ಬೆಂಗಳೂರು; ಅಮೇರಿಕಾದ ಬೋಸ್ಟನ್ ನಗರದಲ್ಲಿ ನಡೆದಿದ್ದ ರಾಜ್ಯಗಳ ಶಾಸಕಾಂಗ ಸಭೆಗಳ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ಶಾಸಕರು ಖರ್ಚು ವೆಚ್ಚಗಳಿಗೆ ಸಂಬಂಧಿಸಿದ ಅಂತಿಮ ಬಿಲ್‌ಗಳನ್ನು 5 ತಿಂಗಳಾದರೂ ಸಲ್ಲಿಸಿಲ್ಲ.
ಅಲ್ಲದೇ ಇದೇ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರ ಇತರೆ ಖರ್ಚು ವೆಚ್ಚಗಳ ವಿವರಗಳೂ ಸಹ ಲಭ್ಯವಿಲ್ಲ. ಈ ಎಲ್ಲಾ ಮಾಹಿತಿಗಳನ್ನು ಕರ್ನಾಟಕ ವಿಧಾನಸಭೆ ಮತ್ತು ವಿಧಾನ ಪರಿಷತ್ ಸಚಿವಾಲಯವು ಐದು ತಿಂಗಳಾದರೂ ಬಹಿರಂಗಪಡಿಸುತ್ತಿಲ್ಲ.
2025ರ ಆಗಸ್ಟ್ 4 ಮತ್ತು 6ರವರೆಗೆ ಬೋಸ್ಟನ್ ನಗರದಲ್ಲಿ ಮೂರು ದಿನಗಳ ಕಾಲ ಶೃಂಗಸಭೆ ನಡೆದಿತ್ತು. ಈ ಸಮ್ಮೇಳನವು ಪೂರ್ಣಗೊಂಡು ಐದು ತಿಂಗಳು ಕಳೆದಿವೆ. ಆದರೂ ಸಹ ಇನ್ನೂ ಖರ್ಚು ವೆಚ್ಚಗಳ ಬಿಲ್‌ಗಳನ್ನು ಸಲ್ಲಿಸಿಲ್ಲ. ವಿಧಾನಮಂಡಲದ ಉಭಯ ಸದನಗಳ ಸಚಿವಾಲಯವು ಈ ಬಗ್ಗೆ ಕ್ರಮ ವಹಿಸದೇ ಇರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ದಿ ಫೈಲ್ ಸಲ್ಲಿಸಿದ್ದ ಆರ್‍ಟಿಐ ಅರ್ಜಿಗೆ ಉತ್ತರಿಸಿರುವ ಕರ್ನಾಟಕ ವಿಧಾನಸಭೆಯು, ಶಾಸಕರು ಖರ್ಚು ವೆಚ್ಚಗಳ ಬಿಲ್‌ಗಳನ್ನು ಸಲ್ಲಿಸಿಲ್ಲ ಎಂಬ ಮಾಹಿತಿಯನ್ನು ಒದಗಿಸಿದೆ.
ವಿಶೇಷವೆಂದರೇ ಇದೇ ಬೋಸ್ಟನ್ ಪ್ರವಾಸದ ಖರ್ಚುವೆಚ್ಚದ ಮಾಹಿತಿ ಕೋರಿ ಆರ್‍ಟಿಐ ಅಡಿಯಲ್ಲಿ ಎರಡು ಬಾರಿ ಅರ್ಜಿ ಸಲ್ಲಿಸಿತ್ತು. ಎರಡು ಬಾರಿ ಅರ್ಜಿ ಸಲ್ಲಿಸಿದಾಗಲೂ ‘ಸದಸ್ಯರು ಇನ್ನೂ ಬಿಲ್ ಸಲ್ಲಿಸಿಲ್ಲ, ಕಡತ ಪರಿಶೀಲನೆಯಲ್ಲಿದೆ. ಒಟ್ಟಾಗಿ ಬಿಲ್ ಪಾವತಿಸಲಾಗುವುದರಿಂದ ಎಲ್ಲರೂ ಬಿಲ್ ಸಲ್ಲಿಸಿದ ನಂತರವೇ ಉತ್ತರಿಸಲಾಗುವುದು,’ ಎಂದು ಕರ್ನಾಟಕ ವಿಧಾನಸಭೆ ಸಚಿವಾಲಯವು ಉತ್ತರಿಸುತ್ತಿದೆ.
