ಕೆಂಪೇಗೌಡ ಬಡಾವಣೆ ಒಂದು ರಿಯಲ್‌ ಎಸ್ಟೇಟ್‌ ಪ್ರಾಜೆಕ್ಟ್‌, ಬಿಡಿಎ ಪ್ರಮೋಟರ್; ರೇರಾದ ಮಹತ್ವದ ತೀರ್ಪು

ಬೆಂಗಳೂರು; ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) ಕಾಯ್ದೆ ಸೆಕ್ಷನ್‌ 3 ರ ಅಡಿಯಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯನ್ನು ನೋಂದಾಯಿಸುವುದರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ವಿಫಲವಾಗಿರುವುದು ಇದೀಗ ಬಹಿರಂಗವಾಗಿದೆ.

 

ನಾಡಪ್ರಭು ಕೆಂಪೇಗೌಡ ಬಡಾವಣೆ ರಚನೆಯಾಗಿ ಹಲವು ವರ್ಷಗಳಾಗಿದ್ದರೂ ಸಹ ಇದುವರೆಗೂ ಸೂಕ್ತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿರಲಿಲ್ಲ.  ನಿವೇಶನ ಪಡೆದಿದ್ದ ನಾಗರೀಕರು ರೇರಾ ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ ತೀರ್ಪು ನೀಡಿರುವ ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರವು, ನಾಡಪ್ರಭು ಬಡಾವಣೆಯನ್ನು ರೇರಾ ಕಾಯ್ದೆ ಸೆಕ್ಷನ್‌ 3ರ ಅಡಿಯಲ್ಲಿ ನೋಂದಾಯಿಸಿರಲೇ ಇಲ್ಲ ಎಂದು ಹೇಳಿದೆ.

 

2025ರ ನವೆಂಬರ್‍‌ 7ರಂದು ರೇರಾದ ಅಧ್ಯಕ್ಷ ರಾಕೇಶ್‌ ಸಿಂಗ್‌ ನೇತೃತ್ವದ ಪೀಠವು  ಈ ತೀರ್ಪು ನೀಡಿದೆ. ಈ ತೀರ್ಪಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ರಿಯಲ್‌ ಎಸ್ಟೇಟ್‌ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಯು ರೇರಾ ಅಡಿಯಲ್ಲಿ ಪ್ರಮೋಟರ್‍‌ ಆಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ನಾಡಪ್ರಭು ಕೆಂಪೇಗೌಡ ಬಡಾವಣೆ ಯೋಜನೆಯು ರಿಯಲ್‌ ಎಸ್ಟೇಟ್‌ ಪ್ರಾಜೆಕ್ಟ್‌ ಆಗಿದೆ ಎಂಬುದನ್ನು ರೇರಾವು ದೃಢಪಡಿಸಿರುವುದು ತೀರ್ಪಿನಿಂದ ಗೊತ್ತಾಗಿದೆ.

 

 

ಬಿಡಿಎಯು ತನ್ನ ಸಾರ್ವಜನಿಕ ಕುಂದುಕೊರತೆ ಸಭೆಗಳ ಮೂಲಕ “ಪಾರದರ್ಶಕ ಮತ್ತು ಉತ್ತರದಾಯಿತ್ವ” ಪ್ರಕ್ರಿಯೆಯನ್ನು ಅನುಸರಿಸುವುದಾಗಿ ಘೋಷಿಸಿತ್ತು. ಹೀಗೆ ಘೋಷಣೆ ಮಾಡಿದ ಒಂದೇ ದಿನದಲ್ಲಿ ರೇರಾದ ತೀರ್ಪು ಸಹ ಪ್ರಕಟವಾಗಿದೆ.

