರ, ಭೂ ಇಳಿಜಾರು ಮತ್ತು ಆಕಾರ ಅನುಪಾತ, ಹೊಳೆ ಜಾಲಗಳ ಇಳಿಜಾರು, ಒಳಚರಂಡಿ ಸಾಂದ್ರತೆ, ಭೂ ಬಳಕೆ, ಭೂ ವ್ಯಾಪ್ತಿ, ಮಣ್ಣಿನ ಪ್ರಕಾರ, ಮೂಲ ಸೌಕರ್ಯ ಮತ್ತಿತರೆ ಅಂಶಗಳನ್ನು ಗಮನಿಸಬೇಕಿತ್ತು. ಹಾಗೆಯೇ ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರವಾಹ ವಲಯ ನಕ್ಷೆಗಳನ್ನು ರಚಿಸಬೇಕಿತ್ತು. ಆದರೆ ರಾಜ್ಯ ಸರ್ಕಾರವು ಇಂತಹ ಮಹತ್ವದ ಅಂಶಗಳನ್ನು ನಿರ್ಲಕ್ಷ್ಯಿಸಿದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

ರಾಜ್ಯವು ಪ್ರತಿಯೊಂದು ನದಿ ಜಲಾನಯನ ಪ್ರದೇಶಗಳಿಗೆ ಪ್ರವಾಹ ಅಪಾಯದ ವಲಯ ನಕ್ಷೆಗಳನ್ನು ಸಿದ್ಧಪಡಿಸಿದೆ. ಮತ್ತು ಪ್ರವಾಹಕ್ಕೆ ಗುರಿಯಾಗುವ ಗ್ರಾಮಗಳನ್ನೂ ಗುರುತಿಸಿದೆ. ಆದರೂ ನದಿ ಹರಿಯುವ ಮಾರ್ಗಗಳ ವ್ಯಾಪ್ತಿಗೆ ಒಳಪಡದ ಆದರೆ ಭಾರೀಮಳೆಯಿಂದ ನೀರು ಪ್ರವಾಹದಿಂದ ಬಾಧಿತವಾದ ಬಯಲು ಪ್ರದೇಶಗಳಿಗೆ ಅಂತಹ ದುರ್ಬಲತೆಯ ನಕ್ಷೆ ಮಾಡಿಲ್ಲ ಎಂದು ಸಿಎಜಿ ವರದಿಯು ಹೇಳಿದೆ.
ಪ್ರವಾಹ ಪ್ರದೇಶ ವಲಯವು ಅಸುರಕ್ಷಿತ ಮತ್ತು ಸಂರಕ್ಷಿತ ಪ್ರದೇಶಗಳ ಅಭಿವೃದ್ಧಿಗೆ ಮಿತಿಗಳನ್ನು ಹಾಕುವ ಅಗತ್ಯವಿದೆ. ಜಲಮಾರ್ಗಗಳು ಮತ್ತು ನೈಸರ್ಗಿಕ ಒಳಚರಂಡಿ ಮಾರ್ಗಗಳಲ್ಲಿ ಅತಿಕ್ರಮಗಳನ್ನು ತೆರವುಗೊಳಿಸುವುದು, ಯೋಜಿತವಲ್ಲದ ಬೆಳವಣಿಗೆಯನ್ನು ನಿರ್ಬಂಧಿಸುವುದು, ಪ್ರವಾಯ ಪ್ರದೇಶ ವಲಯ ನಿಯಮಗಳನ್ನು ಜಾರಿಗೆ ತರಲು ಕಟ್ಟಡ ಬೈಲಾಗಳಿಗೆ ಸೂಕ್ತ ಕಾನೂನುಗಳನ್ನು ಜಾರಿಗೆ ತರುವ ಸಂಬಂಧ ಕ್ರಿಯಾ ಯೋಜನೆಯನ್ನು ಯೋಜಿಸಿದೆ.
‘ಆದರೂ ಸಹ ರಾಜ್ಯವು ಇನ್ನೂ ಪ್ರವಾಹ ಪ್ರದೇಶ ವಲಯ ನಿಯಮಗಳನ್ನು ರೂಪಿಸಿ ಜಾರಿಗೆ ತಂದಿಲ್ಲ. ಮತ್ತು ಜನರು ಪದೇಪದೇ ಪ್ರವಾಹದಿಂದ ಬಾಧಿತರಾಗಿದ್ದರೂ ಮತ್ತು ಪರಿಹಾರವನ್ನು ಪಾವತಿಸುತ್ತಿದ್ದರೂ ಜಲಮಾರ್ಗಗಳ ಉದ್ದಕ್ಕೂ ಅತಿಕ್ರಮಣ ಜನವಸತಿ, ಯೋಜಿತವಲ್ಲದ ಬೆಳವಣಿಗೆ ಇತ್ಯಾದಿಗಳನ್ನು ರಾಜ್ಯದಲ್ಲಿ ನಿಯಂತ್ರಿಸಲಾಗಿಲ್ಲ,’ ಎಂದು ಸಿಎಜಿಯು ಅವಲೋಕಿಸಿರುವುದು ವರದಿಯಿಂದ ಗೊತ್ತಾಗಿದೆ.

ಪ್ರವಾಹ ನಿರ್ವಹಣೆಯು ರಾಜ್ಯದ ವಿಷಯವಾಗಿದೆ. ಮತ್ತು ಪ್ರವಾಹ ನಿರ್ವಹಣೆಯಂತಹ ಪ್ರಾಥಮಿಕ ಜವಾಬ್ದಾರಿಯೂ ಸಹ ರಾಜ್ಯದ ಮೇಲಿದೆ. ರಾಜ್ಯವು ಎಲ್ಲಾ ಪ್ರವಾಹ ನಿರ್ವಹಣಾ ಕಾರ್ಯಗಳನ್ನು ತನಿಖೆ ಮಾಡಬೇಕು, ಯೋಜಿಸಬೇಕು, ನಿರ್ಮಿಸಬೇಕು, ನಿರ್ವಹಿಸಬೇಕು ಮತ್ತು ಕಾರ್ಯಗತಗೊಳಿಸಬೇಕು. ಈ ಸಂಬಂಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗಸೂಚಿಗಳನ್ನೂ ಹೊರಡಿಸಿದೆ. ಆದರೆ ರಾಜ್ಯ ಸರ್ಕಾರದ ಅಧಿಕಾರಿಗಳು ಈ ಯಾವ ನಿಬಂಧನೆಗಳನ್ನೂ ಅನುಸರಿಸಿಲ್ಲ. ಇದು ರಾಜ್ಯದಲ್ಲಿ ಪ್ರವಾಹದ ಅಪಾಯದ ವಿರುದ್ಧ ದೋಷಪೂರಿತ ನಿರ್ವಹಣೆಗೆ ಕಾರಣವಾಗಿದೆ ಎಂದು ಸಿಎಜಿ ವರದಿಯಲ್ಲಿ ವಿಶ್ಲೇಷಿಸಿರುವುದು ತಿಳಿದು ಬಂದಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ನದಿಗಳು, ಕಾಲುವೆಗಳು ಮತ್ತು ಚರಂಡಿಗಳ ಉದ್ದಕ್ಕೂ ಇರುವ ತಗ್ಗು ಪ್ರದೇಶಗಳಲ್ಲಿನ ಜನವಸತಿಗಳನ್ನು ರಾಜ್ಯ ಸರ್ಕಾರ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಡಿಡಿಎಂಎಗಳು ನಿಯಂತ್ರಿಸಬೇಕಿತ್ತು. ಆದರೆ ರಾಜ್ಯದ ಬೆಳಗಾವಿ, ದಕ್ಷಿಣ ಕನ್ನಡ, ದಾವಣಗೆರೆ, ಶಿವಮೊಗ್ಗ ಇತ್ಯಾದಿ ಜಿಲ್ಲೆಗಳಲ್ಲಿ ಯಾವುದೇ ಅಧಿಕಾರಿಗಳು ಜನವಸತಿಯನ್ನು ನಿಯಂತ್ರಿಸಲಿಲ್ಲ. ಅಧಿಕಾರಿಗಳು, ನದಿ, ಕಾಲುವೆ ದಡದಲ್ಲಿ ವಾಸಿಸುವ (ಪಟ್ಟಣಗಳ ಮೂಲಕ ಹಾದು ಹೋಗುವ) ಜನರಿಗೆ ಸ್ಥಳಾವಕಾಶ ಕಲ್ಪಿಸಲು ಕಾಳಜಿ ಕೇಂದ್ರಗಳನ್ನು ನಡೆಸುತ್ತಿದ್ದರು. ನೀರಿನ ಮಟ್ಟ ಕಡಿಮೆಯಾಗುವವರೆಗೂ ಕೇಂದ್ರಗಳನ್ನು ನಿರ್ವಹಿಸುತ್ತಿದ್ದರು ಎಂದು ವರದಿಯಲ್ಲಿ ವಿವರಿಸಲಾಗಿದೆ.
