3 ವರ್ಷದಲ್ಲಿ 2,198 ಬಾಲ್ಯ ವಿವಾಹ; ಪ್ರಭಾವಿಗಳ ಜಿಲ್ಲೆಯಲ್ಲಿ ಪ್ರಕರಣಗಳು ಹೆಚ್ಚಳ, ಕಳವಳ

ಬೆಂಗಳೂರು; ಬಾಲ್ಯ ವಿವಾಹ ನಿಷೇಧ ಕಾಯ್ದೆ 2006, 2014ರಲ್ಲಿ ಬಾಲ್ಯ ವಿವಾಹ ನಿಷೇಧ (ಕರ್ನಾಟಕ) ನಿಯಮಗಳು ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಕಾಯ್ದೆ 2016, ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ರಚಿಸಲು 2025ರ ನವೆಂಬರ್‍‌ 25ರಂದು ತಿದ್ದುಪಡಿ ಆದೇಶ, ಮತ್ತು 1 ಲಕ್ಷಕ್ಕೂ ಹೆಚ್ಚು ಬಾಲ್ಯ ವಿವಾಹ ನಿಷೇಧಾಧಿಕಾರಿಗಳನ್ನು ನೇಮಿಸಿದ್ದರೂ ಸಹ ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ 2,198 ಬಾಲ್ಯ ವಿವಾಹಗಳು ನಡೆದಿವೆ.

 

ಕಳೆದ 3 ವರ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ಮೈಸೂರು ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ 171, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‍ ತವರು ಜಿಲ್ಲೆ ಬೆಳಗಾವಿಯಲ್ಲಿ 125, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತವರು ಜಿಲ್ಲೆ ರಾಮನಗರದಲ್ಲಿ 118, ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಪ್ರತಿನಿಧಿಸುವ ತುಮಕೂರು ಜಿಲ್ಲೆಯಲ್ಲಿ 117 ಬಾಲ್ಯ ವಿವಾಹ ನಡೆದಿವೆ.

 

ಬಾಲ್ಯ ವಿವಾಹ ತಡೆಗಟ್ಟುವ ಕುರಿತು ಮೂಡುಬಿದರೆಯ ಶಾಸಕ ಉಮಾನಾಥ ಕೋಟ್ಯಾನ್‌ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‍‌ ಅವರು ವಿಧಾನಸಭೆ ಅಧಿವೇಶನದಲ್ಲಿ 2025ರ ಡಿಸೆಂಬರ್‍‌ 10ರಂದು ಉತ್ತರ ಒದಗಿಸಿದ್ದಾರೆ.

 

 

ಕಳೆದ ಮೂರು ವರ್ಷದಲ್ಲಿ 2,198 ಬಾಲ್ಯ ವಿವಾಹಗಳು ನಡೆದಿರುವುದು, ಬಾಲ್ಯ ವಿವಾಹ ನಿಷೇಧ ಕಾಯ್ದೆ 2006, 2014ರಲ್ಲಿ ಬಾಲ್ಯ ವಿವಾಹ ನಿಷೇಧ (ಕರ್ನಾಟಕ) ನಿಯಮಗಳು ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಕಾಯ್ದೆ 2016, ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ರಚಿಸಲು 2025ರ ನವೆಂಬರ್‍‌ 25ರಂದು ತಿದ್ದುಪಡಿ ಆದೇಶವು ಪರಿಣಾಮಕಾರಿಯಾಗಿ ಅನುಷ್ಟಾನವಾಗಿಲ್ಲ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.

 

ಬಾಲ್ಯ ವಿವಾಹದ ಕುರಿತು 2023ರಲ್ಲಿ 2,605 ದೂರುಗಳು ಸ್ವೀಕೃತವಾಗಿದ್ದವು. ಈ ಪೈಕಿ 1,775 ಪ್ರಕರಣಗಳಲ್ಲಿ ಬಾಲ್ಯ ವಿವಾಹವನ್ನು ತಡೆಹಿಡಿಯಲಾಗಿತ್ತು. ಉಳಿದ 830 ಪ್ರಕರಣಗಳಲ್ಲಿ ಬಾಲ್ಯ ವಿವಾಹಗಳನ್ನು ತಡೆಹಿಡಿಯುವಲ್ಲಿ ಸರ್ಕಾರವು ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

 

2024ರಲ್ಲಿ 3,127 ದೂರುಗಳು ಸ್ವೀಕೃತವಾಗಿದ್ದವು. ಈ ಪೈಕಿ 2,323 ಪ್ರಕರಣಗಳನ್ನು ತಡೆಹಿಡಿದಿದ್ದರೇ ಇನ್ನುಳಿದ 804 ಪ್ರಕರಣಗಳನ್ನು ತಡೆಹಿಡಿಯುವಲ್ಲಿ ವಿಫಲವಾಗಿತ್ತು. 2025ರ ಅಕ್ಟೋಬರ್‍‌ ಅಂತ್ಯದವರೆಗೆ 2,623 ದೂರುಗಳು ಸ್ವೀಕೃತವಾಗಿದ್ದವು. ಈ ಪೈಕಿ 2,059 ಪ್ರಕರಣಗಳನ್ನು ತಡೆಹಿಡಿಯಲಾಗಿತ್ತು. 564 ಪ್ರಕರಣಗಳಲ್ಲಿ ಬಾಲ್ಯ ವಿವಾಹಗಳನ್ನು ತಡೆಹಿಡಿಯುವಲ್ಲಿ ವಿಫಲವಾಗಿತ್ತು.

 

 

ಒಟ್ಟಾರೆ 8,355 ದೂರುಗಳಲ್ಲಿ 6,157 ಪ್ರಕರಣಗಳನ್ನು ತಡೆಹಿಡಿದಿದ್ದರೇ ಇನ್ನುಳಿದ 2,198 ಪ್ರಕರಣಗಳಲ್ಲಿ ಬಾಲ್ಯ ವಿವಾಹಗಳನ್ನು ತಡೆಹಿಡಿಯುವಲ್ಲಿ ವಿಫಲವಾಗಿದೆ. ಈ 2,198 ಪ್ರಕರಣಗಳಲ್ಲಿ 2,170 ಪ್ರಕರಣಗಳಲ್ಲಿ ಮಾತ್ರ ಎಫ್‌ಐಆರ್‍‌ ದಾಖಲಾಗಿದೆ. ಇನ್ನುಳಿದ 28 ಪ್ರಕರಣಗಳಲ್ಲಿ ಎಫ್‌ಐಆರ್‍‌ಗಳನ್ನೇ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್‍‌ ಅವರು ಉತ್ತರದಲ್ಲಿ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

 

ಬಾಗಲಕೋಟೆಯಲ್ಲಿ 1, ಬೆಂಗಳೂರು ಕೇಂದ್ರದಲ್ಲಿ 1, ಬಳ್ಳಾರಿಯಲ್ಲಿ 14, ಗದಗ್‌ನಲ್ಲಿ 1, ಕಲ್ಬುರ್ಗಿಯಲ್ಲಿ 2, ರಾಯಚೂರಿನಲ್ಲಿ 4, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 1, ವಿಜಯನಗರ ಜಿಲ್ಲೆಯಲ್ಲಿ 4 ಪ್ರಕರಣಗಳಲ್ಲಿ ಎಫ್‌ಐಆರ್‍‌ ದಾಖಲಿಸಲು ಕ್ರಮ ಕೈಗೊಂಡಿರುವುದು ತಿಳಿದು ಬಂದಿದೆ.

