ಶಾಸಕರಿಗೆ ಸಿಂಗಲ್, ಡಬಲ್ ಮಂಚ ಸೇರಿ 750 ಪೀಠೋಪಕರಣ; ಟೆಂಡರ್ ಇಲ್ಲದೇ 5.5 ಕೋಟಿ ವೆಚ್ಚ

ಬೆಂಗಳೂರು; ಕರ್ನಾಟಕ ಅರಣ್ಯ ಕೈಗಾರಿಕೆ ಅಭಿವೃದ್ಧಿ ನಿಗಮದಂತಹ ಸರ್ಕಾರಿ ಅಧೀನ ಸಂಸ್ಥೆಗಳನ್ನು ಬದಿಗೊತ್ತಿರುವ ಕರ್ನಾಟಕ ವಿಧಾನಸಭೆ ಸಚಿವಾಲಯವು, ಶಾಸಕರ ಭವನಕ್ಕೆ ದುಬಾರಿ ದರದಲ್ಲಿ  ಉಡುಪಿ ಮೂಲದ ಶ್ರೀರಾಮ್ ಎಂಟರ್ ಪ್ರೈಸೆಸ್‌ನಿಂದ 5.50 ಕೋಟಿ ರು ವೆಚ್ಚದಲ್ಲಿ ಮಂಚ, ಡೈನಿಂಗ್ ಟೇಬಲ್, ಸೋಫಾ ಸೆಟ್‌ ಸೇರಿದಂತೆ ಒಟ್ಟಾರೆ 750 ಪೀಠೋಪಕರಣಗಳನ್ನು ಖರೀದಿಸಿದೆ.

 

ಟೆಂಡರ್ ಮೂಲಕವೇ ಖರೀದಿಸಬೇಕು ಎಂದು ಆರ್ಥಿಕ ಇಲಾಖೆಯು 4(ಜಿ) ವಿನಾಯಿತಿ ಪ್ರಸ್ತಾವ ತಿರಸ್ಕರಿಸಿತ್ತು. ಅಲ್ಲದೇ ವಿಧಾನಸಭೆ ಸಚಿವಾಲಯವು ನಮೂದಿಸಿದ್ದ ದರಗಳು ಸಹ ದುಬಾರಿ ಆಗಿತ್ತು ಎಂದು ಆರ್ಥಿಕ ಇಲಾಖೆಯೇ ಹೇಳಿತ್ತು.  ಆದರೂ ಸಹ ವಿಧಾನಸಭೆ ಸಚಿವಾಲಯವು ಆರ್ಥಿಕ ಇಲಾಖೆ ಮೇಲೆ ಒತ್ತಡ ಹೇರಿ 4 (ಜಿ) ವಿನಾಯಿತಿ ಪಡೆದಿದೆಯಲ್ಲದೇ ದುಬಾರಿ ದರದಲ್ಲಿಯೇ ಪೀಠೋಪಕರಣಗಳನ್ನು ಖರೀದಿಸಿರುವುದನ್ನು ‘ದಿ ಫೈಲ್‌’, ಇದೀಗ ಆರ್‍‌ಟಿಐ ದಾಖಲೆಗಳ ಮೂಲಕ ಹೊರಗೆಡವುತ್ತಿದೆ.

 

ವಿಧಾನಸಭೆ ಸ್ಪೀಕರ್‍‌ ಯು ಟಿ ಖಾದರ್ ಅವರ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಬಿಜೆಪಿ ಶಾಸಕರು ಆರೋಪಿಸುತ್ತಿರುವ ನಡುವೆಯೇ ಶಾಸಕರ ಭವನಕ್ಕೆ ಮಂಚ ಸೇರಿದಂತೆ ಇನ್ನಿತರೆ ಪೀಠೋಪಕರಣಗಳನ್ನು ಖಾಸಗಿ ಸಂಸ್ಥೆಯಿಂದ ಖರೀದಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಈ ಪ್ರಕರಣವೂ ಸಹ ಪ್ರತಿಪಕ್ಷ ಬಿಜೆಪಿ ಕೈಗೆ ಹೊಸ ಅಸ್ತ್ರವನ್ನೊಂದನ್ನು ನೀಡಿದಂತಾಗಿದೆ.

 

ಶಾಸಕರ ಭವನದ ಕೊಠಡಿಗಳಿಗೆ ಈ ಹಿಂದಿನಿಂದಲೂ ಪೀಠೋಪಕರಣ ಖರೀದಿಗೆ ಟೆಂಡರ್‍‌ ಆಹ್ವಾನಿಸಲಾಗುತ್ತಿತ್ತು. ಟೆಂಡರ್ ಪ್ರಕ್ರಿಯೆ ಮೂಲಕವೇ ಪೀಠೋಪಕರಣ ಖರೀದಿಸಲಾಗುತ್ತಿತ್ತು. ಆದರೆ ಯು ಟಿ ಖಾದರ್ ಅವರು ಸಭಾಧ್ಯಕ್ಷರಾಗಿರುವ ಈ ಅವಧಿಯಲ್ಲಿ 4 ಜಿ ವಿನಾಯಿತಿ ಮೂಲಕ ಖರೀದಿಸಿರುವುದು ಆರ್‍‌ಟಿಐ ದಾಖಲೆಗಳಿಂದ ಗೊತ್ತಾಗಿದೆ.

 

ದರಪಟ್ಟಿ ಹೇಗಿದೆ?

 

ತಲಾ 66,003 ರು.ನಂತೆ ಒಟ್ಟು 66.00 ಲಕ್ಷ ರು ವೆಚ್ಚದಲ್ಲಿ ಶಾಸಕರಿಗೆ 100 ಟೇಬಲ್‌, ತಲಾ 32,000 ರು ನಂತೆ ಒಟ್ಟು 32.00 ಲಕ್ಷ ರು ವೆಚ್ಚದಲ್ಲಿ 100 ಎಕ್ಸಿಕ್ಯೂಟಿವ್‌ ರಿವಾಲ್ಲಿಂಗ್‌ ಚೇರ್‍‌, ತಲಾ 10,800 ರು ನಂತೆ ಒಟ್ಟು  21.60 ಲಕ್ಷ ವೆಚ್ಚದಲ್ಲಿ 200 ಸಂಖ್ಯೆಯ ಕಂಪ್ಯೂಟರ್ ಟೇಬಲ್ ಮತ್ತು ತಲಾ 14,400 ರು ನಂತೆ 28.80 ಲಕ್ಷ ರು ವೆಚ್ಚದಲ್ಲಿ ಕಂಪ್ಯೂಟರ್ ಚೇರ್, 1,182 ರು ನಂತೆ ಒಟ್ಟು 11.82 ಲಕ್ಷ ರು ವೆಚ್ಚದಲ್ಲಿ 1,000 ಪ್ಲಾಸ್ಟಿಕ್ ಚೇರ್, 14,000 ರು ನಂತೆ ಒಟ್ಟಾರೆ 56.00 ಲಕ್ಷ ರು ವೆಚ್ಚದಲ್ಲಿ 400 ವಿಸಿಟರ್ಸ್‌ ಚೇರ್‍‌, 35,000 ರುನಂತೆ 10.50 ಲಕ್ಷ ರು ವೆಚ್ಚದಲ್ಲಿ 30 ಡೈನಿಂಗ್ ಟೇಬಲ್, 13,500 ರು ನಂತೆ 16. 20 ಲಕ್ಷ ರು ವೆಚ್ಚದಲ್ಲಿ 120 ಡೈನಿಂಗ್ ಚೇರ್, 40,320 ರು ನಂತೆ 30.24 ಲಕ್ಷ ರು ವೆಚ್ಚದಲ್ಲಿ 75 ಸಿಂಗಲ್ ಮಂಚ, 74, 680 ರು ನಂತೆ 18.67 ಲಕ್ಷದಲ್ಲಿ 25 ಡಬಲ್ ಮಂಚ, 88,000 ರು ನಂತೆ 74.80 ಲಕ್ಷದಲ್ಲಿ 85 ಸೋಫಾ ಸೆಟ್, 21,600 ರು ನಂತೆ 18.56 ಲಕ್ಷದಲ್ಲಿ 85 ಟೀಪಾಯಿ, ಒಂದು ಕೊಠಡಿಗೆ 39,000 ರುನಂತೆ 78.00 ಲಕ್ಷ ವೆಚ್ಚದಲ್ಲಿ 200 ಸಂಖ್ಯೆಯ ಕಿಟಕಿ , ಬಾಗಿಲು ಪರದೆಗಳನ್ನು ಖರೀದಿಸಿದೆ.

 

 

ಆರ್ಥಿಕ ಇಲಾಖೆ ಆಕ್ಷೇಪ ಬದಿಗೊತ್ತಿದ್ದ ವಿಧಾನಸಭೆ ಸಚಿವಾಲಯ

 

ಶಾಸಕರ ಭವನದಲ್ಲಿನ ಶಾಸಕರ ಕೊಠಡಿಗಳಿಗೆ ಪೀಠೋಪಕರಣ ಖರೀದಿಸಲು ವಿಧಾನಸಭೆ ಸಚಿವಾಲಯವು 4 (ಜಿ) ವಿನಾಯಿತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ಈ ಪ್ರಸ್ತಾವವನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ಆಕ್ಷೇಪಗಳನ್ನು ಎತ್ತಿತ್ತಲ್ಲದೇ ಪ್ರಶ್ನಾವಳಿಗಳನ್ನು ಕಳಿಸಿತ್ತು.

 

ಪ್ರಸ್ತಾಪಿತ ಪೀಠೋಪಕರಣಗಳನ್ನು ಉಡುಪಿಯ ಶ್ರೀರಾಮ್‌ ಎಂಟರ್ ಪ್ರೈಸೆಸ್‌ನಿಂದಲೇ ಖರೀದಿಸಲು ಏಕೆ ಉದ್ದೇಶಿಸಲಾಗಿದೆ, ಈ ಸಂಸ್ಥೆಯನ್ನು ಹೊರತುಪಡಿಸಿ ಪ್ರಸ್ತಾಪಿತ ಪೀಠೋಪಕರಣಗಳನ್ನು ಒದಗಿಸಲು ಇತರೇ ಯಾವುದೇ ಸಂಸ್ಥೆಗಳು ಲಭ್ಯವಿಲ್ಲವೇ, ಈ ಹಿಂದೆ ಇಂತಹ ಪೀಠೋಪಕರಣಗಳನ್ನು ಹೇಗೆ ಸಂಗ್ರಹ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ಕೋರಿರುವುದು ಗೊತ್ತಾಗಿದೆ.

 

ಸರ್ಕಾರದ ಅಧೀನ ಸಂಸ್ಥೆಯಾದ ಕೆಎಸ್‌ಎಫ್‌ಐಸಿಎಲ್‌ ನಿಂದ ಪೀಠೋಪಕರಣಗಳನ್ನು ಏಕೆ ಸಂಗ್ರಹಣೆ ಮಾಡಿಕೊಳ್ಳಬಾರದು, ಖಾಸಗಿ ಸಂಸ್ಥೆಯಾಗಿರುವ ಶ್ರೀರಾಮ್‌ ಎಂಟರ್ ಪ್ರೈಸೆಸ್‌ ನೀಡಿರುವ ದರಗಳು ಸಮಂಜಸವಾಗಿದೆ ಎಂದು ಹೇಗೆ ದೃಢಪಡಿಸಿಕೊಳ್ಳಲಾಗಿದೆ, ಟೆಂಡರ್ ಪ್ರಕ್ರಿಯೆ, ಸ್ಪರ್ಧಾತ್ಮಕ ದರಗಳಲ್ಲಿ ಮೂಲಕ ಈ ಪೀಠೋಪಕರಣಗಳನ್ನು ಸಂಗ್ರಹಣೆ ಮಾಡಿಕೊಂಡಲ್ಲಿ ಆರ್ಥಿಕ ಹೊರೆಯು ಕಡಿಮೆ ಅಗುವ ಅವಕಾಶಗಳು ಹೆಚ್ಚಾಗಿವೆ. ಹೀಗಾಗಿ ಟೆಂಡರ್ ಪ್ರಕ್ರಿಯೆ ಮೂಲಕ ಏಕೆ ಸಂಗ್ರಹಣೆ ಮಾಡಿಕೊಳ್ಳಬಾರದು, ಒಂದು ವೇಳೆ ಸಮಯಾವಕಾಶ ಕಡಿಮೆ ಇದ್ದಲ್ಲಿ ಅಲ್ಪಾವಧಿ ಟೆಂಡರ್ ಪ್ರಕ್ರಿಯೆ ಮೂಲಕ ಪೀಠೋಪಕರಣಗಳನ್ನು ಸಂಗ್ರಹಣೆ ಮಾಡಿಕೊಳ್ಳಬಹುದಲ್ಲವೇ ಎಂದು ಆರ್ಥಿಕ ಇಲಾಖೆಯು ಮಾಹಿತಿ ಬಯಸಿತ್ತು.

 

 

ವಿಧಾನಸಭೆ ಸಚಿವಾಲಯದ ಸಮರ್ಥನೆ ಏನಿತ್ತು?

 

ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಪೀಠೋಪಕರಣಗಳ ತಯಾರಿಕೆಯಲ್ಲಿ ಶ್ರೀರಾಮ್‌ ಎಂಟರ್ ಪ್ರೈಸೆಸ್‌ ನಿರತವಾಗಿದೆ. ಕೇಂದ್ರ ಸರ್ಕಾರದ ನೌಕಾನೆಲೆ, ಕೈಗಾ ಸಂಸ್ಥೆಗೆ ಸರಬರಾಜು ಮಾಡಿದೆ. ರಾಜ್ಯ ಸರ್ಕಾರದ ಜಿಲ್ಲಾಧಿಕಾರಿಗಳ ಕಚೇರಿ, ಇತರೆ ಶಿಕ್ಷಣ ಸಂಸ್ಥೆಗಳಿಗೆ ಗುಣಮಟ್ಟದ ಪೀಠೋಪಕರಣಗಳನ್ನು ಸರಬರಾಜು ಮಾಡಿದೆ. ಇದನ್ನು ವಿಧಾನಸಭೆ ಸಚಿವಾಲಯದ ಅಧಿಕಾರಿಗಳ ತಂಡವು ಖಾತ್ರಿ ಪಡಿಸಿಕೊಂಡಿದೆ ಎಂದು ಸಮರ್ಥನೆ ಒದಗಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.

 

ಅಲ್ಲದೇ ಈ ಸಂಸ್ಥೆಯು ಸಚಿವಾಲಯಕ್ಕೆ ಅವಶ್ಯವಿರುವ ಪೀಠೋಪಕರಣಗಳನ್ನು ಸರಬರಾಜು ಮಾಡಲು ಆಸಕ್ತಿ ಹೊಂದಿದೆ ಎಂದು ಸಭಾಧ್ಯಕ್ಷರಿಗೆ ಪತ್ರ ಬರೆದಿತ್ತು. ಈ ಕುರಿತು ವರದಿ ಸಲ್ಲಿಸಲು ಸಭಾಧ್ಯಕ್ಷರು ಸೂಚಿಸಿದ್ದರು. ಅದರಂತೆ ವರದಿ ನೀಡಲಾಗಿದೆ ಎಂದು ಸಮಜಾಯಿಷಿ ನೀಡಿದೆ.

 

 

ಹಾಗೆಯೇ ಈ ಹಿಂದಿನ ವಿಧಾನಸಭೆ ಅವಧಿಗಳಲ್ಲಿ ಹೆಚ್ಚಿನ ಸಮಯಾವಕಾಶ ಇತ್ತು. ಹೀಗಾಗಿ ಅವಶ್ಯವಿದ್ದ ಪೀಠೋಪಕರಣಗಳನ್ನು ಕೆಲವು ಸಂದರ್ಭಗಳಲ್ಲಿ ಟೆಂಡರ್ ಮೂಲಕ ಮತ್ತು ಮತ್ತೆ ಕೆಲವು ಸಂದರ್ಭಗಳಲ್ಲಿ 4 (ಜಿ) ವಿನಾಯಿತಿ ಅಡಿಯಲ್ಲಿ ಖರೀದಿ ಮಾಡಲಾಗಿದೆ. ಅದೇ ರೀತಿ ಕರ್ನಾಟಕ ಸರ್ಕಾರದ ಅಧೀನ ಸಂಸ್ಥೆಯಾದ ಕೆಎಸ್ಎಫ್‌ಐಸಿಎಲ್‌ನಲ್ಲಿ ಪೀಠೋಪಕರಣ, ಸಾಮಗ್ರಿಗಳನ್ನು ಖರೀದಿಸಲು ವಿಚಾರಣೆ ಮಾಡಲಾಗಿತ್ತು.

 

 

ಆದರೆ ಶಾಸಕರ ಭವನಕ್ಕೆ ಅವಶ್ಯಕತೆ ಇರುವ ಎಲ್ಲಾ ರೀತಿಯ ಪೀಠೋಪಕರಣಗಳು ಲಭ್ಯವಿಲ್ಲ. ಮರದ ಪೀಠೋಪಕರಣಗಳು ಮಾತ್ರ ಲಭ್ಯವಿದೆ. ಇದನ್ನು ಹೊರತುಪಡಿಸಿ ಇನ್ನಿತರೆ ಸಾಮಗ್ರಿ, ಪೀಠೋಪಕರಣಗಳನ್ನು ಬೇರೆ ಮೂಲದಿಂದ ಖರೀದಿ ಮಾಡಬೇಕಿದೆ. ಆದರೆ ಶ್ರೀರಾಮ್‌ ಸಂಸ್ಥೆಯಲ್ಲಿ ಎಲ್ಲಾ ರೀತಿಯ ಪೀಠೋಪಕರಣಗಳು, ಸಾಮಗ್ರಿಗಳು ಲಭ್ಯವಿದೆ ಎಂದು ಆರ್ಥಿಕ ಇಲಾಖೆಗೆ ತಿಳಿಸಿತ್ತು.

 

ಶ್ರೀರಾಮ್‌ ಸಂಸ್ಥೆಯು ಎರಡು ವರ್ಷಗಳ ಮಟ್ಟಿಗೆ ಪೀಠೋಪಕರಣಗಳಿಗೆ ಉಚಿತ ಪಾಲಿಷಿಂಗ್‌, ದುರಸ್ತಿ ಕಾರ್ಯ ಮಾಡಿಕೊಡಲಿದೆ. ಅಲ್ಲದೇ ಶಾಸಕರ ಭವನಕ್ಕೆ ಅವಶ್ಯಕವಿರುವ ಪೀಠೋಪಕರಣಗಳು, ಸಾಮಗ್ರಿಗಳ ದರಗಳನ್ನು ಇತರೆ ಸಂಸ್ಥೆಗಳೊಂದಿಗೆ ದರಗಳನ್ನು ತುಲನಾತ್ಮಕವಾಗಿ ಹೋಲಿಕೆ ಮಾಡಲು ಸಾಧ್ಯವಿಲ್ಲ. ಏಕೆಂದರೇ ಇತರೆ ಸಂಸ್ಥೆಗಳ ಪೀಠೋಪಕರಣಗಳು, ಸಾಮಗ್ರಿಗಳು ವ್ಯತರಿಕ್ತವಾದ ನಿರ್ದಿಷ್ಟತೆಗಳನ್ನು ಹೊಂದಿದೆ ಎಂದು ವಿವರಿಸಿತ್ತು.

 

 

ಸ್ಪರ್ಧಾತ್ಮಕ ದರಗಳನ್ನು ಪರಿಶೀಲಿಸುವುದರ ಜತೆಗೆ ಸಾಮಗ್ರಿಗಳ ಗುಣಮಟ್ಟವನ್ನೂ ಸಹ ಗಣನೆಗೆ ತೆಗೆದುಕೊಳ್ಳಬೇಕು. ಪ್ರಸ್ತಾಪಿತ ಸಂಸ್ಥೆಯಿಂದ ಸ್ಪರ್ಧಾತ್ಮಕ ದರಗಳಲ್ಲಿ ಗುಣಮಟ್ಟದ ಸಾಮಗ್ರಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಖಚಿತಪಡಿಸಿಕೊಳ್ಳಲಾಗಿದೆ. ಆರ್ಥಿಕ ಹೊರೆ ಉಂಟಾಗದ ರೀತಿಯಲ್ಲಿ ಖರೀದಿಸಲು ಉದ್ದೇಶಿಸಿದೆ. ಟೆಂಡರ್ ಮೂಲಕ ಸಂಗ್ರಹಣೆ ಮಾಡಿಕೊಳ್ಳಲು ಹೆಚ್ಚಿನ ಸಮಯಾವಕಾಶ ಬೇಕಾಗಲಿದೆ. ಅಲ್ಲದೇ ಪೀಠೋಪಕರಣಗಳ ಮೌಲ್ಯವು 5.50 ಕೋಟಿ ರು ಆಗುವ ಸಾಧ್ಯತೆ ಇದೆ. ಹೀಗಾಗಿ ಅಲ್ಪಾವಧಿ ಟೆಂಡರ್ ಪ್ರಕ್ರಿಯೆ ಮೂಲಕ ಸಂಗ್ರಹಣೆ ಮಾಡುವುದು ಅಷ್ಟು ಸಮಂಜಸವಲ್ಲ ಎಂದು ಸಮರ್ಥನೆ ನೀಡಿತ್ತು.

 

 

ಆರ್ಥಿಕ ಇಲಾಖೆಯು ಈ ಸಮರ್ಥನೆಗಳನ್ನು ಒಪ್ಪಿರಲಿಲ್ಲ. ಅದರಲ್ಲೂ ಮುಖ್ಯವಾಗಿ ಟೆಂಡರ್ ಪ್ರಕ್ರಿಯೆ ಮೂಲಕ ಪೀಠೋಪಕರಣಗಳಣ್ನು ಸಂಗ್ರಹಣೆ ಮಾಡಿಕೊಳ್ಳಲು ಏಕೆ ಸಾಧ್ಯವಿಲ್ಲ ಎಂಬ ಕುರಿತು ನೀಡಿರುವ ಸಮರ್ಥನೆಯು ಸೂಕ್ತವಾಗಿಲ್ಲ ಎಂದು ಅಭಿಪ್ರಾಯಿಸಿತ್ತು. ಹಾಗೆಯೇ 2024ರ ಅಕ್ಟೋಬರ್‍‌ 5ರಂದೇ ಕರ್ನಾಟಕ ವಿಧಾನಸಭೆ ಸಚಿವಾಲಯಕ್ಕೆ ಹಿಂಬರಹ ನೀಡಲಾಗಿತ್ತು.

 

 

 

ಇದರಲ್ಲಿ ಸುಮಾರು 25 ದಿನಗಳ ನಂತರ ವಿಧಾನಸಭೆ ಸಚಿವಾಲಯವು ಪುನಃ ಪ್ರಸ್ತಾವ ಸಲ್ಲಿಸಿದೆ. ಈ ಸಮಯದಲ್ಲಿ ಸಚಿವಾಲಯವು ಟೆಂಡರ್ ಪ್ರಕ್ರಿಯೆ ಮೂಲಕವೇ ಪೀಠೋಪಕರಣಗಳನ್ನು ಖರೀದಿ ಮಾಡಬಹುದಿತ್ತು. ಆದರೆ ಪುನಃ ಖಾಸಗಿ ಸಂಸ್ಥೆಯಿಂದಲೇ ಸಂಗ್ರಹಣೆ ಮಾಡಿಕೊಳ್ಳಲು 4 (ಜಿ) ವಿನಾಯಿತಿ ಕೋರಿದೆ ಎಂದು ತಕರಾರು ತೆಗೆದಿತ್ತು. ಹಾಗೆಯೇ ಈ ಪ್ರಸ್ತಾವವನ್ನು ತಿರಸ್ಕರಿಸಿತ್ತು. ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳ ಪ್ರಕಾರ ಟೆಂಡರ್ ಪ್ರಕ್ರಿಯೆ ಮೂಲಕವೇ ಖರೀದಿ ಮಾಡಬೇಕು, ಒಂದು ವೇಳೆ ಸಮಯಾವಕಾಶ ಕಡಿಮೆ ಇದ್ದಲ್ಲಿ ಅಲ್ಪಾವಧಿ ಟೆಂಡರ್ ಪ್ರಕ್ರಿಯೆ ನಡೆಸಬೇಕು ಎಂದು ಸೂಚಿಸಿರುವುದು ಆರ್‍‌ಟಿಐ ದಾಖಲೆಗಳಿಂದ ಗೊತ್ತಾಗಿದೆ.

 

2.50 ಕೋಟಿಯಿಂದ 5.50 ಕೋಟಿಗೆ ಏರಿಕೆ

 

2024-25ನೇ ಸಾಲಿನಲ್ಲಿಯೇ ವಿಧಾನಸಭೆ ಸಚಿವಾಲಯವು 2.50 ಕೋಟಿ ರು ವೆಚ್ಚದಲ್ಲಿ ಪೀಠೋಪಕರಣ ಖರೀದಿಸಲು ಪ್ರಸ್ತಾವ ಸಲ್ಲಿಸಿತ್ತು. ಆದರೆ ಯಾವುದೇ ಮಾಹಿತಿ, ವಿವರಗಳನ್ನು ಒದಗಿಸಿರಲಿಲ್ಲ. ಹಾಗೂ ಆಯವ್ಯಯ ಸಿದ್ಧತೆ ಸಂದರ್ಭದಲ್ಲೂ ಮಾಹಿತಿ ಒದಗಿಸಿರಲಿಲ್ಲ. ಹೀಗಾಗಿ ಆರ್ಥಿಕ ಇಲಾಖೆಯು 10 ಲಕ್ಷ ರು.ಗಳ ಅನುದಾನ ಮಾತ್ರ ನಿಗದಿಪಡಿಸಿತ್ತು. ಆದರೆ ಅತ್ಯಲ್ಪ ದಿನಗಳಲ್ಲೇ ವಿಧಾನಸಭೆ ಸಚಿವಾಲಯವು ಇದೇ ಪ್ರಸ್ತಾವಕ್ಕೆ 5.50 ಕೋಟಿ ರು ಅನುದಾನ ಕೋರಿತ್ತು.

 

 

ದರ ಹೆಚ್ಚೆಂದಿದ್ದ ಆರ್ಥಿಕ ಇಲಾಖೆ

 

ವಿಧಾನಸಭೆ ಸಚಿವಾಲಯವು ಸೂಚಿಸಿರುವ ಉಪಕರಣಗಳು ದೊಡ್ಡ ಕೊಠಡಿಗಳಿಗಲ್ಲ. ಮತ್ತು ಪ್ರತಿದಿನದ ಬಳಸುವಂಥದ್ದಲ್ಲ. ಅಲ್ಲದೇ ಪ್ರತಿ ಉಪಕರಣಕ್ಕೆ ವಿಧಾನಸಭೆ ಸಚಿವಾಲಯವು ಉಲ್ಲೇಖಿಸಿದ ಮೊತ್ತವು ಹೆಚ್ಚಾಗಿದೆ. ದೀರ್ಘಕಾಲದವರೆಗೆ (2007 ರಿಂದ 2018 ರವರೆಗೆ, ಆರು ವರ್ಷಗಳಿಂದ 17 ವರ್ಷಗಳವರೆಗೆ) ಪಡೆದ ವಸ್ತುಗಳಿಗೆ ಬದಲಿಯನ್ನು ಪ್ರಸ್ತಾಪಿಸಲಾಗಿದೆ. ಈ ಎಲ್ಲಾ ವಸ್ತುಗಳನ್ನು ಬದಲಾಯಿಸುವ ತುರ್ತು/ಅಗತ್ಯವನ್ನು ದೃಢೀಕರಿಸಲು ಯಾವುದೇ ಕಾರ್ಯವಿಧಾನವಿಲ್ಲ. ಹೀಗಾಗಿ ಹೆಚ್ಚುವರಿಯಾಗಿ 5.5 ಕೋಟಿಗೆ ಅನುಮೋದನೆ ನೀಡಬಹುದು ಅಥವಾ ಹಣಕಾಸಿನ ನಿರ್ಬಂಧಗಳನ್ನು ಪರಿಗಣಿಸಿ, ಆಡಳಿತಕ್ಕೆ 2 ಕೋಟಿ ನೀಡಬಹುದು ಎಂದು ಅರ್ಥಿಕ ಇಲಾಖೆಯ ಕಾರ್ಯದರ್ಶಿ ಎಂ ಟಿ ರೇಜು ಅವರು ಎರಡು ಆಯ್ಕೆ ನೀಡಿದ್ದರು.

 

 

ಈ ಎರಡು ಆಯ್ಕೆಗಳ ಪೈಕಿ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್‌ ಅವರು 5.50 ಕೋಟಿ ವೆಚ್ಚದಲ್ಲಿಯೇ ಖರೀದಿಸುವ ಮೊದಲನೇ ಆಯ್ಕೆಯನ್ನೇ ಅನುಮೋದಿಸಿದ್ದರು.

 

 

ಇದನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಅನುಮೋದಿಸಿದ್ದರು.

 

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡುತ್ತಿದ್ದಂತೆ ಆರ್ಥಿಕ ಇಲಾಖೆಯೂ ಸಹ ಶ್ರೀರಾಮ್ ಎಂಟರ್ ಪ್ರೈಸೆಸ್‌ನಿಂದಲೇ ಪೀಠೋಪಕರಣ ಖರೀದಿಸಲು 4 (ಜಿ) ವಿನಾಯಿತಿ ನೀಡಿ 2024ರ ನವೆಂಬರ್‍‌ 27ರಂದು  ಆದೇಶ ಹೊರಡಿಸಿರುವುದು ಆರ್‍‌ಟಿಐ ದಾಖಲೆಯಿಂದ ಗೊತ್ತಾಗಿದೆ.

 

ಸ್ಪೀಕರ್ ಯು ಟಿ ಖಾದರ್‍‌ ಅವರು ಸಭಾಧ್ಯಕ್ಷರಾದ ದಿನದಿಂದಲೇ ಈ ಹುದ್ದೆಯು ಲಾಭದಾಯಕ ಹುದ್ದೆಯನ್ನಾಗಿ ಮಾರ್ಪಾಡಿಸಿದ್ದಾರೆ ಎಂದು ಮಾಜಿ ಸ್ಪೀಕರ್‍‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts