ಅಂದಾಜು ಮೊತ್ತ ಮೀರಿ ವೆಚ್ಚ, ವಿವಿಧ ಶುಲ್ಕ, ಬಡ್ಡಿ ನಿರ್ವಹಣೆಯಲ್ಲಿ ಲೋಪ; ಬೇಜವಾಬ್ದಾರಿ ಬಯಲು

ಬೆಂಗಳೂರು; ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಶಾಸನಾತ್ಮಕ ಕಟಾವಣೆಗಳಾದ ಇಎಂಡಿ ಸೇರಿದಂತೆ ಇನ್ನಿತರೆ ಮಾಹಿತಿಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ. ಅಲ್ಲದೇ ಅಂದಾಜು ಮೊತ್ತವನ್ನು ಮೀರಿ ವೆಚ್ಚ ಮಾಡಿರುವುದನ್ನು ಲೆಕ್ಕ ಪರಿಶೋಧಕರು ಬಯಲು ಮಾಡಿದ್ದಾರೆ.

 

2023-24ನೇ ಸಾಲಿಗೆ ಸಂಬಂಧಿಸಿದಂತೆ ಪೂರ್ಣಗೊಂಡಿರುವ ಲೆಕ್ಕ ಪರಿಶೋಧನೆ ವರದಿಯು ವಿಶ್ವವಿದ್ಯಾಲಯದ ನಿರ್ಲಕ್ಷ್ಯಗಳನ್ನು ಬಯಲು ಮಾಡಿದೆ.

 

ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

 

ವಿಶ್ವವಿದ್ಯಾಲಯದ 2023-24ನೇ ಸಾಲಿನ ವಾರ್ಷಿಕ ಲೆಕ್ಕಪತ್ರದ ಪ್ರಕಾರ ಇತರೆ ಹೊಣೆಗಾರಿಕೆ ಭಾಗವನ್ನೂ ಲೆಕ್ಕ ಪರಿಶೋಧಕರು ಪರಿಶೀಲಿಸಿದ್ದಾರೆ. ಶಾಸನಾತ್ಮಕ ಕಟಾವಣೆಗಳಾದ ಇಎಂಡಿ ಲೆಕ್ಕ ಶೀರ್ಷಿಕೆಯಡಿಯಲ್ಲಿ 23,64,221 ಹಾಗೂ ಡ್ಯೂಟೀಸ್‌ ಮತ್ತು ಟ್ಯಾಕ್ಸ್‌ ಲೆಕ್ಕ ಶೀರ್ಷಿಕೆಯಡಿಯಲ್ಲಿ 1,01,30,626 ರು.ಗಳ ಶಿಲ್ಕನ್ನು ಸಂಬಂಧಪಟ್ಟ ಇಲಾಖೆಗಳಿಗೆ ಸಕಾಲದಲ್ಲಿ ಜಮೆ ಮಾಡದೇ ಬಾಕಿ ಉಳಿಸಿಕೊಂಡಿದೆ. ಈ ಬಗ್ಗೆಯೂ ವಿಶ್ವವಿದ್ಯಾಲಯವು ಸಹ ಯಾವುದೇ ಅನುಸರಣೆ ಒದಗಿಸಿಲ್ಲ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

2023-24ನೇ ಸಾಲಿನಲ್ಲಿ 29,912.85 ಲಕ್ಷಗಳ ರುಪಾಯಿ ಆದಾಯವನ್ನು ನಿರೀಕ್ಷಿಸಿತ್ತು. 85,189.17 ಲಕ್ಷ ರು.ಗಳಿಗೆ ವೆಚ್ಚವನ್ನು ನಿಗದಿಪಡಿಸಿತ್ತು. ಅಂದಾಜಿನ ಪರಿಧಿಯಲ್ಲಿ ವೆಚ್ಚಗಳನ್ನು ಭರಿಸಿರುವುದನ್ನು ಲೆಕ್ಕ ಪರಿಶೋಧನೆಯಲ್ಲಿ ಗಮನಿಸಿದೆ.

