ವಯನಾಡಿಗೆ ಪ್ರವಾಸ; 2019ರಿಂದಲೂ ನಿಗಮದಿಂದಲೇ ಆಯೋಜನೆ, ವರದಿ ಸಲ್ಲಿಸಿದ ಎಂಡಿ

ಬೆಂಗಳೂರು; ಕೇರಳದ ವಯನಾಡು ಪ್ರವಾಸಿ ತಾಣಕ್ಕೆ ವ್ಯವಸ್ಥಿತವಾಗಿ ಪ್ರವಾಸವನ್ನು 2019ರಿಂದಲೂ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ದಿ ನಿಗಮವು ಆಯೋಜಿಸುತ್ತಿದೆ. ನಿಗಮದ ವ್ಯವಸ್ಥಿತ ಪ್ರವಾಸಗಳ ವಹಿವಾಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ಅಂತರಾಜ್ಯಗಳಿಗೆ ವ್ಯವಸ್ಥಿತ ಪ್ರವಾಸಗಳನ್ನು ಆಯೋಜನೆ ಮಾಡಲಾಗಿದೆ ಎಂದು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ವರದಿ ನೀಡಿದ್ದಾರೆ.

 

ವಯನಾಡ್ ಪ್ರವಾಸೋದ್ಯಮದ ಪರವಾಗಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಜಾಹೀರಾತು ನೀಡಿತ್ತು. ಇದು ರಾಜ್ಯಾದ್ಯಂತ ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು.

 

 

ಇದರ ಬೆನ್ನಲ್ಲೇ ವರದಿ ನೀಡುವಂತೆ ಕೆಎಸ್‌ಟಿಡಿಸಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

 

ಪ್ರವಾಸೋದ್ಯಮ ಸಚಿವ ಎಚ್‌ ಕೆ ಪಾಟೀಲ್‌ ಅವರ ಆಪ್ತ ಕಾರ್ಯದರ್ಶಿಗೆ 2025ರ ಅಕ್ಟೋಬರ್‍‌ 30ರಂದು ನಾಲ್ಕು ಪುಟಗಳ ವರದಿ ನೀಡಿದ್ದಾರೆ. ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಯನಾಡಿಗೆ ಪ್ರವಾಸ ಆಯೋಜಿಸಿದ್ದನ್ನು ಬಿಜೆಪಿಯು ಇದೇನು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯೋ ಅಥವಾ ಕೇರಳ ಪ್ರವಾಸೋದ್ಯಮ ಇಲಾಖೆಯೋ ಎಂದು ಪ್ರತಿಪಕ್ಷ ಬಿಜೆಪಿಯು ಟೀಕಿಸಿತ್ತು.
ಪ್ರತಿಪಕ್ಷಗಳ ಟೀಕೆಯಿಂದ ಮುಜುಗರಕ್ಕೊಳಗಾಗಿದ್ದ ಸರ್ಕಾರವು, ನಿಗಮದಿಂದ ವರದಿ ಕೇಳಿತ್ತು. ಇದೀಗ ನಿಗಮವು ವರದಿ ನೀಡುವ ಮೂಲಕ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.

 

ವರದಿಯಲ್ಲೇನಿದೆ?

 

ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ವಯನಾಡು ಪ್ರವಾಸಿ ತಾಣಕ್ಕೆ 2019ನೇ ಸಾಲಿನಲ್ಲಿ ವ್ಯವಸ್ಥಿತ ಪ್ರವಾಸವನ್ನು ಹೊಸದಾಗಿ ಆಯೋಜಿಸಲು ಕ್ರಮವಹಿಸಿತ್ತು. 2020ನೇ ಸಾಲಿನಲ್ಲಿ ಕೋವಿಡ್‌ನಿಂದಾಗಿ ಈ ಪ್ರವಾಸವನ್ನು ಸ್ಥಗಿತಗೊಳಸಲಾಗಿತ್ತು. ಪುನಃ 2024-25ನೇ ಸಾಲಿನಲ್ಲಿ ವಯನಾಡು ಪ್ರವಾಸವನ್ನು ಆಯೋಜಿಸಲಾಗಿತ್ತು ಎಂದು ವಿವರಿಸಿರುವುದು ತಿಳಿದು ಬಂದಿದೆ.

 

ನಿಗಮವು ಕರ್ನಾಟಕ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ, ಪ್ರಚಾರಪಡಿಸುವ ಹಾಗೂ ಉತ್ತೇಜನಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಬೇರೆ ರಾಜ್ಯಗಳ ಪ್ರವಾಸಿ ತಾಣಗಳನ್ನು ಪ್ರಚಾರಪಡಿಸುತ್ತಿಲ್ಲ. ನಿಗಮದ ವ್ಯವಸ್ಥಿತ ಪ್ರವಾಸಗಳ ವಹಿವಾಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ಅಂತರಾಜ್ಯಗಳಿಗೆ ವ್ಯವಸ್ಥಿತ ಪ್ರವಾಸಗಳನ್ನು ಆಯೋಜನೆ ಮಾಡಲಾಗಿರುತ್ತದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸಚಿವ ಎಚ್‌ ಕೆ ಪಾಟಿಲ್‌ ಅವರ ಆಪ್ತ ಕಾರ್ಯದರ್ಶಿಗಳಿಗೆ ವರದಿ ನೀಡಿದ್ದಾರೆ.

 

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಪ್ರವಾಸೋದ್ಯಮ ಇಲಾಖೆಯ ಅಂಗಸಂಸ್ಥೆಯಾಗಿದೆ. ಕಳೆದ 54 ವರ್ಷಗಳಿಂದ ಆತಿಥ್ಯ ಕ್ಷೇತ್ರ ಹಾಗು ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಚಟುವಟಿಕೆಗಳನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ನಿಗಮವು ರಾಜ್ಯ ಮತ್ತು ಅಂತರಾಜ್ಯ ಮಟ್ಟದಲ್ಲಿ ದಕ್ಷಿಣ ರಾಜ್ಯಗಳನ್ನೊಳಗೊಂಡಂಗೆ ಪ್ರವಾಸಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದೆ.

 

ಪ್ರಮುಖವಾಗಿ ದೇಶೀಯ ಹಾಗೂ ವಿದೇಶಿಯ ಪ್ರವಾಸಿಗಳಿಗೆ ಕರ್ನಾಟಕ ವಿವಿಧ ಧಾರ್ಮಿಕ ಐತಿಹಾಸಿಕ, ಭೌಗೋಳಿಕ, ನೈಸರ್ಗಿಕ ಪ್ರವಾಸಿ ತಾಣಗಳ ಕುರಿತು ಮಾಹಿತಿ ನೀಡಲು ವಿವಿಧ ರೀತಯ 43 ವ್ಯವಸ್ಥಿತ ಪ್ರವಾಸಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ಮಾಹಿತಿ ಒದಗಿಸಿದೆ.

 

ಕರ್ನಾಟಕ ರಾಜ್ಯದ ಪ್ರವಾಸಿ ತಾಣಗಳ ಪರಿಚಯ ಮಾಡುವುದಲ್ಲದೆ ಹೊರ ರಾಜ್ಯಗಳಾದ ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ಪಾಂಡಿಚೇರಿ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ವ್ಯವಸ್ಥಿತ ಪ್ರವಾಸಗಳನ್ನು ನಿಗಮದಿಂದ ಆಯೋಜಿಸುತ್ತಿದೆ. ಅದರಂತೆ ನಿಗಮವು ಬೆಂಗಳೂರಿನಿಂದ ಗೋಪಾಲಸ್ವಾಮಿ ಬೆಟ್ಟ, ಕಾಂತಪಾರ ಜಲಪಾತ, ಬಾಣುಸಾರ ಅಣೆಕಟ್ಟು, ವೈತ್ರಿಕ ಗಾಜಿನ ಸೇತುವೆ, ಎಡಕ್ಕಲ್‌ ಗುಹೆಗಳನ್ನು ಒಳಗೊಂಡಂತೆ  ವಯನಾಡು ವಗಯವಸ್ತಿತ ಪ್ರವಾಸವನ್ನೂ ನಿಗಮವು ಆಯೋಜಿಸುತ್ತಿದೆ ಎಂದು ತಿಳಿಸಿದೆ.

 

ಈ ಪ್ರವಾಸವನ್ನು ಕರ್ನಾಟಕ ಮತ್ತು ಕರ್ನಾಟಕಕ್ಕೆ ಆಗಮಿಸುವ ಪ್ರವಾಸಿಗರಿಗೆ ಪ್ರಚಾರ ಪಡಿಸಲು ಮತ್ತು ನಿಗಮದ ಆದಾಯ ಹೆಚ್ಚಿಸುವ ಉದ್ದೇಶದಿಂದ 2025ರ ಅಕ್ಟೋಬರ್ 28 ನಿಗಮದ ಸಾಮಾಜಿಕ ಜಾಲತಾಣದಲ್ಲಿ ಎರಡು ಪೇಜಿನಲ್ಲಿ ಪ್ರವಾಸದ ವಿವರವರಾದ ಪೋಸ್ಟ್ ಮಾಡಲಾಗಿದೆ ಎಂದು ಹೇಳಿದೆ.

 

ಪ್ರವಾಸೋದ್ಯಮ ಸಚಿವ ಎಚ್‌ಕೆ ಪಾಟೀಲ್ ಅವರು ಪ್ರತಿಕ್ರಿಯಿಸಿ, ವಿವರಣೆ ನೀಡುವಂತೆ ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದರು. ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ವಯನಾಡನ್ನು ಪ್ರಚಾರ ಮಾಡುವಲ್ಲಿ ವಿಶೇಷ ಆಸಕ್ತಿ ತೋರಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಈ ಪ್ರಶ್ನೆ ಉದ್ಭವಿಸುವುದೇ ಇಲ್ಲ. ಜಾಹೀರಾತನ್ನು ಯಾವ ಕಾರಣಕ್ಕೆ ನೀಡಲಾಗಿದೆ. ಜಾಹೀರಾತು ಸಂಸ್ಥೆ ಹೀಗೇಕೆ ಮಾಡಿತು ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದ್ದರು.

Your generous support will help us remain independent and work without fear.

Latest News

Related Posts