 

ವರ್ಷವಾರು ಪ್ರಕರಣಗಳ ಪಟ್ಟಿ

 

2023ರಲ್ಲಿ ಬಾಗಲಕೋಟೆಯಲ್ಲಿ 30,, ಬೆಂಗಳೂರು ಗ್ರಾಮಾಂತರದಲ್ಲಿ 18, ಬೆಂಗಳೂರು ಕೇಂದ್ರದಲ್ಲಿ 8, ಬೆಂಗಳೂರು ಪೂರ್ವದಲ್ಲಿ 9, ಬೆಂಗಳೂರು ಉತ್ತರದಲ್ಲಿ 21, ಬೆಂಗಳೂರು ದಕ್ಷಿಣದಲ್ಲಿ 41, ಬೆಳಗಾವಿಯಲ್ಲಿ 41, ಬೀದರ್‍‌ನಲ್ಲಿ 4, ವಿಜಯಪುರದಲ್ಲಿ 7, ಚಾಮರಾಜನಗರದಲ್ಲಿ 4, ಚಿಕ್ಕಬಳ್ಳಾಪುರದಲ್ಲಿ 5, ಚಿಕ್ಕಮಗಳೂರಿನಲ್ಲಿ 33, ಚಿತ್ರದುರ್ಗದಲ್ಲಿ 61, ದಾವಣಗೆರೆಯಲ್ಲಿ 30, ಧಾರವಾಡದಲ್ಲಿ 31, ಗದಗ್‌ನಲ್ಲಿ 4, ಕಲ್ಬುರ್ಗಿಯಲ್ಲಿ 4, ಹಾವೇರಿಯಲ್ಲಿ 20, ಕೊಡಗು 5, ಕೋಲಾರದಲ್ಲಿ 61, ಕೊಪ್ಪಳ 4, ಮಂಡ್ಯದಲ್ಲಿ 85, ಮೈಸೂರಿನಲ್ಲಿ 96, ರಾಯಚೂರಿನಲ್ಲಿ 9, ರಾಮನಗರದಲ್ಲಿ 51, ಶಿವಮೊಗ್ಗ 68, ತುಮಕೂರು 64, ಉಡುಪಿ 1, ಉತ್ತರ ಕನ್ನಡದಲ್ಲಿ 2, ಯಾದಗಿರಿ 5, ವಿಜಯನಗರ 4 ಬಾಲ್ಯ ವಿವಾಹ ನಡೆದಿವೆ.

 

 

2024ರಲ್ಲಿ ಬಾಗಲಕೋಟೆಯಲ್ಲಿ 20, ಬೆಂಗಳೂರು ಗ್ರಾಮಾಂತರದಲ್ಲಿ 17, ಬೆಂಗಳೂರು ಕೇಂದ್ರದಲ್ಲಿ 6 ಬೆಂಗಳೂರು ಪೂರ್ವದಲ್ಲಿ 18 ಬೆಂಗಳೂರು ಉತ್ತರದಲ್ಲಿ 21, ಬೆಂಗಳೂರು ದಕ್ಷಿಣದಲ್ಲಿ 31, ಬೆಳಗಾವಿಯಲ್ಲಿ 40, ಬೀದರ್‍‌ನಲ್ಲಿ 3, ವಿಜಯಪುರದಲ್ಲಿ 9, ಚಾಮರಾಜನಗರದಲ್ಲಿ 2, ಚಿಕ್ಕಬಳ್ಳಾಪುರದಲ್ಲಿ 2, ಚಿಕ್ಕಮಗಳೂರಿನಲ್ಲಿ 30, ಚಿತ್ರದುರ್ಗದಲ್ಲಿ 75, ದಾವಣಗೆರೆಯಲ್ಲಿ 49, ಧಾರವಾಡದಲ್ಲಿ 25, ಗದಗ್‌ನಲ್ಲಿ 2, ಕಲ್ಬುರ್ಗಿಯಲ್ಲಿ 14, ಹಾಸನದಲ್ಲಿ 10, ಹಾವೇರಿಯಲ್ಲಿ 35, ಕೊಡಗು 6, ಕೋಲಾರದಲ್ಲಿ 17, ಕೊಪ್ಪಳ 5, ಮಂಡ್ಯದಲ್ಲಿ 91, ಮೈಸೂರಿನಲ್ಲಿ 56, ರಾಯಚೂರಿನಲ್ಲಿ 2, ರಾಮನಗರದಲ್ಲಿ 55, ಶಿವಮೊಗ್ಗ 87, ತುಮಕೂರು 44, , ಉತ್ತರ ಕನ್ನಡದಲ್ಲಿ 8, ಯಾದಗಿರಿ 13 ಬಾಲ್ಯ ವಿವಾಹ ನಡೆದಿರುವುದು ಗೊತ್ತಾಗಿದೆ.

 

 

2025 ಬಾಗಲಕೋಟೆಯಲ್ಲಿ 7, ಬೆಂಗಳೂರು ಗ್ರಾಮಾಂತರದಲ್ಲಿ 8, ಬೆಂಗಳೂರು ಕೇಂದ್ರದಲ್ಲಿ 6, ಬೆಂಗಳೂರು ಪೂರ್ವದಲ್ಲಿ 13, ಬೆಂಗಳೂರು ಪಶ್ಚಿಮ 1, ಬೆಂಗಳೂರು ಉತ್ತರದಲ್ಲಿ 4, ಬೆಂಗಳೂರು ದಕ್ಷಿಣದಲ್ಲಿ 4, ಬೆಳಗಾವಿಯಲ್ಲಿ 44, ಬಳ್ಳಾರಿಯಲ್ಲಿ 23, ಬೀದರ್‍‌ನಲ್ಲಿ 1, ವಿಜಯಪುರದಲ್ಲಿ 14, ಚಾಮರಾಜನಗರದಲ್ಲಿ 3, ಚಿಕ್ಕಬಳ್ಳಾಪುರದಲ್ಲಿ 16, ಚಿಕ್ಕಮಗಳೂರಿನಲ್ಲಿ 19, ಚಿತ್ರದುರ್ಗದಲ್ಲಿ 64, ದಕ್ಷಿಣ ಕನ್ನಡದಲ್ಲಿ 4, ದಾವಣಗೆರೆಯಲ್ಲಿ 14, ಧಾರವಾಡದಲ್ಲಿ 5, ಗದಗ್‌ನಲ್ಲಿ 3, ಕಲ್ಬುರ್ಗಿಯಲ್ಲಿ 16, ಹಾಸನದಲ್ಲಿ 23, ಹಾವೇರಿಯಲ್ಲಿ 36, ಕೊಡಗು 10, ಕೋಲಾರದಲ್ಲಿ 62, ಕೊಪ್ಪಳ 6 ಮಂಡ್ಯದಲ್ಲಿ 25, ಮೈಸೂರಿನಲ್ಲಿ 19, ರಾಯಚೂರಿನಲ್ಲಿ 9, ರಾಮನಗರದಲ್ಲಿ 12, ಶಿವಮೊಗ್ಗ 57, ತುಮಕೂರು 9, ಉಡುಪಿ 3, ಉತ್ತರ ಕನ್ನಡದಲ್ಲಿ 4, ಯಾದಗಿರಿ 12, ವಿಜಯನಗರ 8 ಬಾಲ್ಯ ವಿವಾಹ ನಡೆದಿರುವುದು ತಿಳಿದು ಬಂದಿದೆ.

