ಬೆಂಗಳೂರು; ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿರುವ ಮತ್ತು ಅಂದಾಜು 2,500 ಕೋಟಿ ರು ಬೆಲೆಬಾಳುವ ಮಾಚೋಹಳ್ಳಿ ಅರಣ್ಯ ಭೂಮಿಯನ್ನು ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಆರ್ಥಿಕ, ಕಾನೂನು ಮತ್ತು ಖುದ್ದು ಅರಣ್ಯ ಇಲಾಖೆಯೇ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿಯೇ ಅಸಮ್ಮತಿ ವ್ಯಕ್ತಪಡಿಸಿತ್ತು ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.
ಮಾಚೋಹಳ್ಳಿ ಅರಣ್ಯ ಜಮೀನನ್ನು ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಿರುವ ಪ್ರಕರಣವು ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಈ ಪ್ರಕರಣದ ವಿಚಾರಣೆಯು 2026ರ ಏಪ್ರಿಲ್ 1ಕ್ಕೆ ನಿಗದಿಯಾಗಿದೆ. ಈ ಬೆಳವಣಿಗೆಯ ನಡುವೆಯೇ ಈ ಪ್ರಕರಣದಲ್ಲಿ ಮೂರು ಇಲಾಖೆಗಳ ಅಸಮ್ಮತಿ ವ್ಯಕ್ತಪಡಿಸಿದ್ದವು ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.
22 ಖಾಸಗಿ ಸಂಘ ಸಂಸ್ಥೆಗಳಿಗೆ ಅರಣ್ಯ ಜಮೀನನ್ನು ಮಂಜೂರು ಮಾಡಲು ಪಣ ತೊಟ್ಟಿದ್ದ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಕಂದಾಯ ಇಲಾಖೆಯು ಕಾನೂನು ಮತ್ತು ಅರಣ್ಯ ಇಲಾಖೆಯಿಂದ ಎರಡೆರಡು ಬಾರಿ ಅಭಿಪ್ರಾಯ ಪಡೆದಿತ್ತು. ಈ ಎರಡೂ ಇಲಾಖೆಗಳು ಮೊದಲ ಬಾರಿ ನೀಡಿದ್ದ ಅಭಿಪ್ರಾಯಕ್ಕೆ ಬದ್ಧವಾಗಿತ್ತಾದರೂ ತನ್ನ ನಿಲುವಿನಲ್ಲಿ ತುಸು ಸಡಿಲಿಸಿತ್ತು.
ಎರಡನೇ ಬಾರಿ ಅಭಿಪ್ರಾಯ ಪಡೆದಿದ್ದ ಸಂದರ್ಭದಲ್ಲಿ ಅರಣ್ಯ ಜಮೀನು ಬದಲಿಗೆ ಇದನ್ನು ಗೋಮಾಳ ಎಂದು ಹೇಳಲಾರಂಭಿಸಿತ್ತು. ನಂತರ ಗೋಮಾಳವನ್ನು ಗೋಮಾಳ ಶೀರ್ಷಿಕೆಯಿಂದಲೇ ತಗ್ಗಿಸಿ ಮಂಜೂರು ಮಾಡಲು ಸಚಿವ ಸಂಪುಟದ ಮುಂದೆ ಕಡತ ಮಂಡಿಸಿತ್ತು.
ಅರಣ್ಯ ಜಮೀನನ್ನು ಹಿಂದುಳಿದ ವರ್ಗಗಳಿಗೆ ಸೇರಿದ 22 ಖಾಸಗಿ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಕಂದಾಯ ಇಲಾಖೆಯು ಕೋರಿತ್ತು. ಇದಕ್ಕೆ ಕಾನೂನು, ಆರ್ಥಿಕ ಮತ್ತು ಅರಣ್ಯ ಇಲಾಖೆಯು 2016ರಲ್ಲಿಯೇ ಅಸಮ್ಮತಿ ವ್ಯಕ್ತಪಡಿಸಿದ್ದವು.
ಇದಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದ ರಹಸ್ಯ ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿ ಗ್ರಾಮದ ಸರ್ವೆ ನಂಬರ್ 81ರಲ್ಲಿನ ಜಮೀನನ್ನು ವಿವಿಧ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಿರುವ ಸರ್ಕಾರದ ಆದೇಶವನ್ನು ರದ್ದುಪಡಿಸಬೇಕು ಎಂದು ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ (ಸಂಖ್ಯೆ 3799/2018 ಪಿಐಎಲ್) ದಾಖಲಾಗಿದೆ. ಈ ಅರ್ಜಿ ಕುರಿತು ಕ್ರಮ ಕೈಗೊಳ್ಳಲು ಸಚಿವ ಸಂಪುಟದ ಮುಂದೆ ಬಾಕಿ ಇದೆ. ಹೀಗಾಗಿ ಅರ್ಜಿ ವಿಚಾರಣೆಯನ್ನು ಮುಂದೂಡಬೇಕು ಎಂಧು ರಾಜ್ಯದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅವರ ಕೋರಿದ್ದರು. ಹೀಗಾಗಿ ಈ ಅರ್ಜಿ ವಿಚಾರಣೆಯು 2026ರ ಏಪ್ರಿಲ್ 1ಕ್ಕೆ ಮುಂದೂಡಿಕೆಯಾಗಿದೆ.

