ಬೆಂಗಳೂರು; 2025-26ನೇ ಸಾಲಿನ ಆರ್ಥಿಕ ವರ್ಷವು ಪೂರ್ಣಗೊಳ್ಳಲು ಎರಡೇ ಎರಡು ತಿಂಗಳು ಬಾಕಿ ಇದ್ದರೂ ಸಹ ಒಟ್ಟು ಅನುದಾನದಲ್ಲಿ ಇನ್ನೂ 1,31,272.02 ಕೋಟಿ ರು ಗಳನ್ನು ಖರ್ಚು ಮಾಡಿಲ್ಲ. 2025-26ನೇ ಸಾಲಿನ ಆಯವ್ಯಯದಲ್ಲಿ ಒದಗಿಸಿದ್ದ 3,39,227.31 ಕೋಟಿ ರುಪಾಯಿನಲ್ಲಿ ಜನವರಿ 27ರ ಅಂತ್ಯಕ್ಕೆ 2,44,465 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಬಿಡುಗಡೆಗೆ ಇನ್ನೂ 94,761.42 ಕೋಟಿ ರುಪಾಯಿ ಬಾಕಿ ಇದೆ.
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2026ರ ಜನವರಿ 31ರಂದು ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆಗಳ ಖರ್ಚು ವೆಚ್ಚದ ಕುರಿತು ಚರ್ಚೆಯಾಗಿದೆ.
ಈ ಸಭೆಗೆ ಇಲಾಖೆಗಳು ಮಂಡಿಸಿರುವ ಅಂಕಿ ಅಂಶಗಳ ಮಾಹಿತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ಬಿಡುಗಡೆಯಾಗಿದ್ದ 2,44,465.89 ಕೋಟಿ ರುನಲ್ಲಿ 2,07,954.98 ಕೋಟಿ ರುಪಾಯಿ ಖರ್ಚು ಮಾಡಿರುವ ಇಲಾಖೆಗಳು, 36,510.91 ಕೋಟಿ ರುಪಾಯಿ ವೆಚ್ಚವನ್ನೇ ಮಾಡಿಲ್ಲ. ಲಭ್ಯ ಅನುದಾನಕ್ಕೆ ಶೇ.81.50ರಷ್ಟು ವೆಚ್ಚ ಮಾಡಿದ್ದರೂ ಸಹ ಒಟ್ಟು ಅನುದಾನಕ್ಕೆ ಹೋಲಿಸಿದರೇ ಶೇ. 59.43ರಷ್ಟು ಮಾತ್ರ ವೆಚ್ಚ ಮಾಡಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೇ ಶೇ.3.44 ಕಡಿಮೆ ವೆಚ್ಚ ಮಾಡಿದಂತಾಗಿದೆ.

2024-25ನೇ ಸಾಲಿನಲ್ಲಿ ಜನವರಿ 27ರ ಅಂತ್ಯಕ್ಕೆ ಒಟ್ಟು ಅನುದಾನಕ್ಕೆ ಶೇ. 62.87ರಷ್ಟು ವೆಚ್ಚವಾಗಿದ್ದರೇ ಲಭ್ಯ ಅನುದಾನಕ್ಕೆ ಶೇ. 86.06ರಷ್ಟು ವೆಚ್ಚವಾಗಿತ್ತು.

ಆದರೆ 2025-26ನೇ ಸಾಲಿನ ಜನವರಿ 27ರ ಅಂತ್ಯಕ್ಕೆ ಒಟ್ಟು ಅನುದಾನಕ್ಕೆ ಶೇ.59.43 ಮತ್ತು ಲಭ್ಯ ಅನುದಾನಕ್ಕೆ ಶೇ. 81.50ರಷ್ಟು ವೆಚ್ಚವಾಗಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಅದೇ ರೀತಿ ವೇತನೇತರ ವೆಚ್ಚಗಳಡಿಯಲ್ಲಿ ಜನವರಿ 27ರ ಅಂತ್ಯಕ್ಕೆ 23,511.28 ಕೋಟಿ ಮತ್ತು ವೇತನ ವಿಭಾಗದಲ್ಲಿ 23,700.87 ಕೋಟಿ ರು. ಖರ್ಚಾಗಿಲ್ಲ.



