ಬೆಂಗಳೂರು; ಸಿದ್ದರಾಮಯ್ಯ ಅವರ ಮೊದಲ ಅವಧಿ ಮತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬರ ನಿರ್ವಹಣೆಗಾಗಿ ಮಾಡಿದ್ದ 5,791.47 ಕೋಟಿ ರು ವೆಚ್ಚಕ್ಕೆ ಸಂಬಂಧಿಸಿದಂತೆ ಯಾವುದೇ ವಿವರಗಳೂ ಲೆಕ್ಕಪರಿಶೋಧನೆಗೆ ಸಲ್ಲಿಕೆಯಾಗಿಲ್ಲ. ಹಾಗೆಯೇ ಬರ ವೆಚ್ಚದ ಲೆಕ್ಕಪತ್ರಗಳ ಆಂತರಿಕ ಅಥವಾ ಬಾಹ್ಯ ಲೆಕ್ಕ ಪರಿಶೋಧನೆಗೆ ಸಿದ್ದರಾಮಯ್ಯ ಅವರ ಮೊದಲ ಅವಧಿ ಮತ್ತು ಜೆಡಿಎಸ್ ಪಾಲುದಾರಿಕೆಯ ಎಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರವು ಯಾವುದೇ ವ್ಯವಸ್ಥೆಯನ್ನೇ ಮಾಡಿರಲಿಲ್ಲ.
2025ರ ಡಿಸೆಂಬರ್‍ನಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ವಿಧಾನಮಂಡಲ ಅಧಿವೇಶನದಲ್ಲಿ ಕರ್ನಾಟಕ ವಿಪತ್ತು ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಸಿಎಜಿಯು ಮಂಡಿಸಿದ್ದ ವರದಿಯಲ್ಲಿ ಬರ ನಿರ್ವಹಣೆಗೆ ಮಾಡಿದ್ದ ಖರ್ಚು ವೆಚ್ಚದ ಅಂಕಿ ಅಂಶಗಳನ್ನೂ ದಾಖಲಿಸಿದೆ.
ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ಬರಗಾಲದ ವೆಚ್ಚಗಳನ್ನು ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ರಾಜ್ಯ ಸರ್ಕಾರವು ಮಾರ್ಗಸೂಚಿ ಮತ್ತು ಬರಗಾಲ ಕೈಪಿಡಿಯನ್ನೂ ಹೊರಡಿಸಿತ್ತು. ಅಲ್ಲದೇ ಬಳಕೆ ಪ್ರಮಾಣ ಪತ್ರಗಳು, ಆಂತರಿಕ ಮತ್ತು ಬಾಹ್ಯ ಲೆಕ್ಕ ಪರಿಶೋಧನೆ ಹೇಗೆ ಮಾಡಬೇಕು ಎಂದು ಸರ್ಕಾರವು ಆದೇಶಿಸಿತ್ತು. ಈ ಆದೇಶದಂತೆ ಹಿಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಲುದಾರಿಕೆಯ ಸಮ್ಮಿಶ್ರ ಸರ್ಕಾರದಲ್ಲಿ ಬರಗಾಲದ ವೆಚ್ಚಗಳನ್ನು ಲೆಕ್ಕ ಪರಿಶೋಧನೆಯನ್ನೇ ಮಾಡಿರಲಿಲ್ಲ ಎಂಬುದು ಸಿಎಜಿ ವರದಿಯಿಂದ ಮೇಲ್ನೋಟಕ್ಕೆ ಕಂಡು ಬಂದಿದೆ.
ಬರಗಾಲದ ವೆಚ್ಚಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಸಿಎಜಿಗೆ ನೀಡಿರುವ ಮಾಹಿತಿ ಪ್ರಕಾರ 2017-18ರಿಂದ 2019-20ರವರೆಗೆ ರಾಜ್ಯದಲ್ಲಿ ಬರ ನಿರ್ವಹಣೆಗಾಗಿ 5,791.47 ಕೋಟಿ ರು ವೆಚ್ಚ ಮಾಡಿತ್ತು. ಆದರೆ ಜಿಲ್ಲಾವಾರು ಬಿಡುಗಡೆ ಮಾಡಿದ್ದ ಅಥವಾ ವೆಚ್ಚವನ್ನು ಕಾಯ್ದಿರಿಸಿದ್ದ ವಸ್ತುಗಳ ವಿವರಗಳನ್ನು ಲೆಕ್ಕ ಪರಿಶೋಧನೆಗೆ ಸಲ್ಲಿಸಿಲ್ಲ.

ಇದಲ್ಲದೇ ರಾಜ್ಯ ಸರ್ಕಾರ ಮತ್ತು ನೋಡಲ್ ಇಲಾಖೆಯು ಖಾತೆಗಳು ಅಥವಾ ವೆಚ್ಚದ ಘಟನೆವಾರು ಅಂಕಿ ಸಂಖ್ಯೆಗಳ ಮಾಹಿತಿಯನ್ನೂ ನಿರ್ವಹಿಸುವುದಿಲ್ಲ ಎಂದು ಲೆಕ್ಕ ಪರಿಶೋಧನೆಯು ಗಮನಿಸಿದೆ. ಹಾಗೆಯೇ ಪರೀಕ್ಷಾ ತನಿಖೆಗೆ ಒಳಗಾದ ಯಾವುದೇ ಜಿಲ್ಲಾಡಳಿತಗಳು ಅಗತ್ಯವಾದ ಬಳಕೆ ಪ್ರಮಾಣ ಪತ್ರಗಳನ್ನು ಘಟನೆವಾರು ಅಥವಾ ಸ್ವೀಕರಿಸಿದ, ಖರ್ಚು ಮಾಡಿದ ಒಟ್ಟು ಮೊತ್ತಕ್ಕೆ ರಾಜ್ಯ ಸರ್ಕಾರ, ನೋಡಲ್ ಇಲಾಖೆಗೆ ಸಲ್ಲಿಸಿಲ್ಲ.
ಬರ ವೆಚ್ಚದ ಲೆಕ್ಕಪತ್ರಗಳ ಆಂತರಿಕ ಅಥವಾ ಬಾಹ್ಯ ಲೆಕ್ಕ ಪರಿಶೋಧನೆಗೆ ರಾಜ್ಯ ಸರ್ಕಾರವು ವ್ಯವಸ್ಥೆಯನ್ನೇ ಮಾಡಲಿಲ್ಲ. ಬರ ಪರಿಹಾರಕ್ಕಾಗಿ ವೆಚ್ಚವನ್ನು ಸಿದ್ಧಪಡಿಸುವಲ್ಲಿ ಮತ್ತು ಮೇಲ್ವಿಚಾರಣೆ ಮಾಡುವಲ್ಲಿ ರಾಜ್ಯ ಸರ್ಕಾರದ ಪ್ರಯತ್ನಗಳು ಅಸಮರ್ಪಕವಾಗಿದ್ದವು. ಹೀಗಾಗಿ ಬರ ನಿರ್ವಹಣೆಯು ಪರಿಣಾಮಕಾರಿಯಾಗಿರಲಿಲ್ಲ ಎಂದು ಸಿಎಜಿಯು ತನ್ನ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
‘ಹೀಗಾಗಿ ಬರ ನಿರ್ವಹಣೆ, ಬರಗಾಲದಲ್ಲಿ ಮಾಡಿದ್ದ ವೆಚ್ಚಗಳು ಮತ್ತು ಹಣಕಾಸು ವಹಿವಾಟುಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ರಾಜ್ಯ ಸರ್ಕಾರವು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು,’ ಎಂದು ಸಿಎಜಿಯು ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿದೆ.