ಕಂದಾಯ ಇಲಾಖೆಯಲ್ಲಿ ಲಭ್ಯವಿರುವ ಕೆಲವು ದಾಖಲೆಗಳನ್ನು ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿಗೆ 2025ರ ಜೂನ್ 10ರಂದೇ ದಾಖಲೆಗಳನ್ನು ಒದಗಿಸಿದೆ. ಇದರಲ್ಲಿ ಸಚಿವ ಸಂಪುಟಕ್ಕೆ ಕಳಿಸಿದ್ದ ಟಿಪ್ಪಣಿಯೂ ಸಹ ಒಳಗೊಂಡಿದೆ.

ಸಾರ್ವಜನಿಕ ಉದ್ದೇಶಗಳಿಗಾಗಿ ಒಟ್ಟು 28 ಎಕರೆ 20 ಗುಂಟೆಯನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರಡಿಯಲ್ಲಿ ಮೀಸಲಿರಿಸಿತ್ತು.

ಹಾಗೆಯೇ 22 ಖಾಸಗಿ ಸಂಘ ಸಂಸ್ಥೆಗಳು ಗುತ್ತಿಗೆ ಆಧಾರದ ಮೇಲೆ ಕೋರಿರುವ 20-40 ಎಕರೆ ಜಮೀನನ್ನು ಬಹುತೇಕ ಒಂದೇ ತೆರನಾದ ಉದ್ದೇಶಕ್ಕೆ ಅಂದರೇ ಶೈಕ್ಷಣಿಕ, ವಿದ್ಯಾರ್ಥಿ ನಿಲಯ, ಸಭಾ ಭವನ ಹಾಗೂ ಒಂದೆರಡು ಪ್ರಕರಣಗಳಲ್ಲಿ ಮಾತ್ರ ದೇವಸ್ಥಾನ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಕೋರಿದ್ದವು.



ಒಂದೇ ಪ್ರದೇಶದಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಇಷ್ಟೆಲ್ಲಾ ಖಾಸಗಿ ಸಂಸ್ಥೆಗಳಿಗೆ ಜಮೀನನ್ನು ನೀಡಿದರೇ ಅಂತಹ ಉದ್ದೇಶ ಸಫಲವಾಗುವುದಿಲ್ಲ. ಹಾಗೂ ನೀಡಲಾಗುವ ಸರ್ಕಾರಿ ಜಮೀನು ನಿರರ್ಥಕವಾಗುತ್ತದೆ ಎಂದು ಸಚಿವ ಸಂಪುಟ ಟಿಪ್ಪಣಿಯಲ್ಲಿಯೇ ವಿವರಿಸಿತ್ತು.

ಅಲ್ಲದೇ ಈ ಜಮೀನು ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಕೇವಲ 2 ಕಿ ಮೀ ವ್ಯಾಪ್ತಿಯಲ್ಲಿ ಬರಲಿದೆ. ಹೀಗಾಗಿ ಇಂತಹ ಜಮೀನನ್ನು ಖಾಸಗಿ ವ್ಯಕ್ತಿ, ಸಂಸ್ಥೆಗಳಿಗೆ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಮತ್ತು ಅದರಡಿ ರಚಿಸಿರುವ ನಿಯಮಗಳಡಿಯಲ್ಲಿ ಮಂಜೂರು ಮಾಡಲು ಅವಕಾಶವೇ ಇಲ್ಲ. ಹೀಗಾಗಿ 22 ಖಾಸಗಿ ಸಂಘ ಸಂಸ್ಥೆಗಳಿಗೆ ಅಸಾಧಾರಣ ಆದ್ಯತೆ ಪರಿಮಿತಿಯಲ್ಲಿ ಬರುತ್ತಿಲ್ಲ. ಅತ್ಯಂತ ಬೆಲೆಬಾಳುವ ಈ ಜಮೀನನ್ನು ಕೋರಿರುವಂತೆ ಗುತ್ತಿಗೆ ಆಧಾರದ ಮೇಲೆ ನೀಡುವುದು ಸಮಂಜಸವಲ್ಲ ಎಂದೂ ಇಲಾಖೆಗಳು ಅಭಿಪ್ರಾಯಿಸಿದ್ದವು.

ಪ್ರಸ್ತುತ ಬೆಂಗಳೂರು ನಗರದಲ್ಲಿ ಸುಮಾರು 1 ಲಕ್ಷ ದುರ್ಬಲ ವರ್ಗಕ್ಕೆ ಸೇರಿದ ಜನರು ವಸತಿ ರಹಿತರಾಗಿದ್ದಾರೆ. ಅವರಿಗೆ ವಸತಿಯನ್ನು ಕಲ್ಪಿಸಲು ಫ್ಲಾಟ್‌ಗಳನ್ನು ನಿರ್ಮಿಸುವ ಅವಶ್ಯಕತೆ ಇದೆ. ಆದ್ದರಿಂದ ಪ್ರಸ್ತಾವನೆಯಲ್ಲಿ ಒಳಗೊಂಡಿರುವ ಈ ಸಾರ್ವಜನಿಕ ಉದ್ದೇಶಗಳ ಜೊತೆಗೆ ಉಳಿದ ಜಮೀನನ್ನು ವಸತಿ ಉದ್ದೇಶಕ್ಕೆ ಮಂಜೂರು ಮಾಡುವುದಕ್ಕೆ ಪರಿಶೀಲಿಸಬಹುದು ಎಂದು ಅಭಿಪ್ರಾಯಿಸಿದ್ದವು.
ಅರ್ಥಿಕ ಇಲಾಖೆಯ ಅಭಿಪ್ರಾಯದಲ್ಲೇನಿತ್ತು?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು 2016ರ ನವೆಂಬರ್ 11ರಂದು ಅಭಿಪ್ರಾಯ (ಆಇ 661 ವೆಚ್ಚ-7/2016) ನೀಡಿತ್ತು. ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ‘ ಕಂದಾಯ ಇಲಾಖೆಯ ಸುತ್ತೋಲೆಯನ್ನು ಉಲ್ಲೇಖಿಸಿತ್ತು. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 18 ಕಿ ಮೀ ವ್ಯಾಪ್ತಿ ಎಂದು ನಿಗದಿಪಡಿಸಿದೆ. ಪ್ರಸ್ತಾವಿತ ಜಮೀನು ಬೆಂಗಳೂರು ಮಹಾಗರ ಪಾಲಿಕೆಯ ವ್ಯಾಪ್ತಿಯಿಂದ ಸುಮಾರು 2ರಿಂದ 3 ಕಿ ಮೀ ದೂರದಲ್ಲಿದೆ. ಆದ್ದರಿಂದ ಉಲ್ಲೇಖಿತ ಸುತ್ತೋಲೆ ಅನ್ವಯ ಈ ಜಮೀನಿನಲ್ಲಿ ಮಂಜೂರು ಮಾಡಲು ಅವಕಾಶವಿಲ್ಲ. ಅಲ್ಲದೇ 42 ಎಕರೆ ಜಮೀನು ಮಂಜೂರಾತಿಗೆ ಅರ್ಹವಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು.