ಕೇಂದ್ರ ಪುರಸ್ಕೃತ ಯೋಜನೆಗಳಡಿಯಲ್ಲಿಯೂ 2024-25ನೇ ಸಾಲಿನಲ್ಲಿ 29,620.12 ಕೋಟಿಯಷ್ಟು ವೆಚ್ಚವಾಗಿದ್ದರೇ 2025-26ನೇ ಸಾಲಿನಲ್ಲಿ 24,391.02 ಕೋಟಿ ಖರ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೇ 5,239.1 ಕೋಟಿಯಷ್ಟು ಕಡಿಮೆ ವೆಚ್ಚವಾದಂತಾಗಿದೆ.

ವಿಶೇಷವೆಂದರೇ 2024-25ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲುದಾರಿಕೆಯಲ್ಲಿ 55,849.52 ಕೋಟಿ ರು ಒಟ್ಟು ಅನುದಾನವಿತ್ತು. 2025- 26ರಲ್ಲಿ 52,841.56 ಕೋಟಿ ರುಪಾಯಿ ಅನುದಾನವಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಗಳಡಿಯಲ್ಲಿ 2024-25ನೇ ಸಾಲಿನಲ್ಲಿ 27,884.14 ಕೋಟಿ ರು ಬಿಡುಗಡೆ ಮಾಡಿದ್ದರೇ 2025-26ರಲ್ಲಿ 27,126.04 ಕೋಟಿ ರು ಬಿಡುಗಡೆ ಮಾಡಿದೆ. 2024-25ರಲ್ಲಿ 29,620.12 ಕೋಟಿ ರು ವೆಚ್ಚ ಮಾಡಿದೆ. ಇದು ಅನುದಾನ ಬಿಡುಗಡೆಯಾಗಿದ್ದಕ್ಕಿಂತಲೂ ಅಂದರೇ 1,735.98 ಕೋಟಿ ರು ಹೆಚ್ಚಿಗೆ ವೆಚ್ಚ ಮಾಡಿದೆ. ಅದೇ ರೀತಿ 2025-26ರ ಜನವರಿ 27ರ ಅಂತ್ಯಕ್ಕೆ 24,391.02 ಕೋಟಿ ರು ವೆಚ್ಚ ಮಾಡಿದೆ. ಬಿಡುಗಡೆ ಮಾಡಿದ್ದ ಹಣದಲ್ಲಿಯೇ ಇನ್ನೂ 2,735.02 ಕೋಟಿ ರು ಗಳನ್ನು ವೆಚ್ಚಕ್ಕೆ ಬಾಕಿ ಇರುವುದು ಗೊತ್ತಾಗಿದೆ.
ಕೇಂದ್ರ ಪುರಸ್ಕೃತ ಯೋಜನೆಗಳಡಿಯಲ್ಲಿ ಲಭ್ಯ ಅನುದಾನದಲ್ಲಿ ಜನವರಿ 27ರ ಅಂತ್ಯಕ್ಕೆ 5,442.45 ಕೋಟಿ ರು ವೆಚ್ಚವಾಗಿಲ್ಲ.
ಮಹತ್ವಾಕಾಂಕ್ಷೆ ತಾಲೂಕುಗಳಡಿಯಲ್ಲಿ ಜನವರಿ 27ರ ಅಂತ್ಯಕ್ಕೆ ಒಟ್ಟು ಅನುದಾನಕ್ಕೆ ಶೇ. 38.01ರಷ್ಟು ಮಾತ್ರ ವೆಚ್ಚವಾಗಿದೆ. ಮಹತ್ವಾಕಾಂಕ್ಷೆಗಳ ತಾಲೂಕುಗಳಡಿಯಲ್ಲಿ 3,411.82 ಕೋಟಿ ರು ಅನುದಾನವಿದ್ದರೂ ಸಹ ಜನವರಿ 27ರ ಅಂತ್ಯಕ್ಕೆ 1,452.54 ಕೋಟಿ ರು ಬಿಡುಗಡೆ ಮಾಡಿತ್ತು. ಬಿಡುಗಡೆಗೆ 1,959.28 ಕೋಟಿ ರು ಬಾಕಿ ಇದೆ. ಬಿಡುಗಡೆಯಾಗಿದ್ದ 1,452.54 ಕೋಟಿ ರುಪಾಯಿನಲ್ಲಿ 1,330.01 ಕೋಟಿ ರುಪಾಯಿ ವೆಚ್ಚ ಮಾಡಿದೆ. ಬಿಡುಗಡೆಯಾಗಿದ್ದ ಅನುದಾನದಲ್ಲಿ 122.53 ಕೋಟಿ ರು ಬಾಕಿ ಇತ್ತು. ಒಟ್ಟು ಅನುದಾನದಲ್ಲಿ ವೆಚ್ಚಕ್ಕೆ 2,081.81 ಕೋಟಿ ರು ಬಾಕಿ ಇರುವುದು ತಿಳಿದು ಬಂದಿದೆ.

ವೇತನೇತರ ವಿಭಾಗದಲ್ಲಿ ಯೋಜನೆ ಇಲಾಖೆಯು 3,543.92 ಕೋಟಿ, ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆಯು 2,780.66 ಕೋಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 3,069.28 ಕೋಟಿ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 1,449.69 ಕೋಟಿ, ಕಂದಾಯ ವಿಪತ್ತು ನಿರ್ವಹಣೆಯಲ್ಲಿ 2,024.07 ಕೋಟಿ ರುಪಾಯಿ ಖರ್ಚಾಗಿಲ್ಲ. ಅಲ್ಲದೇ ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆಯಲ್ಲಿ ವೇತನ ವಿಭಾಗದಲ್ಲಿಯೂ 3,853.26 ಕೋಟಿ ರುಪಾಯಿಗಳನ್ನು ಖರ್ಚು ಮಾಡಿಲ್ಲ.

ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆಗೆ ಒಟ್ಟು 36,755.41 ಕೋಟಿ ರುಪಾಯಿ ಅನುದಾನ ಒದಗಿಸಿತ್ತು. ಈ ಪೈಕಿ ಜನವರಿ 27ರ ಅಂತ್ಯಕ್ಕೆ 30,945.84 ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಜನವರಿ 27ರ ಅಂತ್ಯಕ್ಕೆ 24,934.92 ಕೋಟಿ ರುಪಾಯಿ ವೆಚ್ಚವಾಗಿದೆ. ಖರ್ಚು ಮಾಡಲು 6,010.92 ಕೋಟಿ ರು ಬಾಕಿ ಇದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಒದಗಿಸಿದ್ದ 34,915.16 ಕೋಟಿ ರುಪಾಯಿ ಅನುದಾನದಲ್ಲಿ 18,043.33 ಕೋಟಿ ರು ಬಿಡುಗಡೆಯಾಗಿದೆ. ಒಟ್ಟಾರೆ 15,106.29 ಕೋಟಿ ರುಪಾಯಿ ಖರ್ಚು ಮಾಡಿದೆ. ಖರ್ಚು ಮಾಡಲು ಇನ್ನೂ 2,937.04 ಕೋಟಿ ರುಪಾಯಿ ಬಾಕಿ ಉಳಿಸಿಕೊಂಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 11,425.12 ಕೋಟಿ ರು ಅನುದಾನದಲ್ಲಿ 8,861.58 ಕೋಟಿ ರು ಬಿಡುಗಡೆಯಾಗಿತ್ತು. ಬಿಡುಗಡೆಗೆ 2,563.54 ಕೋಟಿ ರು ಬಾಕಿ ಇತ್ತು. ಬಿಡುಗಡೆಯಾಗಿದ್ದ ಒಟ್ಟು ಅನುದಾನದಲ್ಲಿ 7,652.57 ಕೋಟಿ ರುಪಾಯಿ ವೆಚ್ಚ ಮಾಡಿರುವ ಇಲಾಖೆಯು ಖರ್ಚು ಮಾಡಲು ಇನ್ನೂ 1,209.01 ಕೋಟಿ ರುಪಾಯಿ ಬಾಕಿ ಇರಿಸಿಕೊಂಡಿದೆ.
ನಗರಾಭಿವೃದ್ಧಿ ಇಲಾಖೆಗೆ 8,695.67 ಕೋಟಿ ರುಪಾಯಿ ಅನುದಾನದಲ್ಲಿ 5,999.41 ಕೋಟಿ ರುಪಾಯಿ ಬಿಡುಗಡೆಯಾಗಿತ್ತು. ಬಿಡುಗಡೆಗೆ 2,696.26 ಕೋಟಿ ರುಪಾಯಿ ಬಾಕಿ ಇದೆ. ಬಿಡುಗಡೆಯಾಗಿದ್ದ ಒಟ್ಟು ಅನುದಾನದಲ್ಲಿ 5,873.25 ಕೋಟಿ ರುಪಾಯಿ ವೆಚ್ಚ ಮಾಡಿದೆ. ಖರ್ಚು ಮಾಡಲು 126.16 ಕೋಟಿ ರುಪಾಯಿ ಬಾಕಿ ಇರಿಸಿಕೊಂಡಿರುವುದು ತಿಳಿದು ಬಂದಿದೆ.

