ಬೆಂಗಳೂರು; ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು 2023-24ನೇ ಸಾಲಿನಲ್ಲಿ ಟೆಂಡರ್ ಕರೆಯದೇ 7,42,29,260 ರು ಮೊತ್ತದಲ್ಲಿ ಉತ್ತರ ಪತ್ರಿಕೆ ಮತ್ತು ಅಂಕಪಟ್ಟಿಗಳ ಮುದ್ರಣ ಮಾಡಿಸಿರುವುದು ಸೇರಿದಂತೆ ಟೆಂಡರ್ ಇಲ್ಲದೆಯೆ ಒಟ್ಟು 10 ಕೋಟಿಗೂ ಹೆಚ್ಚು ಮೊತ್ತವನ್ನು ವೆಚ್ಚ ಮಾಡಿತ್ತು.
ಅಲ್ಲದೇ ಟೆಂಡರ್ ಇಲ್ಲದೆಯೇ 45,19,652 ರು. ಮೊತ್ತದ ಸೇವೆ ಪಡೆದಿರುವುದನ್ನು ಲೆಕ್ಕ ಪರಿಶೋಧಕರು ಬಯಲು ಮಾಡಿದ್ದಾರೆ. ಅಲ್ಲದೇ ತರಬೇತಿ ಹೆಸರಿನಲ್ಲಿ ಮಾಡಿರುವ ವೆಚ್ಚಕ್ಕೂ ಮುನ್ನ ಯಾವುದೇ ಟೆಂಡರ್ ಕರೆದಿರಲಿಲ್ಲ ಎಂಬುದನ್ನೂ ಬಹಿರಂಗಗೊಳಿಸಿದ್ದಾರೆ.
ಪರೀಕ್ಷಾ ಮೇಲ್ವಿಚಾರಕರ ಸಂಭಾವನೆಗೆ ಸಂಬಂಧಿಸಿದ ಮೌಲ್ಯಮಾಪನ ಕಾರ್ಯಕ್ಕಾಗಿ ಮಾಡಿರುವ ವೆಚ್ಚವನ್ನು ಒರೆಗೆ ಹಚ್ಚಿದ್ದಾರೆ. ಹಾಗೆಯೇ ವಿಶ್ವವಿದ್ಯಾಲಯದಲ್ಲಿ ಪರಿನಿಯಮಗಳನ್ನು ರಚಿಸಿಕೊಳ್ಳದೆಯೇ ಸ್ಥಳೀಯ ವಿಚಾರಣೆ ಸಮಿತಿ ಸದಸ್ಯರಿಗೆ ದಿನಭತ್ಯೆ, ಪ್ರಯಾಣ ಭತ್ಯೆಯನ್ನೂ ಪಾವತಿಸಿರುವುದನ್ನು ಲೆಕ್ಕ ಪರಿಶೋಧಕರು ಬಯಲು ಮಾಡಿದ್ದಾರೆ.
2023-24ನೇ ಸಾಲಿಗೆ ಸಂಬಂಧಿಸಿದಂತೆ ಪೂರ್ಣಗೊಂಡಿರುವ ಲೆಕ್ಕ ಪರಿಶೋಧನಾ ವರದಿಯು ವಿಶ್ವವಿದ್ಯಾಲಯದ ವಿವಿಧ ಅಕ್ರಮಗಳನ್ನು ಹೊರಗೆಳೆದಿದೆ. ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ತರಬೇತಿ ನೀಡುವ ಉದ್ದೇಶದಿಂದ 2018-19ರಲ್ಲಿ ಟೆಂಡರ್ ಕರೆದಿತ್ತು. ಈ ಸಂಬಂದ 2020ರ ಅಕ್ಟೋಬರ್ 13ರಂದು ಚಿನ್ಮಯ ಪ್ರಭುದೇವ ಚಿಗಟೇರಿ, ಶುಭಾಂಗಿಣಿ ಚಿನ್ಮಯ ಚಿಗಟೇರಿ, ದೀಪ್ತಿ ಆರಾಧ್ಯ ಎಂಬುವರು ನಿರ್ದೇಶಕರಾಗಿರುವ ಹೆಲ್ತ್ ಮೈಂಡ್ಸ್ ಕನ್ಸಲ್ಟಿಂಗ್ಸ್ ಪ್ರೈವೈಟ್ ಲಿಮಿಟೆಡ್‌ನ ಜತೆ ಟೆಂಡರ್ ಕರಾರು ಮಾಡಿಕೊಂಡಿತ್ತು. ಇದೇ ಟೆಂಡರ್ ಕರಾರನ್ನು ನವೀಕರಿಸಿಕೊಂಡಿದ್ದ ವಿಶ್ವವಿದ್ಯಾಲಯವು 2023-24ನೇ ಸಾಲಿನಲ್ಲಿಯೂ ಈ ಸೇವೆ ಪಡೆದಿರುವುದನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಅಧಿನಿಯಮ 1999ರ ನಿಯಮ 4(ಇ)(2)ರ ಅನ್ವಯ ಯಾವುದೇ ಖರೀದಿ ಹಾಗೂ ಸೇವೆಯ ಮೌಲ್ಯವು 5 ಲಕ್ಷ ಮೊತ್ತ ಮೀರುವಂತಿದ್ದರೇ ಈ ಸೇವೆಯನ್ನು ಟೆಂಡರ್ ಮುಖಾಂತರ ಪಡೆಯಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಆದರೂ ವಿಶ್ವವಿದ್ಯಾಲಯವು ಯಾವುದೇ ಟೆಂಡರ್ ಆಹ್ವಾನಿಸದೆಯೇ ಟೆಂಡರ್ ಕರಾರನ್ನು ನವೀಕರಿಸಿದೆ. ಹೀಗಾಗಿ ಕಾರ್ಮಿಕ ಇಲಾಖೆಯು 2017ರಲ್ಲಿ ಹೊರಡಿಸಿದ್ದ ಸುತ್ತೋಲೆಯನ್ನು ಉಲ್ಲಂಘಿಸಿರುವುದನ್ನು ಲೆಕ್ಕ ಪರಿಶೋಧನೆಯು ಪತ್ತೆ ಹಚ್ಚಿದೆ.
ಅಲ್ಲದೇ ಕೆಟಿಪಿಪಿ ಕಾಯ್ದೆ ನಿಯಮ 12(3) ಅನ್ವಯ ಟೆಂಡರ್ ಅವಧಿಯನ್ನು ಶೇ. 25ರಷ್ಟು ಅಂದರೇ 3 ತಿಂಗಳವರೆಗೆ ವಿಸ್ತರಿಸಲು ಅವಕಾಶವಿದೆ. ಆದರೆ ಟೆಂಡರ್ ಪ್ರಕ್ರಿಯೆ ನಡೆಸದೇ ಅವಧಿಯನ್ನು ವಿಸ್ತರಿಸಿರುವ ಔಚಿತ್ಯವೇನು ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಲೆಕ್ಕ ಪರಿಶೋಧಕರು ನೋಟೀಸ್ ಜಾರಿಗೊಳಿಸಿದ್ದರು. ಆದರೆ ಇದಕ್ಕೆ ಯಾವುದೇ ಉತ್ತರ ನೀಡಿಲ್ಲ. ಹೀಗಾಗಿ ಲೆಕ್ಕ ಪರಿಶೋಧಕರು 45,19, 652 ರುಗಳನ್ನು ಆಕ್ಷೇಪಣೆಯಲ್ಲಿರಿಸಿರುವುದು ತಿಳಿದು ಬಂದಿದೆ.

ಇದಲ್ಲದೇ ಉತ್ತರ ಪತ್ರಿಕೆ ಮತ್ತು ಅಂಕಪಟ್ಟಿಗಳ ಮುದ್ರಣ ಮಾಡಲೂ ಸಹ ಟೆಂಡರ್ ಕರೆದಿರಲಿಲ್ಲ. ಇದಕ್ಕಾಗಿ 7,42,29,260 ರು.ಗಳನ್ನು ವೆಚ್ಚ ಮಾಡಿತ್ತು. ಹೈದರಬಾದ್ ಮೂಲದ ಹೈಟೆಕ್ ಪ್ರಿಂಟ್ ಸಿಸ್ಟಂ ಲಿಮಿಟೆಡ್‌ನಿಂದ 2022ರ ಫೆ.21ರಿಂದ 2023ರ ಫೆ.20ರವರೆಗೆ ಒಂದು ವರ್ಷದ ಅವಧಿಗೆ ಕರಾರು ಮಾಡಿಕೊಂಡಿತ್ತು. ಈ ಕರಾರು ಅವಧಿ ಮುಕ್ತಾಯಗೊಂಡಿದ್ದರೂ ಸಹ 2023-24ನೇ ಸಾಲಿನಲ್ಲಿಯೂ ಈ ಸೇವೆಯನ್ನು ಇದೇ ಕಂಪನಿಯಿಂದ ಪಡೆದುಕೊಂಡಿತ್ತು.
ಕೆಟಿಪಿಪಿ ಕಾಯ್ದೆ 1999ರ ನಿಯಮ 12(3)ರ ಅನ್ವಯ ಟೆಂಡರ್ ಅವಧಿಯನ್ನು ಶೇ. 25ರಷ್ಟು ಅಂದರೇ 3 ತಿಂಗಳುವರೆಗೆ ವಿಸ್ತರಿಸಲು ಅವಕಾಶವಿದೆ. ಆದರೆ ಟೆಂಡರ್ ಪ್ರಕ್ರಿಯೆ ನಡೆಸದೇ ಅವಧಿಯನ್ನು ವಿಸ್ತರಿಸಿರುವ ಔಚಿತ್ಯವೇನು ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಲೆಕ್ಕಪತ್ರ ವಿಚಾರಣೆ ನೋಟೀಸ್ ಜಾರಿಗೊಳಿಸಿತ್ತು. ಆದರೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ 7,42,29,260 ರು.ಗಳನ್ನು ಲೆಕ್ಕ ಪರಿಶೋಧಕರು ಆಕ್ಷೇಪಣೆಯಲ್ಲಿರಿಸಿರುವುದು ವರದಿಯಿಂದ ಗೊತ್ತಾಗಿದೆ.

ಪರೀಕ್ಷಾ ಮೇಲ್ವಿಚಾರಕರ ಸಂಭಾವನೆಯಲ್ಲಿಯೂ ಅಕ್ರಮ?
ಪರೀಕ್ಷಾ ಮೇಲ್ವಿಚಾರಕರ ಸಂಭಾವನೆಗೆ ಸಂಬಂಧಿಸಿದ ಮೌಲ್ಯಮಾಪನ ಕಾರ್ಯಕ್ಕಾಗಿ ವಿಶ್ವವಿದ್ಯಾಲಯವು ಆಂತರಿಕ ಮತ್ತು ಬಾಹ್ಯ ಮೌಲ್ಯಮಾಪಕರಿಗೆ 73,29,54,360 ರು.ಗಳನ್ನು ಪಾವತಿಸಲಾಗಿತ್ತು. ಆದರೆ ಈ ಪಾವತಿಗಳಿಗೆ ಸಂಬಂಧಿಸಿದ ವೋಚರ್ ದಾಖಾತಿಗಳನ್ನು ಹಾಗೂ ದರಗಳನ್ನು ಅನುಸರಿಸಲು ಮಾನದಂಡಗಳು ಹಾಗೂ ಇದಕ್ಕೆ ಸರ್ಕಾರದ ಅನುಮೋದನೆ ಪಡೆದಿರುವ ವಿವರ ಹಾಗೂ ಸದರಿ ಪಾವತಿಗಳನ್ನು ಮಾಡಲು ರಚಿಸಿಕೊಂಡಿರುವ ಪರಿನಿಯಮಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಬೇಕು ಎಂದು ಸೂಚಿಸಿದೆ.
ಸಂಭಾವನೆಯನ್ನು ಪಡೆದ ಸಿಬ್ಬಂದಿಗಳಿಂದ ಸ್ವೀಕೃತಿ ಪಡೆದಿರುವ ಮಾಹಿತಿ, ಸಂಭಾವನೆ ಬಿಲ್‌ಗಳಲ್ಲಿ ಕುಲಸಚಿವರು (ಮೌಲ್ಯಮಾಪನ) ದೃಢೀಕರಿಸಿರುವುದು, ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ನೀಡಿರುವ ಸಂಭಾವನೆಗೆ ಸಂಬಂಧಿಸಿದಂತೆ ಒಟ್ಟು ಪ್ರಶ್ನೆ ಪತ್ರಿಕೆಗಳ ಸಂಖ್ಯೆ, ಹಾಜರಾದ ಅಭ್ಯರ್ಥಿಗಳ ವಿವರ, ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಒಟ್ಟು ಉತ್ತರ ಪತ್ರಿಕೆಗಳ ಸಂಖ್ಯೆ, ಮೌಲ್ಯಮಾಪನ ಮಾಡಿದ ಉತ್ತರಪತ್ರಿಕೆಗಳ ಸಂಖ್ಯೆ, ಬೋಧಕ ಸಿಬ್ಬಂದಿಗಳ ವಿವರಗಳನ್ನು ಒದಗಿಸಬೇಕಿತ್ತು.
ಚೀಫ್ ಸೂಪರಿಟೆಂಡೆಂಟ್, ಡೆಪ್ಯುಟಿ ಚೀಫ್ ಸೂಪರಿಟೆಂಡೆಂಟ್, ಗುಮಾಸ್ತ ಸೇವೆ ನೀಡಿದ್ದ ಸಿಬ್ಬಂದಿ ನೇಮಕಾತಿ ಮಾಡಲು ವಿಶ್ವವಿದ್ಯಾಲಯವು ಅನುಸರಿಸಿರುವ ಮಾನದಂಡಗಳ ಕುರಿತು ವಿವರ ಒದಗಿಸಬೇಕು. ಪರೀಕ್ಷಾ ಕಾರ್ಯಗಳಿಗಾಗಿ ವಿಶ್ವವಿದ್ಯಾಲಯದ ಅಧಿಕಾರಿ, ಸಿಬ್ಬಂದಿಗಳಿಗೆ ನೀಡಿರುವ ಮುಂಗಡಗಳ ಕುರಿತು ವಿವರ ಒದಗಿಸಬೇಕು ಎಂದು ಸೂಚಿಸಿತ್ತು.
ಅಲ್ಲದೇ ಈ ಸಂಭಾವನೆಯನ್ನು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ತಿದ್ದುಪಡಿ) ಅಧಿನಿಯಮ 2013ರ ಕಲಂ (33)ರ ಅನ್ವಯ ಪರಿನಿಯಮಗಳನ್ನು ರಚಿಸಿ ಪರಿನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆಯೇ ಹಾಗೂ ಕಲಂ 34(3)ರಂತೆ ಸದರಿ ಪರಿನಿಯಮಗಳಿಗೆ ಕುಲಾಧಿಪತಿಗಳಿಂದ ಒಪ್ಪಿಗೆ ಪಡೆದು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾದ ನಂತರ ಪಾವತಿಸಿರುವ ಬಗ್ಗೆ ರಾಜ್ಯಪತ್ರದ ಪ್ರತಿಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಬೇಕು ಎಂದು ಸೂಚಿಸಿತ್ತು.
ಪರಿನಿಯಮ ರಚಿಸಿ ಪಾವತಿಗೆ ಅವಕಾಶ ಕಲ್ಪಿಸಿಕೊಳ್ಳದೇ ಮೌಲ್ಯಮಾಪನ ಕಾರ್ಯಕ್ಕಾಗಿ ವಿಶ್ವವಿದ್ಯಾಲಯವು ಆಂತರಿಕ ಮತ್ತು ಬಾಹ್ಯ ಮೌಲ್ಯಮಾಪಕರಿಗೆ 73,29,54,360 ರು.ಗಳನ್ನು ಪಾವತಿಸಿರುವುದನ್ನು ಆಕ್ಷೇಪಣೆಯಲ್ಲಿರಿಸಿದೆ.

ಇದಲ್ಲದೆಯೇ ಪರಿನಿಯಮಗಳನ್ನು ರಚಿಸಿಕೊಳ್ಳದೆಯೆ 1,05,57,308 ರು.ಗಳನ್ನು ಸದಸ್ಯರಿಗೆ ಪ್ರಯಾಣ ಭತ್ಯೆ, ದಿನಭತ್ಯೆ, ಸಾರಿಗೆ ಭತ್ಯೆ, ಸಭಾ ಭತ್ಯೆಗಳನ್ನು ಪಾವತಿಸಿತ್ತು. ವಿಶ್ವವಿದ್ಯಾಲಯವು ವಿವಿಧ ಸಭೆಗಳಿಗೆ ಹಾಜರಾದ ಸದಸ್ಯರಿಗೆ ಎಯುಟಿ ಮೀಟಿಂಗ್ ಎಕ್ಸ್‌ಪೆನ್ಸಸ್ ಲೆಕ್ಕ ಶೀರ್ಷಿಕೆಯಡಿ ತಂಡದ ಸದಸ್ಯರಿಗೆ ಉಪಸ್ಥಿತಿ ಭತ್ಯೆ, ಪ್ರಯಾಣ ಭತ್ಯೆ, ದಿನಭತ್ಯೆ, ಸಾರಿಗೆ ಭತ್ಯೆ ಹಾಗೂ ಇತರೆ ಭತ್ಯೆ ಸೇರಿ ಒಟ್ಟು 1,05,57,308 ರುಗ.ಳನ್ನು ಪಾವತಿಸಿತ್ತು.
ವಿಶ್ವವಿದ್ಯಾಲಯದ ಪರಿನಿಯಮಗಳನ್ನು ರಚಿಸಿಕೊಳ್ಳದೆಯೇ ಈ ಭತ್ಯೆಗಳನ್ನು ಪಾವತಿಸಿತ್ತು. ಹೀಗಾಗಿ ಈ ಮೊತ್ತವನ್ನೂ ಲೆಕ್ಕ ಪರಿಶೋಧಕರು ಆಕ್ಷೇಪಣೆಯಲ್ಲಿರಿಸಿರುವುದು ಗೊತ್ತಾಗಿದೆ.
ಸ್ಥಳೀಯ ವಿಚಾರಣೆ ಸಮಿತಿ ಸದಸ್ಯರಿಗೂ 1,89, 60, 434 ರು ಪಾವತಿ
2023-24ನೇ ಸಾಲಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಾರ್ಷಿಕ ಲೆಕ್ಕ ಪರಿಶೋಧನೆಯಲ್ಲಿ ವೋಚರ್‍ಗಳನ್ನು ಪರಿಶೀಲಿಸಿದ್ದರು. ಇದರ ಪ್ರಕಾರ ವಿಶ್ವವಿದ್ಯಾಲಯವು ಸಂಯೋಜನೆ ಹಾಗೂ ಇತರೆ ಉದ್ದೇಶಗಳಿಗಾಗಿ ಮನವಿ ಸಲ್ಲಿಸಿರುವ ಕಾಲೇಜುಗಳಿಗೆ ಭೇಟಿ ನೀಡಿ ವರದಿ ನೀಡುವ ಸಲುವಾಗಿ ಸ್ಥಳೀಯ ವಿಚಾರಣೆ ಸಮಿತಿ ರಚಿಸಲಾಗಿತ್ತು. ಈ ತಂಡದ ಸದಸ್ಯರಿಗೆ ಪ್ರಯಣ ಭತ್ಯೆ, ದಿನಭತ್ಯೆ, ಸಾರಿಗೆ ಭತ್ಯೆ ಇತರೆ ಭತ್ಯೆಗಳು ಸೇರಿ ಒಟ್ಟು 1,89,60,434 ರು.ಗಳನ್ನು ಪಾವತಿಸಿತ್ತು. ಇದನ್ನೂ ಸಹ ಯಾವುದೇ ಪರಿನಿಯಮಗಳನ್ನು ರಚಿಸಿಕೊಳ್ಳದೆಯೇ ಪಾವತಿಸಿತ್ತು. ಅಲ್ಲದೇ ಈ ಪಾವತಿಗೆ ಸೂಕ್ತ ಸ್ಪಷ್ಟೀಕರಣವನ್ನೂ ವಿಶ್ವವಿದ್ಯಾಲಯವು ನೀಡಿರಲಿಲ್ಲ.
ವಿಶ್ವವಿದ್ಯಾಲಯದ ಅಧಿಸೂಚನೆ (ಸಂಖ್ಯೆ; ಎಯುಟಿಎಚ್/ಟಿಎ-ಡಿಎ-130/2014-15 ದಿನಾಂಕ 03.11.2014)ರ ಪ್ರಕಾರ ಬೆಂಗಳೂರು ಜಿಲ್ಲೆಗೆ ಭೇಟಿ ನೀಡಿದಲ್ಲಿ ದಿನಕ್ಕೆ 750 ರು., ಇತರೆ ಜಿಲ್ಲೆಗಳಿಗೆ ಭೇಟಿ ನೀಡಿದರೇ 450 ರು. ದಿನಭತ್ಯೆ ನಿಗದಿಪಡಿಸಿತ್ತು. ಇತರೆ ಜಿಲ್ಲೆಗಳಿಗೆ ಭೇಟಿ ನೀಡಿದಾಗಲೂ ಸಹ ಬೆಂಗಳೂರು ಜಿಲ್ಲೆಗೆ ಅನ್ವಯವಾಗುವ ದಿನಭತ್ಯೆ 750 ರು.ಗಳನ್ನು ಪಾವತಿಸಿತ್ತು.ಇದನ್ನೂ ಸಹ ಯಾವುದೇ ಪರಿನಿಯಮಗಳನ್ನು ರಚಿಸಿಕೊಳ್ಳದೆಯೇ ಪಾವತಿಸಿತ್ತು. ಅಲ್ಲದೇ ಈ ಪಾವತಿಗೆ ಸೂಕ್ತ ಸ್ಪಷ್ಟೀಕರಣವನ್ನೂ ವಿಶ್ವವಿದ್ಯಾಲಯವು ನೀಡಿರಲಿಲ್ಲ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ರಾಮನಗರದ ಅರ್ಚಕರಹಳ್ಳಿಯಲ್ಲಿ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಟೆಂಡರ್ ಪೂರ್ವ ಪರಿಶೀಲನಾ ಸಮಿತಿಯು ನೀಡಿದ್ದ ಶಿಫಾರಸ್ಸನ್ನು ವಿಶ್ವವಿದ್ಯಾಲಯವು ಪರಿಗಣಿಸಿರಲಿಲ್ಲ.
ರಾಮನಗರದಲ್ಲಿ 400 ಕೋಟಿ ಅನುತ್ಪಾದಕ ವೆಚ್ಚ; ಟೆಂಡರ್ ಪೂರ್ವ ಪರಿಶೀಲನಾ ಸಮಿತಿ ಅಭಿಪ್ರಾಯ ಬದಿಗೊತ್ತಿದ್ದೇಕೆ?
442 ಕೋಟಿ ರು ಮೌಲ್ಯದ ಸ್ಥಿರಾಸ್ತಿಹ ಹೊಂದಿರುವ ವಿಶ್ವವಿದ್ಯಾಲಯವು ಭೌತಿಕ ಆಸ್ತಿಯ ಮಾಹಿತಿಯನ್ನು ಲೆಕ್ಕ ಪರಿಶೋಧಕರಿಗೆ ಒದಗಿಸಿರಲಿಲ್ಲ.
442.03 ಕೋಟಿ ರು ಮೌಲ್ಯದ ಸ್ಥಿರಾಸ್ತಿ; ಭೌತಿಕ ಆಸ್ತಿಗಳ ವಿವರಗಳನ್ನೇ ಲೆಕ್ಕಪರಿಶೋಧನೆಗೆ ಒದಗಿಸದ ವಿವಿ
ವಿಶ್ವವಿದ್ಯಾಲಯವು ಅಂದಾಜು ಮೊತ್ತವನ್ನು ಮೀರಿ ವೆಚ್ಚ ಮಾಡಿತ್ತು.
ಅಂದಾಜು ಮೊತ್ತ ಮೀರಿ ವೆಚ್ಚ, ವಿವಿಧ ಶುಲ್ಕ, ಬಡ್ಡಿ ನಿರ್ವಹಣೆಯಲ್ಲಿ ಲೋಪ; ಬೇಜವಾಬ್ದಾರಿ ಬಯಲು
ವಿಶ್ವವಿದ್ಯಾಲಯವು ಸಂಗ್ರಹಿಸಿದ್ದ ಸಂಯೋಜನೆ ಶುಲ್ಕದಲ್ಲೂ ವ್ಯತ್ಯಾಸ ಕಂಡು ಬಂದಿತ್ತು.
ಸಂಯೋಜನೆ ಶುಲ್ಕ; 42.03 ಕೋಟಿ ಸಂಗ್ರಹ, 6.51 ಕೋಟಿ ರು ವ್ಯತ್ಯಾಸ, ವಿವಿ ಬಳಿ ಪೂರಕ ದಾಖಲೆಗಳೇ ಇಲ್ಲ
ವಾರ್ಷಿಕ ಲೆಕ್ಕಪತ್ರಗಳಲ್ಲಿಯೂ ವ್ಯತ್ಯಾಸ ಕಂಡು ಬಂದಿತ್ತು.
ವಾರ್ಷಿಕ ಲೆಕ್ಕಪತ್ರ, ಬ್ಯಾಂಕ್ ಖಾತೆಗಳ ಸ್ವೀಕೃತಿ; 116 ಕೋಟಿಯಲ್ಲಿ ವ್ಯತ್ಯಾಸ, ಪರೀಕ್ಷಾ ಶುಲ್ಕದಲ್ಲಿ ಅಕ್ರಮ?
155 ಸಿಬ್ಬಂದಿ ನೇಮಕದಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿತ್ತು. ಮನಸೋ ಇಚ್ಛೆ ಆದೇಶ ಹೊರಡಿಸಿತ್ತಲ್ಲದೇ ವಿವಿಧ ಸಂಬಳವನ್ನು ನೀಡಲಾಗಿತ್ತು. ಇದರಿಂದ ಆರ್ಥಿಕ ನಷ್ಟವುಂಟಾಗಿತ್ತು.
155 ಸಿಬ್ಬಂದಿ ನೇಮಕದಲ್ಲಿ ನಿಯಮ ಉಲ್ಲಂಘನೆ, ಮನಸೋ ಇಚ್ಛೆ ಆದೇಶ, ವಿವಿಧ ಸಂಬಳ; ಆರ್ಥಿಕ ನಷ್ಟ
ವಿಶ್ವವಿದ್ಯಾಲಯದಲ್ಲಿ ಆರ್ಥಿಕ ಅಶಿಸ್ತು ಕಂಡು ಬಂದಿರುವ ಲೆಕ್ಕ ಪರಿಶೋಧನೆ ವರದಿಯು ಬಯಲು ಮಾಡಿದ್ದರೂ ಸಹ ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ ಪ್ರಕಾಶ್ ಪಾಟೀಲ್ ಅವರು ಯಾವುದೇ ಕ್ರಮ ವಹಿಸಿಲ್ಲ ಎಂದು ತಿಳಿದು ಬಂದಿದೆ.