ಅಲ್ಲದೇ ಈ ಜಮೀನುಗಳು ಅತ್ಯಂತ ಹೆಚ್ಚಿನ ಬೆಲೆಬಾಳಲಿದೆ. ಈ ಸಂಸ್ಥೆಗಳು ಜಮೀನನ್ನು ಕೃಷಿಯೇತರ ಚಟುವಟಿಕೆಗಳಿಗೆ ಮಾತ್ರ ಬಳಸಲು ಸಾಧ್ಯ. ಆದ್ದರಿಂದ ಈ ಜಮೀನಿನ ಬೆಲೆ ನಿರ್ಧರಿಸುವಾಗ ಕೃಷಿ ಜಮೀನಿನ ಬೆಲೆಯನ್ನು ಗಣನೆಗೆ ತೆಗೆದುಕೊಳ್ಳದೇ ಕೃಷಿಯೇತರ ಜಮೀನಿನ ಬೆಲೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಮಾಚೋಹಳ್ಳಿಗೆ ಸಂಬಂಧಿಸಿದಂತೆ ಕೃಷಿಯೇತರ ಜಮೀನಿನ ಬೆಲೆಗಳನ್ನು ಅಂದಾಜಿಸಿದಲ್ಲಿ ಪ್ರತಿ ಚದರ ಮೀಟರ್‍ಗೆ ಸರಾಸರಿ 20,000 ರು ಇದೆ. ಒಂದು ಎಕರೆಗೆ 8 ಕೋಟಿ ರು ಅಗಲಿದೆ ಎಂದು ಹೇಳಿತ್ತು.
2016ರಲ್ಲೇ 340 ಕೋಟಿ ಬೆಲೆ
ಅಲ್ಲದೇ ಪ್ರಸ್ತಾವತಿ 69 ಎಕರೆ ಜಮೀನಿನ ಪೈಕಿ 42 ಎಕರೆ ಜಮೀನಿನ ಬೆಲೆಯು ಅಂದಾಜು 340 ಕೋಟಿ ರು ಆಗಲಿದೆ ಎಂದು 2016ರಲ್ಲೇ ಅಂದಾಜಿಸಿತ್ತು. ಹಾಗೆಯೇ ಒಂದೊಮ್ಮೆ ಖಾಸಗಿ ಸಂಘ ಸಂಸ್ಥೆಗಳಿಗೆ ಹಂಚಿಕೆ ಮಾಡಿದಲ್ಲಿ ಇದರಿಂದ 340 ಕೋಟಿ ರು ಆದಾಯವನ್ನು ಬಿಟ್ಟುಕೊಡಬೇಕಾಗುತ್ತದೆ ಎಂದೂ ಎಚ್ಚರಿಸಿತ್ತು.

ಇಂತಹ ಬೆಲೆ ಬಾಳುವ ಜಮೀನನ್ನು ಸಾರ್ವಜನಿಕ ಚಟುವಟಿಕೆಗಳ ಬಳಕೆಗೆ ಮಾತ್ರ ಮೀಸಲಿಡಬೇಕು. ಅಥವಾ ಒಂದು ವೇಳೆ ವಿಲೇವಾರಿ ಮಾಡಲೇಬೇಕಾದಲ್ಲಿ ಎಲ್ಲಾ ಸಾರ್ವಜನಿಕ ಚಟುವಟಿಕೆಗಳಿಗೆ ಮೀಸಲಿರಿಸಿದ ನಂತರ ಅದನ್ನು ಪಾರದರ್ಶಕ ಹರಾಜು ಪ್ರಕ್ರಿಯೆ ಮೂಲಕವೇ ವಿಲೇಗೊಳಿಸಿದರೆ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರಲಿದೆ. ಆರ್ಥಿಕ ಕೊರತೆಯನ್ನು ನೀಗಿಸಲು ಹಾಗೂ ಹೆಚ್ಚುವರಿ ವೆಚ್ಚಗಳನ್ನು ಸರಿದೂಗಿಸಲು ಇಂತಹ ಹೆಚ್ಚುವರಿ ಸರ್ಕಾರಿ ಜಮೀನನ್ನು ಸರ್ಕಾರಕ್ಕೆ ಆದಾಯ ಬರುವಂತಹ ನಿಟ್ಟಿನಲ್ಲಿ ವಿಲೇವಾರಿ ಮಾಡುವುದು ಸೂಕ್ತ ಎಂದು ಆರ್ಥಿಕ ಇಲಾಖೆಯು ತನ್ನ ಅಭಿಪ್ರಾಯದಲ್ಲಿ ಸ್ಪಷ್ಟವಾಗಿ ಹೇಳಿತ್ತು.

