ಶೇ. 51.6ರಷ್ಟು ಪ್ರಗತಿ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.6ರಷ್ಟು ಇಳಿಕೆ; ವೆಚ್ಚಕ್ಕೆ 24,000 ಕೋಟಿ ರು ಬಾಕಿ

ಬೆಂಗಳೂರು;  2025-26ನೇ ಸಾಲಿನಲ್ಲಿ ಕಲ್ಪಿಸಿದ್ದ  ಒಟ್ಟು 3,46,006 ಕೋಟಿ ರು ಗಳಷ್ಟು ಅನುದಾನದ ಪೈಕಿ ಇನ್ನೂ 24,000 ಕೋಟಿ ರು ವೆಚ್ಚಕ್ಕೆ ಬಾಕಿ ಉಳಿಸಿಕೊಂಡಿದೆ. ಅಲ್ಲದೇ  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಉಪ ಯೋಜನೆಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ದೃಢೀಕರಣ ವರದಿ ನೀಡಲು  ಸಮಾಜ ಕಲ್ಯಾಣ ಇಲಾಖೆಯು ವಿಳಂಬ ಮಾಡುತ್ತಿದೆ. ಈ ವರದಿಗಳನ್ನು ಸಕಾಲದಲ್ಲಿ ಸ್ವೀಕೃತವಾಗದ ಕಾರಣ, ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯ ಪ್ರಗತಿಯು ಕುಂಠಿತವಾಗುತ್ತಿದೆ.

 

ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 300 ಕೋಟಿ ಬಿಡುಗಡೆಯಾಗಿದ್ದರೂ ಸಹ ಡಿಸೆಂಬರ್‍‌ ಅಂತ್ಯದವರೆಗೆ ಖರ್ಚಾಗಿಲ್ಲ. ಅದೇ ರೀತಿ ಫೆರಿಫೆರಲ್‌ ರಿಂಗ್ ರಸ್ತೆಯಡಿ ಬಿಡುಗಡೆಯಾಗಿದ್ದ 445 ಕೋಟಿ ರು ಅನುದಾನದಲ್ಲಿ ಪ್ರಗತಿಯೂ ಆಗಿಲ್ಲ. ಹಾಗೆಯೇ ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯೂ ಸೇರಿದಂತೆ ಹಲವು ಇಲಾಖೆಗಳಲ್ಲಿ ಒಟ್ಟಾರೆ ಅನುದಾನದಲ್ಲಿ 4,744 ಕೋಟಿ ರು ವೆಚ್ಚವೇ ಆಗಿಲ್ಲ.

 

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್‌ ಅವರ ಅಧ್ಯಕ್ಷತೆಯಲ್ಲಿ 2025ರ ಡಿಸೆಂಬರ್ 23ರಂದು ನಡೆದಿದ್ದ ಕೆಡಿಪಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಸಂಗತಿಯು ಬಹಿರಂಗವಾಗಿದೆ. ಈ ಸಭೆಯಲ್ಲಿನ  ನಿರ್ಣಯಗಳ ಆಧರಿಸಿ ಕೈಗೊಂಡಿರುವ ಕ್ರಮಗಳ ಕುರಿತು 2025ರ ಜನವರಿ 15ರೊಳಗೆ ಯೋಜನೆ, ಕಾರ್ಯಕ್ರಮ, ಸಾಂಖ್ಯಿಕ ಇಲಾಖೆಗೆ ಕಳಿಸಿಕೊಡಬೇಕು ಎಂದು ಸರ್ಕಾರದ ಎಲ್ಲಾ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಿಗೆ ಸೂಚಿಸಿದೆ.

 

2025ರ ಡಿಸೆಂಬರ್‍‌ 23ರಂದು ನಡೆದಿದ್ದ ಸಭೆಯ ನಡವಳಿಗಳು ಮತ್ತು 2025ರ ಡಿಸೆಂಬರ್‍‌ 31ರಂದು ಎಲ್ಲಾ ಇಲಾಖೆಗಳಿಗೆ ಬರೆದಿರುವ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಒಟ್ಟು ಅನುದಾನಕ್ಕೆ ಶೇ. 57ರಷ್ಟು ಪ್ರಗತಿ

 

2025-26ನೇ ಸಾಲಿನಲ್ಲಿ ಒಟ್ಟು 3,46,006 ಕೋಟಿ ರು ಗಳಷ್ಟು ಅನುದಾನ ಕಲ್ಪಿಸಲಾಗಿತ್ತು. ಇದರಲ್ಲಿ ಆಯವ್ಯಯದ ಅಂದಾಜು 3,35,292 ಕೊಟಿ ಮತ್ತು ಆರಂಭಿಕ ಶಿಲ್ಕು 10,714 ಕೋಟಿ ರು ಸೇರಿತ್ತು. ಡಿಸೆಂಬರ್‍‌ 15ರ ಅಂತ್ಯಕ್ಕೆ ಒಟ್ಟಾರೆ 2,02,742 ಕೋಟಿ ರು ಬಿಡುಗಡೆಯಾಗಿತ್ತು. ಇದರಲ್ಲಿ 1,78,742 ಕೋಟಿ ರು ವೆಚ್ಚವಾಗಿದೆ. ಇನ್ನೂ 24,000 ಕೋಟಿ ರು ವೆಚ್ಚಕ್ಕೆ ಬಾಕಿ ಇದೆ.

 

 

ಲಭ್ಯ ಅನುದಾನಕ್ಕೆ ಶೇ 83.7ರಷ್ಟು ಪ್ರಗತಿಯಾಗಿದ್ದರೇ ಒಟ್ಟು ಅನುದಾನದಲ್ಲಿ ಶೇ. 51.6ರಷ್ಟು ಮಾತ್ರ ಪ್ರಗತಿಯಾಗಿದೆ. ಕಳೆದ ಸಾಲಿನಲ್ಲಿ ಇದೇ ಸಮಯಕ್ಕೆ ಒಟ್ಟು ಅನುದಾನಕ್ಕೆ ಶೇ. 57ರಷ್ಟು ಪ್ರಗತಿಯಾಗಿತ್ತು.

 

 

ಈ ಅಂಕಿ ಅಂಶಗಳ ಪ್ರಕಾರ ಒಟ್ಟು ಅನುದಾನದಲ್ಲಿನ ಪ್ರಗತಿಯು ಕಳೆದ ಬಾರಿಗೆ ಹೋಲಿಸಿದರೆ ಶೇ.6ರಷ್ಟು ಇಳಿಕೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

 

 

 

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಆರಂಭಿಕ ಶಿಲ್ಕುವಿನಲ್ಲಿದ್ದ  3,090 ಕೋಟಿ ರು ಪೈಕಿ 2025ರ ಡಿಸೆಂಬರ್‍‌ 22ರ ಅಂತ್ಯಕ್ಕೆ 1,820.00 ಕೋಟಿ ರು ಖರ್ಚಾಗಿದೆ. ವೆಚ್ಚಕ್ಕೆ ಇನ್ನೂ 1,270 ಕೋಟಿ ರು ಬಾಕಿ ಇದೆ. ಕೆಕೆಆರ್‍‌ಡಿಬಿ ವ್ಯಾಪ್ತಿಯಲ್ಲಿ ರಾಜ್ಯ ಆಯವ್ಯಯ ಘೋಷಣೆ ಪ್ರಕಾರ ಕಳೆದ 2 ವರ್ಷಗಳಲ್ಲಿ ವಿವಿಧ ಯೋಜನೆಗಳಿಗೆ 2,437.00 ಕೋಟಿ ರು ಅಂದಾಜು ಮೊತ್ತ ನಿಗದಿಪಡಿಸಿತ್ತು. ಈ ಪೈಕಿ ಇಲ್ಲಿಯವರೆಗೆ ಕೇವಲ 750 ಕೋಟಿ ರು ಮಾತ್ರ ಬಿಡುಗಡೆಯಾಗಿದೆ. ಬಿಡುಗಡೆಗೆ ಇನ್ನೂ 1,687 ಕೋಟಿ ರು ಬಾಕಿ ಇರುವುದು ನಡವಳಿಯಿಂದ ತಿಳಿದು ಬಂದಿದೆ.

 

ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆ ಪ್ರಗತಿ ಕುಂಠಿತ

 

ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಗೆ ಸಂಬಂಧಿಸಿದಂತೆ ಮಂಡಳಿಯಿಂದ ಹಲವು ಕ್ರಿಯಾ ಯೋಜನೆಗಳಿಗೆ ಅನುಮೋದನೆ ದೊರೆತಿದೆ. ಆದರೆ ಕ್ರಿಯಾ ಯೋಜನೆಗಳ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರ್ದಿಷ್ಟ ಜನಸಂಖ್ಯೆ ವಾಸಿಸುತ್ತಿರುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯಿಂದ ಧೃಢೀಕರಣ ದೊರೆಯಬೇಕು. ಆ ನಂತರ ಆಡಳಿತಾತ್ಮಕ ಅನುಮೋದನೆ ನೀಡಿ ಅನುದಾನ ಬಿಡುಗಡೆಯಾಗುತ್ತದೆ. ಆದರೆ ಸಮಾಜ ಕಲ್ಯಾಣ ಇಲಾಖೆಯಿಂದಲೇ ಧೃಢೀಕರಣ ವರದಿಗಳು ಮಂಡಳಿಗೆ ಸಲ್ಲಿಕೆಯಾಗುತ್ತಿಲ್ಲ. ಹೀಗಾಗಿ ಈ ಯೋಜನೆಯ ಪ್ರಗತಿಯಲ್ಲಿ ಕುಂಠಿತವಾಗುತ್ತಿದೆ ಎಂಬ ಸಂಗತಿಯು ನಡವಳಿಯಿಂದ ಗೊತ್ತಾಗಿದೆ.

 

 

ಈ ಎರಡೂ ಉಪ ಯೋಜನೆಗಳಿಗೆ 1,500 ಕೋಟಿ ರು ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯು ಸಹಮತಿಸಿದೆ. ಆದರೂ ಕ್ರಿಯಾ ಯೋಜನೆಗಳನ್ನು ಸಲ್ಲಿಸುವಲ್ಲಿ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಅನುಮೋದನೆ ಪಡೆದುಕೊಳ್ಳುವಲ್ಲಿ ಪ್ರಗತಿ ಕಾಣುತ್ತಿಲ್ಲ.

 

ಪರಿಶಿಷ್ಟ ಜಾತಿ ಉಪ ಯೋಜನೆ ಅಡಿಯಲ್ಲಿ 29,897 ಕೋಟಿ ರು ಅನುದಾನವಿದೆ. ಡಿಸೆಂಬರ್‍‌ 15ರ ಅಂಗತ್ಯಕ್ಕೆ 13,295 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ ಆರಂಭಿಕ ಶಿಲ್ಕು ಮೊತ್ತ ಸೇರಿ ಒಟ್ಟಾರೆ 12,489 ಕೊಟಿ ರು ವೆಚ್ಚವಾಗಿದೆ. ಗಿರಿಜನ ಉಪಯೋಜನೆಯಡಿಯಲ್ಲಿ 11,810 ಕೋಟಿ ರು ಇದೆ. ಡಿಸೆಂಬರ್ 15ರ ಅಂತ್ಯಕ್ಕೆ 4,749 ಕೊಟಿ ರು ಬಿಡುಗಡೆಯಾಗಿತ್ತು. ಇದರಲ್ಲಿ 4,487 ಕೋಟಿ ರು ವೆಚ್ಚವಾಗಿರುವುದು ಗೊತ್ತಾಗಿದೆ.

 

 

ಆರೋಗ್ಯ ಇಲಾಖೆಯಲ್ಲಿ ಖರ್ಚಾಗದ 186 ಕೋಟಿ

 

ಆರೋಗ್ಯ ಇಲಾಖೆಯಲ್ಲಿ 15ನೇ ಹಣಕಾಸು ಆಯೋಗದ ಅನುದಾಡಿಯಲ್ಲಿ 221 ಕೊಟಿ ರು ಆರಂಭಿಕ ಶಿಲ್ಕು ಇತ್ತು. ಇದರಲ್ಲಿ ಕೇವಲ 68 ಕೋಟಿ ಮಾತ್ರ ಖರ್ಚಾಗಿದೆ. ಇನ್ನೂ 186 ಕೋಟಿ ರು ವೆಚ್ಚವೇ ಆಗಿಲ್ಲ. ಈ ಇಲಾಖೆಯಲ್ಲಿಯೂ ಸಹ ಪ್ರಗತಿ ಮಂದಗತಿಯಲ್ಲಿರುವುದು ತಿಳಿದು ಬಂದಿದೆ.

 

ಆರ್‍‌ಡಿಪಿಆರ್‍‌ನಲ್ಲಿ 300 ಕೋಟಿ ವೆಚ್ಚವಾಗಿಲ್ಲ

 

ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿ 300 ಕೋಟಿ ಬಿಡುಗಡೆಯಾಗಿತ್ತು. ಆದರೆ ಈ ಹಣವು ವೆಚ್ಚವೇ ಆಗಿಲ್ಲ. ಇಲ್ಲಿಯೂ ಪ್ರಗತಿ ಚಕ್ರ ಉರುಳುತ್ತಿಲ್ಲ.

 

ಪೌರಾಡಳಿತದಲ್ಲಿ 456  ಕೋಟಿ ವೆಚ್ಚಕ್ಕೆ ಬಾಕಿ

 

ಪೌರಾಡಳಿತ ಇಲಾಖೆಯಲ್ಲಿ ವಿವಿಧ ಯೋಜನೆಗಳಡಿಯಲ್ಲಿ ಬಿಡುಗಡೆಯಾಗಿದ್ದ ಒಟ್ಟು ಅನುದಾನದಲ್ಲಿ 456 ಕೋಟಿಯಷ್ಟು ಮೊತ್ತವನ್ನು ಇನ್ನೂ ಖರ್ಚು ಮಾಡಿಲ್ಲ. ಅಮೃತ್‌ 2.0 ಯೋಜನೆಯಡಿ 180 ಕೋಟಿ ರು ವೆಚ್ಚಕ್ಕೆ ಬಾಕಿ ಇದೆ. ನಗರ ಮತ್ತು ಸ್ವಾಸ್ಥ್ಯ ಕೇಂದ್ರಗಳಿಗೆ 15ನೇ ಹಣಕಾಸು ಆಯೋಗದ ಅನುದಾನದಡಿಯಲ್ಲಿ 184 ಕೋಟಿ ರು ಲಭ್ಯವಿತ್ತು. ಆದರೆ ಇದರಲ್ಲಿಯೂ 73 ಕೋಟಿ ಮಾತ್ರ ಖರ್ಚಾಗಿದೆ. 111 ಕೋಟಿ ರು ವೆಚ್ಚಕ್ಕೆ ಬಾಕಿ ಇದೆ. ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ನೀರಿನ ಸಂಸ್ಕರಣೆ, ನಿರ್ವಹಣೆ ಅಡಿ 169 ಕೊಟಿ ರು ಬಿಡುಗಡೆಯಾಗಿತ್ತು. ಇದರಲ್ಲಿಯೂ ಸಹ ಕೇವಲ 5.75 ಕೋಟಿ ಮಾತ್ರ ವೆಚ್ಚವಾಗಿದೆ. ಈ ಕಾರ್ಯಕ್ರಮದಲ್ಲಿ 163 ಕೋಟಿ ರು ವೆಚ್ಚಕ್ಕೆ ಬಾಕಿ  ಇದೆ.

 

 

ಪೋಷಣೆ  ಅಭಿಯಾನದಲ್ಲಿ 86 ಕೋಟಿ ಬಾಕಿ 

 

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಜಾರಿಯಾಗಿರುವ ಕೇಂದ್ರ ಪುರಸ್ಕೃತದ ಪೋಷಣ ಅಭಿಯಾನದಲ್ಲಿ 125 ಕೋಟಿ ರುಪಾಯಿ ಅನುದಾನ ಲಭ್ಯವಿತ್ತು. ಆದರೆ ಇದರಲ್ಲಿ 39.59 ಕೋಟಿ ರು ಮಾತ್ರ ವೆಚ್ಚವಾಗಿತ್ತು. ವೆಚ್ಚಕ್ಕೆ ಇನ್ನೂ 86 ಕೋಟಿ ರುಪಾಯಿ ವೆಚ್ಚಕ್ಕೆ ಬಾಕಿ ಇದೆ.

 

ಫೆರಿಫೆರಲ್ ರಿಂಗ್‌ ರೋಡ್‌ 445 ಕೋಟಿ ಖರ್ಚಾಗಿದೆಯೇ?

 

ನಗರಾಭಿವೃದ್ಧಿ ಇಲಾಖೆಯಡಿ ಫೆರಿಫೆರಲ್ ರಿಂಗ್‌ ರಸ್ತೆಯಡಿ ಕಳೆದ ವರ್ಷ 445 ಕೋಟಿ ರುಪಾಯಿ ಅನುದಾನ ಬಿಡುಗಡೆಯಾಗಿತ್ತು. ಆದರೆ ಈ ಅನುದಾನದಲ್ಲಿ ಪ್ರಗತಿಯೇ ಆಗಿಲ್ಲ. ಈ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿಯೂ ನಗರಾಭಿವೃದ್ಧಿ ಇಲಾಖೆಯು ಹಿಂದೆ ಬಿದ್ದಿದೆ.

 

 

ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಲ್ಲಿ 2025-26ನೇ ಸಾಲಿನಲ್ಲಿ ಡಿಸೆಂಬರ್‍‌ 15ರ ಅಂತ್ಯಕ್ಕೆ 27,108 ಕೋಟಿ ರು ಅನುದಾನವಿತ್ತು. ಇದರಲ್ಲಿ 11,974 ಕೋಟಿ ರು ಕೇಂದ್ರದಿಂದ ಮತ್ತು ರಾಜ್ಯದ ಪಾಲು 13,427 ಕೋಟಿ ರು ಇತ್ತು. ಒಟ್ಟಾರೆ 25,401 ಕೋಟಿ ರು ಲಭ್ಯವಿತ್ತು. ಆದರೆ ಇದರಲ್ಲಿ 22,364 ಕೋಟಿ ರುಪಾಯಿ ಖರ್ಚಾಗಿದೆ. ಖರ್ಚು ಮಾಡಲು 3,037 ಕೋಟಿ ರು ಬಾಕಿ ಇದೆ.

 

ವಿಶೇಷ ಅಭಿವೃದ್ಧಿ ಮತ್ತು ಮಹತ್ವಾಕಾಂಕ್ಷೆ ತಾಲೂಕಕುಗಳ ಅಭಿವೃದ್ಧಿ ಯೋಜನೆಯಡಿಯಲ್ಲಿ 3,388.66 ಕೋಟಿ ರು ಒದಗಿಸಿತ್ತು. ಇದರಲ್ಲಿ 1,274 ಕೊಟಿ ರು ಬಿಡುಗಡೆಯಾಗಿತ್ತು. ಇದರಲ್ಲಿ 1,131 ಕೋಟಿ ರು ವೆಚ್ಚವಾಗಿದೆ.  ವೇತನ ವಿತರಣೆಗೆ ಸಂಬಂಧಿಸಿದಂತೆ ಪ್ರಮುಖ ಇಲಾಖೆಯಲ್ಲಿ ವೇತನವನ್ನೇ ಸೆಳೆಯುತ್ತಿಲ್ಲ.

 

 

ಸರಕು ಸೇವೆಗಳ ಖರೀದಿಯಡಿ ಒಟ್ಟಾರೆ ಪ್ರಸಕ್ತ ಸಾಲಿನಲ್ಲಿ 1,312.36 ಕೋಟಿ ರು ಹಂಚಿಕೆಯಾಗಿತ್ತು. ಈ ಪೈಕಿ ಡಿಸೆಂಬರ್ 15ರ ಅಂತ್ಯಕ್ಕೆ 382.93 ಕೋಟಿ ರು ವೆಚ್ಚವಾಗಿದೆ. ವೆಚ್ಚಕ್ಕೆ 929.43 ಕೋಟಿ ರು ಬಾಕಿ ಇರುವುದು ಗೊತ್ತಾಗಿದೆ.

Your generous support will help us remain independent and work without fear.

Latest News

Related Posts