ಬೆಂಗಳೂರು; ಕಲ್ಬುರ್ಗಿಯ ವಾಡಿ ಪ್ರದೇಶದಲ್ಲಿ ಸುಣ್ಣದ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಎಸಿಸಿ ಸಿಮೆಂಟ್ಸ್ ಲಿಮಿಟೆಡ್, ಸರ್ಕಾರಕ್ಕೆ 850.21 ಕೋಟಿ ರು ದಂಡ ಪಾವತಿಸಲು ಬಾಕಿ ಉಳಿಸಿಕೊಂಡಿದ್ದರೂ ಇದೇ ಕಂಪನಿಗೆ ಗಣಿ ಗುತ್ತಿಗೆ ಕರಾರನ್ನು ಅನುಷ್ಠಾನ ಮಾಡಲು ಸರ್ಕಾರವು ಅತ್ಯಾಸಕ್ತಿ ವಹಿಸಿದೆ.
ಗಣಿ ಗುತ್ತಿಗೆ ಕರಾರನ್ನು ಅನುಷ್ಠಾನ ಮಾಡಲು ಅನುಮತಿ ಕೋರಿರುವ ಇಲಾಖೇಯು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಈ ಪ್ರಸ್ತಾವವನ್ನು ತಿರಸ್ಕರಿಸಬೇಕಿದ್ದ ಸರ್ಕಾರವು, ಕಂಪನಿ ಪರ ವಕಾಲತ್ತು ವಹಿಸಿದೆ.
ಈ ಕಂಪನಿಯು 2021ರಲ್ಲೇ ಹರಾಜಿನಲ್ಲಿ ಯಶಸ್ವಿಯಾಗಿತ್ತು. 2021ರ ಜನವರಿ 4ರಂದೇ ಲೆಟರ್ ಆಫ್ ಇಂಟೆಂಟ್‌ನ್ನು 5 ವರ್ಷಗಳ ಅವಧಿಗೆ ನೀಡಲಾಗಿತ್ತು. ಇದೀಗ ಇದರ ಅವಧಿಯು 2026ರ ಜನವರಿ 3ರವರೆಗೆ ಚಾಲ್ತಿಯಲ್ಲಿದೆ. ಹೀಗಾಗಿ ಗಣಿ ಗುತ್ತಿಗೆ ಕರಾರನ್ನು ಅನುಷ್ಠಾನಗೊಳಿಸದಿದ್ದಲ್ಲಿ ಹರಾಜು ಪ್ರಕ್ರಿಯೆಯು ರದ್ದಾಗಲಿದೆ. ಈ ಕಾರಣವನ್ನು ಮುಂದಿಟ್ಟುಕೊಂಡು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು, ಕಂಪನಿಗೆ ಮತ್ತಷ್ಟು ಷರತ್ತುಗಳನ್ನು ಒಳಪಡಿಸಿ ಗಣಿ ಗುತ್ತಿಗೆ ಕರಾರನ್ನು ಮಾಡಿಕೊಡಲು ಮುಂದಾಗಿದೆ.
ರಾಜಧನ ಬಾಕಿ ಮತ್ತು ವಿಧಿಸಿರುವ ದಂಡದ ಮೊತ್ತ ಪಾವತಿಗೆ ಸರ್ಕಾರವು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿರುವ ಎಸಿಸಿ ಲಿಮಿಟೆಡ್, ಹೈಕೋರ್ಟ್‌ನಲ್ಲಿ 2 ರಿಟ್ ಅರ್ಜಿಗಳನ್ನು ಸಲ್ಲಿಸಿದೆ. ಮತ್ತೊಂದು ಅರ್ಜಿಯನ್ನು ಸರ್ಕಾರವೇ ಹೈಕೋರ್ಟ್‌ನಲ್ಲಿ ಸಲ್ಲಿಸಿದೆ. ಈ ಮೂರು ರಿಟ್ ಅರ್ಜಿಗಳು 2026ರ ಫೆ.10ರಂದು ವಿಚಾರಣೆಗೆ ನಿಗದಿಯಾಗಿದೆ. ಹೀಗಿದ್ದರೂ ಸಹ ಉಚ್ಛ ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ಪ್ರಕರಣಗಳ ಆದೇಶವನ್ನು ಪಾಲಿಸುವ ಷರತ್ತಿಗೆ ಒಳಪಟ್ಟು ಕಂಪನಿಯಿಂದ ಪ್ರಮಾಣ ಪತ್ರ ಪಡೆಯಲು ಸರ್ಕಾರವು ಮುಂದಾಗಿದೆ.
ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್’ಗೆ ಖಚಿತಪಡಿಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಈ ಕುರಿತು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಅಧಿಕಾರಿಗಳೊಂದಿಗೆ ಹಲವು ಸುತ್ತಿನ (ಕಡತ ಸಂಖ್ಯೆ; CI 14/CMC/2024) ಚರ್ಚೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.
ಈ ಪ್ರಕರಣವು ಅತೀ ಸೂಕ್ಷ್ಮ ಮತ್ತು ಪ್ರಮುಖ ವಿಷಯವಾಗಿದೆ. ಅಲ್ಲದೇ ಈ ಪ್ರಕರಣವು ಆರ್ಥಿಕ ಅಂಶಗಳನ್ನೂ ಒಳಗೊಂಡಿದೆ. ಹೀಗಿದ್ದರೂ ಸಹ ಈ ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಅತ್ಯಾಸಕ್ತಿ ವಹಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಗಣಿಗಾರಿಕೆ ಚಟುವಟಿಕೆಗಳಲ್ಲಿ ವಿವಿಧ ರೀತಿಯ ಉಲ್ಲಂಘನೆ ನಡೆಸಿರುವ ಗುರುತರವಾದ ಆರೋಪಕ್ಕೆ ಗುರಿಯಾಗಿರುವ ಎಸಿಸಿ ಲಿಮಿಟೆಡ್ ವಿರುದ್ಧ ಸರ್ಕಾರವು 482.69 ಕೋಟಿಯಷ್ಟು ದಂಡ ವಿಧಿಸಿತ್ತು. ಈ ಕುರಿತು ಎಸಿಸಿ ಲಿಮಿಟೆಡ್, ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ (ಸಂಖ್ಯೆ; ಡಬ್ಲ್ಯೂ ಪಿ 18655/2025) ಸಲ್ಲಿಸಿತ್ತು.

ಅಲ್ಲದೇ ರಾಜಧನ ರೂಪದಲ್ಲಿ 492.51 ಕೋಟಿ ರು ಪಾವತಿಸಬೇಕಿತ್ತು. ಒಟ್ಟಾರೆ ಸರ್ಕಾರಕ್ಕೆ 850.21 ಕೋಟಿಯಷ್ಟು ಪಾವತಿಸಲು ಬಾಕಿ ಉಳಿಸಿಕೊಂಡಿರುವುದು ತಿಳಿದು ಬಂದಿದೆ.
ಈ ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ (ಗಣಿ ಗುತ್ತಿಗೆ ಸಂಖ್ಯೆ 2641) ಸರ್ಕಾರದ ಹಂತದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು 2023ರ ಮಾರ್ಚ್ 31ರಂದು ಸರ್ಕಾರಕ್ಕೆ ವರದಿ ನೀಡಿತ್ತು. ಇದರ ಪ್ರಕಾರ ಎಸಿಸಿ ಲಿಮಿಟೆಡ್, 492.51 ಕೋಟಿ ರು ಮತ್ತು ಉಚ್ಛ ನ್ಯಾಯಾಲಯವು 2024ರ ಅಕ್ಟೋಬರ್ 29ರಂತೆ ಎಸಿಸಿ ಲಿಮಿಟೆಡ್ ರಾಜಧನ ರೂಪದಲ್ಲಿ 125.00 ಕೋಟಿ ರು ಪಾವತಿಸಿದೆ. ಸರ್ಕಾರಕ್ಕೆ ಇನ್ನೂ 367.51 ಕೋಟಿ ರು ರಾಜಧನ ಪಾವತಿಸಲು ಬಾಕಿ ಇದೆ.