‘ಆದ್ದರಿಂದ ಈ ಅಂಶಗಳ ಹಿನ್ನೆಲೆಯಲ್ಲಿ ಮಾಚೋಹಳ್ಳಿಯಲ್ಲಿ ಲಭ್ಯವಿರುವ ಈ ಬೆಲೆಬಾಳುವಂತಹ 42 ಎಕರೆ ಜಮೀನನ್ನು ಖಾಸಗಿಯವರಿಗೆ ಹಂಚಿಕೆ ಮಾಡಿದಲ್ಲಿ ಸುಮಾರು 340 ಕೋಟಿ ರು.ಗಳಷ್ಟು ಆದಾಯವನ್ನು ಬಿಟ್ಟುಕೊಡಬೇಕಾಗಿರುವುದರಿಂದ ಆಡಳಿತ ಇಲಾಖೆಯ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಸಹಮತಿಸುತ್ತಿಲ್ಲ,’ ಎಂದು ಹೇಳಿತ್ತು.

ಕಾನೂನು ಇಲಾಖೆ ಅಭಿಪ್ರಾಯದಲ್ಲೇನಿದೆ?
ಸರ್ವೇ ನಂಬರ್ 81ರಲ್ಲಿನ 96 ಎಕರೆ 12 ಗುಂಟೆ ಜಮೀಣು ಸರ್ಕಾರದ ಜಮೀನಾಗಿದೆ. ಇದನ್ನು ಅರಣ್ಯ ಪ್ರದೇಶವೆಂದು ಘೋಷಿಸಲಾಗಿದೆ. ಅರಣ್ಯ ಇಲಾಖೆಯು ಸಹ 2016ರ ಸೆ.21ರಂದು ಇದನ್ನು ಕಾಯ್ದಿಟ್ಟ ಅರಣ್ಯ ಪ್ರದೇಶವೆಂದು ಅಧಿಸೂಚನೆಯನ್ನೂ ಸಹ ಹೊರಡಿಸಿದೆ. ಕಡತದಲ್ಲಿರುವ ಪ್ರಕಾರ (ಅಧಿಸೂಚನೆ ಸಂಖ್ಯೆ ಸಂಖ್ಯೆ ಜಿ 10407 ಎಫ್‌ಡಿ-ಎಫ್-153-95 ದಿನಾಂಕ 29-05-1986 ಮತ್ತು ಅಧಿಸೂಚನೆ ಸಂಖ್ಯೆ 10407-ಎಫ್‌ಟಿ-ಎಫ್ 15-19000 ದಿನಾಂಕ 07-01-1901ರಂತೆ ) ಅರಣ್ಯ ಪ್ರದೇಶವಾಗಿದೆ ಎಂದು ಘೋಷಿಸಲ್ಪಟ್ಟಿದೆ. ಕಂದಾಯ ದಾಖಲೆಗಳಲ್ಲಿಯೂ ಸಹ ಈ ಜಮೀನು ಸರ್ಕಾರದ ಜಮೀನು ಎಂದು ದಾಖಲಾಗಿದೆ ಎಂಬ ಅಂಶವನ್ನು ತನ್ನ ಅಭಿಪ್ರಾಯದಲ್ಲಿ ಗಮನಸೆಳೆದಿತ್ತು.
ಈ ಜಮೀನನ್ನು ಈ ಮೊದಲು ಅಡಿವೆಪ್ಪ ಚಾರಿಟಬಲ್ ಟ್ರಸ್ಟ್‌ಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿತ್ತು. ಈ ಸಂಸ್ಥೆಯವರು ಈ ಜಮೀನು ತಮಗೆ ಮಂಜೂರಾಗಿದೆ ಎಂದು ಅಕ್ರಮವಾಗಿ ದಾಖಲಾತಿಗಳನ್ನು ತೋರಿಸಿಕೊಂಡು ಜಮೀನಿನ ಸ್ವಾಧೀನದಲ್ಲಿ ಮುಂದುವರೆದಿತ್ತು. ಈ ಕುರಿತು ವಿಶೇಷ ಜಿಲ್ಲಾಧಿಕಾರಿಗಳ ನ್ಯಾಯಾಲಯವು (ಪ್ರಕರಣ ಸಂಖ್ಯೆ; ಆರ್‍ಆರ್‍ಟಿ(2) (ಎನ್) ಸಿಆರ್ 09/08/-09) ವಿಚಾರಣೆ ನಡೆಸಿತ್ತು.
ಈ ಕುರಿತು 2009ರ ಡಿಸೆಂಬರ್ 1ರಂದು ನೀಡಿದ್ದ ಆದೇಶದ ಪ್ರಕಾರ ಅಕ್ರಮ ನಮೂದುಗಳನ್ನು ರದ್ದುಪಡಿಸಿತ್ತು. ಕಂದಾಯ ದಾಖಲೆಗಳಲ್ಲಿ ಸರ್ಕಾರದ ಹೆಸರನ್ನು ದಾಖಲಿಸಿತ್ತು. ಅದೇ ರೀತಿ ಇದೇ ಜಮೀನಿನಲ್ಲಿ ಅನಧಿಕೃತವಾಗಿ ಕಟ್ಟುತ್ತಿದ್ದ ಕಟ್ಟಡವನ್ನು 2015ರ ಮೇ 23ರಂದು ತೆರವುಗೊಳಿಸಿತ್ತು. ಮತ್ತು ಈ ಜಮೀನಿನ ಭೌತಿಕ ಸ್ವಾಧೀನವನ್ನು ಸರ್ಕಾರದ ವಶಕ್ಕೆ ಪಡೆದಿತ್ತು ಎಂದು ಸಚಿವ ಸಂಪುಟದ ರಹಸ್ಯ ಹಾಳೆಗಳಿಂದ ತಿಳಿದು ಬಂದಿದೆ.