ಹಾಗೆಯೇ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಕುಟುಂಬಗಳನ್ನು ಸ್ಥಳಾಂತರಿಸಿರಲಿಲ್ಲ. ಬೆಳಗಾವಿ ಜಿಲ್ಲೆಯ ಗ್ರಾಮಗಳು ದೂದ್ ಗಂಗಾ, ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಸಿ ಮತ್ತುಮಾರ್ಕಂಡೇಯ ಮುಂತಾದ ವಿವಿಧ ನದಿಗಳ ದಡದಲ್ಲಿ ನೆಲೆಗೊಂಡಿದೆ. ಇಷ್ಟೂ ಗ್ರಾಮಗಳು ನದಿ ಪ್ರವಾಹಕ್ಕೆ ಪೀಡಿತವಾಗುವ ಸಂಭವವಿತ್ತು. ಮೇಲ್ದಂಡೆಯ ಅಣೆಕಟ್ಟುಗಳಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿದ್ದರಿಂದ 209 ಗ್ರಾಮಗಳಲ್ಲಿನ 2,08,243 ಕುಟುಂಬಗಳು ಪುನರಾವರ್ತಿತ ಪ್ರವಾಹಕ್ಕೆ ಒಳಗಾಗಿದ್ದವು. ಅಲ್ಲದೇ 10,03,262 ಜನಸಂಖ್ಯೆ ಮತ್ತು 5,31,799 ಜಾನುವಾರುಗಳು ಅಪಾಯದಲ್ಲಿದ್ದವು.

ಪ್ರವಾಹ ಕಡಿಮೆಯಾಗುವವರೆಗೆ ಅಧಿಕಾರಿಗಳು ಸಂತ್ರಸ್ತರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸುತ್ತಿದ್ದರು. ಮತ್ತು ತಾತ್ಕಾಲಿಕ ರಕ್ಷಣೆ ಪರಿಹಾರ ಕ್ರಮ ಕೈಗೊಳ್ಳುತ್ತಿದ್ದರೇ ವಿನಃ ಇಂತಹ ಪ್ರದೇಶಗಳಲ್ಲಿ ಜನವಸತಿಗಳನ್ನು ನಿಯಂತ್ರಣಕ್ಕೆ ತರಲೇ ಇಲ್ಲ.
ಅಥಣಿ ತಾಲೂಕಿನಲ್ಲಿ 24 ಗ್ರಾಮಗಳಲ್ಲಿರುವ 21,858 ಕುಟುಂಬಗಳು ಪುನರಾವರ್ತಿತ ಪ್ರವಾಹದಿಂದ ತತ್ತರಿಸಿದ್ದವು. ಈ ಗ್ರಾಮಗಳಲ್ಲಿ 1,11,888 ಜನಸಂಖ್ಯೆ ಮತ್ತು 67,283 ಜಾನುವಾರುಗಳು ಅಪಾಯದಲ್ಲಿದ್ದವು. ಅದೇ ರೀತಿ ಕಾಗೌಅಡದಲ್ಲಿ 13 ಗ್ರಾಮಗಳಲ್ಲಿನ 24,019 ಕುಟುಂಬಗಳು, 43,597 ಜನರು, 51,730 ಜಾನುವಾರುಗಳು ತೊಂದರೆಗಳಾಗಿದ್ದವು. ಚಿಕ್ಕೋಡಿಯಲ್ಲಿ 11 ಗ್ರಾಮಗಳಲ್ಲಿನ 34,910 ಕುಟುಂಬಗಳು, 1,15,461 ಜನರು, 42,939 ಜಾನುವಾರುಗಳು ಅಪಾಯದಲ್ಲಿದ್ದವು. ನಿಪ್ಪಾಣಿಯಲ್ಲಿನ 23 ಗ್ರಾಮಗಳ 26,890 ಕುಟುಂಬಗಳು, 1,25,219 ಜನರು, 1,10.320 ಜಾನುವಾರುಗಳು ತೊಂದರೆಗೀಡಾಗುತ್ತಲೇ ಇವೆ.
