ಒಂದು ನಿಮಿಷ ತಡವಾದರೂ ಅರ್ಧ ದಿನದ ವೇತನ ಕಡಿತ; ಡೇಟಾ ಎಂಟ್ರಿ ಆಪರೇಟರ್‍‌ಗಳಿಗೆ ಶೋಷಣೆ?

ಬೆಂಗಳೂರು;  ಮುಖ್ಯಮಂತ್ರಿ ಸಚಿವಾಲಯವೂ ಸೇರಿದಂತೆ ಸಚಿವಾಲಯದ ಇತರೆ  ಕಚೇರಿಗಳಲ್ಲಿ ಹೊರಗುತ್ತಿಗೆಯಡಿಯಲ್ಲಿ  ಕಾರ್ಯನಿರ್ವಹಿಸುತ್ತಿರುವ ಡೇಟಾ ಎಂಟ್ರಿ ಆಪರೇಟರ್‍‌ಗಳು ಕರ್ತವ್ಯಕ್ಕೆ  ಒಂದು ನಿಮಿಷ ತಡವಾಗಿ ಹಾಜರಾದರೇ  ಹಾಜರಾತಿಯನ್ನು  ಅರ್ಧ ದಿನಕ್ಕೆ ಕಡಿತಗೊಳಿಸಲಿದೆ.

 

ಹೊರಗುತ್ತಿಗೆ ನೌಕರರ ಹಿತ ಕಾಯಲು ಈಚೆಗಷ್ಟೇ ವಿಧೇಯಕ ಮಂಡಿಸಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ಹೊರಗುತ್ತಿಗೆ ನೌಕರರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೀಗ  ಸಚಿವಾಲಯದ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡೇಟಾ ಎಂಟ್ರಿ ಆಪರೇಟರ್‍‌ಗಳು ಒಂದು ನಿಮಿಷ ತಡವಾದರೇ ಅರ್ಧ ದಿನ ವೇತನವನ್ನೇ ಕಿತ್ತುಕೊಳ್ಳಲು ಹೊರಟಿದೆ.

 

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಇ ಆಡಳಿತ ವಿಭಾಗವು 2026ರ ಜನವರಿ 1ರಂದು  ಹೊರಡಿಸಿರುವ ಈ ಸುತ್ತೋಲೆಯು ಡೇಟಾ ಎಂಟ್ರಿ ಆಪರೇಟರ್‍‌ಗಳ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಿದೆ.

 

ಇ ಆಡಳಿತವು ಹೊರಡಿಸಿರುವ ಸುತ್ತೋಲೆ ಮತ್ತು ಡೇಟಾ ಎಂಟ್ರಿ ಆಪರೇಟರ್‍‌ಗಳು ಮುಖ್ಯಮಂತ್ರಿ ಕಚೇರಿಗೆ ಸಲ್ಲಿಸಿರುವ ದೂರಿನ ಪ್ರತಿಯು ‘ದಿ ಫೈಲ್‌; ಗೆ ಲಭ್ಯವಾಗಿದೆ.

 

ಸರ್ಕಾರವು ಹೊರಡಿಸಿರುವ ಈ ಸುತ್ತೋಲೆ ವಿರೋಧಿಸಿರುವ ಡೇಟಾ ಎಂಟ್ರಿ ಆಪರೇಟರ್‍‌ಗಳು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದಾರೆ. ಆದರೆ ಈ ಮನವಿ ಮೇಲೆ ಮುಖ್ಯಮಂತ್ರಿ ಕಚೇರಿಯೂ ಈ ಮನವಿಯನ್ನು ನಿಯಮಾನುಸಾರ ಪರಿಶೀಲಿಸಿ ಎಂದು ಒಕ್ಕಣೆ ಹಾಕಿ ಮುಖ್ಯ ಕಾರ್ಯದರ್ಶಿಗೆ ರವಾನಿಸಿದೆ.

 

ಮಿಸ್ಡ್ ಫ್ಲಾಶ್‌ ದುರುಪಯೋಗ ಆಗುತ್ತಿದೆಯೇ?