 

 

ಪ್ರಮುಖ ಆರೋಪಗಳು ಮತ್ತು ಬಿಡಿಎಯ ವಾದ

 

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿನ ಮೂಲ ಸೌಕರ್ಯಗಳ ಕೊರತೆ ಮತ್ತು ಬಡಾವಣೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡು ನಿವೇಶನದಾರರಿಗೆ ಕೊಡುವುದರಲ್ಲಿ ವಿಫಲವಾಗಿದೆ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆಯ ಮುಕ್ತ ವೇದಿಕೆ ಮತ್ತು ಇತರರು ಬಿಡಿಎ ವಿರುದ್ಧ ಅನೇಕ ಉಲ್ಲಂಘನೆ ಆರೋಪಗಳನ್ನು ಹೊರಿಸಿದ್ದರು. ಅಲ್ಲದೇ ಈ ಸಂಬಂಧ ರೇರಾದಲ್ಲಿ ದೂರು ದಾಖಲಿಸಿದ್ದರು.

 

ರೇರಾ ನೋಂದಣಿಯಲ್ಲಿ ವಿಫಲ: ಎನ್‌ಪಿ‌ಕೆ‌ಎಲ್ ಯೋಜನೆಯನ್ನು ರೇರಾ ಕಾಯಿದೆಯ ಸೆಕ್ಷನ್ 3 ರ ಅಡಿಯಲ್ಲಿ ನೋಂದಾಯಿಸಲು ಬಿಡಿಎ ವಿಫಲವಾಗಿದೆ. ಮೂಲಸೌಕರ್ಯದ ಕೊರತೆ,  ಲೇಔಟ್‌ನಲ್ಲಿ ನೀರು, ಒಳಚರಂಡಿ, ವಿದ್ಯುತ್, ರಸ್ತೆಗಳು ಮತ್ತು ಉದ್ಯಾನವನಗಳಂತಹ ಮೂಲಸೌಕರ್ಯಗಳನ್ನು ಒದಗಿಸದಿರುವುದು, ಲೇಔಟ್ ಅನ್ನು ವಾಸಯೋಗ್ಯವಲ್ಲದಂತೆ ಮಾಡಿದೆ ಎಂದು ದೂರಿದ್ದರು.

 

 

ಹೆಚ್ಚುವರಿ ಮೊತ್ತ ಸಂಗ್ರಹ,  ಶಾಸನಬದ್ಧ ಮಿತಿ ಮೀರಿ ಹಣ ಸಂಗ್ರಹ

 

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ವಿಶೇಷ ಕಾನೂನಿನ ಅಡಿಯಲ್ಲಿ ಸ್ಥಾಪಿತವಾಗಿರುವ ಶಾಸನಬದ್ಧ ಪ್ರಾಧಿಕಾರ ಮತ್ತು ಲೇಔಟ್‌ಗಳ ರಚನೆಯು ವಾಣಿಜ್ಯ ಚಟುವಟಿಕೆಯಲ್ಲದೇ ನಗರ ಯೋಜನೆ ಮತ್ತು ಸಾರ್ವಜನಿಕ ಕಲ್ಯಾಣದ ಭಾಗವಾಗಿದೆ ಎಂದು ಸಮರ್ಥಿಸಿತ್ತಲ್ಲದೇ ಇದನ್ನೇ ಪ್ರತಿಪಾದಿಸಿತ್ತು.

 

ಹಾಗೆಯೇ ಬಿಡಿಎ ಕಾಯ್ದೆ (ವಿಶೇಷ ಶಾಸನ) ರೇರಾ (ಸಾಮಾನ್ಯ ಶಾಸನ) ದ ಮೇಲೆ ಮೇಲುಗೈ ಸಾಧಿಸಬೇಕು ಎಂದು ವಾದಿಸಿತ್ತು. ಅಲ್ಲದೇ ಬಿಡಿಎಯು ರೇರಾ ವ್ಯಾಪ್ತಿಯಿಂದ ಹೊರಗಿರಲು ವಿನಾಯಿತಿ ಇದೆ ಎಂದು ಹೇಳಿಕೊಂಡಿತ್ತು.

