ಬೆಂಗಳೂರು; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಹೊಸ ಮಹಾನಗರ ಪಾಲಿಕೆಗಳನ್ನಾಗಿ ವಿಭಜಿಸಿರುವ ಪರಿಣಾಮ ಆಯಾ ಪಾಲಿಕೆಗಳಲ್ಲಿ ತೆರಿಗೆ ಸಂಗ್ರಹಣೆಯಲ್ಲಿ ಇಳಿಮುಖವಾಗಲಿದೆ. ಅಲ್ಲದೇ ಸಂಗ್ರಹವಾಗುವ ಆದಾಯ ಮತ್ತು ವೆಚ್ಚಗಳನ್ನು ಸರಿದೂಗಿಸಲು ಕಷ್ಟವಾಗಲಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಆತಂಕ ವ್ಯಕ್ತಪಡಿಸಿರುವುದು ಇದೀಗ ಬಹಿರಂಗವಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಗೆ ಪ್ರತಿಪಕ್ಷಗಳು ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೂ ಕಾಂಗ್ರೆಸ್ ಸರ್ಕಾರವು ಈ ಎಲ್ಲಾ ವಿರೋಧಗಳನ್ನು ಬದಿಗೊತ್ತಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಿ ಪ್ರತಿಷ್ಠೆ ಮೆರೆದಿತ್ತು. ಆದರೀಗ ಆರ್ಥಿಕ ಪರಿಣಾಮಗಳ ಕುರಿತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರೇ ತೆರಿಗೆ, ಆದಾಯ ಮತ್ತು ವೆಚ್ಚದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು 2025ರ ಡಿಸೆಂಬರ್ 19ರಂದು ಪತ್ರ ಬರೆದಿದ್ದಾರೆ.
ಬೆಂಗಳೂರು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ನಗರಪಾಲಿಕೆಗಳಲ್ಲಿ ಎದುರಾಗಬಹುದಾದ ಆರ್ಥಿಕ ವೆಚ್ಚಗಳನ್ನು ಸರಿದೂಗಿಸಲು ಒಂದು ಬಾರಿಗೆ 600 ಕೋಟಿ ರು ಅನುದಾನವನ್ನು ಒದಗಿಸಬೇಕು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಸರ್ಕಾರದ ಕದ ತಟ್ಟಿದ್ದಾರೆ.
ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
‘ನಗರ ಪಾಲಿಕೆಗಳ ಸ್ವಂತ ಸಂಪನ್ಮೂಲಗಳಲ್ಲಿ ಮುಖ್ಯವಾಗಿ ಆಸ್ತಿ ತೆರಿಗೆಯು ಪ್ರಮುಖವಾಗಿದೆ. ಆಸ್ತಿ ತೆರಿಗೆಯ ಸ್ವೀಕೃತಿಯು ಸಾಮಾನ್ಯವಾಗಿ ವರ್ಷದ ಮೊದಲ ಮೂರು ತಿಂಗಳಲ್ಲಿ ಬಹುಪಾಲು ಸಂಗ್ರಹವಾಗಿರುತ್ತದೆ. ಹಾಗೂ ನಗರಪಾಲಿಕೆಗಳು 2025ರ ಸೆ.2ರಂದು ಅಸ್ತಿತ್ವಕ್ಕೆ ಬಂದಿರುವುದರಿಂದ ನಂತರದ ದಿನಗಳಲ್ಲಿ ತೆರಿಗೆ ಸಂಗ್ರಹದಲ್ಲಿ ಇಳಿಮುಖವಾಗಬಹುದಾಗಿದ್ದು, ಸಂಗ್ರಹವಾಗುವ ಆದಾಯ ಮತ್ತು ವೆಚ್ಚಗಳನ್ನು ಸರಿದೂಗಿಸಲು ಕಷ್ಟಕರವಾಗಿರುತ್ತದೆ,’ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಆತಂಕ ವ್ಯಕ್ತಪಡಿಸಿರುವುದು ಪತ್ರದಿಂದ ಗೊತ್ತಾಗಿದೆ.

ಅಲ್ಲದೇ ನಗರಪಾಲಿಕೆಗಳ ಬಹುಪಾಲು ಸಿಬ್ಬಂದಿ, ಜಾತಿ ಗಣತಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಳಿಗೆ ನಿಯೋಜಿಸಲಾಗಿದೆ. ಚುನಾವಣಾ ಕೆಲಸ ಕಾರ್ಯಗಳನ್ನು ಸಹ ತೆರಿಗೆ ಸಂಗ್ರಹದ ಕೆಲಸ ಕಾರ್ಯದೊಂದಿಗೆ ನಿರ್ವಹಿಸುತ್ತಿದ್ದಾರೆ. ಹೀಗಾಗಿ ನಿರೀಕ್ಷಿತ ಗುರಿಯನ್ನು ತಲುಪುವುದರಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ. ನಗರ ಪಾಲಿಕೆಗಳ ಆರ್ಥಿಕ ಸ್ಥಿತಿಗತಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ ಎಂದೂ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿರುವುದು ತಿಳಿದು ಬಂದಿದೆ.
ಹಣಕಾಸಿನ ಕೊರತೆ
ನಗರಪಾಲಿಕೆಗಳು ಅಸ್ತಿತ್ವಕ್ಕೆ ಬಂದ ನಂತರ ಹಿಂದಿನ ಬಿಬಿಎಂಪಿಯಲ್ಲಿ ನಗರ ಪಾಲಿಕೆಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಈಗಾಗಲೇ ವಿವಿಧ ಇಲಾಖೆ, ವಿಭಾಗಗಳಲ್ಲಿ ಇರುವ ಹೊಣೆಗಾರಿಕೆಗಳನ್ನು ನಿಭಾಯಿಸಲೂ ಹಣಕಾಸಿನ ಕೊರತೆ ಎದುರಾಗಲಿದೆ.
ನಗರ ಸ್ವಚ್ಛತೆ, ನಗರ ಆರೋಗ್ಯ, ನೈರ್ಮಲ್ಯೀಕರಣ, ಶಾಲಾ ಕಾಲೇಜುಗಳ ನಿರ್ವಹಣೆ, ನಗರ ಅರಣ್ಯೀಕರಣ ನಿರ್ವಹಣೆ, ಕಲ್ಯಾಣ ಕಾರ್ಯಕ್ರಮಗಳು, ಸಾರ್ವಜನಿಕ ಕಾಮಗಾರಿಗಳಾದ ರಸ್ತೆ, ಚರಂಡಿಗಳ ನಿರ್ವಹಣೆ, ಕಟ್ಟಡಗಳ ನಿರ್ವಹಣೆ, ಬೀದಿ ದೀಪ ನಿರ್ವಹಣೆ, ಮತ್ತು ಇತರೆ ನಿರ್ವಹಣೆ ಕಾಮಗಾರಿಗಳಿಗೂ ಹಣಕಾಸಿನ ಕೊರತೆ ಎದುರಾಗಲಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

‘ಇತರೇ ನಿರ್ವಹಣೆ ಕಾಮಗಾರಿಗಳೊಂದಿಗೆ ಎರಡು ವರ್ಷಗಳಿಗೂ ಅಧಿಕ ಅವಧಿಯ ಅಭಿವೃದ್ಧಿ ಕಾಮಗಾರಿಗಳ ಬಾಕಿ ಬಿಲ್‌ಗಳ ಪಾವತಿಗೂ ಸಹ ಹಣಕಾಸಿನ ವ್ಯವಸ್ಥೆಗೊಳಿಸಬೇಕಿದೆ. ಪ್ರಸ್ತುತ ಸ್ವೀಕೃತಿಯಾಗುತ್ತಿರುವ ಆದಾಯವು ಹಿಂದಿನ ಹೊಣೆಗಾರಿಕೆಗಳನ್ನು ನಿರ್ವಹಣೆ ಮಾಡಲು ಬಳಕೆ ಮಾಡಲಾಗುತ್ತಿದೆ. ಈ ಹೊಣೆಗಾರಿಕೆಗಳನ್ನು ನಿರ್ವಹಿಸಲು ಹಣಕಾಸಿನ ಕೊರತೆಯನ್ನು ನಗರಪಾಲಿಕೆಗಳು ಎದುರಿಸುತ್ತಿರುತ್ತಿವೆ,’ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿರುವುದು ಗೊತ್ತಾಗಿದೆ.
2025 ಸೆಪ್ಟಂಬರ್- 2026ರ ಮಾರ್ಚ್‌ವರೆಗೆ ಅಂದಾಜಿಸಿದ ಮೊತ್ತ
ಬೆಂಗಳೂರು ಕೇಂದ್ರ ನಗರಪಾಲಿಕೆಗೆ ಸ್ಥಾಪನೆ ವೆಚ್ಚಗಳಿಗಾಗಿ 155.30 ಕೋಟಿ , ಆಡಳಿತಾತ್ಮಕ ವೆಚ್ಚಗಳಿಗಾಗಿ 15. 05 ಕೋಟಿ, ಕಾರ್ಯಾಚರಣೆಗೆ 64.99 ಕೋಟಿ, ಸಿವಿಲ್ ಕಾಮಗಾರಿಗಳಿಗೆ 147.57ಕೋಟಿ ಸೇರಿ 382.92 ಕೋಟಿ ರು ಅಂದಾಜಿಸಿದೆ.
ಅದೇ ರೀತಿ ಬೆಂಗಳೂರು ಪೂರ್ವ ನಗರಪಾಲಿಕೆಗೆ ಸ್ಥಾಪನೆ ವೆಚ್ಚಗಳಿಗಾಗಿ 75.79 ಕೋಟಿ , ಆಡಳಿತಾತ್ಮಕ ವೆಚ್ಚಗಳಿಗಾಗಿ 7.69 ಕೋಟಿ, ಕಾರ್ಯಾಚರಣೆಗೆ 37.17 ಕೋಟಿ, ಸಿವಿಲ್ ಕಾಮಗಾರಿಗಳಿಗೆ 78.39 ಕೋಟಿ ಸೇರಿ 199.05 ಕೋಟಿ ರು ವೆಚ್ಚವಾಗಲಿದೆ ಎಂದು ಅಂದಾಜಿಸಿದೆ.
ಅದೇ ರೀತಿ ಬೆಂಗಳೂರು ಪಶ್ಚಿಮ ನಗರಪಾಲಿಕೆಗೆ ಸ್ಥಾಪನೆ ವೆಚ್ಚಗಳಿಗಾಗಿ 271.58 ಕೋಟಿ , ಆಡಳಿತಾತ್ಮಕ ವೆಚ್ಚಗಳಿಗಾಗಿ 24.55 ಕೋಟಿ, ಕಾರ್ಯಾಚರಣೆಗೆ 111.88 ಕೋಟಿ, ಸಿವಿಲ್ ಕಾಮಗಾರಿಗಳಿಗೆ 259.76 ಕೋಟಿ ಸೇರಿ 667.78 ಕೋಟಿ ರು ವೆಚ್ಚವಾಗಲಿದೆ ಎಂದು ಅಂದಾಜಿಸಿದೆ.
ಅದೇ ರೀತಿ ಬೆಂಗಳೂರು ಉತ್ತರ ನಗರಪಾಲಿಕೆಗೆ ಸ್ಥಾಪನೆ ವೆಚ್ಚಗಳಿಗಾಗಿ 179.75 ಕೋಟಿ , ಆಡಳಿತಾತ್ಮಕ ವೆಚ್ಚಗಳಿಗಾಗಿ 16.72 ಕೋಟಿ, ಕಾರ್ಯಾಚರಣೆಗೆ 78.82 ಕೋಟಿ, ಸಿವಿಲ್ ಕಾಮಗಾರಿಗಳಿಗೆ 172.61 ಕೋಟಿ ಸೇರಿ 447.91ಕೋಟಿ ರು ವೆಚ್ಚವಾಗಲಿದೆ ಎಂದು ಅಂದಾಜಿಸಿದೆ.

ಅದೇ ರೀತಿ ಬೆಂಗಳೂರು ದಕ್ಷಿಣ ನಗರಪಾಲಿಕೆಗೆ ಸ್ಥಾಪನೆ ವೆಚ್ಚಗಳಿಗಾಗಿ 156.84 ಕೋಟಿ , ಆಡಳಿತಾತ್ಮಕ ವೆಚ್ಚಗಳಿಗಾಗಿ 14.23 ಕೋಟಿ, ಕಾರ್ಯಾಚರಣೆಗೆ 64.58 ಕೋಟಿ, ಸಿವಿಲ್ ಕಾಮಗಾರಿಗಳಿಗೆ 150.60 ಕೋಟಿ ಸೇರಿ 386.26 ಕೋಟಿ ರು ವೆಚ್ಚವಾಗಲಿದೆ ಎಂದು ಅಂದಾಜಿಸಿದೆ.
ಒಟ್ಟಾರೆ ಸ್ಥಾಪನೆ ವೆಚ್ಚಗಳಿಗೆ 839.26 ಕೋಟಿ, ಆಡಳಿತಾತ್ಮಕ ವೆಚ್ಚಗಳಿಗೆ 78.27 ಕೋಟಿ, ಕಾರ್ಯಾಚರಣೆಗಳಿಗೆ 357.48 ಕೋಟಿ, ಸಿವಿಲ್ ಕಾಮಗಾರಿಗಳಿಗೆ 808.93 ಕೋಟಿ ರು ಸೇರಿ 2083.94 ಕೋಟಿ ರು ವೆಚ್ಚವಾಗಲಿದೆ ಎಂದು ಅಂದಾಜಿಸಿರುವುದು ತಿಳಿದು ಬಂದಿದೆ.
ಸಂಗ್ರಹವಾಗುವ ತೆರಿಗೆ ಎಷ್ಟು?
ಬೆಂಗಳೂರು ಕೇಂದ್ರ ನಗರಪಾಲಿಕೆಗೆ ಆಸ್ತಿ ತೆರಿಗೆ ರೂಪದಲ್ಲಿ 615 ಕೋಟಿ, ತೆರಿಗೆಯೇತರ ರಾಜಸ್ವದ ರೂಪದಲ್ಲಿ 162.22 ಕೋಟಿ ರು 777.95 ಕೋಟಿ ರು ಜಮೆಯಾಗಬಹುದು ಎಂದು ಅಂದಾಜಿಸಿದೆ. ಇದರಲ್ಲಿ ಶೇ. 60ರಷ್ಟು ವಸೂಲಿ ಆದರೆ 466.77 ಕೋಟಿ ರು ಜಮೆಯಾಗಬಹುದು ಎಂದಿದೆ.

ಅದೇ ರೀತಿ ಬೆಂಗಳೂರು ಪೂರ್ವ ನಗರಪಾಲಿಕೆಗೆ ಆಸ್ತಿ ತೆರಿಗೆ ರೂಪದಲ್ಲಿ 752.44 ಕೋಟಿ, ತೆರಿಗೆಯೇತರ ಆದಾಯವಾಗಿ 196.35 ಕೋಟಿ ರು. ಸೇರಿ ಒಟ್ಟಾರೆ 948.79 ಕೋಟಿ ರು ಸಂಗ್ರಹವಾಗಲಿದೆ. ಶೇ. 60ರಷ್ಟು ವಸೂಲಿ ಆದಲ್ಲಿ 569.27 ಕೋಟಿ ರು ಸಂಗ್ರಹವಾಗಬಹುದು ಎಂದು ಅಂದಾಜಿಸಿದೆ.
ಬೆಂಗಳೂರು ಪಶ್ಚಿಮ ನಗರಪಾಲಿಕೆಗೆ ಆಸ್ತಿ ತೆರಿಗೆ 620.52 ಕೋಟಿ ರು, ತೆರಿಗೆಯೇತರ ಆದಾಯವಾಗಿ 220.70 ಕೋಟಿ ರು., ಸೇರಿ 850.22 ಕೋಟಿ ರು ಸಂಗ್ರಹವಾಗಲಿದೆ. ಶೇ. 60ರಷ್ಟು ಎಂದು ವಸೂಲಾದಲ್ಲಿ 510.13 ಕೋಟಿ ರು ಸಂಗ್ರಹವಾಗಲಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆಗೆ 663.93 ಕೋಟಿ ರು., ತೆರಿಗೆಯೇತರ ಆದಾಯವಾಗಿ 179.29 ಕೋಟಿ ರು., ಸೇರಿ 843.22 ಕೋಟಿ ರು ಆದಾಯ ಸಂಗ್ರಹವಾಗಲಿದೆ. ಶೇ. 60ರಷ್ಟು ವಸೂಲಾದಲ್ಲಿ 505.93 ಕೋಟಿ ರು ಸಂಗ್ರಹವಾಗಬಹುದು ಎಂದು ಲೆಕ್ಕ ಹಾಕಿದೆ.
ಬೆಂಗಳೂರು ದಕ್ಷಿಣ ನಗರಪಾಲಿಕೆಗೆ ಆಸ್ತಿ ತೆರಿಗೆ ರೂಪದಲ್ಲಿ 591.58 ಕೋಟಿ ರು., ತೆರಿಗೆಯೇತರ ಆದಾಯದಲ್ಲಿ 153.68 ಕೋಟಿ ರು ಸೇರಿ 745.26 ಕೋಟಿ ರು ಸಂಗ್ರಹವಾಗಲಿದೆ. ಇದರಲ್ಲಿ ಶೇ. 60ರಷ್ಟು ವಸೂಲಾದಲ್ಲಿ 447. 15 ಕೋಟಿಯಷ್ಟು ಸಂಗ್ರಹವಾಗಬಹುದು ಎಂದು ಅಂದಾಜಿಸಿರುವುದು ಪತ್ರದಿಂದ ಗೊತ್ತಾಗಿದೆ.

ಒಟ್ಟಾರೆಯಾಗಿ ಈ ಐದೂ ನಗರಪಾಲಿಕೆಗಳಿಗೆ ಆಸ್ತಿ ತೆರಿಗೆ ರೂಪದಲ್ಲಿ 3,244.20 ಕೋಟಿ ರು ಮತ್ತು ತೆರಿಗೆಯೇತರ ಆದಾಯದಲ್ಲಿ 921.26 ಕೋಟಿ ರು ಸೇರಿ 4,165. 46 ಕೋಟಿ ರು ಸಂಗ್ರಹವಾಗಲಿದೆ ಎಂದು ಅಂದಾಜಿಸಿದೆ. ಇದರಲ್ಲಿಯೂ ಶೇ.60ರಷ್ಟು ವಸೂಲಾದಲ್ಲಿ 2,499.27 ಕೋಟಿ ಸಂಗ್ರಹವಾಗಬಹುದು ಎಂದು ಲೆಕ್ಕ ಹಾಕಿದೆ.
2,500 ಕೋಟಿ ರು ಬಿಲ್ ಬಾಕಿ
ಹಿಂದಿನ ಬಿಬಿಎಂಪಿ ಅನುದಾನದಡಿಯಲ್ಲಿ ಹಲವು ಕಾಮಗಾರಿಗಳನ್ನು ನಿರ್ವಹಿಸಲಾಗಿತ್ತು. ಇದರಲ್ಲಿ ಬಾಕಿ ಬಿಲ್‌ಗಳಿಗೆ 500 ಕೋಟಿ ರು.ಗಳನ್ನು ಈಗಾಗಲೇ ಪಾವತಿ ಮಾಡಲಾಗಿದೆ. ನಗರ ಪಾಲಿಕೆಗಳು ರಚನೆಯಾದ ನಂತರ 100 ಕೋಟಿ ರು.ಗಳ ಬಾಕಿ ಬಿಲ್‌ಗಳನ್ನು ಪಾವತಿಸಿದೆ. ಆದರೂ ಸಹ ಇನ್ನೂ 2,5000 ಕೋಟಿ ರು ಪಾವತಿಗೆ ಕಾಮಗಾರಿ ಬಿಲ್‌ಗಳು ಬಾಕಿ ಇವೆ. ಇದಲ್ಲದೇ ಕಲ್ಯಾಣ ಯೋಜನೆಯಡಿ ನಿರ್ವಹಿಸಿದ ಕಾಮಗಾರಿ ಮತ್ತು ಕಾರ್ಯಕ್ರಮಗಳ ಬಿಲ್‌ಗಳು ಸಹ ಪಾವತಿಗೆ ಬಾಕಿ ಇವೆ. ಆದರೆ ಇದರ ಮೊತ್ತ ಎಷ್ಟು ಎಂದು ಪತ್ರದಲ್ಲಿ ತಿಳಿಸಿಲ್ಲ.
ಹಾಗೆಯೇ ಹಿಂದಿನ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯಲ್ಲಿ ನಿರ್ವಹಣೆ ಕಾಮಗಾರಿಯನ್ನು ಹೊರತುಪಡಿಸಿ ಅಂದಾಜು 1,200ರಿಂದ 1,300 ಕೋಟಿ ರು ಗಳ ಬಂಡವಾಳ ಕಾಮಗಾರಿ ಬಾಕಿ ಬಿಲ್ ಪಾವತಿ ಮಾಡಲಾಗುತ್ತಿದೆ. ಅದರಂತೆ ಐದು ನಗರಪಾಲಿಕೆಗಳಿಂದ 2026ರ ಮಾರ್ಚ್‌ವರೆಗೆ ಅಂದಾಜು 600 ರಿಂದ 700 ಕೋಟಿ ರು.ಗಳ ಬಿಲ್‌ನ್ನು ಪಾವತಿಸಬೇಕಿದೆ. ಈ ಮೊತ್ತಕ್ಕೆ ಪಾಲಿಕೆ ಹಂತದಲ್ಲೇ ಸಂಗ್ರಹಿಸಬಹುದಾದ ಸ್ವೀಕೃತಿಗಳಿಂದ ಪಾವತಿಸಲು ಕ್ರಮ ವಹಿಸಬಹುದು ಎಂದು ಸರ್ಕಾರದ ಗಮನಸೆಳೆದಿದೆ.
600 ಕೋಟಿ ರು ಅನುದಾನಕ್ಕೆ ಸರ್ಕಾರದ ಮೊರೆ
ಬಿಬಿಎಂಪಿಯನ್ನು ವಿಭಜಿಸಿ 5 ನಗರಪಾಲಿಕೆಗಳನ್ನು ಹೊಸದಾಗಿ ಅಸ್ತಿತ್ವಕ್ಕೆ ತಂದಿರುವ ಕಾರಣ, ಆಡಳಿತಾತ್ಮಕ , ಸಿಬ್ಬಂದಿ ವೆಚ್ಚ ಮತ್ತು ನಿರ್ವಹಣೆ ವೆಚ್ಚಗಳಿಗೆ ಹೆಚ್ಚುವರಿ ಅನುದಾನ ಒದಗಿಸಬೇಕಾದ ಅನಿವಾರ್ಯತೆ ಇದೆ. ಇದರ ಮೊತ್ತವೇ 600 ಕೋಟಿಯಷ್ಟಾಗಲಿದೆ ಎಂದು ಅಂದಾಜಿಸಿದೆ.

ಬೆಂಗಳೂರು ಕೇಂದ್ರ ಪಾಲಿಕೆಗೆ 150 ಕೋಟಿ, ಪೂರ್ವ ಪಾಲಿಕೆಗೆ 50 ಕೋಟಿ, ಪಶ್ಚಿಮ ನಗರಪಾಲಿಕೆಗೆ 200 ಕೋಟಿ ರು., ಉತ್ತರಕ್ಕೆ 100 ಕೋಟಿ, ದಕ್ಷಿಣಕ್ಕೆ 100 ಕೋಟಿ ರು ಸೇರಿ ಒಟ್ಟಾರೆ 600 ಕೋಟಿ ರು ಅನುದಾನವನ್ನು ಒದಗಿಸಬೇಕು ಎಂದು ಕೋರಿರುವುದು ಪತ್ರದಿಂದ ತಿಳಿದು ಬಂದಿದೆ.

‘ನಗರ ಪಾಲಿಕೆಗಳ ಹಿತದದೃಷ್ಟಿಯಿಂದ ಆಡಳಿತಾತ್ಮಕ ಮತ್ತು ನಿರ್ವಹಣೆ ವೆಚ್ಚಗಳಿಗೆ ಹೆಚ್ಚುವರಿಯಾಗಿ ಒಂದು ಬಾರಿಗೆ ಸರ್ಕಾರದ ವತಿಯಿಂದ ಅನುದಾನದ ರೂಪದಲ್ಲಿ ಹಣಕಾಸಿನ ನೆರವು ಒದಗಿಸಬೇಕು. ಈ ಹೆಚ್ಚುವರಿ ಅನುದಾನವನ್ನು ಒಂದು ಬಾರಿಗೆ ಒದಗಿಸಬೇಕು,’ ಎಂದು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.









