ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ 17ನೇ ಬಜೆಟ್, ಮೌಲ್ಯಾಧಾರಿತ ಕರ್ನಾಟಕ ಪರಿಕಲ್ಪನೆ ಹೊಂದಬೇಕು. ನೈತಿಕತೆ, ಹೊಣೆಗಾರಿಕೆ ಆಧರಿತ ಹಾಗೂ ನವ ಕರ್ನಾಟಕ ದೃಷ್ಟಿಪಥ 2026-35 ಶೀರ್ಷಿಕೆಯಡಿಯಲ್ಲಿ ಇರಬೇಕು. ವಿಶೇಷವಾಗಿ 30 ಲಕ್ಷ ಹೊಸ ಉದ್ಯೋಗಗಳನ್ನು ಒಳಗೊಂಡ ಆರ್ಥಿಕ ಬೆಳವಣಿಗೆ ಮುನ್ನೋಟದ ಕುರಿತು ಆಯವ್ಯಯದಲ್ಲಿ ಪ್ರಸ್ತಾವಿಸಬೇಕು ಎಂದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಮೋಹನ್ ದಾಸ್ ಹೆಗಡೆ ಅವರು ಸರ್ಕಾರಕ್ಕೆ ಹಲವು ಪ್ರಮುಖ ಪ್ರಸ್ತಾವನೆಗಳನ್ನು ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗವು 2026-27ನೇ ಸಾಲಿಗೆ ಆಯವ್ಯಯಕ್ಕೆ ಹಲವು ಯೋಜನೆ, ಮುನ್ನೋಟಗಳನ್ನು ಪ್ರಸ್ತಾವಿಸಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಎಸ್ ಮೋಹನದಾಸ್ ಹೆಗಡೆ ಅವರು 2025-ರಿಂದ 2035ವರವರೆಗೆ ಮೌಲ್ಯಾಧಾರಿತ ಕರ್ನಾಟಕ ಕುರಿತಂತೆ ಹಲವು ಪ್ರಸ್ತಾವನೆಗಳನ್ನು ಸಲ್ಲಿಸಿದ್ದಾರೆ.
ಈ ಪ್ರಸ್ತಾವನೆಗಳನ್ನು ಆಧರಿಸಿ 2026-27ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಬೇಕು ಎಂದು ಸರ್ಕಾರದ ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ ಯೋಜನೆ ಮತ್ತು ಕಾರ್ಯಕ್ರಮ, ಸಾಂಖ್ಯಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಮಣ್ ದೀಪ್ ಚೌಧರಿ ಅವರು ಸೂಚಿಸಿದ್ದಾರೆ. 2026ರ ಫೆಬ್ರುವರಿ 10ರಂದೇ ಪತ್ರ ಬರೆದಿದ್ದಾರೆ.

ಮೌಲ್ಯಾಧಾರಿತ ಕರ್ನಾಟಕ
ಮೌಲ್ಯಾಧಾರಿತ ಕರ್ನಾಟಕದಡಿಯಲ್ಲಿ ನವೀನತೆ, ಸ್ಥಿರತೆ ಒಳಗೊಂಡ ಬೆಳವಣಿಗೆ, ನೈತಿಕತೆ, ಹೊಣೆಗಾರಿಕೆ ಆಧರಿತ, ನವ ಕರ್ನಾಟಕ ದೃಷ್ಟಿಪಥ, ನವ ಕರ್ನಾಟಕ ನವೀನತೆ ಒಳಗೊಳ್ಳುವಿಕೆ ಮತ್ತು ಸಮೃದ್ಧಿ ಎಲ್ಲರಿಗೂ ಎಂಬ ಘೋಷಣೆಯೂ ಇರಲಿದೆ.

