ಬೈರತಿ ಬಸವರಾಜು ವಿರುದ್ಧ ಕೋಕಾ ಮೊಕದ್ದಮೆ ರದ್ದು; ನ್ಯಾಯಾಲಯದ ನಿರ್ಣಯ ಸೂಕ್ತವಾಗಿರಲಿಲ್ಲವೇ?

ಬೆಂಗಳೂರು; ರೌಡಿ ಶೀಟರ್  ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಕೋಕಾ ಕಲಂಗಳಡಿಯಲ್ಲಿ  ಐದನೇ ಆರೋಪಿ ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಶಾಸಕ ಬೈರತಿ ಬಸವರಾಜು ಅವರ ವಿರುದ್ಧ ಮೊಕದ್ದಮೆಯನ್ನು ರದ್ದುಗೊಳಿಸಿ ಹೈಕೋರ್ಟ್ ನೀಡಿದ್ದ ಆದೇಶವು ಸೂಕ್ತ ಮತ್ತು ಸಮಂಜಸವಾಗಿರಲಿಲ್ಲ.

 

ಹೈಕೋರ್ಟ್‌ ರದ್ದುಗೊಳಿಸಿದ್ದ ಆದೇಶದ ವಿರುದ್ಧ ವಿಶೇಷ ಮೇಲ್ಮನವಿ ಸಲ್ಲಿಸುವ ಸಂಬಂಧ ರಾಜ್ಯ ಸರ್ಕಾರದ ವಿಶೇಷ ಸರ್ಕಾರಿ ಅಭಿಯೋಜಕರು ನೀಡಿದ್ದ ಅಭಿಪ್ರಾಯದಲ್ಲಿ ನ್ಯಾಯಾಲಯದ ನಿರ್ಣಯ ಕುರಿತೂ ವಿಮರ್ಶಿಸಲಾಗಿದೆ.

 

ಇದೇ ಪ್ರಕರಣದಲ್ಲಿ ಬೈರತಿ ಬಸವರಾಜು ಅವರಿಗೆ ರಜಾಕಾಲದ ಏಕಸದಸ್ಯ ಪೀಠವು ಪ್ರಾಸಿಕ್ಯೂಷನ್‌ ವಾದ ಆಲಿಸದೆಯೇ ತರಾತುರಿಯಲ್ಲಿ ನಿರೀಕ್ಷಣಾ  ಜಾಮೀನು ನೀಡಿದ್ದನ್ನು ನಿಯಮಿತ ನ್ಯಾಯಪೀಠವು ನಿನ್ನೆಯಷ್ಟೇ ಖಾರವಾಗಿ ಪ್ರಶ್ನಿಸಿತ್ತು. ಇದರ ಬೆನ್ನಲ್ಲೇ ಬೈರತಿ ಬಸವರಾಜು ಅವರ ವಿರುದ್ಧ ಹೂಡಿದ್ದ ಕೋಕಾ ಕಲಂಗಳನ್ನು ರದ್ದುಗೊಳಿಸಿದ್ದ ಹೈಕೋರ್ಟ್‌ ಪೀಠದ ಆದೇಶವು ಸೂಕ್ತವಾಗಿಲ್ಲ ಎಂದು ರಾಜ್ಯ ಸರ್ಕಾರದ ಅಭಿಯೋಜಕರು ಅಭಿಪ್ರಾಯಿಸಿರುವುದು ಮುನ್ನೆಲೆಗೆ ಬಂದಿದೆ.

 

ರಾಜ್ಯ ಸರ್ಕಾರದ ಅಭಿಯೋಜಕರ ಅಭಿಪ್ರಾಯದಂತೆ ಈ ಪ್ರಕರಣದಲ್ಲಿ ಹೈಕೋರ್ಟ್‌ ನೀಡಿರುವ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲು ಒಳಾಡಳಿತ ಇಲಾಖೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚೆಗಳು ನಡೆದಿವೆ.

