ಬೆಂಗಳೂರು; ಐದೇ ಐದು ನಿಮಿಷದ ಕಿರು ಚಿತ್ರ ನಿರ್ಮಾಣಕ್ಕಾಗಿ ಸರ್ಕಾರದ ಬೊಕ್ಕಸದಿಂದ ಮಾಜಿ ಸಚಿವ ಮುರುಗೇಶ್ ಆರ್ ನಿರಾಣಿ ಮತ್ತು ಅಧಿಕಾರಿಗಳು 4.50 ಕೋಟಿ ರು. ಖರ್ಚು ಮಾಡಿದ್ದರು ಎಂಬ ಆರೋಪಿತ ಪ್ರಕರಣವನ್ನು ಇದೀಗ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪೊಲೀಸ್ ವಿಭಾಗವೇ ಮುಕ್ತಾಯಗೊಳಿಸಿರುವುದು ಇದೀಗ ಬಹಿರಂಗವಾಗಿದೆ.
ಈ ಸಂಬಂಧ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ರಾಮಪ್ಪ ವಿ ಸಾವಳಗಿ ಅವರು 8ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಿಗೆ 2025ರ ಡಿಸೆಂಬರ್ 9ರಂದು ವರದಿ ಸಲ್ಲಿಸಿದ್ದಾರೆ. ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಈ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಕಾಂಗ್ರೆಸ್ ಸರ್ಕಾರವು ಪೂರ್ವಾನುಮತಿ ನೀಡಿರಲಿಲ್ಲ. ಲೋಕಾಯುಕ್ತ ಪೊಲೀಸರ ಕೋರಿಕೆಯನ್ನೂ ಸರ್ಕಾರವು ತಿರಸ್ಕೃತಗೊಳಿಸಿತ್ತು. ಹೀಗಾಗಿ ಮುರುಗೇಶ್ ಆರ್ ನಿರಾಣಿ ಅವರ ವಿರುದ್ಧ ತನಿಖೆ ಪ್ರಕರಣವನ್ನೂ ಲೋಕಾಯುಕ್ತ ಪೊಲೀಸ್ ವಿಭಾಗವು ಮುಕ್ತಾಯಗೊಳಿಸಿರುವುದು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಿಂದ ಗೊತ್ತಾಗಿದೆ.
ವಿಶೇಷವೆಂದರೇ ಈ ಪ್ರಕರಣದಲ್ಲಿ ಮುರುಗೇಶ್ ನಿರಾಣಿ ಅವರ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ಪೂರ್ವಾನುಮತಿ ನೀಡಿಲ್ಲ ಎಂದು ಖುದ್ದು ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಆದಿಯಾಗಿ ಇಡೀ ಸರ್ಕಾರವೇ ಬೊಬ್ಬೆ ಹೊಡೆದಿತ್ತು.
ಲೋಕಾ ಕಾನೂನು ವಿಭಾಗದ ಅಭಿಪ್ರಾಯವೇನು?
ಮುರುಗೇಶ್ ನಿರಾಣಿ ಅವರ ವಿರುದ್ಧ ವಿಚಾರಣೆ ನಡೆಸಲು ಕೋರಿರುವ ದೂರಿನಲ್ಲಿ ವಾಸ್ತವಾಂಶಗಳಿಲ್ಲ. ಹೀಗಾಗಿ ಅವರ ವಿರುದ್ಧ ತನಿಖೆ ನಡೆಸಲು ಸೆಕ್ಷನ್ 17(ಎ) ಅಡಿಯಲ್ಲಿ ಪೂರ್ವಾನುಮತಿ ಕೋರಿ ಮತ್ತೊಮ್ಮೆ ಪ್ರಸ್ತಾವ ಸಲ್ಲಿಸುವ ಅಗತ್ಯವಿಲ್ಲ ಎಂದು ಲೋಕಾಯುಕ್ತ ಸಂಸ್ಥೆಯ ಕಾನೂನು ಕೋಶದ ಅಧ್ಯಕ್ಷರು ಅಭಿಪ್ರಾಯ ನೀಡಿರುವುದು ವರದಿಯಿಂದ ಗೊತ್ತಾಗಿದೆ.

