ಬೆಂಗಳೂರು; ಜನಾಂಗೀಯ ನಿಂದನೆ, ಭಾಷೆ, ಜನಸ್ಥಳ, ಜಾತಿ, ಧರ್ಮ ಆಧರಿಸಿ ದ್ವೇಷದ ಅಪರಾಧ ಮತ್ತು ದ್ವೇಷ ಭಾಷಣ ಮಾಡುವುದನ್ನು ತಡೆಗಟ್ಟುವುದು ಮತ್ತು ಸಾಮಾಜಿಕ ಬಹಿಷ್ಕಾರ ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿ (ನಿಷೇಧ) ಮಸೂದೆ ಸೇರಿದಂತೆ ಒಟ್ಟು 21 ವಿಧೇಯಕಗಳನ್ನು ಮಂಡಿಸಲು ರಾಜ್ಯ ಕಾಂಗ್ರೆಸ್ ಸರ್ಕಾರವು ಸಿದ್ಧತೆ ನಡೆಸಿದೆ.
ಬೆಳಗಾವಿಯಲ್ಲಿ ಇದೇ ಡಿಸೆಂಬರ್ 8ರಿಂದ ನಡೆಯಲಿರುವ ಅಧಿವೇಶನದಲ್ಲಿ ಸಾಮಾಜಿಕ ಪರಿಣಾಮಗಳನ್ನು ಬೀರುವ ವಿಧೇಯಕಗಳನ್ನು ಮಂಡಿಸಲಿದೆ. ಈ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಅವರು 2025ರ ನವೆಂಬರ್ 29ರಂದೇ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಟಿಪ್ಪಣಿ ಹಾಕಿದ್ದರು.
ಈ ಟಿಪ್ಪಣಿಯಲ್ಲಿನ ಸೂಚನೆ ಪ್ರಕಾರ 2025ರ ಡಿಸೆಂಬರ್ 2ನೇ ತಾರೀಖಿನೊಳಗೆ ಸಚಿವ ಸಂಪುಟ ಶಾಖೆಗೆ ವಿಧೇಯಕಗಳ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರು ಒಳಾಡಳಿತ, ಸಿಬ್ಬಂದಿ ಆಡಳಿತ ಸುಧಾರಣೆ, ಕಂದಾಯ, ನಗರಾಭಿವೃದ್ದಿ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಪಶು ಸಂಗೋಪನೆ ಮೀನುಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ 2025ರ ಡಿಸೆಂಬರ್ 1ರಂದು ಸೂಚಿಸಿರುವುದು ಗೊತ್ತಾಗಿದೆ.

ಸಚಿವ ಹೆಚ್ ಕೆ ಪಾಟೀಲ್ ಮತ್ತು ಡಾ ಶಾಲಿನಿ ರಜನೀಶ್ ಅವರು ಹೊರಡಿಸಿರುವ ಟಿಪ್ಪಣಿಯ ಪ್ರತಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಮುಖ್ಯಮಂತ್ರಿ ಗದ್ದುಗೆ ಸುತ್ತ ಬಿರುಸಿನ ರಾಜಕಾರಣ ನಡೆಯುತ್ತಿರುವ ಮಧ್ಯೆಯೇ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಮಂಡಿಸುತ್ತಿರುವ ಮಸೂದೆಗಳು ಚರ್ಚೆಗೆ ಗ್ರಾಸವಾಗಲಿದೆ.
ಮಂಡನೆಯಾಗಲಿರುವ ವಿಧೇಯಕಗಳ ಪಟ್ಟಿ
ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ (ತಿದ್ದುಪಡಿ )ವಿಧೇಯಕ 2025, ಬಯಲು ಸೀಮೆ ಪ್ರಾಧಿಕಾರ (ತಿದ್ದುಪಡಿ) 2025, ಕರ್ನಾಟಕ ಕಟ್ಟಡ ಉಲ್ಲಂಘನೆ ನಿಯಂತ್ರಣ ವಿಧೆಯಕ 2025, ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ನಿಯಂತ್ರಣ) ಮಸೂದೆ 2025, ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರ ಪ್ರಾಧಿಕಾರ (ತಿದ್ದುಪಡಿ) 2025ರ ವಿಧೇಯಕ, ಚಂದ್ರಗುತ್ತಿ ಶ್ರೀ ರೇಣುಕಾಂಬ ಕ್ಷೇತ್ರ ಅಭಿವೃದ್ದಿ (ತಿದ್ದುಪಡಿ) ವಿಧೇಯಕ, ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ (ತಿದ್ದುಪಡಿ) 2025, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ದತ್ತಿ (ತಿದ್ದುಪಡಿ) ವಿಧೇಯಕ, ಕರ್ನಾಟಕ ಗೃಹ ಕೆಲಸಗಾರರ (ಸಾಮಾಜಿಕ ಭದ್ರತೆ, ಕಲ್ಯಾಣ (ತಿದ್ದುಪಡಿ), ಸರ್ಕಾರಿ ಸಂಸ್ಥೆಗಳಲ್ಲಿ ಖಾಸಗಿ ಹೊರಗುತ್ತಿಗೆ ನಿಷೇಧ ವಿಧೆಯಕ, ಸನ್ನತಿ ಅಭಿವೃದ್ದಿ ಪ್ರಾಧಿಕಾರ ವಿಧೇಯಕವನ್ನು ಮಂಡಿಸಲಿದೆ.

ಕರ್ನಾಟಕ ದಿನಗೂಲಿ ನೌಕರರ ಕಲ್ಯಾಣ (ತಿದ್ದುಪಡಿ ) ವಿಧೇಯಕ, ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ ) 2025, ಕರ್ನಾಟಕ ಸಾಮಾಜಿಕ ಬಹಿಷ್ಕಾರ ನಿರ್ಬಂಧ ವಿಧೇಯಕ, ಕರ್ನಾಟಕ ಪರಿಶಿಷ್ಟ ಜಾತಿಗಳು ( ಉಪ ಪಂಗಡಗಳ ಮೀಸಲಾತಿ), ಕರ್ನಾಟಕ ನಗರಾಭಿವೃದ್ದಿ ಪ್ರಾಧಿಕಾರಗಳ (ತಿದ್ದುಪಡಿ) ವಿಧೇಯಕ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯದ (ಎರಡನೇ ತಿದ್ದುಪಡಿ), ವಿಧೇಯಕ, ಕರ್ನಾಟಕ ದ್ವೇಷ ಭಾಷಣ, ದ್ವೇಷ ಅಪರಾಧ ತಡೆಗಟ್ಟುವ ಮಸೂದೆ, ಕರ್ನಾಟಕದಲ್ಲಿ ಗೋಹತ್ಯೆ ತಡೆಗಟ್ಟುವಿಕೆ ಮತ್ತು ಗೋ ಸಂರಕ್ಷಣೆ (ತಿದ್ದುಪಡಿ) ವಿಧೇಯಕ, ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿ (ನಿಷೇಧ) ಮಸೂದೆಯೂ ಸೇರಿದೆ.

ದ್ವೇಷ ಭಾಷಣವು ದೇಶದ ಜಾತ್ಯತೀತ ಸಂರಚನೆಗೆ ಹಾನಿ ಮಾಡುವಷ್ಟು ಸಮರ್ಥವಾಗಿರುವ ಗಂಭೀರ ಅಪರಾಧ ಎಂದು ಸುಪ್ರಿಂ ಕೋರ್ಟ್ ಇತ್ತೀಚೆಗಷ್ಟೇ ವ್ಯಾಖ್ಯಾನಿಸಿತ್ತು. ಜತೆಗೆ ಯಾವುದೇ ದೂರು ದಾಖಲಾಗದೆ ಇದ್ದರೂ ದ್ವೇಷ ಭಾಷಣ ವಿರುದ್ಧ ಪ್ರಕರಣಗಳನ್ನು ದಾಖಲಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರವು ದ್ವೇಷ ಅಪರಾಧಗಳು ಮತ್ತು ದ್ವೇಷ ಭಾಷಣ ತಡೆಗಟ್ಟುವಿಕೆ ಮತ್ತು ಶಿಕ್ಷಿಸುವ ವಿಧೇಯಕವನ್ನು ರೂಪಿಸಿದೆ.
ಈ ಮಸೂದೆಯಲ್ಲೇನಿದೆ?

ದ್ವೇಷ ಅಪರಾಧಗಳು ಮತ್ತು ದ್ವೇಷ ಭಾಷಣ ತಡೆಗಟ್ಟುವಿಕೆ ಮತ್ತು ಶಿಕ್ಷಿಸುವ ವಿಧೇಯಕ 2025ದ ಪ್ರಕಾರ ಅಪರಾಧಗಳ ಪಟ್ಟಿಯನ್ನು ವಿಧೇಯಕದಲ್ಲಿ ನಮೂದಿಸಿದೆ. ಇದರ ಪ್ರಕಾರ ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮ ಸ್ಥಳ, ಭಾಷೆ, ರೆಸಿಡೆನ್ಸ್, ಅಂಗವೈಕಲ್ಯ, ಬುಡಕಟ್ಟುವಿನ ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡುವ ಅಥವಾ ದ್ವೇಷವನ್ನು ಉತ್ತೇಜಿಸುವ ಅಥವಾ ಪ್ರಚಾರ ಮಾಡುವ ವ್ಯಕ್ತಿ ಅಥವಾ ಗುಂಪಿಗೆ ಮೂರು ವರ್ಷಗಳ ಕಾಲ ಶಿಕ್ಷೆಗೆ ಗುರಿಪಡಿಸಲಿದೆ. ಅಥವಾ 5 ಸಾವಿರ ರುವರೆಗೆ ದಂಡ ಮತ್ತು ಈ ಎರಡನ್ನೂ ವಿಧಿಸಲಿದೆ.
ಅದೇ ರೀತಿ ಧಾರ್ಮಿಕ, ಜನಾಂಗೀಯ, ಜಾತಿ, ಸಮುದಾಯ, ಲಿಂಗ, ಹುಟ್ಟಿನ ಸ್ಥಳ, ಭಾಷೆ, ಅಂಗವೈಕಲ್ಯ, ಬುಡಕಟ್ಟಿನ ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡುವ ಅಥವಾ ದ್ವೇಷವನ್ನು ಉತ್ತೇಜಿಸುವಂತೆ ಉದ್ದೇಶಪೂರ್ವಕವಾಗಿ ಪ್ರಕಟಿಸುವವರು, ಪ್ರಚಾರ ಮಾಡುವವರು ಅಥವಾ ಸಮರ್ಥಿಸುವವರು, ವಕಾಲತ್ತು ವಹಿಸುವವರನ್ನೂ ಶಿಕ್ಷೆಗೆ ಗುರಿಪಡಿಸಲಿದೆ.

ಯಾವುದೇ ಭಾವನಾತ್ಮಕ, ಮಾನಸಿಕ, ದೈಹಿಕ, ಸಾಮಾಜಿಕ ಅಥವಾ ಆರ್ಥಿಕ ಹಾನಿಯೂ ಇದರಲ್ಲಿ ಒಳಗೊಂಡಿದೆ. ಇದರ ಮಾಹಿತಿಯು ದತ್ತಾಂಶ, ಸಂದೇಶ, ಪಠ್ಯ, ಚಿತ್ರಗಳು, ಧ್ವನಿ, ಧ್ವನಿ, ಸಂಕೇತಗಳು, ಕಂಪ್ಯೂಟರ್ ಪ್ರೋಗ್ರಾಂಗಳು ಸಾಫ್ಟ್‌ವೇರ್ ಮತ್ತು ಡೇಟಾಬೇಸ್‌ಗಳು ಅಥವಾ ಮೈಕ್ರೋಫಿಲ್ಮ್ ಅಥವಾ ಕಂಪ್ಯೂಟರ್ ರಚಿತ ಮೈಕ್ರೋಫಿಚೆಗಳನ್ನು ದ್ವೇಷ ಭಾಷಣ ಮತ್ತು ದ್ವೇಷ ಅಪರಾಧದ ವ್ಯಾಪ್ತಿಗೆ ಒಳಪಡಿಸಿದೆ.

ಅಲ್ಲದೇ ಯಾವುದೇ ನಿರ್ದಿಷ್ಟ ಎಲೆಕ್ಟ್ರಾನಿಕ್ ದಾಖಲೆಗಳಿಗೆ ಸಂಬಂಧಿಸಿದಂತೆ ಮಧ್ಯವರ್ತಿ ಎಂದರೆ, ಇನ್ನೊಬ್ಬ ವ್ಯಕ್ತಿಯ ಪರವಾಗಿ ಆ ದಾಖಲೆಯನ್ನು ಸ್ವೀಕರಿಸುವ, ಸಂಗ್ರಹಿಸುವ ಅಥವಾ ರವಾನಿಸುವ ಅಥವಾ ಆ ದಾಖಲೆಗೆ ಸಂಬಂಧಿಸಿದಂತೆ ಯಾವುದೇ ಸೇವೆಯನ್ನು ಒದಗಿಸುವ ಯಾವುದೇ ವ್ಯಕ್ತಿ ಮತ್ತು ಪ್ರಸಾರ ಮಾಡುವ ವಾಹಿನಿಗಳು (ಚಾನೆಲ್‌ಗಳು), ಟೆಲಿಕಾಂ ಸೇವಾ ಪೂರೈಕೆದಾರರು, ನೆಟ್‌ವರ್ಕ್ ಸೇವಾ ಪೂರೈಕೆದಾರರು, ಇಂಟರ್ನೆಟ್ ಸೇವಾ ಪೂರೈಕೆದಾರರು, ವೆಬ್‌ಹೋಸ್ಟಿಂಗ್ ಸೇವಾ ಪೂರೈಕೆದಾರರು, ಸಾಮಾಜಿಕ ಮಾಧ್ಯಮ ವೇದಿಕೆಗಳು, ಸರ್ಚ್ ಇಂಜಿನ್‌ಗಳು ಆನ್‌ಲೈನ್ ಪಾವತಿ ಸೈಟ್‌ಗಳು, ಆನ್‌ಲೈನ್-ಹರಾಜು ಸೈಟ್‌ಗಳು, ಆನ್‌ಲೈನ್-ಮಾರುಕಟ್ಟೆಗಳು ಮತ್ತು ಸೈಬರ್ ಕೆಫೆಗಳನ್ನೂ ಇದರ ವ್ಯಾಪ್ತಿಗೆ ಸೇರಿಸಿದೆ.

ಈ ಕುರಿತು ‘ದಿ ಫೈಲ್’ 2025ರ ಫೆಬ್ರವರಿ 6ರಂದೇ ವಿಧೇಯಕದ ಪ್ರತಿಯೊಂದಿಗೇ ವರದಿ ಪ್ರಕಟಿಸಿತ್ತು.
ದ್ವೇಷ ಭಾಷಣ, ದ್ವೇಷ ಅಪರಾಧ ತಡೆಗಟ್ಟಲು ವಿಧೇಯಕ ರೂಪಿಸಿದ ಸರ್ಕಾರ; ಅಧಿವೇಶನದಲ್ಲಿ ಮಂಡನೆಗೆ ಸಿದ್ಥತೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟೂರು ಸಿದ್ದರಾಮನಹುಂಡಿ ಗ್ರಾಮದ ಬಳಿ ಇರುವ ಶ್ರೀನಿವಾಸಪುರ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸ್ವಕ್ಷೇತ್ರ ಕನಕಪುರದಲ್ಲಿ ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿತ್ತು. ಈ ಬೆಳವಣಿಗೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರವು ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ ) ವಿಧೇಯಕ 2025 ರೂಪಿಸಿತ್ತು.
ಸಾಮಾಜಿಕ ಬಹಿಷ್ಕಾರ ನಿಷೇಧ ಮಸೂದೆಯಲ್ಲೇನಿದೆ?
ರಾಜ್ಯದಲ್ಲಿ ಯಾರೇ ವ್ಯಕ್ತಿಯು ತನ್ನ ಸಮುದಾಯದ ಯಾರೇ ವ್ಯಕ್ತಿಯ ಮೇಲೆ ಯಾವುದೇ ರೀತಿಯ ಸಾಮಾಜಿಕ ಬಹಿಷ್ಕಾರವನ್ನು ಹೇರುವುದು ಅಥವಾ ಹೇರಲು ಕಾರಣಕರ್ತನಾದರೇ ಅಥವಾ ಸಾಮಾಜಿಕ ಬಹಿಷ್ಕಾರವನ್ನು ಆಚರಿಸಿರುವುದು ಸಾಬೀತಾದರೇ ಅಂತಹ ವ್ಯಕ್ತಿಗಳ ವಿರುದ್ಧ ಮೂರು ವರ್ಷ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರು ಜುಲ್ಮಾನೆ ವಿಧಿಸಲಿದೆ.
ಸಾಮಾನ್ಯವಾಗಿ ಮುಕ್ತವಾಗಿ ಬಳಸಲು ಲಭ್ಯವಿರುವ ಯಾವುದೇ ಸ್ಥಳ ಪ್ರವೇಶಿಸುವುದನ್ನು ತಡೆಯುವುದು ಅಥವಾ ನಿರ್ಬಂಧಿಸುವುದು, ಇದಕ್ಕೆ ಕಾರಣಕರ್ತರಾಗುವವರನ್ನೂ ಸಹ ಈ ಅಪರಾಧ ವ್ಯಾಪ್ತಿಗೆ ತಂದಿದೆ. ಅಲ್ಲದೇ ಯಾವುದೇ ನಿರ್ದಿಷ್ಟ ಭಾಷೆಯನ್ನು ಬಳಸಲು ಹೇರುವುದು, ಸಾಂಸ್ಕೃತಿಕ ಅಡಚಣೆಯನ್ನು ಸೃಷ್ಟಿಸುವುದು ಅಥವಾ ಸೃಷ್ಟಿಸುವಂತೆ ಮಾಡುವುದು ಅಥವಾ ಒತ್ತಾಯಿಸುವುದು ಸಹ ಅಪರಾಧವಾಗಲಿವೆ.
ಮಹಾರಾಷ್ಟ್ರ ರಾಜ್ಯ ಸರ್ಕಾರವು ಈಗಾಗಲೇ ಸಾಮಾಜಿಕ ಬಹಿಷ್ಕಾರವನ್ನು ಅಪರಾಧೀಕರಿಸಿದ ಮೊದಲ ರಾಜ್ಯವಾಗಿದೆ. 2016ರಲ್ಲಿ ಮಹಾರಾಷ್ಟ್ರ ಸರ್ಕಾರವು ಸಾಮಾಜಿಕ ಬಹಿಷ್ಕಾರ ಕಾಯಿದೆಯು ಜಾತಿ ಮತ್ತು ಸಮುದಾಯ ಪಂಚಾಯತ್‌ಗಳಂತಹ ನ್ಯಾಯಾಂಗೇತರ ಸಂಸ್ಥೆಗಳಿಂದ ಆಚರಿಸುವ ಸಾಮಾಜಿಕ ಬಹಿಷ್ಕಾರವನ್ನು ನಿಷೇಧಿಸಿದೆ. ಇದೇ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಸಹ ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ ) ವಿಧೇಯಕ 2025ನ್ನುಮಂಡಿಸಲು ಸಿದ್ಧತೆ ನಡೆಸಿದೆ.
ರಾಜ್ಯದಲ್ಲಿ ಒಬ್ಬ ವ್ಯಕ್ತಿ ಅಥವಾ ಅವರ ಕುಟುಂಬ ಸದಸ್ಯರನ್ನೂ ಒಳಗೊಂಡಂತೆ ವ್ಯಕ್ತಿಗಳ ಗುಂಪಿನ ಸಾಮಾಜಿಕ ಬಹಿಷ್ಕಾರವನ್ನು ನಿಷೇಧಿಸುವುದು, ತಡೆಗಟ್ಟುವುದು ಮತ್ತು ಪರಿಹಾರ ನೀಡುವ ಉದ್ದೇಶದಿಂದ ಈ ವಿಧೇಯಕವನ್ನು ರೂಪಿಸಿದೆ. ಸಾಮಾಜಿಕ ಬಹಿಷ್ಕಾರ ಹೇರಿಕೆ ಮಾಡುವುದು ಸಹ ಇನ್ನು ಮುಂದೆ ಅಪರಾಧವಾಗಲಿದೆ. ಈ ಅಪರಾಧ ಸಾಬೀತಾದರೇ ಮೂರು ವರ್ಷಗಳಿಗೆ ವಿಸ್ತರಿಸಬಹುದಾದ ಅಥವಾ ಒಂದು ಲಕ್ಷ ರು.ಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆ ಅಥವಾ ಇವರೆಡನ್ನೂ ಸೇರಿಸಿ ಜೈಲು ಶಿಕ್ಷೆಯನ್ನು ವಿಧಿಸಲು ಅವಕಾಶ ಕಲ್ಪಿಸಿಕೊಂಡಿದೆ.
ಭಾರತ ಸಂವಿಧಾನದ ಪ್ರಸ್ತಾವನೆಯಲ್ಲಿ ವ್ಯಕ್ತಿಯ ಘನತೆಯನ್ನು ಖಾತ್ರಿಪಡಿಸಿದೆ. ನಾಗರೀಕರಲ್ಲಿ ಭ್ರಾತೃತ್ವವನ್ನು ಪ್ರೋತ್ಸಾಹಿಸಲಾಗಿದೆ. ಮತ್ತು ಯಾರೇ ವ್ಯಕ್ತಿಗಳ ಅಥವಾ ವ್ಯಕ್ತಿಗಳ ಗುಂಪಿನ ಮೇಲಿನ ಸಾಮಾಜಿಕ ಬಹಿಷ್ಕಾರವು ಮಾನವ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ. ಮತ್ತು ರಾಜ್ಯದ ಕೆಲವು ಭಾಗಗಳಲ್ಲಿ ವ್ಯಕ್ತಿ ಅಥವಾ ಅವರ ಕುಟುಂಬ ಸದಸ್ಯರನ್ನೂ ಒಳಗೊಂಡಂತೆ ವ್ಯಕ್ತಿಗಳ ಗುಂಪಿನ ಸಾಮಾಜಿಕ ಬಹಿಷ್ಕಾರದ ಅಮಾನವೀಯ ಪದ್ಧತಿಯು ಇನ್ನೂ ಉಳಿದಿದೆ ಎಂದು ವಿಧೇಯಕದಲ್ಲಿ ವಿವರಿಸಿದೆ.
ಒಬ್ಬ ವ್ಯಕ್ತಿ ಅಥವಾ ಅವರ ಕುಟುಂಬ ಸದಸ್ಯರನ್ನೂ ಒಳಗೊಂಡಂತೆ ವ್ಯಕ್ತಿಗಳ ಗುಂಪಿನ ಸಾಮಾಜಿಕ ಬಹಿಷ್ಕಾರದ ಪಿಡುಗನ್ನು ಸಂಪೂರ್ಣವಾಗಿ ತೆಗೆದುಹಾಕುವಲ್ಲಿ ಈಗಾಗಲೇ ಜಾರಿಯಲ್ಲಿರುವ ಕಾನೂನುಗಳು ಪರಿಣಾಮಕಾರಿಯಾಗಿಲ್ಲ ಎಂಬುದು ಸಾಬೀತಾಗಿದೆ. ಮತ್ತು ಸಾರ್ವಜನಿಕ ಕ್ಷೇಮಾಭಿವೃದ್ಧಿಯ ಹಿತಾಸಕ್ತಿಯಲ್ಲಿ ಸಾಮಾಜಿಕ ಸುಧಾರಣೆಯ ವಿಷಯವಾಗಿ ಸಾಮಾಜಿಕ ಬಹಿಷ್ಕಾರವನ್ನು ನಿಷೇಧಿಸುವುದು ಅಗತ್ಯವಾಗಿದೆ ಎಂದು ವಿಧೇಯಕದಲ್ಲಿ ಪ್ರತಿಪಾದಿಸಿದೆ.
ರಾಜ್ಯದಲ್ಲಿ ಜನರು ಅವರ ಮಾನವ ಹಕ್ಕುಗಳೊಂದಿಗೆ ಸೌಹಾರ್ದದಿಂದ ಬುದಕುಉವನ್ನು ಖಚಿತಪಡಿಸಿಕೊಳ್ಳುವುದು ಈ ವಿಧೇಯಕದ ಉದ್ದೇಶವಾಗಿದೆ. ಈ ವಿಧೇಯಕದಲ್ಲಿ ಜಾತಿ ಪಂಚಾಯಿತಿಯನ್ನೂ ವಿಶ್ಲೇಷಿಸಿದೆ. ಅದೇ ಸಮುದಾಯದಲ್ಲಿನ ಹಲವು ಪದ್ಧತಿಗಳನ್ನು ನಿಯಂತ್ರಿಸಲು ಸಹ ಈ ವಿಧೇಯಕವು ಸಹಕಾರಿಯಾಗಲಿದೆ.
ಈ ಕುರಿತು ‘ದಿ ಫೈಲ್’, ವಿಧೇಯಕದ ಪ್ರತಿಯೊಂದಿಗೆ 2025ರ ಜೂನ್ 4ರಂದೇ ವರದಿ ಪ್ರಕಟಿಸಿತ್ತು.
ಸಾಮಾಜಿಕ ಬಹಿಷ್ಕಾರ ತಡೆಗಟ್ಟುವಿಕೆ, ನಿಷೇಧ, ಪರಿಹಾರ ವಿಧೇಯಕ ಮಂಡನೆಗೆ ಸಿದ್ಧತೆ; ಸಚಿವ ಸಂಪುಟಕ್ಕೆ ಪ್ರಸ್ತಾವ
‘ಸಮುದಾಯದೊಳಗೆ ಕಾರ್ಯನಿರ್ವಹಿಸುವ, ಯಾರೇ ಸದಸ್ಯನ ವೈಯಕ್ತಿಕ ಮತ್ತು ಸಾಮಾಜಿಕ ನಡವಳಿಕೆಯನ್ನು ನಿಯಂತ್ರಿಸುವ ಹಾಗೂ ಅವರ ಕುಟುಂಬಗಳನ್ನು ಒಳಗೊಂಡಂತೆ ಅದರ ಸದಸ್ಯರ ಪೈಕಿ ಯಾವುದೇ ವಿವಾದಗಳನ್ನು ಮೌಖಿಕ ಅಥವಾ ಲಿಖಿತವಾದ ವಿದ್ಯುಕ್ತ ಹೇಳಿಕೆಗಳ ಮೂಲಕ ಒಟ್ಟಾಗಿ ಪರಿಹರಿಸುವ ಅಥವಾ ನಿರ್ಧರಿಸುವ ಪಂಚಾಯತಿ ಅಥವಾ ಯಾವುದೇ ಇತರ ಹೆಸರು ಅಥವಾ ವಿವರಣೆಯಿಂದ ಕರೆಯಲಾಗುವ, ನೋಂದಾಯಿತ ಅಥವಾ ನೋಂದಾಯಿತವಲ್ಲದ ಔಪಚಾರಿಕ ಅಥವಾ ಅನೌಪಚಾರಿಕವಾದ ಯಾವುದೇ ಸಮುದಾಯಕ್ಕೆ ಸೇರಿರುವ ವ್ಯಕ್ತಿಗಳ ಗುಂಪಿನ ಮೂಲಕ ರಚಿಸಲಾದ ಸಮಿತಿಯು ಇನ್ನು ಮುಂದೆ ಸಾಮಾಜಿಕ ಬಹಿಷ್ಕಾರ ಹೇರುವಂತಿಲ್ಲ,’ ಎಂದು ಹೇಳಿದೆ.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ ವಿಧಾನ ಪರಿತ್ ಸದಸ್ಯರನ್ನು ಕಾನೂನಾತ್ಮಕವಾಗಿ ನೇಮಕ ಮಾಡಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಇದೀಗ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧಿನಿಯಮ 1991ಕ್ಕೆ ತಿದ್ದುಪಡಿ ವಿಧೇಯಕವನ್ನೂ ಇದೇ ಅಧಿವೇಶನದಲ್ಲಿ ಮಂಡಿಸಲಿದೆ.
ಈ ಸಂಬಂಧ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯು ಸಚಿವ ಸಂಪುಟಕ್ಕೆ ಕಡತ (ಪಿಡಿಎಸ್ 15 ಮಪ್ರಮಂ 2019) ಮಂಡಿಸಿತ್ತು.

ಸಚಿವ ಸಂಪುಟ ಪ್ರಸ್ತಾವದಲ್ಲೇನಿದೆ?
ವಿಧಾನಸಭೆ ಸದಸ್ಯರಿಂದ ಚುನಾಯಿತರಾದ ವಿಧಾನ ಪರಿಷತ್ ಸದಸ್ಯರಿಗೆ ಚುನಾವಣೆ ಕ್ಷೇತ್ರವಿರುವುದಿಲ್ಲ. ವಿಧಾನ ಪರಿಷತ್ ಸದಸ್ಯರು ಮಂಡಳಿಯ ಅಧಿಕಾರ ವ್ಯಾಪ್ತಿಯೊಳಗಿನ ಜಿಲ್ಲೆಯನ್ನು ನೋಡಲ್ ಜಿಲ್ಲೆಯೆಂದು ಆಯ್ಕೆ ಮಾಡಿಕೊಂಡರೆ ಅಂತಹವರನ್ನು ಮಂಡಳಿಯ ಸದಸ್ಯರಂದು ಪರಿಗಣಿಸಿ ಅವರಿಗೂ ಇತರೆ ಸದಸ್ಯರಿಗೆ ದೊರೆಯುವ ಸ್ಥಾನಮಾನ, ಸೌಲಭ್ಯಗಳು, ಅನುದಾನ ಮತ್ತು ಮಾನ್ಯತೆ ದೊರೆಯುವಂತೆ ಮಾಡಬೇಕಿದೆ. ಹೀಗಾಗಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧಿನಿಯಮ 1991ಕ್ಕೆ ತಿದ್ದುಪಡಿ ತರಬೇಕು ಎಂದು ಯೋಜನೆ ಇಲಾಖೆಯು ಪ್ರಸ್ತಾವಿಸಿದೆ.

ಆರ್ಥಿಕ ಪರಿಣಾಮಗಳೇನು?
ಆಯವ್ಯಯದಲ್ಲಿ ಹಂಚಿಕೆಯಾಗುವ ಅನುದಾನವನ್ನು ಮಂಡಳಿ ವ್ಯಾಪ್ತಿಯ ಎಲ್ಲಾ ಸದಸ್ಯರುಗಳಿಗೆ ಹಂಚಿಕೆ ಮಾಡಲಾಗುವುದು. ಸಭೆಯಲ್ಲಿ ಭಾಗವಹಿಸುವ ಹೆಚ್ಚುವರಿ ಸದಸ್ಯರುಗಳಿಗೆ ಪ್ರತಿ ಸಭೆಗೆ ಆಸೀನ ಭತ್ಯೆ, ಪ್ರಯಾಣ ಭತ್ಯೆ ಮತ್ತು ಇತರೆ ವೆಚ್ಚಗಳು ಸೇರಿದಂತೆ ಒಟ್ಟು 2,00,000 ರು.ಗಳನ್ನು ಮಂಡಳಿಯ ಆಡಳಿತಾತ್ಮಕ ನಿಧಿಯಿಂದ ಭರಿಸಬೇಕಿದೆ.
ಆರ್ಥಿಕ ಇಲಾಖೆ ಅಭಿಪ್ರಾಯವೇನು?
ಆಡಳಿತ ಇಲಾಖೆಯು ನೀಡಿದ್ದ ಪ್ರಸ್ತಾವವನ್ನು ಆರ್ಥಿಕ ಇಲಾಖೆಯು ಪರಿಶೀಲಿಸಿದೆ. ಕರ್ನಾಟಕ ವಿಧಾನಸಭೆಯಿಂದ ಆಯ್ಕೆಗೊಂಡ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ ಹೊಸದಾಗಿ ಸೇರ್ಪಡೆಯಾಗಬಹುದಾದ ವಿಧಾನ ಪರಿಷತ್‌ನ 5 ಸದಸ್ಯರುಗಳಿಗೆ ಸಭೆಯಗಳ ಅಸೀನತೆ ಶುಲ್ಕ ಮತ್ತು ಪ್ರಯಾಣ ಭತ್ಯೆಗೆ ಆಗುವ 2.00 ಲಕ್ಷ ರು ಗಳ ಆಡಳಿತಾತ್ಮಕ ವೆಚ್ಚವನ್ನು ಮಾತ್ರ ಭರಿಸುವ ಷರತ್ತಿಗೊಳಪಟ್ಟು ಆರ್ಥಿಕ ಇಲಾಖೆಯು ಈ ಪ್ರಸ್ತಾವನೆಗೆ ಸಹಮತಿಸಿರುವುದು ಗೊತ್ತಾಗಿದೆ.

ಮಲೆನಾಡು ಪ್ರದೇಶಶಾಭಿವೃದ್ಧಿ ಮಂಡಳಿಯ ಅಧಿನಿಯಮಕ್ಕೆ ತರಲು ಹೊರಟಿರುವ ತಿದ್ದುಪಡಿ ಕುರಿತು 2023ರ ಜೂನ್ 221 ಮತ್ತು 2025ರ ಸೆ.17ರಂದು ಪರಿಶೀಲನಾ ಸಮಿತಿಯಲ್ಲಿ ಚರ್ಚೆಯಾಗಿದೆ. ಈ ತಿದ್ದುಪಡಿ ವಿಧೇಯಕವು ಭಾರತ ಸಂವಿಧಾನದ 7ನೇ ಅನುಸೂಚಿಯ 2ನೇ ಪಟ್ಟಿಯ 5ನೇ ಮತ್ತು 32ನೇ ನಮೂನೆ ಅಡಿಯಲ್ಲಿ ಬರಲಿದೆ.
ಹೀಗಾಗಿ ಈ ವಿಧೇಯಕವನ್ನು ಮಂಡಿಸಲು ರಾಜ್ಯ ವಿಧಾನ ಮಂಡಲಕ್ಕೆ ಅಧಿಕಾರವಿದೆ. ಇದು ಕಾನೂನಿನ ವಿಧೇಯಕದ ಉಪಬಂಧಗಳಿಗೆ ವ್ಯತಿರಿಕ್ತವಾಗುವುದು ಕಂಡು ಬಂದಿಲ್ಲ. ಇದನ್ನು ರಾಷ್ಟ್ರಪತಿಗಳ ಪರ್ಯಾಲೋಚನೆಗಾಗಿ ಕಾಯ್ದಿರಿಸುವ ಅಗತ್ಯತೆ ಕಂಡು ಬಂದಿಲ್ಲ ಎಂದು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯು ಅಭಿಪ್ರಾಯ ನೀಡಿದೆ.

ಈ ಪ್ರಸ್ತಾವವನ್ನು ಯೋಜನೆ, ಕಾರ್ಯಕ್ರಮ, ಸಾಂಖ್ಯಿಕ ಸಚಿವ ಡಿ ಸುಧಾಕರ್ ಅವರೂ ಸಹ ಅನುಮೋದನೆ ನೀಡಿದ್ದಾರೆ.

ಮಂಡಳಿಯಲ್ಲಿ ನಾಮನಿರ್ದೇಶನಕ್ಕೆ ಮಾನದಂಡಗಳೇನು?
ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧಿನಿಯಮ 1991ರ ಪ್ರಕಾರ ನಾಮ ನಿರ್ದೇಶನಕ್ಕೆ ಹಲವು ಮಾನದಂಡಗಳನ್ನು ರೂಪಿಸಿದೆ. ಇದರ ಪ್ರಕಾರ ರಾಜ್ಯ ಸರ್ಕಾರದಿಂದ ನಾಮನಿರ್ದೇಶಿತರಾದ ಹತ್ತು ಮಂದಿಯನ್ನು ಮೀರದ ಸದಸ್ಯರು, ಅವರ ಪೈಕಿ ಇಬ್ಬರು ಅನುಸೂಚಿತ ಜಾತಿಗಳು ಮತ್ತು ಒಬ್ಬರು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ವ್ಯಕ್ತಿಗಳು ಸದಸ್ಯರಾಗಿರಬೇಕು ಎಂದು ಹೇಳಿದೆ.
ಮಂಡಳಿಯ ಅಧಿನಿಯಮ ಅಧ್ಯಾಯ 2, ಸೆಕ್ಷನ್ 5ರ ಪ್ರಕಾರ ಹುದ್ದೆಯ ಸದಸ್ಯತ್ವಕಕೆ ಅನರ್ಹತೆ ಬಗ್ಗೆಯೂ ವಿವರಿಸಿದೆ. 2020ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಹರೀಶ್ ಕುಮಾರ್, ರುದ್ರೇಗೌಡರು, ಎಸ್ ಎಲ್ ಧರ್ಮೇಗೌಡರು ಅವರು ಮಂಡಳಿಗೆ ನೇಮಕವಾಗಿರಲಿಲ್ಲ.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ ವಿಧಾನ ಪರಿಷತ್ ಸದಸ್ಯರ ನೇಮಕ; ಅಧಿನಿಯಮ ತಿದ್ದುಪಡಿಗೆ ಪ್ರಸ್ತಾವ
ಈ ಕುರಿತು 2025ರ ಸೆ.24ರಂದೇ ‘ದಿ ಫೈಲ್’, ದಾಖಲೆ ಸಮೇತ ವರದಿ ಪ್ರಕಟಿಸಿತ್ತು.