 

ಇದಕ್ಕೆ ಸಂಬಂಧಿಸಿದಂತೆ ಕಡತದ (HD/7895/895/2025- COMPUTER NUMBER 1858411)  ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಬಿಕ್ಲು ಶಿವ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಿ ನಗರ ಪೊಲೀಸ್‌ ಠಾಣೆಯಲ್ಲಿ ಕೆ ಆರ್ ಪುರಂ ಬಿಜೆಪಿ ಶಾಸಕ ಬಿ ಎ ಬಸವರಾಜು ಅವರ ವಿರುದ್ಧ ಕೋಕಾ ಕಾಯ್ದೆ ಕಲಂ ಅಡಿ ಮೊಕದ್ದಮೆ ( ಸಂಖ್ಯೆ 73/2025) ಹೂಡಿತ್ತು. ಇದನ್ನು ಬಿ ಎ ಬಸವರಾಜು ಅವರು ಹೈಕೋರ್ಟ್‌ನಲ್ಲಿ (ರಿಟ್ ಪಿಟಿಷನ್ ಸಂಖ್ಯೆ; 31304/2025- GM-RES) ಪ್ರಶ್ನಿಸಿದ್ದರು. ಈ ಅರ್ಜಿಯನ್ನು ವಿಚಾರಣೆ  ನಡೆಸಿದ್ದ ಹೈಕೋರ್ಟ್‌, ಕೋಕಾ ಕಾಯ್ದೆ ಕಲಂ ಅಳವಡಿಸಿದ್ದನ್ನು  2025ರ ಡಿಸೆಂಬರ್‍‌ 19ರಂದು ರದ್ದುಗೊಳಿಸಿ ಆದೇಶಿಸಿತ್ತು.

 

ರದ್ದುಗೊಳಿಸಲು ಕಾರಣವೇನು?

 

ಆರೋಪಿಗಳು ಪರಸ್ಪರ ಸಂಘಟನೆ  ಮಾಡಿಕೊಂಡು ನಿರಂತರವಾಗಿ ಒಂದೇ ಸರಣಿ ಅಪರಾಧಗಳನ್ನು ಮಾಡಿರುವುದು ಕಂಡುಬರುತ್ತಿಲ್ಲ. ಆರೋಪಿಗಳ ವಿರುದ್ಧ ಇರುವ ಪ್ರಕರಣಗಳು ವೈಯಕ್ತಿಕ ಪ್ರಕರಣಗಳಾಗಿವೆ. ಪ್ರಸ್ತುತ ಪ್ರಕರಣದ ಆರೋಪಿಗಳು ಯಾವುದೇ ಒಂದು ಪ್ರಕರಣದಲ್ಲಿ ಸಹ ಆರೋಪಿಗಳಾಗಿಲ್ಲ. ಹೀಗಾಗಿ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ 2000 ಕಲಂ 3 ಮತ್ತು 4 ಈ ಪ್ರಕರಣಕ್ಕೆ ಅನ್ವಯವಾಗುವುದಿಲ್ಲ. ಮತ್ತು ಆರೋಪಿಗಳು ಕನಿಷ್ಟ 3 ವರ್ಷ ಕಾರಾಗೃಹ ಶಿಕ್ಷೆ ಅಪರಾಧವುಳ್ಳ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಈ ಕಾರಣದಿಂದ ಕೋಕಾ ಕಾಯ್ದೆ ಅನ್ವಯವಾಗುವುದಿಲ್ಲ ನ್ಯಾಯಾಲಯವು ಕೋಕಾ ಅಡಿಯಲ್ಲಿ ದಾಖಲಿಸಲು ನೀಡಿದ್ದ ಮಂಜೂರಾತಿ ಆದೇಶವನ್ನು ರದ್ದುಗೊಳಿಸಿತ್ತು.

 

 

ಈ ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು ಈ ಆದೇಶದ ವಿರುದ್ಧ ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅರ್ಹ ಪ್ರಕರಣ ಎಂದು ಅಭಿಪ್ರಾಯಿಸಿದ್ದರು. ಈ ಅಭಿಪ್ರಾಯವನ್ನು ಆಧರಿಸಿ ಸಿಐಡಿ ಪೊಲೀಸ್‌ ಮಹಾನಿರ್ದೇಶಕರೂ ಸಹ ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಸರ್ಕಾರವನ್ನು ಕೋರಿದ್ದರು.