ಅದೇ ರೀತಿ ಇನ್‌ವೆಸ್ಟ್ ಕರ್ನಾಟಕದ ಸಿಇಓ ಶಿವಕುಮಾರ್, ಎಂಸಿ ಅಂಡ್ ಎ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸಿದ್ದಲಿಂಗಪ್ಪ ಬಿ ಪೂಜಾರಿ, ಮತ್ತು ಉಪ ವ್ಯವಸ್ಥಾಪಕ ಪಿ ಎಸ್ ನಂದೀಶ್ ಅವರ ವಿರುದ್ಧವೂ ವಿಚಾರಣೆ, ತನಿಖೆ ಕೈಗೊಳ್ಳಲು ಸರ್ಕಾರವು ಭ್ರಷ್ಟಾಚಾರ ಪ್ರತಿಬಂಧಕ ಕಾfಯದೆ 1988 ಕಲಂ 17(ಎ) ಅಡಿಯಲ್ಲಿ ಸಕ್ಷಮ ಪ್ರಾಧಿಕಾರಗಳು ಪೂರ್ವಾನುಮತಿ ನೀಡಿಲ್ಲ. ಹೀಗಾಗಿ ಈ ದೂರರ್ಜಿಯ ಅಂತಿಮ ವರದಿಯನ್ನು 2025ರ ಅಕ್ಟೋಬರ್ 15ರಂದು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಹೀಗಾಗಿ ಈ ದೂರರ್ಜಿಯನ್ನು ಮುಕ್ತಾಯ ಮಾಡಲಾಗಿದೆ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಗುರುತರವಾದ ಆರೋಪಕ್ಕೆ ಒಳಗಾಗಿದ್ದ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಬೇಕು ಎಂದು ಲೋಕಾಯುಕ್ತ ಸಂಸ್ಥೆಯು ಪ್ರಸ್ತಾವನೆ ಸಲ್ಲಿಸಿತ್ತು. ಅಧಿಕಾರಿಗಳ ವಿರದ್ಧ ವಿಚಾರಣೆ ಮುಂದುವರೆಸಲು ಯಾವುದೇ ಆಧಾರವಿಲ್ಲ ಎಂದು ಅಭಿಪ್ರಾಯಿಸಿರುವ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಈ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು.
ಈ ಸಂಬಂಧ ವಾಣಿಜ್ಯ ಮತ್ತು ಕೈಗಾರಿಕೆ ಲಾಖೆಯು 2025ರ ಮೇ 28ರಂದೇ ಲೋಕಾಯುಕ್ತ ಪೊಲೀಸ್ ಮಹಾ ನಿರೀಕ್ಷಕರಿಗೆ ಪತ್ರವನ್ನೂ ಬರೆದಿತ್ತು.
ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 (ತಿದ್ದುಪಡಿ 2018) ಕಲಂಕ 17 ಎ ಅಡಿಯಲ್ಲಿ ಇದುವರೆಗೂ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಲೋಕಾಯುಕ್ತ ಪೊಲೀಸರು ಪೂರ್ವಾನುಮತಿಯನ್ನು ಕೋರಿ 9 ಬಾರಿ ಸಕ್ಷಮ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ಆದರೆ ಇದುವರೆಗೂ ಪೂರ್ವಾನುಮತಿ ನೀಡುವ ಸಂಬಂಧ ಯಾವುದೇ ಕ್ರಮ ವಹಿಸಿರಲಿಲ್ಲ.
ನಿರಾಣಿ ವಿರುದ್ಧದ ಪ್ರಕರಣದಲ್ಲಿನ ಅಧಿಕಾರಿಗಳ ವಿಚಾರಣೆಗೆ ಇನ್ನೂ ಸಿಗದ ಪೂರ್ವಾನುಮತಿ; ಆರೋಪಿತರ ರಕ್ಷಣೆ?
ಇದೇ ಪ್ರಕರಣದಲ್ಲಿ ಮುರುಗೇಶ್ ನಿರಾಣಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ನೀಡದೇ ಇರುವ ಸಂಗತಿಯನ್ನೇ ಮುಂದಿಟ್ಟುಕೊಂಡು ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಸರ್ಕಾರವೇ ಬೀದಿಗಿಳಿದಿತ್ತು. ಅಲ್ಲದೇ ವಿಚಾರಣೆಗೆ ಅನುಮತಿ ನೀಡಬೇಕು ಎಂದು ಸಚಿವರ ನಿಯೋಗವೇ ರಾಜ್ಯಪಾಲರನ್ನು ಭೇಟಿ ಮಾಡಿತ್ತು.
ಲೋಕಾಯುಕ್ತಕ್ಕೆ ಬರೆದ ಪತ್ರದಲ್ಲೇನಿತ್ತು?
