ರಾಜ್ಯಮಟ್ಟದ ಪತ್ರಿಕೆಗಳ ಜಾಹೀರಾತಿಗೆ 24.99 ಕೋಟಿ ಖರ್ಚು; ವಿಜಯವಾಣಿ ಸಿಂಹಪಾಲು

ಬೆಂಗಳೂರು : ಶಿಕ್ಷಣ, ಆರೋಗ್ಯದಂತಹ ಕ್ಷೇತ್ರಗಳಲ್ಲಿನ ಅಗತ್ಯ ಯೋಜನೆಗಳ ಜಾರಿಗೆ ಸಾಕಷ್ಟು ಹಣ ಒದಗಿಸದೇ ಟೀಕೆಗೊಳಗಾಗುತ್ತಿರುವ ಕಾಂಗ್ರೆಸ್‌ ಸರ್ಕಾರ, ಕಳೆದ ಎರಡು ವರ್ಷಗಳಲ್ಲಿ  ರಾಜ್ಯಮಟ್ಟದ ದಿನ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಲು ಒಟ್ಟು 24.99 ಕೋಟಿ ರು. ಖರ್ಚು ಮಾಡಿದೆ. ಇದಲ್ಲದೆ, ಕೆಲವು ಪತ್ರಿಕಾ ಸಂಸ್ಥೆಗಳಿಗೆ ಹೆಚ್ಚುವರಿಯಾಗಿಯೂ ಹಣ ಪಾವತಿಸಲಾಗಿದೆ.

 

ಉದ್ಯಮಿ, ಬಿಜೆಪಿಯ ನಾಯಕ ವಿಜಯ ಸಂಕೇಶ್ವರ ನೇತೃತ್ವದ ವಿಆರ್‌ಎಲ್‌ ಗ್ರೂಪ್‌ನ ʻವಿಜಯ ವಾಣಿʼ ಪತ್ರಿಕೆಗೆ 2023-24 ಮತ್ತು 2024-25ನೇ ಸಾಲಿನಲ್ಲಿ ಒಟ್ಟು 4.69 ಕೋಟಿ ರು.ಗಳ (4,69,70,580 ರು.) ಜಾಹೀರಾತು ನೀಡಲಾಗಿದೆ. ಉಳಿದ ಪತ್ರಿಕೆಗಳಿಗಿಂತಲೂ ವಿಜಯವಾಣಿ ಪತ್ರಿಕೆಯು ಸಿಂಹಪಾಲು  ಪಡೆದಿದೆ.

 

2023-24ನೇ ಆರ್ಥಿಕ ಸಾಲಿನಲ್ಲಿ ರಾಜ್ಯ ಮಟ್ಟದ ದಿನಪತ್ರಿಕೆಗಳಿಗೆ ಜಾಹೀರಾತು ನೀಡಲು 16.14 ಕೋಟಿ ರು. ಖರ್ಚು ಮಾಡಲಾಗಿದೆ. 2024-25ನೇ ಸಾಲಿನಲ್ಲಿ  8.85 ಕೋಟಿ ರು. ಖರ್ಚು ಮಾಡಲಾಗಿದೆ. 2023-24ನೇ ಆರ್ಥಿಕ ಸಾಲಿಗೆ ಹೋಲಿಸಿದಲ್ಲಿ 2024-25ನೇ ಆರ್ಥಿಕ ಸಾಲಿನಲ್ಲಿ ರಾಜ್ಯಮಟ್ಟದ ದಿನ ಪತ್ರಿಕೆಗಳಿಗೆ ನೀಡಿದ ಜಾಹೀರಾತು ವೆಚ್ಚ ಹೆಚ್ಚು ಕಡಿಮೆ ಶೇ.50 ರಷ್ಟು ಕಡಿತಗೊಂಡಿದೆ.

 

2023-24ನೇ ಸಾಲಿನಲ್ಲಿ ಒಟ್ಟು 14 ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಸರ್ಕಾರದ ಜಾಹೀರಾತು ಪ್ರಕಟಗೊಂಡಿದ್ದರೆ, 2024-25ನೇ ಸಾಲಿನಲ್ಲಿ 15 ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಲಾಗಿದೆ.