ಹಾಗೆಯೇ ಸರ್ಕಾರದ ಅಧಿಸೂಚನೆ (ಸಂಖ್ಯೆ ಆರ್‍ಡಿ 9 ಎಲ್‌ಜಿಪಿ 2015 ದಿನಾಂಕದ 09-06-2015)ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳ ನಿಯಮ 22 (22)ನ್ನು ತಿದ್ದುಪಡಿ ಮೂಲಕ ಸೇರ್ಪಡೆ ಮಾಡಿತ್ತು. ಈ ನಿಯಮದ ಪ್ರಕಾರ ನಗರಸಭೆ ಮಿತಿಯಲ್ಲಿರುವ ಸರ್ಕಾರದ ಯಾವುದೇ ಜಮೀನನ್ನು ಯಾವುದೇ ವ್ಯಕ್ತಿ ಅಥವಾ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಬಾರದು ಮತ್ತು ಈ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕೆ ಮಾತ್ರ ಮೀಸಲಿಡಬೇಕು ಎಂದು ಉಲ್ಲೇಖಿಸಿತ್ತು. ಹೀಗಾಗಿ ಜಮೀನು ಘೋಷಿತ ಅರಣ್ಯ ಪ್ರದೇಶವಾಗಿದ್ದು ನಗರ ಸಭೆಯ ಮಿತಿಯಲ್ಲಿರುವ ಕಾರಣ ಯಾವುದೇ ವ್ಯಕ್ತಿ ಅಥವಾ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಅವಕಾಶವಿಲ್ಲವೆಂದು ಅಭಿಪ್ರಾಯಪಟ್ಟಿತ್ತು.
ಅರಣ್ಯ ಇಲಾಖೆಯಿಂದಲೂ ಅಸಮ್ಮತಿ
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯೊಡನೆಯೂ ಕಂದಾಯ ಇಲಾಖೆಯು (ಟಿಪ್ಪಣಿ ಸಂಖ್ಯೆ; ಅಪಜೀ 113 ಎಫ್‌ಜಿಎಲ್ 2016 2016 ದಿನಾಂಕ 11-11-2016) ಎರಡು ಬಾರಿ ಸಮಾಲೋಚಿಸಿತ್ತು.

ಮೊದಲ ಸಮಾಲೋಚನೆಯಲ್ಲೇನಿತ್ತು?
ಮಾಚೋಹಳ್ಳಿ ಸರ್ವೆ ನಂಬರ್ 81, ಮಾಚೋಹಳ್ಳಿ ಪ್ಲಾಂಟೇಷನ್‌ನ ಭಾಗವಾಗಿದೆ. ಸರ್ಕಾರದ ಅಧಿಸೂಚನೆ (ನಂ 2457-53-33-2 ದಿನಾಂಕ 16 ಅಕ್ಟೋಬರ್ 1933) ಪ್ರಕಾರ ಮಾಚೋಹಳ್ಳಿ ‘ಎ’ ಪ್ಲಾಂಟೇಷನ್ ಮತ್ತು ಮಾಚೋಹಳ್ಳಿ ಪ್ಲಾಂಟೇಷನ್ ಬ್ಲಾಕ್‌ಗಳನ್ನು (ಅಧಿಸೂಚನೆ ಸಂಖ್ಯೆ; 10407-ಎಫ್‌ಟಿ 153-95 ದಿನಾಂಕ 29ನೇ 1896) ಪ್ಲಾಂಟೇಷನ್ ಎಂದು ಅಧಿಸೂಚಿಸಿದೆ.