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕ ಬಿ ಕೆ ಶಿವಕುಮಾರ್, ಜಂಟಿ ನಿರ್ದೇಶಕ ಸಿದ್ದಲಿಂಗಪ್ಪ ಪೂಜಾರಿ ಇವರುಗಳ ವಿರುದ್ಧ ಪ್ರಾಥಮಿಕ ವಿಚಾರಣೆ ಕೈಗೊಳ್ಳಲು ಪೂರ್ವಾನುಮತಿ ನೀಡುವಂತೆ ಕೋರಿತ್ತು.
ಪ್ರಕರಣವನ್ನು ಪರಿಶೀಲಿಸಲಾಗಿ ಬಿಬಿಪಿ ಸ್ಟುಡಿಯೋ ವರ್ಚುವಲ್ ಭಾರತ್ ಪ್ರೈವೈಟ್ ಲಿಮಿಟೆಡ್ ಕಂಪನಿಯು ಇನ್ವೆಸ್ಟ್ ಕರ್ನಾಟಕ 2022ರ ಕಾರ್ಯಕ್ರಮಕ್ಕಾಗಿ 3 ಡಿ ಚಲನಚಿತ್ರವನ್ನು ತಯಾರಿಸಲು ತೆಗೆದುಕಂಡಿದ್ದ 1,08,35,151 ಮೊತ್ತವನ್ನು ಮರು ಪಾವತಿಸಿರುವುದಾಗಿ ಕರ್ನಾಟಕ ರಾಜ್ಯ ಮಾರ್ಕೆಂಟಿಂಗ್ ಕಮ್ಯುನಿಕೇಷನ್ಸ್ ಮತ್ತು ಅಡ್ವರ್ಟೈಸಿಂಗ್ ಲಿಮಿಟೆಡ್ ಸಂಸ್ಥೆಯು 2025ರ ಮಾರ್ಚ್ 21ರಂದು ತಿಳಿಸಿತ್ತು.

ಬಿಬಿಪಿ ಸ್ಟುಡಿಯೋ ವರ್ಚುವಲ್ ಭಾರತ್ ಪ್ರೈವೈಟ್ ಲಿಮಿಟೆಡ್ ಕಂಪನಿಯು ಇನ್ವೆಸ್ಟ್ ಕರ್ನಾಟಕ 2025ರ ಕಾರ್ಯಕ್ರಮದ ಸಮಯದಲ್ಲಿ 3 ಡಿ ಚಲನಚಿತ್ರವನ್ನು ಉಚಿತವಾಗಿ ಪ್ರದರ್ಶಿಸಲು ಅನುಮತಿ ನೀಡಿದೆ ಎಂದು 2025ರ ಫೆ.10ರಂದು ಇ-ಮೈಲ್‌ನಲ್ಲಿ ತಿಳಿಸಿದೆ. ಅಲ್ಲದೇ ಬಿಬಿಪಿ ಸ್ಟುಡಿಯೋ ವರ್ಚುವಲ್ ಭಾರತ್ ಪ್ರೈವೈಟ್ ಲಿಮಿಟೆಡ್ ಕಂಪನಿಯು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ವಿರುದ್ಧ ಹೈಕೋರ್ಟ್‌ನಲ್ಲಿ ದಾಖಲಿಸಿದ್ದ ಪ್ರಕರಣವು 2024ರ ಜೂನ್ 14ರಂದು ಹೊರಡಿಸಿದ ಆದೇಶದಲ್ಲಿ ಇತ್ಯರ್ಥಗೊಂಡಿತ್ತು.
ಬಿಬಿಪಿ ಸ್ಟುಡಿಯೋ ವರ್ಚುವಲ್ ಭಾರತ್ ಪ್ರೈವೈಟ್ ಲಿಮಿಟೆಡ್ ಕಂಪನಿಯು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ವಿರುದ್ಧ ಹೈಕೋರ್ಟ್‌ನಲ್ಲಿ ಹೂಡಿದ್ದ ಪ್ರಕರಣದಲ್ಲಿ ಸೋತಿದೆ. ಚಿತ್ರ ನಿರ್ಮಾಣಕ್ಕಾಗಿ ಪಡೆದ ಮುಂಗಡ ಹಣವನ್ನೂ ಮರು ಪಾವತಿಸಿರುವ ಹಿನ್ನೆಲೆಯಲ್ಲಿ ಮೇಲ್ಕಂಡ ಅಧಿಕಾರಿಗಳ ವಿರುದ್ಧ ವಿಚಾರಣೆ ಮುಂದುವರೆಸಲು ಯಾವುದೇ ಆಧಾರವಿಲ್ಲವೆಂದು ಅಭಿಪ್ರಾಯಿಸಿದೆ. ಹೀಗಾಗಿ ಈ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯು ಪತ್ರದಲ್ಲಿ ವಿವರಿಸಿತ್ತು.