ರಾಯ್‌ಭಾಗ್‌ನ 15 ಗ್ರಾಮಗಳ 15,050 ಕುಟುಂಬಗಳು, 1,28,296 ಜನರು, 65,213 ಜಾನುವಾರು, ಖಾನಾಪುರದ 05 ಗ್ರಾಮಗಳ 808 ಕುಟುಂಬಗಳ 3,028 ಜನರು, 541 ಜಾನುವಾರುಗಳು, ಹುಕ್ಕೇರಿಯ 26 ಗ್ರಾಮಗಳ 1,758 ಕುಟುಂಬಗಳು, 8,020 ಜನರು, 2 744 ಜಾನುವಾರು, ಬೆಳಗಾವಿಯ 6 ಗ್ರಾಮಗಳ 2,768 ಕುಟುಂಬಗಳು, 41,187 ಜನರು, 2,779 ಜಾನುವಾರುಗಳು, ಗೋಕಾಕ್‌ನ 29 ಗ್ರಾಮಗಳ 31,393 ಕುಟುಂಬಗಳು, 1,62,714 ಜನರು, 34,875 ಜಾನುವಾರು, ಮೂಡಲಗಿಯ 14 ಗ್ರಾಮಗಳ 12,692 ಕುಟುಂಬಗಳು, 71,395 ಜನರು, 68,719 ಜಾನುವಾರುಗಳು, ರಾಮದುರ್ಗದ 32 ಗ್ರಾಮಗಳ 24,107 ಗ್ರಾಮಗಳ 1,09,228 ಕುಟುಂಬಗಳು, 63,565 ಜಾನುವಾರುಗಳು, ಸವದತ್ತಿಯ 11 ಗ್ರಾಮಗಳ 11,990 ಕುಟುಂಬಗಳು, 83,229 ಜನರು, 21,091 ಜಾನುವಾರುಗಳು ಅಪಾಯದಲ್ಲಿವೆ ಎಂದು ಸಿಎಜಿ ವರದಿಯು ಎಚ್ಚರಿಸಿದೆ.
’10 ಲಕ್ಷಕ್ಕೂ ಹೆಚ್ಚು ಜನರು ಮತ್ತು 5.32 ಲಕ್ಷ ಜಾನುವಾರುಗಳು ಅಪಾಯದಲ್ಲಿದ್ದರೂ ಪುನರಾವರ್ತಿತ ಪೀಡಿತ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತವು ಅಗತ್ಯ ಕ್ರಮಗಳನ್ನೇ ಕೈಗೊಂಡಿಲ್ಲ. ಇದರ ಪರಿಣಾಮವಾಗಿ ನಿಯಮಿತವಾಗಿ ಪ್ರವಾಹವು ದಾರಿಯಲ್ಲಿರುವ ಹಳ್ಳಿಗಳ ಮೇಲೆ ಪರಿಣಾಮ ಬೀರಿತು,’ ಎಂದು ಸಿಎಜಿ ವರದಿಯು ವಿಶ್ಲೇಷಿಸಿರುವದು ತಿಳಿದು ಬಂದಿದೆ.