2018ರಲ್ಲಿ ರಾಜ್ಯದ 30 ಜಿಲ್ಲೆಗಳು ತೀವ್ರ ಬರಗಾಲಕ್ಕೆ ತುತ್ತಾಗಿದ್ದವು. ಒಟ್ಟು 28,046.95 ಕೋಟಿಯಷ್ಟು ನಷ್ಟವಾಗಿತ್ತು. ಇದರಲ್ಲಿ ಹಿಂಗಾರು ಋತುವಿನಲ್ಲಿ 11,384.47 ಕೋಟಿ, ಮುಂಗಾರು ಹಂಗಾಮು ಬೆಳೆ ನಷ್ಟದ ರೂಪದಲ್ಲಿ 16,662 ಕೋಟಿಯಷ್ಟು ಅಂದಾಜು ನಷ್ಟವಾಗಿತ್ತು. 2019ರಲ್ಲಿ 49 ತಾಲೂಕುಗಳು ಬರಪೀಡಿತವಾಗಿದ್ದವು. ಆದರೆ ಈ ಅವಧಿಯಲ್ಲಿ ಎಷ್ಟು ಮೊತ್ತ ನಷ್ಟವಾಗಿತ್ತು ಎಂಬ ಬಗ್ಗೆ ಸಿಎಜಿ ವರದಿಯಲ್ಲಿ ವಿವರಗಳಿಲ್ಲ.
ರಾಜ್ಯವು ಕಳೆದ 2001ರಿಂದ 2022ರವರೆಗೆ ಒಟ್ಟು 15 ವರ್ಷಗಳ ಕಾಲ ಬರಗಾಲದಿಂದ ಬಾಧಿತವಾಗಿತ್ತು. 2018ರಲ್ಲಿ ತೀವ್ರ ಬರಗಾಲದಿಂದ ಬಾಧಿತವಾಗಿದ್ದರೇ 2019ರಲ್ಲಿ ಬರದ ತೀವ್ರತೆಯು ತುಸು ಕಡಿಮೆಯಾಗಿತ್ತು. ಸಿಎಜಿಯು ಬೆಳಗಾವಿ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ದಾವಣಗೆರೆ, ಹಾವೇರಿ, ಕಲ್ಬುರ್ಗಿ, ಕೊಡಗು, ರಾಮನಗರ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಬರಗಾಲದ ತೀವ್ರತೆ ಕುರಿತು ತನಿಖೆ ನಡೆಸಿತ್ತು.

2018ರಲ್ಲಿ ಬೆಳಗಾವಿಯಲ್ಲಿ ಒಟ್ಟು 10 ಮತ್ತು 2019ರಲ್ಲಿ 1 ತಾಲೂಕು ಬರಪೀಡಿತವಾಗಿತ್ತು. ಚಿಕ್ಕಬಳ್ಳಾಪುರದಲ್ಲಿ 2018ರಲ್ಲಿ 6, 2019ರಲ್ಲಿ 3, ದಕ್ಷಿಣ ಕನ್ನಡದಲ್ಲಿ 2018ರಲ್ಲಿ 5 ತಾಲೂಕು ಬರದಿಂದ ಬಾಧಿತವಾಗಿತ್ತು. ದಾವಣಗೆರೆಯಲ್ಲಿ 2018ರಲ್ಲಿ 6, 2019ರಲ್ಲಿ 1, ಹಾವೇರಿಯಲ್ಲಿ 2018ರಲ್ಲಿ 7, ಕಲ್ಬುರ್ಗಿಯಲ್ಲಿ 2018ರಲ್ಲಿ 7, 2019ರಲ್ಲಿ 3, ಕೊಡಗಿನಲ್ಲಿ 2018ರಲ್ಲಿ 3, ರಾಮನಗರದಲ್ಲಿ 2018ರಲ್ಲಿ 4, 2019ರಲ್ಲಿ 2, ಶಿವಮೊಗ್ಗದಲ್ಲಿ 2018ರಲ್ಲಿ 4 ತಾಲೂಕುಗಳು ಬರಪೀಡಿತವಾಗಿದ್ದವು.

ಸರಾಸರಿ 3000 ಮಿ ಮೀ ಗಿಂತ ಹೆಚ್ಚಿನ ಮಳೆಯಾಗುತ್ತಿದ್ದ ಪಶ್ಚಿಮ ಘಟ್ಟಗಳ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳ ಅಧೀನದಲ್ಲಿರುವ ತಾಲೂಕುಗಳೂ ಸಹ ಬರದಿಂದ ತೊಂದರೆಗೊಳಗಾಗಿದ್ದವು. ಆದರೂ ಈ ಅವಧಿಯಲ್ಲಿ ಬರ ನಿರ್ವಹಣೆಯಲ್ಲಿ ಪರಿಣಾಮಕಾರಿಯಾಗಿ ಯಾವುದೇ ಕ್ರಮ ವಹಿಸಿರಲಿಲ್ಲ.