 

 

ಶಾಸನಬದ್ಧವಾಗಿ ವಿಧಿಸಿದ್ದ ಮಿತಿಗಿಂತಲೂ ಬಿಡಿಎಯು ಶೇ. 12.5ಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಸಂಗ್ರಹಿಸಿತ್ತು. ಅಲ್ಲದೇ ನಾಡಪ್ರಭು ಕೆಂಪೇಗೌಡ ಬಡಾವಣೆ ಯೋಜನೆಯಿಂದ ಸಂಗ್ರಹಿಸಿದ್ದ ಮೊತ್ತವನ್ನು ಎಸ್ಕ್ರೋ ಖಾತೆಯಲ್ಲಿ ಠೇವಣಿ ಇಟ್ಟಿಲ್ಲ.

 

ಆದರೆ ರೇರಾ ಪ್ರಾಧಿಕಾರದ ಪೂರ್ಣ ಪೀಠವು ಬಿಡಿಎಯ ವಾದಗಳನ್ನು ತಿರಸ್ಕರಿಸಿದೆ. ಮತ್ತು ಪ್ರಮುಖ ಅಂಶಗಳಲ್ಲಿ ತೀರ್ಮಾನಗಳನ್ನು ನೀಡಿದೆ. ಈ ತೀರ್ಮಾನದಿಂದಾಗಿ ಬಿಡಿಎಗೆ ಮುಖಭಂಗವಾಗಿದೆ.

 

ಬಿಡಿಎ ಒಂದು ‘ಪ್ರಮೋಟರ್

 

ರೇರಾ ಕಾಯಿದೆಯ ಸೆಕ್ಷನ್ 2(zk)(iii) ಅಡಿಯಲ್ಲಿ, ನಿವೇಶನಗಳನ್ನು ಮಾರಾಟ ಮಾಡುವ ಯಾವುದೇ ಅಭಿವೃದ್ಧಿ ಪ್ರಾಧಿಕಾರ ಅಥವಾ ಸಾರ್ವಜನಿಕ ಸಂಸ್ಥೆಯು ಸ್ಪಷ್ಟವಾಗಿ ‘ಪ್ರಮೋಟರ್’ ವ್ಯಾಖ್ಯಾನಕ್ಕೆ ಒಳಪಡುತ್ತದೆ. ಯೋಜನೆಯ ಉದ್ದೇಶ (ಲಾಭ ಅಥವಾ ಕಲ್ಯಾಣ) ಅಪ್ರಸ್ತುತವಾಗಿದೆ. ರೇರಾವು ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಗ್ರಾಹಕ ಸಂರಕ್ಷಣೆಗಾಗಿ* ಆಗಿದೆ ಎಂದು ತೀರ್ಪಿನಲ್ಲಿ ಹೇಳಿದೆ.

 

ರೇರಾದ ಮೇಲುಗೈ

 

ರೇರಾ ಕಾಯಿದೆಯ ಸೆಕ್ಷನ್ 89 ರ ಪ್ರಕಾರ, ಈ ಕಾಯಿದೆಯ ನಿಬಂಧನೆಗಳು ಯಾವುದೇ ಇತರ ಕಾನೂನಿನಲ್ಲಿ ಅಸಮಂಜಸವಾದ ಅಂಶವಿದ್ದರೂ ಸಹ ಮೇಲುಗೈ ಸಾಧಿಸುವ ಪರಿಣಾಮವನ್ನು ಹೊಂದಿದೆ. ಆದ್ದರಿಂದ, ನಿವೇಶನಗಳ ಅಭಿವೃದ್ಧಿ, ಮಾರಾಟ ಮತ್ತು ವಿತರಣೆಯ ವಿಷಯದಲ್ಲಿ ರೇರಾ ನಿಯಮಗಳು, ಬಿಡಿಎ ಕಾಯಿದೆಗಿಂತ ಮೇಲುಗೈ ಸಾಧಿಸುತ್ತವೆ ಎಂದು ವಿವರಿಸಿದೆ.

 

 

ಅನ್ವಯಿಸುವಿಕೆಯ ಒಪ್ಪಿಗೆ

 

ಬಿಡಿಎಯು ಸ್ವತಃ ನಾಡಪ್ರಭು ಕೆಂಪೇಗೌಡ ಬಡಾವಣೆ ಯೋಜನೆಗೆ ರೇರಾ ನೋಂದಣಿಗಾಗಿ ಅರ್ಜಿ ಸಲ್ಲಿಸಿತ್ತು. ಈ ಮೂಲಕ ಅದು ಕಾಯಿದೆಯ ಅನ್ವಯವನ್ನು *ನಡತೆಯ ಮೂಲಕ ಒಪ್ಪಿಕೊಂಡಿದೆ ಎಂದು ರೇರಾವು ತನ್ನ ತೀರ್ಪಿನಲ್ಲಿ ವ್ಯಾಖ್ಯಾನಿಸಿದೆ.

 

ಈ ತೀರ್ಪು, ಸರ್ಕಾರಿ ಅಭಿವೃದ್ಧಿ ಪ್ರಾಧಿಕಾರಗಳು ವಾಣಿಜ್ಯ ಸ್ವರೂಪದ ವಸತಿ ಅಥವಾ ನಿವೇಶನ ಮಾರಾಟದಲ್ಲಿ ತೊಡಗಿದಾಗ, ಅವುಗಳು ನಿಯಂತ್ರಕ ಮೇಲ್ವಿಚಾರಣೆ ಮತ್ತು ಗ್ರಾಹಕ ಸಂರಕ್ಷಣಾ ಕಾನೂನುಗಳಿಗೆ ಬದ್ಧವಾಗಿರಬೇಕು ಎಂಬ ಸುಪ್ರೀಂ ಕೋರ್ಟ್‌ನ ಪೂರ್ವಭಾವಿ ತತ್ವವನ್ನು ಪುನರುಚ್ಚರಿಸಿದಂತಾಗಿದೆ.

 

ನಾಡಪ್ರಭು ಕೆಂಪೇಗೌಡ ಬಡಾವಣೆಯ ಸಂಪೂರ್ಣ ಚಿತ್ರಣದ ವರದಿ ನೀಡುವಂತೆ ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ ( ರೇರಾ ), ಬಿಡಿಎ ಅಧಿಕಾರಿಗಳಿಗೆ ನಾಲ್ಕು ವರ್ಷದ ಹಿಂದೆಯೇ  ಸೂಚನೆ ನೀಡಿತ್ತು.

 

ನಾಡಪ್ರಭು ಕೆಂಪೇಗೌಡ ಬಡಾವಣೆ ಯಲ್ಲಿ ನಿವೇಶನ ಖರೀದಿಗಾಗಿ ನಾಗರೀಕರು  ಲಕ್ಷಾಂತರ ರೂ. ಸಾಲ ಮಾಡಿದ್ದರು. ನಿವೇಶನ ಹಂಚಿಕೆ ಮಾಡಿ 5 ವರ್ಷಗಳಿಗೂ ಹೆಚ್ಚು ವರ್ಷಗಳಾಗಿದ್ದರೂ ಸಹ ಬಿಡಿಎಯು ಮನೆ ನಿರ್ಮಾಣ ಮಾಡಲು ಅನುಮತಿಯನ್ನೇ ನೀಡಿರಲಿಲ್ಲ. ಅಲ್ಲದೇ ಮೂಲ ಸೌಲಭ್ಯಗಳನ್ನೂ ಒದಗಿಸಿರಲಿಲ್ಲ. ಕೇವಲ ಶೇ. 40ರಷ್ಟು ಮಾತ್ರ ಅಭಿವೃದ್ಧಿ ಕೆಲಸಗಳನ್ನು ಮಾಡಿತ್ತು.   ಬಿಡಿಎಯ ಈ ಧೋರಣೆ ವಿರುದ್ಧ ನೋಂದಾಯಿತ ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆಯ ಅಧ್ಯಕ್ಷರಾದ ನುಗ್ಗೇಹಳ್ಳಿ ಶ್ರೀಧರ್‌ ಮತ್ತು ಕಾರ್ಯದರ್ಶಿ ಸೂರ್ಯಕಿರಣ್‌ ಮತ್ತು ಇತರೆ ಪದಾಧಿಕಾರಿಗಳು ರೇರಾಗೆ ದೂರು ಸಲ್ಲಿಸಿದ್ದರು.

 

30-40 ಅಳತೆಯ ನಿವೇಶನಕ್ಕೆ 23 ಲಕ್ಷ ರೂ., 60-40 ಅಳತೆಯ ನಿವೇಶನಕ್ಕೆ 56 ಲಕ್ಷರೂ., 50-80ರ ನಿವೇಶನಕ್ಕೆ 96 ಲಕ್ಷ ರೂ. ಹಾಗೂ 12-30 ವಿಸ್ತೀರ್ಣದ ನಿವೇಶನಕ್ಕೆ 12 ಲಕ್ಷ ರೂ. ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 20-30 ರ ಅಳತೆಯ ನಿವೇಶನಕ್ಕೆ 6 ಲಕ್ಷ ರೂ. ನಂತೆ ನಿವೇಶನಗಳನ್ನು ಮಾರಾಟ ಮಾಡಲಾಗಿತ್ತು.  ಆದರೆ ಕಳೆದ ಐದು ವರ್ಷಗಳಿಂದ ಅಭಿವೃದ್ಧಿ ಕೆಲಸಗಳನ್ನು ಮಾಡದೆ ವಿಳಂಬ ನೀತಿ ಅನುಸರಿಸಿತ್ತು.

 

‘ನಾವು ನಿವೇಶನ ಖರೀದಿಸಲು ಲಕ್ಷಾಂತರ ರೂ. ಸಾಲ ಪಡೆದಿದ್ದೇವೆ. ಇದೀಗ ಮನೆ ಬಾಡಿಗೆಯನ್ನೂ ಕಟ್ಟಬೇಕು. ಜತೆಗೆ ಸಾಲವನ್ನೂ ತೀರಿಸಬೇಕು. ಇದೆಲ್ಲದರ ಜತೆಗೆ ಇದೀಗ ನಮಗೆ ಸಾಲಕ್ಕೆ ಹೆಚ್ಚುವರಿ ಬಡ್ಡಿಯ ಹೊರೆಯೂ ಬಿದ್ದಿದೆ. ನಮಗೆ ನಿವೇಶನದಲ್ಲಿ ಮನೆ ಕಟ್ಟಲು ಮೂಲಸೌಲಭ್ಯಗಳೊಂದಿಗೆ ಅನುಮತಿ ಕೊಡಿಸಿ, ಇಲ್ಲವೇ ನಮಗೆ ಬಿಡಿಎ ವಿಳಂಬ ನೀತಿಯಿಂದ ಆಗುತ್ತಿರುವ ನಷ್ಟಕ್ಕೆ ಪರಿಹಾರವನ್ನಾದರೂ ಕೊಡಿಸಲು ಬಿಡಿಎಗೆ ಸೂಚಿಸಿ,’  ಎಂದು ದೂರುದಾರರು ರೇರಾ ಪೀಠದ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದರು.

 

ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ 4,040 ಎಕರೆಯನ್ನು ಅಧಿಸೂಚಿಸಿತ್ತು.  ಆದರೆ ಇದೀಗ 1,400 ಎಕರೆ ಭೂಸ್ವಾಧೀನ ಆಗಿಲ್ಲ. 2,630 ಎಕರೆ ಮಾತ್ರ ಬಿಡಿಎಗೆ ಸಿಕ್ಕಿತ್ತು. ಈ ಬಗ್ಗೆ ಬಿಡಿಎ ಹಿರಿಯ ಎಂಜಿನಿಯರ್‌ ಶಾಂತರಾಜಣ್ಣ ಬಿಡಿಎ ಪರವಾದ ತಮ್ಮ ನಿಲುವು ಪ್ರಕಟಿಸಿದ್ದರು. ಜತೆಗೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಕೋವಿಡ್‌, ಆರ್ಥಿಕ ಮುಗ್ಗಟ್ಟು, ಮಳೆಯಿಂದ ವಿಳಂಬವಾಗಿದೆ. ಮುಂದಿನ ಒಂದು ವರ್ಷದೊಳಗೆ ಮುಗಿಸುವ ಸಾಧ್ಯತೆಯಿದೆ ಎಂದು ಬಿಡಿಎ ಅಧಿಕಾರಿಗಳು ರೇರಾ ಮುಂದೆ ಅಲವತ್ತುಕೊಂಡಿದ್ದರು.

 

ಬಿಡಿಎ ಈಗಾಗಲೇ ಎರಡು ಬಾರಿ ರೇರಾದಿಂದ ಗಡುವು ಪಡೆದಿತ್ತು.  2018 ಮತ್ತು 2020ರಲ್ಲಿ ಕೇವಲ ಶೇ.40ರಷ್ಟು ಮಾತ್ರ ಮೂಲಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿತ್ತು.  ಇದಾದ ನಂತರವೂ ಮತ್ತೊಂದು ವರ್ಷದ ಗಡುವನ್ನು ಬಿಡಿಎ ಕೇಳಿತ್ತು.   ಹೀಗೆಯೇ ಗಡುವು ನೀಡುತ್ತಾ ಹೋದರೆ ಸಾಲ ಮಾಡಿದ ನಿವೇಶನದಾರರ ಸ್ಥಿತಿ ಏನಾಗಬೇಕು, ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆಯ ಕಾರ್ಯದರ್ಶಿ ಸೂರ್ಯಕಿರಣ್‌ ಪ್ರಶ್ನಿಸಿದ್ದರು.

 

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ2,636 ಎಕರೆ ಭೂಮಿ ಸ್ವಾಧೀನ ಮಾಡಿಕೊಂಡು ಮೂಲ ಸೌಕರ್ಯ ಅಭಿವೃದ್ಧಿಗೊಳಿಸಲು ಎಂಜಿನಿಯರಿಂಗ್‌ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಈ ಪ್ರದೇಶಕ್ಕೆ ಶುದ್ಧ ಕುಡಿಯುವ ನೀರು, ಒಳಚರಂಡಿ, ಭೂಗತ ವಿದ್ಯುತ್‌ ಕೇಬಲ್‌, ಮಳೆನೀರು ಕಾಲುವೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ನಿರ್ಮಿಸಬೇಕಿದೆ.

 

ಮೂಲಸೌಕರ್ಯ ಒದಗಿಸುವ ಕಾಮಗಾರಿಯನ್ನು 2015ರಿಂದ ಕೈಗೆತ್ತಿಕೊಂಡರೂ ಅದರ ಲಾಭ ನಿವೇಶನ ಪಡೆದವರಿಗೆ ಇಂದಿಗೂ ಲಭಿಸಿಲ್ಲ. ಕೆಂಪೇಗೌಡ ಬಡಾವಣೆಯಲ್ಲಿ ಮೂಲ ಸೌಕರ್ಯ ಒದಗಿಸುವ ಕಾರ್ಯ ನಿಧಾನಗತಿಯಲ್ಲಿ ಸಾಗಿದ್ದರಿಂದ ಶೀಘ್ರ ಪೂರ್ಣಗೊಳಿಸಲು ಮೇಲ್ವಿಚಾರಣೆ ಮಾಡುವಂತೆ ನಿವೇಶನದಾರರು ರೇರಾ ಮೊರೆ ಹೋಗಿದ್ದನ್ನು ಸ್ಮರಿಸಬಹುದು.

 

ನಾಡಪ್ರಭು ಕೆಂಪೇಗೌಡ ಬಡಾವಣೆಯ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ, ಎಸ್‌ಟಪಿ ಘಟಕಗಳ ನಿರ್ಮಾಣ ಮತ್ತು ಶುದ್ಧೀಕರಿಸಿದ ನೀರು ಸರಬರಾಜು ಕಾಮಗಾರಿಗಳ ಪ್ರಗತಿ ವಿವರಗಳನ್ನು ರೇರಾದ ಪೋರ್ಟಲ್‌ನಲ್ಲಿ 2025ರ ಜುಲೈನಲ್ಲಿ ಅಪ್‌ಲೋಡ್‌ ಮಾಡಲಾಗಿತ್ತು.

 

 

ಈ ಪ್ರಗತಿ ವರದಿ ಪ್ರಕಾರ ಯುಟಿಲಿಟಿ ಡಕ್ಟ್‌ 143.20 ಪ್ರಮಾಣದ ಪೈಕಿ 111.73ನ್ನು ಪೂರ್ಣಗೊಳಿಸಿತ್ತು. ಇನ್ನೂ 31.47ರಷ್ಟು ಬಾಕಿ ಇತ್ತು. ಮ್ಯಾನ್‌ಹೋಲ್ಸ್‌ 5,360 ಗಳ ಪೈಕಿ 3,957ನ್ನು ಮಾತ್ರ ಪೂರ್ಣಗೊಳಿಸಿತ್ತು. ಇನ್ನೂ 1,403.00 ಮ್ಯಾನ್‌ಹೋಲ್‌ಗಳನ್ನು ಪೂರ್ಣಗೊಳಿಸಲು ಬಾಕಿ ಇತ್ತು. ಯುಜಿಡಿ ಪೈಪ್‌ಲೈನ್‌ಗಳನ್ನು 139.27ರ ಕಿ ಮೀ ಪೈಕಿ 102.10ರಷ್ಟನ್ನು ಮಾತ್ರ ಪೂರ್ಣಗೊಳಿಸಿತ್ತು. ಇನ್ನೂ 37.17ರಷ್ಟು ಬಾಕಿ ಇದ್ದವು.

 

 

ಟ್ರಾನ್ಸಿಮಿಷನ್‌ ಲೈನ್‌ಗಳು 14.94 ಕಿ ಮೀ ಗಳ ಪೈಕಿ 11.16 ಕಿಲೋ ಮೀಟರ್‍‌ಷ್ಟೇ ಪೂರ್ಣಗೊಳಿಸಿತ್ತು. ಇನ್ನೂ 3.78 ಕಿ ಮೀ ಬಾಕಿ ಇತ್ತು. ಶುದ್ದ ಕುಡಿಯುವ ನೀರು ಸರಬರಾಜು ಪೈಕಿ 204.86 ಕಿಲೋ ಮೀಟರ್‍‌ ಪೈಕಿ 136.06 ಕಿಲೋ ಮೀಟರ್‍‌ವರೆಗೆ ಮಾತ್ರ ಒದಗಿಸಿತ್ತು.

 

 

ಇನ್ನೂ 68.80 ಕಿಲೋಮೀಟರ್‍‌ ವರೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕಿತ್ತು.

 

 

 

 

ಇದರ ಕಾಮಗಾರಿಯೂ ಇನ್ನೂ ಪ್ರಗತಿಯಲ್ಲಿದೆ.

 

ನೀರನ್ನು ಸಂಸ್ಕರಿಸುವುದಕ್ಕೆ ಸಂಬಂಧಿಸಿದಂತೆ 159.37 ಕಿಲೋ ಮೀಟರ್‍‌ ಪೈಕಿ 102.72 ಕಿಲೋ ಮೀಟರ್‍‌ ಮಾತ್ರ ಪೂರ್ಣಗೊಳಿಸಿತ್ತು.

 

 

ಇನ್ನೂ 102.72 ಕಿಲೋ ಮೀಟರ್‍‌ ಬಾಕಿ ಇತ್ತು. ಇದರ ಕಾಮಗಾರಿಯೂ ಇನ್ನೂ ಪ್ರಗತಿಯಲ್ಲಿರುವುದು ವರದಿಯಿಂದ ಗೊತ್ತಾಗಿದೆ.

 

ನಾಡಪ್ರಭು ಕೆಂಪೇಗೌಡ ಬಡಾವಣೆ ಅಭಿವೃದ್ಧಿ ಕುರಿತು ಬಿಡಿಎ ಅಧ್ಯಕ್ಷ ಎನ್‌ ಎ ಹ್ಯಾರೀಸ್ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರು ಹಲವು ಬಾರಿ, ನಿವೇಶನದಾರರೊಂದಿಗೆ ಸಭೆ ನಡೆಸಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts