ರಾಮಚಂದ್ರಾಪುರ ಮಠದ ಬಳಿ ಯಾತ್ರಿ ನಿವಾಸ; 13 ವರ್ಷಗಳಾದರೂ ಕಾಮಗಾರಿ ಅಪೂರ್ಣ, 5 ಕೋಟಿ ನಿಷ್ಫಲ

ಬೆಂಗಳೂರು; ಶಿವಮೊಗ್ಗದ ಹೊಸನಗರ ರಾಮಚಂದ್ರಪುರ ಮಠದ ಬಳಿ ಕಳೆದ 13 ವರ್ಷಗಳ ಹಿಂದೆಯೇ ಯಾತ್ರಿ ನಿವಾಸ ನಿರ್ಮಾಣಕ್ಕೆ 5.80 ಕೋಟಿ ರು ವೆಚ್ಚವಾಗಿದ್ದರೂ ಇದುವರೆಗೂ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಿಲ್ಲ. ಅಲ್ಲದೇ ಇಲಾಖೆಯಿಂದ ಇದುವರೆಗೂ ಕಾಲಕಾಲಕ್ಕೆ ಕೋಟ್ಯಂತರ ರುಪಾಯಿ ಅನುದಾನ ಬಿಡುಗಡೆಯಾಗಿದ್ದರೂ ಸಹ ಅದರ ಉದ್ದೇಶವೇ ಈಡೇರಿಲ್ಲ. ಈ ಕಾಮಗಾರಿಗೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಇಲಾಖೆಯು ಮೇಲ್ವಿಚಾರಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿರುವುದನ್ನು ಪ್ರಧಾನ ಮಹಾಲೇಖಪಾಲರು ಮತ್ತು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.

 

ಪ್ರವಾಸೋದ್ಯಮ ಇಲಾಖೆಯು ಅನುಷ್ಠಾನಗೊಳಿಸಿರುವ ಯೋಜನೆ ಮತ್ತು ಬಿಡುಗಡೆ ಮಾಡಿರುವ ಕೋಟ್ಯಂತರ ರುಪಾಯಿ ಅನುದಾನದ ಬಳಕೆಗೆ ಸಂಬಂಧಿಸಿದಂತೆ ಇಲ್ಲಿಯವರೆಗಿನ ಪ್ರಗತಿಯನ್ನು ಲೆಕ್ಕ ಪರಿಶೋಧನೆಗೆ ಒಡ್ಡಿರುವ ಪ್ರಧಾನ ಮಹಾಲೇಖಪಾಲರು ಮತ್ತು ಲೆಕ್ಕ ಪರಿಶೋಧಕರು ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯವನ್ನು ಬಹಿರಂಗಗೊಳಿಸಿದ್ದಾರೆ.

 

ಈ ಕುರಿತು ಪ್ರಧಾನ ಮಹಾಲೇಖಪಾಲರು ಮತ್ತು ಪ್ರಧಾನ ಲೆಕ್ಕ ಪರಿಶೋಧಕರು ಪ್ರವಾಸೋದ್ಯ ಇಲಾಖೆಯ ನಿರ್ದೇಶಕರಿಗೆ 2025ರ ಜುಲೈ 18ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.
ಪ್ರವಾಸೋದ್ಯಮ ಇಲಾಖೆಯ ಶಿವಮೊಗ್ಗ ಜಿಲ್ಲೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಯೋಜನಾ ಕಡತದ ಪರಿಶೀಲನೆ ನಡೆಸಿದ್ದಾರೆ. ಈ ಸಮಯದಲ್ಲಿ ಲೆಕ್ಕಪರಿಶೋಧನೆಯು ಹಲವು ವಿಷಯಗಳ ಕುರಿತು ಅವಲೋಕನ ಮಾಡಿದೆ.

 

ಸಿಎಜಿಯ ಅವಲೋಕನದಲ್ಲೇನಿದೆ?