ಈ ಪತ್ರಕ್ಕೆ ಸಚಿವ ಎಂ ಬಿ ಪಾಟೀಲ್ ಅವರು ಅನುಮೋದಿಸಿದ್ದರು.
ಪ್ರಕರಣದ ವಿವರ
ಬಂಡವಾಳ ಆಕರ್ಷಿಸುವ ನೆಪದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಉನ್ನತ ಅಧಿಕಾರಿಗಳು ಹಲವಾರು ಬಾರಿ ವಿದೇಶ ಪ್ರವಾಸ ನಡೆಸಿರುವ ಬೆನ್ನಲ್ಲೇ ಸಮಾವೇಶಕ್ಕೆ ಸಂಬಂಧಿಸಿದಂತೆ ಕೇವಲ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಐದೇ ಐದು ನಿಮಿಷದ ಕಿರು ಚಿತ್ರ ನಿರ್ಮಾಣಕ್ಕಾಗಿ 4.50 ಕೋಟಿ ರು. ಖರ್ಚು ಮಾಡಿತ್ತು.
ಕೇವಲ 2 ಲಕ್ಷ ರು.ಗಳಲ್ಲಿ ಚಿತ್ರೀಕರಿಸಬಹುದಾದ ವಿಡಿಯೋಗೆ 4,08,87,000 ರು.ಗಳ ಬೃಹತ್ ಮೊತ್ತಕ್ಕೆ ಕೆಲಸದ ಆದೇಶ ನೀಡಿತ್ತು. ಸರ್ಕಾರದಿಂದ ಹಣವನ್ನು ಬಿಡುಗಡೆ ಮಾಡಿಸಿಕೊಂಡಿತ್ತು. ಇದರಲ್ಲಿ ಅಕ್ರಮ ನಡೆದಿದೆ ಮತ್ತು ಅಕ್ರಮವಾಗಿ ಲಾಭ ಮಾಡಿಕೊಳ್ಳಲಾಗಿದೆ. ಅಲ್ಲದೇ ಈ ವಿಡಿಯೋವನ್ನು ಇನ್‌ವೆಸ್ಟ್ ಕರ್ನಾಟಕ 2022 ಎಂಬ ಹೆಸರಿನ ಗ್ಲೋಬಲ್ ಇನ್‌ವೆಸ್ಟರ್ ಮೀಟ್‌ನಲ್ಲಿ ಪ್ರದರ್ಶಿಸಿರುವುದಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದ ನಷ್ಟವುಂಟಾಗಿದೆ ಎಂದು ಸಾಮಾಜಿಕ ಹೋರಾಟಗಾರ ಟಿ ಜೆ ಅಬ್ರಾಹಂ ಅವರು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.

ಇದರಲ್ಲಿ ಮಾಜಿ ಸಚಿವ ಮುರುಗೇಶ್ ಆರ್ ನಿರಾಣಿ ಅವರನ್ನು ಮೊದಲ ಆರೋಪಿಯನ್ನಾಗಿಸಿದ್ದರು. ಅದೇ ರೀತಿ ಇನ್‌ವೆಸ್ಟ್ ಕರ್ನಾಟಕ ಫೋರಂನ ಸಿಇಒ ಶಿವಕುಮಾರ್, ಎಂಸಿ ಅಂಡ್ ಎ ನ ವ್ಯವಸ್ಥಾಪಕ ನಿರ್ದೇಶಕ ಸಿದ್ದಲಿಂಗಪ್ಪ ಬಿ ಪೂಜಾರಿ, ಡೆಪ್ಯುಟಿ ಜನರಲ್ ಮ್ಯಾನೇಜರ್ ಪಿ ಎಸ್ ನಂದೀಶ್, ಬಿಬಿಪಿ ಸ್ಟುಡಿಯೋ ವರ್ಚುಯಲ್ ಭಾರತ್ ಪ್ರೈವೈಟ್ ಲಿಮಿಟೆಡ್‌ನ್ನು ಆರೋಪಿಗಳನ್ನಾಗಿಸಿದ್ದರು.

ಈ ದೂರರ್ಜಿಯನ್ನು ಡಿವೈಎಸ್ಪಿ ಪ್ರದೀಪ್ ಕುಮಾರ್ ಅವರು ಪ್ರಾಥಮಿಕ ವಿಚಾರಣೆ ನಡೆಸಿದ್ದರು. ‘ದೂರಿನಲ್ಲಿರುವ ಅಂಶಗಳಿಗೆ ಸಂಬಂಧಿಸಿದಂತೆ ಸಮಗ್ರ ವಿಚಾರಣೆ ನಡೆಸುವ ಅವಶ್ಯಕತೆ ಇದೆ.

ಈ ದಿಸೆಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 (ತಿದ್ದುಪಡಿ ಕಾಯ್ದೆ 2018) ರ ಅನ್ವಯ ಎದುರುದಾರರಾದ ಸರ್ಕಾರಿ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯುವುದು ಅವಶ್ಯಕವಾಗಿರುತ್ತದೆ,’ ಎಂದು ಡಿವೈಎಸ್ಪಿ ಪ್ರದೀಪ್ ಕುಮಾರ್ ಅವರು ನ್ಯಾಯಾಲಯಕ್ಕೆ ವಿವರವಾದ ವರದಿಯನ್ನು ಸಲ್ಲಿಸಿದ್ದರು.

ಈ ಸಂಬಂಧ ಮುರುಗೇಶ್ ಆರ್ ನಿರಾಣಿ ಸೇರಿದಂತೆ ಇನ್ನಿತರೆ ಅಧಿಕಾರಿ ವರ್ಗದವರನ್ನು ವಿಚಾರಣೆಗೊಳಪಡಿಸುವ ಸಂಬಂಧ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಗಂಗರುದ್ರಯ್ಯ ಅವರು ಬೃಹತ್ ಮಧ್ಯಮ ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ದಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪೂರ್ವಾನುಮತಿಗಾಗಿ ಪತ್ರ ಬರೆದಿದ್ದರು. 2024ರ ಮಾರ್ಚ್ 11ರಿಂದ ಇದುವರೆಗೆ ಒಟ್ಟಾರೆ 9 ಬಾರಿ ಪತ್ರಗಳನ್ನು ಬರೆದಿದ್ದಾರೆ.
ಹೆಚ್‌ಡಿಕೆ, ಜೊಲ್ಲೆ, ನಿರಾಣಿ, ರೆಡ್ಡಿ ವಿರುದ್ಧ ವಿಚಾರಣೆ; ಆರ್‍ಟಿಐ ಅರ್ಜಿ ತಿರಸ್ಕೃತ, ರಾಜ್ಯಪಾಲರಿಂದ ತಾರತಮ್ಯ?
ಆದರೆ ಸರ್ಕಾರವು ಪೂರ್ವಾನುಮತಿಯನ್ನೇ ನೀಡಿಲ್ಲ ಎಂಬ ಸಂಗತಿಯು ಸಚಿವ ಎಂ ಬಿ ಪಾಟೀಲ್ ಅವರ ಗಮನದಲ್ಲೂ ಇತ್ತು.

‘ಶಿವಕುಮಾರ್, ಸಿದ್ದಲಿಂಗಪ್ಪ ಬಿ ಪೂಜಾರಿ, ಪಿ ಎಸ್ ನಂದೀಶ್ ಅವರ ಸಕ್ಷಮ ಪ್ರಾಧಿಕಾರಿಯಾಗಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಎದುರುದಾರರ ವಿರುದ್ಧ ತನಿಖೆ ಕೈಗೊಳ್ಳಲು ಪೂರ್ವಾನುಮತಿ ದೊರೆತ ನಂತರ ಮುಂದಿನ ತನಿಖೆ, ವಿಚಾರಣೆ ಕೈಗೊಳ್ಳಲಾಗುವುದು,’ ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಗಂಗರುದ್ರಯ್ಯ ಅವರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

ಕಿರುಚಿತ್ರ ನಿರ್ಮಾಣ ಸಂಸ್ಥೆಯೊಂದರ ಜೊತೆಗೆ ಒಡಂಬಡಿಕೆ ಮಾಡಿಕೊಂಡಿರುವ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅಧಿಕಾರಿಗಳು ಸಚಿವ ಮುರುಗೇಶ್ ಆರ್ ನಿರಾಣಿ ಅವರೊಂದಿಗೆ ಸಮಾಲೋಚನೆಯನ್ನೇ ನಡೆಸಿರಲಿಲ್ಲ. ಈ ಕುರಿತು ಖುದ್ದು ಅಂದಿನ ಸಚಿವ ನಿರಾಣಿ ಅವರೇ 2022ರ ಅಕ್ಟೋಬರ್ 21ರಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ನಿರಾಣಿ ಬರೆದಿರುವ ಪತ್ರದಲ್ಲೇನಿತ್ತು?
ನವೆಂಬರ್ 2,3 ಮತ್ತು 4 , 2022ರಂದು ಇನ್ವೆಷ್ಟ್ ಕರ್ನಾಟಕ 2022 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಿದ್ದು ಸಮಾವೇಶಕ್ಕೆ ಸಂಬಂಧಪಟ್ಟಂತೆ ಒಂದು ಕಿರುಚಿತ್ರವನ್ನು ನಿರ್ಮಿಸಲು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಕ್ರಮಕೈಗೊಂಡಿದ್ದು ಸದರಿ ಕಿರುಚಿತ್ರ ನಿರ್ಮಾಣಕ್ಕಾಗಿ ಚಿತ್ರ ನಿರ್ಮಾಣ ಸಂಸ್ಥೆಯೊಂದಿಗೆ ಸುಮಾರು 4.50 ಕೋಟಿಯಷ್ಟು ಮೌಲ್ಯದ ಒಡಂಬಡಿಕೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿರುತ್ತದೆ.
ಸುಮಾರು 5 ನಿಮಿಷದ ಕಿರು ಚಿತ್ರ ನಿರ್ಮಾಣಕ್ಕೆ 4.50 ಕೋಟಿಯಷ್ಟು ಮೌಲ್ಯ ನಿಗದಿಪಡಿಸಿರುವುದು ತುಂಬಾ ಹೆಚ್ಚಾಗಿರುವುದು ಕಂಡು ಬರುತ್ತದೆ. ಒಂದು ಪಕ್ಷ ಇಲಾಖೆಯು ಮೇಲ್ಕಂಡ ಮೌಲ್ಯಕ್ಕೆ ಒಡಂಬಡಿಕೆ ಮಾಡಿಕೊಂಡು ಕಾರ್ಯಾದೇಶ ನೀಡಿರುವುದು ನಿಜವೇ ಆದಲ್ಲಿ ಇಷ್ಟೊಂದು ಹೆಚ್ಚು ಮೌಲ್ಯಕ್ಕೆ ನಿಗದಿಪಡಿಸಿದ ಒಡಂಬಡಿಕೆಯು ಇಂದಿನ ಪರಿಸ್ಥಿತಿಗೆ ಅಗತ್ಯ ಹಾಗೂ ಸೂಕ್ತವಿರುವುದಿಲ್ಲವೆಂದು ಭಾವಿಸಿದೆ.

ಸದರಿ ಒಡಂಬಡಿಕೆಯ ಕಾರ್ಯಾದೇಶವನ್ನು ವಜಾಕರಿಸಲು ಸೂಚಿಸಿದೆ. ಮುಂದುವರೆದು ಇನ್ನು ಮುಂದೆ ಇಂತಹ ಪ್ರಕರಣಗಳಲ್ಲಿ ಇಲಾಖಾ ಸಚಿವರು ಹಾಗೂ ಅನುಭವಿಗಳು ಜೊತೆಗೆ ಸಮಾಲೋಚನೆ, ಚರ್ಚೆ ನಡೆಸಿ ತೀರ್ಮಾನ ಕೈಕೊಳ್ಳಬೇಕು ಎಂದು ನಿರಾಣಿ ಅವರು ಸೂಚಿಸಿದ್ದರು.
ಐದು ನಿಮಿಷದ ಕಿರುಚಿತ್ರ ನಿರ್ಮಾಣಕ್ಕೆ 4.50 ಕೋಟಿ ಖರ್ಚು?; ಜಿಮ್ ಹೆಸರಿನಲ್ಲಿ ನಡೆದಿದೆ ಲೂಟಿ
ಈ ಕುರಿತು ‘ದಿ ಫೈಲ್’, ದಾಖಲೆ ಸಹಿತ ವರದಿ ಪ್ರಕಟಿಸಿತ್ತು.