 

 

ಈ ಕುರಿತು ಒಳಾಡಳಿತ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆದಿದೆ. ಇದಕ್ಕೆ ಸಂಬಂಧಿಸಿದ ಕಡತವು ಇನ್ನೂ ಚಲನೆಯಲ್ಲಿರುವುದು ಗೊತ್ತಾಗಿದೆ.

 

 

ನ್ಯಾಯಾಲಯದ ನಿರ್ಣಯವೇಕೆ ಸೂಕ್ತವಲ್ಲ ?

 

ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ 2000 ಕಲಂ 3 ಮತ್ತು 4 ಈ ಪ್ರಕರಣಕ್ಕೆ ಅನ್ವಯವಾಗುವುದಿಲ್ಲ ಎಂದು ನ್ಯಾಯಾಲಯವು ನಿರ್ಣಯಿಸಿರುವುದು ಸೂಕ್ತವಾಗಿಲ್ಲ ಎಂದು ರಾಜ್ಯ ಸರ್ಕಾರದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಪ್ರತಿಪಾದಿಸಿದ್ದರು. ಆರೋಪಿಗಳು ಕನಿಷ್ಠ 3 ವರ್ಷ ಕಾರಾಗೃಹ ಶಿಕ್ಷೆಗೆ ಒಳಪಡುವ ಎರಡು ಪ್ರಕರಣಗಳಲ್ಲಿ ಭಾಗಿಯಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಿಸಿದೆ.

 

 

ಆದರೆ ಆರೋಪಿಗಳು ಐಪಿಸಿ ಕಲಂ 302 ಮತ್ತು 307ರ ಅಪರಾಧಗಳಿಗೆ ಸಂಬಂಧಿಸಿದಂತೆ ಎರಡೂ ಹೆಚ್ಚು ಪ್ರಕರಣಳಲ್ಲಿ ಭಾಗಿಯಾಗಿದ್ದಾರೆ. ಈ ಅಪರಾಧಗಳಿಗೆ ಅಜೀವ ಕಾರಾಗೃಹ ಶಿಕ್ಷೆ ವಿಧಿಸಬಹುದಾಗಿದೆ. ಆದರೆ ನ್ಯಾಯಾಲಯವು ಈ ಅಂಶವನ್ನು ಸೂಕ್ತವಾಗಿ ಪರಾಮರ್ಶೆ ಮಾಡಿಲ್ಲ ಎಂದು ಬಿ ಎನ್ ಜಗದೀಶ್‌ ಅವರು ಅಭಿಪ್ರಾಯಿಸಿರುವುದು ಕಡತದ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಅದೇ ರೀತಿ ಆರೋಪಿಗಳು ನಿರಂತರವಾಗಿ ಎರಡು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ ಎಂದು ನ್ಯಾಯಾಲಯವು ನಿರ್ಣಯಿಸಿರುವುದಕ್ಕೂ ಬಿ ಎನ್ ಜಗದೀಶ್ ಅವರು ಆಕ್ಷೇಪ ಎತ್ತಿದ್ದಾರೆ. ಆರೋಪಿಗಳು ನಿರಂತರವಾಗಿ ಅಪರಾಧಿಕ ಕೃತ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಈ ಅಪರಾಧಗಳನ್ನು ಮಾಡಲು ಹೊಸ ಆರೋಪಿಗಳು ಸೇರ್ಪಡೆಯಾಗಿದ್ದಾರೆ. ಈ ಯಾವುದೇ ಅಂಶವನ್ನು ನ್ಯಾಯಾಲಯವು ಗಮನಿಸಿಲ್ಲ. ಹಾಗೆಯೇ ಆರೋಪಿಗಳ ವಿರುದ್ಧ ಕೊಲೆ, ದರೋಡೆ, ಸುಲಿಗೆ, ಅಕ್ರಮ ಶಸ್ತ್ರಾಸ್ತ್ರ ಕೊಲೆ ಪ್ರಯತ್ನ ಸೇರಿ ಇತರೆ ಅಪರಾಧಗಳ ಸಂಬಂಧ ಪ್ರಸ್ತುತ 8 ಪ್ರಕರಣಗಳು ಚಾಲ್ತಿಯಲ್ಲಿವೆ.  ಆದ್ದರಿಂದ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಅಗತ್ಯವಿದೆ ಎಂದು ಜಗದೀಶ್‌ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ದಾಖಲಿಸಿರುವುದು ಗೊತ್ತಾಗಿದೆ.