2018ರಲ್ಲಿ ಮುಂಗಾರು ಹಂಗಾಮಿನಲ್ಲಿ 100 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದರೇ ಹಿಂಗಾರು ಹಂಗಾಮಿನಲ್ಲಿ ಈ ತಾಲೂಕುಗಳ ಸಂಖ್ಯೆಯು 156ಕ್ಕೇರಿತ್ತು. ಹೀಗಾಗಿ ಬರಗಾಲದ ಪರಿಣಾಮವು 2019ರ ಮುಂಗಾರ ಋತುವಿನವರೆಗೂ ಮುಂದುವರೆದಿತ್ತು. ಇದರಲ್ಲಿ ರಾಜ್ಯ ಸರ್ಕಾರವು 49 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು.
2013ರಿಂದ 2018ರವರೆಗೆ ಬರಗಾಲದಿಂದ ಕೃಷಿ, ತೋಟಗಾರಿಕೆ ವಲಯದಲ್ಲಿ ಒಟ್ಟಾರೆ 80,015.38 ಕೋಟಿಯಷ್ಟು ನಷ್ಟವಾಗಿತ್ತು.
2013ರಲ್ಲಿ ಕೃಷಿ ವಲಯದಲ್ಲಿ 1,016.99 ಕೋಟಿ, ತೋಟಗಾರಿಕೆಗೆ 702.30 ಕೋಟಿ ಸೇರಿ ಒಟ್ಟಾರೆ 1,719.29 ಕೋಟಿ ನಷ್ಟವಾಗಿತ್ತು. 2014ರಲ್ಲಿ ಕೃಷಿ ವಲಯದಲ್ಲಿ 2,706.17 ಕೋಟಿ, ತೋಟಗಾರಿಕೆಯಲ್ಲಿ 882.90 ಕೋಟಿ ಸೇರಿ 3,589.07 ಕೋಟಿಯಷ್ಟು ನಷ್ಟವಾಗಿತ್ತು.

2015ರಲ್ಲಿ ಕೃಷಿ ವಲಯದಲ್ಲಿ 21,204.51 ಕೋಟಿ, ತೋಟಗಾರಿಕೆ ವಲಯದಲ್ಲಿ 1,164.70 ಕೋಟಿ ಸೇರಿ 22,369.21 ಕೋಟಿ ನಷ್ಟವಾಗಿತ್ತು. 2016ರಲ್ಲಿ ಕೃಷಿ ವಲಯದಲ್ಲಿ 22,533.58 ಕೋಟಿ, ತೋಟಗಾರಿಕೆಯಲ್ಲಿ 1,757.28 ಕೋಟಿ ಸೇರಿ 24,290.86 ಕೋಟಿ ನಷ್ಟವಾಗಿದ್ದರೆ 2018ರಲ್ಲಿ ಕೃಷಿ ವಲಯಕ್ಕೆ 26,514.32 ಕೋಟಿ, ತೋಟಗಾರಿಕೆಯಲ್ಲಿ 1,532.63 ಕೋಟಿ ಸೇರಿ 28,046.95 ಕೋಟಿಯಷ್ಟು ನಷ್ಟವಾಗಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

ನಷ್ಟದ ಪ್ರಮಾಣವು ವರ್ಷದಿಂದ ವರ್ಷಕ್ಕೆ ಏರಿಕೆಯಾಗಿರುವುದು ದತ್ತಾಂಶಗಳಿಂದ ಕಂಡು ಬಂದಿದೆ. ರಾಜ್ಯ ಸರ್ಕಾರವು ಅಭಿವೃದ್ಧಿಪಡಿಸಿದ್ದ ಪರಿಹಾರ ಎಂಬ ವಿಶೇಷ ಪೋರ್ಟಲ್‌ನ ಮೂಲಕ ಪರಿಹಾರ ವಿತರಿಸಿತ್ತು. 2018-19ನೇ ಸಾಲಿನಲ್ಲಿ ಬರಪೀಡಿತ ಭೂ ಮಾಲೀಕರಿಗೆ ಒಟ್ಟಾರೆ 1,625.39 ಕೋಟಿ ಆರ್ಥಿಕ ಪರಿಹಾರ ಪಾವತಿಯಾಗಿತ್ತು.
ಕಳೆದ ಎರಡು ದಶಕಗಳಲ್ಲಿ ರಾಜ್ಯವು ಹೆಚ್ಚಿನ ವರ್ಷಗಳಲ್ಲಿ ಬರ ಪರಿಸ್ಥಿತಿ ಅನುಭವಿಸಿದೆ. ಅಲ್ಲದೇ ರಾಜ್ಯದ ವಿವಿಧ ಭಾಗಗಳಲ್ಲಿ ಹವಾಮಾನ, ಮಳೆಯ ಪ್ರಾದೇಶಿಕ ಮತ್ತು ತಾತ್ಕಾಲಿಕ ವ್ಯತ್ಯಾಸದ ಬಗ್ಗೆ ರಾಜ್ಯಕ್ಕೆ ಮಾಹಿತಿ ಇತ್ತು. ಆದರೂ ರಾಜ್ಯ ಸರ್ಕಾರವು ಬರ ನಿರ್ವಹಣೆಗಾಗಿ ಪ್ರದೇಶವಾರು ನಿರ್ದಿಷ್ಟ ಮಾರ್ಗಸೂಚಿಗಳನ್ನೇ ಹೊರತಂದಿರಲಿಲ್ಲ. ಅಲ್ಲದೇ ಮಾರ್ಗಸೂಚಿಗಳನ್ನು ಹೊರತರದಿರಲು ಯಾವುದೇ ಕಾರಣಗಳನ್ನೂ ಸಿಎಜಿಗೆ ಒದಗಿಸಿರಲಿಲ್ಲ.
ಕೊರತೆಯ ಮುನ್ಸೂಚನೆ
ಬರ ಕೈಪಿಡಿ ಪ್ರಕಾರ ರಾಜ್ಯ ಸರ್ಕಾರವು ಬರ ನಿರ್ವಹಣೆಯಲ್ಲಿ ಎಡವಿತ್ತು. ಮತ್ತು ವಾಸ್ತವವನ್ನು ಪ್ರತಿಬಿಂಬಿಸುವ ತೀಕ್ಷ್ಣ ಮತ್ತು ವಿಶ್ವಾಸಾರ್ಹ ವೀಕ್ಷಣಾ ದತ್ತಾಂಶಗಳ ಕೊರತೆ ಇತ್ತು. ಒಟ್ಟಾರೆ ರಾಜ್ಯದ ಹವಾಮಾನ ಮೇಲ್ವಿಚಾರಣೆ ವ್ಯವಸ್ಥೆಯೇ ನ್ಯೂನತೆಗಳಿಂದ ಕೂಡಿತ್ತು. ಅಲ್ಲದೇ ಬರ ಮೇಲ್ವಿಚಾರಣೆ ಕೋಶವನ್ನು ಸ್ಥಾಪಿಸಿದ್ದರೂ ಸಹ ಉಪಕರಣಗಳ ಕಾರ್ಯಕ್ಷಮತೆಯು ಕಳಪೆಯಿಂದ ಕೂಡಿತ್ತು. ಕಾರ್ಯವಿಧಾನವು ಕೊರತೆಯನ್ನು ಹೊಂದಿತ್ತು ಎಂದು ಸಿಎಜಿ ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಕೆಎಸ್‌ಎನ್‌ಡಿಎಂಸಿಯು 2009ರಿಂದ 2015ರವರೆಗೆ ಟೆಲಿ ಮೆಟ್ರಿಕ್ ಮಳೆ ಮಾಪಕಗಳು ಮತ್ತು ಟೆಲಿ ಮೆಟ್ರಿಕ್ ಹವಾಮಾನ ಕೇಂದ್ರಗಳನ್ನು ಸ್ಥಾಪಿಸಿತ್ತು. ಮತ್ತು ವಾರ್ಷಿಕ ನಿರ್ವಹಣಾ ಒಪ್ಪಂದಗಳನ್ನೂ ನವೀಕರಿಸಿತ್ತು. ಆದರೆ ಉಪಕರಣಗಳನ್ನು ಮಧ್ಯಂತರ ಅವಧಿಯಲ್ಲಿ ನವೀಕರಿಸಿತ್ತು. 2018ರವರೆಗೆ ರಾಜ್ಯದಲ್ಲಿ ಒಟ್ಟು 5,891 ಟೆಲಿ ಮೆಟ್ರಿಕ್ ಮಳೆ ಮಾಪಕಗಳನ್ನು ಸ್ಥಾಪನೆಯಾಗಿದ್ದವು. ಈ ಪೈಕಿ 12 ಉಪಕರಣಗಳು ಕಾರ್ಯನಿರ್ವಹಿಸುತ್ತಿರಲಿಲ್. 2019ರಲ್ಲಿ ಒಟ್ಟಾರೆ 6,240 ಉಪಕರಣಗಳ ಪೈಕಿ 31 ಉಪಕರಣಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. 2020ರಲ್ಲಿ 6,343 ಉಪಕರಣಗಳ ಪೈಕಿ 159 ಉಪಕರಣಗಳು ಕೆಲಸವನ್ನೇ ಮಾಡುತ್ತಿರಲಿಲ್ಲ.
2021ರಲ್ಲಿ 6,358 ಉಪಕರಣಗಳ ಪೈಕಿ 246 ಉಪಕರಣಗಳು ಕೆಲಸ ಮಾಡುತ್ತಿರಲಿಲ್ಲ. 2022ರಲ್ಲಿ 6,358 ಉಪಕರಣಗಳ ಪೈಕಿ 968, 2023ರಲ್ಲಿ 6,358ರ ಪೈಕಿ 2,770 ಉಪಕರಣಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಕೆಲಸವನ್ನೇ ಮಾಡದ ಉಪಕರಣಗಳನ್ನು ದುರಸ್ತಿ ಮಾಡಲು ಅಥವಾ ಬದಲಾಯಿಸಲು ಯಾವುದೇ ಪರಿಣಾಮಕಾರಿ ಕ್ರಮವನ್ನೇ ಕೈಗೊಂಡಿರಲಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.
2022ರ ಮಾರ್ಚ್‌ನಿಂದ 1,289 ಟಿಆರ್‍ಜಿಗಳಿಗೆ ಮತ್ತು 2023ರ ಮಾರ್ಚ್‌ನಿಂದ 670 ಟಿಆರ್‍ಜಿಗಳಿಗೆ ವಾರ್ಷಿಕ ನಿರ್ವಹಣಾ ಒಪ್ಪಂದವನ್ನು ಪರಿಷ್ಕರಿಸಿಲ್ಲ ಎಂಬುದನ್ನು ಲೆಕ್ಕ ಪರಿಶೋಧನೆಯು ಗಮನಿಸಿದೆ. ಅಲ್ಲದೇ ತಲಾ 45,000 ರು ವೆಚ್ಚದಲ್ಲಿ 68 ಲಕ್ಷ ವೆಚ್ಚದಲ್ಲಿ ಟಿಆರ್‍ಜಿಗಳನ್ನು ಸ್ಥಾಪಿಸಲಾಗಿತ್ತು. ಈ ಪೈಕಿ 153 ಟಿಆರ್‍ಜಿಗಳು ಕಳ್ಳತನವಾಗಿವೆ ಎಂದು ದಾಖಲಿಸಿದೆ. ಮತ್ತು 138 ಟಿಆರ್‍ಜಿಗಳನ್ನು ಹಾನಿಗೊಳಾಗಿದೆ ಎಂದು ದಾಖಲಿಸಿದೆ.
ಹೀಗಾಗಿ ಈ ಉಪಕರಣಗಳಿಂದ ಯಾವುದೇ ದತ್ತಾಂಶವನ್ನು ದಾಖಲಿಸುತ್ತಿಲ್ಲ. ಕಳ್ಳತನವಾಗಿರುವ ಮತ್ತು ಯಾವ ಕಾರಣಕ್ಕೆ ಹಾನಿಯಾಗಿವೆ ಎಂಬ ಕಾರಣಗಳನ್ನೂ ಕಂಡು ಹಿಡಿಯಲಿಲ್ಲ. ಕಳ್ಳತನವಾಗಿರುವ ಸಂಬಂಧ ಪೊಲೀಸ್ ಠಾಣೆಯಲ್ಲಿಯೂ ದೂರುಗಳನ್ನು ದಾಖಲಿಸಿರಲಿಲ್ಲ.

‘ರಾಜ್ಯದಲ್ಲಿ ವಿಪತ್ತು ನಿರ್ವಹಣೆಗೆ ಪ್ರಮುಖ ನಿರ್ಧಾರಗಳನ್ನು ಕೊರತೆಯುಳ್ಳ ಮುನ್ಸೂಚನೆ ಕಾರ್ಯವಿಧಾನದ ಮೂಲಕ ತೆಗೆದುಕೊಳ್ಳಲಾಗುತ್ತಿದೆ. ನಿರ್ವಹಣಾ ಒಪ್ಪಂದಗಳನ್ನು ನವೀಕರಿಸಲು ಅಥವಾ ಹವಾಮಾನ ನಿಯತಾಂಕಗಳನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಿಲ್ಲ. ಪೂರ್ವ ಸಿದ್ಧತಾ ಕ್ರಮಗಳನ್ನು ಯೋಜಿಸಲು ನಿರ್ಣಾಯಕವಾದ ಹೊಸ ಉಪಕರಣಗಳನ್ನು ಸ್ಥಾಪಿಸಲು ಸಮಯೋಚಿತ ಕ್ರಮಗಳನ್ನು ಕೈಗೊಳ್ಳುವಲ್ಲಿ ಸರ್ಕಾರವು ನಿರ್ಲಕ್ಷ್ಯ ವಹಿಸಿದೆ,’ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಬಿಕ್ಕಟ್ಟು ನಿರ್ವಹಣಾ ಯೋಜನೆಯೇ ಅಸ್ತಿತ್ವದಲ್ಲಿಲ್ಲ
ಬರ ಕೈಪಿಡಿಯ ಪರಿಚ್ಛೇಧ 2.1.1ರ ಪ್ರಕಾರ ಬರ ನಿಗಾ ವ್ಯವಸ್ಥೆಯ ಜತೆಗೆ ಸೂಕ್ಷ್ಮ ಪ್ರದೇಶಗಳ ಬರ ನಿರ್ವಹಣೆಗಾಗಿ ಮಧ್ಯಮ ಮತ್ತು ದೀರ್ಘಕಾಲಿನ ಪ್ರದೇಶ, ನಿರ್ದಿಷ್ಟ ಯೋಜನೆಗಳನ್ನು ಸಿದ್ಧಪಡಿಸಬೇಕಿತ್ತು. ಇದಲ್ಲದೇ ಅಲ್ಪಾವಧಿಯಲ್ಲಿ ಬರವನ್ನು ಎದುರಿಸಲು ಬಿಕ್ಕಟ್ಟು ನಿರ್ವಹಣಾ ಯೋಜನೆಗಳನ್ನು ಎಚ್ಚರಿಕೆಯಿಂದ ರೂಪಿಸಬೇಕಿತ್ತು. ಮಳೆ, ಬಿತ್ತನೆ ಪ್ರಗತಿ, ದೂರ ಸಂವೇದಿಕೆ ಆಧಾರಿತ ಸಸ್ಯ ಸೂಚ್ಯಂಕಗಳು, ಮಣ್ಣಿನ ತೇವಾಂಶ ಆಧರಿತ ಸೂಚ್ಯಂಕಗಳು, ಜಲ ವಿಜ್ಞಾನ ಸೂಚ್ಯಂಕಗಳು ಇವುಗಳನ್ನು ಮೇಲ್ವಿಚಾರಣೆ ಮಾಡುವ ಸಲುವಾಗಿ ಬಿಕ್ಕಟ್ಟು ನಿರ್ವಹಣೆ ಯೋಜನೆ ರೂಪಿಸಬೇಕಿತ್ತು.

ಆದರೆ ರಾಜ್ಯ ಸರ್ಕಾರವು 2023-24ರವರೆಗೂ ಇಂತಹದ್ದೊಂದು ಬಿಕ್ಕಟ್ಟು ನಿರ್ವಹಣೆ ಯೋಜನೆಯನ್ನೇ ರೂಪಿಸಿರಲಿಲ್ಲ.