ಇದಾದ ನಂತರ ಮೈಸೂರು ಅರಣ್ಯ ಅಧಿನಿಯಮ 1900 1901ರ ಜನವರಿ 7ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ರಾಜ್ಯ ಅರಣ್ಯಗಳೆಂದು ಘೋಷಿಸಿತ್ತು. ಮೈಸೂರು ಅರಣ್ಯ ಅಧಿನಿಯಮ ಅಡಿಯಲ್ಲಿ ಘೋಷಿಸಲ್ಪಟ್ಟ ರಾಜ್ಯ ಅರಣ್ಯಗಳೆಂಧು ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 23ರಂತೆ ಮೀಸಲು ಅರಣ್ಯಗಳ ದರ್ಜೆಯನ್ನು ಪಡೆದಿದೆ ಎಂದು ಅರಣ್ಯ ಇಲಾಖೆಯು ವಿವರಿಸಿತ್ತು.
ಅಲ್ಲದೇ 1933ರಲ್ಲಿ ಮಾಚೋಹಳ್ಳಿ ಎ ಪ್ಲಾಂಟೇಷನ್ 233 ಎಕರೆ 18 ಗುಂಟೆ ಬ್ಲಾಕ್‌ನ್ನು ಅರಣ್ಯೀಕರಣದಿಂದ ಹೊರತುಪಡಿಸಿದೆ. ಆದರೆ ಈ ಅಧಿಸೂಚನೆಯಲ್ಲಿ ಮಾಚೋಹಳ್ಳಿ ಬ್ಲಾಕ್ 145 ಎಕರೆ 12 ಗುಂಟೆ ಇದೆ. ಇದು ಅಬಾಧಿತವಾಗಿ ಮುಂದುವರೆದಿದೆ ಎಂದು ತಿಳಿಸಿದೆ ಎಂಬ ಅಂಶವನ್ನು ತನ್ನ ಅಭಿಪ್ರಾಯದಲ್ಲಿ ಉಲ್ಲೇಖಿಸಿತ್ತು.
ಕಂದಾಯ ಇಲಾಖೆಯು ಈಗ ವಿವಿಧ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಹೊರಟಿರುವ 96 ಎಕರೆ 12 ಗುಂಟೆ ವಿಸ್ತೀರ್ಣವು ಮಾಚೋಹಳ್ಳಿ ಪ್ಲಾಂಟೇಷನ್ ಭಾಗವಾಗಿದೆ. ಇಂದಿಗೂ ಅದರ ಕಾನೂನಾತ್ಮಕ ಸ್ಥಾನವು ಸಹ ಮೀಸಲು ಅರಣ್ಯವಾಗಿದೆ. ಶಾಸನಾತ್ಮಕವಾಗಿಯೂ ಮೀಸಲು ಅರಣ್ಯವಾಗಿಯೇ ಮುಂದುವರೆಯುತ್ತಿದೆ. ಆದ್ದರಿಂದ ಅದನ್ನು ವಿವಿಧ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಕೇಂದ್ರ ಸರ್ಕಾರದ ಅರಣ್ಯ ಮತ್‌ತು ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದ ಪೂರ್ವಾನುಮತಿ ಅವಶ್ಯಕತೆ ಇದೆ ಎಂದು ಹೇಳಿತ್ತು.
ಹಾಗೆಯೇ ಬೆಂಗಳೂರು ಉತ್ತರ ಭಾಗದಲ್ಲಿ ಹಸಿರು ತಾಣಗಳ ಅವಶ್ಯಕತೆಯಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಅರಣ್ಯವೆಂದು ಮುಂದುವರೆಸಿಕೊಂಡು ಹೋಗುವುದು ಸೂಕ್ತವಾಗಿದೆ. ಅರಣ್ಯ ಇಲಾಖೆಯು ಸಾರ್ವಜನಿಕ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ನಗರದಲ್ಲಿರುವ ಅರಣ್ಯಗಳನ್ನು ನಗರವನಗಳನ್ನಾಗಿ ಪರಿವರ್ತಿಸುತ್ತಿದೆ. ಈ ಅರಣ್ಯವನ್ನೂ ಕೂಡ ನಗರ ವನವನ್ನಾಗಿ ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆಯು ಸಿದ್ಧವಿದೆ. ಹೀಗಾಗಿ ಕಂದಾಯ ಇಲಾಖೆಯ ಪ್ರಸ್ತಾವನೆಗೆ ಅರಣ್ಯ ಇಲಾಖೆಯ ಸಹಮತಿ ಇರುವುದಿಲ್ಲ ಎಂದು ತಿಳಿಸಿತ್ತು.
ಎರಡನೇ ಸಮಾಲೋಚನೆಯಲ್ಲೇನಿದೆ?
ಇದಾದ ನಂತರ ಕಂದಾಯ ಇಲಾಖೆಯು ಅರಣ್ಯ ಇಲಾಖೆಯೊಂದಿಗೆ ಎರಡನೇ ಸಲವೂ ಸಮಾಲೋಚಿಸಿತ್ತು. 2017ರ ಜನವರಿ 17ರಂದು ಅಭಿಪ್ರಾಯ ನೀಡಿತ್ತು. ಈ ಜಮೀನನ್ನು 1964ರಲ್ಲಿ ಅರಣ್ಯ ಇಲಾಖೆಯಿಂದ ಬಿಡುಗಡೆಗೊಳಿಸಿ ಕಂದಾಯ ಇಲಾಖೆಗೆ ಬಿಡುಗಡೆಗೊಳಿಸಿ ಒಪ್ಪಿಸಿತ್ತು. ಇದನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತಹಶೀಲ್ದಾರ್ ಗೆ ಹಸ್ತಾಂತರಿಸಿತ್ತು. ಹೀಗಾಗಿ ಕಂದಾಯ ಇಲಾಖೆಯು ಪ್ರಸ್ತಾವಿಸಿರುವ ಉದ್ದೇಶಕ್ಕೆ ಜಮೀನನ್ನು ಉಪಯೋಗಿಸಿಕೊಳ್ಳಲು ಕಂದಾಯ ಇಲಾಖೆಯಿಂದಲೇ ನಿಯಮಾನುಸಾರ ಸೂಕ್ತ ತೀರ್ಮಾನ ಕೈಗೊಳ್ಳಬಹುದು ಎಂದು ಅಭಿಪ್ರಾಯಿಸಿತ್ತು.
ಹಾಗೆಯೇ ಕಂದಾಯ ಇಲಾಖೆಯು ಕಾನೂನು ಇಲಾಖೆಯಿಂದಲೂ ಎರಡನೇ ಬಾರಿ ಅಭಿಪ್ರಾಯ ಪಡೆದಿತ್ತು.