ಕರ್ನಾಟಕ ಬಜೆಟ್ 2026-27, ನವೀನತೆ, ಸ್ಥಿರತೆ ಒಳಗೊಂಡ ಬೆಳವಣಿಗೆಯ ಮೇಲೆ ಇರಲಿದೆ. ಈ ಬೆಳವಣಿಗೆ ಆಧರಿತ ಬಜೆಟ್, ಮುಂದಿನ ದಿನಗಳಲ್ಲಿ ಭವಿಷ್ಯದ ಆರ್ಥಿಕತೆಯನ್ನಾಗಿ ಪರಿವರ್ತಿಸಲಿದೆ. ಇದಕ್ಕಾಗಿ 2025-2040 ಅವಧಿಗೆ ಕರ್ನಾಟಕ ಆರ್ಥಿಕ ಅಭಿವೃದ್ಧಿ ರೋಡ್ ಮ್ಯಾಪ್ ರೂಪಿಸಲಿದೆ. ಕೃತಕ ಬುದ್ಧಿಮತ್ತೆ ಆಧಾರಿತ ಆಡಳಿತ, ಹಸಿರು ಮತ್ತು ಡಿಜಿಟಲ್ ಪರಿವರ್ತನೆ, ಕೌಶಲ್ಯಾಭಿವೃದ್ಧಿ, ಸಾರ್ವಜನಿಕ ಕ್ಷೇತ್ರದಲ್ಲಿ ಸುಧಾರಣೆ ಮತ್ತು ಶೇ.100ರಷ್ಟು ಡಿಜಿಟಲ್ ಆಡಳಿತಕ್ಕೆ ಆದ್ಯತೆ ನೀಡಲಿದೆ ಎಂದು ಪ್ರಸ್ತಾವದಲ್ಲಿ ವಿವರಿಸಿರುವುದು ಗೊತ್ತಾಗಿದೆ.
30 ಲಕ್ಷ ಹೊಸ ಉದ್ಯೋಗ ಸೃಷ್ಟಿ
ರಾಜ್ಯ ಸರ್ಕಾರದ ಇಲಾಖೆಗಳಲ್ಲಿ 2.80 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದಕ್ಕೆ ನಿರುದ್ಯೋಗಿಗಳ ಆಕ್ರೋಶಕ್ಕೆ ಗುರಿಯಾಗಿದೆ. ಈ ಬೆನ್ನಲ್ಲೇ 2026-27ರ ಆಯವ್ಯಯದಲ್ಲಿ 30 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಪ್ರಸ್ತಾವಿಸಿರುವುದು ತಿಳಿದು ಬಂದಿದೆ.

ಆಡಳಿತಕ್ಕೆ ಹೊಸ ಮಾರ್ಗಸೂಚಿ- 10,000 ಕೋಟಿ ವಿನಿಯೋಗ
ಮೌಲ್ಯಾಧಾರಿತ ಕರ್ನಾಟಕವು ನೈತಿಕತೆ ಮತ್ತು ಹೊಣೆಗಾರಿಕೆ ಆಧರಿತವಾಗಿರಲಿದೆ. ಇದಕ್ಕಾಗಿ ಆಡಳಿತಕ್ಕೆ ಹೊಸ ಮಾರ್ಗಸೂಚಿಗಳನ್ನು ರೂಪಿಸಲಿದೆ. ಈ ಪರಿಕಲ್ಪನೆ ಯಶಸ್ಸಿಗೆ 10,000 ಕೋಟಿ ರುಪಾಯಿ ವಿನಿಯೋಗ ಮಾಡಲಿದೆ ಎಂದು ಪ್ರಸ್ತಾವಿಸಲಿದೆ. ಹಾಗೆಯೇ ಪ್ರಮುಖವಾಗಿ ಪಾರದರ್ಶಕ, ಹೊಣೆಗಾರಿಕೆಯಿಂದ ಕೂಡಿದ ಮತ್ತು ಮೌಲ್ಯಾಧಾರಿತ ಆಡಳಿತ ವ್ಯವಸ್ಥೆ ನಿರ್ಮಾಣ ಮಾಡುವುದನ್ನೂ ಸಹ ಈ ಪ್ರಸ್ತಾವವು ಒಳಗೊಂಡಿದೆ.

ಅಲ್ಲದೇ ಮೌಲ್ಯಾಧಾರಿತ ಶಿಕ್ಷಣ ಮತ್ತು ನಾಯಕತ್ವ ತರಬೇತಿ, ತಂತ್ರಜ್ಞಾನ ಆಧರಿತ ಡಿಜಿಟಲ್ ನೈತಿಕತೆ ಮತ್ತು ಡೇಟಾ ಪಾರದರ್ಶಕ ವ್ಯವಸ್ಥೆಯನ್ನೂ ಹೊಂದಲಿದೆ ಎಂದು ಆಯವ್ಯಯದಲ್ಲಿ ಪ್ರಸ್ತಾವಿಸಲು ಯೋಜನಾ ಆಯೋಗದ ಸದಸ್ಯ ಮೋಹನ್ ದಾಸ್ ಹೆಗಡೆ ಅವರು ಪ್ರಸ್ತಾವಿಸಿದ್ದಾರೆ.
ನವ ಕರ್ನಾಟಕ ದೃಷ್ಟಿಪಥ-2026-2035
ನವ ಕರ್ನಾಟಕ ನವೀನತೆ, ಒಳಗೊಳ್ಳುವಿಕೆ, ಸಮೃದ್ಧಿ ಎಲ್ಲರಿಗೂ ಎಂಬ ಘೋಷ ವಾಕ್ಯದಡಿಯಲ್ಲಿ ನೂತನ ಯುಗವನ್ನು ಅಭಿವೃದ್ಧಿ ದಿಕ್ಕಿಗೆ ಮುನ್ನಡೆಸಲಿದೆ. 500 ಬಿಲಿಯನ್ ಅಮೇರಿಕನ್ ಡಾಲರ್‍ಗಳ ಆಂತರಿಕ ಉತ್ಪನ್ನ ಸಾಧನೆಯಾಗಿದೆ. ಸಾಮಾಜಿಕ ನ್ಯಾಯ, ಮಹಿಳಾ ಮತ್ತು ಯುವ ಶಕ್ತೀಕರಣ ಮತ್ತು ಶೇ. 100ರಷ್ಟು ಡಿಜಿಟಲ್ ಸೇವಾ ವಿತರಣೆ ಮೂಲಕ ಜನ ಕೇಂದ್ರೀಕೃತ ಆಡಳಿತ ಬಲಪಡಿಸುವ ಅಂಶಗಳೂ ಸಹ ಈ ಪ್ರಸ್ತಾವವು ಒಳಗೊಂಡಿದೆ.

ಕೈಗಾರಿಕೆ, ವಾಣಿಜ್ಯ ಇಲಾಖೆಗೆ 20,000 ಕೋಟಿ
ಮೌಲ್ಯಾಧಾರಿತ ಕರ್ನಾಟಕ ಪರಿಕಲ್ಪನೆಯೊಳಗೆ ಕೈಗಾರಿಕೆ ವೈವಿದ್ಯೀಕರಣ, ರಫ್ತು ವೃದ್ಧಿ, ಗ್ರಾಮೀಣ ಉದ್ಯಮಗಳ ಮೂಲಕ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವುದು, ಹಣಕಾಶು ಶಿಸ್ತು ಕಾಯ್ದುಕೊಳ್ಳಲು ಹಣಕಾಸು ಕೊರತೆಯನ್ನು ಶೇ. 3.5ಕ್ಕಿಂತ ಕಡಿಮೆಗೊಳಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ 20,000 ಕೋಟಿ ರು ಅನುದಾನ ಒದಗಿಸಲು ಪ್ರಸ್ತಾವಿಸಿದ್ದಾರೆ.

ಇಂಧನ ಇಲಾಖೆಗೆ 1.5 ಲಕ್ಷ ಕೋಟಿ
ಇಂಧನ ಇಲಾಖೆ ವ್ಯಾಪ್ತಿಯಲ್ಲಿ ಖಾಸಗಿ ಮತ್ತು ಪಿಪಿಪಿ ಹೂಡಿಕೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯ, ನವೀಕರಿಸಬಹುದಾದ ಇಂಧನ ಮತ್ತು ತಯಾರಿಕೆ ಕ್ಷೇತ್ರಗಳನ್ನು ಬಲಪಡಿಸಲು 1.50 ಲಕ್ಷ ಕೋಟಿ ಅನುದಾನ ಪ್ರಸ್ತಾವಿಸಿದೆ.
2025-2040 ಕರ್ನಾಟಕ ಆರ್ಥಿಕ ಅಭಿವೃದ್ಧಿ ರೋಡ್ ಮ್ಯಾಪ್ ಅಡಿಯಲ್ಲಿ ಕೃತಕ ಬುದ್ಧಿಮತ್ತೆ, ಆಡಳಿತ, ಹಸಿರು ಮತ್ತು ಡಿಜಿಟಲ್ ಪರಿವರ್ತನೆ ಮತ್ತು ಕೌಶಲ್ಯಾಭಿವೃದ್ಧಿ ಮತ್ತು ಸಾರ್ವಜನಿಕ ಕ್ಷೇತ್ರ ಸುಧಾರಣೆಗೆ ಆದ್ಯತೆ ನೀಡಬೇಕು ಎಂದು ಪ್ರಸ್ತಾವಿಸಿದೆ. ಹಾಗೆಯೇ ಸ್ಕಿಲ್ ಕರ್ನಾಟಕ 2.0 ಡಿಜಿಟಲ್ ಕರ್ನಾಟಕ ದೃಷ್ಟಿಪಥ 2030 (ಹಂತ1) ಮತ್ತು ಕರ್ನಾಟಕ ಹವಾಮಾನ ಸ್ಥೈರ್ಯ ಮಿಷನ್ ಯೋಜನೆ, 30 ಲಕ್ಷ ಹೊಸ ಉದ್ಯೋಗ, ಡಿಜಿಟಲ್ ಆಡಳಿತ ಸಾಧಿಸುವ ಗುರಿಗಾಗಿ 32 ಲಕ್ಷ ಕೋಟಿ ಅನುದಾನ ಅನುದಾನವನ್ನು ಪ್ರಸ್ತಾವಿಸಿದೆ.

ಪಾರದರ್ಶಕ, ಹೊಣೆಗಾರಿಕೆಯಿಂದ ಕೂಡಿದ ಮತ್ತು ಮೌಲ್ಯಾಧಾರಿತ ಆಡಳಿತ ವ್ಯವಸ್ಥೆ ಹೆಸರಿನಲ್ಲಿ 10,000 ಕೋಟಿ ಅನುದಾನವನ್ನು ಪ್ರಸ್ತಾವಿಸಿದೆ. ಶಾಲೆ ಮತ್ತು ವಿಶ್ವವಿದ್ಯಾಲಯಗಳಿಗೆ 3,000 ಕೋಟಿ, ಮೌಲ್ಯಾಧಾರಿತ ಶಿಕ್ಷಣ ಮತ್ತು ನಾಯಕತ್ವ ತರಬೇತಿಗೆ 2,500 ಕೋಟಿ, ಸಾಮಾಜಿಕ ಸೌಹಾರ್ದ, ಒಳಗೊಳ್ಳುವಿಕೆ, ಸಮುದಾಯ ಸಬಲೀಕರಣ ಕಾರ್ಯಕ್ರಮಗಳಿಗೆ 2,000 ಕೋಟಿ, ತಂತ್ರಜ್ಞಾನ ಆಧರಿತ ಡಿಜಿಟಲ್ ನೈತಿಕತೆ ಮತ್ತು ಡೇಟಾ ಪಾರದರ್ಶಕತೆ ವ್ಯವಸ್ಥೆಗಳಿಗೆ 1,500 ಕೋಟಿ, ಕರ್ನಾಟಕ ರಾಜ್ಯ ಮೌಲ್ಯ ಮತ್ತು ನೈತಿಕತೆ ಪರಿಷತ್ ಸ್ಥಾಪನೆಗೆ 1,000 ಕೋಟಿ ರು ಅನುದಾನಕ್ಕೆ ಪ್ರಸ್ತಾವಿಸಿದೆ.
ನವಕರ್ನಾಟಕ ದೃಷ್ಟಿಪಥ 2026-27ರಡಿಯಲ್ಲಿ ನವೀನತೆ, ಸಮಾವೇಶ, ಸ್ಥಿರಾಭಿವೃದ್ಧಿ ಆಧರಿತ ಪ್ರಗತಿ, ರಾಜ್ಯದ ಜನರ ಕಲ್ಯಾಣವನ್ನು ಕೇಂದ್ರದಲ್ಲಿರಿಸಿಕೊಂಡು ಶೆ. 10ರಷ್ಟು ಜಿಡಿಪಿ ವೃದ್ಧಿ, ಜನ ಮೈತ್ರಿ ಆಡಳಿತದ ದಿಕ್ಕಿನಲ್ಲಿ ಕರ್ನಾಟಕವನ್ನು ಮುನ್ನೆಡೆಸಲು 1.7 ಲಕ್ಷ ಕೋಟಿ ರು ಅನುದಾನವನ್ನು ಪ್ರಸ್ತಾವಿಸಿರುವುದು ತಿಳಿದು ಬಂದಿದೆ.

ಆರ್ಥಿಕ ಪರಿವರ್ತನೆ, ಕೈಗಾರಿಕೆ, ಎಂಎಸ್‌ಎಂಇ ನವೀನತೆ ವೃದ್ಧಿಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ 60,000 ಕೋಟಿ, ಸಾಮಾಜಿಕ ಅಭಿವೃದ್ಧಿಗೆ ಶಿಕ್ಷಣ, ಆರೋಗ್ಯ ಮತ್ತು ಕೌಶಲ್ಯಾಭಿವೃದ್ಧಿಗೆ 40,000 ಕೋಟಿ, ಹಸಿರು ಬೆಳವಣಿಗೆಯಡಿಯಲ್ಲಿ ನವೀಕರಿಸಬಹುದಾದ ಇಂಧನ, ಹವಾಮಾನ ಸ್ಥಿರತೆ ಮತ್ತು ಪರಿಸರ ಸಂರಕ್ಷಣೆಗೆ 25,000 ಕೋಟಿ, ಆಡಳಿತ, ಡಿಜಿಟಲ್ ಪರಿವರ್ತನೆಗೆ ಇ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಸೇವಾ ದಕ್ಷತೆಯ ಸುಧಾರಣೆಗೆ 15,000 ಕೋಟಿ, ಪ್ರಾದೇಶಿಕ ಸಮತೋಲನ, ಮೂಲ ಸೌಕರ್ಯ ಮತ್ತು ಪ್ರಾದೇಶಿಕ ಸಮಾನತೆಗೆ ಮೀಸಲಿರಿಸಲು ಮೂಲ ಸೌಕರ್ಯ, ಒಳನಾಡು ಬಂದರು ಇಲಾಖೆಗೆ 30,000 ಕೋಟಿ ರು ಅನುದಾನವನ್ನು ಪ್ರಸ್ತಾವಿಸಿರುವುದು ಗೊತ್ತಾಗಿದೆ.

ಮಾನವ ಅಭಿವೃದ್ಧಿ, ಪರಿಸರ ಸ್ನೇಹಿ ಸ್ಥಿರತೆ ಸಮತೋಲನ, ನವೀನತೆ ಆಧರಿತ ಆರ್ಥಿಕ ಬೆಳವಣಿಗೆ ಅಡಿಯಲ್ಲಿ ಕೈಗಾರಿಕೆ, ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ಹಸಿರು ಶಕ್ತಿಯ ಅಭಿವೃದ್ಧಿಗೆ ಪ್ರಮುಖ ಆದ್ಯತೆ ನೀಡಬೇಕು. ಇದಕ್ಕಾಗಿ ಕೈಗಾರಿಕೆ, ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ಕೃಷಿ ಇಲಾಖೆಗೆ 5 ಲಕ್ಷ ಕೋಟಿ, ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿಗೆ 1.50 ಲಕ್ಷ ಕೋಟಿ, ನವೀಕರಿಸಬಹುದಾದ ಶಕ್ತಿ ಮತ್ತು ಹವಾಮಾನ-ಸ್ಮಾರ್ಟ್ ಯೋಜನೆಗೆ ಐಟಿಬಿಟಿ ಇಅಲಖೆಗೆ 70,000 ಲಕ್ಷ ಕೋಟಿ ರು ಅನುದಾನ ಪ್ರಸ್ತಾವಿಸಿದೆ.
ಉತ್ತರ ಕರ್ನಾಟಕ ಪ್ರಗತಿ ಯೋಜನೆಯಡಿಯಲ್ಲಿ ಪ್ರಾದೇಶಿಕ ಸಮತೋಲನ ಅಭಿವೃದ್ಧಿಗೆ ಒತ್ತು ನೀಡಬೇಕು. ಡಿಜಿಟಲ್ ಗವರ್ನೆನ್ಸ್ 3.0 ಮುಖಾಂತರ ಪಾರದರ್ಶಕ, ಎಐ ಆಧರಿತ ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ಕೌಶಲ್ಯಾಭಿವೃದ್ಧಿ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಗೆ 50,000 ಲಕ್ಷ ಕೋಟಿ ಅನುದಾನ ಪ್ರಸ್ತಾವಿಸಿರುವುದು ತಿಳಿದು ಬಂದಿದೆ.
ಈ ಎಲ್ಲಾ ಅಂಶಗಳನ್ನೊಳಗೊಂಡ ಬಜೆಟ್ ಸಮಗ್ರ, ನವೀನವಾಗಿರಬೇಕು. ಭವಿಷ್ಯ ಸಿದ್ಧ ಕರ್ನಾಠಕ ನಿರ್ಮಾಣ ದಾರಿಯಲ್ಲಿ ರಾಜ್ಯವನ್ನು $ 750 ಬಿಲಿಯನ್ ಆರ್ಥಿಕತೆಯತ್ತ ಮುನ್ನಡೆಸುವ ಬಲವಾದ ನೆಲೆಯನ್ನಿಡುತ್ತದೆ ಎಂದು ಪ್ರಸ್ತಾವದಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಮೋಹನ್ ದಾಸ್ ಹೆಗಡೆ ಅವರು ಬಜೆಟ್ ಟಿಪ್ಪಣಿಗೆ ಕಳಿಸಿರುವ ಈ ಎಲ್ಲಾ ಪ್ರಸ್ತಾವನೆಗಳನ್ನು ಇಲಾಖೆಗಳ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು ಪರಿಶೀಲಿಸಬೇಕು. 2026-27ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಈ ಪ್ರಸ್ತಾವನೆಯಲ್ಲಿರುವ ಪ್ರಮುಖ ಅಂಶಗಳ ಕುರಿತು ಚರ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಯೋಜನೆ, ಸಾಂಖ್ಯಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಮಣ್ ದೀಪ್ ಚೌಧರಿ ಅವರು ನಿರ್ದೇಶಿಸಿರುವುದು ತಿಳಿದು ಬಂದಿದೆ.