 

ರಾಮಚಂದ್ರ ಮಠದ ಬಳಿ ಯಾತ್ರಿನಿವಾಸ ನಿರ್ಮಾಣದ ಸರ್ಕಾರಿ ಆದೇಶದ ಪ್ರಕಾರ, ಅಂದಾಜು 150 ಲಕ್ಷ ಮೊತ್ತಕ್ಕೆ ಲೋಕೋಪಯೋಗಿ ಇಲಾಖೆಗೆ ಅನುಷ್ಠಾನಗೊಂಡ ಸಂಸ್ಥೆಯಾಗಿ ವಹಿಸಲಾಗಿತ್ತು, ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರು ರಾಮಚಂದ್ರ ಮಠದ ಬಳಿಯ ಯಾತ್ರಿ ನಿವಾಸದ ಮುಂದುವರಿದ ನಿರ್ಮಾಣ ಕಾರ್ಯ ಎಂದು ಯೋಜನೆಯ ಹೆಸರನ್ನು ಉಲ್ಲೇಖಿಸಲಾಗಿದೆ. ಅಂದಾಜು ಮೊತ್ತ 1.50 ಕೋಟಿ ರು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿತ್ತು. ನಂತರ ಹೊರಡಿಸಿರುವ ಆದೇಶದಲ್ಲಿ ಕಾಮಗಾರಿ ಹೆಸರನ್ನೂ ಬದಲಾಯಿಸಲಾಗಿರುವುದನ್ನು ಲೆಕ್ಕ ಪರಿಶೋಧನೆ ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಸಿಎಜಿ ಆಕ್ಷೇಪಣೆ ವ್ಯಕ್ತಪಡಿಸಿ ಬರೆದಿರುವ ಪತ್ರ

 

ಆದರೆ ಪ್ರವಾಸೋದ್ಯಮ ಇಲಾಖೆಯ 2024-25ರ ಕ್ರಿಯಾ ಯೋಜನೆಯಲ್ಲಿ, ರಾಮಚಂದ್ರಪುರ ಮಠದ ಬಳಿ ಯಾತ್ರಿ ನಿವಾಸಗಳ ನಿರ್ಮಾಣ ಕಾರ್ಯ ಎಂದು ಈಗಲೂ ಉಲ್ಲೇಖಿಸಲಾಗಿದೆ. ಈ ಕಾಮಗಾರಿಗೆ (ಅಂದಾಜು ಮೊತ್ತ 150 ಲಕ್ಷ ರೂ.) ಲೋಕೋಪಯೋಗಿ ಇಲಾಖೆಯು (ರಾಮಚಂದ್ರಾಪುರ ಮಠದಲ್ಲಿ ಯಾತ್ರಿನಿವಾಸ ನಿರ್ಮಾಣಕ್ಕಾಗಿ ಉಳಿದ ಕಾಮಗಾರಿಗಳ ನಿರ್ಮಾಣದ ಹೆಸರು) ಗೆ 1.03 ಕೋಟಿ ರು ಗೆ ಟೆಂಡರ್‍‌ ಕರೆದಿತ್ತು. ಅಲ್ಲದೇ ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಮಾಡಿ ಸಿಂಗಲ್‌ ಬಿಡ್ಡಿಂಗ್‌ನಲ್ಲಿ ಯಶಸ್ವಿಯಾಗಿದ್ದ ಕಾಮಗಾರಿ ನಿರ್ಮಾಣಕ್ಕೆ ಆದೇಶ ನೀಡಲಾಗಿತ್ತು.

 

 

ಇದಲ್ಲದೇ ಇತರೆ ಕಾಮಗಾರಿಗಳಿಗೆ 46,65,026 ರೂ.ಗಳಾಗಿ ಟೆಂಡರ್ ಕರೆದಿತ್ತು. ಯಾತ್ರಿ ನಿವಾಸದ ಈ ಬಾಕಿ ನಿರ್ಮಾಣ ಕಾರ್ಯಕ್ಕಾಗಿ ಪ್ರವಾಸೋದ್ಯಮ ಇಲಾಖೆ ಇಲ್ಲಿಯವರೆಗೆ 1.46 ಕೋಟಿ 23 ಲಕ್ಷ ರು ಬಿಡುಗಡೆ ಮಾಡಿದೆ.

 

 

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿರುವ ಲೆಕ್ಕ ಪರಿಶೋಧಕರು ಯಾತ್ರಿನಿವಾಸಗಳ ನಿರ್ಮಾಣಕ್ಕೆ ಮೂಲತಃ ಅಂದಾಜು ಮೊತ್ತ 493.18 ಲಕ್ಷಕ್ಕೆ ಮಂಜೂರು ಮಾಡಲಾಗಿತ್ತು ಮತ್ತು 99.48 ಲಕ್ಷ ರೂ.ಗಳನ್ನು ವಿವಿಧ ಕಂತುಗಳಲ್ಲಿ 2007-08 ರಲ್ಲೇ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಮಿತಿಗೆ ಬಿಡುಗಡೆ ಮಾಡಲಾಗಿತ್ತು ಎಂದು ಪತ್ತೆ ಹಚ್ಚಿರುವುದು ಪತ್ರದಿಂದ ತಿಳಿದು ಬಂದಿದೆ.

