ಬೆಂಗಳೂರು; ರಾಜ್ಯದ 7 ಕೋಟಿ ಜನರಲ್ಲಿ ಸುಮಾರು 5 ಲಕ್ಷ ಸರ್ಕಾರಿ ಖಾಯಂ ನೌಕರರಿದ್ದಾರೆ. ಹೀಗಾಗಿ ಅಂದಾಜು ಶೇ. 1.5ರಷ್ಟು ಅನುದಾನ ಅವಶ್ಯಕತೆಯಿದೆ. ಅಲ್ಲದೇ ಖಾಯಂ ನೌಕರರ ನೇಮಕ ಆಗುವವರೆಗೂ ಹೊರಗುತ್ತಿಗೆ ಕಾರ್ಮಿಕರನ್ನು ಮುಂದುವರೆಸುವುದು ಅನಿವಾರ್ಯ ಎಂದು ಆರ್ಥಿಕ ಇಲಾಖೆ ನೀಡಿದ್ದ ಅಭಿಪ್ರಾಯವು ಬಹಿರಂಗವಾಗಿದೆ.
ಅಲ್ಲದೇ ಸದ್ಯ ಪರಿಸ್ಥಿತಿಯಲ್ಲಿ ಎಲ್ಲಾ ಖಾಲಿ ಹುದ್ದೆಗಳಿಗೂ ಖಾಯಂ ನೌಕರರನ್ನು ನೇಮಕ ಮಾಡುವುದು ಸಾಧ್ಯವಿಲ್ಲವೆಂದೂ ಆರ್ಥಿಕ ಇಲಾಖೆಯು ಹೇಳಿತ್ತು.
ರಾಜ್ಯಾದ್ಯಂತ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದೋದ್ದೇಶ ಸಹಕಾರ ಸಂಘ ರಚನೆಗೆ ಸಂಬಂಧಿಸಿದಂತೆ ಸಚಿವ ಸಂಪುಟ ಉಪ ಸಮಿತಿಯು 2025ರ ಅಕ್ಟೋಬರ್ 6ರಂದು ನಡೆಸಿದ್ದ ಸಭೆಯಲ್ಲಿ ಆರ್ಥಿಕ ಇಲಾಖೆಯು ನೀಡಿದ್ದ ಅಭಿಪ್ರಾಯದಲ್ಲಿ ಸದ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆಯೂ ಅವಲೋಕಿಸಲಾಗಿದೆ.
ಸರ್ಕಾರಿ ಕಚೇರಿಗಳ ಆಡಳಿತಕ್ಕೆ ತೊಂದರೆಯಾಗದಂತೆ ಸೂಕ್ತ ಕಾನೂನುಗಳನ್ನು ರಚಿಸಬೇಕು. ಮಾರ್ಚ್ 2028ರೊಳಗಾಗಿ ಹೊರಗುತ್ತಿಗೆ ಸೇವೆಗಳನ್ನು ಖಾಸಗಿ, ಏಜೆನ್ಸಿಗಳ ಮೂಲಕ ಪಡೆದುಕೊಳ್ಳುವ ಪದ್ಧತಿಯನ್ನು ಸಂಪೂರ್ಣವಾಗಿ ಸಮಾಪ್ತಿಗೊಳಿಸಬೇಕು ಎಂದು ಸಭೆಯು ಶಿಫಾರಸ್ಸು ಮಾಡಿದೆ.
ಈ ಮಧ್ಯೆ ಕಾರ್ಮಿಕ ಇಲಾಖೆಯು ಸಹ ಸರ್ಕಾರದ ಎಲ್ಲಾ ಪ್ರಧಾನ ಕಾರ್ಯದರ್ಶಿಗಳಿಗೆ 2025ರ ಡಿಸೆಂಬರ್ 16ರಂದು ಪತ್ರ ಬರೆದಿದೆ.
‘ಸಹಕಾರ ಸಂಘದ ಮಾದರಿಯಲ್ಲಿ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದೋದ್ದೇಶ ಸಹಕಾರ ಸಂಘ (ನಿಯಮಿತ) ಸ್ಥಾಪಿಸಬೇಕಿದೆ. ಈ ಸಹಕಾರ ಸಂಘದ ಮೂಲಕ ಹೊರಗುತ್ತಿಗೆ ನೌಕರರ ಸೇವೆಯನ್ನು ಸರ್ಕಾರಿ ಸ್ವಾಮ್ಯದ ಕಚೇರಿ, ನಿಗಮ, ಮಂಡಳಿಗಳಿಗೆ ಒದಗಿಸುವ ಕುರಿತು ಸಲಹೆ, ಅಭಿಪ್ರಾಯವನ್ನು 15 ದಿನದೊಳಗೆ ಸಲ್ಲಿಸಬೇಕು. ಹದಿನೈದು ದಿನದೊಳಗಾಗಿ ಸಲಹೆ, ಅಭಿಪ್ರಾಯ ಸಲ್ಲಿಸದೇ ಇದ್ದಲ್ಲಿ ತಮ್ಮ ಸಹಮತಿ ಇದೆಯೆಂದು ಭಾವಿಸಲಾಗುತ್ತದೆ,’ ಎಂದು ಕಾರ್ಮಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸೀನ್ ಅವರು 2025ರ ಡಿಸೆಂಬರ್ 16ರಂದು ಪತ್ರ ಬರೆದಿದ್ದಾರೆ.
ಈ ಪತ್ರವು ‘ದಿ ಫೈಲ್’ಗೆ ಲಭ್ಯವಾಗಿದೆ.

ಸೊಸೈಟಿಯಿಂದ ಸರ್ಕಾರಕ್ಕೆ ಲಾಭ
ಹೊರಗುತ್ತಿಗೆ ನೌಕರರನ್ನು ನೇಮಕ ಮಾಡುವಾಗ ಏಜೆನ್ಸಿಗಳನ್ನು ಆಯ್ಕೆ ಮಾಡುವ ಸಂದರ್ಭಗಳಲ್ಲಿ ನಡೆಸಲಾಗುವ ಟೆಂಡರ್ ಪ್ರಕ್ರಿಯೆಗೆ ಆಡಳಿತಾತ್ಮಕ ವೆಚ್ಚವಾಗಲಿದೆ. ಅಲ್ಲದೇ ಇಲಾಖೆಗಳು ಖಾಸಗಿ ಹೊರಗುತ್ತಿಗೆ ಏಜೆನ್ಸಿಗಳಿಗೆ ಶೇ. 11.05ರಷ್ಟು ಸೇವಾ ಶುಲ್ಕ ಪಾವತಿಸುತ್ತಿದೆ. ಇದರಿಂದ ಸರ್ಕಾರಕ್ಕೆ ನಷ್ಟವಾಗಲಿದೆ. ಬೀದರ್ ಮಾದರಿಯ ಸಂಘವು ಕೇವಲ ಶೇ. 1ರಷ್ಟು ಸೇವಾ ಶುಲ್ಕ ಪಡೆಯಲಿದೆ. ಹೀಗಾಗಿ ಈ ಮಾದರಿಯು ಸರ್ಕಾರಕ್ಕೆ ಲಾಭವಾಗುತ್ತದೆ ಎಂದು ಪ್ರತಿಪಾದಿಸಿದೆ.
ಸಚಿವ ಸಂಪುಟ ಉಪ ಸಮಿತಿಯೂ ಸಹ ಇದನ್ನೇ ಪ್ರತಿಪಾದಿಸಿತ್ತು. 2025ರ ಅಕ್ಟೋಬರ್ 6ರಂದು ನಡೆದಿದ್ದ ಸಭೆಯಲ್ಲಿ ಈ ಕುರಿತು ವಿಸ್ತೃತವಾಗಿ ಚರ್ಚಿಸಿತ್ತು.

ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ಮತ್ತು ಅಧೀನದಲ್ಲಿ ಬರುವ ನಿಗಮ ಮಂಡಳಿಗಳು ಸೇರಿದಂತೆ ಒಟ್ಟು ಎರಡರಿಂದ ಮೂರು ಲಕ್ಷ ಹೊರಗುತ್ತಿಗೆ ನೌಕರರು ಇದ್ದಾರೆ. ವಿವಿಧ ವೃಂದದಲ್ಲಿ ಸುಮಾರು 5 ಲಕ್ಷ ಖಾಯಂ ಸರ್ಕಾರಿ ನೌಕರರ ಹುದ್ದೆಗಳಿವೆ. ಇದರಲ್ಲಿ ಸುಮಾರು 1.3 ಲಕ್ಷ ಹೊರಗುತ್ತಿಗೆ ಮತ್ತು ದಿನಗೂಲಿ ನೌಕರರು ಬೇರೆ ಬೇರೆ ಕಾಯ್ದೆಗಳು ಮತ್ತು ಯೋಜನೆಗಳಡಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ.
ಸರ್ಕಾರದ ವಿವಿಧ ಇಲಾಖೆ ಮತ್ತು ಅಧೀನದಲ್ಲಿರುವ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಖಾಯಂ ಸರ್ಕಾರಿ ನೌಕರರ ನೇಮಕಾತಿ ಹೊಂದುವವರೆಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎಂ ಟಿ ರೇಜು ಅವರು ಅಭಿಪ್ರಾಯಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.

ಅಲ್ಲದೇ ಪ್ರಸಕ್ತ ಸಾಲಿನ 2025-26ನೇ ಸಾಲಿನ ರೆವಿನ್ಯೂ ವೆಚ್ಚದಲ್ಲಿ ಸುಮಾರು ಶೇ.42ರಷ್ಟು ವೆಚ್ಚವನ್ನು ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿಗೆ ಬೇಕಾಗಿದೆ. ರಾಜ್ಯದಲ್ಲಿನ ಸುಮಾರು 7 ಕೋಟಿ ಜನರಲ್ಲಿ ಸುಮಾರು 5 ಲಕ್ಷ ಜನ ಸರ್ಕಾರಿ ಖಾಯಂ ನೌಕರರಿದ್ದಾರೆ. ಅಂದಾಜು ಶೇ. 1.5ರಷ್ಟು ಅನುದಾನದ ಅವಶ್ಯಕತೆ ಇದೆ.
‘ಹೀಗಾಗಿ ಒಟ್ಟಾರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಹೊರಗುತ್ತಿಗೆ ಹಾಗೂ ದಿನಗೂಲಿ ನೌಕರರನ್ನು ನೇಮಿಸಿಕೊಳ್ಳುವುದು ಹಾಗೂ ಖಾಯಂ ನೌಕರರ ನೇಮಕಾತಿ ಆಗುವವರೆಗೂ ಹೊರಗುತ್ತಿಗೆ ಕಾರ್ಮಿಕರನ್ನು ಮುಂದುವರೆಸುವುದು ಅನಿವಾರ್ಯವಾಗಿದೆ,’ ಎಂದು ರೇಜು ಅವರು ಅಭಿಪ್ರಾಯಿಸಿರುವುದು ಗೊತ್ತಾಗಿದೆ.
ಅಲ್ಲದೇ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಸರ್ಕಾರವು ಎಲ್ಲಾ ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕಾದರೇ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಾ ಖಾಲಿ ಹುದ್ದೆಗಳಿಗೂ ಖಾಯಂ ನೌಕರರನ್ನು ನೇಮಕ ಮಾಡುವುದು ಸಾಧ್ಯವಿಲ್ಲ. ಹೊರಗುತ್ತಿಗೆ ಏಜೆನ್ಸಿಗಿಂತ ಸೊಸೈಟಿ ಮೂಲಕ ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳುವುದು ಒಳ್ಳೇಯದು ಎಂದು ರೇಜು ಅವರು ಸಂಪುಟ ಉಪ ಸಮಿತಿಗೆ ತಿಳಿಸಿದ್ದರು.

ಹಾಗೆಯೇ ಆರ್ಥಿಕ ಇಲಾಖೆಯಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಪ್ರಸ್ತುತ ರಾಜ್ಯದಲ್ಲಿ ಒಟ್ಟು 80,006 ಜನ ಹೊರಗುತ್ತಿಗೆ ನೌಕರರು ಹಾಗೂ 5,512 ದಿನಗೂಲಿ ನೌಕರರು (ಸರ್ಕಾರದ ವಿವಿಧ ಇಲಾಖೆ, ನಿಗಮ ಮಂಡಳಿ ಹೊರತುಪಡಿಸಿ) ಒಟ್ಟು 85,518 ನೌಕರರು ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರದ ವಿವಿಧ ಇಲಾಖೆ ಹಾಗೂ ಅವುಗಳ ಅಧೀನದಲ್ಲಿ ಬರುವ ನಿಗಮ ಮಂಡಳಿಗಳು ಸಾಮಾನ್ಯವಾಗಿ ಡಿಇಒ, ವಾಹನ ಚಾಲಕರು ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳುತ್ತಿದೆ. ಅಲ್ಲದೇ ಹೊರಗುತ್ತಿಗೆ ನೌಕರರರಾಗಿ ಕೆಲಸ ಮಾಡುತ್ತಿರುವ ವಿವಿಧ ಕಾರ್ಮಿಕರ ವರ್ಗವಾರು ಸಂಖ್ಯೆ ಮತ್ತು ವಿವರಗಳು ಕಾರ್ಮಿಕ ಇಲಾಖೆಯಲ್ಲಿ ಲಭ್ಯವಿಲ್ಲ ಎಂದು ಕಾರ್ಮಿಕ ಇಲಾಖೆಯು ಸಭೆಯ ಗಮನಕ್ಕೆ ತಂದಿತ್ತು.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಏಜೆನ್ಸಿಗಳು ಮೀಸಲಾತಿಯನ್ನು ಪಾಲಿಸುತ್ತಿಲ್ಲ. ಮತ್ತು ಹೊರಗುತ್ತಿಗೆ ಏಜೆನ್ಸಿಗಳಿಗೆ ಪಾವತಿಸುತ್ತಿರುವ ಸೇವಾ ಶುಲ್ಕದಲ್ಲಿ ಸಮಾನತೆ ಇಲ್ಲವಾಗಿದೆ. ಹೊರಗುತ್ತಿಗೆ ನೌಕರರ ಸೇವೆಯನ್ನು ಹೊರಗುತ್ತಿಗೆ ಆಧಾರದಲ್ಲಿ ಒದಗಿಸುತ್ತಿರುವ ಏಜೆನ್ಸಿಗಳಿಂದ ತೊಂದರೆಯಾಗುತ್ತಿದೆ. ನಿಗದಿತ ಕನಿಷ್ಟ ವೇತನವನ್ನೂ ನೀಡುತ್ತಿಲ್ಲ.

ಸುಪ್ರೀಂ ಕೋರ್ಟ್ ತೀರ್ಪು ಏನಿದೆ?
ವಿಕ್ರಮ ಮೆಹ್ತಾ ಪ್ರಕರಣದಲ್ಲಿ ಸರ್ಕಾರದ ವಿವಿಧ ಇಲಾಖೆ, ನಿಗಮ ಮಂಡಳಿಗಳಲ್ಲಿ ಕೆಲಸುವ ಖಾಯಂ ಸ್ವರೂಪದ ಕೆಲಸವಾಗಿದೆ. ಅಲ್ಲಿ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡುವುದು ಸರಿಯಲ್ಲ. ಇಂತಹ ಕೆಲಸಗಳಿಗೆ ಖಾಯಂ ನೌಕರನ್ನು ಮಾತ್ರ ನೇಮಿಸಿಕೊಳ್ಳಬೇಕು. ಹಾಗೂ ಅವರ ಸೇವೆಯನ್ನು ಖಾಯಂಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಅದೇ ರೀತಿ ಖಾಯಂ ಹುದ್ದೆಗಳಿಗೆ ಬದಲಾಗಿ ಹೊರಗುತ್ತಿಗೆ ನೌಕರರನ್ನು ನೇಮಿಸುವುದು ಸಂವಿಧಾನದ ವಿಧಿ 14 ಮತ್ತು 15ರ ಆಶಯಗಳನ್ನು ಉಲ್ಲಂಘಿಸಿದಂತಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರು ಮೀಸಲಾತಿಯಿಂದ ವಂಚನೆಗೊಳಗಾಗುತ್ತಾರೆ. ಹಾಗೂ ಅರ್ಹ ನೌಕರರಿಗೆ ಇದರಿಂದ ಅನ್ಯಾಯವಾಗಲಿದೆ. ಇದನ್ನು ಸುಪ್ರೀಂ ಕೋರ್ಟ್ ಕೂಡ ವಿರೋಧಿಸಿದೆ.
ಸರ್ಕಾರದ ವಿವಿಧ ಇಲಾಖೆ ಮತ್ತು ಅವುಗಳ ಅಧೀನದಲ್ಲಿ ಕೆಲಸ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಕಾರ್ಮಿಕ ಇಲಾಖೆಯು ನಿಗದಿಪಡಿಸಿರುವ ಕನಿಷ್ಟ ವೇತನ ಪಾವತಿಸಬೇಕು. ಕನಿಷ್ಟ ವೇತನಕ್ಕಿಂತ ಹೆಚ್ಚು ವೇತನ ಪಾವತಿಸಬಾರದು ಎಂದು ಅರ್ಥಿಕ ಇಲಾಖೇಯೂಖ ಸುತ್ತೋಲೆ ಹೊರಡಿಸಿದೆ. ಹೀಅಗಿ ಅರ್ಹ ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ತೊಂದರೆಯಾಗಲಿದೆ ಎಂದು ಕಾರ್ಮಿಕ ಇಲಾಖೆ ಆಯುಕ್ತರೂ ಸಹ ತಿಳಿಸಿದ್ದರು.
ಸಚಿವ ಸಂಪುಟ ಉಪ ಸಮಿತಿಯ ತೀರ್ಮಾನವೇನು?
ಸಂವಿಧಾನದ ಅನುಚ್ಛೇಧ 14, 15 ಮತ್ತು 309ರ ಆಶಯಗಳು ಉಲ್ಲಂಘನೆಯಾಗದಂತೆ ಮುಂಜಾಗರೂಕತೆ ವಹಿಸಬೇಕು. ಪ್ರಸ್ತುತ ಸ್ಥಾಪಿತವಿರುವ ಕಾನೂನುಗಳ ಮೂಲಕ ಸರ್ಕಾರದ ವಿವಿಧ ಇಲಾಖೆದಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಸಂವಿಧಾನ ಹಾಗೂ ಕಾನೂನು ಉಲ್ಲಂಘನೆಯ ಎಲ್ಲಾ ಗಂಭೀರತೆಯನ್ನು ತೊರೆದು ವಿವಿಧ ರೀತಿಯಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಅಂದರೆ ಹೊರಗುತ್ತಿಗೆ, ಒಳಗುತ್ತಿಗೆ, ದಿನಗೂಲಿ ಹಾಘೂ ಇತರೆ ವ್ಯವಸ್ಥೆಗಳಿಂದ ಭರ್ತಿ ಮಾಡಲಾಗುತ್ತಿದೆ. ಈ ರೀತಿ ರಾಜ್ಯದಲ್ಲಿ 3 ಲಕ್ಷಕ್ಕಕ್ಕೂ ಅಧಿಕ ಖಾಲಿ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಏಜೆನ್ಸಿಗಳ ಮೂಲಕ ಭರ್ತಿ ಮಾಡಲಾಘುತ್ತಿದೆ. ಇದರಿಂದ ಪ್ರತಿಭಾನ್ವಿತ ಅಭ್ಯರ್ಥಿಗಳನ್ನು ನೇಮಿಸದಿರುವುದು ಹಾಗೂ ಸಾಂವಿಧಾನಿಕ, ರಾಜ್ಯ ಕಾನೂನುಗಳ ಮೂಲಕ ಇರುವ ಮೀಸಲಾತಿಗಳನ್ನು ಉಲ್ಲಂಘಿಸುತ್ತಿದೆ. ಹೀಗಾಗಿ ಈ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಸಂಪುಟ ಉಪ ಸಮಿತಿಯು ತೀರ್ಮಾನಿಸಿತ್ತು.
ಈಗಾಗಲೇ ಬಹುದೊಡ್ಡ ಸಂಖ್ಯೆಯಲ್ಲಿ ಹೊರಗುತ್ತಿಗೆ ಮೂಲಕ ಭರ್ತಿ ಮಾಡಿರುವ ಕೆಲಸಗಾರರು ಇದ್ದಾರೆ. ತಕ್ಷಣದಲ್ಲಿ ಮೂಲ ನೀತಿಗೆ ಧಕ್ಕೆಯಾಗದಂತೆ ತಾತ್ಪೂರ್ತಿಕವಾಗಿ ಹೊರಗುತ್ತಿಗೆ ನೌಕರರಿಗೆ ಆಗುತ್ತಿರುವ ಶೋಷಣೆಯನ್ನು ಕಡಿಮೆಗೊಳಿಸಬೇಕು. ಈ ನಿಟ್ಟಿನಲ್ಲಿ ಬೀದರ್ ಜಿಲ್ಲಾ ಹೊರಗುತ್ತಿಗೆ ನೌಕರರ ಸಹಕಾರ ಸಂಘದ ಮಾದರಿಯಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಂಘ ಸ್ಥಾಪಿಸಬೇಕು ಎಂದು ತೀರ್ಮಾನಿಸಿತ್ತು.

ಹೊರಗುತ್ತಿಗೆ ನೌಕರರ ಸೇವೆಯನ್ನು ಖಾಸಗಿ, ಎನ್‌ಜಿಒ ಗಳಿಂದ ಪಡೆಯುತ್ತಿರುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲು ನಿರ್ಣಯ ಮಾಡುವುದು ಅನಿರ್ವಾಯವಾಗಿದೆ. ಈ ಸಂಬಂಧ ಸಂವಿಧಾನ, ಕಾನೂನುಗಳ ಅಡಿಯಲ್ಲಿರುವ ಅವಕಾಶಗಳು ಹಾಗೂ ಉಚ್ಛ ನ್ಯಾಯಾಲಯ, ಸರ್ವೋಚ್ಛ ನ್ಯಾಯಾಲಯಗಳ ತೀರ್ಪುಗಳ ಹಿನ್ನೆಲೆಯಲ್ಲಿ ಹೊರಗುತ್ತಿಗೆ ಪದ್ಧತಿಯನ್ನು ಸಂಪೂರ್ಣವಾಗಿ ನಿಲುಗಡೆಗೊಳಿಸಲು ಕ್ರಮವಹಿಸಬೇಕು ಎಂದು ಸೂಚಿಸಿರುವುದು ಗೊತ್ತಾಗಿದೆ.