 

 

ಬಾಲ್ಯ ವಿವಾಹದ ಪ್ರಯತ್ನ, ನಿಶ್ಚಿತಾರ್ಥದ ಬಗ್ಗೆ ಕ್ರಮ ಕೈಗೊಳ್ಳಲು ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರಲ್ಲಿ ಯಾವುದೇ ಕಲಂಗಳಲ್ಲಿ ಅವಕಾಶ ಇಲ್ಲದೇ ದೂರನ್ನು ದಾಖಲಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಅಪರಾಧವನ್ನಾಗಿಸಲು ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ 2025) ಜಾರಿಗೆ ತರಲು ಕ್ರಮ ವಹಿಸುತ್ತಿದೆ ಎಂದು ಉತ್ತರದಲ್ಲಿ ಸಚಿವರು ವಿವರಿಸಿದ್ದಾರೆ.

 

ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ ಪಾಟೀಲ್‌ ಅಧ್ಯಕ್ಷತೆಯಲ್ಲಿ ಕೋರ್‍‌ ಕಮಿಟಿ ರಚಿಸಿದೆ. ಈ ಕಮಿಟಿಯ ವರದಿಯಲ್ಲಿ ಮಾಡಲಾದ ಶಿಫಾರಸ್ಸುಗಳ ಅನುಷ್ಠಾನಕ್ಕಾಗಿ ಬಾಲ್ಯ ವಿವಾಹ ನಿಷೇಧ ಉಸ್ತುವಾರಿ ಕೋಶ ರಚಿಸಿದೆ. ರಾಜ್ಯ, ಜಿಲ್ಲಾ ತಾಲೂಕು ಮತ್ತು ಗ್ರಾಮ ಮಟ್ಟದವರೆಗೂ ಒಟ್ಟು 1 ಲಕ್ಷಕ್ಕೂ ಹೆಚ್ಚು ಬಾಲ್ಯ ವಿವಾಹ ನಿಷೇಧಾಧಿಕಾರಿಗಳನ್ನು ನೇಮಿಸಲಾಗಿದೆ. ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮಬದ್ಧ ಕಾರ್ಯ ವಿಧಾನವನ್ನು ರಚಿಸಿ ಮಾರ್ಗಸೂಚಿ ಹೊರಡಿಸಿದೆ.

 

 

ಬಾಲ್ಯ ವಿವಾಹವನ್ನು ತಡೆಯುವಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಲು ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮನ್ವಯ ಮತ್ತು ಪರಿಶೀಲನಾ ಸಮಿತಿ ರಚಿಸಲು ಹಾಗೂ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯನ್ನು ರಚಿಸುವ ಬಗ್ಗೆ 2025ರ ನವೆಂಬರ್‍‌ 25ರಂದು ತಿದ್ದುಪಡಿ ಆದೇಶ ಹೊರಡಿಸಿತ್ತು.
ಅಲ್ಲದೇ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಅನುಷ್ಠಾನ ಹೇಗಾಗಿದೆ ಎಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವೂ ಅಧ್ಯಯನ ನಡೆಸಿತ್ತು. ಈ ವರದಿಯನ್ನು ಸರ್ಕಾರಕ್ಕೆ 2025ರ ಜೂನ್‌ನಲ್ಲಿ  ಸಲ್ಲಿಸಿದೆ.

 

 

ಬಾಲ್ಯ ವಿವಾಹವನ್ನು ಕಡಿಮೆ ವರದಿ ಮಾಡುವುದು ಕರ್ನಾಟಕದಲ್ಲಿ ಹೊಸ ವಿಚಾರವೇನಲ್ಲ. ಇದು ಮೊದಲಿನಿಂದಲೂ ಇತ್ತು. ಆದರೆ ಇತ್ತೀಚೆಗೆ ಕರ್ನಾಟಕವು 2020-21ರಲ್ಲಿ ಬಾಲ್ಯ ವಿವಾಹ ಪ್ರಕರಣಗಳಲ್ಲಿ ಆತಂಕಕಾರಿ ಹೆಚ್ಚಳ ಕಂಡಿದೆ. ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ಉಪ ನಾಯಕರ ಪ್ರಶ್ನೆಗೆ ಉತ್ತರಿಸಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವರು, 2020-21ನೇ ಸಾಲಿನಲ್ಲಿ ರಾಜ್ಯದಲ್ಲಿ 296 ಬಾಲ್ಯ ವಿವಾಹಗಳು ವರದಿಯಾಗಿವೆ ಎಂದು ಮಾಹಿತಿ ನೀಡಿದ್ದರು.

 

2019-20ರಲ್ಲಿ 156ಕ್ಕೆ ಹೋಲಿಸಿದರೆ 140 ಪ್ರಕರಣಗಳು ಹೆಚ್ಚಾಗಿವೆ. 2018-19ರಲ್ಲಿ 119 ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲಿ ಬಾಲ್ಯ ವಿವಾಹಗಳ ಸಂಖ್ಯೆಯು ಆತಂಕಕಾರಿ ಸಂಖ್ಯೆ ತಲುಪಿದೆ. 2020-21ರಲ್ಲಿ ರಾಜ್ಯವು 418 ಬಾಲ್ಯ ವಿವಾಹಗಳಿಗೆ ಸಾಕ್ಷಿಯಾಗಿದೆ. 2017-18ಕ್ಕೆ ಹೋಲಿಸಿದರೆ 102 ಅಥವಾ ಶೇ.300ರಷ್ಟು ಹೆಚ್ಚಾಗಿದೆ ಎಂದು ಸರ್ಕಾರಿ ಅಂಕಿ ಅಂಶಗಳು ತೋರಿಸುತ್ತವೆ ಎಂದು ವರದಿಯಲ್ಲಿ ವಿವರಿಸಿತ್ತು.

