ಬೆಂಗಳೂರು; ಡಾ ಬಾಬು ಜಗಜೀವನರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮವು ವಾಣಿಜ್ಯ ಅಭಿವೃದ್ಧಿ ತಾಂತ್ರಿಕ ಮತ್ತು ಹಣಕಾಸು ಚಟುವಟಿಕೆಗಳ ನಿರ್ವಹಣೆಗೆ ಐಎಂಎಸ್ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸುವ ಅನುಭವ ಹೊಂದಿರದೇ ಕಂಪನಿಗೆ ಕರಾರು ಒಪ್ಪಂದ ಮಾಡಿಕೊಂಡಿರುವುದು ಇದೀಗ ಬಹಿರಂಗವಾಗಿದೆ.
ವಿಶೇಷವೆಂದರೇ ಐಎಎಂಎಸ್ (INFORMATION MANAGEMENT SYSTEM) ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವಲ್ಲಿ ಯಾವುದೇ ಅನುಭವ ಹೊಂದಿಲ್ಲ ಎಂದು ಹೇಳಲಾಗಿರುವ ಕಂಪನಿಯನ್ನೇ ಟೆಂಡರ್‍ನಲ್ಲಿ ಎಲ್ 1 ಆಗಿ ಆಯ್ಕೆ ಮಾಡಲಾಗಿತ್ತು. ಅಲ್ಲದೆ ಟೆಂಡರ್‍ದಾರರು ನಿಗದಿಪಡಿಸಿದ್ದ ಮೊತ್ತವೂ ಸಮರ್ಪಕವಾಗಿರಲಿಲ್ಲ. ಆದರೂ ಇಲಾಖೆಯು ಅದೇ ಕಂಪನಿಯೊಂದಿಗೇ ಕರಾರು ಒಪ್ಪಂದವನ್ನು ಮಾಡಿಕೊಂಡಿತ್ತು. ಇಲಾಖೆಯ ಈ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ಗೆ ದಾಖಲೆಗಳು (BJLIDC/ADMN/ADOT/49/2024-MD) ಲಭ್ಯವಾಗಿವೆ.
ಲಿಡ್ಕರ್‍ನ ಪ್ರಧಾನ ಕಚೇರಿ, ಕೇಂದ್ರ ಉಗ್ರಾಣ, ಮಾರಾಟ ಮಳಿಗೆಗಳು, ವಾಣಿಜ್ಯ ವಿಭಾಗದ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಮಗ್ರವಾದ ಬಿಲ್ಲಿಂಗ್ ಮತ್ತು ಇನ್‌ವಂಟ್ರಿ ನಿರ್ವಹಣೆ ತಂತ್ರಾಂಶ ಅಳವಡಿಸಲು ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ 2024ರ ಜನವರಿ 31ರಂದು ನಡೆದಿದ್ದ ಸಭೆಯು ತೀರ್ಮಾನಿಸಿತ್ತು. ಸಭೆಯ ತೀರ್ಮಾನದಂತೆ ಟೆಂಡರ್ ಆಹ್ವಾನಿಸಲಾಗಿತ್ತು.

ಈ ಟೆಂಡರ್‍ನಲ್ಲಿ ಭಾಗವಹಿಸಿದ್ದ ಕಂಪನಿಗಳ ಪೈಕಿ ಸನ್ ಪ್ಲಸ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಪ್ರೈ ಜಿಎಸ್‌ಟಿ ಒಳಗೊಂಡಂತೆ ನಮೂದಿಸಿದ್ದ ದರದೊಂದಿಗೆ ಸಂಧಾನ ನಡೆಸಿದ ನಂತರ 65.00 ಲಕ್ಷ ರು.ಗೆ ಒಪ್ಪಿತ್ತು. ಭಾಗವಹಿಸಿದ್ದ ಇತರೆ ಕಂಪನಿಗಳಿಗೆ ಹೋಲಿಸಿದರೆ ಸನ್ ಪ್ಲಸ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಪ್ರೈ ಲಿಮಿಟೆಡ್ ಕಡಿಮೆ ದರ ನಮೂದಿಸಿದ್ದ ಕಾರಣ ಟೆಂಡರ್‍ನಲ್ಲಿ ಎಲ್ 1 ಆಗಿ ಹೊರಹೊಮ್ಮಿತ್ತು.

ಈ ಕಂಪನಿಗೆ 2024ರ ಮಾರ್ಚ್ 15ರಂದು ಕಾರ್ಯಾದೇಶವನ್ನೂ ನೀಡಲಾಗಿತ್ತು ಎಂಬುದು ದಾಖಲೆಯಿಂದ ತಿಳಿದು ಬಂದಿದೆ.

