ಗಂಗಾಕಲ್ಯಾಣ; ಬಿಜೆಪಿ ಅವಧಿಯ ಗುತ್ತಿಗೆದಾರರೇ ಮುಂದುವರಿಕೆ, ಚರ್ಚೆಗೆ ಗ್ರಾಸವಾದ ತೀರ್ಮಾನ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗಂಗಾ ಕಲ್ಯಾಣ ಯೋಜನೆಗೆ  ಎಂಪ್ಯಾನಲ್‌ ಆಗಿದ್ದ ಗುತ್ತಿಗೆದಾರರಿಗೆ ಹಣ ಕೊಟ್ಟಿದ್ದರೂ ಸಹ ಫಲಾನುಭವಿಗಳಿಗೆ ಗುಣಮಟ್ಟದ ಮೋಟಾರ್‍‌ ವಿತರಣೆ ಆಗಿರಲಿಲ್ಲ ಎಂಬ ಆರೋಪ ಕೇಳಿಬಂದಿದ್ದರೂ ಸಹ  ಬಿಜೆಪಿ ಸರ್ಕಾರದಲ್ಲಿ  ಎಂಪ್ಯಾನಲ್ ಮಾಡಿಕೊಂಡಿದ್ದ ಗುತ್ತಿಗೆದಾರರನ್ನೇ ಮುಂದಿನ 2 ವರ್ಷಗಳವರೆಗೆ ಮುಂದುವರೆಸಲು ಕಾಂಗ್ರೆಸ್‌ ಸರ್ಕಾರವು ತೀರ್ಮಾನಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊಳವೆ ಬಾವಿ ಕೊರೆಸಲು ನಿಗದಿಪಡಿಸಿದ್ದ ಗುರಿಯನ್ನು 2 ವರ್ಷಗಳಾದರೂ ಸರ್ಕಾರವು ತಲುಪಿಲ್ಲ. ನಿಗದಿಪಡಿಸಿರುವ ಮತ್ತು ನಿಗದಿಪಡಿಸಬೇಕಾದ ಕೊಳವೆ ಬಾವಿಗಳನ್ನು ಕೊರೆಸಲು ಇನ್ನೂ ಬಾಕಿ ಇದೆ.  ಹೀಗಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಂಪ್ಯಾನಲ್ ಮಾಡಿಕೊಂಡಿದ್ದ ಗುತ್ತಿಗೆದಾರರ ಅವಧಿಯನ್ನು 2027ರ ಜೂನ್‌ ವರೆಗೂ ವಿಸ್ತರಿಸಲು ಸಚಿವ ಸಂಪುಟವು ಈಚೆಗಷ್ಟೇ ತೀರ್ಮಾನಿಸಿತ್ತು.

 

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಬಲವಾಗಿ  ಆರೋಪಿಸಿದ್ದ ಕಾಂಗ್ರೆಸ್‌, ಇದೀಗ ಹೊಸದಾಗಿ ಎಂಪ್ಯಾನಲ್ ಮಾಡಿಕೊಳ್ಳದೇ ಹಿಂದಿನ ಸರ್ಕಾರದಲ್ಲಿಲ ಎಂಪ್ಯಾನಲ್‌ ಆಗಿರುವ ಗುತ್ತಿಗೆದಾರರ ಅವಧಿಯನ್ನೇ ಮುಂದುವರೆಸಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

 