ಲೋಕೋಪಯೋಗಿ ಇಲಾಖೆಗೆ 11,677.09 ಕೋಟಿ ರುಪಾಯಿ ಅನುದಾನ ಒದಗಿಸಲಾಗಿತ್ತು. ಈ ಪೈಕಿ 7,038.72 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಬಿಡುಗಡೆಗೆ 4,638.37 ಕೋಟಿ ರು ಬಾಕಿ ಇರಿಸಿಕೊಂಡಿದೆ. ಬಿಡುಗಡೆಯಾಗಿದ್ದ ಅನುದಾನದಲ್ಲಿ 6,358.53 ಕೋಟಿ ರುಪಾಯಿ ವೆಚ್ಚ ಮಾಡಿರುವ ಇಲಾಖೆಯು ಖರ್ಚು ಮಾಡಲು ಇನ್ನೂ 680.19 ಕೋಟಿ ರುಪಾಯಿ ಬಾಕಿ ಇದೆ.
ಕೇಂದ್ರ ಪುರಸ್ಕೃತ ಯೋಜನೆಗಳಡಿಯಲ್ಲಿ ಗ್ರಾಮೀಣಾಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯವು ಅನುದಾನವು ಒಟ್ಟಾರೆ 17,591.87 ಕೋಟಿ ರು ಅನುದಾನ ಒದಗಿಸಿಕೊಂಡಿತ್ತು.ಇದರಲ್ಲಿ ಕೇಂದ್ರವು ಸರ್ಕಾರವು 10,643.66 ಕೋಟಿ ರುಪಾಯಿ ಒಟ್ಟು ಅನುದಾನ ನಿಗದಿಪಡಿಸಿತ್ತು. ಈ ಪೈಕಿ 3,568.67 ಕೋಟಿ ರುಪಾಯಿ ಮಾತ್ರ ಬಿಡುಗಡೆ ಮಾಡಿದೆ. ಬಿಡುಗಡೆಗೆ ಇನ್ನೂ 7,074.99 ಕೋಟಿ ರುಪಾಯಿ ಬಾಕಿ ಇದೆ. ಇದೇ ಇಲಾಖೆಗೆ ರಾಜ್ಯ ಸರ್ಕಾರವು 6,256.45 ಕೋಟಿ ರುಪಾಯಿ ಅನುದಾನ ಒದಗಿಸಿಕೊಂಡಿತ್ತು. ಇದರಲ್ಲಿ 1,561.99 ಕೋಟಿ ರುಪಾಯಿ ಬಿಡುಗಡೆ ಮಾಡಿತ್ತು. ಬಿಡುಗಡೆಗೆ ಇನ್ನೂ 4,694.46 ಕೋಟಿ ರುಪಾಯಿ ಬಾಕಿ ಇದೆ.
ಒಟ್ಟಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಗ್ರಾಮೀಣಾಭಿವೃದ್ಧಿಗೆ 5,130.66 ಕೋಟಿ ರು ಬಿಡುಗಡೆ ಮಾಡಿದೆ. ಬಿಡುಗಡೆಗೆ ಇನ್ನೂ 11,769.45 ಕೋಟಿ ರುಪಾಯಿ ಬಾಕಿ ಉಳಿಸಿಕೊಂಡಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಕಾರ್ಯಕ್ರಮದಡಿಯಲ್ಲಿ ಕೇಂದ್ರವು 5,300.30 ಕೋಟಿ ರು, ರಾಜ್ಯವು 555.01 ಕೋಟಿ ರುಪಾಯಿ ಸೇರಿ ಒಟ್ಟಾರೆ 5,855.31 ಕೋಟಿ ರುಪಾಯಿ ಅನುದಾನ ಒದಗಿಸಿಕೊಂಡಿತ್ತು. ಜನವರಿ 27ರ ಅಂತ್ಯಕ್ಕೆ ಈ ಕಾರ್ಯಕ್ರಮದಡಿಯಲ್ಲಿ ಕೇಂದ್ರ ಸರ್ಕಾರವು 3,439.48 ಕೋಟಿ, ರಾಜ್ಯ ಸರ್ಕಾರವು 107.86 ಕೋಟಿ ರು ಒಟ್ಟಾರೆ 3,547.34 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಬಿಡುಗಡೆಯಾಗಿದ್ದ ಈ ಅನುದಾನದಲ್ಲಿ 3,370.79 ಕೋಟಿ ರು ವೆಚ್ಚವಾಗಿದೆ.