 

2021-22ನೇ ಸಾಲಿನಲ್ಲಿ ದಾಖಲಾದ 2,819 ದೂರುಗಳ ಪೈಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ 2,401 ಬಾಲ್ಯ ವಿವಾಹಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದೆ. ಆದರೂ 418 ವಿವಾಹಗಳು ನಡೆದಿವೆ. ಇಲಾಖೆ ಪ್ರಕಾರ 2017-18ರಲ್ಲಿ ಮಂಡ್ಯದಲ್ಲಿ ಶೂನ್ಯ ಬಾಲ್ಯ ವಿವಾಹ ವರದಿಯಾಗಿದೆ. ಆದರೆ ಇದೇ ಜಿಲ್ಲೆಯಲ್ಲಿ 2021-22ರಲ್ಲಿ ಈ ಸಂಖ್ಯೆ 76ಕ್ಕೇರಿದೆ. 2017-18ರಲ್ಲಿ ನಾಲ್ಕು ಬಾಲ್ಯವಿವಾಹಗಳು ವರದಿಯಾಗಿದ್ದ ಹಾಸನದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ 39 ವಿವಾಹಗಳು ವರದಿಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2017-18ರಲ್ಲಿ 21 ಮತ್ತು 2021-22ರಲ್ಲಿ 39 ಬಾಲ್ಯ ವಿವಾಹಗಳು ನಡೆದಿವೆ.

 

ಮೈಸೂರು ಜಿಲ್ಲೆಯಲ್ಲಿ 2017-18ರಲ್ಲಿ ಒಂದೇ ಒಂದು ಬಾಲ್ಯ ವಿವಾಹ ಕಂಡು ಬಂದಿತ್ತು. ಅದರೆ 2021-22ರಲ್ಲಿ 33 ಪ್ರಕರಣಗಳು ಕಂಡು ಬಂದಿವೆ. ಮದುವೆಗೆ ಸಂಬಂಧಿಸಿದಂತೆ ಪೊಲೀಸರು 389 ಎಫ್‌ಐಆರ್‍‌ಗಳನ್ನು ದಾಖಲಿಸಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ದೂರುಗಳ ಸಂಖ್ಯೆ ಕಡಿಮೆಯಾದರೂ ಬಾಲ್ಯ ವಿವಾಹಗಳ ಸಂಖ್ಯೆಯು ದ್ವಿಗುಣಗೊಂಡಿದೆ ಎಂದು ಅಂಕಿ ಅಂಶಗಳೇ ತೋರಿಸುತ್ತವೆ ಎಂದು ವಿವರಿಸಿದೆ.

 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಕಾರ ಕಳೆದ 5 ವರ್ಷಗಳಲ್ಲಿ 1,065 ಬಾಲ್ಯ ವಿವಾಹಗಳು ನಡೆದಿವೆ. ಮತ್ತು ಕರ್ನಾಟಕದಲ್ಲಿ 10,352 ಬಾಲ್ಯವಿವಾಹದ ದೂರುಗಳು ದಾಖಲಾಗಿದ್ದವು.

 

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‍‌ಬಿ) ಪ್ರಕಾರ 2020ರಲ್ಲಿ 184 ಪ್ರಕರಣಗಳನ್ನು ವರದಿ ಮಾಡುವ ಮೂಲಕ ಕರ್ನಾಟಕವು ಬಾಲ್ಯ ವಿವಾಹಗಳಲ್ಲಿ ಭಾರತದ ರಾಜ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಬಾಲ್ಯ ವಿವಾಹದ ದತ್ತಾಂಶವನ್ನು (ಬಾಲ್ಯ ವಿವಾಹ ನಿಷೇಧ ಸೆಲ್‌ನಿಂದ ಒದಗಿಸಿರುವ ಮಾಹಿತಿ) ಮತ್ತು ಹದಿಹರೆಯದ ಗರ್ಭಧಾರಣೆ ವರದಿಯನ್ನು 2016ರಿಂದ 2021ರವರೆಗೆ ಮತ್ತು ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (ಆರ್‍‌ಸಿಹೆಚ್‌) ಜಾಲತಾಣಕ್ಕೆ ಹೋಲಿಸಿದರೆ ಈ ಸಂಖ್ಯೆಯು 100ರಿಂದ 700 ಬಾರಿ ಜಿಗಿತ ಕಂಡಿದೆ.

 

ಈ ಎಲ್ಲಾ ಹದಿಹರೆಯದ ಗರ್ಭಧಾರಣೆಗಳು ಮದುವೆಯ ವ್ಯಾಪ್ತಿಯಿಂದ ಹೊರಗಿಲ್ಲ. 15 ವರ್ಷದೊಳಗಿನ ಗರ್ಭಾವಸ್ಥೆ ಸಂಖ್ಯೆಯು ಬಾಲ್ಯ ವಿವಾಹದ ವರದಿಯ ಪ್ರಕರಣಗಳಿಗಿಂತ ಹೆಚ್ಚು ಎಂಬುದು ಗೊತ್ತಾಗುತ್ತದೆ.

 

 

ಎನ್‌ಎಫ್‌ಹೆಚ್‌ಎಸ್‌ ಪ್ರಕಾರ ಹೆಚ್ಚಿನ ಹದಿಹರೆಯದ ತಾಯಂದಿರು ಅನಕ್ಷರಸ್ಥರು ಅಥವಾ ಐದು ವರ್ಷಕ್ಕಿಂತ ಕಡಿಮೆ ಶಿಕ್ಷಣ ಪಡೆದಿದ್ದಾರೆ. ಎನ್‌ಎಫ್‌ಹೆಚ್‌ಎಸ್‌ 5 ಮಾದರಿಯಲ್ಲಿ ಯಾವುದೇ ಅವಿವಾಹಿತ ತಾಯಂದಿರು ಇರಲಿಲ್ಲ. ಇದು ಬಾಲ್ಯ ವಿವಾಹದ ಹೆಚ್ಚಿನ ನಿದರ್ಶನವನ್ನು ದೃಢೀಕರಿಸುತ್ತದೆ. ಬಾಲ್ಯ ವಿವಾಹ ಮತ್ತು ಹದಿಹರೆಯದ ಗರ್ಭಧಾರಣೆಗಳು ಯಾವುದೇ ನಿರ್ದಿಷ್ಟ ಜಾತಿ ಮತ್ತು ಸಮುದಾಯಕ್ಕೆ ನಿರ್ದಿಷ್ಟವಾಗಿಲ್ಲ ಎಂದು ವರದಿಯಲ್ಲಿ ವಿಶ್ಲೇಷಿಸಿದೆ.

