ಗಾಂಧಿ ಪ್ರವಾಸ ಯೋಜನೆಗೆ 25 ಲಕ್ಷ ಅನುದಾನ ಮಂಜೂರು; ಚರಕ ಸಂಸ್ಥೆಗೆ 5 ತಿಂಗಳಾದರೂ ಬಿಡಿಗಾಸಿಲ್ಲ

ಬೆಂಗಳೂರು; ಗಾಂಧಿ ಪ್ರವಾಸ ಅರ್ಥಾತ್‌ ಗಾಂಧೀಯನ್ ಟೂರಿಸಂ ಯೋಜನೆ ಅಡಿಯಲ್ಲಿ ಸಾಗರದ ಹೆಗ್ಗೋಡಿನಲ್ಲಿರುವ ಚರಕ ಮಹಿಳಾ ವಿವಿದೋದ್ದೇಶ ಕೈಗಾರಿಕೆ ಸಹಕಾರ ಸಂಘಕ್ಕೆ ಮಂಜೂರಾಗಿರುವ 25 ಲಕ್ಷ ರುಪಾಯಿ ಅನುದಾನವು 5 ತಿಂಗಳಾದರೂ ನಯಾ ಪೈಸೆಯನ್ನೂ ಬಿಡುಗಡೆ ಮಾಡಿಲ್ಲ.

 

ಈ ಸಂಬಂಧ ಸಂಘವು ಸರ್ಕಾರಕ್ಕೆ ಪತ್ರಗಳನ್ನು ಬರೆದಿತ್ತು. ಆದರೂ ಈ ಪತ್ರಗಳನ್ನು ಪ್ರವಾಸೋದ್ಯಮ ಇಲಾಖೆಯು ಕಣ್ಣೆತ್ತಿಯೂ ನೋಡಿಲ್ಲ. ಬದಲಿಗೆ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಕಡತವನ್ನು ಮುಂದಕ್ಕೆ ಹಾಕುವುದರಲ್ಲಿಯೇ ಕಾಲಹರಣ ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದ ಕಡತವು ಇಲಾಖೆಯ ಜಂಟಿ ನಿರ್ದೇಶಕರ ಬಳಿಯೇ ಕೊಳೆಯುತ್ತಿದೆ ಎಂದು ಗೊತ್ತಾಗಿದೆ.

 

ಈ ಯೋಜನೆಯಲ್ಲಿ ಆರ್ಥಿಕ ಸಹಭಾಗಿತ್ವ ಹೊಂದಲು 5 ತಿಂಗಳ ಹಿಂದೆಯೇ ಮಂಜೂರಾತಿ ನೀಡಿದೆಯಾದರೂ ಇಲಾಖೆ ಹಂತದಲ್ಲಿ ಈ ಕಡತಕ್ಕೆ ವೇಗ ದೊರೆತಿಲ್ಲ. ಸಹಭಾಗಿತ್ವದ ಅನುದಾನ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೂ ಈ ಕಡತವು ಸಲ್ಲಿಕೆಯಾಗಿಲ್ಲ.

 

ಏನಿದು ಯೋಜನೆ?

 

ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ದಿ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಜನರಿಗೆ ಪ್ರವಾಸೋದ್ಯಮ ಸಂಬಂಧಿಸಿದಂತೆ ತರಬೇತಿ ನೀಡಲು ಗಾಂಧಿ ಪ್ರವಾಸ ಹೆಸರಿನಡಿ ಚರಕ ಮಹಿಳಾ ವಿವಿದೋದ್ದೇಶ ಕೈಗಾರಿಕೆ ಸಹಕಾರ ಸಂಘವು ಉದ್ದೇಶಿಸಿತ್ತು. ಈ ಯೋಜನೆ ಕುರಿತು 2025ರ ಏಪ್ರಿಲ್‌ 16ರಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಈ ಪ್ರಸ್ತಾವಕ್ಕೆ ಸಚಿವ ಹೆಚ್‌ ಕೆ ಪಾಟೀಲ್‌ ಅವರೂ ಸಹ ಸಹಮತಿಸಿದ್ದರು.

 

ಗಾಂಧಿ ಪ್ರವಾಸ ಅರ್ಥಾತ್‌ ಗಾಂಧಿಯನ್ ಟೂರಿಸಂ ಯೋಜನೆಯನ್ನು ಜಾರಿಗೊಳಿಸಲು ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಡಿಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ಸಿಗಬೇಕಿತ್ತು. 2025-26ನೇ ಸಾಲಿಗಾಗಿ ಮೊದಲ ಘಟಕದಲ್ಲಿ 50 ಲಕ್ಷ ರು ವೆಚ್ಚದ ಪೈಕಿ ಸರ್ಕಾರವು 25 ಲಕ್ಷ ಮತ್ತು ಸಂಸ್ಥೆಯು 25 ಲಕ್ಷ ರು ಪ್ರಾಯೋಜಕತ್ವ ಮಾಡಲಿತ್ತು.

 

ಗಾಂಧಿ ಪ್ರವಾಸ ಅರ್ಥಾತ್‌ ಗಾಂಧೀಯನ್ ಟೂರಿಸಂ ಯೋಜನೆ ಅಡಿಯಲ್ಲಿ ಸಾಗರದ ಹೆಗ್ಗೋಡಿನಲ್ಲಿರುವ ಚರಕ ಮಹಿಳಾ ವಿವಿದೋದ್ದೇಶ ಕೈಗಾರಿಕೆ ಸಹಕಾರ ಸಂಘಕ್ಕೆ 25 ಲಕ್ಷ ರು ಅನುದಾನ ಬಿಡುಗಡೆ ಮಾಡಲು 2025ರ ಜೂನ್‌ 18ರಂದೇ ಮಂಜೂರಾತಿ ಆದೇಶ ಹೊರಡಿಸಿತ್ತು.

 

 

 

ಇನ್ನೂ ದೊರೆಯದ ಆರ್ಥಿಕ ಸಹಭಾಗಿತ್ವ

 

ಚರಕ ಮಹಿಳಾ ವಿವಿದೋದ್ದೇಶ ಕೈಗಾರಿಕೆ ಸಹಕಾರ ಸಂಘವು ಗಾಂಧೀಜಿಯವರು ಅನುಸರಿಸಿದ ಉತ್ಪಾದನಾ ವಿಧಾನಗಳೆಲ್ಲವನ್ನೂ ಉತ್ಪಾದಿಸಲ್ಪಡುವ ದೇಶದಲ್ಲಿಯೇ ವಿಖ್ಯಾತವಾಗಿರುವ ಒಂದು ಕೈ ಮಗ್ಗ ವಸ್ತ-ಉತ್ಪಾದನಾ ಸಂಸ್ಥೆಯಾಗಿದೆ ಎಂದು ಸರ್ಕಾರವೇ ತನ್ನ ಆದೇಶದಲ್ಲಿ ಹೇಳಿದೆ. ಪ್ರಚಾರ ಮತ್ತು ಉತ್ತೇಜನಾ ಚಟುವಟಿಕೆಗಳಿಗಾಗಿ ಇಲಾಖೆಯು 19.28 ಕೊಟಿ ರು ಒದಗಿಸಿತ್ತು.

 

ಈ ಆಯವ್ಯಯದಲ್ಲಿ ಒದಗಿಸಿದ್ದ ಅನುದಾನದಲ್ಲಿ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಜನರಿಗೆ ಪ್ರವಾಸೋದ್ಯಮ ಸಂಬಂಧಿ ತರಬೇತಿ ನೀಡುವ ಮೂಲಕ ಗಾಂಧಿ ಪ್ರವಾಸ ಸುಸ್ಥಿರ ಪ್ರವಾಸೋದ್ಯಮ ಯೋಜನೆಗೆ 25 ಲಕ್ಷ ರು.ಗಳ ಆರ್ಥಿಕ ಸಹಭಾಗಿತ್ವ ನೀಡಬಹುದು ಎಂದು ಇಲಾಖೆಯು ಅಭಿಪ್ರಾಯಿಸಿತ್ತು.

 

 

ಅಂದಾಜು ವೆಚ್ಚದ ವಿವರ

 

ಈ ಯೋಜನೆಯಲ್ಲಿ ಭಾಗಿದಾರರಾಗುವ ಗ್ರಾಮೀಣ ಭಾಗದ ಜನರಿಗೆ ಪ್ರವಾಸೋದ್ಯಮ ಸಂಬಂಧಿ ತರಬೇತಿ ನೀಡಲು 6,00,000 ರು, ಪ್ರಚಾರ, ಪ್ರವಾಸಿಗರ ಬುಕ್ಕಿಂಗ್ ವ್ಯವಸ್ಥೆ, ವೆಬ್‌ಸೈಟ್‌ ಸ್ಥಾಪನೆ ಇತರೆ ವೆಚ್ಚಗಳಿಗಾಗಿ 6,00,000 ರು, ಊಟೋಪಚಾರ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು 4,00,000 ರು, ಅತಿಥಿ ಗೃಹ ವ್ಯವಸ್ಥೆ ಮೇಲ್ದರ್ಜೆಗೇರಿಸಲು (ಪೀಠೋಪಕರಣ ಖರೀದಿ ಸೇರಿದಂತೆ) 4,00,000 ರು, ವರ್ಕಿಂಗ್‌ ಕ್ಯಾಪಿಟಲ್‌ 3,00,000 ರು, ಒಂದು ವರ್ಷದ ಯೋಜನಾ ಆಡಳಿತಕ್ಕೆ 2,00,000 ರು ಸೇರಿ ಒಟ್ಟಾರೆ 25,00,000 ಲಕ್ಷ ರು ವೆಚ್ಚವಾಗಲಿದೆ ಎಂದು ಪ್ರಸ್ತಾವದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಈ ಮಧ್ಯೆ ಚರಕ ಮಹಿಳಾ ವಿವಿದೋದ್ದೇಶ ಕೈಗಾರಿಕೆ ಸಂಘವು ಪ್ರವಾಸೋದ್ಯಮ ಇಲಾಖೆಯ ಶಿವಮೊಗ್ಗ ಜಿಲ್ಲೆಯ ಸಹಾಯಕ ನಿರ್ದೇಶಕರಿಗೂ 2025ರ ಆಗಸ್ಟ್‌ನಲ್ಲಿ ಪತ್ರ ಬರೆದಿತ್ತು. ಈ ಪತ್ರ ಬರೆದು 3 ತಿಂಗಳಾದರೂ ಸಹ ಇಲಾಖೆಯು ಮಂಜೂರಾಗಿರುವ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಬದಲಿಗೆ ಸರ್ಕಾರದ ಕಡೆಗೆ ಕೈ ತೋರಿಸುತ್ತಿದೆ.

 

 

ಚರಕದಲ್ಲಿ ಏನೇನಿವೆ?

 

ಬೆಂಗಳೂರು, ಮೈಸೂರು, ಧಾರವಾಡ, ಮಂಗಳೂರು, ಶಿವಮೊಗ್ಗ, ಸಿದ್ದಾಪುರ ಸಾಗರ, ಹೆಗ್ಗೋಡು ಸೇರಿದಂತೆ ರಾಜ್ಯಾದ್ಯಂತ ದೇಸಿ ಅಂಗಡಿಗಳು ಸ್ಥಾಪನೆಯಾಗಿವೆ. ಈ ಸಂಸ್ಥೆಯ ಬ್ರಾಂಡ್‌ ಮೌಲ್ಯವು ಗಟ್ಟಿಗೊಂಡಿದೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ವಿನ್ಯಾಸಕಾರರು, ತಂತ್ರಜ್ಞರು, ಲೇಖಕರು, ಕಲಾವಿದರು ಜತೆಗಿನ ಸಂಪರ್ಕ, ಸಹಯೋಗಗಳು ಲಭ್ಯವಿವೆ. ಚರಕ ಸಂಸ್ಥೆಯು ಲಾಭದಾಯಕವಾಗಿ ನಡೆದಿದೆ. ಹಾಗಾಗಿ ಗಾಂಧಿ ಪ್ರವಾಸ ಯೋಜನೆಯಡಿಯಲ್ಲಿ ಶೇ.50ರಷ್ಟು ಸಹಭಾಗಿತ್ವ ನೀಡಲು ಸಂಸ್ಥೆಯು ಸಮರ್ಥವಾಗಿದೆ ಎಂದು ಆದೇಶದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ನೇಯ್ಗೆ ಪ್ರಕ್ರಿಯೆ, ನೈಸರ್ಗಿಕ ಬಣ್ಣಗಾರಿಕೆ, ಪಾರಂಪರಿಕ ಮರದಚ್ಚು ಮುದ್ರಣ, ಪಾರಂಪರಿಕ ಕೈ ಕಸೂತಿ, ವಸ್ತ್ರ ವಿನ್ಯಾಸ ವಿಭಾಗ, ಸುಸ್ಥಿರ ಕೃಷಿ ಪ್ರಾತ್ಯಕ್ಷಿಕೆ, ನೀರಿನ ಶುದ್ಧೀಕರಣ, ಮರು ಬಳಕೆ ವ್ಯವಸ್ಥೆ, ಸೋಲಾರ್ ವ್ಯವಸ್ಥೆ, ಪಾರಂಪರಿಕ ಸಂಸ್ಕೃತಿ ಹಾಗೂ ಕಲೆಗಳ ಪ್ರಾತ್ಯಕ್ಷಿಕೆ, ಅರಣ್ಯ ದರ್ಶನ, ಮಲೆನಾಡಿನ ತೋಟಗಳ ದರ್ಶನ, ಶರಾವತಿ ಹಿನ್ನೀರಿನ ದರ್ಶನ , ಜೋಗ, ಕೆಳದಿ,ಇಕ್ಕೇರಿ, ಸಿಗಂಧೂರು ಇತ್ಯಾದಿ ಸ್ಥಳಗಳ ದರ್ಶನ, ಹೆಗ್ಗೋಡಿನ ನೀನಾಸಂ ರಂಗ ಶಿಕ್ಷಣ ಶಾಲೆ, ಶಿವರಾಮ ಕಾರಂತ ರಂಗಮಂದಿರ, ಖರೀದಿ ವ್ಯವಸ್ಥೆ, ಕೈ ಮಗ್ಗ ಉಡುಪು, ವಸ್ತ್ರ, ಗ್ರಾಮೀಣ ಉತ್ಪನ್ನಗಳು, ಕಲಾ ಗ್ಯಾಲರಿ ವ್ಯವಸ್ಥೆ, ತರಬೇತಿ ಕಾರ್ಯಾಗಾರಗಳು ಲಭ್ಯವಿವೆ ಎಂದು ಆದೇಶದಲ್ಲಿ ವಿವರಿಸಿತ್ತು.

 

ಈ ಹಿಂದೆಯೂ ಸಹ ಸರ್ಕಾರವು ಕುರಕುಶಲ ಉದ್ಯಮವನ್ನು ಉತ್ತೇಜಿಸಲು ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘಕ್ಕೆ 33 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿತ್ತು. ಬ್ಯಾಂಕಿಗೂ ಹಣ ಜಮೆಯಾಗಿತ್ತು. ಆದರೆ ನಿಗದಿತ ಅವಧಿಯೊಳಗೆ ಬಿಡುಗಡೆ ಮಾಡಿರಲಿಲ್ಲ. ಹೀಗಾಗಿ ಅನುದಾನವನ್ನೇ ತಿರಸ್ಕರಿಸಿತ್ತು. ತಾವೇ ತಯಾರಿಸಿದ್ದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವೇದಿಕೆಯನ್ನೂ ಸಿದ್ಧಪಡಿಸಿದ್ದನ್ನು ಸ್ಮರಿಸಬಹುದು.

 

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟಾರೆ 10 ಮಹಿಳಾ ಕೈ ಮಗ್ಗ ನೇಕಾರರ ಸಹಕಾರ ಸಂಘಗಳಿವೆ. ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ಬಾಗಲಕೋಟೆ, ಶಿಕಾರಿಪುರದಲ್ಲಿ ಮಹಿಳಾ ಕೈ ಮಗ್ಗ ನೇಕಾರರ ಸಹಕಾರ ಸಂಘಗಳಿವೆ. ಮಹಿಳೆಯರಿಂದಲೇ ನಡೆಸಲ್ಪಡುವ ಕೈ ಮಗ್ಗ ಸಹಕಾರ ಸಂಘಗಳಿಗೆ ಕಳೆದ 5 ವರ್ಷಗಳಿಂದಲೂ ಅನುದಾನ ಬಿಡುಗಡೆ ಮಾಡುತ್ತಿವೆ.

 

ಚರಕ ಮಹಿಳಾ ವಿವಿದೋದ್ದೇಶ ಕೈಗಾರಿಕೆ ಸಹಕಾರ ಸಂಘಕ್ಕೆ 2022-23ನೇ ಸಾಲಿನಲ್ಲಿ ರಾಜ್ಯ ವಲಯ ಮತ್ತು ಜಿಲ್ಲಾ ವಲಯದಡಿ ಸಹಾಯ ಧನ ನೀಡಲಾಗಿತ್ತು. ಮಿತ ವ್ಯಯ ಯೋಜನೆಯಡಿಯಲ್ಲಿ 1,43,599 ರು, ಇದೇ ಯೋಜನೆಯಡಿ ಬಡ್ಡಿ ಮೊತ್ತ 5,64,184 ರು, ಕಚ್ಚಾ ಮಾಲು ಖರೀದಿ ಮಾಡಲು 1,20,537 ರು ಸಹಾಯ ಧನ ನೀಡಲಾಗಿತ್ತು.

Your generous support will help us remain independent and work without fear.

Latest News

Related Posts