 

ಸಚಿವಾಲಯದ ವಿವಿಧ ಇಲಾಖೆ, ಮಾಹಿತಿ ಆಯೋಗ, ಕರ್ನಾಟಕ ಆಡಳಿತ ಸುಧಾರಣೆ ಆಯೋಗ, ಚುನಾವಣೆ ಆಯೋಗ, ಮುಖ್ಯಮಂತ್ರಿಗಳ ಸಚಿವಾಲಯ ಮತ್ತು ರಾಜ್ಯಪಾಲರ ಸಚಿವಾಲಯದ ಕಚೇರಿಗಳಲ್ಲಿ ಡೇಟಾ ಎಂಟ್ರಿ ಆಪರೇಟರ್‍‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಡೇಟಾ ಎಂಟ್ರಿ ಆಪರೇಟರ್‍‌ಗಳ ಪೈಕಿ ಕೆಲವರು 3 ಮಿಸ್ಡ್‌ ಫ್ಲಾಶ್‌ಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಇ ಆಡಳಿತವು ಹೊರಡಿಸಿರುವ ಸುತ್ತೋಲೆಯಲ್ಲಿ ಆರೋಪಿಸಿದೆ.

 

ಒಂದು ನಿಮಿಷ ತಡವಾದರೂ ಹಾಜರಾತಿ ಕಡಿತ

 

3 ಮಿಸ್ಡ್‌ ಫ್ಲಾಶ್‌ ದುರುಪಯೋಗವಾಗುತ್ತಿದೆ ಎಂಬ ಅಂಶವನ್ನು ಮುಂದಿಟ್ಟುಕೊಂಡಿರುವ  ಇ ಆಡಳಿತವು, ಡೇಟಾ ಎಂಟ್ರಿ ಆಪರೇಟರ್‍‌ಗಳು ಹಾಜರಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದೆ. ಈ ದುರ್ಬಳಕೆಯನ್ನು ನಿಯಂತ್ರಿಸಲು ಅನಿವಾರ್ಯತೆ ಇದೆ ಎಂದು ಸಮರ್ಥಿಸಿಕೊಂಡಿರುವ ಇ ಆಡಳಿತವು, ಕಚೇರಿಗೆ 1 ನಿಮಿಷ ತಡವಾದರೂ ಹಾಜರಾತಿಯನ್ನು ಅರ್ಧ ದಿನಕ್ಕೆ ಕಟಾಯಿಸಲು ಹೊರಟಿದೆ.

 

ಸುತ್ತೋಲೆಯಲ್ಲೇನಿದೆ?

 

ಪ್ರತಿ ದಿನ 10.10 ಗಂಟೆಯೊಳಗೆ ಕಚೇರಿಗೆ ಹಾಜರಾಗಬೇಕು. 10.30ರ ನಂತರ ಕಚೇರಿಗೆ ಒಂದು ನಿಮಿಷ ತಡವಾದರೂ ಅರ್ಧ ದಿನ ಹಾಜರಾತಿಯನ್ನು ಕಟಾಯಿಸಲಾಗುವುದು. ಪ್ರತಿ ದಿನ ಸಂಜೆ 5.15ರ ನಂತರ ಕಚೇರಿಯನ್ನು ಬಿಡಬೇಕು. ನಿಗದಿತ ಸಮಯಕ್ಕಿಂತ ಬೇಗನೇ ಕಚೇರಿಯಿಂದ ಹೊರಟರೂ ಅರ್ಧ ದಿನದ ಹಾಜರಾತಿಯನ್ನು ಕಟಾಯಿಸಲಾಗುವುದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

 

 

 

ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ಪ್ರತಿ ತಿಂಗಳು ಮೂರು ಬಾರಿ ನಿಗದಿಪಡಿಸಿದ ಸಮಯವನ್ನು ಪಾಲಿಸದಿದ್ದಲ್ಲಿ ಅಂತಹ ಪ್ರಕರಣಗಳಿಗಷ್ಟೇ ವಿನಾಯಿತಿ ನೀಡಲಾಗುತ್ತದೆ. ಆದರೆ ಇಂತಹ ವಿಳಂಬದ ಸಂದರ್ಭದಲ್ಲಿ ಸಹ ಕಡ್ಡಾಯವಾಗಿ ಬಯೋಮೆಟ್ರಿಕ್‌ ಹಾಜರಾತಿ ನಮೂದಿಸಬೇಕು. ಇಲ್ಲವಾದಲ್ಲಿ ಅರ್ಧ ದಿನದ ಹಾಜರಾತಿಯನ್ನೂ ಕಟಾಯಿಸಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದೆ.