 

 

ಈ ಸಂಬಂಧ ವಿಶ್ವವಿದ್ಯಾಲಯವು ಲೆಕ್ಕ ಪರಿಶೋಧನೆಗೆ ಆಯವ್ಯಯ ಅಂದಾಜು ಪಟ್ಟಿಯನ್ನು ಹಾಜರುಪಡಿಸಿತ್ತು. ಇದನ್ನು ಪರಿಶೀಲಿಸಿದ್ದ ಲೆಕ್ಕ ಪರಿಶೋಧಕರು, ಆಯವ್ಯಯ ಅಂದಾಜಿನಲ್ಲಿ ವಿವಿಧ ವಹಿವಾಟು ಶೀರ್ಷಿಕೆಗಳಡಿ ಅವಕಾಶ ಕಲ್ಪಿಸಿರುವ ಮೊತ್ತವನ್ನು ಬಳಸಿಕೊಳ್ಳದಿರುವುದನ್ನು ಹಾಗೂ ಅಂದಾಜಿನ ಪರಿಧಿಯಲ್ಲಿ ಖರ್ಚು ಮಾಡುತ್ತಿರುವುದನ್ನು ಗಮನಿಸಿರುವುದು ತಿಳಿದು ಬಂದಿದೆ.

 

 

 

2023-24ನೇ ಸಾಲಿನ ಆಯವ್ಯಯ ಅಂದಾಯ ಪಟ್ಟಿಯಲ್ಲಿ ನಿಗದಿಪಡಿಸಿರುವ ನಿರೀಕ್ಷಿತ ಆದಾಯ ಹಾಗೂ ವೆಚ್ಚಗಳ ಅಂದಾಜುನ್ನು ಪರಿಷ್ಕರಿಸಿ ಪರಿಷ್ಕೃತ ಆಯವ್ಯಯ ಅಂದಾಜು ಸಿದ್ಧಪಡಿಸಿದೆ. ವಾರ್ಷಿಕ ಲೆಕ್ಕಗಳೊಡನೆ ಪರಿಶೀಲಿಸಿದಾಗ ಅಂದಾಜುಗಳ ಮೊತ್ತವನ್ನು ಮೀರಿ ವೆಚ್ಚಗಳನ್ನು ಮಾಡಿದೆ. ಅಲ್ಲದೇ ಅಂದಾಜು ಮೊತ್ತವನ್ನು ಭರಿಸಬೇಕಾದ ಸಂದರ್ಭಗಳಲ್ಲಿ ಹೆಚ್ಚುವರಿ ವೆಚ್ಚ ಭರಿಸಲಾದ ಮೊತ್ತಗಳಿಗೆ ಹಣಕಾಸು ಸಮಿತಿಯ ಶಿಫಾರಸ್ಸುಗಳೊಂದಿಗೆ ಸಿಂಡಿಕೇಟ್‌ ಅನುಮೋದನೆ ಅಗತ್ಯವಿದೆ.

 

ಹೆಚ್ಚುವರಿ ವೆಚ್ಚಗಳು ಅನಿವಾರ್ಯ ಸಂದರ್ಭಗಳಲ್ಲಿ ವ್ಯಯಿಸಲು ಮಾತ್ರ ವಿನಾಯಿತಿ ಇದೆ. ಕೆಲವೊಂದು ಲೆಕ್ಕ ಶೀರ್ಷಿಕೆಯಡಿ ಆಯವ್ಯಯದಲ್ಲಿ ನಿಗದಿಪಡಿಸಲಾದ ಯಾವುದೇ ಮೊತ್ತವನ್ನು ಉಪಯೋಗಿಸಿಕೊಳ್ಳದಿರುವುದನ್ನು ಲೆಕ್ಕ ಪರಿಶೋಧನೆಯಲ್ಲಿ ಗಮನಿಸಲಾಗಿದೆ. ಇದೇ ಕ್ರಮಗಳು ಪುನರಾವರ್ತನೆಯಾದರೆ ಆಯವ್ಯಯ ಅಂದಾಜುಗಳಿಗೆ ಮಾನ್ಯತೆಯೇ ಇಲ್ಲದಂತಾಗುತ್ತದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

 

ವಿಶ್ವವಿದ್ಯಾಲಯದ ಆಯವ್ಯಯ ಅಂದಾಜು ಹಾಗೂ ಪರಿಷ್ಕೃತ ಅಂದಾಜುಗಳೆರಡಲ್ಲಿ ಹಲವು ವಹಿವಾಟು ಶೀರ್ಷಿಕೆಯಡಿ ವೆಚ್ಚ ಭರಿಸುವ ಅಗತ್ಯವಿಲ್ಲ. ಆದರೂ ಸಹ ಅನುದಾನ ಅವಕಾಶ ಕಲ್ಪಿಸಿರುವ ಕ್ರಮವು ಆಯವ್ಯಯದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದೆ.

 

2023-24ನೇ ಸಾಲಿನಲ್ಲಿ ಕೆಲವೊಂದು ವಹಿವಾಟು ಶೀರ್ಷಿಕೆಯ ಮೊತ್ತವು ವೆಚ್ಚವಾಗಿರುವುದಿಲ್ಲ. ಹೀಗಾಗಿ ವಹಿವಾಟು ಶೀರ್ಷಿಕೆಗಳಿಗೆ ಪರಿಷ್ಕೃತ ಅಂದಾಜು ಪಟ್ಟಿ ತಯಾರಿಸುವಾಗ ಕನಿಷ್ಠ ಅನುದಾನವನ್ನು ನಿಗದಿಪಡಿಸಿಕೊಂಡಿದೆ. ಅಲ್ಲದೇ 2023-24ನೇ ಸಾಲಿನಲ್ಲಿ ಕೆಲವೊಂದು ವಹಿವಾಟು ‍ಶೀರ್ಷಿಕೆಗಳ ಆಯವ್ಯಯ ಅನುದಾನವನ್ನು ಅದೇ ತಿಂಗಳಲ್ಲಿ ವೆಚ್ಚ ಮಾಡಬೇಕಾಗಿತ್ತು. ಲೆಕ್ಕ ಶೀರ್ಷಿಕೆಗೆ ಅನುಗುಣವಾಗಿ ವಾಸ್ತವಿಕ ವೆಚ್ಚವು ವರ್ಗೀಕರಣಗೊಳಿಸಿಲ್ಲ ಎಂಬುದನ್ನು ಲೆಕ್ಕ ಪರಿಶೋಧನೆ ವರದಿಯು ಬಯಲು ಮಾಡಿದೆ.

 

ವಿಶ್ವವಿದ್ಯಾಲಯದ ಎಲ್ಲಾ ಶಾಖೆಗಳಿಂದ ಆಯವ್ಯಯ ಸಂಬಂಧ ಮಾಹಿತಿಗಳನ್ನು ಪಡೆದುಕೊಂಡು ಕಳೆದ 3 ವರ್ಷಗಳ ಲೆಕ್ಕಗಳ ಅನ್ವಯ ವಿವಿಧ ವಹಿವಾಟು ಶೀರ್ಷಿಕೆಗಳಡಿ ವಾಸ್ತವವಾಗಿ ಸ್ವೀಕೃತವಾಗಿರುವ ರಾಜಸ್ವ ಮತ್ತು ವಾಸ್ತವಿಕವಾಗಿ ಆಗಿರುವ ವೆಚ್ಚಗಳ ಆಧಾರವನ್ನು ಪರಿಗಣಿಸಬೇಕು. ಅಲ್ಲದೇ  ವಾಸ್ತವಕ್ಕೆ ಹತ್ತಿರವಿರುವಂತೆ ವಾರ್ಷಿಕ ಆಯವ್ಯಯವನ್ನು ತಯಾರಿಸುವುದು ವಿತ್ತಾಧಿಕಾರಿಗಳು, ಕುಲಸಚಿವರು ಮತ್ತು ಕುಲಪತಿಗಳ ಜವಾಬ್ದಾರಿ. ಆದರೆ ಈ ಜವಾಬ್ದಾರಿಯನ್ನು ನಿರ್ವಹಿಸಿಲ್ಲ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಪ್ರವೇಶಾತಿ ಶುಲ್ಕ, ಪರೀಕ್ಷಾ ಶುಲ್ಕ, ಘಟಿಕೋತ್ಸವ ಶುಲ್ಕ, ಅಂಕಪಟ್ಟಿ ಶುಲ್ಕ, ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿನ ಕಾಲೇಜುಗಳಿಂದ ಸಂಗ್ರಹಿಸುವ ಮಾನ್ಯತಾ ಶುಲ್ಕ, ದಂಡ ಶುಲ್ಕ ಹಾಗೂ ವಿಶ್ವವಿದ್ಯಾಲಯಗಳ ಆಸ್ತಿಗಳಿಮದ ಬರುವ ಬಾಡಿಗೆ ಮೊತ್ತ, ಕೇಂದ್ರ ಸರ್ಕಾರದಿಂದ ಎನ್‌ಎಸ್‌ಎಸ್‌ ರೆಗ್ಯುಲರ್‍‌, ಎನ್‌ಎಸ್‌ಎಸ್‌ ವಿಶೇಷ ಅನುದಾನ, ಸಾರ್ವಜನಿಕ ದತ್ತಿ, ಕೊಡುಗೆಗಳು, ಪ್ರಮುಖ ನಿಶ್ಚಿತ ಠೇವಣಿಗಳ ಹೂಡಿಕೆಯಿಂದ ಬರುವ ಬಡ್ಡಿಯು ಆಂತರಿಕ ಸಂಪನ್ಮೂಲವಾಗಿದೆ.

 

ಆದರೆ ಈ ಎಲ್ಲವನ್ನೂ ವಿಶ್ವವಿದ್ಯಾಲಯವು ಸರಿಯಾಗಿ ನಿರ್ವಹಿಸಿಲ್ಲ. ವಿಶ್ವವಿದ್ಯಾಲಯದಲ್ಲಿ ಅನುಮೋದಿತ ಸಂಚಯನ ಲೆಕ್ಕ ಪದ್ಧತಿಯಾಗಲೀ, ಸ್ವೀಕೃತಿಗೆ ಸಂಬಂಧಿಸಿದ ನಿರ್ದಿಷ್ಟ ವಹಿಯನ್ನಾಗಲೀ ನಿರ್ವಹಿಸಿಲ್ಲ. ಹೀಗಾಗಿ ವಿಶ್ವವಿದ್ಯಾಲಯಕ್ಕೆ ಹಿಂದಿನ ವರ್ಷಗಳಿಂದ ಬರಬೇಕಾದ ಬಾಕಿ ಸ್ವೀಕೃತಿಗಳನ್ನು  ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಲಾಗಿದೆ.

 

ರಾಮನಗರದಲ್ಲಿ 400 ಕೋಟಿ ಅನುತ್ಪಾದಕ ವೆಚ್ಚ; ಟೆಂಡರ್ ಪೂರ್ವ ಪರಿಶೀಲನಾ ಸಮಿತಿ ಅಭಿಪ್ರಾಯ ಬದಿಗೊತ್ತಿದ್ದೇಕೆ?

 

ರಾಮನಗರದ ಅರ್ಚಕರಹಳ್ಳಿಯಲ್ಲಿ ವಿಶ್ವವಿದ್ಯಾಲಯ ಕಟ್ಟಡ ಕಾಮಗಾರಿಗಳಿಗಾಗಿ ಟೆಂಡರ್‍‌ ಪೂರ್ವ ಪರಿಶೀಲನಾ ಸಮಿತಿಯು ನೀಡಿದ್ದ ಶಿಫಾರಸ್ಸನ್ನು ಬದಿಗೊತ್ತಿದ್ದ ವಿಶ್ವವಿದ್ಯಾಲಯವು  400 ಕೋಟಿ ವೆಚ್ಚ ಮಾಡಿತ್ತು. ಇದು ಫಲಪ್ರದವಲ್ಲದ ವೆಚ್ಚ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ಉಲ್ಲೇಖಿಸಿದ್ದರು.

 

442.03 ಕೋಟಿ ರು ಮೌಲ್ಯದ ಸ್ಥಿರಾಸ್ತಿ; ಭೌತಿಕ ಆಸ್ತಿಗಳ ವಿವರಗಳನ್ನೇ ಲೆಕ್ಕಪರಿಶೋಧನೆಗೆ ಒದಗಿಸದ ವಿವಿ

 

ಅದೇ ರೀತಿ ವಿಶ್ವವಿದ್ಯಾಲಯವು ಭೌತಿಕ ಆಸ್ತಿಗಳ ವಿವರಗಳನ್ನೇ ಲೆಕ್ಕ ಪರಿಶೋಧಕರಿಗೆ ಒದಗಿಸಿರಲಿಲ್ಲ.

Your generous support will help us remain independent and work without fear.

Latest News

Related Posts