 

 

ಬಾಗಲಕೋಟೆ, ಬೆಂಗಳೂರು ನಗರ, ಬೆಳಗಾವಿ, ಬಳ್ಳಾರಿ, ಮೈಸೂರು, ಮಂಡ್ಯ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಹದಿಹರೆಯದ ಗರ್ಭಧಾರಣೆ ಮತ್ತು ಬಾಲ್ಯ ವಿವಾಹದಲ್ಲಿ ಆತಂಕಕಾರಿಯಾಗಿ ಹೆಚ್ಚಿದೆ. ಹಾಸನ, ಚಿಕ್ಕಬಳ್ಳಾಪುರ, ದಾವಣಗೆರೆ, ಕಲ್ಬುರ್ಗಿ, ವಿಜಯಪುರದಲ್ಲಿ ಹದಿಹರೆಯದ ಗರ್ಭಧಾರಣೆ ಮತ್ತು ಬಾಲ್ಯವಿವಾಹದಲ್ಲಿ ಮಧ್ಯಮ ಪ್ರಮಾಣದಲ್ಲಿವೆ.

 

ವಲಸೆ ಜನಸಂಖ್ಯೆ (ಅಂತರ ಮತ್ತು ರಾಜ್ಯ-ರಾಜ್ಯ) ಬಹುತೇಕ ಪರಿಗಣನೆಯ ವ್ಯಾಪ್ತಿಯಿಂದ ಹೊರಗಿದೆ. ಮದುವೆ ಮುಗಿದ ನಂತರ ಅವರು ಬಾಲ ವಧುವಿನ ಜೊತೆ ಸ್ಥಳದಿಂದ ತೆರಳಿದ್ದಾರೆ. ಬೆಂಗಳೂರು, ಮೈಸೂರು, ತುಮಕೂರು ಮತ್ತು ಕಲ್ಬುರ್ಗಿಯಂತಹ ಹೆಚ್ಚಿನ ವಲಸೆ ಜನಸಂಖಖ್ಯೆ ಹೊಂದಿರುವ ನಗರ ಪ್ರದೇಶಗಳು ಬಾಲ್ಯ ವಿವಾಹದ ಹೆಚ್ಚಿನ ನಿದರ್ಶನಗಳನ್ನು ನೋಡುತ್ತವೆ. ಅಂತಹ ಹೆಚ್ಚಿನ ಪ್ರಕರಣಗಳು ಪ್ರೀತಿ ಮತ್ತು ಪಲಾಯನ ಅಡಿಯಲ್ಲಿ ಬರುತ್ತವೆ.

 

ಹದಿಹರೆಯದ ಗರ್ಭಧಾರಣೆಯ ಸಂದರ್ಭದಲ್ಲಿ ಸ್ಥಳೀಯ ಆಸ್ಪತ್ರೆ ಹೊರಗೆ, ಸಾಮಾನ್ಯವಾಗಿ ದೂರದ ಸ್ಥಳಗಳಲ್ಲಿ ವಿಶೇಷವಾಗಿ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ನಗರಗಳಲ್ಲಿ ಗಮನಾರ್ಹ ಸಂಖ್ಯೆಯ ಹೆರಿಗೆಗಳು ಸಂಭವಿಸುತ್ತವೆ. ಇಂತಹ ಪ್ರಕರಣಗಳು ಬೆಂಗಳೂರು ನಗರ, ಮೈಸೂರು ಮತ್ತು ಬೆಳಗಾವಿ ಮುಂತಾದ ಕಡೆ ಹೆಚ್ಚಿನ ಪ್ರಕರಣಗಳನ್ನು ಕಾಣುತ್ತವೆ. ಹದಿಹರೆಯದ ತಾಯಂದಿರು ಮತ್ತು ಮಕ್ಕಳಿಗೆ ವಿಸ್ತರಿಸಿದ ಹೆರಿಗೆ ಮತ್ತು ಪ್ರಸವಪೂರ್ವ ಹಾಗೂ ನಂತರದ ಪ್ರಯೋಜನಗಳನ್ನು ಪಡೆಯುವುದರಲ್ಲಿ ಹದಿಹರೆಯದ ತಾಯಂದಿರು ವಂಚಿತರಾಗುತ್ತಾರೆ ಎಂದು ವೈದ್ಯರು ಮತತು ಆಶಾ ಕಾರ್ಯಕರ್ತೆಯರು ಸಾಮಾನ್ಯವಾಗಿ ಹದಿಹರೆಯದ ಗರ್ಭಧಾರಣೆಯನ್ನು ವರದಿ ಮಾಡುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

 

 

ಕೋಷ್ಠಕ ಸಂಖ್ಯೆ 4.1.5ರ ಪ್ರಕಾರ ಭಾಗವಹಿಸಿದ ಬಾಲ ವಧುಗಳಲ್ಲಿ ಬಹುಪಾಲು (ಶೇ.53.8) 16-18ರ ವಯಸ್ಸಿನವರು. ಪ್ರತಿಕ್ರಿಯಿಸಿದವರಲ್ಲಿ (ಮುಖ್ಯವಾಗಿ ಮೈಸೂರು, ಮಂಡ್ಯ ಮತ್ತು ಕಲ್ಬುರ್ಗಿ) 12ರಿಂದ 14 ವರ್ಷ ವಯಸ್ಸಿನವರು.

 

 

ಕೋಷ್ಠಕ ಸಂಖ್ಯೆ 4.1.6ರ ಪ್ರಕಾರ 16 ವರ್ಷ ತುಂಬುವ ಮೊದಲೇ ಶೇ. 14.8 ಪ್ರಮಾಣವು ಮದುವೆಯಾಗಿದ್ದಾರೆ. ಇದು ಕರ್ನಾಟಕದಲ್ಲಿ ತಾಯಿಯ ಮರಣದ ತುಲನಾತ್ಮಕವಾಗಿ ಹೆಚ್ಚಿನ ದರಗಳಿಗೆ ಉತ್ತರಿಸುತ್ತದೆ.

 

 

ಕೋಷ್ಠಕ 4.1.7ರ ಪ್ರಕಾರ ಶೇ.11.6ರಷ್ಟು ವರಗಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಶೇ. 55.6ರಷ್ಟು 22 ವರ್ಷಕ್ಕಿಂತ ಮೇಲ್ಪಟ್ಟವರು. ಕೋಷ್ಠಕ 4.1.11ರ ಪ್ರಕಾರ ಶೇ. 11.5ರಷ್ಟು ವರಗಳು ಅನಕ್ಷರಸ್ಥರು. ಬಹುಪಾಲು (ಶೆ.4.28) ಮಂದಿ ಕೇವಲ ಸಾಕ್ಷರರು. ಅಂದರೆ ಪ್ರಾಥಮಿಕ ಹಂತದವರೆಗೆ ಮಾತ್ರ ಶಿಕ್ಷಣ ಪಡೆದಿದ್ದಾರೆ. ಬಾಲ್ಯ ವಿವಾಹ ಮತ್ತು ಅನಕ್ಷರತೆ ನಡುವೆ ಸಹಜೀವನದ ಸಂಬಂಧವಿದೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ.

 

 

ಹಿಂದುಳಿದ ಉತ್ತರ ಕರ್ನಾಟಕದ ವರಗಳಲ್ಲಿ ವಿಶೇಷವಾಗಿ ವಿಜಯಪುರದಲ್ಲಿ ಅನಕ್ಷರತೆ ಮತ್ತು ಶಿಕ್ಷಣದ ಕೊರತೆ ಪ್ರಧಾನವಾಗಿದೆ. ಕಳಪೆ ಶಿಕ್ಷಣವು ಆರ್ಥಿಕ ಅವಕಾಶಗಳ ಕೊರತೆಗೆ ಕಾರಣವಾಗುತ್ತದೆ. ಬಹುಪಾಲು ಬಾಲ ವಧುಗಳ ಸಂಗಾತಿಯು ತಿಂಗಳಿಗೆ 5,000 ರು ಗಿಂತ ಕಡಿಮೆ ಗಳಿಸುತ್ತಾರೆ. ಇದು ಮೂಲಭೂತ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಅಸಮರ್ಪಕವಾಗಿದೆ.

 

ಇತ್ತೀಚೆಗೆ ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿ ಪ್ರಕಾರ ಕರ್ನಾಟಕದಲ್ಲಿ 15-49 ವರ್ಷ ವಯಸ್ಸಿನ ಮಹಿಳೆಯರು ತಮ್ಮ ತಾಯಿಯ ಕಡೆಯ ಮೊದಲ ಸೋದರ ಸಂಬಂಧಿಯನ್ನು ಮದುವೆಯಾಗಿದ್ದರೆ. ರಾಜ್ಯದಲ್ಲಿ ಶೇ.13.9ರಷ್ಟು ಮಹಿಳಾ ಜನಸಂಖ್ಯೆಯು ತಾಯಿಯ ಕಡೆಯ ಸೋದರ ಸಂಬಂಧಿಯನ್ನು ಮದುವೆಯಾಗಿದ್ದರೇ ಶೇ. 9.6ರಷ್ಟು ತಂದೆಯ ಕಡೆಯ ಸೋದರ ಸಂಬಂಧಿಯನ್ನು ಮದುವೆಯಾಗಿದ್ದಾರೆ.

 

ಕರ್ನಾಕಟದಲ್ಲಿ ರಕ್ತ ಸಂಬಂಧಿಗಳಲ್ಲಿ ಬಾಲ್ಯ ವಿವಾಹಗಳು ಹೆಚ್ಚಿನ ಪ್ರಮಾಣದಲ್ಇವೆ. ಕಾನೂನು ಕ್ರಮದ ವ್ಯಾಪ್ತಿಯ ಮೆಲೆ ಮತ್ತು ಹೊರಗೆ ಸಾಂಸ್ಕೃತಿಕ ನಿರ್ಬಂಧಗಳು ಎಹಚ್ಚಿವೆ. ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶದ ಮಹಿಳೆಯರು ರಕ್ತ ಸಂಬಂಧಿಗಳನ್ನು ವಿವಾಹವಾಗಿರುವ ಪ್ರಮಾಣ ಹೆಚ್ಚಿದೆ.

 

ಬಾಲ್ಯ ವಿವಾಹವು ಬಡತನದೊಂದಿಗೆ ಸಂಬಂಧಿಸಿದೆ. ಏಕೆಂದರೇ ಇದು ಜನಸಂಖ್ಯೆಯಲ್ಲಿನ ಬಡವರ ಮೇಲೆ ಪರಿಣಾಮ ಬೀರುತ್ತದೆ. ಮದುವೆ ಸಮಾರಂಭಗಳ ಹೆಚ್ಚುತ್ತಿರುವ ವೆಚ್ಚಗಳು ಮತ್ತು ಸಂಬಂಧಿತ ವರದಕ್ಷಿಣೆ ವೆಚ್ಚಗಳು ಮತ್ತು ಅಂತಹ ವೆಚ್ಚಗಳನ್ನು ಕಡಿಮೆ ಮಾಡಲು ಅನೇಕ ಕುಟುಂಬಗಳು ತಮ್ಮ ಹೆಣ್ಣುಮಕ್ಕಳನ್ನು ಬೇಗನೇ ಮದುವೆಯಾಗುವಂತೆ ಒತ್ತಾಯಿಸುತ್ತವೆ. ಚಿಕ್ಕ ಹೆಣ್ಣು ಮಕ್ಕಳ ಮೇಲೆ ಬಡತನದ ಪರಿಣಾಮಗಳು ಬಾಲ್ಯ ವಿವಾಹ ಪ್ರಕರಣಗಳಿಗೆ ಕಾರಣವಾಗುತ್ತವೆ. ಏಕೆಂದರೇ ಚಿಕ್ಕ ವಯಸ್ಸಿನ ಹುಡುಗಿಯರಿಗೆ ವರದಕ್ಷಿಣೆ ಕಡಿಮೆ ವರದ ಕ್ಷಿಣೆ ನೀಡಲಾಗುತ್ತದೆ ಮತ್ತು ಸ್ವೀಕರಿಸಲಾಗುತ್ತದೆ ಎಂದು ಮೌಲ್ಯಮಾಪನ ವರದಿಯಲ್ಲಿ ವಿವರಿಸಿದೆ.

 

ಹಾಗೆಯೇ ಕುಟುಂಬದ ಗೌರವವನ್ನು ಎತ್ತಿ ಹಿಡಿಯಲು, ಹುಡುಗಿಯ ಪರಿಶುದ್ಧತೆಯನ್ನು ಕಾಪಾಡುವ ಉತ್ಕಟ ಬಯಕೆಯು ಅಪ್ರಾಪ್ತ ವಯಸ್ಸಿನ ವಿವಾಹಕ್ಕೆ ನಿರ್ಣಾಯಕವಾವಾಗಿದೆ. ಕೆಲವು ಪೋಷಕರು ಬಾಲ್ಯ ವಿವಾಹವು ತಮ್ಮ ಹೆಣ್ಣು ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂಣದ ರಕ್ಷಿಸುತ್ತದೆ ಎಂದು ನಂಬಿದ್ದಾರೆ.

 

ಕರ್ನಾಟಕದ 12 ಜಿಲ್ಲೆಗಳ ಮಂದಿ ಪ್ರೌಢಾವಸ್ಥೆಗೆ ಮುಂಚೆಯೇ ಹುಡುಗಿಯರನ್ನು ಮದುವೆ ಮಾಡಿಸಲು ಕಾರಣವನ್ನು ನೀಡಿದ್ದಾರೆ. ಬಡತನ ಮತ್ತು ಕಡಿಮೆ ಆದಾಯವನ್ನು ಸುಮಾರು ಶೇ.75..6ರಷ್ಟು ಮಂದಿ ಉಲ್ಲೇಖಿಸಿದ್ದಾರೆ. ಅದೇ ರೀತಿ ಪ್ರತಿಕ್ರಿಯಿಸಿದ ಸಮೂಹದಲ್ಲಿ ಶೇ. 84.4ರಷ್ಟು ಮಂದಿ ಬಾಲ್ಯ ವಿವಾಹಗಳು ಕಾನೂನುಬಾಹಿರವೆಂದು ತಿಳಿದಿದ್ದರೂ ಮತ್ತು ಶೆ.91.4ರಷ್ಟು ಬಾಲ್ಯ ವಿವಾಹವನ್ನು ಬೆಂಬಲಿಸುವುದಿಲ್ಲ. ಮದುವೆ ರದ್ದತಿ, ಪರಿಣಾಮವಾಗಿ ಜೈಲುವಾಸ ಮತ್ತು ರಾಜ್ಯ ತಿದ್ದುಪಡಿ ಅಳವಡಿಸಿಕೊಂಡಿರುವ ದಂಡವು ಈಗಾಗಲೇ ಅಂಚಿನಲ್ಲಿರುವ ಮತ್ತು ಬಡತನದ ಅಡಿಯಲ್ಲಿ ತತ್ತರಿಸಿರುವ ಜನರ ದುಃಖಗಳನ್ನು ಹೆಚ್ಚಿಸುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಮೈಸೂರು, ಮಂಡ್ಯ ಮತ್ತು ಹಾಸನದಂತಹ ಕೃಷಿ ಶ್ರೀಮಂತ ಜಿಲ್ಲೆಗಳಲ್ಲೂ ಬಾಲ್ಯ ವಿವಾಹ ಹೆಚ್ಚುತ್ತಿವೆ.

 

 

ಆಳವಾಗಿ ಹುದುಗಿರುವ ಊಳಿಗಮಾನ್ಯ, ಪಿತೃಪ್ರಭುತ್ವದ ರಚನೆ ಮತ್ತು ಮಹಿಳೆಯರ ಅಧೀನ ಸ್ಥಾನ, ಮಹಿಳಾ ಸಂಸ್ಥೆ ಮತ್ತು ಆಯ್ಕೆಯ ನಿರಾಕರಣೆಯಿಂದಾಗಿ ಗೌರವ ಅಪರಾಧಗಳ ಹೆಚ್ಚಿನ ಪ್ರಾಬಲ್ಯ, ರಕ್ತ ಸಂಬಂಧಿ ವಿವಾಹದ ಸಂಸ್ಕೃತಿಯ ಹರಡುವಿಕೆ (ಆಸ್ತಿ ವಿಘಟನೆ ತಡೆಗಟ್ಟುವುದು, ಕುಟುಂಬ ಸಂಬಂಧಗಳನ್ನು ಬಲಪಡಿಸುವುದು, ವರದಕ್ಷಿಣೆ ಅಥವಾ ವರದಕ್ಷಿಣೆ ಪಾವತಿಗಳಿಗೆ ಸಂಬಂಧಿಸಿದಂತೆ ಹಣಕಾಸಿನ ಪ್ರಯೋಜನಗಳನ್ನು ಪಡೆದುಕೊಳ್ಳುವುದು, ಮಹಿಳೆ ಮತ್ತು ಅವರ ಅತ್ತೆಯ ನಡುವಿನ ನಿಕಟ ಸಂಬಂಧ, ಮದುವೆಯ ಬಾಳಿಕೆ ಹೆಸರಿನಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿವೆ.

 

ಕೆಲವು ಸಮುದಾಯಗಳಲ್ಲಿ ಸಾಕಷ್ಟು ಮದುವೆಯಾಗಬಹುದಾದ ಹುಡುಗಿಯರ ಅಲಭ್ಯತೆ. ಹ ಹಾಸನದಲ್ಲಿ 2023ರಲ್ಲಿ ಆದಿಚುಂಚನಗಿರಿ ಮಠದಿಂದ ಪ್ರಾರಂಭಿಸಿದ ಸಾಮೂಹಿಕ ವಿವಾಹಗಳಲ್ಲಿ 10,000 ಬಾಲಕರು ಮತ್ತು 200 ಬಾಲಕಿಯರು ಭಾಗವಹಿಸಿದ್ದರು. ಪ್ರಾಥಮಿಕವಾಗಿ ಉದ್ಯೋಗ ಅವಕಾಶಗಳ ಕೊರತೆ ಮತ್ತು ಪಿತೃಪ್ರಭುತ್ವದ ಸಾಮಾಜಿಕ ರಚನೆಯಿಂದಾಗಿ ವಿದ್ಯಾವಂತ ಮಹಿಳೆಯರ ಶಂಕಿತ ಏಜೆನ್ಸಿಗಳು, ಗ್ರಾಮೀಣ ಪ್ರದೇಶಗಳಲ್ಲಿ ಮದುವೆಯಾಗಲು ನಿರಾಕರಿಸುತ್ತಾರೆ.

 

ಉತ್ತರ ಕರ್ನಾಟಕದ ಹಿಂದುಳಿದ ಜಿಲ್ಲೆಗಳಾದ ಗುಲ್ಬರ್ಗ, ಕೊಪ್ಪಳ, ರಾಯಚೂರು, ವಿಜಯಪುರದಲ್ಲಿ ಬಾಲ್ಯ ವಿವಾಹಕ್ಕೆ ಕಾರಣಗಳ ಪಟ್ಟಿಯನ್ನು ಮೌಲ್ಯಮಾಪನ ವರದಿಯಲ್ಲಿ ನೀಡಲಾಗಿದೆ.

 

 

ಸಾಮಾಜಿಕವಾಗಿ ತುಳಿತಕ್ಕೊಳಗಾದ ಜಾತಿಗಳ ಶೋಷಣೆಯ ಸಂಸ್ಕೃತಿ, ಪಿತೃಪ್ರಭುತ್ರವದ ದಬ್ಬಾಳಿಕೆ ಬಲಪಡಿಸಲು ಸಾಂಸ್ಕೃತಿಕ ಆಚರಣೆಗಳು, ಮೂಢನಂಬಿಕೆಗಳ ಹರಡುವಿಕೆ, ಆರ್ಥಿಕ ಬಲವಂತವಾಗಿ ಬಾಲ್ಯ ವಿವಾಹ,ಬಾಲ್ಯ ವಿವಾಹ ಮತ್ತು ಬಾಲಕಾರ್ಮಿಕತೆ, ಬಾಲ ವಧು ಉಚಿತ ಗೃಹ ಮತ್ತು ಕೃಷಿ ಕಾರ್ಮಿಕರ ಕುಟುಂಬದ ಅಗತ್ಯವನ್ನು ಪೂರೈಸುತ್ತಾರೆ.