 

ಸುತ್ತೋಲೆಗೆ ವಿರೋಧ

 

2026ರ ಜನವರಿ 1ರಂದು ಇ ಆಡಳಿತ ವಿಭಾಗವು ಹೊರಡಿಸಿರುವ ಸುತ್ತೋಲೆಯನ್ನು ಡೇಟಾ ಎಂಟ್ರಿ ಆಪರೇಟರ್‍‌ಗಳು ವಿರೋಧಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಸಚಿವಾಲಯದ ಜಂಟಿ ಕಾರ್ಯದರ್ಶಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ತುರ್ತು ಸಂದರ್ಭದಲ್ಲಿ ಮೂರು ಮಿಸ್ಡ್‌ ಫ್ಲಾಶ್‌ಗಳನ್ನು ಉಪಯೋಗಿಸಿಕೊಳ್ಳಲು ಅವಕಾಶವಿತ್ತು. ಆದರೆ 10-30ರ ನಂತರ ಬಯೋ ಮೆಟ್ರಿಕ್‌ ಮಾಡಿದಲ್ಲಿ ಅರ್ಧ ದಿನದ ಸಂಬಳ ಕಟಾಯಿಸುವುದು ಸರಿಯಲ್ಲ ಎಂದು ಮನವಿಯಲ್ಲಿ ವಿವರಿಸಿದ್ದಾರೆ.

 

ಸಿಎಂ ಕಚೇರಿಗೆ ಸಲ್ಲಿಸಿರುವ ಮನವಿಯಲ್ಲೇನಿದೆ?

 

ಹೊರಗುತ್ತಿಗೆಯಡಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಕಡಿಮೆ ಸಂಬಳ ನೀಡಲಾಗುತ್ತಿದೆ. ಇದರಲ್ಲಿಯೂ ಅರ್ಧ ದಿನದ ಸಂಬಳವನ್ನು ಕಟಾಯಿಸಿದರೇ ಬೆಂಗಳೂರಿನ ನಗರದಲ್ಲಿ ಬದುಕು ಸಾಗಿಸುವುದು ದುಸ್ತರವಾಗಲಿದೆ. ದೊಡ್ಡ ನಗರದಲ್ಲಿ ಮನೆ ಬಾಡಿಗೆ, ಮಕ್ಕಳ ಶಾಲಾ ಶುಲ್ಕ, ಇನ್ನಿತರೆ ಖರ್ಚುಗಳಿಗೆ ಸಂಬಳದಲ್ಲಿ ಸರಿದೂಗಿಸುವುದು ಕಷ್ಟಕರವಾಗಲಿದೆ ಎಂದು ಮನವಿಯಲ್ಲಿ ಗೋಳು ತೋಡಿಕೊಂಡಿರುವುದು ಗೊತ್ತಾಗಿದೆ.

 

 

ಹೊರಗುತ್ತಿಗೆ ನೌಕರರನ್ನು ಶೋಷಣೆಯಿಂದ ಮುಕ್ತಗೊಳಿಸಲು ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಆದರೀಗ ಸರ್ಕಾರದ ಹಂತದಲ್ಲೇ ಶೋಷಣೆ ಆಗುತ್ತಿದೆ. ಅದರಲ್ಲೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಇ ಆಡಳಿತ ಉಪ ಕಾರ್ಯದರ್ಶಿ ಮತ್ತು ಅಧೀನ ಕಾರ್ಯದರ್ಶಿ ವೆಂಕಟೇಶ್‌ ಎಂಬುವರು ಸಿಬ್ಬಂದಿಗಳನ್ನು ಶೋಷಿಸುತ್ತಿದ್ದಾರೆ. ದಿನಕ್ಕೊಂದು ನಿಯಮಗಳನ್ನು ಜಾರಿಗೊಳಿಸಿ ತೊಂದರೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿರುವುದು ಗೊತ್ತಾಗಿದೆ.