 

ಇದಲ್ಲದೆ, ಸರ್ಕಾರವು ಪ್ರಾದೇಶಿಕ ಮತ್ತು ಜಿಲ್ಲಾ ಮಟ್ಟದ ದಿನ ಪತ್ರಿಕೆಗಳಿಗೂ ಸರ್ಕಾರ ಜಾಹೀರಾತು ನೀಡಿದ್ದು, 2023-24ನೇ ಸಾಲಿನಲ್ಲಿ ಒಟ್ಟು 97 ಪ್ರಾದೇಶಿಕ ದಿನ ಪತ್ರಿಕೆಗಳಿಗೆ 12.55 ಕೋಟಿ ರು. ಗಳ ಜಾಹೀರಾತು ನೀಡಲಾಗಿದ್ದರೆ, 2024-25ನೇ ಸಾಲಿನಲ್ಲಿ 129 ಪ್ರಾದೇಶಿಕ ದಿನ ಪತ್ರಿಕೆಗಳಿಗೆ 6.10 ಕೋಟಿ ರು.ಗಳ ಜಾಹೀರಾತು ನೀಡಲಾಗಿದೆ. ಇಲ್ಲಿಯೂ ಕೂಡ ಹೆಚ್ಚುಕಡಿಮೆ ಶೇ. 50 ರಷ್ಟು ಖರ್ಚು ಕಡಿಮೆ ಮಾಡಲಾಗಿದೆ.

 

 

ವಿವಿಧ ಯೋಜನೆಗಳಿಗೆ ನೀಡಲಾಗುವ ಅನುದಾನವನ್ನು ಕಡಿತ ಮಾಡಿರುವಂತೆ  ಜಾಹೀರಾತು ಪ್ರಕಟಿಸಲು ಮಾಡಲಾಗುತ್ತಿದ್ದ ವೆಚ್ಚವನ್ನೂ ಸರ್ಕಾರ ಕಡಿತಗೊಳಿಸಿರುವುದು ಇದರಿಂದ ಸ್ಪಷ್ಟವಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಎದುರಿಸುತ್ತಿರುವ ಆರ್ಥಿಕ ಸಂಕಷ್ಟವೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

 

2025ರ ಡಿಸೆಂಬರ್‌ನಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ನಿರಾಣಿ ಹಣಮಂತ ರುದ್ರಪ್ಪ ಅವರು ಕೇಳಿದ್ದ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ  ನೀಡಿರುವ ಉತ್ತರದಿಂದ ಈ ಮಾಹಿತಿ ಬಹಿರಂಗಗೊಂಡಿದೆ.

 

ಯಾವ  ವರ್ಷ ಎಷ್ಟು ಜಾಹೀರಾತು?

 

ರಾಜ್ಯಮಟ್ಟದ ದಿನ ಪತ್ರಿಕೆಗಳ ಪೈಕಿ 2023-24ನೇ ಸಾಲಿನಲ್ಲಿ  ಟೈಮ್ಸ್‌ ಗ್ರೂಪ್‌ ಒಡೆತನಕ್ಕೆ ಸೇರಿದ ʻವಿಜಯ ಕರ್ನಾಟಕʼ ಪತ್ರಿಕೆಗೆ ಅತಿ ಹೆಚ್ಚಿನ ಮೊತ್ತದ ಜಾಹೀರಾತು ನೀಡಲಾಗಿದೆ. ಎರಡನೇ ಸ್ಥಾನದಲ್ಲಿ ವಿಆರ್‌ಎಲ್‌ ಗ್ರೂಪ್‌ನ ʻವಿಜಯ ವಾಣಿʼ ಪತ್ರಿಕೆ ಇದೆ. ಮೂರನೇ ಸ್ಥಾನ ʻಪ್ರಜಾವಾಣಿʼ ಪಡೆದುಕೊಂಡಿದೆ.

 

ʻವಿಜಯ ಕರ್ನಾಟಕʼ ಪತ್ರಿಕೆಗೆ 2.85 ಕೋಟಿ ರು. (2,85,50,759 ರು.)ಗಳನ್ನು ಸರ್ಕಾರ ಪಾವತಿಸಿದ್ದರೆ, ʻವಿಜಯ ವಾಣಿʼ ಪತ್ರಿಕೆಗೆ 2.73 ಕೋಟಿ ರು. (2,73,81, 728 ರು.) ಗಳನ್ನು ಪಾವತಿಸಿದೆ. ʻಪ್ರಜಾವಾಣಿʼ ಪತ್ರಿಕೆಗೆ 1.96 ಕೋಟಿ ರು. (1,96,19, 754 ರು.) ನೀಡಲಾಗಿದೆ.