ಈ ಸಂಬಂಧವೂ ಎಸಿಸಿ ಲಿಮಿಟೆಡ್, ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ (ಡಬ್ಲ್ಯೂ ಪಿ 25298/2024) ಸಲ್ಲಿಸಿದೆ. ಈ ಪ್ರಕರಣವು ಇನ್ನೂ ವಿಚಾರಣೆ ಹಂತದಲ್ಲಿದೆ ಎಂದು ಉನ್ನತ ಮಟ್ಟದ ಸಮಿತಿಯು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಹಾಗೆಯೆ ಪ್ರಶ್ನಿತ ಈ ಕಂಪನಿಯು ರಾಜಧನ ಮೊತ್ತದಲ್ಲಿ ಇನ್ನೂ 367.51 ಕೋಟಿ ರು ಪಾವತಿಸುವುದಕ್ಕೆ ಬಾಕಿ ಉಳಿಸಿಕೊಂಡಿದೆ. ಇದನ್ನು ಎಸ್ಕ್ರೋ ಖಾತೆಗೆ ಪಾವತಿಸಿಲ್ಲ. ಬದಲಿಗೆ ಕೇಂದ್ರದ ಗಣಿ ಸಚಿವಾಲಯದಲ್ಲಿ ಪರಿಷ್ಕರಣಾ ಅರ್ಜಿಯನ್ನು ಸಲ್ಲಿಸಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಪರಿಷ್ಕರಣೆ ಪ್ರಾಧಿಕಾರವು ‘ಈ ಪ್ರಕರಣವನ್ನು ಹೊಸದಾಗಿ ಪರಿಗಣಿಸಬೇಕು,’ ಎಂದು ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಿತ್ತು.
ಕೇಂದ್ರ ಸರ್ಕಾರದ ಗಣಿ ಮಂತ್ರಾಲಯ ಮತ್ತು ಪರಿಷ್ಕರಣೆ ಪ್ರಾಧಿಕಾರ ನೀಡಿದ್ದ ತೀರ್ಪನ್ನು ರಾಜ್ಯ ಸರ್ಕಾರವೂ ಸಹ ಉಚ್ಛ ನ್ಯಾಯಾಲಯದಲ್ಲಿ 2025ರ ಡಿಸೆಂಬರ್ 2ರಂದು ರಿಟ್ ಅರ್ಜಿ (ಸಂಖ್ಯೆ ಡಬ್ಲ್ಯೂ ಪಿ 36850/2025) ಸಲ್ಲಿಸಿತ್ತು. ಈ ಪ್ರಕರಣವೂ ಸಹ ಇನ್ನೂ ವಿಚಾರಣೆ ಹಂತದಲ್ಲಿ ಬಾಕಿ ಇದೆ.

ಅಲ್ಲದೇ ಈ ಗಣಿ ಗುತ್ತಿಗೆಯು (2641) 2023ರ ಫೆಬ್ರವರಿ 18ರಂದೇ ಮುಕ್ತಾಯಗೊಂಡಿದೆ. ಆದರೂ ಈ ಪ್ರದೇಶದಲ್ಲಿ ಎಸಿಸಿ ಲಿಮಿಟೆಡ್ ಅನಧಿಕೃತವಾಗಿ ಗಣಿಗಾರಿಕೆ ನಡೆಸಿತ್ತು. ಹೀಗಾಗಿ ಈ ಕಂಪನಿಗೆ 482.69 ಕೋಟಿ ರು ದಂಡವನ್ನು ವಿಧಿಸಿತ್ತು. ಇದನ್ನು ಪ್ರಶ್ನಿಸಿದ್ದ ಎಸಿಸಿ ಲಿಮಿಟೆಡ್, ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ (ಸಂಖ್ಯೆ ಡಬ್ಲ್ಯೂ ಪಿ 18655/2025) ಸಲ್ಲಿಸಿತ್ತು. ಈ ಪ್ರಕರಣವೂ ವಿಚಾರಣೆ ಹಂತದಲ್ಲಿದೆ.