 

‘ಅಧೀನ ಕಾರ್ಯದರ್ಶಿಯವರು ಎಲ್ಲಾ ದತ್ತ ನಮೂದಕರಗಳನ್ನು ವಾಟ್ಸಾಪ್‌ ಗ್ರೂಪ್‌ನಲ್ಲಿ ಸಂದರ್ಶನಕ್ಕಾಗಿ ಕರೆಯುತ್ತಾರೆ. ಸಂದರ್ಶನದಲ್ಲಿ ಎಷ್ಟು ವರ್ಷಗಳಿಂದ ಕೆಲಸ ರ್ನಿಹಿಸುತ್ತಿದ್ದೀರಾ, ಏನು ಕಲಿತಿದ್ದೀರಿ, ನಾವು ಹೇಳಿದ ಕಡೆ ಕೆಲಸ ಮಾಡಬೇಕು, ಇಲ್ಲದಿದ್ದರೆ ಕೆಲಸದಿಂದ ತೆಗೆದು ಹಾಕುತ್ತೇವೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ,’ ಎಂದು ದೂರಿನಲ್ಲಿ ಆಪಾದಿಸಿರುವುದು ತಿಳಿದು ಬಂದಿದೆ.

 

 

ರಾಜ್ಯದ 7 ಕೋಟಿ ಜನರಲ್ಲಿ ಸುಮಾರು 5 ಲಕ್ಷ ಸರ್ಕಾರಿ ಖಾಯಂ ನೌಕರರಿದ್ದಾರೆ. ಹೀಗಾಗಿ ಅಂದಾಜು ಶೇ. 1.5ರಷ್ಟು ಅನುದಾನ ಅವಶ್ಯಕತೆಯಿದೆ. ಅಲ್ಲದೇ ಖಾಯಂ ನೌಕರರ ನೇಮಕ ಆಗುವವರೆಗೂ ಹೊರಗುತ್ತಿಗೆ ಕಾರ್ಮಿಕರನ್ನು ಮುಂದುವರೆಸುವುದು ಅನಿವಾರ್ಯ. ಅಲ್ಲದೇ ಸದ್ಯ ಪರಿಸ್ಥಿತಿಯಲ್ಲಿ ಎಲ್ಲಾ ಖಾಲಿ ಹುದ್ದೆಗಳಿಗೂ ಖಾಯಂ ನೌಕರರನ್ನು ನೇಮಕ ಮಾಡುವುದು ಸಾಧ್ಯವಿಲ್ಲ  ಎಂದು ಆರ್ಥಿಕ ಇಲಾಖೆಯು ಈಚೆಗಷ್ಟೇ ಅಭಿಪ್ರಾಯಿಸಿತ್ತು.

 

.ಸರ್ಕಾರಿ ಕಚೇರಿಗಳ ಆಡಳಿತಕ್ಕೆ ತೊಂದರೆಯಾಗದಂತೆ ಸೂಕ್ತ ಕಾನೂನುಗಳನ್ನು ರಚಿಸಬೇಕು. ಮಾರ್ಚ್ 2028ರೊಳಗಾಗಿ ಹೊರಗುತ್ತಿಗೆ ಸೇವೆಗಳನ್ನು ಖಾಸಗಿ, ಏಜೆನ್ಸಿಗಳ ಮೂಲಕ ಪಡೆದುಕೊಳ್ಳುವ ಪದ್ಧತಿಯನ್ನು ಸಂಪೂರ್ಣವಾಗಿ ಸಮಾಪ್ತಿಗೊಳಿಸಬೇಕು ಎಂದು ಸಭೆಯು ಶಿಫಾರಸ್ಸು ಮಾಡಿತ್ತು.

 

 

 

ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ಮತ್ತು ಅಧೀನದಲ್ಲಿ ಬರುವ ನಿಗಮ ಮಂಡಳಿಗಳು ಸೇರಿದಂತೆ ಒಟ್ಟು ಎರಡರಿಂದ ಮೂರು ಲಕ್ಷ ಹೊರಗುತ್ತಿಗೆ ನೌಕರರು ಇದ್ದಾರೆ. ವಿವಿಧ ವೃಂದದಲ್ಲಿ ಸುಮಾರು 5 ಲಕ್ಷ ಖಾಯಂ ಸರ್ಕಾರಿ ನೌಕರರ ಹುದ್ದೆಗಳಿವೆ. ಇದರಲ್ಲಿ ಸುಮಾರು 1.3 ಲಕ್ಷ ಹೊರಗುತ್ತಿಗೆ ಮತ್ತು ದಿನಗೂಲಿ ನೌಕರರು ಬೇರೆ ಬೇರೆ ಕಾಯ್ದೆಗಳು ಮತ್ತು ಯೋಜನೆಗಳಡಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ.