ಕಾರ್ಯಾದೇಶ ಪಡೆದುಕೊಂಡಿದ್ದ ಈ ಕಂಪನಿಯೊಂದಿಗೆ ಲಿಡ್ಕರ್ ಒಡಂಬಡಿಕೆಯನ್ನೂ ಮಾಡಿಕೊಂಡಿತ್ತು. ಈ ಕಂಪನಿಗೆ Design, Development, Deployment and Maintenance Of Information Management System (IMS) ಗೆ ಮಾತ್ರ ಸೀಮಿತವಾಗಿತ್ತು. ಆದರೆ ಈ ಕ್ಷೇತ್ರದಲ್ಲಿಯೂ ಸನ್ ಪ್ಲಸ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಪ್ರೈ ಲಿ ಗೆ ಯಾವುದೇ ಅನುಭವ ಹೊಂದಿರಲಿಲ್ಲ ಎಂಬುದು ಗೊತ್ತಾಗಿದೆ.
‘ಐಎಂಎಸ್ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲು ಎಲ್ 1 ಆಗಿ ಆಯ್ಕೆಯಾದ ಸಂಸ್ಥೆಯು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ (SCM) ಅಭಿವೃದ್ಧಿಪಡಿಸುವಲ್ಲಿ ಯಾವುದೇ ಅನುಭವ ಹೊಂದಿರುವುದಿಲ್ಲ. ಅಲ್ಲದೇ ಎಸ್‌ಸಿಎಂ ಗೆ ಟೆಂಡರ್‍ನಲ್ಲಿ ಟೆಂಡರ್‍ದಾರರು ಮತ್ತು ಎಲ್-1 ಆಗಿ ಹೊರಹೊಮ್ಮಿದ ಟೆಂಡರ್‍ದಾರರು ನಿಗದಿಪಡಿಸಿದ ಮೊತ್ತವೂ ಸಮರ್ಪಕವಾಗಿರುವುದಿಲ್ಲ,’ ಎಂದು ಇಲಾಖೆಯ ಐಟಿ ಸಲಹೆಗಾರರು ಅಭಿಪ್ರಾಯ ನೀಡಿದ್ದರು ಎಂಬುದು ತಿಳಿದು ಬಂದಿದೆ.

ಇ-ಕಾಮರ್ಸ್‌ನಲ್ಲಿ ವಾಣಿಜ್ಯ ಚಟುವಟಿಕೆ ನಡೆಯಲು ಈ ತಂತ್ರಾಂಶವು ನಿರ್ಣಾಯವಾಗಿದೆ. ಆದರೂ ಈ ವಿಚಾರದಲ್ಲಿ ತುಂಬಾ ವಿಳಂಬವಾಗಿತ್ತು. ಇದೊಂದು ಗಂಭೀರವಾದ ವಿಷಯವಾಗಿದ್ದರೂ ಸಹ ಇಲಾಖೆಯ ಉನ್ನತ ಅಧಿಕಾರಿಗಳು, ಅನುಭವವನ್ನೇ ಹೊಂದಿರದ ಕಂಪನಿಗೆ ಆದೇಶ ನೀಡಿದಲ್ಲದೇ ಕರಾರು ಒಡಂಬಡಿಕೆ ಮಾಡಿಕೊಂಡಿದ್ದರು. ಇದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
ಈ ಎಲ್ಲಾ ಬೆಳವಣಿಗಳ ಕುರಿತು ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅವರೂ ಸಹ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು ಎಂದು ಗೊತ್ತಾಗಿದೆ.
ಚರ್ಮೋತ್ಪನ್ನಗಳ ವಹಿವಾಟು ನಿರ್ವಹಣೆ, ಬಳಕೆದಾರರ, ಗ್ರಾಹಕ ಸ್ನೇಹಿ ಮತ್ತು ವಹಿವಾಟಿನಲ್ಲಿ ಹೆಚ್ಚು ಪಾರದರ್ಶಕ ಹಾಗೂ ದಕ್ಷತೆ ಸಾಧಿಸಲು ನಿಗಮವು ಹೊಂದಿತ್ತು. ಪ್ರಧಾನ ಕಚೇರಿ, ಆಡಳಿತ ವಿಭಾಗ, ವಾಣಿಜ್ಯ ವಿಭಾಗ, ಲೆಕ್ಕಪತ್ರ ವಿಭಾಗ, ಕೇಂದ್ರ ಉಗ್ರಾಣ, ಮಾರಾಟ ಮಳಿಗೆಗಳ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಮಗ್ರವಾದ ಬಿಲ್ಲಿಂಗ್ ಮತ್ತು ಇನ್‌ವೆಂಟ್ರಿ ನಿರ್ವಹಣೆ ತಂತ್ರಾಂಶಕ್ಕೆ ಮೊರೆ ಹೋಗಿದ್ದನ್ನು ಸ್ಮರಿಸಬಹುದು.









