ಬೆಂಗಳೂರು; ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಿಂದಲೂ ಗ್ರಾಸ್‌ರೂಟ್ ರೀಸರ್ಚ್ ಅಂಡ್ ಅಡ್ವೋಕೇಸಿ ಮೂವ್‌ಮೆಂಟ್ ಸಂಸ್ಥೆಯು ಸರ್ಕಾರದ ಹಲವು ಯೋಜನೆಗಳನ್ನು ಮೌಲ್ಯಮಾಪನ ಮತ್ತು ಅಧ್ಯಯನ ಮಾಡಿತ್ತು.
ಇವಿಎಂಗಳ ವಿಶ್ವಾಸಾರ್ಹತೆ ಮತ್ತು ನಿಖರತೆ ಕುರಿತು ವರದಿ ನೀಡಿರುವ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಹಿತಾಸಕ್ತಿ ಸಂಘರ್ಷ ಆರೋಪ ಮಾಡಿರುವ ಬೆನ್ನಲ್ಲೇ ಇದೇ ಗ್ರಾಸ್‌ರೂಟ್ ರೀಸರ್ಚ್ ಅಂಡ್ ಅಡ್ವೋಕೇಸಿ ಮೂವ್‌ಮೆಂಟ್ ಸಂಸ್ಥೆಯು ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿನ ಕಾಂಗ್ರೆಸ್ ಸರ್ಕಾರದ ಸಹಭಾಗಿತ್ವದಲ್ಲಿ ಹಲವು ಮೌಲ್ಯಮಾಪನ ಮತ್ತು ಅಧ್ಯಯನ ಮಾಡಲು ಅನುಮತಿ ನೀಡಿತ್ತು ಎಂಬುದು ಮುನ್ನೆಲೆಗೆ ಬಂದಿದೆ.
ಯೋಜನೆ, ಸಾಂಖ್ಯಿಕ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಸರ್ಕಾರದ ಇನ್ನಿತರೆ ಇಲಾಖೆಗಳ ಸಹಯೋಗದಲ್ಲಿ ಗ್ರಾಸ್‌ರೂಟ್ ರೀಸರ್ಚ್ ಅಂಡ್ ಅಡ್ವೋಕೇಸಿ ಮೂವ್‌ಮೆಂಟ್ ಸಂಸ್ಥೆಯು 2013-14ರಿಂದಲೂ ಸರ್ಕಾರದ ವಿವಿಧ ಯೋಜನೆಗಳನ್ನು ಮೌಲ್ಯಮಾಪನ ಮಾಡಿದೆ. ಈ ಸಂಬಂಧ ಸರ್ಕಾರಕ್ಕೆ ಹಲವು ಅಧ್ಯಯನ ವರದಿಗಳನ್ನೂ ಸಲ್ಲಿಸಿವೆ. ಅಲ್ಲದೇ ಈ ವರದಿಗಳನ್ನಾಧರಿಸಿ ಸರ್ಕಾರವು ಹಲವು ಕ್ರಮಗಳನ್ನೂ ಸಹ ಕೈಗೊಂಡಿದೆ.
ಇವಿಎಂಗಳ ವಿಶ್ವಾಸಾರ್ಹತೆ ಮತ್ತು ನಿಖರತೆ ಕುರಿತು ಗ್ರಾಸ್‌ರೂಟ್ ರೀಸರ್ಚ್ ಅಂಡ್ ಅಡ್ವೋಕೇಸಿ ಮೂವ್‌ಮೆಂಟ್ ಸಂಸ್ಥೆಯು ನೀಡಿರುವ ವರದಿಯಿಂದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವು ತೀವ್ರ ಮುಜುಗರಕ್ಕೀಡಾಗಿದೆ. ಈ ಬಗ್ಗೆ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರವನ್ನು ತೆಗಳುತ್ತಿರುವ ನಡುವೆಯೇ ಈ ವರದಿಯನ್ನು ಮೌಲ್ಯಮಾಪನ ಪ್ರಾಧಿಕಾರದ ಅಧಿಕೃತ ಜಾಲತಾಣದಿಂದಲೇ ತೆಗೆದು ಹಾಕಿದೆ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇವಿಎಂಗಳ ಕುರಿತಾದ ಈ ಸಮೀಕ್ಷೆಯನ್ನು ಡಾ. ಆರ್. ಬಾಲಸುಬ್ರಮಣ್ಯಂ ಸ್ಥಾಪಿಸಿರುವ ಗ್ರಾಮ್ ಸಂಸ್ಥೆ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಕುರಿತು 2024ರಲ್ಲೇ ಪುಸ್ತಕ ಬರೆದಿದ್ದಾರೆ. ಹೀಗಾಗಿ ಇದೊಂದು ಹಿತಾಸಕ್ತಿ ಸಂಘರ್ಷದ ಸ್ಪಷ್ಟ ಪ್ರಕರಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ
,


ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಆರೋಪಿಸಿತ್ತು.

ಆದರೀಗ ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೇ ಇದೇ ಗ್ರಾಮ್ ಸಂಸ್ಥೆಯು, ಕರ್ನಾಟಕ ಸರ್ಕಾರದ ಹಲವು ಇಲಾಖೆಗಳು ಜಾರಿಗೊಳಿಸಿದ್ದ ಯೋಜನೆಗಳ ಕುರಿತು ಅಧ್ಯಯನ ಮತ್ತು ಮೌಲ್ಯಮಾಪನ ನಡೆಸಿತ್ತು. ಸಿದ್ದರಾಮಯ್ಯ ಅವರು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿರುವ ಅವಧಿಯಲ್ಲಿಯೂ ಇದೇ ಸಂಸ್ಥೆಗೆ ಹಲವು ಯೋಜನೆಗಳ ಮೌಲ್ಯಮಾಪನ ಮತ್ತು ಅಧ್ಯಯನ ನಡೆಸಲು ಮಂಜೂರಾತಿ ನೀಡಿದೆ.
ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಗ್ರಾಮ್ ಮೌಲ್ಯಮಾಪನ ಮಾಡಿದ ಯೋಜನೆಗಳ ಪಟ್ಟಿ
ಪಂಚಾಯತ್ ರಾಜ್ 2025 ಮುನ್ನೋಟದ ಕುರಿತು ಅಧ್ಯಯನ ಮೌಲ್ಯಮಾಪನ ಮಾಡಲು ಸರ್ಕಾರದ್ದೇ ಅಂಗ ಸಂಸ್ಥೆಯಾಗಿರುವ ಕೆಪಿಎಂಜಿಯು ಗ್ರಾಮ್ ಸಂಸ್ಥೆಗೆ 2017ರ ಸೆ.5ರಂದು ಮಂಜೂರಾತಿ ನೀಡಿತ್ತು. 2017ರಿಂದ 2018ರವರೆಗೆ ಅಧ್ಯಯನ ನಡೆಸಿತ್ತು. ಅದೇ ರೀತಿ ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ 2025ರ ಮುನ್ನೋಟದ ಕುರಿತು ಅಧ್ಯಯನ, ಮೌಲ್ಯಮಾಪನ ಮಾಡಲು 2017ರ ಸೆ.5ರಂದು ಈ ಗ್ರಾಮ್ ಸಂಸ್ಥೆಗೆ ಅನುಮತಿ ನೀಡಿತ್ತು.
ಹಾಗೆಯೇ ಕರ್ನಾಟಕ ಸರ್ಕಾರದ ವಸತಿ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್ ಸಹಕಾರದಲ್ಲಿ ವಾಸ ಯೋಗ್ಯ ನಿವೇಶನಗಳ ರಚನೆ ಮತ್ತು ಭೂ ಸ್ವಾಧೀನ ಕುರಿತು ಅಧ್ಯಯನ, ಮೌಲ್ಯಮಾಪನ ಮಾಡಲು 2015ರ ಮೇ 26ರಂದೇ ಅನುಮತಿ ನೀಡಿತ್ತು.
ಸಂಸದ್ ಆದರ್ಶ ಗ್ರಾಮ ಯೋಜನೆಯ ಅನುಷ್ಠಾನದ ಕುರಿತು ಅಧ್ಯಯನ ಮತ್ತು ಮೌಲ್ಯಮಾಪನ ಮಾಡಲು 2015ರ ಮಾರ್ಚ್ 11ರಂದು ಗ್ರಾಮ್ ಸಂಸ್ಥೆಗೆ ಮಂಜೂರಾತಿ ನೀಡಿತ್ತು. ರಾಯಚೂರಿನಲ್ಲಿ ಅಧ್ಯಯನ ನಡೆಸಿದ್ದ ಈ ಸಂಸ್ಥೆಗೆ ಕರ್ನಾಟಕ ಸರ್ಕಾರವೇ ನೆರವು ನೀಡಿತ್ತು.
ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆಯ ಕುರಿತು ಮೇಲ್ವಿಚಾರಣೆ ಅಧ್ಯಯನ ಮಾಡಲು 2014ರ ಜನವರಿ 2ರಂದು ಗ್ರಾಮ್ ಸಂಸ್ಥೆಗೆ ಅನುಮತಿ ನೀಡಿತ್ತು. ಇದಕ್ಕೂ ಸಹ ಕರ್ನಾಟಕ ಸರ್ಕಾರವೇ ನೆರವು ನೀಡಿತ್ತು. ಕೊಡಗು, ಕೋಲಾರ ಜಿಲ್ಲೆಯಲ್ಲಿ ಮಾನವ ಅಭಿವೃದ್ಧಿ ಕುರಿತು ಅಧ್ಯಯನ ಮೌಲ್ಯಮಾಪನ ಮಾಡಲು ಗ್ರಾಮ್ ಸಂಸ್ಥೆಗೆ 2013ರ ಜುಲೈ 1ರಂದೇ ಅನುಮತಿ ನೀಡಿತ್ತು. ಇದಕ್ಕೂ ಕರ್ನಾಟಕ ಸರ್ಕಾರವೇ ನೆರವು ನೀಡಿತ್ತು.
ಸಿದ್ದರಾಮಯ್ಯ ಅವರ ಎರಡನೇ ಅವಧಿಯಲ್ಲಿಯೂ ಇದೇ ಗ್ರಾಮ್ ಸಂಸ್ಥೆಗೆ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ ಮತ್ತು ಮೌಲ್ಯಮಾಪನ ಮಾಡಲು ಅನುಮತಿ ನೀಡಲಾಗಿದೆ. ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಟೆಂಡರ್ ಮೂಲಕವೇ ಈ ಸಂಸ್ಥೆಯನ್ನು ಆಯ್ಕೆ ಮಾಡಿರುವುದು ಗೊತ್ತಾಗಿದೆ.
ಹತ್ತನೇ ತರಗತಿಯಲ್ಲಿ ಕಲಿಕೆ ಮತ್ತು ಫಲಿತಾಂಶಗಳ ಕುರಿತು ರಾಜ್ಯದ ಬೆಂಗಳೂರು, ಬೆಳಗಾವಿ, ಕಲ್ಬುರ್ಗಿ ಮತ್ತು ಮೈಸೂರಿನಲ್ಲಿ ಅಧ್ಯಯನ ನಡೆಸಲು 2024ರ ಏಪ್ರಿಲ್ 22ರಂದು ಇದೇ ಸಂಸ್ಥೆಗೆ ಅನುಮತಿ ನೀಡಿದೆ. ಮೈಸೂರು, ಕೊಡಗು, ಚಾಮರಾಜನಗರ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಜೇನು ಕುರುಬ ಮತ್ತು ಕೊರಗ ಸಮುದಾಯದಲ್ಲಿನ ಯುವಕರ ಉದ್ಯೋಗದ ಸ್ಥಿತಿ ಕುರಿತು ಅಧ್ಯಯನ ಮೌಲ್ಯಮಾಪನ ಮಾಡಲು 2023ರ ಸೆ.30ರಂದು ಗ್ರಾಮ್ ಸಂಸ್ಥೆಗೆ ಅನುಮತಿ ನೀಡಿತ್ತು. ಈ ಅಧ್ಯಯನಕ್ಕೆ ಕರ್ನಾಟಕ ಸರ್ಕಾರವೇ ನೆರವು ನೀಡಿತ್ತು.
ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಗಳಲ್ಲಿ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ತರಬೇತಿಯ ಫಲಿತಾಂಶಗಳ ಕುರಿತು ಇದೇ ಗ್ರಾಮ್ ಸಂಸ್ಥೆಯು ಅಧ್ಯಯನ, ಮೌಲ್ಯಮಾಪನ ಮಾಡಿದೆ. ಇದಕ್ಕೆ 2023ರ ಜನವರಿ 4ರಂದೇ ಅನುಮತಿ ನೀಡಿದೆ. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರಕ್ಕಾಗಿ ಈ ಅಧ್ಯಯನ ಮೌಲ್ಯಮಾಪನ ಮಾಡಿರುವುದು ತಿಳಿದು ಬಂದಿದೆ.
ಅಲ್ಲದೇ ಸಮಗ್ರ ಶಿಕ್ಷಣದ ಕುರಿತೂ ಅಧ್ಯಯನ, ಮೌಲ್ಯಮಾಪನ ಮಾಡಲು 2023ರ ಜನವರಿ 4ರಂದು ಇದೇ ಗ್ರಾಮ್ ಸಂಸ್ಥೆಗೆ ಅನುಮತಿ ನೀಡಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಇದೇ ಗ್ರಾಮ್ ಸಂಸ್ಥೆಯು ಹಲವು ಯೋಜನೆಗಳ ಕುರಿತು ಅಧ್ಯಯನ, ಮೌಲ್ಯಮಾಪನ ಮಾಡಿರುವುದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಜಾಲತಾಣದಿಂದ ತಿಳಿದು ಬಂದಿದೆ.
2023-2030 ಕರ್ನಾಟಕ ಕೌಶಲ್ಯ ನೀತಿ ಕುರಿತು ಅಧ್ಯಯನ ನಡೆಸಲು 2022ರ ಡಿಸೆಂಬರ್ 15ರಂದು ಅನುಮತಿ ನೀಡಿದೆ. ಎಂಜಿ ನರೇಗಾದ ಕುರಿತು ಅಧ್ಯಯನ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು 2022ರ ಅಕ್ಟೋಬರ್ 18ರಂದು ಅನುಮತಿ ನೀಡಿತ್ತು. ನಗರ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕುರಿತು ಮೈಸೂರಿನಲ್ಲಿ ಅಧ್ಯಯನ ಮೌಲ್ಯಮಾಪನ ಮಾಡಲು 2021ರ ಡಿಸೆಂಬರ್ 1ರಂದು ಅನುಮತಿ ನೀಡಿತ್ತು.
ಎಸ್‌ವಿಇಇಪಿ ಮ್ಯೂಸಿಯಂ ಮತ್ತು ಕೇಂದ್ರದ ಸಾಮರ್ಥ್ಯ ಕುರಿತು ಅಧ್ಯಯನ ಮತ್ತು ಮೌಲ್ಯಮಾಪನ ಮಾಡಲು 2021ರ ಜೂನ್ 24ರಂದು ಅನುಮತಿ ನೀಡಿತ್ತು. ಇದಕ್ಕೆ ಭಾರತದ ಚುನಾವಣೆ ಆಯೋಗವು ನೆರವು ನೀಡಿತ್ತು. ಕೌಶಲ್ಯ ಅಧ್ಯಯನದಲ್ಲಿ ಇರುವ ಅಂತರದ ಕುರಿತು ಈ ಗ್ರಾಮ್ ಸಂಸ್ಥೆಯು ರಾಯಚೂರು, ಯಾದಗಿರಿ, ರಾಮನಗರದಲ್ಲಿ ಅಧ್ಯಯನ ಮಾಡಲು 2020ರ ನವೆಂಬರ್ 15ರಂದು ಅನುಮತಿ ಪಡೆದಿತ್ತು. ಇದಕ್ಕೆ ಕೌಶಲ್ಯ ಕರ್ನಾಟಕವು ನೆರವು ನೀಡಿತ್ತು.
ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಣೆ ಮತ್ತು ಅದರ ಪರಿಣಾಮಗಳ ಕುರಿತು ಅಧ್ಯಯನ ಮೌಲ್ಯಮಾಪನ ಮಾಡಲು 2019ರ ಜೂನ್ 19ರಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಅನುಮತಿ ನೀಡಿತ್ತು. ಹಿರಿಯ ನಾಗರಿಕರ ಸ್ಥಿತಿಗತಿ ಕುರಿತು ಅಧ್ಯಯನ ಮಾಡಲು 2019ರ ಜನವರಿ 31ರಂದು ಅನುಮತಿ ಪಡೆದಿತ್ತು.
ದೀನ್ ದಯಾಳ್ ಉಪಾಧ್ಯ ಗ್ರಾಮೀಣ ಕೌಶಲ್ಯ ಯೋಜನೆ ಕುರಿತು ಅಧ್ಯಯನ ಮಾಡಲು 2019ರ ಜನವರಿ 30, ಬಿಪಿಎಲ್ ಪಡಿತರ ಮಹಿಳೆಯರ ಆರೋಗ್ಯ ಮತ್ತು ಸಾರ್ವಜನಿಕ ಆರೋಗ್ಯದಲ್ಲಿನ ಸೌಲಭ್ಯಗಳ ಕುರಿತು ಅಧ್ಯಯನ, ಅರಿವು ಶೈಕ್ಷಣಿಕ ಸಾಲದ ಕುರಿತು ಅಧ್ಯಯನ ಮಾಡಲು 2019ರ ಜನವರಿ 1ರಂದು ಅನುಮತಿ ಪಡೆದಿತ್ತು. ಈ ಎಲ್ಲಾ ಯೋಜನೆಗಳ ಅಧ್ಯಯನ ಮತ್ತು ಮೌಲ್ಯಮಾಪನ ಮಾಡಲು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವೇ ಅನುಮತಿ ನೀಡಿತ್ತು.
ಚುನಾವಣೆಗಳಲ್ಲಿ ಬಳಕೆಯಾಗುತ್ತಿರುವ ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ವಿಶ್ವಾಸಾರ್ಹತೆ ಮತ್ತು ನಿಖರತೆ ಬಗ್ಗೆ ರಾಜ್ಯದಲ್ಲಿ ಬಹುಪಾಲು ಜನರು ಅಂದರೆ, ಶೇಕಡಾ 83.61ರಷ್ಟು ಮತದಾರರು ವಿಶ್ವಾಸ ಹೊಂದಿದ್ದಾರೆ ಎಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ನಡೆಸಿದ್ದ ಅಧ್ಯಯನವು ಹೊರಗೆಡವಿತ್ತು.
ಇವಿಎಂ ನಿಖರತೆ: ಕಲ್ಬುರ್ಗಿಯಲ್ಲಿ ಶೇ. 94.98, ಮೈಸೂರಲ್ಲಿ ಶೇ. 88.59 ರಷ್ಟು ಭರ್ಜರಿ ವಿಶ್ವಾಸಾರ್ಹತೆ
ವಿಶೇಷವೆಂದರೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ತವರು ಜಿಲ್ಲೆ ಕಲ್ಬುರ್ಗಿಯಲ್ಲಿ ಶೇ.94.08ರಷ್ಟು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು ವಿಭಾಗದಲ್ಲಿ ಶೇ. 88.59ರಷ್ಟು ಮತದಾರರು, ಇವಿಎಂಗಳ ವಿಶ್ವಾಸಾರ್ಹತೆ ಮತ್ತು ನಿಖರತೆಯ ಕುರಿತು ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದರು.
ಚುನಾವಣೆಗಳಲ್ಲಿ ಹಣಬಲ, ತೋಳ್ಬಲ; ಕಲ್ಬುರ್ಗಿ, ಮೈಸೂರು, ಬೆಳಗಾವಿ, ಬೆಂಗಳೂರಿನಲ್ಲಿ ಪ್ರಭಾವ ಬೀರಿದ್ದೆಷ್ಟು?
ಅಲ್ಲದೇ ಇದೇ ವರದಿಯಲ್ಲಿ ಹಣಬಲ ಮತ್ತು ತೋಳ್ಬಲದ ಕುರಿತು ವಿಶ್ಲೇಷಿಸಿರುವುದನ್ನು ಸ್ಮರಿಸಬಹುದು.