 

ಸರ್ಕಾರದ ವಿವಿಧ ಇಲಾಖೆ ಮತ್ತು ಅಧೀನದಲ್ಲಿರುವ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಖಾಯಂ ಸರ್ಕಾರಿ ನೌಕರರ ನೇಮಕಾತಿ ಹೊಂದುವವರೆಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎಂ ಟಿ ರೇಜು ಅವರು ಅಭಿಪ್ರಾಯಿಸಿದ್ದರು.

 

 

ಅಲ್ಲದೇ ಪ್ರಸಕ್ತ ಸಾಲಿನ 2025-26ನೇ ಸಾಲಿನ ರೆವಿನ್ಯೂ ವೆಚ್ಚದಲ್ಲಿ ಸುಮಾರು ಶೇ.42ರಷ್ಟು ವೆಚ್ಚವನ್ನು ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿಗೆ ಬೇಕಾಗಿದೆ. ರಾಜ್ಯದಲ್ಲಿನ ಸುಮಾರು 7 ಕೋಟಿ ಜನರಲ್ಲಿ ಸುಮಾರು 5 ಲಕ್ಷ ಜನ ಸರ್ಕಾರಿ ಖಾಯಂ ನೌಕರರಿದ್ದಾರೆ. ಅಂದಾಜು ಶೇ. 1.5ರಷ್ಟು ಅನುದಾನದ ಅವಶ್ಯಕತೆ ಇದೆ.

 

‘ಹೀಗಾಗಿ ಒಟ್ಟಾರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಹೊರಗುತ್ತಿಗೆ ಹಾಗೂ ದಿನಗೂಲಿ ನೌಕರರನ್ನು ನೇಮಿಸಿಕೊಳ್ಳುವುದು ಹಾಗೂ ಖಾಯಂ ನೌಕರರ ನೇಮಕಾತಿ ಆಗುವವರೆಗೂ ಹೊರಗುತ್ತಿಗೆ ಕಾರ್ಮಿಕರನ್ನು ಮುಂದುವರೆಸುವುದು ಅನಿವಾರ್ಯವಾಗಿದೆ,’ ಎಂದು ರೇಜು ಅವರು ಅಭಿಪ್ರಾಯಿಸಿದ್ದರು.

 

ಅಲ್ಲದೇ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಸರ್ಕಾರವು ಎಲ್ಲಾ ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕಾದರೇ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಾ ಖಾಲಿ ಹುದ್ದೆಗಳಿಗೂ ಖಾಯಂ ನೌಕರರನ್ನು ನೇಮಕ ಮಾಡುವುದು ಸಾಧ್ಯವಿಲ್ಲ. ಹೊರಗುತ್ತಿಗೆ ಏಜೆನ್ಸಿಗಿಂತ ಸೊಸೈಟಿ ಮೂಲಕ ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳುವುದು ಒಳ್ಳೇಯದು ಎಂದು ರೇಜು ಅವರು ಸಂಪುಟ ಉಪ ಸಮಿತಿಗೆ ತಿಳಿಸಿದ್ದರು.

 

 

ಹಾಗೆಯೇ ಆರ್ಥಿಕ ಇಲಾಖೆಯಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಪ್ರಸ್ತುತ ರಾಜ್ಯದಲ್ಲಿ ಒಟ್ಟು 80,006 ಜನ ಹೊರಗುತ್ತಿಗೆ ನೌಕರರು ಹಾಗೂ 5,512 ದಿನಗೂಲಿ ನೌಕರರು (ಸರ್ಕಾರದ ವಿವಿಧ ಇಲಾಖೆ, ನಿಗಮ ಮಂಡಳಿ ಹೊರತುಪಡಿಸಿ) ಒಟ್ಟು 85,518 ನೌಕರರು ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರದ ವಿವಿಧ ಇಲಾಖೆ ಹಾಗೂ ಅವುಗಳ ಅಧೀನದಲ್ಲಿ ಬರುವ ನಿಗಮ ಮಂಡಳಿಗಳು ಸಾಮಾನ್ಯವಾಗಿ ಡಿಇಒ, ವಾಹನ ಚಾಲಕರು ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳುತ್ತಿದೆ. ಅಲ್ಲದೇ ಹೊರಗುತ್ತಿಗೆ ನೌಕರರರಾಗಿ ಕೆಲಸ ಮಾಡುತ್ತಿರುವ ವಿವಿಧ ಕಾರ್ಮಿಕರ ವರ್ಗವಾರು ಸಂಖ್ಯೆ ಮತ್ತು ವಿವರಗಳು ಕಾರ್ಮಿಕ ಇಲಾಖೆಯಲ್ಲಿ ಲಭ್ಯವಿಲ್ಲ ಎಂದು ಕಾರ್ಮಿಕ ಇಲಾಖೆಯು ಸಭೆಯ ಗಮನಕ್ಕೆ ತಂದಿತ್ತು.