 

ಆದರೆ ಈ ಅನುದಾನ ಮಂಜೂರಾತಿಗೆ ಸಂಬಂಧಿಸಿದಂತೆ ಬಿಡುಗಡೆ ಆದೇಶವನ್ನು ಲಗತ್ತಿಸಿಲ್ಲ. ಈ ಕಾಮಗಾರಿ ನಿರ್ವಹಿಸಲು ಪಿಡಬ್ಲ್ಯೂಡಿಯನ್ನು ಏಜೆನ್ಸಿಯನ್ನಾಗಿ ನೇಮಿಸಿದೆ. ಆದರೆ ಇದರ ಆದೇಶವನ್ನೂ ಲೆಕ್ಕಪರಿಶೋಧಕರಿಗೆ ನೀಡಿಲ್ಲ. ಟೆಂಡರ್‍‌ನಲ್ಲಿ ಭಾಗವಹಿಸಿದ್ದರ ಪೈಕಿ ಸಿ ಹೆಚ್‌ ಸುಬ್ಬಾರೆಡ್ಡಿ ಒಡೆತನದ ಎಸ್‌ ಆರ್‍‌ ನಿರ್ಮಾಣ ಕಂಪನಿಗೆ 4.37 ಕೋಟಿ 84 ಲಕ್ಷ ಮೊತ್ತಕ್ಕೆ ಕಾಮಗಾರಿ ವಹಿಸಿತು. ಆದರೆ ಇದಕ್ಕೆ ಸಂಬಂಧಿತ ಆದೇಶಗಳು ಕಡತದಲ್ಲಿ ಲಭ್ಯವಿರಲಿಲ್ಲ.

 

ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು (26-11-2012) ಅನುದಾನವನ್ನು ಬಿಡುಗಡೆ ಮಾಡಿರುವುದನ್ನು ಪ್ರಧಾನ ಮಹಾಲೇಖಪಾಲರು ಗಮನಿಸಿದ್ದಾರೆ. ಅಲ್ಲದೇ ಈ ಮೊತ್ತದಲ್ಲಿ ಗಳಿಸಿರುವ 21 ಲಕ್ಷ ರೂಪಾಯಿ ಬಡ್ಡಿ ಮೊತ್ತವನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗಿತ್ತು. ಆದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸರ್ಕಾರಿ ಅನುಮತಿ ಪತ್ರವೂ ಕಡತದಲ್ಲಿ ಕಂಡು ಬಂದಿಲ್ಲ ಎಂದು ಇಲಾಖೆಯ ಗಮನಸೆಳೆದಿದ್ದಾರೆ.

 

ಈ ಕಟ್ಟಡದ ಕಾಮಗಾರಿಯಲ್ಲಿ ರೇಖಾಚಿತ್ರ ಮತ್ತು ವಿನ್ಯಾಸದಲ್ಲಿನ ಬದಲಾವಣೆ ಮಾಡಲಾಗಿತ್ತು. ಹಾಗಾಗಿ ಕಾಮಗಾರಿಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಯೋಜನೆಯ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಲು 1.50 ಕೋಟಿ ರೂಪಾಯಿಗಳಿಗೆ ಹೆಚ್ಚಿನ ಅಂದಾಜು ಸಿದ್ಧಪಡಿಸಲಾಗಿತ್ತು. ಈ ಮೊತ್ತಕ್ಕೆ ಅನುಮೋದನೆಯನ್ನೂ ಪಡೆಯಲಾಗಿತ್ತು ಎಂದು ಕಾರ್ಯನಿರ್ವಾಹಕ ಎಂಜಿನಿಯರ್, ಪಿಡಬ್ಲ್ಯೂಡಿ ಅಧಿಕಾರಿಗಳು 2019ರ ನವೆಂಬರ್ 8ರಂದು ಪತ್ರದಲ್ಲಿ ಉಲ್ಲೇಖಿಸಿದ್ದರು.