 

ಬೆಂಗಳೂರು, ಬೆಳಗಾವಿ, ಮಂಗಳೂರಿನಲ್ಲಿ ಬಾಲ್ಯ ವಿವಾಹಕ್ಕೆ ಕಾರಣಗಳನ್ನು ವರದಿಯಲ್ಲಿ ವಿಶ್ಲೇಷಿಸಲಾಗಿದೆ.
ಒಂದು ಅಧ್ಯಯನದ ಪ್ರಕಾರ ಪ್ರೇಮ ವ್ಯವಹಾರಗಳು ಮತ್ತು ಪಲಾಯನಕ್ಕೆ ಕಾರಣರಾಗಿದ್ದಾರೆ. ಶ್ರೀಮಂತ ಕುಟುಂಬಗಳು ಸಂಪತ್ತಿನ ಬಲವರ್ಧನೆಗಾಗಿ ಬಾಲ್ಯ ವಿವಾಹವನ್ನು ಪ್ರಾರಂಭಿಸುತ್ತವೆ. ಆದರೆ ಪ್ರಾಥಮಿಕವಾಗಿ ಬಡವರು ಮದುವೆಯ ವೆಚ್ಚವನ್ನು ಕಡಿಮೆ ಮಾಡುತ್ತಾರೆ. ಕೋಮು ಉದ್ವಿಗ್ನತೆಯೂ ಬಾಲ್ಯ ವಿವಾಹಕ್ಕೆ ಕೊಡುಗೆಯಾಗಿದೆ. ಅಲ್ಲಿ ಕುಟುಂಬಗಳು ಇತರ ಸಮುದಾಯದ ಬಾಲಕರು ಮತ್ತು ಹುಡುಗಿಯರೊಂದಿಗೆ ಸಂವಹನದ ಸಾಧ್ಯತೆಗಳನ್ನು ಮಿತಿಗೊಳಿಸಲು ಬಾಲ್ಯ ವಿವಾಹ ನಡೆಸುತ್ತವೆ ಎಂದು ವಿಶ್ಲೇಷಿಸಲಾಗಿದೆ.

 

ಕಂದಾಯ ಇಲಾಖೆ ಅಸಹಕಾರ

 

ಬಾಲ್ಯ ವಿವಾಹಗಳನ್ನು ತಡೆಗಟ್ಟುವಲ್ಲಿ ಕಂದಾಯ ಇಲಾಖೆಯು ಅಸಹಕಾರ ವರ್ತನೆ ತೋರಿದೆ. ತಾಲೂಕು ಮಟ್ಟದ ತಹಶೀಲ್ದಾರ್‍‌ಗಳು ತಾಲೂಕುಮಟ್ಟದ ಸಮಿತಿಗೆಳಿಗೆ ಅಧ್ಯಕ್ಷರು. ಆದರೆ ಪ್ರತಿಮೂರು ತಿಂಗಳಿಗೊಮ್ಮೆ ನಡೆಯುವ ಬಾಲ್ಯ ವಿವಾಹ ಪ್ರಕರಣಗಳ ಪ್ರಗತಿ ಪರಿಶೀಲನೆ ಸಭೆಗಳಿಗೆ ಅವರು ಹಾಜರಾಗುವುದೇ ಇಲ್ಲ. ಸಾಮಾನ್ಯವಾಗಿ ಜಿಲ್ಲಾಧಿಕಾರಿಗಳು ಮೂರು ತಿಂಗಳಲ್ಲಿ ನಡೆಸುವ ಪರಿಶೀಲನಾ ಸಭೆಗಳನ್ನು ನಿರ್ಲಕ್ಷ್ಯಿಸುತ್ತಾರೆ. ನ್ಯಾಯಾಲಯದಲ್ಲಿ ಕ್ಷೇತ್ರ ಮಟ್ಟದ ಅಧಿಕಾರಿಗಳ ಪ್ರಕಾರ ಎಪಿಪಿಗಳು ಆಸಕ್ತಿ ವಹಿಸುವುದಿಲ್ಲ. ಏಕೆಂದರೆ ಹೆಚ್ಚಿನ ಹ ಸಂಭಾವನೆ ನೀಡುತ್ತಿಲ್ಲ ಆಸಕ್ತಿ ವಹಿಸುತ್ತಿಲ್ಲ.

 

ಆರೋಗ್ಯ ಇಲಾಖೆಎಎಎನ್‌ಎಂ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಹ ಹಲವು ಸವಾಲುಗಳನ್ನು ಎದುರಿಸುತ್ತಾರೆ. ಹದಿಹರೆಯದ ಗರ್ಭಧಾರಣೆ ಮತ್ತು ಬಾಲ್ಯ ವಿವಾಹದ ದತ್ತಾಂಶದಲ್ಲಿ ಅಪಾರ ವ್ಯತ್ಯಾಸವಿದೆ. ಬಾಲ್ಯ ವಿವಾಹದ ವಧುಗಳ ಸಂಬಂಧಿಕರು ಉದ್ದೇಶಪೂರ್ವಕವಾಗಿ ವಯಸ್ಸನ್ನು ಮರೆಮಾಚುವ ಕಾರಣದಿಂದಾಗಿರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

 

ವೈದ್ಯರು ರೋಗಿಗಳ ಯೋಗಕ್ಷೇಮದ ಮೇಲೆ ಮಾತ್ರ ಗಮನ ಹರಿಸುತ್ತಾರೆ. ಸರಿಯಾದ ವಯಸ್ಸನ್ನು ನೋಂದಾಯಿಸುವುದನ್ನು ಉದ್ದೇಶಪೂರ್ವಕವಾಗಿ ಮರೆಯುತ್ತಾರೆ. ಆಸಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸ್ಥಳೀಯ ಸಮುದಾಯಗಳೊಂದಿಗೆ ಕೆಲಸ ಮಾಢಬೇಕು. ಹೀಗಾಗಿ ಭಯಪಡುತ್ತಾರೆ ಎಂದು ವರದಿಯಲ್ಲಿ ವಿವರಿಸಿದೆ.

 

ಸ್ಥಳೀಯ ಸಾಂಪ್ರದಾಯಿಕ ಆಚರಣೆಗಳು ಮತ್ತು ಸಂಸ್ಕೃತಿನ್ನು ವಿರೋಧಿಸಿದರೆ ಅವರಿಗೆ ತೊಂದರೆ ತಪ್ಪಿದ್ದಲ್ಲ. ನಿರೀಕ್ಷಿತ ಬಾಲ್ಯ ವಿವಾಹ ಪ್ರಕರಣಗಳನ್ನು ವರದಿ ಮಾಡುವ ಸಂದರ್ಭದಲ್ಲಿ ಅವರ ಅನಾಮಧೇಯತೆಯು ಕೆಲವೊಮ್ಮೆ ಇಲಾಖಾ ಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದು ಮತ್ತುಅವರಿಗೆ ಮತ್ತು ಅವರ ಕುಟುಂಬಗಳಿಗೆ ಗಂಭೀರ ಬೆದರಿಕೆಗಳನ್ನು ಉಂಟು ಮಾಡುತ್ತದೆ ಎಂದು ವರದಿಯಲ್ಲಿ ವಿಶ್ಲೇಷಿಸಿದೆ.

Your generous support will help us remain independent and work without fear.

Latest News

Related Posts