ಜಾಹೀರಾತು, ಪ್ರಚಾರ; ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಗೆ 2.89 ಕೋಟಿ, ರಾಷ್ಟ್ರಮಟ್ಟದ ಪತ್ರಿಕೆಗಳಿಗೆ 10.99 ಕೋಟಿ ವೆಚ್ಚ

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಕಾಂಗ್ರೆಸ್‌ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಮತ್ತಿತರರು ನಿರ್ದೇಶಕರಾಗಿರುವ ಕಂಪನಿ ಪ್ರಕಟಿಸುತ್ತಿರುವ ʻನ್ಯಾಷನಲ್‌ ಹೆರಾಲ್ಡ್‌ʼ ಪತ್ರಿಕೆಗೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 2.89 ಕೋಟಿ ರು. ಜಾಹೀರಾತು ನೀಡಿರುವುದು ಬೆಳಕಿಗೆ ಬಂದಿದೆ.

 

ರಾಜ್ಯ ಸರ್ಕಾರವು 2023-24 ಮತ್ತು 2024-25ನೇ ಸಾಲಿನಲ್ಲಿ ರಾಷ್ಟ್ರೀಯ ಪತ್ರಿಕೆಗಳಿಗೆ ಒಟ್ಟಾರೆ 10.99 ಕೋಟಿ ರು. ಜಾಹೀರಾತು ನೀಡಿದ್ದು, ಇದರಲ್ಲಿ ʻನ್ಯಾಷನಲ್‌ ಹೆರಾಲ್ಡ್‌ʼ ಪತ್ರಿಕೆಗೆ ನೀಡಿದ 2.89 ಕೋಟಿ ರು. ಕೂಡ ಸೇರಿದೆ.

 

ʻನ್ಯಾಷನಲ್ ಹೆರಾಲ್ಡ್ʼ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದ್ದು, ಕಾಂಗ್ರೆಸ್‌ ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಆರು ಜನರ ವಿರುದ್ಧ ಕ್ರಿಮಿನಲ್ ಪಿತೂರಿಯ ಆರೋಪದಡಿಯಲ್ಲಿ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗವು ಎಫ್‌ಐಆರ್ ದಾಖಲಿಸಿದೆ.  ಜಾರಿ ನಿರ್ದೇಶನಾಲಯದ ದೂರಿನ ಆಧಾರದ ಮೇಲೆ ಕಳೆದ ಅಕ್ಟೋಬರ್ 3 ರಂದು ಈ ಎಫ್‌ಐಆರ್ ದಾಖಲಾಗಿದೆ. ಅಲ್ಲದೇ ಇದೇ ಪ್ರಕರಣದಲ್ಲಿ ಆರೋಪ ಪಟ್ಟಿಯನ್ನು ಸ್ವೀಕರಿಸಲು ನ್ಯಾಯಾಲಯವೂ ನಿರಾಕರಿಸಿದೆ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೂ ಪೊಲೀಸರು ನೋಟಿಸ್‌ ಕೂಡ ನೀಡಿದ್ದಾರೆ. ಹೀಗಾಗಿ ಈ ಪತ್ರಿಕೆಗೆ ರಾಜ್ಯ ಸರ್ಕಾರ ಹೆಚ್ಚಿನ ಮೊತ್ತದ ಜಾಹೀರಾತು ನೀಡಿರುವುದು ಮಹತ್ವ ಪಡೆದುಕೊಂಡಿದೆ.

 

ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ನ್ಯಾಷನಲ್ ಹೆರಾಲ್ಡ್‌ ಗೆ ನೀಡಿರುವ ಜಾಹೀರಾತಿನ ಮೊತ್ತವೂ ಮುನ್ನೆಲೆಗೆ ಬಂದಿದೆ.    2025ರ ಡಿಸೆಂಬರ್‌ನಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ನಿರಾಣಿ ಹಣಮಂತ ರುದ್ರಪ್ಪ ಅವರು ಕೇಳಿದ್ದ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ  ನೀಡಿರುವ ಉತ್ತರದಿಂದ ಈ ಮಾಹಿತಿ ಬಹಿರಂಗಗೊಂಡಿದೆ.

 

2023- 24ನೇ ಸಾಲಿನಲ್ಲಿ ಒಟ್ಟು 31 ಪತ್ರಿಕೆಗಳಿಗೆ 9.56 ಕೋಟಿ ರು.ಗಳ ಜಾಹೀರಾತು ನೀಡಲಾಗಿತ್ತು. ಇದರಲ್ಲಿ 9.10 ಕೋಟಿ ರು. ಜಾಹೀರಾತು ವೆಚ್ಚವಾದರೆ, ಜಿಎಸ್‌ಟಿಯೇ 4.55 ಲಕ್ಷ ರು.ಗಳಾಗಿತ್ತು. 2024-25ನೇ ಸಾಲಿನಲ್ಲಿ ಕೇವಲ 7 ರಾಷ್ಟ್ರಮಟ್ಟದ ಪತ್ರಿಕೆಗಳಿಗೆ ಜಾಹೀರಾತು ನೀಡಲಾಗಿದೆ. ಇದಕ್ಕಾಗಿ 1.42 ಕೋಟಿ ರು. ವಿನಿಯೋಗಿಸಲಾಗಿದೆ.

 

ʻನ್ಯಾಷನಲ್ ಹೆರಾಲ್ಡ್ʼ ಪತ್ರಿಕೆಗೆ 2023-24ನೇ ಸಾಲಿನಲ್ಲಿ 1.90 ಕೋಟಿ ರು.ಗಳ ಜಾಹೀರಾತು ನೀಡಲಾಗಿತ್ತು. 2024-25ನೇ ಸಾಲಿನಲ್ಲಿ 99.04 ಲಕ್ಷ ರು.ಗಳ ಜಾಹೀರಾತು ನೀಡಲಾಗಿದೆ. ಈ ಎರಡೂ ವರ್ಷ ರಾಜ್ಯ ಸರ್ಕಾರದಿಂದ ಅತಿ ಹೆಚ್ಚು ಮೊತ್ತದ ಜಾಹೀರಾತು ಪಡೆದ ರಾಷ್ಟ್ರೀಯ ಪತ್ರಿಕೆಗಳ ಪಟ್ಟಿಯಲ್ಲಿ ʻನ್ಯಾಷನಲ್ ಹೆರಾಲ್ಡ್ʼ ಮೊದಲ ಸ್ಥಾನದಲ್ಲಿದೆ.

 

2025ರ ಆಗಸ್ಟ್‌ನಲ್ಲಿ ನಡೆದ ವಿಧಾನ ಮಂಡಲದ ಮುಂಗಾರು ಅಧಿವೇಶನದಲ್ಲಿಯೂ ವಿಧಾನ ಪರಿಷತ್ತಿನಲ್ಲಿ ಸದಸ್ಯರಾದ ಡಾ. ಧನಂಜಯ ಸರ್ಜಿ ಮತ್ತು ಸಿ.ಕೆ. ರಾಮಮೂರ್ತಿ ಮತ್ತು ಡಿ.ಎಸ್‌. ಅರುಣ್‌ ಅವರು ರಾಜ್ಯ ಸರ್ಕಾರ ಜಾಹೀರಾತು ಮತ್ತು ಪ್ರಚಾರಕ್ಕಾಗಿ ಮಾಡುತ್ತಿರುವ ಖರ್ಚಿನ ಕುರಿತು ಪ್ರಶ್ನೆ ಕೇಳಿದ್ದರು. ಈ ಸಂದರ್ಭದಲ್ಲಿ ಉತ್ತರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ʻನ್ಯಾಷನಲ್‌ ಹೆರಾಲ್ಡ್‌ʼ  ಪತ್ರಿಕೆಗೆ ನೀಡಿರುವ ಜಾಹೀರಾತುಗಳ ಬಗ್ಗೆ ವಿವರ ನೀಡಿದ್ದರಾದರೂ ಮಾಡಿದ ಖರ್ಚಿನ ಬಗ್ಗೆ ಮಾಹಿತಿ ನೀಡಿರಲಿಲ್ಲ.

 

2023-24ನೇ ಸಾಲಿನಲ್ಲಿ ʻನ್ಯಾಷನಲ್‌ ಹೆರಾಲ್ಡ್‌ʼ ಪತ್ರಿಕೆಯಲ್ಲಿ ಕನ್ನಡ ರಾಜ್ಯೋತ್ಸವದ ಕುರಿತು ಸರ್ಕಾರ ಜಾಹೀರಾತು ನೀಡಿದೆ. ಮಾತ್ರವಲ್ಲದೆ, ಸರ್ಕಾರದ ವಿವಿಧ ಯೋಜನೆಗಳ ಕುರಿತು ವಿಶೇಷ ಪುರವಣಿ ಪ್ರಕಟಿಸಲು ಹಣ ನೀಡಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನಾಚರಣೆಯ ಸಂದರ್ಭದಲ್ಲಿ ವಿಶೇಷವಾದ ಜಾಹೀರಾತನ್ನು ಈ ಪತ್ರಿಕೆಗೆ ನೀಡಿದೆ. ಇದೇ ರೀತಿಯಾಗಿ ಗಣ ರಾಜ್ಯೋತ್ಸವದ ಸಂದರ್ಭದಲ್ಲಿ ಸಂವಿಧಾನದ ಕುರಿತು ಜಾಹೀರಾತು ನೀಡಿತ್ತು.

 

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ʻಯುವ ನಿಧಿʼ ಕುರಿತು ವಿಶೇಷವಾದ ಜಾಹೀರಾತು ʻನ್ಯಾಷನಲ್‌ ಹೆರಾಲ್ಡ್‌ʼ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಕೃಷಿ ಇಲಾಖೆಯ ಕಾರ್ಯಕ್ರಮಗಳ ಕುರಿತೂ ಈ ಪತ್ರಿಕೆಗೆ ಜಾಹೀರಾತು ನೀಡಲಾಗಿದೆ. 2024-25ನೇ ಸಾಲಿನಲ್ಲಿ ʻನ್ಯಾಷನಲ್‌ ಹೆರಾಲ್ಡ್‌ʼ ಪತ್ರಿಕೆಯು ಸರ್ಕಾರದ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕುರಿತು ವಿಶೇಷ ಪುರವಣಿ ಪ್ರಕಟಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್ತಿಗೆ ಆಗಸ್ಟ್‌ನಲ್ಲಿ ನೀಡಿದ್ದ ಉತ್ತರದಲ್ಲಿ ತಿಳಿಸಿದ್ದರು.

 

ತೆಲುಗು ಪತ್ರಿಕೆಗಳಿಗೆ ಕೋಟಿ ಕೋಟಿ ಜಾಹೀರಾತು!

 

ತೆಲಂಗಾಣ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 2023-24ನೇ ಸಾಲಿನಲ್ಲಿ ತೆಲುಗು ಪತ್ರಿಕೆಗಳಿಗೆ ಹೆಚ್ಚಿನ ಮೊತ್ತದ ಜಾಹೀರಾತು ನೀಡಿದೆ. ʻಸಾಕ್ಷಿʼ ಪತ್ರಿಕೆಗೆ 1.20 ಕೋಟಿ ರು.ಗಳ ಹಾಗೂ ʻಆಂಧ್ರ ಜ್ಯೋತಿʼ ಪತ್ರಿಕೆಗೆ 1.11 ಕೋಟಿ ರು.ಗಳ, ʻಈ ನಾಡುʼ ಪತ್ರಿಕೆಗೆ 70 ಲಕ್ಷ ರು.ಗಳ,ʻ ಟೈಮ್ಸ್‌ ಆಫ್‌ ಇಂಡಿಯಾʼದ ತೆಲಂಗಾಣ ಎಡಿಷನ್‌ಗೆ 3.33 ಲಕ್ಷ ರು.ಗಳ, ʻವೆಲಗುʼ ಪತ್ರಿಕೆಗೆ 15.00 ಲಕ್ಷ ರು.ಗಳ ಜಾಹೀರಾತು ನೀಡಲಾಗಿದೆ.

 

ʻದೆಹಲಿ ವಾರ್ತೆʼ ಎಂಬ ಪತ್ರಿಕೆಗೆ 2023-24ನೇ ಸಾಲಿನಲ್ಲಿ 30.78 ಲಕ್ಷ ರು.ಗಳ ಹಾಗೂ 2024-25ನೇ ಸಾಲಿನಲ್ಲಿ 17.85 ಲಕ್ಷ ರು.ಗಳ ಜಾಹೀರಾತು ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ವಿಧಾನ ಪರಿಷತ್ತಿಗೆ ನೀಡಿರುವ ಈ ಉತ್ತರದಲ್ಲಿ ತಿಳಿಸಿದ್ದಾರೆ. ಆದರೆ ಈ ಪತ್ರಿಕೆ ಯಾವ ಭಾಷೆಯ ಪತ್ರಿಕೆ ಎಂಬುದು ಸ್ಪಷ್ಟವಾಗಿಲ್ಲ.

 

ಹೆಸರಾಂತ ಇಂಗ್ಲಿಷ್‌ ದೈನಿಕಗಳಾದ ʻಟೈಮ್ಸ್‌ ಆಫ್‌ ಇಂಡಿಯಾʼ, ʻದಿ ಎಕನಾಮಿಕ್‌ ಟೈಮ್ಸ್‌ʼ, ಇಂಡಿಯನ್‌ ಎಕ್ಸ್‌ಪ್ರೆಸ್‌ʼ ʻಬಿಸಿನೆಸ್‌ ಸ್ಟ್ಯಾಂಡರ್ಡ್‌ʼ ʻಫೈನಾನ್ಷಿಯಲ್‌ ಎಕ್ಸ್‌ಪ್ರೆಸ್‌ʼ. ʻಹಿಂದೂಸ್ತಾನ್‌ ಟೈಮ್ಸ್‌ʼ ಮಾತ್ರವಲ್ಲದೆ, ವಿಶೇಷವಾಗಿ ʻಪಂಜಾಬ್‌ ಕೇಸರಿʼ ಪತ್ರಿಕೆಗೆ ಈ ಎರಡೂ ವರ್ಷ ಜಾಹೀರಾತು ನೀಡಲಾಗಿದೆ. 2023-24ನೇ ಸಾಲಿನಲ್ಲಿ 17.71 ಲಕ್ಷ ರು.ಗಳ ಹಾಗೂ 2024-25ನೇ ಸಾಲಿನಲ್ಲಿ 11.61 ಲಕ್ಷ ರು. ಮೊತ್ತದ ಜಾಹೀರಾತು ಈ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.

 

 

ಹೆಸರಾಂತ ಇಂಗ್ಲಿಷ್‌ ವಾರಪತ್ರಿಕೆ ʻಔಟ್‌ ಲುಕ್‌ʼ ರಾಜ್ಯ ಸರ್ಕಾರದ ಯೋಜನೆಗಳ ಕುರಿತು ವಿವರವಾದ ಮಾಹಿತಿ ಒದಗಿಸಿತ್ತು. ಇದಕ್ಕಾಗಿ ರಾಜ್ಯ ಸರ್ಕಾರ ಈ ವಾರ ಪತ್ರಿಕೆಗೆ 10 ಲಕ್ಷ ರು.ನೀಡಿರುವುದು ಕೂಡ ಮುಖ್ಯಮಂತ್ರಿಗಳು ನೀಡಿದ ಈ ಉತ್ತರದಿಂದ ಗೊತ್ತಾಗಿದೆ.

 

ಮುಂಬಯಿನಿಂದ ಪ್ರಕಟವಾಗುತ್ತಿರುವ ಕನ್ನಡದ ರಾಷ್ಟ್ರೀಯ ಪತ್ರಿಕೆ ʻಕರ್ನಾಟಕ ಮಲ್ಲʼ ಪತ್ರಿಕೆಗೆ 2023-24ನೇ ಸಾಲಿನಲ್ಲಿ ಕೇವಲ 77,936 ರು.ಗಳ ಮತ್ತು 2024-25ನೇ ಸಾಲಿನಲ್ಲಿ2.12 ಲಕ್ಷ ರು.ಗಳ ಜಾಹೀರಾತು ನೀಡಲಾಗಿದೆ ಎಂಬುದು ವಿಧಾನ ಪರಿಷತ್ತಿಗೆ ನೀಡಿರುವ ಈ ಉತ್ತರದಿಂದ ಗೊತ್ತಾಗಿದೆ.

 

ನ್ಯಾಷನಲ್‌ ಹೆರಾಲ್ಡ್‌, ಇತರೆ ಪತ್ರಿಕೆ, ಟಿವಿಗಳಿಗೆ ಜಾಹೀರಾತು, ಪ್ರಚಾರ; 3 ವರ್ಷದಲ್ಲಿ 1,076.27 ಕೋಟಿ ವೆಚ್ಚ!

 

2025ರ ಡಿಸೆಂಬರ್‌ನಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ರಾಷ್ಟ್ರಮಟ್ಟದ ಮತ್ತು ರಾಜ್ಯದ ಜಿಲ್ಲಾ, ಪ್ರಾದೇಶಿಕ ಪತ್ರಿಕೆಗಳು ಮತ್ತು ಟಿವಿ ವಾಹಿನಿಗಳಿಗೆ 2023-24, 2024-25 ಮತ್ತು 2025-26ರ ಜುಲೈವರೆಗೆ ಜಾಹೀರಾತು ಮತ್ತು ಪ್ರಚಾರಕ್ಕಾಗಿ ಅಂದಾಜು 1,076.27 ಕೋಟಿ ರು. ವೆಚ್ಚ ಮಾಡಿದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್ತಿಗೆ ತಿಳಿಸಿದ್ದರು. ಈ ಕುರಿತು ʻದಿ ಫೈಲ್‌ʼ ವಿವರವಾಗಿ ವರದಿ ಪ್ರಕಟಿಸಿತ್ತು.

Your generous support will help us remain independent and work without fear.

Latest News

Related Posts