ಕಾನೂನು ಇಲಾಖೆಯು 2017ರ ಜನವರಿ 23ರಂದು ತನ್ನ ಅಭಿಪ್ರಾಯ ನೀಡಿತ್ತು. ಪ್ರಸ್ತಾವಿತ ಜಮೀನು ಅರಣ್ಯ ಇಲಾಖೆಯಿಂದ ಬಿಡುಗಡೆಗೊಳಿಸಿ ಕಂದಾಯ ಇಲಾಖೆಗೆ ಒಪ್ಪಿಸಿರುವುದನ್ನು ಕಾನೂನು ಇಲಾಖೆಯು ಗಮನಿಸಿತ್ತು. ಹಾಲಿ ಜಮೀನು ಗೋಮಾಳ ಜಮೀನು ಎಂದು ಹೇಳಲಾಗಿದೆ. ಭೂ ಕಂದಾಯ ಕಾಯ್ದೆ ಅನ್ವಯ ಯಾವುದೇ ಗೋಮಾಳ ಜಮೀನನ್ನು ಸಂಬಂಧಪಟ್ಟ ಗ್ರಾಮದ ಜಾನುವಾರುಗಳ, ರಾಸುಗಳ ಅನುಪಾತಕ್ಕೆ ಅನುಗುಣವಾಗಿ ನಿರ್ವಹಿಸಬೇಕು ಎಂದು ಹೇಳಿರುವುದನ್ನು ತನ್ನ ಎರಡನೇ ಅಭಿಪ್ರಾಯದಲ್ಲಿ ಉಲ್ಲೇಖಿಸಿದೆ.
ಗೋಮಾಳ ಜಮೀನನ್ನು ಗೋಮಾಳ ಶೀರ್ಷಿಕೆಯಿಂದ ತಗ್ಗಿಸದೇ ಯಾವುದೇ ಉದ್ದೇಶಕ್ಕಾದರೂ ಮಂಜೂರು ಮಾಡಲು ಅವಕಾಶವಿಲ್ಲ. ಭೂ ಕಂದಾಯ ಕಾಯ್ದೆ ಕಲಂ 97 (2) ಅನ್ವಯ ಸಂಬಂಧಪಟ್ಟ ಗ್ರಾಮದಲ್ಲಿ ಅರಣ್ಯಪ್ರದೇಶವಿದ್ದಲ್ಲಿ ಅಥವಾ ಇದಕ್ಕೆ ಹೊಂದಿಕೊಂಡಿರುವ ಗ್ರಾಮದಲ್ಲಿ ಜಾನುವಾರುಗಳು ಮೇಯಲು ಅರಣ್ಯ ಪ್ರದೇಶವು ಲಭ್ಯವಿದ್ದಲ್ಲಿ ಮಾತ್ರ ಗೋಮಾಳ ಜಮೀನನ್ನು ಆ ಶೀರ್ಷಿಕೆಯಿಂದ ತಗ್ಗಿಸಿ ಮಂಜೂರು ಮಾಡಲು ಅವಕಾಶವಿದೆ.
ಪ್ರಸ್ತುತ ಆಡಳಿತ ಇಲಾಖೆಯು ಈ ಜಮೀನನ್ನು ಖಾಸಗಿ ಸಂಘ ಸಂಸ್ಥೆಗಳಿಗೆ ಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡಲು ಉದ್ದೇಶಿಸಿದೆ. ಇಂತಹ ಪ್ರಸ್ತಾವನೆಗೆ ನಿಯಮಗಳಲ್ಲಿ ಅವಕಾಶವಿಲ್ಲ. ಆದ್ದರಿಂದ ಆಡಳಿತ ಇಲಾಖೆಯು ಮೊದಲು ಜಾನುವಾರುಗಳು ಮೇಯಲು ಅರಣ್ಯ ಪ್ರದೇಶ ಲಭ್ಯವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಂತರ ಆರ್ಥಿಕ ಇಲಾಖೆಯ ಅಭಿಪ್ರಾಯದಂತೆ ಕ್ರಮ ವಹಿಸಬಹುದು ಎಂದು ಎರಡನೇ ಬಾರಿ ನೀಡಿದ್ದ ಅಭಿಪ್ರಾಯದಲ್ಲಿಯೂ ಸ್ಪಷ್ಟವಾಗಿ ಹೇಳಿತ್ತು.
ಇದಾದ ನಂತರ ಕಂದಾಯ ಇಲಾಖೆಯು ಬೆಂಗಳೂರು ನಗರ ಜಿಲ್ಲಾಧಿಕಾರಿಯಿಂದಲೂ ವರದಿ ತರಿಸಿಕೊಂಡಿತ್ತು.

