ಬಿಲ್‌ಗಳಲ್ಲಿ ಸಹಿಯಿಲ್ಲ, ದಿನಾಂಕವೂ ಇಲ್ಲ, ಬಹುಕೋಟಿ ಕಬಳಿಕೆ; ರಸಗೊಬ್ಬರ ಪೂರೈಕೆಯಲ್ಲಿ ಗೋಲ್ಮಾಲ್‌?

ಬೆಂಗಳೂರು; ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ರಸಗೊಬ್ಬರ ವಿತರಣೆಯಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬ ಗುರುತರವಾದ ಆರೋಪಗಳು ಕೇಳಿ ಬಂದಿವೆ. ಅಧಿಕಾರಿಗಳೊಂದಿಗೆ ಶಾಮೀಲಾಗಿದ್ದಾರೆ ಎನ್ನಲಾಗಿರುವ ರಸಗೊಬ್ಬರ ಸರಬರಾಜುದಾರರು, ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಕೋಟ್ಯಂತರ ರುಪಾಯಿಗಳನ್ನು ಕಬಳಿಸಿದ್ದಾರೆ!

 

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಬೆಳೆಗಳಲ್ಲಿ ಗುಣಮಟ್ಟದ ಉತ್ಪಾದನೆಗೆ ವಿಶೇಷ ಉತ್ತೇಜನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ. 2023-24ನೇ ಸಾಲಿಗೆ ಸಂಬಂಧಿಸಿದಂತೆ ನೀರಿನಲ್ಲಿ ಕರಗುವ ರಸಗೊಬ್ಬರ ವಿತರಣೆ ಮಾಡುವ ಯೋಜನೆಯಲ್ಲಿಯೂ ಅಕ್ರಮ ನಡೆದಿರುವ ಆರೋಪಗಳು ಕೇಳಿ ಬಂದಿವೆ.

 

ಈ ಯೋಜನೆಯಡಿಯಲ್ಲಿನ ಫಲಾನುಭವಿಗಳಿಗೆ ರಸಗೊಬ್ಬರ ವಿತರಣೆ ಮಾಡದೇ ಇದ್ದರೂ ಸಹ ಫಲಾನುಭವಿಗಳ ಹೆಸರಿನಲ್ಲಿ ಬಿಲ್‌ಗಳನ್ನು ಸೃಷ್ಟಿಸಲಾಗಿದೆ. ಈ ಸಂಬಂಧ ಕೆಲವು ಬಿಲ್‌ಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಯಾದಗಿರಿ ಜಿಲ್ಲೆಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಬೆಂಗಳೂರಿನ ವಿನಾಯಕ ಆಗ್ರೋ ಏಜೆನ್ಸಿಗೆ ವಹಿಸಲಾಗಿತ್ತು. ಈ ಏಜೆನ್ಸಿಯು ಯಾವುದೇ ರಸಗೊಬ್ಬರವನ್ನು ವಿತರಣೆ ಮಾಡದೇ ಇದ್ದರೂ ಸಹ ಫಲಾನುಭವಿಗಳ ಹೆಸರಿನಲ್ಲಿ ಬಿಲ್‌ ಸೃಷ್ಟಿಸಿದೆ ಎಂಬ ಗುರುತರವಾದ ಆರೋಪಕ್ಕೆ ಗುರಿಯಾಗಿದೆ.

 

ರಸಗೊಬ್ಬರ ವಿತರಣೆ ಮತ್ತು ಏಜೆನ್ಸಿಗಳಿಗೆ ಪಾವತಿಸುತ್ತಿರುವ ಹಣವು ಕ್ರಮಬದ್ಧವಾಗಿದೆಯೇ, ಏಜೆನ್ಸಿಗಳು ಸಲ್ಲಿಸಿರುವ ಬಿಲ್‌ಗಳು ನೈಜತೆಯಿಂದ ಕೂಡಿವೆಯೇ ಎಂಬ ಕುರಿತು ತೋಟಗಾರಿಕೆ ಇಲಾಖೆ ನಿರ್ದೇಶಕರು, ಸ್ಥಳೀಯ ಹಂತದ ಅಧಿಕಾರಿ ವರ್ಗವು ಪರಿಶೀಲನೆಯನ್ನೇ ಮಾಡುತ್ತಿಲ್ಲ. ಮೇಲಾಗಿ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್‌ ಅವರೂ ಸಹ ಈ ಬಗ್ಗೆ ಆಸಕ್ತಿಯನ್ನು ವಹಿಸುತ್ತಿಲ್ಲ ಎಂದು ತಿಳಿದು ಬಂದಿದೆ.

 

ಟೆಂಡರ್ ನಡೆಸಲಿಲ್ಲವೇಕೆ?

 

ರಾಷ್ಟ್ರೀಯ ಕೃಷಿ ವಿಕಾಸ್‌ ಯೋಜನೆಯಡಿಯಲ್ಲಿ ರಸಗೊಬ್ಬರ ವಿತರಣೆ ಮಾಡಲು ತೋಟಗಾರಿಕೆ ಇಲಾಖೆಯು ಟೆಂಡರ್‍‌ ಕರೆದಿಲ್ಲ. ಬದಲಿಗೆ 4 ಜಿ ವಿನಾಯಿತಿ ಪಡೆದಿದೆ. ಟೆಂಡರ್ ಕರೆಯಲು ಸಾಕಷ್ಟು ಅವಕಾಶಗಳು ಇದ್ದರೂ ಸಹ 4 ಜಿ ವಿನಾಯಿತಿ ಪಡೆದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

 

ಫಲಾನುಭವಿಗಳಿಗೆ ಗೊಬ್ಬರ ವಿತರಣೆ ಆಗಿದೆಯೆ?

 

4 ಜಿ ವಿನಾಯಿತಿ ಪಡೆದಿದ್ದ ತೋಟಗಾರಿಕೆ ಇಲಾಖೆಯು ರಸಗೊಬ್ಬರ ವಿತರಣೆಯನ್ನು ವಿನಾಯಕ ಆಗ್ರೋ ಏಜೆನ್ಸಿಸ್‌ಗೆ ವಹಿಸಿತ್ತು. ಆದರೆ ವಾಸ್ತವದಲ್ಲಿ ಈ ಏಜೆನ್ಸಿಯು ಫಲಾನುಭವಿ ರೈತರಿಗೆ ರಸಗೊಬ್ಬರ ವಿತರಣೆ ಮಾಡಿಲ್ಲ ಎಂಬ ಆಪಾದನೆ ಕೇಳಿ ಬಂದಿದೆ. ಆದರೆ ಫಲಾನುಭವಿಗಳ ಹೆಸರಿನಲ್ಲಿ ಬಿಲ್‌ಗಳನ್ನು ತಯಾರಿಸಿ ಹಣ ಬಿಡುಗಡೆ ಮಾಡಲಾಗಿದೆ ಎಂಬ ಆರೋಪಗಳು ಕೇಳೀ ಬಂದಿವೆ.

 

ವಿನಾಯಕ ಆಗ್ರೋ ಏಜೆನ್ಸಿಸ್ 2024ರ ಮಾರ್ಚ್‌ನ ವಿವಿಧ ದಿನಗಳಂದು ನೀಡಿರುವ ಬಿಲ್‌ಗಳ ಬಗ್ಗೆಯೇ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ.

 

2024 ಮಾರ್ಚ್‌ 12ರಂದು ನೀಡಿದ್ದ ಬಿಲ್‌ನಲ್ಲಿ (ಬಿಲ್ ನಂ 413) 8,64,000 ರು ನಮೂದಿಸಲಾಗಿದೆ. ಆದರೆ ಬಿಲ್‌ನಲ್ಲಿ ಸರಬರಾಜುದಾರರ ರಿಜಿಸ್ಟ್ರೇಷನ್‌ ಸಂಖ್ಯೆಯೇ ಇಲ್ಲ. ಅಲ್ಲದೇ ಇದಕ್ಕೆ ಇ ವೇ ಬಿಲ್‌ ಕೂಡ ಇಲ್ಲ ಎಂದು ಗೊತ್ತಾಗಿದೆ.

 

 

2024ರ ಮಾರ್ಚ್‌ 12ರಂದು ನೀಡಿರುವ ಬಿಲ್‌ (ನಂ 414)ರಲ್ಲಿ 3,74,000 ರು., ಇದೇ ಬಿಲ್‌ ಸಂಖ್ಯೆ 414ರಲ್ಲಿ 2024ರ ಮಾರ್ಚ್‌ 1ರಂದು 94,000 ರು ಎಂದು ನಮೂದಿಸಲಾಗಿದೆ. ಬಿಲ್‌ನಲ್ಲಿ ಸರಿಯಾದ ದಿನಾಂಕವನ್ನು ನಮೂದಿಸಿಲ್ಲ. ಹಲವು ಬಿಲ್‌ಗಳಲ್ಲಿ ಸರಬರಾಜುದಾರರ ಸಹಿಯೇ ಇಲ್ಲ. ಹಾಗೆಯೇ ಬಿಲ್‌ಗಳಲ್ಲಿ ನಮೂದಿಸಿರುವ ದಿನಾಂಕಗಳಲ್ಲೂ ಹಲವು ವ್ಯತ್ಯಾಸಗಳು ಕಂಡು ಬಂದಿವೆ.

 

 

ಬಿಲ್‌ ನಂ 391ರಲ್ಲಿ 3,33,000 ರು ನಮೂದಿಸಲಾಗಿದೆ. ರಸಗೊಬ್ಬರದ 87 ಬ್ಯಾಗ್‌ಗಳನ್ನು ವಿತರಿಸಲಾಗಿದೆ ಎಂದು ಹೇಳಲಾಗಿದೆ.

 

 

ಬಿಲ್‌ ನಂ 390ರಲ್ಲಿ 87, 480 ರು.,

 

 

ಬಿಲ್‌ ನಂ 392ರಲ್ಲಿ 1,49,800 ರು ಎಂದು ನಮೂದಿಸಲಾಗಿದೆ. 37-45 ಬ್ಯಾಗ್‌ಗಳನ್ನು ವಿತರಿಸಲಾಗಿದೆ ಎಂದು ತೋರಿಸಲಾಗಿದೆ.

 

 

ಬಿಲ್‌ ನಂ 116ರಲ್ಲಿ 65, 909, ಬಿಲ್‌ ನಂ 317ರಲ್ಲಿ 67, 200 ರು ಎಂದು ನಮೂದಿಸಲಾಗಿದೆ. ಆದರೆ ಈ ಬಿಲ್‌ಗಳಲ್ಲಿ ದಿನಾಂಕವನ್ನೇ ನಮೂದಿಸಿಲ್ಲ. ಅಲ್ಲದೇ ಸರಬರಾಜುದಾರರ ಸಹಿ ಕೂಡ ಇಲ್ಲದಿರುವುದು ಕಂಡು ಬಂದಿದೆ.

 

ಅದೇ ರೀತಿ ಬಿಲ್‌ ನಂ 112, ಬಿಲ್‌ ನಂ 115ರಲ್ಲಿಯೂ ದಿನಾಂಕ ನಮೂದಿಸಿಲ್ಲ ಮತ್ತು ಬಿಲ್‌ ನೀಡಿದವರ ಸಹಿ ಇಲ್ಲ.

 

 

113, 115, 116, 117  ರಲ್ಲಿಯೂ ಸಹ ದಿನಾಂಕವಿಲ್ಲ ಮತ್ತು ಸರಬರಾಜುದಾರರ ಸಹಿ ಕಂಡು ಬಂದಿಲ್ಲ.

 

 

 

 

 

 

ಬಿಲ್‌ ನಂಬರ್‍‌ 413ರಲ್ಲಿ ದಿನಾಂಕವನ್ನು ನಮೂದಿಸಲಾಗಿದೆ. ಆದರೆ ಬಿಲ್‌ನಲ್ಲಿ ಸರಬರಾಜುದಾರರ ಸಹಿಯೇ ಇಲ್ಲ.

 

 

ಮತ್ತೊಂದು ಸಂಗತಿ ಎಂದರೇ 4 ಜಿ ವಿನಾಯಿತಿ ಪಡೆದಿರುವ ವಿನಾಯಕ ಆಗ್ರೋ ಏಜೆನ್ಸೀಸ್‌ ಮತ್ತು ಸನ್ನತಿ ಏಜನ್ಸಿಯು ಸ್ವಂತವಾಗಿ ಯಾವುದೇ ರಸಗೊಬ್ಬರವಾಗಲೀ ಪ್ಲಾಟ್‌ ಪ್ರೊಟೆಕ್ಷನ್‌ ನ ಸರಕನ್ನು ಉತ್ಪಾದಿಸುವುದಿಲ್ಲ. ಹಾಗೂ ಯಾವುದೇ ರೀತಿಯ ಬೀಜ ಉತ್ಪಾದನೆ ಮಾಡುವುದಿಲ್ಲ. ಆದರೂ ಸಹ ಟೆಂಡರ್ ಕರೆಯದೇ 4 ಜಿ ವಿನಾಯಿತಿಯಲ್ಲಿ ಈ ಏಜೆನ್ಸಿಗಳಿಗೇ ರಸಗೊಬ್ಬರ ಪೂರೈಕೆ, ಬೀಜ ಪೂರೈಕೆ ಹಾಗೂ ಮೋಹಕ ಬಲೆಗಳ ಪೂರೈಕೆಗೆ ಅನುಮತಿ ನೀಡಿರುವುದು ಸಹ ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

 

ಹಾಗೆಯೇ ಈ ಕಂಪನಿಗಳು ರಸಗೊಬ್ಬರವನ್ನು ಉತ್ಪಾದನೆ ಮಾಡುವುದಿಲ್ಲ ಎಂದಾದರೇ ಬೇರೆ ಕಂಪನಿಗಳಿಂದಲೇ ರಸಗೊಬ್ಬರವನ್ನು ಖರೀದಿಸಬೇಕು. ಈ ಸಂಸ್ಥೆಗಳು ಅಥವಾ ಕಂಪನಿಗಳು ತೋಟಗಾರಿಕೆ ಇಲಾಖೆಗೆ ನೀಡಿದ ಬಿಲ್‌ಗಳಿಗೆ ಅನುಸಾರವಾಗಿ ಬೇರೆ ಕಂಪನಿಯಿಂದ ರಸಗೊಬ್ಬರ ಖರೀದಿಸಿರಬೇಕು. ಆಗ ಮಾತ್ರ ಈ ಕಂಪನಿಗಳು, ಸಂಸ್ಥೆಗಳು ಪೂರೈಕೆ ಮಾಡಲು ಸಾಧ್ಯ ಎನ್ನುತ್ತಾರೆ ಅಧಿಕಾರಿಯೊಬ್ಬರು.

 

ಈ ಯೋಜನೆ ಮಾರ್ಗಸೂಚಿ ಪ್ರಕಾರ ಸಾಮಾನ್ಯ ವರ್ಗದ ರೈತರಿಗೆ ಶೇ. 40ರಷ್ಟು ಸಬ್ಸಿಡಿ ಸಿಗಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 50ರಷ್ಟು ಸಬ್ಸಿಡಿ ನೀಡಬೇಕು. ಎಂಪ್ಯಾನಲ್‌ ಆಗಿರುವ ಕಂಪನಿಗಳಿಂದ ರೈತರು ರಸಗೊಬ್ಬರ ಖರೀದಿಸಿದರೇ ಸರ್ಕಾರಿ ಪಾಲುದಾರಿಕೆ ಹೊರತುಪಡಿಸಿ ಉಳಿದ ಹಣವನ್ನು ಫಲಾನುಭವಿಗಳು ಈ ಸಂಸ್ಥೆಗೆ ಪಾವತಿಸಬೇಕು. ಆದರೆ ಫಲಾನುಭವಿ ರೈತರು ತಮ್ಮ ಸ್ವಂತ ಹಣವನ್ನು ಭರಿಸಿರುವ ಬಗ್ಗೆ ಯಾವುದೇ ದಾಖಲೆಗಳು ಕಂಡು ಬಂದಿಲ್ಲ. ರೈತರು ಹಣ ಪಾವತಿಸದಿದ್ದರೇ ಏಜೆನ್ಸಿಗಳು ಹೇಗೆ ರಸಗೊಬ್ಬರವನ್ನು ಪೂರೈಕೆ ಮಾಡಿದರು ಎಂಬ ಪ್ರಶ್ನೆಯೂ ಎದುರಾಗಿದೆ.

 

ಎಂಪ್ಯಾನಲ್‌ ಆಗಿರುವ ಕಂಪನಿಗಳಿಂದಲೇ ರಸಗೊಬ್ಬರ ಖರೀದಿಸಲು ಫಲಾನುಭವಿ ರೈತರಿಗೆ ಮುಕ್ತ ಅವಕಾಶವಿದೆ. ಎಂಪ್ಯಾನಲ್‌ ಆಗಿರುವ ಪೈಕಿ ಬಹುತೇಕ ಕಂಪನಿಗಳು ಬೆಂಗಳೂರು ನಗರದಲ್ಲಿವೆ. ಹೀಗಾಗಿ ನೂರಾರು ಕಿಲೋ ಮೀಟರ್ ದೂರದ ಪ್ರದೇಶಗಳಲ್ಲಿರುವ ಫಲಾನುಭವಿ ರೈತರು ರಸಗೊಬ್ಬರ ಖರೀದಿಗಾಗಿ ಬೆಂಗಳೂರು ನಗರಕ್ಕೆ ಹೋಗಲು ಸಾಧ್ಯವೇ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಫಲಾನುಭವಿ ರೈತರೊಬ್ಬರು.

 

‘ಕೋಟ್ಯಾಂತರ ರೂಪಾಯಿ ಮೌಲ್ಯದ ವಿತರಣೆಯಾಗಿ ದಾಖಲೆಗಳಲ್ಲಿ ಉಲ್ಲೇಖವವಾಗಿದೆ. ವಾಸ್ತವದಲ್ಲಿ ಯಾವುದೇ ವಿತರಣೆ ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಎಲ್ಲಾ ಬಿಲ್‌ಗಳು ಮತ್ತು ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಅಕ್ರಮಗಳು ನಡೆದಿವೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದರಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿರುವುದು ಸಹ ಸ್ಪಷ್ಟವಾಗಿದೆ. ರೈತರ ಹೆಸರು ಪಟ್ಟಿ ಮತ್ತು ಹಣಕಾಸು ದಾಖಲೆಗಳನ್ನು ಪರಿಶೀಲಿಸಿದರೆ ಮತ್ತಷ್ಟು ಅಕ್ರಮಗಳು ಹೊರಬರಲಿವೆ,’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು.

 

ದೊಡ್ಡ ಪ್ರಮಾಣದ ರಾಸಾಯನಿಕ ಗೊಬ್ಬರಗಳನ್ನು ಬೆಳೆಗಳಿಗೆ ಕೊಡುವುದನ್ನು ಕಡಿಮೆ ಮಾಡುವ ಮೂಲಕ ಮಣ್ಣಿನ ಸಾರಾಂಶವನ್ನು ಕಾಪಾಡುವುದು. ಹಾಗೆಯೇ ತೋಟಗಾರಿಕೆ ಉತ್ಪನ್ನಗಳ ವೆಚ್ಚವನ್ನು ಕಡಿತಗೊಳಿಸುವುದು ರಾಷ್ಟ್ರೀಯ ಕೃಷಿ ವಿಕಾಸ್‌  ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.

 

ಅಧಿಕ ಪೋಷಕಾಂಶ ಕೇಂದ್ರೀಕೃತ ನೀರಿನಲ್ಲಿ ಕರಗುವ ರಸಗೊಬ್ಬರುಗಳು ಹಾಗೂ ಲಘು ಪೋಷಕಾಂಶಗಳ ಮಿಶ್ರಣಗಳ ಬಳಕೆಯಿಂದ ಗುಣಮಟ್ಟ ಉತ್ಪಾದನೆ ಹಾಗೂ ಆದಾಯವನ್ನು ಹೆಚ್ಚಿಸುವುದು. ಹಣ್ಣಿನ ಗಿಡಗಳ ಮೇಲಾವರಣ ನಿರ್ವಹಣೆಯಿಂದ ಉತ್ಪಾದಕತೆ, ಗುಣಮಟ್ಟ ಹಾಗೂ ಆದಾಯವನ್ನು ಹೆಚ್ಚಿಸಲಿದೆ.

 

ನೀರಿನಲ್ಲಿ ಕರಗುವ ರಸಗೊಬ್ಬರ ಘಟಕಕ್ಕೆ, ಹಸಿರು ಮನೆ, ಸೌರ ಶಕ್ತಿ ಆಧಾರಿತ ಕೃಷಿ ಪಂಪ್‌ ಸೆಟ್‌ ಅಳವಡಿಕೆ, ಸ್ವಯಂ ಚಾಲಿತ ಹವಾಮಾನ ಮುನ್ಸೂಚನಾ ಘಟಕ, ತೆರೆದ ವಾತಾವರಣದಲ್ಲಿ ಬೆಳೆಯುವ ಬೆಳೆಗಳಿಗೆ, ಲಘು ಪೋಷಕಾಂಶಗಳ ಮಿಶ್ರಣ ಹಾಗೂ ಬೆಳೆ ಸ್ಪೆಷಲ್‌ ಗಳಿಗೆ, ಸುರಕ್ಷಿತ ಬೇಸಾಯದ ಬೆಳೆಗಳಿಗೆ ಸಹಾಯ ಧನ ನೀಡಲಿದೆ.

 

ನೀರಿನಲ್ಲಿ ಕರಗುವ ರಸಗೊಬ್ಬರ ಘಟಕಕ್ಕೆ ಶೇ. 25ರಂತೆ 25,000 ರು ಸಹಾಯಧನ ನಿಗದಿಪಡಿಸಿದೆ. ಸಂರಕ್ಷಿತ ಬೇಸಾಯದ ಬೆಳೆಗಳಿಗೆ ಶೇ. 25ರಂತೆ 12,500 ರು., ತೆರೆದ ವಾತಾವರಣದಲ್ಲಿ ಬೆಳೆಯುವ ಬೆಳೆಗಳಿಗೆ ಪ್ರತಿ ಘಟಕಕ್ಕೆ 50,000 ರು., ಲಘು ಪೋಷಕಾಂಶಗಳ ಮಿಶ್ರಣ , ಬೆಳೆ ಸ್ಪೆಷಲ್‌ ಸಹಾಯ ಧನವು ಪ್ರತಿ ಘಟಕಕ್ಕೆ 8,000 ರು, ಶೇ. 25ರಂತೆ 2,000 ರು., ಬೆಳೆ, ಹಣ್ಣು, ಹೂವು ಹೊದಿಕೆಗಳಿಗೆ ಸಹಾಯಧನವು ಪ್ರತಿ ಹೆಕ್ಟೇರ್‍‌ಗೆ 52,000 ರು., ಶೇ. 25ರಂತೆ 13,000 ರು ಸಹಾಯಧನ, ಹಣ್ಣಿನ ಗಿಡಗಳ ಮೇಲಾವರಣ ನಿರ್ವಹಣೆಗೆ ಪ್ರತಿ ಹೆಕ್ಟೇರ್‍‌ಗೆ 52,000 ರು, ಶೇ. 25ರಂತೆ 10,000 ರು., ಮೋಹಕ ಕೀಟಬಲೆ, ಜಿಗುಟಾದ ಬಲೆ, ಸೌರ ಶಕ್ತಿ ಆಧಾರಿತ ಕೃತಿಕ ಬುದ್ದಿಯ ಕೀಟ ನಿಯಂತ್ರಕ ಬಲೆಗಳಿಗೆ ಶೇ. 25ರಂತೆ 1,250 ರು, ಮತ್ತು 3,750 ರು ಸಹಾಯ ಧನ ಸಿಗಲಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

 

3 ಹೆಚ್‌ಪಿಯ ಸೋಲಾರ್ ಪಂಪ್‌ ಸೆಟ್‌ಗಳಿಗೆ ಶೇ. 50ರಂತೆ 1 ಲಕ್ಷ ಹಾಗೂ ಶೆ. 50ರಂತೆ 1.50 ಲಕ್ಷ ರು ಗಳಿಗೆ ಮಿತಿಗೊಳಿಸಿ ಸಹಾಯ ಧನ ನೀಡಲಿದೆ. ಸ್ವಯಂ ಚಾಲಿತ ಹವಾಮಾನ ಮುನ್ಸೂಚನಾ ಘಟಕಕ್ಕೆ ಪ್ರತಿ ಫಲಾನುಭವಿಗೆ ಶೇ. 50ರಂತೆ 20,000 ರು.ಗಳನ್ನು ಪ್ರತಿ ಫಲಾನುಭವಿಗೆ ನೀಡಲಿದೆ.

Your generous support will help us remain independent and work without fear.

Latest News

Related Posts