870.87 ಕೋಟಿ ರು ಬಾಕಿ ಉಳಿಸಿಕೊಂಡ 325 ಬಿಲ್ಡರ್‍‌ಗಳು; ನಿಯಂತ್ರಣದ ಶಿಸ್ತಿಗೆ ಧಕ್ಕೆ, ಖರೀದಿದಾರರ ಹಿತಾಸಕ್ತಿಗೆ ಹಾನಿ

ಬೆಂಗಳೂರು; ರೇರಾ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸಿರುವ ಪ್ರಕರಣಗಳಲ್ಲಿ ಬಿಲ್ಡರ್‍‌ಗಳಿಂದ ಕಂದಾಯ ಬಾಕಿ ವಸೂಲಾತಿ ಮಾಡಲು 870.87 ಕೋಟಿ ರು ಬಾಕಿ ಇರುವುದು ಇದೀಗ ಬಹಿರಂಗವಾಗಿದೆ.

 

ಕಳೆದ ಹಲವು ವ‍ರ್ಷಗಳಿಂದಲೂ ಪ್ರವರ್ತಕರು ಮತ್ತು ಬಿಲ್ಡರ್‍‌ಗಳು ಕೋಟ್ಯಂತರ ರುಪಾಯಿಗಳನ್ನು ಬಾಕಿ ಉಳಿಸಿಕೊಂಡಿದ್ದರೂ ಸಹ ನಿರಾತಂಕವಾಗಿ ಹೊಸ ಯೋಜನೆಗಳಿಗೆ ರೇರಾವು ಅನುಮತಿ ನೀಡುತ್ತಿದೆ.

 

ವಿಶೇಷವೆಂದರೇ ಬಾಕಿದಾರ ಬಿಲ್ಡರ್‍‌ಗಳ ಹೊಸ ಯೋಜನೆಗೆ ಅನುಮೋದನೆ ನೀಡದೇ ಇರುವುದಕ್ಕೆ ರೇರಾ ಕಾಯ್ದೆ ಮತ್ತು ನಿಯಮಗಳಲ್ಲಿ ಅವಕಾಶವೇ ಇಲ್ಲ. ಹೀಗಾಗಿ ಬಾಕಿದಾರ ಬಿಲ್ಡರ್‍‌ಗಳು, ಪ್ರವರ್ತಕರು ತಮ್ಮ ಬಾಕಿ ಮೊತ್ತವನ್ನು ಪಾವತಿಸದೆಯೇ ಹೊಸ ಯೋಜನೆಗಳಿಗೆ ರೇರಾದಿಂದ ಅನುಮತಿ ದೊರೆಯುತ್ತಿದೆ. ಬೇಬಾಕಿ ಪ್ರಮಾಣ ಪತ್ರ ಪಡೆಯವುದನ್ನು ಕಡ್ಡಾಯಗೊಳಿಸಲು ರೇರಾವು ಸೂಕ್ತ ನಿಯಮಗಳನ್ನೂ ರೂಪಿಸಿಲ್ಲ.

 

ಹೀಗಾಗಿ ಇದು ನಿಯಂತ್ರಣದ ಶಿಸ್ತಿಗೆ ಧಕ್ಕೆ ತಂದಿದೆ. ಖರೀದಿದಾರರ ಹಿತಾಸಕ್ತಿಗೆ ಹಾನಿಯಾಗಿದೆ ಮತ್ತು ರೇರಾದ ವಿಶ್ವಾಸಾರ್ಹತೆಯನ್ನು ಕುಗ್ಗಿಸಿದೆ. ಹೀಗಿದ್ದರೂ ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದ ಕಾಯ್ದೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹಲವು ಸಭೆಗಳು ನಡೆಯುತ್ತಲೇ ಇವೆ. ಆದರೂ ರೇರಾ ಕಾಯ್ದೆಗೆ ಬಲತುಂಬುವ ನಿಟ್ಟಿನಲ್ಲಿ ತೀವ್ರ ಕ್ರಮಗಳನ್ನು ಕೈಗೊಳ್ಳುತ್ತಲೇ ಇಲ್ಲ.