2017ರ ಫೆ.2ರಂದು ವರದಿ ನೀಡಿದ್ದ ಜಿಲ್ಲಾಧಿಕಾರಿಯವರು ಮಾಚೋಹಳ್ಳಿ ಗ್ರಾಮದ ಅಕ್ಕ ಪಕ್ಕ ಗ್ರಾಮಗಳಾದ ಕಾಚೋಹಳ್ಳಿ, ಕೊಡಿಗೇಹಳ್ಳಿ, ಸೀಗೇಹಳ್ಳಿ, ಬೈಲುಕೊನೇನಹಳ್ಳಿ, ಬೈಯಂಡಹಳ್ಳಿ ಗ್ರಾಮಗಳಲ್ಲಿ ಯಾವುದೇ ಅರಣ್ಯ ಪ್ರದೇಶವಿಲ್ಲ ಎಂದು ವಿವರಿಸಿದ್ದರು. ಅಲ್ಲದೇ ಬೆಂಗಳೂರು ಉತ್ತರ ತಾಲೂಕು ಪಶು ವೈದ್ಯಾಧಿಕಾರಿಗಳು ನೀಡಿದ್ದ ವರದಿಯಂತೆ ಜಾನುವಾರ ಗಣತಿ 2012ರ ಪ್ರಕಾರ ಮಾಚೋಹಳ್ಳಿ ಗ್ರಾಮದಲ್ಲಿ 7599, ಕಾಚೋಹಳ್ಳಿ ಗ್ರಾಮದಲ್ಲಿ 757, ಬೈಲುಕೊನೇನಹಳ್ಳಿಯಲ್ಲಿ 231, ಬೈಯಂಡಹಳ್ಳಿಯಲ್ಲಿ 180 ರಾಸುಗಳಿದ್ದವು.
ಈ ಗ್ರಾಮಗಳಲ್ಲಿ ಸ್ಥಳೀಯವಾಗಿ ಜಾನುವಾರುಗಳನ್ನು ಹಲವು ವರ್ಷಗಳಿಂದಲೂ ಸ್ವಂತ ಹಿಡುವಳಿ ಪ್ರದೇಶಗಳಲ್ಲಿ ಪೋಷಣೆ ಮಾಡಲಾಗುತ್ತಿದೆ. ಗೋಮಾಳ ಜಮೀನುಗಳ ಮೇಲೆ ಅವಲಂಬಿತವಾಗಿರುವುದಿಲ್ಲ. ಜಾನುವಾರುಗಳಿಗೆ ಸ್ವಂತ ಜಮೀನುಗಳಲ್ಲಿ ಸಾಕಷ್ಟು ಹುಲ್ಲು ಹಾಗೂ ಮೇವು ಇದೆ. ಸ್ವಂತ ಜಮೀನುಗಳಲ್ಲೇ ಮೇವು ಬೆಳೆದು ಜಾನುವಾರುಗಳನ್ನು ಪೋಷಿಸುತ್ತಿದ್ದಾರೆ. ಮತ್ತು ಇವುಗಳನ್ನು ಹೊರಗಡೆ ಆಹಾರಕ್ಕಾಗಿ ಮೇಯಲು ಬಿಡುವುದಿಲ್ಲ. ಮೇಲಾಗಿ ಮಾಚೋಹಳ್ಳಿ ಗ್ರಾಮವು ಬಿಬಿಎಂಪಿ ವ್ಯಾಪ್ತಿಗೆ 3 ಕಿ ಮೀ ಅಂತರದಲ್ಲಿದೆ. ಹೀಗಾಗಿ ಭೂಮಿಯು ತ್ವರಿತವಾಗಿ ಸುತ್ತಮುತ್ತಲೂ ಅಭಿವೃದ್ಧಿ ಹೊಂದಿರುತ್ತದೆ ಎಂದು ವರದಿಯಲ್ಲಿ ವಿವರಿಸಿದ್ದರು.
4 ಆಯ್ಕೆಗಳ ಬಾಗಿಲು ತೆರೆದಿದ್ದ ಕಂದಾಯ ಇಲಾಖೆ
ಎರಡೆರಡು ಬಾರಿ ಅಭಿಪ್ರಾಯ ಪಡೆದಿದ್ದ ಕಂದಾಯ ಇಲಾಖೆಯು ಸಚಿವ ಸಂಪುಟಕ್ಕೆ 4 ಆಯ್ಕೆಗಳ ಬಾಗಿಲನ್ನು ತೆರೆದಿತ್ತು. ಪ್ರಸ್ತಾವಿತ ಜಮೀನುಗಳನ್ನು ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ ಸಾರ್ವಜನಿಕ ಉದ್ದೇಶಗಳ ಹೆಸರಿನಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 71ರಡಿಯಲ್ಲಿ ಕಾಯ್ದಿರಿಸುವ ಆಯ್ಕೆಯನ್ನು ಮುಂದಿಟ್ಟಿತ್ತು. ಅದೇ ರೀತಿ ಸರ್ಕಾರದ ಆರ್ಥಿಕ ಹಿತದೃಷ್ಟಿಯಿಂದ ಜಮೀನುಗಳನ್ನು ಸಾರ್ವಜನಿಕ ಹರಾಜು ಮೂಲಕ ವಿಲೇ ಮಾಡಬಹುದು ಎಂದು ದಾರಿ ತೋರಿಸಿತ್ತು.

ಹಾಗೆಯೇ ಬೆಂಗಳೂರು ನಗರದ ದುರ್ಬಲ ವರ್ಗಕ್ಕೆ ಸೇರಿದ ವಸತಿ ರಹಿತ ಜನರಿಗೆ ವಸತಿ ಸೌಕರ್ಯ ಕಲ್ಪಿಸಲು ಸರ್ವೆ ನಂಬರ್ 81ರಲ್ಲಿನ ಜಮೀನಿನ ಪೈಕಿ 20-40 ಎಕರೆ ಜಮೀನನ್ನು ವಸತಿ ಇಲಾಖೆಗೆ ಮಂಜೂರು ಮಾಡಲು ಸಹ ಸಲಹೆ ನೀಡಿತ್ತು.

ಕಡೆಯದಾಗಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22 ಮತ್ತು ನಿಯಮ 22 ಎ(1)(1)ರ ಕ್ರಮ ಸಂಖ್ಯೆ 02ರ ಪ್ರಕಾರ ಪ್ರಚಲಿತ ಕೃಷಿಯೇತರ ಜಮೀನಿಗೆ ಮಾರುಕಟ್ಟೆ ದರದ ಶೇ.10ರಷ್ಟು ವಾರ್ಷಿಕ ಗುತ್ತಿಗೆ ದರ ನಿಗದಿಪಡಿಸಿ ಪ್ರತಿ 2 ವರ್ಷಗಳಿಗೊಮ್ಮೆ ಶೇ.8ರಷ್ಟು ಗುತ್ತಿಗೆ ದರ ಹೆಚ್ಚಿಸುವ ಷರತ್ತುಗಳಿಗೆ ಒಳಪಡಿಸಿ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಬಹುದು ಎಂದು ಕಂದಾಯ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ಇ ವಿ ರಮಣರೆಡ್ಡಿ ಅವರು ಸಲಹೆ ನೀಡಿದ್ದರು.