ಅಲ್ಲದೇ ಪ್ರವಾಹದ ಅಪಾಯಗಳನ್ನು ತಡೆಗಟ್ಟುವುದನ್ನು ನಿಯಂತ್ರಣ ಮತ್ತು ಖಚಿತಪಡಿಸಿಕೊಳ್ಳಲು ಒಡ್ಡುಗಳು, ಪ್ರವಾಹ ಗೋಡೆಗಳು, ತಡೆಗೋಡೆಗಳ ನಿರ್ಮಾಣದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅಥವಾ ಪೂರ್ಣಗೊಳಿಸಲು ನಿರ್ದಿಷ್ಟ ಸಮಯದ ಚೌಕಟ್ಟನ್ನು ನಿಗದಿಪಡಿಸಿರಲಿಲ್ಲ. ಹೀಗಾಗಿಯೇ ಅದೇ ಪ್ರದೇಶಗಳು ಪದೇ ಪದೇ ಪ್ರವಾಹಕ್ಕೆ ಸಿಲುಕುತ್ತಿವೆ ಮತ್ತು ಗಮನಾರ್ಹವಾದ ಹಾನಿಗೂ ಕಾರಣವಾಗುತ್ತಿದೆ ಎಂದು ಸಿಎಜಿಯು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಮತ್ತೊಂದು ಸಂಗತಿ ಎಂದರೇ ರಾಜ್ಯವು ಪದೇಪದೇ ಪ್ರವಾಹದಿಂದ ಮಾನವ ಜೀವ ಮತ್ತು ಮೂಲಸೌಕರ್ಯಗಳಿಗೆ ಹಾನಿಯುಂಟು ಮಾಡುತ್ತಿದ್ದರೂ ಸಹ ಸಹ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಪ್ರವಾಹ ನಿಯಂತ್ರಣ ಮಂಡಳಿಯನ್ನಾಗಲೀ, ತಾಂತ್ರಿಕ ಸಲಹಾ ಸಮಿತಿಯನ್ನಾಗಲಿ ಸ್ಥಾಪಿಸಿರಲಿಲ್ಲ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಎಲ್ಲಾ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಸರ್ಕಾರವು 2024ರ ಆಗಸ್ಟ್‌ನಲ್ಲಿ ಸಿಎಜಿಗೆ ಉತ್ತರಿಸಿದೆ.
ಇದು ಪಾಲದಾರ ಇಲಾಖೆಗಳ ನಡುವೆ ಪರಿಣಾಮಕಾರಿ ಸಹಕಾರ ಕೊರತೆಯನ್ನು ಸೂಚಿಸುತ್ತದೆ ಎಂದು ಅಭಿಪ್ರಾಯಿಸಿರುವ ಸಿಎಜಿಯು, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ನೋಡಲ್ ಇಲಾಖೆಗಳು ವಿಪತ್ತು ನಿರ್ವಹಣಾ ಚಟುವಟಿಕೆಗಳ ಬಗ್ಗೆ ನಿಯಂತ್ರಣ ಮತ್ತು ಮೇಲ್ವಿಚಾರಣೆಯಲ್ಲಿ ಸಡಿಲವಾಗಿತ್ತು ಎಂಬುದನ್ನೂ ತೋರಿಸುತ್ತದೆ ಎಂದು ವಿಶ್ಲೇಷಿಸಿದೆ.
ಸಿಎಜಿಯು ಈ ಸಂಬಂಧ ಶಿವಮೊಗ್ಗ ಜಿಲ್ಲೆಯಲ್ಲಿನ ಪ್ರಕರಣವನ್ನು ನಿದರ್ಶನದ ರೂಪದಲ್ಲಿ ವರದಿಯಲ್ಲಿ ವಿವರಿಸಿದೆ.

ಗಾಜನೂರು ಮೇಲಿನ ತುಂಗಾ ಅಣೆಕಟ್ಟು ಮತ್ತು ಇದರ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿಎಜಿ ತಂಡವು 2023ರ ಜನವರಿ 18ರಂದು ಜಂಟಿ ಭೌತಿಕ ತಪಾಸಣೆ ನಡೆಸಿತ್ತು. ಈ ಕಾಲೋನಿಗಳ ಜಲಾವೃತಕ್ಕೆ ಅಣೆಕಟ್ಟಿನಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡುತ್ತಿರುವುದು ಕಾರಣವಲ್ಲ, ಬದಲಿಗೆ ಅಣೆಕಟ್ಟಿನ ಎಡದಂಡೆ ಕಾಲುವೆಗೆ ಬಿಡುಗಡೆಯಾಗುತ್ತಿರುವ ಒಳಚರಂಡಿ ನೀರಿನ ಹಿಮ್ಮುಖ ಒಳಹರಿವಿನಿಂದಾಗಿ ಸಂಭವಿಸಿದೆ ಎಂದು ಲೆಕ್ಕ ಪರಿಶೋಧನೆಯ ಜಂಟಿ ಭೌತಿಕ ತಪಾಸಣೆ ವೇಳೆ ಪತ್ತೆ ಹಚ್ಚಿದೆ.

ಮಳೆಗಾಲದಲ್ಲಿ ನೀರಿನ ಮಟ್ಟ ಹೆಚ್ಚಾದಾಗಲೆಲ್ಲಾ ಹೊರಹರಿವಿನ ಮಾರ್ಗ ಲಭ್ಯವಿಲ್ಲದ ಕಾರಣ ಒಳಚರಂಡಿ ನೀರು ಮನೆಗಳಿಗೆ ಮತ್ತು ಹತ್ತಿರದ ಹೊಲಗಳಿಗೆ ಹರಿಯುತ್ತದೆ. ಈ ಸಂಬಂಧ ಕರ್ನಾಟಕ ನೀರಾವರಿ ನಿಗಮವು 2016ರಿಂದಲೂ ಶಿವಮೊಗ್ಗ ಮಹಾನಗರಪಾಲಿಕೆ ಆಯುಕ್ತರಿಗೆ, ಪುರಸಭೆ ನಿರ್ದೇಶಕರಿಗೆ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಹಲವಾರು ಬಾರಿ ಪತ್ರಗಳನ್ನು ಬರೆದಿದೆ. ಆದರೂ ಒಳಚರಂಡಿ ವ್ಯವಸ್ಥೆಯಲ್ಲಿನ ಕೊರತೆಯನ್ನು ಸರಿಪಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಪ್ರವಾಹ ಕ್ರಿಯಾ ಯೋಜನೆ ಅಥವಾ ರಾಜ್ಯ ವಿಪತ್ತು ನಿರ್ವಹಣಾ ಯೋಜನೆ ತಯಾರಿಕೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಜತೆ ಇತರೆ ಇಲಾಖೆಗಳು ಪಾಲ್ಗೊಂಡಿಲ್ಲ. ಇತರೆ ಇಲಾಖೆಗಳು ಪಾಲ್ಗೊಂಡಿದ್ದವು ಎಂಬುದನ್ನು ಸಾಬೀತುಪಡಿಸಲು ಕಂದಾಯ ಇಲಾಖೆಯಲ್ಲಿ ಯಾವುದೇ ದಾಖಲೆಗಳು ಲಭ್ಯವಿರಲಿಲ್ಲ. ಇದಲ್ಲದೇ ನೋಡಲ್ ಇಲಾಖೆಯು, ಪ್ರವಾಹ ಕ್ರಿಯಾ ಯೋಜನೆಯನ್ನು ಯಾವುದೇ ಇಲಾಖೆಗಳಿಗೆ ತಿಳಿಸಿರಲಿಲ್ಲ.

‘ಇದೆಲ್ಲದರ ಪರಿಣಾಮವಾಗಿ ರಾಜ್ಯ ಸರ್ಕಾರ, ಇಲಾಖೆಗಳು ಅಥವಾ ಜಿಲ್ಲಾಡಳಿತಗಳು ಯಾವುದೇ ರೀತಿಯ ರಚನಾತ್ಮಕ, ರಚನಾತ್ಮಕವಲ್ಲದ ಪ್ರವಾಹ ಶಮನಗೊಳಿಸುವ ಕ್ರಮಗಳ ಬಗ್ಗೆ ಸೂಕ್ತ ಕ್ರಮಗಳನ್ನೇ ಕೈಗೊಂಡಿಲ್ಲ. ಹೀಗಾಗಿ ರಾಜ್ಯವು ನಿರಂತರ ಸಂಕಷಷ್ಟಕ್ಕೆ ಸಿಲುಕಿತು,’ ಎಂದು ಸಿಎಜಿಯು ವರದಿಯಲ್ಲಿ ಅಭಿಪ್ರಾಯಿಸಿರುವುದು ಗೊತ್ತಾಗಿದೆ.