ಗಂಗಾ ಕಲ್ಯಾಣ ಯೋಜನೆಯ ಗುತ್ತಿಗೆದಾರರ ಅವಧಿಯನ್ನು ಮುಂದಿನ 2 ವರ್ಷಗಳಿಗೆ ಅಂದರೇ 2027ನೇ ಜೂನ್‌ ವರೆಗೆ ವಿಸ್ತರಿಸುವ ಸಂಬಂಧ ಸಮಾಜ ಕಲ್ಯಾಣ ಇಲಾಖೆಯು ಸಚಿವ ಸಂಪುಟಕ್ಕೆ ಕಡತ ಮಂಡಿಸಿತ್ತು. ಕಡತದ ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ವಿಶೇಷವೆಂದರೇ ರಾಜ್ಯದ 77 ವಿಧಾನಸಭೆ ಕ್ಷೇತ್ರಗಳಲ್ಲಿ ಈ ಯೋಜನೆಗೆ ಫಲಾನುಭವಿಗಳನ್ನೂ ಆಯ್ಕೆ ಮಾಡಿಲ್ಲ. ಅಲ್ಲದೇ ಇದೇ ಯೋಜನೆಯನ್ನು ಅನುಷ್ಠಾನಗೊಳಿಸಿರುವ ವಿವಿಧ ಸಮುದಾಯ ಅಭಿವೃದ್ಧಿ ನಿಗಮಗಳೂ ಫಲಾನುಭವಿಗಳನ್ನು ಆಯ್ಕೆ ಮಾಡಿಲ್ಲ. ಮತ್ತು, ಕೊಳವೆ ಬಾವಿಗಳ ಕೊರೆಯುವುದು ಮತ್ತು ಪಂಪ್‌ಸೆಟ್‌ ಸರಬರಾಜು ಮಾಡಿ ವಿದ್ಯುದ್ದೀಕರಣ ಮಾಡಲು ಅನುದಾನವಿದ್ದರೂ ಸಹ ಹೆಚ್ಚುವರಿ ಅನುದಾನ ಮಂಜೂರಾತಿಗೆ ಆರ್ಥಿಕ ಇಲಾಖೆಗೆ ಮೊರೆ ಇಟ್ಟಿದೆ.  ಹೀಗಾಗಿ ಕಳೆದ 2 ವರ್ಷಗಳಿಂದಲೂ ಗಂಗಾ ಕಲ್ಯಾಣ ಯೋಜನೆಯು ಅನುಷ್ಠಾನದಲ್ಲಿ ಮುಗ್ಗುರಿಸಿ ಬಿದ್ದಿದೆ.

 

ಗಂಗಾ ಕಲ್ಯಾಣ ಯೋಜನೆಯ ಗುತ್ತಿಗೆದಾರರ ಅವಧಿ ವಿಸ್ತರಣೆ ಸಂಬಂಧಿಸಿದಂತೆ ಅಕ್ಟೋಬರ್‍‌ನಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚಿಸಲಾಗಿತ್ತು. ಈ ವೇಳೆ ಸಚಿವ ಮಹದೇವಪ್ಪ ಮತ್ತು ಕೆ ಜೆ ಜಾರ್ಜ್‌ ನಡುವೆ ಮಾತಿನ ಚಕಮಕಿ ನಡೆದಿತ್ತು.

 

ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳ ಅಧೀನದಲ್ಲಿರುವ ನಿಗಮಗಳ ಮೂಲಕ ಗಂಗಾ ಕಲ್ಯಾಣ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಣ್ಣ, ಅತೀ ಸಣ್ಣ ರೈತರಿಗೆ ಕೊಳವೆ ಬಾವಿಗಳನ್ನು ಕೊರೆಸಲಾಗುತ್ತಿದೆ. ಈ ಕೊಳವೆಬಾವಿಗಳಿಗೆ ನೀರು ಸರಬರಾಜು ಮಾಡಲು ಪಂಪ್‌ಸೆಟ್‌ಗಳ ಸರಬರಾಜು ಮತ್ತು ವಿದ್ಯುದ್ದೀಕರಣ ಮಾಡಿ ನೀರಾವರಿ ಸೌಲಭ್ಯ ಒದಗಿಸುತ್ತಿದೆ.

 

ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನು ಕೊರೆಯುವ ಹಾಗೂ ಪಂಪ್‌ ಸೆಟ್‌ಗಳನ್ನು ಸರಬರಾಜು ಮಾಡಲು 2022ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು  ಗುತ್ತಿಗೆದಾರರನ್ನು ಜಿಲ್ಲಾವಾರು ಎಂಪ್ಯಾನಲ್ ಮಾಡಿಕೊಂಡಿತ್ತು. ಒಟ್ಟು 55 ಕೊಳವೆ ಬಾವಿಗಳನ್ನು ಕೊರೆಯಲು ಮತ್ತು 18 ಪಂಪ್‌ಸೆಟ್‌ ಸರಬರಾಜು ಮಾಡಲು ಗುತ್ತಿಗೆದಾರರನ್ನು ಆಯ್ಕೆ ಮಾಡಿತ್ತು. ಈ ಗುತ್ತಿಗೆದಾರರಿಗೆ 2023-24ನೇ ಸಾಲಿನ ಕೊಳವೆಬಾವಿ ಕೊರೆಯಲು ಗುರಿಗಳನ್ನು ನಿಡಿತ್ತು. ಮತ್ತು ಅದಕ್ಕೆ ಮುಂಚೆ ಕೊರೆಯಲು ಬಾಕಿ ಇರುವ ಕೊಳವೆಬಾವಿಗಳು ಸೇರಿದಂತೆ ಎಲ್ಲಾ ನಿಗಮಗಳಿಂದ ಕೊಳವೆಬಾವಿಗಳನ್ನು ಕೊರೆಯಲು ಕಾರ್ಯಾದೇಶ ನೀಡಿತ್ತು.

 

 

ಅದೇ ರೀತಿ ಕೊರೆಯಲಾಗಿದ್ದ ಕೊಳವೆಬಾವಿಗಳಿಗೆ ಪಂಪ್‌ಸೆಟ್‌ಗಳನ್ನು ಸರಬರಾಜು ಮಾಡಲು ಸಹ ಕಾರ್ಯಾದೇಶ ನೀಡಲಾಗಿತ್ತು.

 

2 ವರ್ಷಗಳಾದರೂ ತಲುಪದ ಗುರಿ

 

2024-25 ಮತ್ತು 2025-26ನೇ ಸಾಲಿನಲ್ಲಿ ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಕೊಳವೆ ಬಾವಿಗಳನ್ನು ಕೊರೆಯಲು ಗುರಿ ನಿಗದಿಪಡಿಸಿತ್ತು. ಆದರೆ 2 ವರ್ಷಗಳಿಂದಲೂ ಕೊಳವೆ ಬಾವಿಗಳನ್ನು ಕೊರೆದಿಲ್ಲ. ಕೆಲವು ವಿಧಾನಸಭೆ ಕ್ಷೇತ್ರಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವುದು ಸಹ ಬಾಕಿ ಇದೆ. ಡಾ ಬಿ ಆರ್‍‌ ಅಂಬೇಡ್ಕರ್‍‌ ಅಭಿವೃದ್ಧಿ ನಿಗಮದಲ್ಲಿ 2024-25ನೇ ಸಾಲಿಗೆ ಸಂಬಂಧಿಸಿದಂತೆ 77 ವಿಧಾನಸಭೆ ಕ್ಷೇತ್ರಗಳಲ್ಲಿಯೂ ಸಹ ಫಲಾನುಭವಿಗಳ ಆಯ್ಕೆಯೇ ಆಗಿಲ್ಲ. ಅದೇ ರೀತಿ ಇತರೆ ಸಮುದಾಯ ಅಭಿವೃದ್ಧಿ ನಿಗಮಗಳಲ್ಲಿಯೂ ಫಲಾನುಭವಿಗಳ ಆಯ್ಕೆಯಾಗಿಲ್ಲ ಎಂಬುದು ಸಚಿವ ಸಂಪುಟಕ್ಕೆ ಮಂಡಿಸಿದ್ದ ಕಡತದ ರಹಸ್ಯ ಹಾಳೆಗಳಿಂದ ಗೊತ್ತಾಗಿದೆ.

 

 

 

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ಕೂಡ ನಡೆದಿತ್ತು. ಇದಾದ ನಂತರ 2025ರ ಅಕ್ಟೋಬರ್‍‌ 28ರಂದು ಸಮಾಜ ಕಲ್ಯಾಣ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಅಕ್ಟೋಬರ್‍‌ 31ರೊಳಗೆ ಸಂಬಂಧಪಟ್ಟ ವಿಧಾನಸಭೆ ಕ್ಷೇತ್ರಗಳ ಶಾಸಕರು ಫಲಾನುಭವಿಗಳನ್ನು ಆಯ್ಕೆ ಮಾಡದೇ ಇದ್ದಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿಗಳು ಪೂರ್ಣಗೊಳಿಸಬೇಕು ಎಂದು ಸೂಚಿಸಿದ್ದರು.

 

ಗುತ್ತಿಗೆದಾರರಿಗೆ ಬೇಕಿದೆಯೇ ಹೆಚ್ಚಿನ ಕಾಲಾವಕಾಶ?

 

ಈ ಯೋಜನೆಯಡಿ ಹೊಸ ಗುತ್ತಿಗೆದಾರರನ್ನು ಎಂಪ್ಯಾನಲ್ ಮಾಡಿಕೊಳ್ಳಲು ಹೆಚ್ಚಿನ ಕಾಲಾವಕಾಶ ಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯು ಪ್ರತಿಪಾದಿಸಿದೆ. 2024-25 ಮತ್ತು 2025-26ನೇ ಸಾಲಿಗೆ ಸಂಬಂಧಿಸಿದಂತೆ ಯೋಜನೆಯ ಅನುಷ್ಠಾನಗೊಳಿಸಲು 2022-23ನೇ ಸಾಲಿನಲ್ಲಿ ಎಂಪ್ಯಾನಲ್ ಮಾಡಿಕೊಂಡಿದ್ದ ಗುತ್ತಿಗೆದಾರರನ್ನೇ ಮುಂದುವರೆಸಲು ತೀರ್ಮಾನಿಸಿದೆ. 2027ರ ಜೂನ್‌ವರೆಗೆ ವಿಸ್ತರಿಸಲು ಶೀಘ್ರದಲ್ಲೇ ಆದೇಶ ಹೊರಡಿಸಲಿದೆ ಎಂದು ತಿಳಿದು ಬಂದಿದೆ.

 

 

ಆಯ್ಕೆ ಮಾಡದಿದ್ದಲ್ಲಿ ಕೊಳವೆ ಬಾವಿ ಕೊರೆಯುವುದು ಕಷ್ಟ

 

ಫಲಾನುಭವಿಗಳನ್ನು ಆಯ್ಕೆ ಮಾಡದಿದ್ದಲ್ಲಿ ಕೊಳವೆ ಬಾವಿಗಳನ್ನು ಕೊರೆಯುವುದೂ ಸಹ ಕಷ್ಟವಾಗುತ್ತದೆ. ಮತ್ತು ಅನುಷ್ಠಾನದಲ್ಲಿ ವಿಳಂಬವಾಗಿ ಪ್ರಗತಿ ಸಾಧಿಸುವುದು ಕಷ್ಟ ಸಾಧ್ಯವಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆಯು ಅಳಲು ವ್ಯಕ್ತಪಡಿಸಿದೆ. ಹೀಗಾಗಿ 2022-23ನೇ ಸಾಲಿನಲ್ಲಿ ಎಂಪ್ಯಾನಲ್‌ ಮಾಡಿಕೊಂಡಿರುವ ಗುತ್ತಿಗೆದಾರರನ್ನೇ 2027ರ ಜೂನ್‌ವರೆಗೆ ಮುಂದುವರೆಸುವ ಕರಾರು ಒಪ್ಪಂದ ಮಾಡಿಕೊಳ್ಳಬೇಕು ಎಂದ ಸಮರ್ಥಿಸಿಕೊಂಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

 

ಬಿಲ್‌ಗಳ ಪಾವತಿ ಕತೆ ಏನು?

 

ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆ ಬಾವಿಗಳಿಗೆ ಮತ್ತು ಸರಬರಾಜು ಮಾಡಲಾದ ಪಂಪ್‌ ಸೆಟ್‌ಗಳ ಬಿಲ್‌ಗಳ ಪಾವತಿಯನ್ನು ಜಿಲ್ಲಾಮಟ್ಟದಲ್ಲಿ ಪರಿಶೀಲಿಸಲು ಉದ್ದೇಶಿಸಿತ್ತು. ಆದರೀಗ ಈ ಪ್ರಕ್ರಿಯೆಯನ್ನು ಕೈಬಿಡಬೇಕು ಸಮಾಜ ಕಲ್ಯಾಣ ಇಲಾಖೆಯು ಮಾಡಿದ್ದ ಪ್ರಸ್ತಾವವನ್ನು ಆರ್ಥಿಕ ಇಲಾಖೆಯು ಸಹಮತಿಸಿದೆ.

 

ಡಾ ಬಿ ಆರ್ ಅಂಬೇಡ್ಕರ್‍‌ ಅಭಿವೃದ್ದಿ ನಿಗಮವೂ ಸೇರಿದಂತೆ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳು ಅನುಷ್ಠಾನಗೊಳಿಸಿದ್ದ ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಿದ್ದ ಕೊಳವೆ ಬಾವಿಗಳಿಗೆ ಪೂರಕ ಸಾಮಗ್ರಿಗಳನ್ನು ಒದಗಿಸಿಲ್ಲ ಎಂಬ ಆರೋಪಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಕೆಲ ಕಂಪನಿಗಳು ಪ್ರತಿಪಾದಿಸಿದ್ದವು.

 

ಗಂಗಾ ಕಲ್ಯಾಣ ಯೋಜನೆಯಡಿ ನಡೆದಿದೆ ಎನ್ನಲಾಗಿರುವ ವಿವಿಧ ರೀತಿಯ ಅಕ್ರಮಗಳ ಕುರಿತು ತನಿಖೆ ನಡೆಸಲು ಕರ್ನಾಟಕ ವಿಧಾನ ಪರಿಷತ್‌ನ ಸದಸ್ಯ ಡಾ ವೈ ಎ ನಾರಾಯಣಸ್ವಾಮಿ ನೇತೃತ್ವದ ವಿಶೇಷ ಸದನ ಸಮಿತಿಯು ಆರೋಪಿಸಿತ್ತು. ಈ ಸಮಿತಿಯು ರಾಯಚೂರು, ಬಳ್ಳಾರಿ ಸೇರಿದಂತೆ ವಿವಿಧೆಡೆ ಪ್ರವಾಸ ಮತ್ತು ಸ್ಥಳ ಪರಿಶೀಲನೆ ಕೈಗೊಂಡಿದ್ದ ಸಂದರ್ಭದಲ್ಲಿ ಫಲಾನುಭವಿಗಳು ಹಲವು ಅರೋಪಗಳನ್ನು ಮಾಡಿದ್ದರು. ಈ ಆರೋಪಗಳನ್ನು ಕಂಪನಿಗಳು ತಳ್ಳಿ ಹಾಕಿದ್ದವು.

 

ವಿಶೇಷ ಸದನ ಸಮಿತಿಗೆ ಯುನೈಟೆಡ್‌ ಇಂಜಿನಿಯರಿಂಗ್‌ ವರ್ಕ್ಸ್‌, ಅಹಮದಾಬಾದ್‌ ಮೂಲದ  ಮಹಾವೀರ್ ಸಬ್‌ ಮರ್ಸಿಬಲ್‌  ಪ್ರೈವೈಟ್‌ ಲಿಮಿಟೆಡ್‌ ಪತ್ರ ಬರೆದು ಸ್ಪಷ್ಟನೆ ನೀಡಿದ್ದವು.    ಈ ದೂರಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದ ಯುನೈಟೆಡ್‌ ಇಂಜಿನಿಯರಿಂಗ್‌ ವರ್ಕ್ಸ್‌ ಮತ್ತು ಮಹಾವೀರ್ ಸಬ್ ಮರ್ಸಿಬಲ್‌ ಪ್ರೈ ಲಿ., ಈ ದೂರುಗಳು ತಪ್ಪು ಗ್ರಹಿಕೆಯಿಂದ ಕೂಡಿವೆ. ಯಾವುದೇ ಆಧಾರವಿಲ್ಲ. ಸದನಕ್ಕೆ ಸಲ್ಲಿಕೆಯಾಗಿರುವ ವರದಿಯಲ್ಲಿನ ಅರೋಪ ಪಟ್ಟಿಯಿಂದ ಕೈ ಬಿಡಬೇಕು ಎಂದು ಸದನ ಸಮಿತಿಗೆ ಪತ್ರ ಬರೆದಿದ್ದವು.

 

 

ಈ ಕುರಿತಾದ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಒಂದು ವಾರದೊಳಗಾಗಿ ವರದಿ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಹಿಂದಿನ  ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್‌ ಅವರು ಪತ್ರದಲ್ಲಿ ನಿರ್ದೇಶಿಸಿದ್ದರು.

 

 

 

ಇವೇ ಕಂಪನಿಗಳು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮವು ಅನುಷ್ಠಾನಗೊಳಿಸಿದ್ದ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊರೆಸಿದ್ದ ಕೊಳವೆ ಬಾವಿಗಳಿಗೆ ಪೂರಕ ಸಾಮಗ್ರಿಗಳನ್ನು ಒದಗಿಸಿದ್ದವು. ಈ ಕಂಪನಿಗಳು ಬಳ್ಳಾರಿ ಜಿಲ್ಲೆಯಲ್ಲಿ ಪೂರೈಸಿದ್ದ ಸಾಮಗ್ರಿಗಳು ಗುಣಮಟ್ಟದಿಂದ ಕೂಡಿರಲಿಲ್ಲ. ಕೆಲವು ಕೊಳವೆ ಬಾವಿಗಳಲ್ಲಿ ಕಡಿಮೆ ನೀರು ಬಿದ್ದಿದೆ. ಮೋಟಾರ್‍‌ ಪಂಪ್‌ ಸರಬರಾಜು ಮಾಡಿಲ್ಲ. ಕೊಳವೆ ಬಾವಿಗಳಿಗೆ ಸಣ್ಣ ಪೈಪ್‌ಗಳನ್ನು ಅಳವಡಿಸಿದೆ ಎಂದು ಫಲಾನುಭವಿಗಳು ಯುನೈಟೆಡ್‌ ಇಂಜಿನಿಯರಿಂಗ್‌ ವರ್ಕ್ಸ್‌ ವಿರುದ್ಧ ದೂರು ಸಲ್ಲಿಸಿದ್ದವು.

 

 

ಅದೇ ರೀತಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಳಿಸಿದ್ದ ಕೊಳವೆ ಬಾವಿಗಳ ಯೋಜನೆಯಲ್ಲಿಯೂ ಸಾಕಷ್ಟು ಲೋಪಗಳು ಕಂಡು ಬಂದಿದ್ದವು. ಈ ಯೋಜನೆಯಡಿಯಲ್ಲಿ ಆಯ್ಕೆಯಾಗಿದ್ದ ಫಲಾನುಭವಿಗಳು ಮಹಾವೀರ್ ಸಬ್‌ ಮರ್ಸಿಬಲ್‌ ಪ್ರೈ ಲಿ ವಿರುದ್ಧ ಫಲಾನುಭವಿಗಳು  ದೂರಿದ್ದರು.

 

 

58 ಅಡಿಗೆ ಪಿವಿಸಿ ಕೇಸಿಂಗ್‌ ಪೈಪ್‌ ಹಾಕಲಾಗಿದೆ. ಅದು 60 ಅಡಿಗೆ ಒಡೆದು ಹೋಗಿದೆ. 20 ಅಡಿಗೆ ಪಿವಿಸಿ ಕೇಸಿಂಗ್‌ ಪೈಪ್‌ ಹಾಕಲಾಗಿತ್ತು. ನೀರಿನ ಮೂಲ 25 ಅಡಿ ಇದೆ. ಕೊಳವೆ ಬಾವಿ ಕೊರೆದು 4 ವರ್ಷಗಳಾಗಿದ್ದವು.  ಇದಾಗಿ 2 ವರ್ಷದ ನಂತರ ಮೋಟಾರ್ ನೀಡಲಾಗಿತ್ತು. ಆದರೆ ಇದುವರೆಗೂ ವಿದ್ಯುತ್‌ ಸಂಪರ್ಕ ನೀಡಿರುವುದಿಲ್ಲ. ಮೋಟಾರ್ ಒಂದು ವರ್ಷಕ್ಕೆ 4 ಬಾರಿ ದುರಸ್ತಿಗೆ ಬಂದಿದ್ದವು.

 

 

 

ಮಹಾವೀರ್‍‌ ಕಂಪನಿಯಿಂದ ನೀಡಿದ್ದ ಮೋಟಾರ್‍‌ ದುರಸ್ಥಿಯಲ್ಲಿದೆ. ಹೆಚ್‌ ಪಿ ಮೋಟಾರ್‍‌ ಎಂದು ನಿಗಮದವರು ಹೇಳುತ್ತಿದ್ದರೂ ಸಹ ಮೋಟಾರ್‍‌ ನೀರನ್ನೇ ಎತ್ತುವುದಿಲ್ಲ. ವಿದ್ಯುತ್‌ ಸಂಪರ್ಕ ಪಡೆಯಲು ಹಲವಾರು ಬಾರಿ ಕಚೇರಿಗೆ ಅಲೆದಾಡಬೇಕು. ಗುತ್ತಿಗೆದಾರರಿಗೆ 20-30 ಸಾವಿರ ನೀಡಬೇಕು. ಗುಣಮಟ್ಟದ ಮೋಟಾರ್‍‌ಗಳನ್ನು ನೀಡಿಲ್ಲ ಎಂದು ದೂರಿದ್ದರು.

 

 

 

ಆದರೆ ಈ ಎಲ್ಲಾ ಆರೋಪಗಳನ್ನೂ ಯುನೈಟೆಡ್‌ ಇಂಜಿನಿಯರಿಂಗ್‌ ವರ್ಕ್ಸ್‌ ತಳ್ಳಿ ಹಾಕಿತ್ತು.

 

‘ನಿಗಮವು ನೀಡಿರುವ ಕಾರ್ಯಾದೇಶದಂತೆಯೇ ನಾವು ಪಂಪ್‌ಸೆಟ್‌ ಸಮೇತವಾಗಿ ಎಲ್ಲಾ ಸಾಮಗ್ರಿಗಳನ್ನೂ ಫಲಾನುಭವಿಗಳಿಗೆ ಒದಗಿಸಿದ್ದೇವೆ. ನಮ್ಮಿಂದ ಯಾವುದೇ ತರಹದ ಲೋಪ ದೋಷವಾಗಿಲ್ಲ. ಕಾರ್ಯಾದೇಶಕ್ಕೆ ಅನುಗುಣವಾಗಿ ಗುಣಮಟ್ಟದ ಸಾಮಗ್ರಿಗಳನ್ನು ಪೂರೈಸಿದ್ದೇವೆ.

 

 

ಸದನ ಸಮಿತಿಯು ಪರಿಶೀಲನೆ ಮಾಡಿರುವ ಎಲ್ಲಾ ಫಲಾನುಭವಿಗಳ ಸಾಮಗ್ರಿಗಳಿಗೆ ನೀಡಿರುವ ಎರಡು ವರ್ಷದ ಗ್ಯಾರಂಟಿ ಅವಧಿ ಮುಗಿದಿದೆ. ಹೀಗಾಗಿ ಫಲಾನುಭವಿಗಳು ತಪ್ಪು ಗ್ರಹಿಕೆಯಿಂದ ಆಧಾರವಿಲ್ಲದೇ ಆರೋಪ ಮಾಡಿದ್ದಾರೆ,’ ಎಂದು ಯುನೈಟೆಡ್‌ ಇಂಜಿನಿಯರಿಂಗ್‌ ವರ್ಕ್ಸ್‌ ಪ್ರತಿಪಾದಿಸಿತ್ತು.

 

 

 

ಅದೇ ರೀತಿ ಅಹಮದಾಬಾದ್‌ ಮೂಲದ ಮಹಾವೀರ್ ಸಬ್‌ ಮರ್ಸಿಬಲ್‌ ಪ್ರೈ ಲಿ., ಕೂಡ ಆರೋಪಗಳನ್ನು ತಳ್ಳಿ ಹಾಕಿತ್ತು.

 

‘ಸಮಿತಿ ಪರಿಶೀಲನೆ ಮಾಡಿರುವ ಪೈಕಿ ಗೋವಿಂದ ಸಿಂಗನೋಡಿ ಎಂಬ ರೈತನು ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಯಾಗಿಲ್ಲ. ಈ ಫಲಾನುಭವಿಗೆ ಏಷಿಯನ್‌ ಇಂಜಿನಿಯರ್ಸ್‌ ಸಾಮಗ್ರಿ  ಸರಬರಾಜು ಮಾಡಿದೆ. ಫಲಾನುಭವಿಯು ಮುಕ್ತ ಮಾರುಕಟ್ಟೆಯಲ್ಲಿ ನಮ್ಮ ಕಂಪನಿಯ ಪಂಪ್‌ ಸೆಟ್‌ ಖರೀದಿಸಿರಬಹುದು. ನಮ್ಮ ಕಂಪನಿಯ ನಿಯಮಾನುಸಾರ ಪಂಪ್‌ ಸೆಟ್‌ನ್ನು ಟ್ಯಾಂಪರ್‍‌ ಮಾಡಿದಲ್ಲಿ ಗ್ಯಾರಂಟಿ ಕೊಡಲು ಬರುವುದಿಲ್ಲ.

 

 

ನಮ್ಮನ್ನು ಸಂಪರ್ಕಿಸದೇ ತಾವೇ ರಿಪೇರಿ ಮಾಡಿಕೊಂಡ ರೈತನ ದೂರಿಗೆ ನಾವು ಜವಾಬ್ದಾರರಾಗಿಲ್ಲ. ಹಾಗೂ ಫಲಾನುಭವಿಗೆ ಬೇರೆ ಕಂಪನಿಯಿಂದ ಸಾಮಗ್ರಿಗಳನ್ನು ಸರಬರಾಜು ಮಾಡಿ ಬಿಲ್ ಕ್ಲೈಮ್‌ ಮಾಡಿರುವುದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ,’ ಎಂದು ಆರೋಪಗಳನ್ನು ತಳ್ಳಿ ಹಾಕಿತ್ತು.

 

 

 

ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ನಿರ್ಮಾಣ ಕಾರ್ಯದಲ್ಲಿ ಶೇ.30 ರಿಂದ 40 ರಷ್ಟು ಅಕ್ರಮ ನಡೆದಿದೆ. 100 ಕೋಟಿ ರೂ. ಅನುದಾನದಲ್ಲಿ 30ರಿಂದ 40 ಕೋಟಿ ರೂ. ದೋಚುವ ಕೆಲಸ ಮಾಡಲಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್‌ನ ಗಂಗಾ ಕಲ್ಯಾಣ ವಿಶೇಷ ಸದನ ಸಮಿತಿಯ ಅಧ್ಯಕ್ಷ ಡಾ.ವೈ.ಎ. ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದರು.

Your generous support will help us remain independent and work without fear.

Latest News

Related Posts