ಬೋಸ್ಟನ್ ಪ್ರವಾಸದ ಖರ್ಚು ವೆಚ್ಚದ ಬಿಲ್ ಸಲ್ಲಿಕೆಯಲ್ಲಿನ ವಿಳಂಬ ಮತ್ತು ಮಾಹಿತಿ ನಿರಾಕರಣೆಯು, ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಸಾರ್ವಜನಿಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆಗೂ ಕಾರಣವಾಗಿದೆ.
ಬೋಸ್ಟನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದಂತೆ ಸಮ್ಮೇಳನ ಅಧ್ಯಕ್ಷ ಡಾ ರಾಹುಲ್ ಕರಾದ್ ಅವರು ವಿಧಾನಸಭೆಯ 10 ಸದಸ್ಯರನ್ನು ನಾಮನಿರ್ದೇಶನಗೊಳಿಸಬೇಕು ಎಂದು ಸ್ಪೀಕರ್ ಯು ಟಿ ಖಾದರ್ ಅವರಿಗೆ 2025ರ ಫೆ.25ರಂದು ಪತ್ರ ಬರೆದಿದ್ದರು. ಅಲ್ಲದೇ ನಾಮನಿರ್ದೇಶನ ಮಾಡುವ ಮುನ್ನ ಹಲವು ಮಾನದಂಡಗಳ ಕುರಿತೂ ವಿವರಿಸಿದ್ದರು. ವಿಧಾನ ಪರಿಷತ್ ಸದಸ್ಯರೂ ಭಾಗವಹಿಸಲು ಸಭಾಪತಿ ಬಸವರಾಜ ಹೊರಟ್ಟಿ ಅವರೂ ಅನುಮತಿ ನೀಡಿದ್ದರು.

ಮಾನದಂಡಗಳ ಪೈಕಿ 25 ರಿಂದ 55 ವರ್ಷದೊಳಗಿನ ಸದಸ್ಯರಿಗೆ ಆದ್ಯತೆ ನೀಡಬೇಕು ಮತ್ತು ಲಿಂಗ ವೈವಿಧ್ಯತೆಗಾಗಿ ಮಹಿಳಾ ಸದಸ್ಯರೂ ಒಳಗೊಂಡಿರಬೇಕು. ಮತ್ತು ಮಹಿಳಾ ಪ್ರಾತಿನಿಧ್ಯ ಇರಬೇಕು ಎಂದು ಪತ್ರದಲ್ಲಿ ಹೇಳಲಾಗಿತ್ತು. ಮತ್ತೊಂದು ವಿಶೇಷವೆಂದರೇ ಆಡಳಿತ ವ್ಯವಸ್ಥೆಗೆ ಬದ್ಧರಾಗಿರುವ ಮತ್ತು ಶೈಕ್ಷಣಿಕವಾಗಿ ಆಸಕ್ತಿಯುಳ್ಳ, ಪ್ರಾಮಾಣಿಕ ಹಾಗೂ ಸಮರ್ಪಿತ ಸದಸ್ಯರಿಗಷ್ಟೇ ಆದ್ಯತೆ ನೀಡಬೇಕು ಎಂಬ ಮಾನದಂಡವನ್ನೂ ನೀಡಲಾಗಿತ್ತು.