850.21 ಕೋಟಿಯಷ್ಟು ಮೊತ್ತವನ್ನು ಸರ್ಕಾರಕ್ಕೆ ಪಾವತಿಸಲು ಬಾಕಿ ಉಳಿಸಿಕೊಂಡಿದ್ದರೂ ಸಹ ಕಲ್ಬುರ್ಗಿಯ ಕಣ್ಣೂರು ವಾಡಿಯಲ್ಲಿನ ಸುಣ್ಣದ ಕಲ್ಲು ಗಣಿಗಾರಿಕೆಗೆ ಎಸಿಸಿ ಲಿಮಿಟೆಡ್ ಹೊಸದಾಗಿ ಅರ್ಜಿ ಸಲ್ಲಿಸಿತ್ತು. ಮತ್ತು ಈ ಗಣಿ ಗುತ್ತಿಗೆ ಪ್ರದೇಶವನ್ನು ಹರಾಜಿನಲ್ಲಿ ಪಡೆಯುವುದರಲ್ಲಿ ಯಶಸ್ವಿಯಾಗಿತ್ತು. 850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದ ಈ ಕಂಪನಿಯನ್ನು, ಹರಾಜಿನಲ್ಲಿ ಭಾಗವಹಿಸುವುದನ್ನು ಇಲಾಖೆಯು ತಡೆಹಿಡಿಯಲಿಲ್ಲ. ಇಲಾಖೆಯ ಈ ನಡೆಯೂ ಸಹ ಸಂಶಯಗಳಿಗೆ ಕಾರಣವಾಗಿದೆ.

ಕಲ್ಬುರ್ಗಿಯ ವಾಡಿ ಪ್ರದೇಶವು ಪ್ರಮುಖವಾಗಿ ಸುಣ್ಣದ ಕಲ್ಲು ಗಣಿಗಾರಿಕೆ ಮತ್ತು ಕಲ್ಲು ಗಣಿಗಾರಿಕೆಗೆ ಹೆಸರುವಾಸಿಯಾಗಿದೆ. ವಿಶೇಷವಾಗಿ ಈ ಪ್ರದೇಶದಲ್ಲಿ ಎಸಿಸಿ ಸಿಮೆಂಟ್ ಕಂಪನಿ ಮತ್ತು ಗಣಿಗಳಿವೆ. ಇಲ್ಲಿ ಉತ್ಪಾದನೆಯಾಗುವ ಸುಣ್ಣದ ಕಲ್ಲು ಮತ್ತು ಶಹಬಾದಿ ಕಲ್ಲುಗಳು ರಾಜ್ಯಾದ್ಯಂತ ಕಟ್ಟಡ ನಿರ್ಮಾಣಕ್ಕೆ ಬಳಕೆಯಾಗುತ್ತವೆ.

ಆದರೆ, ಈ ಕಂಪನಿಯ ಗಣಿಗಾರಿಕೆಯಿಂದಾಗಿ ರೈತರ ಭೂಮಿ ಫಲವತ್ತತೆ ಕಣ್ಮರೆಯಾಗುತ್ತಿದೆ ಮತ್ತು ಪರಿಸರ ಸಮಸ್ಯೆಗಳು ಉಂಟಾಗುತ್ತಿದೆ. ಈ ಕಂಪನಿಯ ಗಣಿ ಚಟುವಟಿಕೆಗೆ ಸ್ಥಳೀಯ ವಿರೋಧವೂ ಇದೆ.