 

ಇದೇ ರೀತಿಯಾಗಿ  ʻಉದಯವಾಣಿʼ ಪತ್ರಿಕೆಗೆ 1,50,16,003 ರು., ʻಕನ್ನಡ ಪ್ರಭʼ ಪತ್ರಿಕೆಗೆ 1,11,15,600 ರು., ʻವಾರ್ತಾಭಾರತಿʼ ಪತ್ರಿಕೆಗೆ 1,08,79,439 ರು., ʻವಿಶ್ವವಾಣಿʼ ಪತ್ರಿಕೆಗೆ 1,04,34,890 ರು., ʻಸಂಯುಕ್ತ ಕರ್ನಾಟಕʼ ಪತ್ರಿಕೆಗೆ 94,47,451 ರು. ಹಾಗೂ ʻಹೊಸ ದಿಗಂತʼ  ಪತ್ರಿಕೆಗೆ 18,93,420 ರು. ಜಾಹೀರಾತು ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ವಿಧಾನ ಪರಿಷತ್ತಿಗೆ ನೀಡಿದ ಈ ಉತ್ತರದಲ್ಲಿ ತಿಳಿಸಿದ್ದಾರೆ.

 

ಒಟ್ಟಾರೆ 2023-24ನೇ ಸಾಲಿನಲ್ಲಿ ಒಟ್ಟು 14 ರಾಜ್ಯಮಟ್ಟದ ದಿನ ಪತ್ರಿಕೆಗಳಿಗೆ 16,14,57,232 ರು. ಮೌಲ್ಯದ ಜಾಹೀರಾತು ನೀಡಲಾಗಿದೆ. ಇದರಲ್ಲಿ ನಾಲ್ಕು ಇಂಗ್ಲಿಷ್‌ ಪತ್ರಿಕೆಗಳೂ ಸೇರಿವೆ. ಕೇವಲ ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತು ಮಾತ್ರವಲ್ಲದೆ, ಪ್ರಾಯೋಜಿತ ವರದಿ, ವಿಶೇಷ ಸಂಚಿಕೆ ಮತ್ತು ಕಾರ್ಯಕ್ರಮಗಳಿಗೂ  ರಾಜ್ಯ ಸರ್ಕಾರ ಈ ಪತ್ರಿಕಾ ಸಂಸ್ಥೆಗಳಿಗೆ ಹಣ ನೀಡಿದೆ.

 

 

ಇದೇ ರೀತಿಯಾಗಿ 2024-25ನೇ ಆರ್ಥಿಕ ಸಾಲಿನಲ್ಲಿ  ರಾಜ್ಯಮಟ್ಟದ ದಿನ ಪತ್ರಿಕೆಗಳ ಪೈಕಿ ವಿಆರ್‌ಎಲ್‌ ಗ್ರೂಪ್‌ನ ʻವಿಜಯ ವಾಣಿʼ ಪತ್ರಿಕೆಗೆ ಅತಿ ಹೆಚ್ಚಿನ ಮೊತ್ತದ ಜಾಹೀರಾತು ನೀಡಲಾಗಿದೆ. ʻಪ್ರಜಾವಾಣಿʼ ಪತ್ರಿಕೆ ಎರಡನೇ ಸ್ಥಾನ ಪಡೆದುಕೊಂಡಿದೆ. 2023-24ನೇ ಸಾಲಿನಲ್ಲಿ ಜಾಹೀರಾತು ಹಣ ಪಡೆಯುವುದರಲ್ಲಿ ಮೊದಲ ಸ್ಥಾನದಲ್ಲಿದ್ದ ʻವಿಜಯ ಕರ್ನಾಟಕʼ ಮೂರನೇ ಸ್ಥಾನ ಪಡೆದುಕೊಂಡಿದೆ.

 

ʻವಿಜಯ ವಾಣಿʼ  ಪತ್ರಿಕೆಗೆ 1.95 ಕೋಟಿ ರು. ಮೊತ್ತದ (1,95,88,852 ರು.) ಜಾಹೀರಾತು ನೀಡಲಾಗಿದೆ. ಪ್ರಜಾವಾಣಿ  ಪತ್ರಿಕೆಯು 1.30 ಕೋಟಿ ರು.ಗಳ (1,30,12,333 ರು.) ಜಾಹೀರಾತು ಪಡೆದುಕೊಂಡಿದೆ.  ʻವಿಜಯ ಕರ್ನಾಟಕʼ ಪತ್ರಿಕೆಗೆ 1.25 ಕೋಟಿ ರು.ಗಳ (1,25,54,885 ರು.) ಜಾಹೀರಾತು ಮೊತ್ತ ಪಾವತಿಸಲಾಗಿದೆ.  ಮಂಗಳೂರು ಮೂಲದ ʻವಾರ್ತಾಭಾರತಿʼ ಕೂಡ 1.00 ಕೋಟಿ ರು.ಗಳ (1,00,37,983 ರು.) ಜಾಹೀರಾತು ಪಡೆದುಕೊಂಡಿದೆ.

 

ಇದಲ್ಲದೆ, ʻಸಂಯುಕ್ತ ಕರ್ನಾಟಕʼ ಪತ್ರಿಕೆಗೆ 66,68,679 ರು.ಗಳ, ʻಕನ್ನಡ ಪ್ರಭʼ ಪತ್ರಿಕೆಗೆ 66,47,589 ರು.ಗಳ, ಮಣಿಪಾಲ ಮೂಲದ ʻಉದಯವಾಣಿʼ ಪತ್ರಿಕೆಗೆ 63,12,557 ರು.ಗಳ, ʻವಿಶ್ವವಾಣಿʼ ದಿನ ಪತ್ರಿಕೆಗೆ  51,51,170 ರು.ಗಳ ಹಾಗೂ ʻಹೊಸ ದಿಗಂತʼ ಪತ್ರಿಕೆಗೆ 12,02,043 ರು.ಗಳ ಜಾಹೀರಾತು ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ.

 

ಒಟ್ಟಾರೆ 2024-25ನೇ ಸಾಲಿನಲ್ಲಿ ಒಟ್ಟು 15 ರಾಜ್ಯಮಟ್ಟದ ದಿನ ಪತ್ರಿಕೆಗಳಿಗೆ 8,85,19,860 ರು. ಮೌಲ್ಯದ ಜಾಹೀರಾತು ನೀಡಲಾಗಿದೆ. ಉಳಿದ ಮೊತ್ತವನ್ನು ನೇರವಾಗಿ ವಿಶೇಷ ಸಂಚಿಕೆ, ಪ್ರಾಯೋಜಿತ ವರದಿ ಮತ್ತು ಕಾರ್ಯಕ್ರಮಗಳಿಗಾಗಿ ನೇರವಾಗಿ ಪತ್ರಿಕಾ ಸಂಸ್ಥೆಗೆ ಪಾವತಿಸಿದೆ.  2023-24ನೇ ಸಾಲಿನಲ್ಲಿ ವಿಜಯ ಕರ್ನಾಟಕ ಪತ್ರಿಕೆಗೆ ಜಾಹೀರಾತು ಮೊತ್ತವಾಗಿ 2, 27,78,150 ರು.ಗಳನ್ನು ಪಾವತಿಸಲಾಗಿದೆ. ಅಲ್ಲದೆ, ಹೆಚ್ಚುವರಿಯಾಗಿ 57,72,609 ರು.ಗಳನ್ನು ನೇರವಾಗಿ ಈ ಪತ್ರಿಕಾ ಸಂಸ್ಥೆಗೆ ನೀಡಲಾಗಿದೆ.