 

 

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಏಜೆನ್ಸಿಗಳು ಮೀಸಲಾತಿಯನ್ನು ಪಾಲಿಸುತ್ತಿಲ್ಲ. ಮತ್ತು ಹೊರಗುತ್ತಿಗೆ ಏಜೆನ್ಸಿಗಳಿಗೆ ಪಾವತಿಸುತ್ತಿರುವ ಸೇವಾ ಶುಲ್ಕದಲ್ಲಿ ಸಮಾನತೆ ಇಲ್ಲವಾಗಿದೆ. ಹೊರಗುತ್ತಿಗೆ ನೌಕರರ ಸೇವೆಯನ್ನು ಹೊರಗುತ್ತಿಗೆ ಆಧಾರದಲ್ಲಿ ಒದಗಿಸುತ್ತಿರುವ ಏಜೆನ್ಸಿಗಳಿಂದ ತೊಂದರೆಯಾಗುತ್ತಿದೆ. ನಿಗದಿತ ಕನಿಷ್ಟ ವೇತನವನ್ನೂ ನೀಡುತ್ತಿಲ್ಲ.

 

 

ಸುಪ್ರೀಂ ಕೋರ್ಟ್‌ ತೀರ್ಪು ಏನಿದೆ?

 

ವಿಕ್ರಮ ಮೆಹ್ತಾ ಪ್ರಕರಣದಲ್ಲಿ ಸರ್ಕಾರದ ವಿವಿಧ ಇಲಾಖೆ, ನಿಗಮ ಮಂಡಳಿಗಳಲ್ಲಿ ಕೆಲಸುವ ಖಾಯಂ ಸ್ವರೂಪದ ಕೆಲಸವಾಗಿದೆ. ಅಲ್ಲಿ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡುವುದು ಸರಿಯಲ್ಲ. ಇಂತಹ ಕೆಲಸಗಳಿಗೆ ಖಾಯಂ ನೌಕರನ್ನು ಮಾತ್ರ ನೇಮಿಸಿಕೊಳ್ಳಬೇಕು. ಹಾಗೂ ಅವರ ಸೇವೆಯನ್ನು ಖಾಯಂಗೊಳಿಸಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದೆ.

 

 

 

ಹೊರಗುತ್ತಿಗೆ ನೌಕರರ ಸೇವೆಯನ್ನು ಖಾಸಗಿ, ಎನ್‌ಜಿಒ ಗಳಿಂದ ಪಡೆಯುತ್ತಿರುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲು ನಿರ್ಣಯ ಮಾಡುವುದು ಅನಿರ್ವಾಯವಾಗಿದೆ. ಈ ಸಂಬಂಧ ಸಂವಿಧಾನ, ಕಾನೂನುಗಳ ಅಡಿಯಲ್ಲಿರುವ ಅವಕಾಶಗಳು ಹಾಗೂ ಉಚ್ಛ ನ್ಯಾಯಾಲಯ, ಸರ್ವೋಚ್ಛ ನ್ಯಾಯಾಲಯಗಳ ತೀರ್ಪುಗಳ ಹಿನ್ನೆಲೆಯಲ್ಲಿ ಹೊರಗುತ್ತಿಗೆ ಪದ್ಧತಿಯನ್ನು ಸಂಪೂರ್ಣವಾಗಿ ನಿಲುಗಡೆಗೊಳಿಸಲು ಕ್ರಮವಹಿಸಬೇಕು ಎಂದು ಸೂಚಿಸಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts