ಬೆಂಗಳೂರು; ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಅಭಿಯಾನ, ಸಮಗ್ರ ಶಿಕ್ಷಣ ಹೀಗೆ ವಿವಿಧ ಹೆಸರುಗಳಲ್ಲಿ ಸಾವಿರಾರು ಕೋಟಿ ರುಪಾಯಿಗಳನ್ನು ಶೈಕ್ಷಣಿಕ ವಲಯಕ್ಕೆ ಖರ್ಚು ಮಾಡುತ್ತಿದ್ದರೂ ಇನ್ನೂ ಸಹ ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ಹಂತದ ಶಿಕ್ಷಣ ಮೂಲಸೌಕರ್ಯಗಳು ಲಭ್ಯವಾಗಿಲ್ಲ.
ವಿಶೇಷವಾಗಿ ಸಮಗ್ರ ಶಿಕ್ಷಣ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು 60;40ರ ಅನುಪಾತದಲ್ಲಿ ಬಹುಕೋಟಿ ಖರ್ಚು ಮಾಡುತ್ತಿದೆ. ಆದರೂ ರಾಜ್ಯದಲ್ಲಿನ ಬಹುತೇಕ ಶಾಲೆಗಳು ಆಧುನೀಕರಣವಾಗಿಲ್ಲ, ಶಾಲಾ ಶೌಚಾಲಯಗಳಲ್ಲಿ ನೈರ್ಮಲ್ಯ ವ್ಯವಸ್ಥೆ ಕಲ್ಪಿಸಿಲ್ಲ. ಶಾಲೆಗಳ ಸಂಖ್ಯೆಯಲ್ಲಿಯೂ ಕುಸಿತ ಕಂಡಿದೆ.
ಮಧ್ಯಾಹ್ನ ಉಪಹಾರ ಯೋಜನೆ ಅಡಿಯಲ್ಲಿ ಮಕ್ಕಳಿಗೆ ಇನ್ನೂ ಉತ್ತಮ ದರ್ಜೆಯ ಪ್ಲೇಟ್‌ಗಳನ್ನು ಒದಗಿಸಿಲ್ಲ. ಬೈಸಿಕಲ್ ಯೋಜನೆಯು ರಾಜ್ಯದಲ್ಲಿ ಸ್ಥಗಿತಗೊಂಡ ನಂತರ, ಮಕ್ಕಳು ಶಾಲೆಗಳಿಗೆ ನಿಯಮಿತವಾಗಿ ಹಾಜರಾಗುತ್ತಿಲ್ಲ. ಉತ್ತಮ ಸಾರಿಗೆ, ಉತ್ತಮ ರಸ್ತೆಯೂ ಇಲ್ಲ.
ಶಾಲಾ ಮತ್ತು ಸಾಕ್ಷರತಾ ಇಲಾಖೆಯಲ್ಲಿನ “ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದ 2018-19 ರಿಂದ 2020-21 ರ ವರೆಗಿನ ಮೌಲ್ಯಮಾಪನʼ ನಡೆಸಿರುವ ಮೈಸೂರಿನ ಗ್ರಾಸ್ ರೂಟ್ಸ್ ರಿಸರ್ಚ್ ಅಂಡ್ ಅಡ್ವೊಕಸಿ ಮೂವ್ ಮೆಂಟ್ (ಜಿಆರ್ ಎಎಎಂ) ಕಳೆದ ಜುಲೈನಲ್ಲಿ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ಅಧ್ಯಯನ ವರದಿಯು ಸಮಗ್ರ ಶಿಕ್ಷಣ ಅನುಷ್ಠಾನದ ಕುರಿತು ಬೆಳಕು ಚೆಲ್ಲಿದೆ.
ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ಅನುದಾನ ಹಂಚಿಕೆಯಲ್ಲಿ ಕುಸಿತ
ಸಮಗ್ರ ಶಿಕ್ಷಣ ಯೋಜನೆಯು ಕೇಂದ್ರ ಸರ್ಕಾರದ ಪ್ರಾಯೋಜಿತವಾಗಿದೆ. ಇದು 60;40ರ ಅನುಪಾತದಲ್ಲಿ ಅನುದಾನ ಹಂಚಿಕೆಯಾಗುತ್ತದೆ. 2018-19ರಲ್ಲಿ 30,781 ಕೋಟಿ ರು ಹಂಚಿಕೆಯಾಗಿತ್ತು. ಅದೇ ರೀತಿ 2019-20ರಲ್ಲಿ 36,274 ಕೋಟಿ, 2020-21ರಲ್ಲಿ 29,957 ಕೋಟಿ, 2021-22ರಲ್ಲಿ 30,000 ಕೋಟಿ, 2022-23ರಲ್ಲಿ 37,383 ಕೋಟಿ ರು.ಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಾಗಿತ್ತು. ಇದು ಬಜೆಟ್‌ನ ಒಟ್ಟಾರೆ ಶೇ.64, 62. 64ರಷ್ಟಿತ್ತು. 2019-20ರಿಂದ 2020-21ರವರೆಗೆ ಈ ಅನುದಾನ ಹಂಚಿಕೆಯಲ್ಲಿ ಗಮನಾರ್ಹವಾಗಿ ಕುಸಿದಿದೆ ನಂತರದಲ್ಲಿ ಏರಿಕೆಯಾಗಿದೆ ಎಂದು ವರದಿಯಲ್ಲಿ ವಿಶ್ಲೇಷಿಸಿರುವುದು ಗೊತ್ತಾಗಿದೆ.

2023-24ರಲ್ಲಿ ಸಮಗ್ರ ಶಿಕ್ಷಣ ಅಭಿಯಾನವು ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಅತ್ಯಧಿಕ ಹಂಚಿಕೆ ಅಂದರೇ 37,453 ಕೋಟಿ ರುಗಳನ್ನು ಸ್ವೀಕರಿಸಿತ್ತು.
ಕರ್ನಾಟಕದಲ್ಲಿ ಆರ್ಥಿಕ ಸಾಧನೆ ಏನು?
2022-23ರ ಕರ್ನಾಟಕ ಆರ್ಥಿಕ ಸಮೀಕ್ಷೆ ಪ್ರಕಾರ ಸಮಗ್ರ ಶಿಕ್ಷಣಕ್ಕೆ 1,436.27 ಕೋಟಿ ರು ಮಂಜೂರಾಗಿತ್ತು. ಈ ಪೈಕಿ 992.31 ಕೋಟಿ ರು ಬಿಡುಗಡೆಯಾಗಿದೆ. ಒಟ್ಟು 1,085.86 ಕೋಟಿ ರು ವೆಚ್ಚವಾಗಿದೆ. 2021-22ರಲ್ಲಿ ಕರ್ನಾಟಕದ ಎಸ್‌ಡಿಪಿ ಸಮಗ್ರ ಶಿಕ್ಷಣ ಸರ್ಕಾರದಿಂಧ ಪಡೆದ ಮಾಹಿತಿ ಪ್ರಕಾರ ಪಿಎಬಿಯಿಂದ ಸಮಗ್ರ ಶಿಕ್ಷಣ ಅಡಿಯಲ್ಲಿ ರಾಜ್ಯಕ್ಕೆ 1,537 ಕೋಟಿ ಮಂಜೂರಾಗಿತ್ತು. ಅದೇ ವರ್ಷದ ವಾಸ್ತವಿಕ ವೆಚ್ಚ 2,156.08 ಕೋಟಿ ಆಗಿತ್ತು. 2021-22ಕ್ಕೆ ಹೋಲಿಸಿದರೆ 2022-23ರಲ್ಲಿ ಹಂಚಿಕೆ ಮತ್ತು ವೆಚ್ಚದಲ್ಲಿ ಕುಸಿತವಾಗಿತ್ತು ಎಂದು ವರದಿಯಿಂದ ತಿಳಿದು ಬಂದಿದೆ.
ಅಕೌಂಟಿಬಿಲಿಟಿ ಇನಿಶಿಯೇಟಿವ್ (2022-23)ರ ದತ್ತಾಂಶವು 2020-21ರಲ್ಲಿ ಸಮಗ್ರ ಶಿಕ್ಣಣದ ಅಡಿಯಲ್ಲಿ ಪ್ರತಿ ವಿದ್ಯಾರ್ಥಿಗೆ 218 ರು ಮಾಥ್ರ ಇದೆ. ಪ್ರೌಢಶಿಕ್ಷಣಕ್ಕಾಗಿ ಪ್ರತಿ ವಿದ್ಯಾರ್ಥಿಗೆ ಅತೀ ಕಡಿಮೆ ವೆಚ್ಚವನ್ನು ಹೊಂದಿರುವ ದೊಡ್ಡ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಅದೇ ವರ್ಷದಲ್ಲಿ 20 ದೊಡ್ಡ ರಾಜ್ಯಗಳಲ್ಲಿ 16ನೆಯದಾಗಿ ಕರ್ನಾಟಕವಿದೆ. ಅಂದರೆ ಪ್ರತಿ ವಿದ್ಯಾರ್ಥಿಗೆ ಗೆ 1,724 ರು ವೆಚ್ಚ ಮಾಡುತ್ತಿದೆ.
ಸಮಗ್ರ ಶಿಕ್ಷಣದಡಿಯಲ್ಲಿ ಪ್ರಾಥಮಿಕ ಶಿಕ್ಷಣದ ಪ್ರತಿ ವಿದ್ಯಾರ್ಥಿ ವೆಚ್ಚವನ್ನು ಇದು ಹೊಂದಿದೆ. ಆದರೆ ದೇಶದ ದೊಡ್ಡ ರಾಜ್ಯಗಳಿಗೆ ಹೋಲಿಸಿದರೇ ಈ ಯೋಜನೆಯಡಿಯಲ್ಲಿ ಪ್ರತಿ ವಿದ್ಯಾರ್ಥಿಯ ವೆಚ್ಚದ ವಿಷಯದಲ್ಲಿ ಕರ್ನಾಟಕವು ಇನ್ನಷ್ಟು ಸಾಧಿಸಬೇಕಿದೆ ಎಂದು ವರದಿಯು ಅಭಿಪ್ರಾಯಪಟ್ಟಿದೆ.
ಶೇ. 25ರಷ್ಟು ಶಾಲೆಗಳಲ್ಲಿ ಮಕ್ಕಳಿಗೆ ಪ್ಲೇಟ್ ಇಲ್ಲ, ನೈರ್ಮಲ್ಯವೂ ಇಲ್ಲ
ಇಷ್ಟೆಲ್ಲಾ ಖರ್ಚು ಮಾಡಿದರೂ ಸಹ ರಾಜ್ಯದಲ್ಲಿ ಯಾವುದೇ ಸಮರ್ಪಕ ಶಿಕ್ಷಕರನ್ನು ನೇಮಿಸಿಲ್ಲ. ವಿದ್ಯಾರ್ಥಿ ವೇತನದ ಯಾವುದೇ ಆದ್ಯತೆ ಅವಕಾಶಗಳೂ ಇಲ್ಲ. ಕರ್ನಾಟಕದಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯ ಮೌಲ್ಯಮಾಪನವು ಎಂಡಿಎಂ ಯೋಜನೆಯು ಮಕ್ಕಳ ದಾಖಲಾತಿ ಮತ್ತು ಉಳಿಸಿಕೊಳ್ಳಲು ಸಹಾಯ ಮಾಡಿದೆ. ಮತ್ತು ಕಲಿಕೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಆದರೂ ಸಹ ಶೇ.25ರಷ್ಟು ಶಾಲೆಗಳಲ್ಲಿ ಪ್ಲೇಟ್‌ಗಳು ಮತ್ತು ಕುಡಿಯುವ ನೀರಿನ ಕೊರತೆಯಂತಹ ಕೆಲವು ಸಮಸ್ಯೆಗಳಿವೆ. ಶೇ.30 ಶಾಲೆಗಳಲ್ಲಿ ನೈರ್ಮಲ್ಯವಿಲ್ಲ ಎಂದು ವರದಿ ಹೇಳಿದೆ.

ಶೇ.92ರಷ್ಟು ಶಾಲೆಗಳಲ್ಲಿ ಕಂಪ್ಯೂಟರ್ ಪ್ರಯೋಗಾಲಯವನ್ನು ಸ್ಥಾಪಿಸಿವೆ. ಆದರೆ ಶೇ.26ರಷ್ಟು ಶಾಲೆಗಳಿಗೆ ನಿರಂತರ ವಿದ್ಯುತ್ ಸಿಕ್ಕಿಲ್ಲ. ಕಂಪ್ಯೂಟರ್ ಪ್ರಯೋಗಾಲಯದಲ್ಲಿ ಯುಪಿಎಸ್ ಸೌಲಭ್ಯವೂ ಇಲ್ಲ. ಶೇ. 47ರಷ್ಟು ಶಾಲೆಗಳಲ್ಲಿ ಇಂಟರ್ನೆಟ್ ಅಥವಾ ಬ್ಲೂಟೂತ್ ಸೌಲಭ್ಯ ಇಲ್ಲ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಶಾಲೆಗಳ ಸಂಖ್ಯೆ ಕುಸಿತ
2018-19 ಮತ್ತು 2021-22ರ ನಡುವೆ ಪಿಯುಸಿ ಹೊರತುಪಡಿಸಿ ಎಲ್ಲಾ ಶಾಲಾ ಹಂತಗಳಿಗೆ ಶಾಲೆಗಳ ಸಂಖ್ಯೆ ಕುಸಿದಿದೆ. ರಾಜ್ಯದಲ್ಲಿ ಶೇ.65ರಷ್ಟು ಸರ್ಕಾರಿ ಶಾಲೆಗಳಿವೆ. ಆದರೆ ಒಟ್ಟಾರೆ ದಾಖಲಾತಿಯಲ್ಲಿ ಒಟ್ಟಾರೆಯಾಗಿ ಹೆಚ್ಚಿಗೆಯಾಗಿಲ್ಲ. ಕೇವಲ ಶೇ. 45ರಷ್ಟು ಮಾತ್ರ ದಾಖಲಾತಿ ಇದೆ. ಖಾಸಗಿ ಅನುದಾನ ರಹಿತ ಶಾಲೆಗಳ ದಾಖಲಾತಿಯಲ್ಲಿ ಶೇ. 40ಕ್ಕಿಂತ ಹೆಚ್ಚಿನ ಪಾಲು ಹೊಂದಿದೆ.

ಸುಮಾರು ಶೇ. 45ರಷ್ಟು ಫಲಾನುಭವಿ ಶಾಲೆಗಳ ವಿದ್ಯಾರ್ಥಿಗಳು ಮತ್ತು ಸುಮಾರು ಶೇ. 12ರಷ್ಟು ಫಲಾನುಭವಿಗಳಲ್ಲದ ಶಾಲೆಗಳ ವಿದ್ಯಾರ್ಥಿಗಳು ಶಾಲೆಗೆ ಪ್ರಯಾಣಿಸಲು ಕಷ್ಟಕರವಾಗಿದೆ. ಫಲಾನುಭವಿಗಳಲ್ಲದ ಶಾಲೆಗಳ ವಿದ್ಯಾರ್ಥಿಗಳಿಗೆ ಶಾಲಾ ಬಸ್ ಅತ್ಯಂತ ಸಾಮಾನ್ಯ ಪ್ರಯಾಣದ ವಿಧಾನವಾಗಿದೆ.

ಔರಾದ್, ಚನ್ನಪಟ್ಟಣ, ಅರಸೀಕೆರೆ, ಯಾದಗಿರಿ ತಾಲೂಕುಗಳ ಪೈಕಿ ಅತೀ ಹೆಚ್ಚು ವಿದ್ಯಾರ್ಥಿಗಳು ಶಾಲೆಗಳನ್ನು ತಲುಪಲು ಕಷ್ಟಪಡುತ್ತಿದ್ದಾರೆ.

ಅಲ್ಲದೇ ಗುಡ್ಡಗಾಡು ಪ್ರದೇಶವಾದ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲಲ್ಲಿಯೂ ಶೇ. 72ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆ ತಲುಪಲು ತೊಂದರೆ ಅನುಭವಿಸುತ್ತಿದ್ದಾರೆ.

ಸರ್ಕಾರಿ ಮತ್ತು ಖಾಸಗಿ ಅನುದಾನಿತ ಶಾಲೆಗಳ ಶೇ. 32.83ರಷ್ಟು ವಿದ್ಯಾರ್ಥಿಗಳು ಶಾಲೆಗಳಿಗೆ ದೂರದ ಸ್ಥಳಗಳಿಂದ ಪ್ರಯಾಣ ಮಾಡುತ್ತಾರೆ. ಖಾಸಗಿ ಅನುದಾನ ರಹಿತ ಶಾಲೆಗಳ ಪೈಕಿ ಶೇ. 48.23ರಷ್ಟು ವಿದ್ಯಾರ್ಥಿಗಳು ದೂರದಿಂದ ಪ್ರಯಾಣ ಮಾಡುತ್ತಾರೆ. ಅಲ್ಲದೇ ಶೇ. 49.92ರಷ್ಟು ಮಂದಿ ವಿದ್ಯಾರ್ಥಿಗಳು ಕಾಲ್ನಡಿಗೆ ಮೂಲಕ ಶಾಲೆ ತಲುಪುತ್ತಿದ್ದಾರೆ.

ವಿದ್ಯಾರ್ಥಿಗಳು ಮನೆಯಿಂದ ಶಾಲೆಗೆ ಮತ್ತು ಹಾಸ್ಟೆಲ್‌ನಿಂದ ಶಾಲೆಗೆ ಹೊರಡುವ ರಸ್ತೆಗಳು ಸಹ ಶೇ. 11.44ರಷ್ಟು ಚೆನ್ನಾಗಿಲ್ಲ ಎಂದು ಅಧ್ಯಯನ ತಂಡವು ಹೇಳಿದೆ.

ಬೈಸಿಕಲ್ ವಿತರಣೆಯಿಂದ ಹಾಜರಾತಿಯಲ್ಲಿ ಸುಧಾರಣೆ ತರಲಾಗಿದೆ. ಬೈಸಿಕಲ್ ಯೋಜನೆಗೂ ಮುನ್ನ ಶೇ. 58.3ರಷ್ಟು ಮಕ್ಕಳು ಸರಿಯಾಗಿ ಶಾಲೆಗೆ ಬರುತ್ತಿದ್ದರು. ಆದರೆ ಬೈಸಿಕಲ್ ಪಡೆದ ನಂತರ ಶೇ. 65.5ರಷ್ಟು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪುತ್ತಿದ್ದರು. ಸರ್ಕಾರವು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸೈಕಲ್ ನೀಡುವುದನ್ನು ನಿಲ್ಲಿಸಿದಾಗಿನಿಂದ ವಿದ್ಯಾರ್ಥಿಗಳು ಶಾಲೆಗೆ ತಲುಪಲು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ.
ಪ್ರತಿ ಗ್ರಾಮದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣಕ್ಕೆ ವಿದ್ಯಾರ್ಥಿಗಳು ಮುಖ್ಯ ರಸ್ತೆಗಳಿಗೆ ನಡೆದುಕೊಂಡು ಹೋಗಬೇಕು. ಅಥವಾ ಬೇರೆ ಮಾರ್ಗಗಳ ಮೂಲಕ ಬರಬೇಕು. ನಂತರ ಅವು ತಮ್ಮ ಶಾಲಾ ಕಾಲೇಜುಗಳೀಗೆ ತೆರಳಲು ಬೇರೆ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು.
ಸಾರ್ವಜನಿಕ ಸಾರಿಗೆಗಳು ಸರಿಯಾದ ಸಮಯಕ್ಕೆ ಬಾರದೇ ಇದ್ದಾಗ ವಿದ್ಯಾರ್ಥಿಗಳು ಸಾಮಾನ್ಯವಾಗಿ ತರಗತಿಗಳಿಗೆ ಹಾಜರಾಗುವುದಿಲ್ಲ. ಮನೆಯಲ್ಲೇ ಇರುತ್ತಾರೆ. ಗುಡ್ಡಗಾಡು ಮತ್ತು ಕರಾವಳಿ ಪ್ರದೇಶಗಳಳ್ಲಿ ವಿಶೇಷ ಸಾರಿಗೆ ಮತ್ತು ಶಾಲಾ ಪ್ರವೇಶ ಸಮಸ್ಯೆಗಳು ಈಗಲೂ ಎದುರಾಗುತ್ತಿವೆ. ಕರಾವಳಿ ಜಿಲ್ಲೆಗಳಲ್ಲಿ ದೂರ ಮತ್ತು ಸಾರಿಗೆಯು, ವಿದ್ಯಾರ್ಥಿನಿಯರ ದಾಖಲಾತಿ ಮತ್ತು ಹಾಜರಾತಿ ಮೇಲೆ ಹೆಚ್ಚು ಪರಿಣಾಮ ಬೀರಿದೆ.

ಕೊಡಗಿನಲ್ಲಿ ವಿದ್ಯಾರ್ಥಿಗಳು ಹೆಚ್ಚು ದೂರ ಮತ್ತು ಸವಾಲಿನ ಭೂ ಪ್ರದೇಶದ ರಸ್ತೆಗಳ ಕೊರತೆಗಳ ಕಾರಣ ಶಾಲೆ ತಲುಪಲು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.