 

 

ಇಂಗ್ಲಿಷ್‌ನಲ್ಲಿ ʻಟಿಓಐʼ ಗೆ ಹೆಚ್ಚಿನ ಜಾಹೀರಾತು

 

ಇಂಗ್ಲಿಷ್‌ ದಿನ ಪತ್ರಿಕೆಗಳ ಪೈಕಿ ಟೈಮ್ಸ್‌ ಗ್ರೂಪ್‌ನ ʻದಿ ಟೈಮ್ಸ್‌ ಆಫ್‌ ಇಂಡಿಯಾʼ ಈ ಎರಡೂ ವರ್ಷ ಅತಿ ಹೆಚ್ಚು ಮೊತ್ತದ ರಾಜ್ಯ ಸರ್ಕಾರದ ಜಾಹೀರಾತು ಪಡೆದುಕೊಂಡಿದೆ. 2023-24ನೇ ಸಾಲಿನಲ್ಲಿ 1.38 ಕೋಟಿ ರು.ಗಳ (1,38,52,842 ರು.) ಸರ್ಕಾರಿ ಜಾಹೀರಾತು ಈ ಪತ್ರಿಕೆಯಲ್ಲಿ ಪ್ರಕಟವಾಗಿದ್ದರೆ, 2024-25ನೇ ಸಾಲಿನಲ್ಲಿ 77,94,245 ರು.ಗಳ ಜಾಹೀರಾತು ಪ್ರಕಟವಾಗಿದೆ.  ʻದಿ ಹಿಂದೂʼ ಪತ್ರಿಕೆ ಎರಡನೇ ಸ್ಥಾನದಲ್ಲಿದ್ದು, 2023-24ನೇ ಸಾಲಿನಲ್ಲಿ 1.08 ಕೋಟಿ ರು.ಗಳ (1,08,79,814 ರು.) ಜಾಹೀರಾತನ್ನು ಸರ್ಕಾರ  ಈ ಪತ್ರಿಕೆಗೆ ನೀಡಿದ್ದರೆ, 2024-25ನೇ ಸಾಲಿನಲ್ಲಿ 50,54,032 ರು.ಗಳ ಜಾಹೀರಾತು ನೀಡಿದೆ.

 

ʻಡೆಕ್ಕನ್‌ ಹೆರಾಲ್ಡ್‌ʼ ಗೆ   2023-24ನೇ ಸಾಲಿನಲ್ಲಿ 79,34,574 ರು.ಗಳ ಹಾಗೂ 2024ನೇ ಸಾಲಿನಲ್ಲಿ 44,55,408 ರು.ಗಳ ಜಾಹೀರಾತನ್ನು ಈ ಪತ್ರಿಕೆಗೆ ನೀಡಲಾಗಿದೆ.  ʻಇಂಡಿಯನ್‌ ಎಕ್ಸ್‌ಪ್ರೆಸ್‌ʼ ಪತ್ರಿಕೆಗೆ  2023-24ನೇ ಸಾಲಿನಲ್ಲಿ  50,76,000 ರು.ಗಳ ಹಾಗೂ 2024-25ನೇ ಸಾಲಿನಲ್ಲಿ 27,20,254 ರು.ಗಳ ಜಾಹೀರಾತು ನೀಡಲಾಗಿದೆ ಎಂದು  ಉತ್ತರದಿಂದ ಗೊತ್ತಾಗಿದೆ.

 

ಪತ್ರಿಕೆ, ಟಿವಿ ಜಾಹೀರಾತಿಗಾಗಿ 1,132 ಕೋಟಿ ರು. ವೆಚ್ಚ; ಈ ವರ್ಷದ ಖರ್ಚಿನಲ್ಲಿ ಸಾರಿಗೆ ಇಲಾಖೆಯೇ ನಂ.1!

 

2025-26 ನೇ ಆರ್ಥಿಕ ಸಾಲಿನಲ್ಲಿ  ಕಳೆದ ನವೆಂಬರ್‌ನವರೆಗೆ ರಾಜ್ಯ ಸರ್ಕಾರವು ಜಾಹೀರಾತು ಮತ್ತು ಪ್ರಚಾರಕ್ಕೆಂದು 139.39 ಕೋಟಿ ರು. ವೆಚ್ಚ ಮಾಡಿದೆ. ಇದರಿಂದಾಗಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಾಹೀರಾತು ಮತ್ತು ಪ್ರಚಾರಕ್ಕೆಂದೇ ಇದುವರೆಗೆ 588.86 ಕೋಟಿ ರು. ಖರ್ಚು ಮಾಡಿದಂತಾಗಿದೆ.

Your generous support will help us remain independent and work without fear.

Latest News

Related Posts