 

ಪ್ರಕರಣದ ಸಾರಾಂಶ

 

ಭಾರತಿ ನಗರದಲ್ಲಿ ವಾಸವಿದ್ದ ಶಿವಪ್ರಕಾಶ್‌ ಎಂಬಾತ ಕಳೆದ ಒಂದು ವರ್ಷದಿಂದ ಎಕ್ಸ್‌ ಟೀಮ್‌ ಪಾಯಿಂಟ್‌ನಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡಿಕೊಂಡಿದ್ದ. 2023ರಲ್ಲಿ ಕಿತ್ತಗನೂರಿನಲ್ಲಿ ಸ್ವತ್ತನ್ನು ಖರೀದಿಸಿ ಜಿಪಿಎ ಮಾಡಿಕೊಂಡಿದ್ದ. ಈ ಸ್ವತ್ತಿನಲ್ಲಿ ಶೆಡ್‌ ನಿರ್ಮಿಸಿದ್ದ ಅದನ್ನೂ ಜಿಪಿಎ ಮಾಡಿಕೊಂಡಿದ್ದ.  ಅಲ್ಲಿ ಜ್ಯೋತಿ ಮತ್ತು ಹಂಸ ಎಂಬುವರನ್ನು ಸೆಕ್ಯುರಿಟಿಯನ್ನಾಗಿ ನೇಮಿಸಿ ಕಾವಲಿಗೆ ಇರಿಸಿದ್ದ.

 

 

2025ರ ಫೆ.11ರಂದು ಜಗದೀಶ್‌ ಮತ್ತು ಕಿರಣ್‌ ಎಂಬುವರು ಈ ಸ್ವತ್ತಿನಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದರು. ಇಬ್ಬರು ಹೆಣ್ಣುಮಕ್ಕಳನ್ನು ಶೆಡ್‌ನಿಂದ ಹೊರಹಾಕಿದ್ದರು. ಶಿವಪ್ರಕಾಶ್‌, ಮನೆಯಲ್ಲಿದ್ದ ಸಂದರ್ಭದಲ್ಲಿ ಜಗದೀಶ್ ಎಂಬಾತ ಕರೆ ಮಾಡಿ ಈ ಸ್ವತ್ತನ್ನು ತನ್ನ ಹೆಸರಿಗೆ ಜಿಪಿಎ ಮಾಡಿಕೊಡಬೇಕು ಇಲ್ಲವಾದಲ್ಲಿ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ. ಆದರೆ ಈ ಸ್ವತ್ತನ್ನು ಮಾರಾಟ ಮಾಡಲು ಶಿವಪ್ರಕಾಶ್‌ ನಿರಾಕರಿಸಿದ್ದ. ಇದೇ ಸ್ವತ್ತಿನ ವಿಚಾರಕ್ಕೆ ಶಿವಪ್ರಕಾಶ್‌ಗೆ ಆಗಾಗ್ಗೆ ಜೀವ ಬೆದರಿಕೆ ಬರುತ್ತಿತ್ತು.