 

ಹೀಗಾಗಿಯೇ ಪ್ರವರ್ತಕರು ಮತ್ತು ಬಿಲ್ಡರ್‍‌ಗಳು, ಭೂ ಕಂದಾಯ ಬಾಕಿ ಮೊತ್ತವನ್ನು ಪಾವತಿಸುತ್ತಿಲ್ಲ. ಅಲ್ಲದೇ  ರೇರಾ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸುವ   ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಇಂತಹ ಪ್ರಕರಣಗಳಲ್ಲಿ ಭೂ ಕಂದಾಯ ರೂಪದಲ್ಲಿ ದಂಡ ವಸೂಲಿ ಮಾಡಲು ರೇರಾ ಕಾಯ್ದೆಯಲ್ಲಿ ಅವಕಾಶಗಳಿವೆ. ಆದರೂ ವಸೂಲಾತಿ ಮಾಡುವಲ್ಲಿ ರಾಜ್ಯದ ಜಿಲ್ಲಾಧಿಕಾರಿಗಳು ವಿಫಲವಾಗಿದ್ದಾರೆ.

 

2025ರ ಮಾರ್ಚ್‌ನಲ್ಲಿ ನಡೆದಿದ್ದ ಅಧಿವೇಶನದಲ್ಲಿ ವಸತಿ ಸಚಿವ ಜಮೀರ್‍‌ ಅಹ್ಮದ್‌ ಖಾನ್‌ ಅವರು ಲಿಖಿತವಾಗಿ ನೀಡಿದ್ದ ಉತ್ತರದ ಪ್ರಕಾರ   1,427 ಪ್ರಕರಣಗಳಲ್ಲಿ ಬಿಲ್ಡರ್‍‌, ಡೆವಲಪರ್ಸ್‌ಗಳಿಂದ  ಒಟ್ಟಾರೆ 666,97,40,187 ರು.ಗಳನ್ನು  ವಸೂಲು ಮಾಡಬೇಕಿತ್ತು. ಆದರೀಗ 2025ರ ನವೆಂಬರ್‍‌ ಅಂತ್ಯಕ್ಕೆ ಈ ಪ್ರಕರಣಗಳ ಸಂಖ್ಯೆ 2,200ಕ್ಕೇರಿದೆ.

 

ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ನಿರ್ದೇಶನದಂತೆ ಕರ್ನಾಟಕ ರಿಯಲ್ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರವು ಕಾಯ್ದೆನ್ನು ಬಲಪಡಿಸುವ ಕುರಿತು 2025ರ  ಅಕ್ಟೋಬರ್ 4ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ  ಪ್ರಗತಿ ಪರಿಶೀಲನೆ ಸಭೆ ನಡೆಸಿತ್ತು. ಈ ಸಭೆಯಲ್ಲಿ ಕಂದಾಯ ಬಾಕಿ ಕುರಿತು ವಿವರವಾಗಿ ಚರ್ಚೆಯಾಗಿದೆ.

 

ಈ ಸಭೆಯಲ್ಲಿ ಚರ್ಚಿಸಲಾಗಿದ್ದ ಪ್ರಮುಖ ಅಂಶಗಳ ಕುರಿತಾಗಿ ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರವು ಕಂದಾಯ ಬಾಕಿ ವಸೂಲಾತಿಗೆ ಆದೇಶಗಳನ್ನು ಹೊರಡಿಸಿತ್ತು. 2018ರಿಂದ 2025ರ ಸೆ.30ರವರೆಗೆ ಒಟ್ಟು 2,200 ಪ್ರಕರಣಗಳ ಪೈಕಿ 970.10 ಕೋಟಿ ರು ವಸೂಲಾತಿಗೆ ಬಾಕಿ ಇದೆ ಎಂಬ ಮಾಹಿತಿ ಒದಗಿಸಿತ್ತು. ಈ 970.10 ಕೋಟಿ ರು.ಗಳನ್ನು ವಸೂಲು ಮಾಡಲು ರೇರಾವು, ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಸೂಚಿಸಿತ್ತು.

 

 

ಈ ಪೈಕಿ 255 ಪ್ರಕರಣಗಳಲ್ಲಿ 99.23 ಕೋಟಿ ರು.ಗಳನ್ನು ಮಾತ್ರ ವಸೂಲಾಗಿದೆ. ಇನ್ನುಳಿದ 1,945 ಪ್ರಕರಣಗಳಲ್ಲೂ ರೇರಾ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ. ಈ ಪ್ರಕರಣಗಳಲ್ಲಿ 325 ಪ್ರವರ್ತಕರು ಮತ್ತು ಬಿಲ್ಡ್‌ರ್‍‌ಗಳು ಇದ್ದಾರೆ.

 

 

ಇವರಿಂದ 870.87 ಕೋಟಿ ರು ವಸೂಲು ಮಾಡಲು ಬಾಕಿ ಇರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

 

 

ಬಿಲ್ಡರ್‍‌ಗಳಿಂದ 870.87 ಕೋಟಿ ರು ವಸೂಲಾತಿಗಾಗಿ ಬಾಕಿ ಇದೆ ಎಂಬ ಸಂಗತಿಯನ್ನು ರೇರಾ ಮತ್ತು ವಸತಿ ಇಲಾಖೆಯ ಸಚಿವ ಬಿ ಝಡ್ ಜಮೀರ್ ಅಹ್ಮದ್ ಖಾನ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿದೆ. ಆದರೂ ವಸೂಲಾತಿ ಕಾರ್ಯಾಚರಣೆ ಬಿರುಸುಗೊಂಡಿಲ್ಲ.

 

ರೇರಾ ಸಭೆಯಲ್ಲಿ ಪ್ರವರ್ತಕರು, ಬಿಲ್ಡ್‌ರಗಳಿಂದ ಕಂದಾಯ ವಸೂಲಾತಿಗೆ ಬಾಕಿ ಇರುವ ಪ್ರಕರಣಗಳ ಬಗ್ಗೆ ಮರು ಪಾವತಿ ಪರಿಹಾರ ಎಂದು ವರ್ಗೀಕರಿಸಿ ಮಾಹಿತಿ ನೀಡುವಂತೆ ಸೂಚಿಸಿತ್ತು. ಅಲ್ಲದೇ ಅವಧಿ ಮೀರಿದ ಹಾಗೂ ಸ್ಥಗಿತಗೊಂಡ ಯೋಜನೆಗಳ ವಿವರಗಳನ್ನು ಸಲ್ಲಿಸಬೇಕು ಎಂದು ಸಭೆಯು ಸೂಚಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.

 

 

ಸುಮಾರು 8 ವರ್ಷಗಳಿಂದ ಬಾಕಿದಾರ ಪ್ರವರ್ತಕರು, ಬಿಲ್ಡರ್‍‌ಗಳಿಂದ 870.87 ಕೋಟಿ ರು ಬಾಕಿ ವಸೂಲಾತಿ ಮಾಡಿಲ್ಲ. ಈ ಬಗ್ಗೆ ತೀವ್ರ ಕ್ರಮ ಕೈಗೊಳ್ಳುವ ಅಗತ್ಯವಿದ್ದರೂ ಸಹ ಸರ್ಕಾರವು ಆಸಕ್ತಿ ವಹಿಸಿಲ್ಲ. ಬಾಕಿದಾರ ಪ್ರವರ್ತಕರು, ಬಿಲ್ಡರ್‍‌ಗಳು ಹೊಸ ಯೋಜನೆಯ ನೋಂದಣಿಗಾಗಿ ಪ್ರಾದಿಕಾರಕ್ಕೆ ಸಲ್ಲಿಸುವ ಅರ್ಜಿಗಳಿಗೆ ಅನುಮೋದನೆ ನೀಡದೇ ಇರುವುದಕ್ಕೆ ರೇರಾ ಕಾಯ್ದೆ ಮತ್ತು ನಿಯಮಗಳಲ್ಲಿ ಅವಕಾಶವಿಲ್ಲ ಎಂಬ ಸಂಗತಿಯನ್ನು ರೇರಾ ಕಾರ್ಯದರ್ಶಿಗಳು ಸಭೆಯ ಮುಂದಿಟ್ಟಿರುವುದು ಗೊತ್ತಾಗಿದೆ.

 

‘ಬಾಕಿದಾರ ಪ್ರವರ್ತಕರು, ಬಿಲ್ಡರ್‍‌ಗಳ ಮಾಹಿತಿಯನ್ನು ನಗರಾಭಿವೃದ್ದಿ ಇಲಾಖೆಗೆ ಕಳಿಸಿ ಸ್ವಾಧೀನಾನುಭವ ಪತ್ರ ಮತ್ತು ಸಿ ಸಿ ನೀಡುವ ಸಮಯದಲ್ಲಿ ರೇರಾದಿಂದ ಬೇಬಾಕಿ ಪ್ರಮಾಣ ಪತ್ರ ಪಡೆಯವುದನ್ನು ಕಡ್ಡಾಯಗೊಳಿಸಲು ಸೂಕ್ತ ನಿಯಮಗಳನ್ನು ತರಲು ಸರ್ಕಾರಕ್ಕೆ ಪ್ರಸ್ತಾವನೆ ಮಂಡಿಸಬೇಕು,’ ಎಂದು ಸಭೆಯು ಸೂಚಿಸಿರುವುದು ತಿಳಿದು ಬಂದಿದೆ.

 

 

ಅದೇ ರೀತಿ ಯೋಜನೆಗಳನ್ನು ಪೂರ್ಣಗೊಳಿಸದ ಪ್ರವರ್ತಕರು ಮತ್ತು ಬಿಲ್ಡರ್‍‌ಗಳಿಗೆ ಹಣವನ್ನು ಬ್ಯಾಂಕ್‌ನಿಂದ ಬಿಡುಗಡೆ ಮಾಡುವುದನ್ನು ನಿಯಂತ್ರಿಸಲು ಬಾಕಿದಾರ ಬಿಲ್ಡರ್‍‌ಗಳ ಪಟ್ಟಿಯನ್ನು ರಾಜ್ಯಮಟ್ಟದ ಬ್ಯಾಂಕರ್‍‌ಗಳ ಸಮಿತಿಗೆ ಒದಗಿಸಲು ನಿರ್ದೇಶಿಸಿದೆ.

 

‘ಅನೇಕ ಕಟ್ಟಡ ಬಿಲ್ಡರ್‍‌, ಪ್ರವರ್ತಕರು, ಅಭಿವೃದ್ಧಿಕಾರರು ರಿಯಲ್‌ ಎಸ್ಟೇಟ್‌ ಕಾಯ್ದೆ 2016ರರ ಅಡಿಯಲ್ಲಿ ಕಟ್ಟಡ ಯೋಜನೆ ಪೂರ್ಣಗೊಳಿಸದೇ ಉಳಿಸಿಕೊಂಡ ಬಾಕಿ ಮೊತ್ತ, ರೇರಾದಿಂದ ವಿಧಿಸಲಾದ ದಂಡ, ಅಥವಾ ಇನ್ನಿತರೆ ಅಧಿನಿಯಮಗಳ ಉಲ್ಲಂಘನೆಗಳಿರುವ ಸ್ಥಿತಿಯಲ್ಲಿಯೇ ಹೊಸ ರಿಯಲ್ ಎಸ್ಟೇಟ್‌ ಯೋಜನೆಗಳನ್ನು ಆರಂಭಿಸಲು ಅವರುಗಳಿಗೆ ಅನುಮೋದನೆ ನೀಡಲಾಗುತ್ತಿದೆ,’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು 2025ರ ಅಕ್ಟೋಬರ್‍‌ 29ರಂದು ಬರೆದಿದ್ದ ಟಿಪ್ಪಣಿಯಲ್ಲಿ ವಿವರಿಸಿದ್ದರು.

 

 

ಭೂ ಕಂದಾಯ ಬಾಕಿ ಕುರಿತು ವಿಧಾನಪರಿಷತ್‌ನಲ್ಲಿ ಜೆಡಿಎಸ್‌ ಸದಸ್ಯ ಎಸ್‌ ಎಲ್‌ ಭೋಜೇಗೌಡ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ವಸತಿ ಸಚಿವ ಬಿ ಝಡ್‌ ಜಮೀರ್‍‌ ಅಹ್ಮದ್‌ ಖಾನ್‌ ಅವರು ಭೂ ಕಂದಾಯ ಬಾಕಿ ಇರುವ ಮೊತ್ತದ ಅಂಕಿ ಅಂಶದ ಮಾಹಿತಿ ಒದಗಿಸಿದ್ದರು.   ಆದರೆ ಬಹುಕೋಟಿಗಳಷ್ಟು ಬಾಕಿ ಉಳಿಸಿಕೊಂಡಿರುವ ಬಿಲ್ಡರ್‍‌, ಡೆವಲಪರ್ಸ್‌ಗಳ ವಿವರಗಳನ್ನು ಒದಗಿಸಿರಲಿಲ್ಲ.

 

ಬಿಲ್ಡರ್‍‌, ಡೆವಲಪರ್ಸ್‌ಗಳಿಂದ 666. 97 ಕೋಟಿ ಭೂ ಕಂದಾಯ ಬಾಕಿ; ವಸೂಲಿಗೆ ಆಸಕ್ತಿ ವಹಿಸದ ಸರ್ಕಾರ

 

2024 ರ ಡಿಸೆಂಬರ್‍‌ 31ರ ಅಂತ್ಯಕ್ಕೆ ಒಟ್ಟು 1,660 ಪ್ರಕರಣಗಳಲ್ಲಿ 750,85,87,682 ಕೋಟಿ ರು ಮೊತ್ತವನ್ನು ಭೂ ಕಂದಾಯ ಬಾಕಿ ಎಂದು 278 ಬಿಲ್ಡರ್‍‌ಗಳಿಗೆ ವಸೂಲಾತಿ ಆದೇಶ ಹೊರಡಿಸಿತ್ತು.  1,660 ಪ್ರಕರಣಗಳ ಪೈಕಿ 103 ಪ್ರಕರಣಗಳಲ್ಲಿ ಲೋಕ್‌ ಅದಾಲತ್‌ನಲ್ಲಿ ರಾಜಿ ಮೂಲಕ 54,66,ಕ59,913 ರು.ಗಳನ್ನು ವಸೂಲಿ ಮಾಡಿದೆ. ಹಾಗೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ 130 ಪ್ರಕರಣಗಳಲ್ಲಿ 37,21,87,582 ರುಗ.ಳನ್ನು ವಸೂಲಿ ಮಾಡಿತ್ತು.

 

ಒಟ್ಟು 233 ಪ್ರಕರಣಗಳಿಂದ ಒಟ್ಟು 91,88,47,495 ರು.ಗಳನ್ನು ವಸೂಲಿ ಮಾಡಲಾಗಿದೆ.  ಉಳಿದ 1,427 ಪ್ರಕರಣಗಳಲ್ಲಿ ಒಟ್ಟಾರೆ 666,97,40,187  ರು,  ಭೂ ಕಂದಾಯ ಬಾಕಿ ಇತ್ತು.

 

 

ವಸೂಲಾತಿ ಚುರುಕುಗೊಳಿಸುವ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಒಂದು ಅಧಿಕಾರಯುಕ್ತ ವಿಶೇಷ ಕೋಶವನ್ನು ರಚಿಸಲು ಕಂದಾಯ ಮತ್ತು ಆರ್ಥಿಕ ಇಲಾಖೆಯೊಡನೆ ಸಮಾಲೋಚನೆ ನಡೆಸುತ್ತಿದೆ ಎಂದು ತಿಳಿಸಿತ್ತು.

 

 

ಕೇಂದ್ರ ಸರ್ಕಾರವು ಗ್ರಾಹಕರ ಹಿತಾಸಕ್ತಿಗಾಗಿ ರಿಯಲ್‌ ಎಸ್ಟೇಟ್‌ ವಲಯವನ್ನು ನಿಯಂತ್ರಿಸಲು ಮತ್ತು ಪಾರದರ್ಶಕತೆಯನ್ನು ತರಲು ರಿಯಲ್‌ ಎಸ್ಟೇಟ್‌ ವಲಯವನ್ನು ನಿಯಂತ್ರಿಸಲು ಮತ್ತು ಪಾರದರ್ಶಕತೆಯನ್ನು ತರಲು ರಿಯಲ್‌ ಎಸ್ಟೇಟ್‌ ಅಧಿನಿಯಮ 2016ನ್ನು ಜಾರಿಗೆ ತಂದಿದೆ. ಇದು 2017ರ ಜುಲೈ 11ರಿಂದಲೇ ಜಾರಿಯಲ್ಲಿದೆ.

 

 

 

ರೇರಾ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸುವ ಪ್ರತಿಯೊಬ್ಬ ಬಿಲ್ಡರ್‍‌ಗಳಿಗೂ ಪ್ರಕರಣವಾರು ದಂಡ ವಿಧಿಸಿ ಈ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲಿ ಮಾಡಲು ಆದೇಶ ಹೊರಡಿಸುತ್ತದೆ. ಭೂ ಕಂದಾಯದ ಬಾಕಿ ಮೊತ್ತವನ್ನು ವಸೂಲಿ ಮಾಡಲು ಅಧಿಕಾರ ಹೊಂದಿರುವ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ರೆವಿನ್ಯೂ ರಿಕವರಿ ಸರ್ಟಿಫಿಕೇಟ್‌ಗಳೊಂದಿಗೆ ಕಳಿಸಿಕೊಡಲಾಗುತ್ತದೆ.

 

ಈ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲಿ ಮಾಡಲು ನಿಯಮಗಳಲ್ಲಿ ಅವಕಾಶ ಇರುವುದರಿಂದ ಈ ಮೊತ್ತವನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ವಸೂಲಿ ಮಾಡಿ ರೇರಾಗೆ ಜಮೆ ಮಾಡುತ್ತಾರೆ ಎಂದು ಉತ್ತರದಲ್ಲಿ ವಿವರಿಸಿದ್ದರು.

 

ರೇರಾ ಕಾಯ್ದೆ ಮತ್ತು ನಿಯಮಗಳಡಿಯಲ್ಲಿ ರಾಜ್ಯದ ಬೆಂಗಳೂರು ನಗರ ಜಿಲ್ಲೆ ಸೇರಿದಂತೆ 7 ಜಿಲ್ಲೆಗಳಲ್ಲಿ 423.51 ಕೋಟಿ ರು.ಪ್ರಮಾಣದಲ್ಲಿ ಭೂ ಕಂದಾಯ ಬಾಕಿ ಇತ್ತು. ಒಂದೂವರೆ ವರ್ಷದಲ್ಲಿ ಈ ಮೊತ್ತವು 243.46 ಕೋಟಿ ರು ಹೆಚ್ಚಳವಾಗಿತ್ತು.

 

ದಂಡ ಪರಿಹಾರದ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲು ಮಾಡುವ ವಿಷಯವನ್ನು ಸಕಾಲ ವ್ಯಾಪ್ತಿಗೊಳಪಡಿಸುವ ಸಂಬಂಧ ರೇರಾ ಪ್ರಾಧಿಕಾರ ನಡೆಸಿದ್ದ ಸಭೆಯಲ್ಲಿ 423.51 ಕೋಟಿ ರು ಪ್ರಮಾಣದಲ್ಲಿ ಭೂ ಕಂದಾಯ ಬಾಕಿ ಇರುವ ವಿಚಾರವು ಚರ್ಚೆಗೆ ಬಂದಿದೆ. ಈ ಸಂಬಂಧ 2023ರ ಸೆ.26ರಂದು ಸಭೆ ನಡೆದಿತ್ತು.

 

ರೇರಾ ಕಾಯ್ದೆ ಅಡಿಯಲ್ಲಿ ವಿಧಿಸಲಾಗುವ ದಂಡ, ಪರಿಹಾರದ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ವಸೂಲು ಮಾಡುವ ಪ್ರಕ್ರಿಯೆಗೆ ತಗುಲುವ ವೆಚ್ಚಗಳನ್ನು ಭರಿಸಲು ಮತ್ತು ವಸೂಲಾತಿ ಶುಲ್ಕಗಳನ್ನು ವಿಧಿಸಲು ರೇರಾ ನಿಯಮಗಳಲ್ಲಿ ಸೂಕ್ತ ತಿದ್ದುಪಡಿ ತರುವ ಬಗ್ಗೆ ಕ್ರಮ ವಹಿಸಲು ವಸತಿ ಇಲಾಖೆಗೆ ಸೂಚಿಸಿತ್ತು.

 

ಈ ಬೆಳವಣಿಗೆ ನಡುವೆಯೇ ಎಷ್ಟು ಪ್ರಮಾಣದಲ್ಲಿ ವಸೂಲಾತಿ ಶುಲ್ಕವನ್ನು ನಿಗದಿಪಡಿಸಬಹುದು ಎಂದು ಮಾಹಿತಿ ನೀಡಬೇಕು ಎಂದು ಕಂದಾಯ ಇಲಾಖೆಗೆ ವಸತಿ ಇಲಾಖೆಯು ಸೂಚಿಸಿದೆ. ಈ ಸಂಬಂಧ 2023 ಅಕ್ಟೋಬರ್‍‌ 18ರಂದು ಅನಧಿಕೃತ ಟಿಪ್ಪಣಿ ಹೊರಡಿಸಿತ್ತು.

 

 

 

ಭೂ ಕಂದಾಯ ಬಾಕಿ ಉಳಿಸಿಕೊಂಡಿರುವ ಜಿಲ್ಲೆಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದೆ. ಈ ಜಿಲ್ಲೆಯಲ್ಲಿ 415.73 ಕೋಟಿ ರು. ಬಾಕಿ ಇದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 73.46 ಲಕ್ಷ ರು., ಮೈಸೂರು ಜಿಲ್ಲೆಯಲ್ಲಿ 2.33 ಕೋಟಿ ರು., ಧಾರವಾಡದಲ್ಲಿ 27.33 ಲಕ್ಷ ರು., ಬೆಳಗಾವಿಯಲ್ಲಿ 69.29 ಲಕ್ಷ ರು., ದಕ್ಷಿಣ ಕನ್ನಡದಲ್ಲಿ 3.20 ಕೋಟಿ ರು., ಉಡುಪಿಯಲ್ಲಿ 53.26 ಲಕ್ಷ ರು. ಭೂ ಕಂದಾಯ ವಸೂಲಾತಿಗೆ ಬಾಕಿ ಇತ್ತು.

 

 

ರೇರಾ ಕಾಯ್ದೆ 2016ರ ಕಲಂ 40(1) ಹಾಗೂ ರೇರಾ ನಿಯಮ 25ರಡಿಯಲ್ಲಿ ದಂಡ/ಪರಿಹಾರದ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲು ಮಾಡುವ ಸಂಬಂಧ ಸಾಧಕ ಬಾಧಕಗಳ ಕುರಿತು ಚರ್ಚೆ ಕೂಡ ನಡೆದಿತ್ತು.

 

423.51 ಕೋಟಿ ಭೂ ಕಂದಾಯ ಬಾಕಿ; ವಸೂಲಾತಿ ಶುಲ್ಕ ನಿಗದಿಗೆ ಕಂದಾಯ ಇಲಾಖೆಗೆ ವಸತಿ ಇಲಾಖೆ ಪತ್ರ

 

‘ರೇರಾ ಕಾಯ್ದೆಯು ಕೇಂದ್ರ ಸರ್ಕಾರದ ಕಾಯ್ದೆಯಾಗಿದೆ. ಇದನ್ನು ಸಂಬಂಧಪಟ್ಟ ತಹಶೀಲ್ದಾರ್‍‌ಗಳೇ ರೇರಾ ಕಾಯ್ದೆಯಡಿ ವಿಧಿಸುವ ದಂಡದ ಮೊತ್ತವನ್ನು ಭೂ ಕಂದಾಯ ಎಂದು ವಸೂಲು ಮಾಡಬೇಕಾಗುತ್ತದೆ. ಆದರೆ ತಹಶೀಲ್ದಾರ್‍‌ರು ಅರೆ ನ್ಯಾಯಿಕ ಪ್ರಾಧಿಕಾರವಾಗಿದ್ದು ರೇರಾ ಕಾಯ್ದೆಯಡಿ ವಿಧಿಸುವ ದಂಡದ ಮೊತ್ತವನ್ನು ಭೂ ಕಂದಾಯ ಎಂದು ವಸೂಲು ಮಾಡುವಲ್ಲಿ ಹಲವಾರು ಕಾನೂನಾತ್ಮಕ ತೊಡಕುಗಳೀವೆ,’ ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಚರ್ಚಿಸಿದ್ದರು.

 

ದಂಡದ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ವಸೂಲು ಮಾಡುವಲ್ಲಿ ಕಂಡು ಬಂದಿರುವ ಕಾನೂನಾತ್ಮಕ ತೊಡಕುಗಳು ಮತ್ತು ಇದನ್ನು ವಸೂಲು ಮಾಡಲು ಹೆಚ್ಚು ಸಮಯಾವಕಾಶ ಬೇಕಿರುವುದರಿಂದ ಬೇರೆ ಸೇವೆಗಳ ರೀತಿಯಲ್ಲಿ ಸಕಾಲ ವ್ಯಾಪ್ತಿಗೆ ಸೇರ್ಪಡೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಎಲ್ಲಾ ಪ್ರಾದೇಶಿಕ ಆಯುಕ್ತರುಗಳೂ ಒಂದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

Your generous support will help us remain independent and work without fear.

Latest News

Related Posts