ಸಮ್ಮೇಳನ ನೋಂದಣಿ ಶುಲ್ಕವಾಗಿ ಪ್ರತಿ ಸದಸ್ಯರಿಗೆ 1,500 ಡಾಲರ್ ಶುಲ್ಕ ವಿಧಿಸಿತ್ತು. ಮತ್ತು ನೋಂದಾಯಿಸಿದ ಸದಸ್ಯರಿಗೆ ಬೋಸ್ಟನ್‌ನಲ್ಲಿ ಆಗಸ್ಟ್ 3 ರಿಂದ 7ರವರೆಗೆ ಒಟ್ಟಾರೆ 4 ರಾತ್ರಿ ಮತ್ತು 5 ದಿನಗಳ ಕಾಲ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಾಗೆಯೇ ಹೋಟೆಲ್‌ನಿಂದ ಸಮ್ಮೇಳನ ಸ್ಥಳಕ್ಕೆ ಹಾಗೂ ಹೋಟೆಲ್‌ನಿಂದ ಹಿಂದಿರುಗಲು ಸ್ಥಳೀಯ ಸಾರಿಗೆ ವ್ಯವಸ್ಥೆಯನ್ನು ಉಚಿತವಾಗಿ ಒದಗಿಸುವ ಪ್ಯಾಕೇಜ್ ಕೂಡ ಇತ್ತು.
ಬೋಸ್ಟನ್ ಶೃಂಗಸಭೆ ಕುರಿತು ಖರ್ಚು ವೆಚ್ಚದ ಮಾಹಿತಿ ಕೋರಿ 2025ರ ಆಗಸ್ಟ್ 14ರಂದು ದಿ ಫೈಲ್ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ 2025ರ ಸೆ.19ರಂದು ಕರ್ನಾಟಕ ವಿಧಾನಸಭೆ ಸಚಿವಾಲಯವು ಉತ್ತರಿಸಿತ್ತು.
‘ಸಮ್ಮೇಳನದಲ್ಲಿ ಭಾಗವಹಿಸಿದ ವಿಧಾನ ಸಭಾ ಸದಸ್ಯರುಗಳು ಅಂತಿಮ ಬಿಲ್ಲನ್ನು ಸಲ್ಲಿಸಿರುವುದಿಲ್ಲ. ಶಾಸಕರುಗಳು ಜುಲೈ 27, 2025 ರಂದೇ ಪ್ರಯಾಣಿಸಿ ಆಗಸ್ಟ್ 8, 2025 ರಂದು ಹಿಂದಿರುಗಿರುತ್ತಾರೆ. ಸಮ್ಮೇಳನದಲ್ಲಿ ಭಾಗವಹಿಸಿದ್ದ ಪ್ರತಿ ಶಾಸಕರಿಗೆ ಸಮ್ಮೇಳನದ ನೋಂದಣಿ ಶುಲ್ಕವಾಗಿ 1,28,580 ರು (1500 ಡಾಲರ್) ಪಾವತಿಸಲಾಗಿರುತ್ತದೆ. ಉಳಿದಂತೆ ವಿಮಾನಯಾನ ವಸತಿ, ವಿಮೆ ಮುಂತಾದ ವೆಚ್ಚಗಳು ಅಂತಿಮ ಬಿಲ್ ನಲ್ಲಿ ಸಲ್ಲಿಸಲಿದ್ದಾರೆ, ಎಂದು ಸಚಿವಾಲಯವು ಮಾಹಿತಿ ನೀಡಿತ್ತು.

ಉಳಿದಂತೆ ಕರ್ನಾಟಕ ವಿಧಾನ ಸಭೆ ಸಚಿವಾಲಯವೇ ಇತರೆ ವೆಚ್ಚ ಭರಿಸಿದೆ. ಸಮ್ಮೇಳನದಲ್ಲಿ ಭಾಗವಹಿಸಿದ ಹಾಜರಾತಿ, ವರದಿಗಳು, ಪ್ರತಿಕ್ರಿಯೆಗಳು ಇತರೆ ಎಲ್ಲವನ್ನೂ ಅಂತಿಮ ಬಿಲ್‌ನಲ್ಲಿ ಸಲ್ಲಿಸಲಿದ್ದಾರೆ ಎಂದು ಮಾಹಿತಿ ಒದಗಿಸಿದ್ದರು. ದಿನಭತ್ಯೆ ಪಾವತಿ ಕುರಿತು 2011ರ ನವೆಂಬರ್ 17ರಂದೇ ಆರ್ಥಿಕ ಇಲಾಖೆಯು ಸುತ್ತೋಲೆ ಹೊರಡಿಸಿದೆ. ಆದರೂ ಈ ಸುತ್ತೋಲೆ ಪ್ರಕಾರ ಶಾಸಕರು ವಾಸ್ತವ ವೆಚ್ಚಗಳನ್ನು ಒದಗಿಸಬೇಕಿತ್ತು. ಆದರೆ ಐದಾರು ತಿಂಗಳಾದರೂ ಸಹ ಯಾವುದೇ ಮಾಹಿತಿ ಒದಗಿಸಿಲ್ಲ. ಅಲ್ಲದೆ ಮುಂಗಡ ಪಾವತಿ ಸಂಬಂಧ ಯಾವುದೇ ಕರ್ನಾಟಕ ವಿಧಾನಸಭೆ ಸಚಿವಾಲಯವು ಮಾಹಿತಿ ನೀಡಿಲ್ಲ.
ಮಾನದಂಡಗಳ ಪಾಲಿಸಿದೆಯೇ?
ಮಾನದಂಡಗಳ ಪೈಕಿ 25 ರಿಂದ 55 ವರ್ಷದೊಳಗಿನ ಸದಸ್ಯರಿಗೆ ಆದ್ಯತೆ ನೀಡಬೇಕು ಮತ್ತು ಲಿಂಗ ವೈವಿಧ್ಯತೆಗಾಗಿ ಮಹಿಳಾ ಸದಸ್ಯರೂ ಒಳಗೊಂಡಿರಬೇಕು. ಆದರೆ 55 ವರ್ಷ ಮೀರಿದ ಹಲವು ಸದಸ್ಯರು ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ ಯಾವೊಬ್ಬ ಮಹಿಳಾ ಸದಸ್ಯರೂ ಈ ಸಮ್ಮೇಳನದಲ್ಲಿ ಭಾಗವಹಿಸಿಲ್ಲ. ಅಥವಾ ಭಾಗವಹಿಸಲು ನಿಯೋಜಿಸಿಲ್ಲ. ಹೀಗಾಗಿ ಶೃಂಗಸಭೆಯ ಮಾನದಂಡಗಳು ಕೇವಲ ಕಾಗದದಲ್ಲಿ ಮಾತ್ರ ಉಳಿದುಕೊಂಡಿದೆ.
ಸಮ್ಮೇಳನದಲ್ಲಿ ಭಾಗವಹಿಸಿರುವ ವಿಧಾನಸಭಾ ಸದಸ್ಯರಲ್ಲಿ 8 ಜನರ ಹೆಸರಿಗೆ ಒಟ್ಟು 1028640.00 ರುಪಾಯಿಗಳನ್ನು ನೋಂದಣಿ ಶುಲ್ಕ ಪಾವತಿಸಿದೆ. ಶಾಸಕರಾದ ಅರವಿಂದ ಚಂದ್ರಕಾಂತ್ ಬೆಲ್ಲದ್ , ಅಶೋಕ್ ಕುಮಾರ್ ರೈ, ಭೀಮಣ್ಣ ನಾಯಕ್, ಗುರುರಾಜ ಶೆಟ್ಟಿ, ಹಂಪನಗೌಡ ಬಾದರ್ಲಿ, ಶ್ರೀನಿವಾಸ ವಿ ಮಾನೆ, ಸುರೇಶ್‌ಬಾಬು ಸಿ ಬಿ, ಯಶವಂತ್ ರಾಯಗೌಡ ಪಾಟೀಲ್ ಅವರಿಗೆ ನೋಂದಣಿ ಶುಲ್ಕವನ್ನು ಪಾವತಿಸಿದೆ.

ಅದೇ ರೀತಿ ಇದೇ ಸಮ್ಮೇಳನಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸಚಿವಾಲಯವೂ ಸಹ 2025ರ ಸೆ.11ರಂದು ಮಾಹಿತಿ ಒದಗಿಸಿತ್ತು. ಖರ್ಚು ವೆಚ್ಚದ ಮಾಹಿತಿಯ ಕಡತವು ಇನ್ನೂ ಪರಿಶೀಲನೆ ಹಂತದಲ್ಲಿದೆ. ಹೀಗಾಗಿ ಪೂರ್ಣ ಮಾಹಿತಿ ಲಭ್ಯವಿಲ್ಲ. ಮಾಹಿತಿ ಲಭ್ಯತೆ ನಂತರ ಮಾಹಿತಿ ಒದಗಿಸಲಾಗುವುದು ಎಂದು ಹಿಂಬರಹ ನೀಡಲಾಗುವುದು ಎಂದು ಹೇಳಿದೆ.

ವಿಧಾನಸಭೆ ಮತ್ತು ವಿಧಾನ ಪರಿಷತ್ ಸಚಿವಾಲಯವು 2025ರ ಅಕ್ಟೋಬರ್ 31ರಂದು ನೀಡಿರುವ ಮಾಹಿತಿಯು, ಹಿಂದಿನ ಮಾಹಿತಿಯನ್ನೇ ಪುನರುಚ್ಛರಿಸಿದೆ. ಸದಸ್ಯರು ಇನ್ನೂ ಬಿಲ್ ಸಲ್ಲಿಸಿಲ್ಲ ಎಂದೇ ಹೇಳಿದೆ.

ಶಾಸಕರ ಭವನವು 2025ರ ಡಿಸೆಂಬರ್ 5ರಂದು ಉತ್ತರ ನೀಡಿತ್ತು. ಇದರ ಪ್ರಕಾರ ಸಮ್ಮೇಳನದಲ್ಲಿ ಭಾಗವಹಿಸಿದ್ದ 9 ಸದಸ್ಯರ ಪೈಕಿ 7 ಮಂದಿ ಮಾತ್ರ ಅಂತಿಮ ಬಿಲ್ ಸಲ್ಲಿಸಿದ್ದಾರೆ. ಅರವಿಂದ್ ಚಂದ್ರಕಾಂತ್ ಬೆಲ್ಲದ್ ಮತ್ತು ಮಾನೆ ಶ್ರೀನಿವಾಸ ಅವರು ಬಿಲ್ ಸಲ್ಲಿಸಿಲ್ಲ. ಸಮ್ಮೇಳನದಲ್ಲಿ ಭಾಗವಹಿಸಿದ್ದ ಎಲ್ಲಾ ಸದಸ್ಯರುಗಳ ಅಂತಿಮ ಬಿಲ್ಲನ್ನು ಒಂದೇ ಆದೇಶದಲ್ಲಿ ಪಾವತಿಸಬೇಕಾಗಿದೆ. ಹೀಗಾಗಿ ಪಾವತಿಯಾದ ನಂತರ ಮಾಹಿತಿ ಒದಗಿಸಲಾಗುವುದು ಎಂದು ಹೇಳಿದೆ.

ಉಳಿದಂತೆ ಸಮ್ಮೇಳನದಲ್ಲಿ ಹಾಜರಾತಿ ಅಂಶಗಳು, ಫೀಡ್ಬ್ಯಾಕ್ ಹಾಗೂ ಇತರೆ ಅಂಕಿ ಅಂಶಗಳನ್ನು ಒಳಗೊಂಡಂತೆ ಒಟ್ಟಾರೆ ಆದ ವೆಚ್ಚಗಳು ಲಭ್ಯವಿರುವುದಿಲ್ಲ ಎಂದು ಉತ್ತರಿಸಿದೆ.
ಪರಿಷತ್ ಸಚಿವಾಲಯವು ಸಹ 2025ರ ಡಿಸೆಂಬರ್ 10ರಂದು ನೀಡಿದ್ದ ಮಾಹಿತಿ ಪ್ರಕಾರ “ವಿಧಾನ ಪರಿಷತ್ತಿನ 07 ಜನ ಸದಸ್ಯರುಗಳು ಪ್ರವಾಸ ಕೈಗೊಂಡಿರುವುದಕ್ಕೆ ಸಂಬಂಧಿಸಿದಂತೆ ಮುಂಗಡ ಪ್ರವಾಸ/ದಿನಭತ್ಯೆ ಒಟ್ಟು ಮೊತ್ತ 1,16,62000/- ಗಳನ್ನು ಪಾವತಿಸಲಾಗಿದೆ,’ ಎಂದು ಮಾಹಿತಿ ಒದಗಿಸಿದೆ.
ಅಲ್ಲದೇ ಈ ಕಡತವು ಇನ್ನೂ ಚಾಲ್ತಿಯಲ್ಲಿದೆ. ಕಡತವು ಶಾಖೆಗೆ ಲಭ್ಯವಾದಲ್ಲಿ ಉಳಿದ ಮಾಹಿತಿಯನ್ನು ಪರಿಶೀಲಿಸಿ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು,’ ಎಂದು ಹಿಂದಿನ ಉತ್ತರವನ್ನೇ ಪುನರುಚ್ಛರಿಸಿದೆ. ವಿಶೇಷವೆಂದರೆ 60 ವರ್ಷ ಮೀರಿದ ಹಲವು ಪರಿಷತ್ ಸದಸ್ಯರು ಕೂಡ ಸಮ್ಮೇಳನದಲ್ಲಿ ಭಾಗವಹಿಸಿರುವುದು ಉತ್ತರದಿಂದ ಗೊತ್ತಾಗಿದೆ.
ಪಾರದರ್ಶಕತೆಯ ಕೊರತೆ
ಬೋಸ್ಟನ್ ನಗರದಲ್ಲಿ ನಡೆದಿದ್ದ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರುಗಳ ಖರ್ಚು ವೆಚ್ಚದ ಒಟ್ಟಾರೆ ಹೊಣೆಗಾರಿಕೆಯನ್ನು ಎರಡೂ ಸಚಿವಾಲಯವೂ ಸಮರ್ಥವಾಗಿ ನಿಭಾಯಿಸಿಲ್ಲ.ಇದು ಸಾರ್ವಜನಿಕ ಹಣವನ್ನು ವ್ಯಯಿಸಿದ ಪ್ರವಾಸಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಚಿವಾಲಯಗಳ ಧೋರಣೆಯಿಂದ ಕಂಡು ಬಂದಿದೆ.
ಹಾಗೆಯೇ ಬೋಸ್ಟನ್ ಶೃಂಗಸಭೆಯ ಆಯೋಜಕರಿಗೆ summit@ncsl.org ವಿಳಾಸದಲ್ಲಿ ಸದಸ್ಯರ ಪಾಲ್ಗೊಳ್ಳುವಿಕೆಯ ಮಾಹಿತಿಯನ್ನು ಕೋರಿ ಸಲ್ಲಿಸಿದ್ದ ಇಮೇಲ್‌ಗೆ, ವಿಳಾಸವು ಯಾವುದೇ ಸ್ವೀಕೃತಿಯನ್ನು ಹೊರಗಿನ ಇಮೇಲ್ ಗಳಿಂದ ಸ್ವೀಕರಿಸುವುದಿಲ್ಲ. ಇದು ಕೂಡ ಬೌನ್ಸ್ ಆಗಿದೆ. ಅಲ್ಲದೇ ವಾಸ್ತವಿಕವಾಗಿ ಆದ ಖರ್ಚುವೆಚ್ಚಗಳ ಮಾಹಿತಿ ತಿಂಗಳುಗಳು ಉರುಳಿದರೂ ಸಾರ್ವಜನಿಕರಿಗೆ ಲಭ್ಯವಾಗದಂತೆ ವಿಳಂಬ ನೀತಿ ಅನುಸರಿಸಿದೆ.