 

ಹೀಗಾಗಿ ತನ್ನ ಜೀವಕ್ಕೆ ಅಪಾಯವಿದೆ ಎಂದು ಜಗದೀಶ್‌, ಕಿರಣ್ ಮತ್ತು ಶಾಸಕ ಬೈರತಿ ಬಸವರಾಜ್ ಅವರ ವಿರುದ್ಧ ದೂರರ್ಜಿ ನೀಡಿದ್ದ. ಆದರೂ ಸಹ ಜಗದೀಶ್, ಕಿರಣ್‌, ವಿಮಲ್ ಮತ್ತು ಬೈರತಿ ಬಸವರಾಜ್ ಅವರಿಂದ ಪ್ರಾಣಭಯ ಇದೆ ಎಂದು ಕುಟುಂಬ ಸದಸ್ಯರಲ್ಲಿ ಹೇಳಿಕೊಂಡಿದ್ದ. 2025ರ ಜುಲೈ 13ರಂದು ಶಿವಪ್ರಕಾಶ್‌ ಮನೆಯಿಂದ ಹೊರಟು ಹೋಗಿದ್ದರೂ ಅಂದು ರಾತ್ರಿ ಮನೆಗೆ ಬಂದಿರಲಿಲ್ಲ. 2025ರ ಜುಲೈ 15ರಂದು ಮನೆಗೆ ಬಂದಿದ್ದ. ಅಂದು ಶಿವಪ್ರಕಾಶ್‌ ಮನೆಯಿಂದ ರಾತ್ರಿ 8 ಗಂಟೆಗೆ ಹೊರಗೆ ಹೋಗಿದ್ದ.  ಮನೆ ಬಳಿ ರಾತ್ರಿ 8-10ರ ಸುಮಾರಿಗೆ 8ರಿಂದ 9 ಮಂದಿ ಅಪರಿಚಿತ ವ್ಯಕ್ತಿಗಳು ಶಿವಪ್ರಕಾಶ್‌ನಿಗೆ ಲಾಂಗ್‌ ಮತ್ತು ಮಚ್ಚಿನಿಂದ ಹೊಡೆದಿದ್ದರು. ಲೋಕೇಶ್ ಎಂಬಾತ ಮೊಬೈಲ್‌ನಲ್ಲಿ ಇದನ್ನು ಸೆರೆ ಹಿಡಿದಿದ್ದ.

 

 

ಅಷ್ಟರಲ್ಲಿ ಶಿವಪ್ರಕಾಶ್‌ನನ್ನು ಹತ್ಯೆಗೈದು ಅಪರಿಚಿತ ವ್ಯಕ್ತಿಗಳು ಬಿಳಿ ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ದ್ವಿಚಕ್ರ ವಾಹನದಲ್ಲಿ ಹೊರಟು ಹೋಗಿದ್ದರು. ಈ ಕುರಿತು ಶಿವಪ್ರಕಾಶ್‌ ಅವರ ತಾಯಿ ವಿಜಯಲಕ್ಷ್ಮಿ ಅವರು ದೂರಿನಲ್ಲಿ ವಿವರಿಸಿದ್ದರು.

 

‘ಈ ಪ್ರಕರಣದ ತನಿಖಾ ಕಾಲದಲ್ಲಿ ಕೃತ್ಯದಲ್ಲಿ ಭಾಗಿಯಾದ 15 ಮಂದಿ ಆರೋಪಿಗಳನ್ನು ಪೊಲೀಸರು  ದಸ್ತಗಿರಿ ಮಾಡಿ ತನಿಖೆಗೆ ಒಳಪಡಿಸಿದ್ದರು. ಈ ಪ್ರಕರಣವು ಗಂಭೀರ ಮತ್ತು ಪ್ರಮುಖ ಪ್ರಕರಣವಾಗಿದ್ದು ಆರೋಪಿಗಳು ಶಿವಪ್ರಕಾಶ್‌ ಅಲಿಯಾಸ್‌ ಬಿಕ್ಲು ಶಿವನನ್ನು ಅತ್ಯಂತ ಅಮಾನುಷವಾಗಿ ಸಾರ್ವಜನಿಕ ಸ್ಥಳದಲ್ಲಿ ಹತ್ಯೆ ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯನ್ನುಂಟುಡಿದ್ದಾರೆ,’ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

Your generous support will help us remain independent and work without fear.

Latest News

Related Posts