 

ಈ ಎರಡೂ ಕಾಮಗಾರಿಗಳಿಗೆ ಪಿಡಬ್ಲ್ಯೂಡಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಿಗೆ (ದಿನಾಂಕ 26-12-2022 ರಂದು) ಹಸ್ತಾಂತರ ಪ್ರಮಾಣಪತ್ರವನ್ನು ನೀಡಿದ್ದರು. ಈ ಎರಡೂ ಕಾಮಗಾರಿಗಳು ಅಂದಾಜಿನ ಪ್ರಕಾರ ಪೂರ್ಣಗೊಂಡಿವೆ ಎಂದು ತಿಳಿಸಿದ್ದರು. ಆದರೆ ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಈ ಕಾಮಗಾರಿಯು ಪೂರ್ಣಗೊಂಡಿಲ್ಲ ಎಂದು 2024ರ ಮಾರ್ಚ್‌ 1ರಂದು ಪತ್ರ ಬರೆದಿದ್ದರು. ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಕ್ರಮಕೈಗೊಳ್ಳಬೇಕು ಎಂದು ಶಿವಮೊಗ್ಗ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ನಿರ್ದೇಶಿಸಿದ್ದರು.

 

ನಂತರ ಜಂಟಿ ಭೌತಿಕ ಪರಿಶೀಲನಾ ಲೆಕ್ಕಪರಿಶೋಧನೆ ನಡೆಸಲಾಗಿತ್ತು. ಈ ಸಮಯದಲ್ಲಿ, ಮೊದಲ ಒಪ್ಪಂದದ ಪ್ರಕಾರ ಪೂರ್ಣಗೊಂಡ ದಿನಾಂಕದಿಂದ 13 ವರ್ಷಗಳಿಗೂ ಹೆಚ್ಚು ಸಮಯ ಕಳೆದರೂ ಯೋಜನೆಯು ಇನ್ನೂ ಪೂರ್ಣಗೊಂಡಿಲ್ಲ ಮತ್ತು ಕಾರ್ಯಗತಗೊಳಿಸಿದ ಯೋಜನೆಯ ವಿನ್ಯಾಸವು ಯಾತ್ರಿನಿವಾಸ್/ನಿಲಯದ ಸಂಯೋಜಿತ ಮಾದರಿಗಿಂತ ಹೆಚ್ಚಾಗಿ ಸಮಾವೇಶ ಸಭಾಂಗಣದಂತೆ ಕಾಣುತ್ತದೆ ಎಂದು ಕಂಡುಬಂದಿತ್ತು ಎಂದು ವಿವರಿಸಿರುವುದು ತಿಳಿದು ಬಂದಿದೆ.

 

ಕಟ್ಟಡದಲ್ಲಿ ನೆಲಹಾಸು ಕೆಲಸ, ಸ್ನಾನಗೃಹಗಳು, ಬಾಗಿಲುಗಳು, ಎರಡನೇ ಮಹಡಿಯಲ್ಲಿ ವಿದ್ಯುದ್ದೀಕರಣ ಕೆಲಸ ಮತ್ತು ಕಿಟಕಿಗಳ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ನಿರ್ಮಿಸಿದ (ಅಪೂರ್ಣ) ನಿರ್ಮಾಣದ ನಿರ್ವಹಣೆ ಇಲ್ಲದ ಕಾರಣ, ಛಾವಣಿ ಮತ್ತು ಗೋಡೆಗಳಲ್ಲಿ ನೀರು ಸೋರುತ್ತಿದೆ. ಮತ್ತು ಪಾಚಿಗಳಿಂದ ತುಂಬಿವೆಯಲ್ಲದೇ ಈ ನೆಲವು ಪಕ್ಷಿಗಳ ಮಲದಿಂದ ತುಂಬಿದೆ. ಮತ್ತು ವೆಚ್ಚದ ಅಂದಾಜು ಮಾಡದ ಕಾರಣ, ಮುಖ್ಯ ರಸ್ತೆಗೆ ಹೋಗುವ ಮಾರ್ಗಕ್ಕೆ ಯಾವುದೇ ಅವಕಾಶವನ್ನು ಮಾಡಿರಲಿಲ್ಲ.

 

ರಾಮಚಂದ್ರಾಪುರ ಮಠದ ಬಳಿ ಪಾಳು ಬಿದ್ದಿರುವ ಯಾತ್ರಿ ನಿವಾಸದ ಕಟ್ಟಡ

 

ಇದರ ಪರಿಣಾಮವಾಗಿ ಮುಖ್ಯ ರಸ್ತೆಗೆ ಮತ್ತು ಕಟ್ಟಡದ ಹೊರಭಾಗವು ಪೊದೆಗಳಿಂದ ತುಂಬಿದೆ. ಮತ್ತು ಜನರು ಮಳೆಗಾಲದಲ್ಲಿ ಕಟ್ಟಡವನ್ನು ಪ್ರವೇಶಿಸಲು ಮಣ್ಣಿನ ರಸ್ತೆ ಮೂಲಕ ಹೋಗಬೇಕಾಗಿದೆ ಎಂದು ವಿವರಿಸಿರುವುದು ಗೊತ್ತಾಗಿದೆ.

 

 

ನೆಲಮಹಡಿಯ ರೇಖಾಚಿತ್ರವನ್ನೂ ಪ್ರಧಾನ ಮಹಾಲೇಖಪಾಲರು ಗಮನಿಸಿದ್ದಾರೆ. 1823.88 ಸ್ಕೈಯರ್‍‌ ಮೀಟರ್ ನೆಲಮಹಡಿಯ ವಿಸ್ತೀರ್ಣದಲ್ಲಿ 1345.73 ಸ್ಕೈಯರ್‍‌ ಮೀಟರ್ ನ್ನು ಊಟದ ಮನೆ ನಿರ್ಮಾಣಕ್ಕೆ ಬಳಸಲಾಗಿದೆ. ಇದನ್ನು ಎರಡನೇ ಮಹಡಿಯವರೆಗೂ ಮುಂದುವರೆಸಲಾಗಿದೆ. ಮತ್ತು ಶೀಟ್ ಛಾವಣಿಯಿಂದ ಮುಚ್ಚಲಾಗಿದೆ.

 

ಶ್ರೀ ರಾಮಚಂದ್ರಾಪುರ ಮಠದ ಪತ್ರದ ಪ್ರಕಾರ ವಸತಿ (ವಸತಿ ನಿಲಯ) ಉದ್ದೇಶಕ್ಕಾಗಿ ಕೇವಲ 18 ಕೊಠಡಿಗಳು ಮಾತ್ರ ಇವೆ. ಆದ್ದರಿಂದ 584 ಮೊತ್ತವನ್ನು ಬಿಡುಗಡೆ ಮಾಡಿದ ನಂತರ ಯಾತ್ರಿ ನಿವಾಸ/ವಸತಿ ನಿಲಯದ ಉದ್ದೇಶ ಈಡೇರುವುದಿಲ್ಲ ಎಂದು ಸೂಚಿಸಲಾಗಿದೆ.

 

ಯಾತ್ರಿ ನಿವಾಸಕ್ಕೆ ತೆರಳುವ ಮಾರ್ಗದಲ್ಲಿ ಮಣ್ಣಿನ ರಸ್ತೆ ಇರುವುದು

 

‘ಮೊದಲ ಒಪ್ಪಂದದಿಂದ ಹದಿಮೂರು ವರ್ಷಗಳ ನಂತರವೂ ಇಲಾಖೆಯಿಂದ 584.07 ಲಕ್ಷ ಮೊತ್ತವನ್ನು ಬಿಡುಗಡೆ ಮಾಡಿದ್ದರೂ, ಯೋಜನೆಯನ್ನು ಇನ್ನೂ ಸಾರ್ವಜನಿಕರಿಗೆ ಬಳಸಲಾಗಿಲ್ಲ, ಇಲಾಖೆಯ ಉದ್ದೇಶ ಈಡೇರಿಲ್ಲ ಮತ್ತು ಇಲಾಖೆಯಿಂದ ಬಿಡುಗಡೆಯಾದ ಮೊತ್ತವು ಇಲ್ಲಿಯವರೆಗೆ ಬಿಡುಗಡೆಯಾದ ಉದ್ದೇಶವನ್ನು ಪೂರೈಸಿಲ್ಲ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ,’ ಎಂದು ಸಿಎಜಿಯು ಷರಾ ಬರೆದಿದೆ.

 

ಪ್ರವಾಸೋದ್ಯಮ ಇಲಾಖೆಯಲ್ಲಿ ಸರಿಯಾದ ಮೇಲ್ವಿಚಾರಣಾ ಕಾರ್ಯವಿಧಾನದ ಕೊರತೆಯೂ ಯೋಜನೆಯ ಪೂರ್ಣಗೊಳ್ಳುವಿಕೆಯಲ್ಲಿನ ಅತಿಯಾದ ವಿಳಂಬಕ್ಕೆ ಕಾರಣವಾಗಿದೆ ಎಂದು ವಿವರಿಸಿದೆ.

Your generous support will help us remain independent and work without fear.

Latest News

Related Posts