ಬೆಂಗಳೂರು; ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಅಸಿಸ್ಟಂಟ್ ಇಂಜಿನಿಯರ್ ಸೇರಿದಂತೆ ಒಟ್ಟಾರೆ 155 ಮಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ಮಾಡಿಕೊಂಡಿರುವ ನೇಮಕದಲ್ಲೂ ನಿಯಮ ಉಲ್ಲಂಘನೆಗಳಾಗಿರುವುದನ್ನು ಲೆಕ್ಕ ಪರಿಶೋಧನೆಯು ಪತ್ತೆ ಹಚ್ಚಿದೆ.
2023-24ನೇ ಸಾಲಿಗೆ ಸಂಬಂಧಿಸಿದಂತೆ ಪೂರ್ಣಗೊಂಡಿರುವ ಲೆಕ್ಕಪರಿಶೋಧನೆ ವರದಿಯು, ವಿಶ್ವವಿದ್ಯಾಲಯವು ಎಸಗಿರುವ ನಿಯಮ ಉಲ್ಲಂಘನೆಗಳ ಪಟ್ಟಿಯನ್ನು ಒದಗಿಸಿದೆ.
ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ಅಸಿಸ್ಟಂಟ್ ಇಂಜಿನಿಯರ್, ಅಕೌಂಟ್ ಅಸಿಸ್ಟಂಟ್, ಸಹಾಯಕರು, ಡೇಟಾ ಎಂಟ್ರಿ ಆಪರೇಟರ್, ಜ್ಯೂನಿಯರ್ ಅಸಿಸ್ಟಂಟ್, ಡ್ರೈವರ್, ಗ್ರೂಪ್ ಡಿ ಹುದ್ದೆಯಲ್ಲಿ ಒಟ್ಟಾರೆ 155 ಮಂದಿಯನ್ನು ಮೈಸೂರಿನ ಶಾರ್ಪ್ ವಾಚ್ ಇನ್ವೆಷ್ಟಿಗೇಷನ್ ಸೆಕ್ಯೂರಿಟಿ ಸರ್ವಿಸ್ ಮೂಲಕ ನೇಮಿಸಲಾಗಿದೆ. ಈ ಸೇವೆ ಪಡೆಯಲು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆಯನ್ನು ಪಡೆಯಲಾಗಿದೆ. 2022ರ ಮೇ 25ರಂದು ಟೆಂಡರ್ ಕರೆಯಲಾಗಿತ್ತು.

ಆದರೆ ಈ ಟೆಂಡರ್ ಕಡತದ ಪ್ರಕಾರ ವಿವಿಧ ವರ್ಗದ ಸಿಬ್ಬಂದಿಗಳಿಗೆ ನೀಡಬೇಕಿರುವ ಸಂಬಳದ ಲೆಕ್ಕಾಚಾರವನ್ನು ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆ ಅಡಿಯಲ್ಲಿ ನಿಗದಿಪಡಿಸಿರುವ ಮೊತ್ತವನ್ನು ಆಧರಿಸಿ ಒಟ್ಟಾರೆ ಸಂಬಳದ ಲೆಕ್ಕಾಚಾರವನ್ನು ಮಾಡಬೇಕಾಗಿತ್ತು. ಅಲ್ಲದೇ ಇಪಿಎಫ್, ಇಎಸ್‌ಐ ಹಾಗೂ ಪಿ ಟಿ ಯನ್ನು ನಿಯಮಾನುಸಾರ ಕಟಾಯಿಸಬೇಕಿತ್ತು.
ನಿವ್ವಳ ಸಂಬಳವನ್ನು ಪಾವತಿಸುವ ಬಗ್ಗೆ ಕ್ರಮಬದ್ಧವಾದ ಲೆಕ್ಕಾಚಾರದ ತಃಖ್ತೆಯನ್ನು ಸಿದ್ಧಪಡಿಸಬೇಕಿತ್ತು. ವಿಶ್ವವಿದ್ಯಾಲಯದಿಂಂದ ಈ ಸೇವೆಗೆ ಸಂಬಂಧಿಸಿದಂತೆ ಆಗುವ ಆರ್ಥಿಕ ಹೊರೆಯ ಬಗ್ಗೆ ಸ್ಪಷ್ಟ ಚಿತ್ರಣವನ್ನು ಸಿಂಡಿಕೇಟ್ ಸಭೆಗೆ ಮಂಡಿಸಿ ಆರ್ಥಿಕ ಅನುಮೋದನೆಯನ್ನು ಪಡೆಯಬೇಕಿತ್ತು.
ಆದರೆ ಈ ಯಾವ ಪ್ರಕ್ರಿಯೆಯನ್ನೂ ಪಾಲಿಸಿಲ್ಲ. ನೇರವಾಗಿ ಟೆಂಡರ್ ಆಹ್ವಾನಿಸುವ ಮೂಲಕ ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಮಾಡಿದೆ. ಈ ರೀತಿಯ ಯಾವುದೇ ಆರ್ಥಿಕ ಶಿಸ್ತನ್ನು ಕೈಗೊಳ್ಳದೇ ವಿವಿಧ ಸಿಬ್ಬಂದಿಗಳಿಗೆ ವಿವಿಧ ಸಂಬಳ ನೀಡುತ್ತಿರುವುದು ಸಮಂಜಸವಾಗಿರುವುದಿಲ್ಲ. ಹಾಗೂ ಟೆಂಡರ್‍ನಲ್ಲಿ ಆರ್ಥಿಕ ಹೊರೆಯಯ ಆಧಾರದ ಮೇಲೆ ಸೇವೆದಾರರು ಸೇವಾ ಶುಲ್ಕವನ್ನು ನಮೂದಿಸಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿತ್ತು.
ಆದರೆ ಈ ರೀತಿಯ ಆರ್ಥಿಕ, ತಾಂತ್ರಿಕ ಸಮಾಲೋಚನೆಯನ್ನು ಮಾಡದೇ ಟೆಂಡರ್ ಪ್ರಕ್ರಿಯೆಯನ್ನು ಯಾವ ಕಾರಣಕ್ಕೆ ಕೈಗೊಳ್ಳಲಾಗಿತ್ತು. ಈ ಕುರಿತು ಸೂಕ್ತ ವಿವರಣೆಯನ್ನು ಲೆಕ್ಕ ಪರಿಶೋಧನೆಗೆ ನೀಡಬೇಕಿತ್ತು.
2022-23ನೇ ಸಾಲಿನಲ್ಲಿ ಹೊರಗುತ್ತಿಗೆ ಸೇವೆ ಪಡೆಯಲು ಕರೆದಿದ್ದ ಟೆಂಡರ್‍ನಲ್ಲಿ ಮೂರು ಸಂಸ್ಥೆಗಳು ಭಾಗವಹಿಸಿದ್ದವು. ಬೆಂಗಳೂರಿನ ಹಿಂದೂಸ್ತಾನ್ ಸೆಕ್ಯುರಿಟಿ ಸರ್ವೀಸ್, ಮೈಸೂರಿನ ಶಾರ್ಪ್ ಇನ್ವೆಷ್ಟಿಗೇಷನ್ ಸೆಕ್ಯುರಿಟಿ ಸರ್ವಿಸ್, ಶ್ರೀ ದತ್ತ ಸಾಯಿ ವಾಚ್ ಇನ್ವೆಷ್ಟಿಗೇಷನ್ ಸೆಕ್ಯೂರಿಟಿ ಸರ್ವೀಸ್ ಭಾಗವಹಿಸಿದ್ದವು.
ಈ ಪೈಕಿ ಮೂರೂ ಸಂಸ್ಥೆಗಳು ನಾನ್ ರೆಸ್ಪಾನ್ಸೀವ್ ಆಗಿದ್ದವು. ಅಂತಿಮವಾಗಿ ಶಾರ್ಪ್ ವಾಚ್ ಇನ್ವೆಸ್ಟಿಗೇಷನ್ ಸೆಕ್ಯೂರಿಟಿ ಸರ್ವಿಸ್ ನ್ನೇ ವರ್ಷಾಂತ್ಯದ ಲಾಭದ ಮೇರೆಗೆ 2022-23ನೇ ಸಾಲಿಗೆ ಆಯ್ಕೆ ಮಾಡಿಕೊಂಡಿತ್ತು. 2022ರ ಅಕ್ಟೋಬರ್ 7ರಂದು ಕಾರ್ಯಾದೇಶ ನೀಡಲಾಗಿತ್ತು. ಈ ಕಾರ್ಯಾದೇಶದ ಪ್ರಕಾರ ಗುತ್ತಿಗೆ ಅವಧಿಯು 2023ರ ಅಕ್ಟೋಬರ್ 30ಕ್ಕೆ ಮುಕ್ತಾಯಗೊಳ್ಳಬೇಕು. ಹೀಗಾಗಿ ಈ ಸೇವೆಗಳಿಗಾಗಿ ಪುನಃ ಟೆಂಡರ್ ಆಹ್ವಾನಿಸಬೇಕಿತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ.
ಆದರೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು 2023ರ ಡಿಸೆಂಬರ್ 1ರಿಂದ ಮೂರು ತಿಂಗಳ ಅಥವಾ ಅಂತಿಮ ನಿರ್ಧಾರ ಕೈಗೊಳ್ಳುವವರೆಗೂ ಯಾವುದೋ ಮೊದಲೋ ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲದೇ ಈ ಸೇವೆಯು 2023ರ ಅಕ್ಟೋಬರ್ 30ಕ್ಕೆ ಮುಕ್ತಾಯಗೊಂಡಿರುವುದರಿಂದ 2023ರ ನವೆಂಬರ್ 1ರಿಂದಲೇ ಮುಂದುವರೆದ ಕಾರ್ಯಾದೇಶ ನೀಡಬೇಕು. ನಂತರ ನವೆಂಬರ್ ತಿಂಗಳ ವೇತನವನ್ನೂ ನೀಡಲಾಗಿದೆ.
ಅಲ್ಲದೇ ಇದೇ ಏಜೆನ್ಸಿಯಿಂದ ವಿಶ್ವವಿದ್ಯಾಲಯವು ಮಿನಿಯಲ್ ಸ್ವಚ್ಛತಾ ಸೇವೆಯನ್ನೂ 97 ಮಂದಿಯಿಂದ ಪಡೆದುಕೊಂಡಿದೆ.

ನವೆಂಬರ್ 23ರ ಸಂಬಳವನ್ನು ಹೇಗೆ ನೀಡಲಾಯಿತು, ಈ ರೀತಿಯ ತಾಳೆಯಾಗದಿರುವ ದಿನಾಂಕಗಳನ್ನು ಮನಸೋ ಇಚ್ಛೆ ಮುಂದುವರೆದ ಕಾರ್ಯಾದೇಶಗಳನ್ನು ನೀಡುತ್ತಿರುವುದು ಸಮಂಜಸವಾಗಿರುವುದಿಲ್ಲ. ಅಲ್ಲದೇ ಈ ದಿನದವರೆಗೂ ಅಂದರೇ 2025ರ ಜನವರಿ 15ರವರೆಗೂ ಯಾವುದೇ ಟೆಂಡರ್ ಆಹ್ವಾನಿಸದೆಯೇ ಗುತ್ತಿಗೆದಾರರಿಂದ ಸೇವೆಯನ್ನು ಮುಂದುವರೆಸಿಕೊಂಡು ಬಂದಿದೆ,’ ಎಂದು ಲೆಕ್ಕ ಪರಿಶೋಧನೆ ವೇಳೆಯಲ್ಲಿ ಪತ್ತೆ ಹಚ್ಚಲಾಗಿದೆ.

ಈ ರೀತಿಯ ಕಾಲಕಾಲಕ್ಕೆ ಕೈಗೊಳ್ಳಬೇಕಾಗಿರುವ ಕ್ರಮಗಳನ್ನು ಈಗಾಗಲೇ ಹಲವಾರು ಸರ್ಕಾರದ ಆದೇಶಗಳಲ್ಲಿ ಮಾರ್ಗದರ್ಶನಗಳನ್ನು ನೀಡಿದ್ದರೂ ಸಹ ಯಾವುದನ್ನೂ ಪಾಲಿಸಿಲ್ಲ. ಅಸಡ್ಡೆ ತೋರಿದೆ. ಹೀಗಾಗಿ ವಿಶ್ವವಿದ್ಯಾಲಯಕ್ಕೆ ಆರ್ಥಿಕ ನಷ್ಟವುಂಟಾಗಿರುತ್ತದೆ. ಅಲ್ಲದೇ ಸರ್ಕಾರದ ಆದೇಶಗಳು ಮತ್ತು ನಿಯಮಗಳ ಉಲ್ಲಂಘನೆಯಾಗಿದೆ. ಈ ಸಂಬಂಧ ಜಾರಿಗೊಳಿಸಿದ್ದ ವಿಚಾರಣೆ ನೋಟೀಸ್‌ಗೆ ವಿಶ್ವವಿದ್ಯಾಲಯವು ಉತ್ತರ ನೀಡಿದೆಯಾದರೂ ಅದನ್ನು ಲೆಕ್ಕ ಪರಿಶೋಧಕರು ಒಪ್ಪಿಲ್ಲ. ಈ ಬಗ್ಗೆ ಸರಿಯಾಗಿ ಸ್ಪಷ್ಟೀಕರಣ ನೀಡುವವರೆಗೂ 6,23,94,923 ರುಗಳನ್ನು ಆಕ್ಷೇಪಣೆಯಲ್ಲಿ ಇರಿಸಿದೆ.

2023-23ನೇ ಸಾಲಿನಲ್ಲಿ ಈ ಸೇವೆಗಾಗಿ ಟೆಂಡರ್ ಆಹ್ವಾನಿಸಿತ್ತು. ಇದರಲ್ಲಿ ಶಾರ್ಪ್ ವಾಚ್ ಇನ್ವೆಷ್ಟಿಗೇಷನ್ ಸೆಕ್ಯುರಿಟಿ ಸರ್ವೀಸ್, ಡಿಟೆಕ್ವಿವ್ ಆಲ್ ಸೆಕ್ಯುರಿಟಿ , ವಿಸ್‌ಡಂ, ದಾತಾರ್ ಸಾಯಿ ಸೆಕ್ಯುರಿಟಿ ಎಂಟರ್ ಪ್ರೈಸೆಸ್ ಭಾಗವಹಿಸಿದ್ದವು. ಇಲ್ಲಿಯೂ ಸಹ ಶಾರ್ಪ್ ವಾಚ್ ಇನ್ವೆಸ್ಟಿಗೇಷನ್ ಸೆಕ್ಯುರಿಟಿ ಸರ್ವೀಸ್‌ಗೆ 12 ತಿಂಗಳ ಅವಧಿಗೆ ಕಾರ್ಯಾದೇಶ ನೀಡಿದೆ.
ಈ ಕಾರ್ಯಾದೇಶದ ಪ್ರಕಾರ ಗುತ್ತಿಗೆ ಅವಧಿಯು 2023ರ ಆಗಸ್ಟ್ 31ಕ್ಕೆ ಅಂತ್ಯವಾಗಲಿದೆ. ಹೀಗಾಗಿ ಈ ಸೇವೆಯನ್ನು ಪುನಃ ಪಡೆಯಲು ಟೆಂಡರ್ ಆಹ್ವಾನಿಸಬೇಕು. ನಂತರ ಮೂರು ಬಾರಿ 2023ರ ಆಗಸ್ಟ್ 9, ನವೆಂಬರ್ 24 ಮತ್ತು 2024ರ ಫೆ.23ರಂದು ಮನಸೋ ಇಚ್ಛೆ ಮುಂದುವರೆದ ಕಾರ್ಯಾದೇಶ ನೀಡಲಾಗಿದೆ. ಇದು ಸಮಂಜಸವಲ್ಲ ಎಂದು ಲೆಕ್ಕ ಪರಿಶೋಧಕರು ಆಕ್ಷೇಪ ಎತ್ತಿದ್ದಾರೆ.
2023-24ನೇ ಸಾಲಿನಲ್ಲಿ ವಿಶ್ವವಿದ್ಯಾಲಯವು ನಿವೃತ್ತ ಅಧಿಕಾರಿ, ನೌಕರರನ್ನು ನೇಮಿಸಿಕೊಂಡು ವೇತನದ ಮೊತ್ತವಾಗಿ ಒಟ್ಟು 82,40,172 ರು.ಗಳನ್ನು ಪಾವತಿಸಿದೆ.
ಡಾ ಸುಜಾ ಕೆ ಶ್ರೀಧರ್ ಅವರಿಗೆ ತಿಂಗಳಿಗೆ 90,000ರು ಡಾ ಹೆಚ್ ಎಸ್ ಸಿದ್ದಮಲ್ಲಯ್ಯ ಅವರಿಗೆ 90,000 ರು, ಸೋಮಶೇಖರ್ ಸಿ ಬದಾಮಿಗೆ 1,00,000.00, ಪ್ರೊ.ರಾಮಚಂದ್ರ ಶೆಟ್ಟಿ ಅವರಿಗೆ 1,20,000 ರು., , ಡಾ ಮುನೀರ್ ಅಹ್ಮದ್ ಅವರಿಗೆ 1,20,000 ರು., ಎಸ್ ಸುರೇಶ್ ಬಾಬು ಅವರಿಗೆ 60,000 ರು., ಯು ಜಯದೇವ ಅವರಿಗೆ 41,710 ರು., ಬಿ ಶಂಕರ್ ರಾವ್ ಅವರಿಗೆ 64,971 ರು ಪಾವತಿಸಿತ್ತು.

ನಿವೃತ್ತ ನೌಕರರನ್ನು ಸಮಾಲೋಚಕರು ಎಂದು ನೇಮಕಾತಿ ಮಾಡಿಕೊಂಡಿದೆ. ಆದರೆ ವಿಶ್ವವಿದ್ಯಾಲಯದಲ್ಲಿ ಸಮಾಲೋಚಕರು ಎಂದು ಹುದ್ದೆಯು ಸರ್ಕಾರದಿಂದ ಇದುವರೆಗೂ ಸೃಜನೆಯಾಗಿರುವುದಿಲ್ಲ. ಹಾಗೂ ನಿವೃತ್ತಿ ನೌಕರರನ್ನು ಮಂಜೂರಾದ ಹುದ್ದೆಯ ಎದುರಾಗಿ ನೇಮಕಾತಿ ಮಾಡಿಕೊಳ್ಳಲಾಗಿದೆ.

ಈ ಬಗ್ಗೆ ಯಾವುದೇ ದಾಖಲಾತಿಯನ್ನೂ ಒದಗಿಸಿಲ್ಲ. 2016ರ ಮಾರ್ಚ್ 2ರಂದು ಸರ್ಕಾರವು ಹೊರಡಿಸಿದ್ದ ಸುತ್ತೋಲೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗಾಗಿ 82,40,172 ರು.ಗಳನ್ನು ಲೆಕ್ಕ ಪರಿಶೋಧಕರು ಆಕ್ಷೇಪಣೆಯಲ್ಲಿರಿಸಿರುವುದು ವರದಿಯಿಂದ ಗೊತ್ತಾಗಿದೆ.
ರಾಮನಗರದ ಅರ್ಚಕರಹಳ್ಳಿಯಲ್ಲಿ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಟೆಂಡರ್ ಪೂರ್ವ ಪರಿಶೀಲನಾ ಸಮಿತಿಯು ನೀಡಿದ್ದ ಶಿಫಾರಸ್ಸನ್ನು ವಿಶ್ವವಿದ್ಯಾಲಯವು ಪರಿಗಣಿಸಿರಲಿಲ್ಲ.
ರಾಮನಗರದಲ್ಲಿ 400 ಕೋಟಿ ಅನುತ್ಪಾದಕ ವೆಚ್ಚ; ಟೆಂಡರ್ ಪೂರ್ವ ಪರಿಶೀಲನಾ ಸಮಿತಿ ಅಭಿಪ್ರಾಯ ಬದಿಗೊತ್ತಿದ್ದೇಕೆ?
442 ಕೋಟಿ ರು ಮೌಲ್ಯದ ಸ್ಥಿರಾಸ್ತಿಹ ಹೊಂದಿರುವ ವಿಶ್ವವಿದ್ಯಾಲಯವು ಭೌತಿಕ ಆಸ್ತಿಯ ಮಾಹಿತಿಯನ್ನು ಲೆಕ್ಕ ಪರಿಶೋಧಕರಿಗೆ ಒದಗಿಸಿರಲಿಲ್ಲ.
442.03 ಕೋಟಿ ರು ಮೌಲ್ಯದ ಸ್ಥಿರಾಸ್ತಿ; ಭೌತಿಕ ಆಸ್ತಿಗಳ ವಿವರಗಳನ್ನೇ ಲೆಕ್ಕಪರಿಶೋಧನೆಗೆ ಒದಗಿಸದ ವಿವಿ
ವಿಶ್ವವಿದ್ಯಾಲಯವು ಅಂದಾಜು ಮೊತ್ತವನ್ನು ಮೀರಿ ವೆಚ್ಚ ಮಾಡಿತ್ತು.
ಅಂದಾಜು ಮೊತ್ತ ಮೀರಿ ವೆಚ್ಚ, ವಿವಿಧ ಶುಲ್ಕ, ಬಡ್ಡಿ ನಿರ್ವಹಣೆಯಲ್ಲಿ ಲೋಪ; ಬೇಜವಾಬ್ದಾರಿ ಬಯಲು
ವಿಶ್ವವಿದ್ಯಾಲಯವು ಸಂಗ್ರಹಿಸಿದ್ದ ಸಂಯೋಜನೆ ಶುಲ್ಕದಲ್ಲೂ ವ್ಯತ್ಯಾಸ ಕಂಡು ಬಂದಿತ್ತು.
ಸಂಯೋಜನೆ ಶುಲ್ಕ; 42.03 ಕೋಟಿ ಸಂಗ್ರಹ, 6.51 ಕೋಟಿ ರು ವ್ಯತ್ಯಾಸ, ವಿವಿ ಬಳಿ ಪೂರಕ ದಾಖಲೆಗಳೇ ಇಲ್ಲ
ವಾರ್ಷಿಕ ಲೆಕ್ಕಪತ್ರಗಳಲ್ಲಿಯೂ ವ್ಯತ್ಯಾಸ ಕಂಡು ಬಂದಿತ್ತು.
ವಾರ್ಷಿಕ ಲೆಕ್ಕಪತ್ರ, ಬ್ಯಾಂಕ್ ಖಾತೆಗಳ ಸ್ವೀಕೃತಿ; 116 ಕೋಟಿಯಲ್ಲಿ ವ್ಯತ್ಯಾಸ, ಪರೀಕ್ಷಾ ಶುಲ್ಕದಲ್ಲಿ ಅಕ್ರಮ?
ವಿಶ್ವವಿದ್ಯಾಲಯದಲ್ಲಿ ಆರ್ಥಿಕ ಅಶಿಸ್ತು ಕಂಡು ಬಂದಿರುವ ಲೆಕ್ಕ ಪರಿಶೋಧನೆ ವರದಿಯು ಬಯಲು ಮಾಡಿದ್ದರೂ ಸಹ ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ ಪ್ರಕಾಶ್ ಪಾಟೀಲ್ ಅವರು ಯಾವುದೇ ಕ್ರಮ ವಹಿಸಿಲ್ಲ ಎಂದು ತಿಳಿದು ಬಂದಿದೆ.









