ಲೋಕಾ ಹೆಸರಿನಲ್ಲಿ ವಸೂಲಿ; 10 ವರ್ಷಗಳ ಬಳಿಕ ಹಿಂದಿನ ಪಿಆರ್‍‌ಒ ರಿಯಾಜ್‌ಗೆ ದಂಡನೆ, ಗ್ರಾಚ್ಯುಟಿ ಮುಟ್ಟುಗೋಲು

ಬೆಂಗಳೂರು; ಹಿಂದಿನ ಲೋಕಾಯುಕ್ತ ಭಾಸ್ಕರರಾವ್‌ ಅವರೊಂದಿಗಿನ ಸಂಬಂಧ ಮತ್ತು ಲೋಕಾಯುಕ್ತರ ನಿವಾಸವನ್ನು ದುರುಪಯೋಗಪಡಿಸಿಕೊಂಡು ಅನೇಕ ಸರ್ಕಾರಿ ನೌಕರರಿಂದ ಹಣ ಸುಲಿಗೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದ ಲೋಕಾಯುಕ್ತದ ಹಿಂದಿನ ಪಿಆರ್‍‌ಒ ಸೈಯದ್‌ ರಿಯಾಜತ್‌ ಉಲ್ಲಾ ಅವರ ನಿವೃತ್ತಿ ವೇತನದ ಶೇ.50ರಷ್ಟನ್ನು ಶಾಶ್ವತವಾಗಿ ತಡೆಹಿಡಿದು ಆದೇಶ ಹೊರಡಿಸಿರುವುದು ಇದೀಗ ಬಹಿರಂಗವಾಗಿದೆ.

 

ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಲೋಕಾಯುಕ್ತ ಸಂಸ್ಥೆ ಅಧಿಕಾರಿಗಳೇ ಹಣಕ್ಕಾಗಿ ಅಧಿಕಾರಿಗಳಿಗೆ ಬೇಡಿಕೆ ಇಟ್ಟಿದ್ದ ಪ್ರಕರಣ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆಯ ಪಿಆರ್‍‌ಒ ಸೈಯದ್‌ ರಿಯಾಜತ್‌ ಉಲ್ಲಾ ಅವರ ವಿರುದ್ಧ ವಿಚಾರಣೆಯೂ ಪೂರ್ಣಗೊಂಡಿದೆ.

 

ಲೋಕಾಯುಕ್ತ ಪಿಆರ್‍ಒ ಆಗಿದ್ದ ಸೈಯದ್‌ ರಿಯಾಜ್‌

 

ಈ ಸಂಬಂಧ 10 ವರ್ಷಗಳ ನಂತರ ಆಪಾದಿತ ಅಧಿಕಾರಿಯ ನಿವೃತ್ತಿ ವೇತನವನ್ನು ಶೇ 50ರಷ್ಟನ್ನು ಶಾಶ್ವತವಾಗಿ ತಡೆಹಿಡಿದಿರುವ ಆದೇಶವು ಮುನ್ನೆಲೆಗೆ ಬಂದಿದೆ.

 

 

 

ಅಷ್ಟೇ ಅಲ್ಲ ಗ್ರಾಚ್ಯೂಟಿ ಹಣವನ್ನೂ ಸಹ ಸಂಪೂರ್ಣವಾಗಿ ಮುಟ್ಟುಗೋಲು ಹಾಕಿಕೊಳ್ಳುವ ದಂಡನೆಯನ್ನೂ ವಿಧಿಸಿದೆ. 2025ರ ಮೇ 27ರಂದು ಹೊರಡಿಸಿದ್ದ ಆದೇಶವು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

 

ಲೋಕಾಯುಕ್ತ ಸಂಸ್ಥೆಯ ಪಿಆರ್‍‌ಒ ಆಗಿದ್ದ ಜಂಟಿ ಆಯುಕ್ತ ಸೈಯದ್‌ ರಿಯಾಜತ್‌ ಉಲ್ಲಾ ಅವರ ವಿರುದ್ಧ ಭ್ರಷ್ಟಾಚಾರ ತಡೆ ಅಧಿನಿಯಮ 1988ರ ಕಲಂ 384, 419, 420, 120(ಬಿ) ಅಡಿಯಲ್ಲಿ 2015ರಲ್ಲಿ ಮೊಕದ್ದಮೆ (ಸಂಖ್ಯೆ; 56/2015) ಹೂಡಲಾಗಿತ್ತು. ಅವರನ್ನು ದಸ್ತಗಿರಿಯನ್ನೂ ಮಾಡಲಾಗಿತ್ತು.

 

 

ನಂತರ 2015ರ ಜುಲೈ 16ರಂದು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿತ್ತು. ಅಲ್ಲದೆ ಇವರ ವಿರುದ್ಧ ಇಲಾಖೆ ವಿಚಾರಣೆಯೂ ನಡೆದಿತ್ತು.

 

ಸೈಯದ್‌ ರಿಯಾಜುತ್‌ ಉಲ್ಲಾ ಅವರ ವಿರುದ್ಧ ಇಲಾಖೆ ವಿಚಾರಣೆ ನಡೆಸಲು ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್‌ ನಾರಾಯಣ ಅವರನ್ನು ನೇಮಿಸಲಾಗಿತ್ತು. ಸಿ ಚಂದ್ರಮಲ್ಲೇಗೌಡ ಅವರನ್ನು ಪ್ರಕರಣದ ವಿಚಾರಣಾಧಿಕಾರಿಯನ್ನಾಗಿ ನೇಮಿಸಿತ್ತು.

 

 

ಈ ತಂಡವು ಒಟ್ಟಾರೆ 32 ಮಂದಿ ಸಾಕ್ಷಿಗಳ ವಿಚಾರಣೆ ಮತ್ತು 41 ಸಂಖ್ಯೆಯ ದಾಖಲಾತಿಗಳ ಪರಿಶೀಲನೆ ನಡೆಸಿತ್ತು. ಅಲ್ಲದೇ ಆರೋಪಿತ ಅಧಿಕಾರಿ ಮತ್ತು ಉಳಿದ ಆರೋಪಿಗಳ ನಡುವೆ ಆದ ಅನೇಕ ಸಭೆಗಳು, ಸಮಾಲೋಚನೆಗಳು ಮತ್ತು ಅಸಂಖ್ಯಾತ ದೂರವಾಣಿ ಕರೆಗಳ, ಅವರ ನಡುವೆ ಕಾನೂನುಬಾಹಿರ ಕೃತ್ಯವ್ನನು ಮಾಡುವ ಉದ್ದೇಶವನ್ನು ಸಾಬೀತುಪಡಿಸಿತ್ತು ಎಂಬ ಸಂಗತಿಯು ಆದೇಶದಿಂದ ತಿಳಿದು ಬಂದಿದೆ.

 

ಈ ಬಗ್ಗೆ ವಿಚಾರಣೆ ನಡೆಸಿದ ನಂತರ 2021ರ ಮೇ 31ರಮದು ವಿಚಾರಣೆ ವರದಿ ಸಲ್ಲಿಸಿತ್ತು. ವಿಚಾರಣೆಗೆ ಹಾಜರಾಗಿದ್ದ ಸೈಯದ್‌ ರಿಯಾಜುತ್‌ ಉಲ್ಲಾ ಅವರು ತಮ್ಮ ವಿರುದ್ಧದ 12 ಆರೋಪಗಳನ್ನು ಅಲ್ಲಗಳೆದಿದ್ದರು. ತಮ್ಮ ವಿರುದ್ದದ ಎಲ್ಲಾ 12 ಆರೋಪಗಳನ್ನು ನಿರಾಕರಿಸಿದ್ದರು.

 

ಅಲ್ಲದೇ ಆರೋಪದಲ್ಲಿರುವ ಪ್ರಕರಣಗಳು 2013-15ನೇ ಸಾಲಿಗೆ ಸಂಬಂಧಿಸಿವೆ. ಆರೋಪ ಪಟ್ಟಿಯನ್ನು 2018ರ ಆಗಸ್ಟ್‌ 27ರಂದು ಹೊರಡಿಸಿಲಾಗಿದೆ. ಸರ್ಕಾರಿ ನಿಯಮಗಳ ಉಲ್ಲಂಘನೆಯಾಗಿದೆ. ಆರೋಪಗಳು ತೀವ್ರವಾದ ಅಸ್ಪಷ್ಟತೆಯಿಂದ ಕೂಡಿವೆ. ಅಸ್ಪಷ್ಟ ಆರೋಪದ ಮೇಲೆ ಮಾಡಲಾಗಿದೆ ಎಂದು ಆಕ್ಷೇಪಿಸಿದ್ದ ಸೈಯದ್‌ ರಿಯಾಜ್‌ ಅವರು 12 ಆರೋಪಗಳು ಸಾಬೀತಾಗಿರುವುದಿಲ್ಲ. ಇದನ್ನು ಪರಿಗಣಿಸಿ ಪ್ರಸ್ತಾಪಿತ ವಿಚಾರಣೆಯನ್ನು ಕೈಬಿಟ್ಟು ಆರೋಪದಿಂದ ದೋಷಮುಕ್ತಗೊಳಿಸಬೇಕು ಎಂದು ಪ್ರತಿ ರಕ್ಷಣಾ ಲಿಖಿತ ಹೇಳಿಕೆಯಲ್ಲಿ ಕೋರಿದ್ದರು. ಆದರೆ ವಿಚಾರಾಣಾಧಿಕಾರಿಗಳು ಈ ಸಮಜಾಯಿಷಿಯನ್ನು ಒಪ್ಪಿಲ್ಲ ಎಂಬುದು ಆದೇಶದಿಂದ ಗೊತ್ತಾಗಿದೆ.

 

ರಿಯಾಜ್‌ ವಿರುದ್ಧದ ಆರೋಪಗಳ ಪಟ್ಟಿ

 

ಆರೋಪ-1

 

ಪಿಡಬ್ಲ್ಯೂಡಿ ಎಕ್ಸಿಕ್ಯೂಟಿವ್‌ ಎಂಜಿನಿಯರ್‍‌ ಎಂ.ಎನ್. ಕೃಷ್ಣಮೂರ್ತಿ ರವರಿಗೆ ಅಶೋಕ್ ಕುಮಾರ್‍‌ ಎಂಬುವರ ಮೂಲಕ ಲೋಕಾಯುಕ್ತ ಪೊಲೀಸರಿಂದ ದಾಳಿ ನಡೆಸುವುದಾಗಿ ಬೆದರಿಕೆ ಒಡ್ಡಿದ್ದರು. ಅಶೋಕ್‌ಕುಮಾರ್ ರವರು ತಾನು ಲೋಕಾಯುಕ್ತರವರ ಜಂಟಿ ಆಯುಕ್ತ/ಪಿ.ಎ. ಎಂದು ವ್ಯಕ್ತಿ ಚರ್‍ಯ ಮಾಡಿಕೊಂಡು ಎಕ್ಸಿಕ್ಯೂಟಿವ್‌ ಎಂಜಿನಿಯರ್‍‌ರಿಂದ ಅಕ್ರಮ ಹಣ ರೂ. 1 ಕೋಟಿಯ ಬೇಡಿಕೆ ಇಟ್ಟಿದ್ದರು. ಈ ಕೃತ್ಯಕ್ಕೆ ಬಳಸಲಾದ ಮೊಬೈಲ್ ಹ್ಯಾಂಡ್‌ಸೆಟ್ ಮತ್ತು ಸಿಮ್‌ ಕಾರ್ಡ್‌ಗಳನ್ನು ಶಂಕರೇಗೌಡ ಎಂಬುವರ ಮೂಲಕ ನಾಶಪಡಿಸಿ, ಸಾರ್ವಜನಿಕ ನೌಕರರಿಗೆ ತರವಲ್ಲದ ರೀತಿಯಲ್ಲಿ ದುರ್ನಡತೆ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು.

 

 

 

ಆರೋಪ-2

 

ತುಂಗಾ ಮೇಲ್ದಂಡೆ ಯೋಜನೆಯ ಎಕ್ಸಿಕ್ಯೂಟಿವ್‌ ಎಂಜನಿಯರ್‍‌ ಪಿ ಬಿ ಚನ್ನಬಸಪ್ಪ ವಿರುದ್ಧ ಈಗಾಗಲೇ ಚಿತ್ರದುರ್ಗ ಲೋಕಾಯುಕ್ತ ಪೊಲೀಸ್ ಠಾಣೆ ದಾಳಿ (ಪ್ರಕರಣ ಸಂಖ್ಯೆ. 07/2013) ನಡದಿತ್ತು. ಇವರು ಮಾರ್ಚ್ 2015ರಲ್ಲಿ ಬೆಂಗಳೂರಿಗೆ ಬಂದಿದ್ದ ಸಮಯದಲ್ಲಿ ಈ ದಾಳಿ ಪ್ರಕರಣದಲ್ಲಿ ಸಹಾಯ ಮಾಡುವುದಾಗಿ ಸೈಯದ್‌ ರಿಯಾಜ್‌ ಅವರ ಪರಿಚಯಸ್ಮರಾದ ವಿ. ಭಾಸ್ಕರ್ ಹಾಗೂ ಅಶೋಕ್‌ ಕುಮಾರ್ ರವರ ಜೊತೆ ಚನ್ನಬಸಪ್ಪ ಅವರನ್ನು ಹೈದರಾಬಾದ್‌ಗೆ ಕರೆದುಕೊಂಡು ಹೋಗಿದ್ದರು.

 

ಅಲ್ಲಿ ಲೋಕಾಯುಕ್ತ ಭಾಸ್ಕರರಾವ್ ಅವರ ಪುತ್ರ ಅಶ್ವಿನ್ ರಾವ್ ಎಂಬುವವರನ್ನು ಭೇಟಿ ಮಾಡಿ, ಚರ್ಚಿಸಿದ್ದರು. ಕೆಲಸ ಮಾಡಿಕೊಡಲು ಒಪ್ಪಿ, ಕೆಲವು ದಿನಗಳ ನಂತರ ರೂ. 20 ಲಕ್ಷಗಳನ್ನು ಬೇಡಿಕೆ ಇಟ್ಟಿದ್ದರು.

 

ಲೋಕಾಯುಕ್ತರಾಗಿದ್ದ ಭಾಸ್ಕರರಾವ್ ಮತ್ತು ಅವರ ಪುತ್ರ ಅಶ್ವಿನ್‌ ರಾವ್‌

 

ಚನ್ನಬಸಪ್ಪ ಅವರಿಗೆ 2015ರ ಮೇ 4 ಮತ್ತು 6ರಂದು ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸುವುದಾಗಿ ಬೆದರಿಕೆ ಒಡ್ಡಿದ್ದರು ಎಂದು ಆಪಾದನೆ ಹೊರಿಸಲಾಗಿತ್ತು.

 

 

 

ಆರೋಪ-3

 

ಅಶ್ವಿನ್‌ರಾವ್, ವಿ. ಭಾಸ್ಕರ್ ಮತ್ತು ಅಶೋಕ್‌ ಕುಮಾರ್ ಇವರೊಂದಿಗೆ ಷಾಮೀಲಾಗಿದ್ದರಲ್ಲದೇ ಪಿ.ಬಿ. ಚನ್ನಬಸಪ್ಪ ಅವರ ಮನೆ ಮೇಲೆ ನಡೆಸಿದ್ದ ದಾಳಿ ಪ್ರಕರಣದ ತನಿಖಾಧಿಕಾರಿಯಾಗಿದ್ದ ಮೃತ್ಯುಂಜಯ ಸಹಾಯ ಮಾಡಲು ಒತ್ತಾಯಿಸಿ, ದುರ್ನಡತೆ ಎಸಗಿದ್ದರು ಎಂದು ಆರೋಪಿಸಲಾಗಿತ್ತು.

 

ಆರೋಪ-4

 

ಎಕ್ಸಿಕ್ಯೂಟಿವ್‌ ಇಂಜನಿಯರ್‍‌ ಪಿ.ಎನ್.ಕೃಷ್ಣಮೂರ್ತಿ ರವರು 2008ರಲ್ಲಿ ಕೋರಮಂಗಲದಲ್ಇ ಖರೀದಿಸಿದ್ದ (ಸರ್ವೆ ನಂ. 115/10ರ ಪೈಕಿ 6 ಗುಂಟೆ) ಜಮೀನನ್ನು ಬಿ.ಡಿ.ಎ.ಯಿಂದ ಪರಿವರ್ತನೆ ಮಾಡಿಸಲು ಮತ್ತು ಸ್ಮತ್ತಿನ ಖಾತೆ ಬದಲಾವಣೆ ಮಾಡಿಸುವ ವಿಷಯದಲ್ಲಿ ಇತರರೊಂದಿಗೆ ಷಾಮೀಲಾಗಿದ್ದರು ಈ ಮೂಲಕ ಅಪರಾಧಾತ್ಮಕ ಪಿತೂರಿ ನಡೆಸಿ, ಎಂಜಿನಿಯರ್ ಪಿ.ಎನ್. ಕೃಷ್ಣಮೂರ್ತಿ ರವರಿಗೆ ಉದ್ದೇಶ ಪೂರ್ವಕವಾಗಿ ಸಹಾಯ ಮಾಡುವುದಾಗಿ ನಂಬಿಸಿದ್ದರು. ಈ ಮೂಲಕ 20 ಲಕ್ಷ ಹಣದ ಬೇಡಿಕೆ ಇಟ್ಟು ರೂ. 15.90 ಲಕ್ಷ ಹಣವನ್ನು ಸ್ವೀಕರಿಸಿದ್ದರು ಎಂದು ಆಪಾದಿಸಿರುವುದು ಆದೇಶದಿಂದ ತಿಳಿದು ಬಂದಿದೆ.

 

ಆರೋಪ-5

 

ಪಿ.ಎನ್.ಕೃಷ್ಣಮೂರ್ತಿ ರವರು 2008ರಲ್ಲಿ ಖರೀದಿಸಿದ್ದ ಕೋರಮಂಗಲದ ಸರ್ವೆ ನಂ. 115/10ರ ಪೈಕಿ 6 ಗುಂಟೆ ಜಮೀನನ್ನು ಬಿ.ಡಿ.ಎ.ಯಿಂದ ಪರಿವರ್ತನೆ ಮಾಡಿಸಲು ಮತ್ತು ಎನ್‌ಒಸಿ ನೀಡಲು ಬಿ.ಡಿ.ಎ.ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು. ಅಲ್ಲದೇ ಇಲಾಖೆಗಳ ಆಂತರಿಕ ಮತ್ತು ಅಧಿಕಾರಿಗಳ ವೈಯಕ್ತಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಿದ್ದರು ಎಂದು ಆರೋಪ ಪಟ್ಟಿ ಹೊರಿಸಲಾಗಿತ್ತು.

 

ಆರೋಪ-6

 

ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾಗಿದ್ದ ವಿ.ಶಂಕರ್ ಮತ್ತು ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ಕಾರ್ ಅಗಿದ್ದ ಡಾ ದಯಾನಂದ ಅವರನ್ನು ಬೆಂಗಳೂರಿನಲ್ಲಿರುವ ನಂ. 2, ಕ್ರೆಸೆಂಟ್ ರಸ್ತೆ, ಲೋಕಾಯುಕ್ತರ ಅಧಿಕೃತ ನಿವಾಸಕ್ಕೆ ಕರೆಸಿದ್ದರು. ಅವರ ಅಧಿಕಾರ ವ್ಯಾಪ್ತಿ ಮೀರಿ ಖಾಸಗಿ ವ್ಯಕ್ತಿಯಾದ ಅಶ್ವಿನ್‌ರವರೊಡನೆ ಷಾಮೀಲಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಜಮೀನುಗಳಿಗೆ ಸಂಬಂಧಪಟ್ಟಂತೆ ದಾಖಲೆಗಳನ್ನು ಸೃಷ್ಟಿಸಲು ಒತ್ತಡ ಹೇರಿದ್ದರು.

 

ಪುರದಪಾಳ್ಯ ಸರ್ವೆ ನಂ. 4 ಜಮೀನಿನ ದಾಖಲೆಗಳು ಕಳೆದು ಹೋಗಿದೆ ಎಂದು ಪೋಡಿ ತಯಾರಿ ಮಾಡಿಕೊಡಲು ಒತ್ತಡ ಹೇರಿದ್ದರು. ಹಾಗೂ ಜಿಲ್ಲಾಧಿಕಾರಿಯಾಗಿದ್ದ ವಿ. ಶಂಕರ್ ರವರಿಗೆ ನಗರೂರು ಗ್ರಾಮ, ದಾಸನಪುರ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು, ಸರ್ವೆ ನಂ. 29 ರ ಜಮೀನಿನಲ್ಲಿ ನಡೆದಿದ್ದ ಒತ್ತುವರಿ ಬಗ್ಗೆ, ತೆರವು ಕಾರ್ಯಾಚರಣೆ ನಿಲ್ಲಿಸಬೇಕೆಂದು ಒತ್ತಡ ಹೇರಿದ್ದರು. ಕೋರಮಂಗಲದ ಸರ್ವೆ ನಂ. 115/10ರ ಪೈಕಿ 6 ಗುಂಟೆ ಜಮೀನನ್ನು ಬಿ.ಡಿ.ಎ.ಯಿಂದ ಕನ್ನರ್ಷನ್ ಮತ್ತು ಸ್ಮತ್ತಿನ ಖಾತೆ ಬದಲಾವಣೆ ಮಾಡಿಸಲು ಕಾನೂನುಬಾಹಿರವಾಗಿ ಹಣ ನೀಡಲು ಒತ್ತಾಯಿಸಿದ್ದರು ಎಂದು ಆಪಾದಿಸಲಾಗಿತ್ತು.

 

 

ಆರೋಪ-7

 

ಪ್ರಕರಣ ಒಂದರ ತನಿಖೆ ಮೇಲ್ವಿಚಾರಣಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರಾಗಿದ್ದ ಡಾ: ಅಶ್ವಿನಿ ಎಂಬುವರಿಗೆ ತನಿಖಾ ಕಡತ ಮತ್ತು ತನಿಖಾಧಿಕಾರಿಯವರೊಂದಿಗೆ ಕಛೇರಿಗೆ ಬಂದು ಖಾಸಗೀ ವ್ಯಕ್ತಿಯಾದ ಶ್ರೀ ಅಶ್ವಿನ್ ರಾವ್ ಎಂಬುವವರ ಜೊತೆಯಲ್ಲಿ ಪ್ರಕರಣದ ತನಿಖೆ ಕುರಿತು ಚರ್ಚಿಸಲು ನಿರ್ದೇಶನ ನೀಡಿದ್ದರು. ಈ ಮೂಲಕ ಕರ್ತವ್ಯ ವ್ಯಾಪ್ತಿ ಮೀರಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದರು.

 

ಆರೋಪ-8

 

ಹಲಸೂರು ಗೇಟ್ ಪೊಲೀಸ್ ಠಾಣೆಯ ಮಹಿಳಾ ಆರಕ್ಷಕ ನಿರೀಕ್ಷಕರಾಗಿದ್ದ ಹೆಚ್. ಎಂ. ಮೀನಾಕ್ಷಿ ಎಂಬುವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ್ದರು. ತಾವು ಹೇಳಿದ ರೀತಿಯಲ್ಲಿ ಮೊಕದ್ದಮೆ ದಾಖಲಿಸದೇ ಇರುವ ಬಗ್ಗೆ, ಬೆದರಿಕೆ ಹಾಕಿ, ಒತ್ತಡ ಹೇರಿದ್ದರು. ಈ ಮೂಲಕ ಸಾರ್ವಜನಿಕ ನೌಕರರಿಗೆ ತರವಲ್ಲದ ರೀತಿಯಲ್ಲಿ ನಡೆದುಕೊಂಡಿದ್ದು, ದುರ್ನಡತೆ ಎಸಗಿದ್ದಾರೆ ಎಂದು ಆಪಾದಿಸಲಾಗಿತ್ತು.

 

ಆರೋಪ-9

 

ಅಶ್ವಿನ್ ರಾವ್ ಮತ್ತು ವಿ. ಭಾಸ್ಕರ್ ಜೊತೆ ಸೇರಿ ಸಮಾಜ ಕಲ್ಯಾಣ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ಗಂಗಾರಾಮ್ ಬಡೇರಿಯಾ ಅವರನ್ನು ಲೋಕಾಯುಕ್ತರ ಅಧಿಕೃತ ನಿವಾಸ ಕಛೇರಿಗೆ ಕರೆಯಿಸಿದ್ದರು. ಅವರ ಮೇಲಿನ ದೂರು ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿದ್ದ ದೂರುಗಳನ್ನು ಕಾನೂನು ಬಾಹಿರವಾಗಿ ಅಂತ್ಯಗೊಳಿಸಲು ರೂ. 5 ಕೋಟಿಗಳನ್ನು ಕೊಡುವಂತೆ ಬೆದರಿಸಿ ಒತ್ತಾಯಿಸಿದ್ದರು.

 

ಆರೋಪ-10

 

ಖಾಸಗಿ ವ್ಯಕ್ತಿಗಳಾದ ಅಶ್ವಿನ್‌ರಾವ್, ವಿ.ಭಾಸ್ಕರ್, ಅಶೋಕ್‌ಕುಮಾರ್, ಎಂ.ಬಿ. ಶ್ರೀನಿವಾಸ್‌ಗೌಡ, ಶಂಕರೇಗೌಡ, ಹೆಚ್. ಎಸ್. ರಾಜಶೇಖರ್. ಚಿಂತಕುಂಟ ನರಸಿಂಹರಾವ್ ಮತ್ತು ಮೊಹಮದ್ ಸಾದಿಕ್ ಭಾಷ ಇವರೊಂದಿಗೆ ಶಾಮೀಲಾಗಿದ್ದರು. ಪತ್ರಾಂಕಿತ “ಎ” ದರ್ಜೆ ಅಧಿಕಾರಿಯಾಗಿದ್ದರೂ ತಾವು ಅಲಂಕರಿಸಿದ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು.

 

ಖಾಸಗಿ ವ್ಯಕ್ತಿಗಳೊಂದಿಗೆ ಅಕ್ರಮ ಕೂಟ ರಚಿಸಿಕೊಂಡು ವಿವಿಧ ರೀತಿಯ ಅಪರಾಧಾತ್ಮಕ ಪಿತೂರಿ ನಡೆಸಿ, ಸರ್ಕಾರಿ ನೌಕರರನ್ನು ಬೆದರಿಸಿದ್ದರು. ಭಾರೀ ಪ್ರಮಾಣದ ಹಣವನ್ನು ಕಾನೂನು ಬಾಹಿರವಾಗಿ ಸುಲಿಗೆ ಮಾಡಿದ್ದರು. ಇದಕ್ಕಾಗಿ ಕಛೇರಿ ಮತ್ತು ಅದಕ್ಕೆ ಹೊಂದಿಕೊಂಡು ಇದ್ದ ಕಾನ್ಸರೆನ್ಸ್ ಹಾಲ್ ಮತ್ತು ಬೆಂಗಳೂರಿನಲ್ಲಿನ ನಂ.2. ಕ್ರೆಸೆಂಟ್ ರಸ್ತೆಯಲ್ಲಿನ ಲೋಕಾಯುಕ್ತರ ಅಧಿಕೃತ ನಿವಾಸಕ್ಕೆ ಅಧಿಕಾರಿಗಳನ್ನು ಕರೆಸಿದ್ದರು.

 

ಹಾಗೆಯೇ ಕಛೇರಿಗಳನ್ನು ತಮ್ಮ ಸಾಂಘಿಕ ದುಷ್ಯಕೃತ್ಯಗಳನ್ನು ಹಣಿಯುವ ಸಲುವಾಗಿ ದುರುಪಯೋಗ ವಡಿಸಿಕೊಂಡಿದ್ದರು. ತಮ್ಮ ಕರ್ತವ್ಯ ವ್ಯಾಪ್ತಿ ಮೀರಿ ಬೇರೆ ಇಲಾಖೆಗಳ ಆಂತರಿಕ ಮತ್ತು ಅಧಿಕಾರಿಗಳ ವೈಯಕ್ತಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಿದ್ದರು ಎಂದು ಆಪಾದಿಸಲಾಗಿತ್ತು.

 

ಆರೋಪ-11

 

ಕಛೇರಿಯಲ್ಲಿನ ಆರೋಪಿತರ ಕೋಣೆ ಮತ್ತು ಲೋಕಾಯುಕ್ತ ಕಾನ್ಸರೆನ್ಸ್ ಹಾಲ್‌ನ್ನು ಇತರ ಖಾಸಗೀ ವ್ಯಕ್ತಿಗಳು, ಅಧಿಕಾರಿಗಳಿಂದ ಅಕ್ರಮ ಸಂಭಾವನೆಗೆ ಒತ್ತಾಯ ಮಾಡುವ ಸಲುವಾಗಿ ದುರುಪಯೋಗ ಮಾಡಲು ಅವಕಾಶ ಮಾಡಿಕೊಟ್ಟಿದ್ದರು. ಖಾಸಗಿ ವ್ಯಕ್ತಿಗಳಿಗೆ ಲೋಕಾಯುಕ್ತ ಕಛೇರಿ ಮತ್ತು ಕಾನ್ಸರೆನ್ಸ್ ಹಾಲ್‌ಗಳನ್ನು ಬಿಟ್ಟುಕೊಡುವಂತೆ ಕೈಕೆಳಗೆ ಕೆಲಸ ಮಾಡುವ ಅಧಿಕಾರಿ/ನೌಕರರಿಗೆ ದೂರವಾಣಿ ಮೂಲಕ ಸೂಚನೆ ನೀಡಿದ್ದರು ಎಂದು ಆರೋಪಿಸಲಾಗಿತ್ತು.

 

 

ಆರೋಪ-12

 

ಅಶ್ವಿನ್‌ರಾವ್, ವಿ. ಭಾಸ್ಕರ್ ಮತ್ತು ಅಶೋಕ್‌ಕುಮಾರ್ ರವರ ಜೊತೆ ಸೇರಿ ಲೋಕಾಯುಕ್ತ ರವರ ಜೊತೆ ಆರೋಪಿತರಿಗಿದ್ದ ಸಂಬಂಧವನ್ನು ದುರುಪಯೋಗಪಡಿಸಿಕೊಂಡಿದ್ದರು. ಅನೇಕ ಸರ್ಕಾರಿ ನೌಕರರನ್ನು ಲೋಕಾಯುಕ್ತ ಕಛೇರಿಗೆ ಮತ್ತು ಲೋಕಾಯುಕ್ತರವರ ನಿವಾಸ ಕಛೇರಿಗೆ ಕರೆಯಿಸಿ ದೊಡ್ಡ ಮೊತ್ತದ ಹಣವನ್ನು ಅವರಿಂದ ಬೆದರಿಸಿ ವಸೂಲಿ ಮಾಡಿದ್ದರು ಎಂದು ಆಪಾದಿಸಿ ದೋಷಾರೋಪಣೆ ಪಟ್ಟಿ ಹೊರಡಿಸಲಾಗಿತ್ತು.
ಸೈಯದ್ ರಿಯಾಜ್‌ ಅವರು ಈ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದರು.

 

ರಿಯಾಜ್‌ರ ಸಮಜಾಯಿಷಿಯಲ್ಲೇನಿತ್ತು?

 

ಎಕ್ಸಿಕ್ಯೂಟಿವ್‌ ಎಂಜಿನಿಯರ್ ಎಂ ಎನ್ ಕೃಷ್ಣಮೂರ್ತಿ ಅವರಿಂದ 1 ಕೋಟಿಗೆ ಬೇಡಿಕೆ ಇಟ್ಟಿರುವ ಪ್ರಕರಣದಕ್ಕೆ ಸಂಬಂಧಿಸಿದಂತೆ ಹಲವಾರು ಸಾಕ್ಷಿದಾರರ ಹೇಳಿಕೆಗಳನ್ನು ವಿವರವಾಗಿ ಒದಗಿಸಿದ್ದರು. ಒಂದನೇ ಆರೋಪವನ್ನು ವಿಚಾರಣಾಧಿಕಾರಿಯವರು ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಹಾಗೂ ಇದರಲ್ಲಿ ವಿಶೇಷ ತನಿಖಾ ತಂಡದ ಅಧಿಕಾರಿಗಳ ದುರ್ನಡತೆ ತೋರಿಸುತ್ತದೆ. ಹಾಗೂ ಈ ಅಂಶವನ್ನು ವಿಚಾರಣಾಧಿಕಾರಿಯವರು ಯಾವುದೋ ಅರಿಯದ ಕಾರಣಗಳಿಗಾಗಿ ಇದನ್ನು ನಿರ್ಲಕ್ಷಿಸಿರುತ್ತಾರೆ ಎಂದು ಸಮಜಾಯಿಷಿಯಲ್ಲಿ ವಿವರಿಸಿದ್ದರು.

 

 

 

ಎರಡನೇ ಆರೋಪಕ್ಕೆ ಸಂಬಂಧಿಸಿದಂತೆ ಹಲವಾರು ಸಾಕ್ಷಿದಾರರ ಸಾಕ್ಷಿಗಳ ಹೇಳಿಕೆಗಳ ಕೆಲವು ಭಾಗಗಳನ್ನು ನೀಡಿದ್ದರು. ದೋಷಾರೋಪಣಾ ಪಟ್ಟಿಯಲ್ಲಿನ ಅರೋಪ-2ರಲ್ಲಿನ ಯಾವುದೇ ಆರೋಪವೂ ಸಾಬೀತಾಗಿರುವುದಿಲ್ಲ. ವಿಚಾರಣಾಧಿಕಾರಿಯವರು ಉದ್ದೇಶಪೂರ್ವಕವಾಗಿ ಮರೆಮಾಚಿ ಕಾಣದ ಅನಿಸಿಕೆಗಳನ್ನು ನೀಡಿರುತ್ತಾರೆ ಎಂದು ತಿಳಿಸಿದ್ದರು. ಅಲ್ಲದೇ ವಿಚಾರಣಾಧಿಕಾರಿಯವರು ದುರದೃಷ್ಟಕರ ಹಾಗೂ ಆಧಾರರಹಿತವಾಗಿ ಆರೋಪ ಸಾಬೀತಾಗಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಎರಡನೇ ಆರೋಪದಲ್ಲಿ ಯಾವುದೇ ಆರೋಪಗಳು ಸಾಬೀತಾಗಿರುವುದಿಲ್ಲ ಎಂದು ತಿಳಿಸಿದ್ದರು.

 

 

ಮೂರನೇ ಆರೋಪದಲ್ಲಿ ತಮ್ಮ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳೂ ಸಂಪೂರ್ಣವಾಗಿ ತಪ್ಪಾಗಿದೆ. ಚೆನ್ನಬಸಪ್ಪ ಅವರ ಪ್ರಕರಣದಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್‍‌ ಎನ್.ಮೃತ್ಯುಂಜಯ ಅವರೊಂದಿಗೆ ಮಾತನಾಡಿಲ್ಲ. ಆದರೂ ಸಹ ವಿಚಾರಣಾಧಿಕಾರಿಯವರು ಅಶೋಕ್ ಕುಮಾರ್, ಭಾಸ್ಕರ್ ಮತ್ತು ಅಶ್ವಿನ್ ರಾವ್ ರವರೊಂದಿಗೆ ಶಾಮೀಲಾಗಿದ್ದಾರೆ ಎಂದು ಹೇಳಿರುವುದು ಆಧಾರರಹಿತವಾಗಿದೆ. ವಿಚಾರಣಾಧಿಕಾರಿಯವರು ಕ.ನಾ.ಸೇ.(ಸಿ.ಸಿ.ಎ) ನಿಯಮಗಳು 11(8)ರಡಿ ಅವಶ್ಯಕವಾದಂತೆ ವಿಷಯವೆಂದು ಪ್ರಶ್ನಾವಳಿಗಳನ್ನು ಸಿದ್ಧಪಡಿಸಿಕೊಂಡಿದ್ದರು. ಅದು ಈ ಸಂಬಂಧ ಯಾವುದೇ ವಿಷಯಗಳನ್ನು ಇಲ್ಲಿ ಚರ್ಚಿಸಿರುವುದಿಲ್ಲ ಎಂದು ವಿವರಿಸಿದ್ದರು.

 

 

ನಾಲ್ಕು ಮತ್ತು ಆರನೇ ಆರೋಪಗಳು ಪಿ.ಎನ್.ಕೃಷ್ಣಮೂರ್ತಿ ಕೃಷ್ಣಚಂದ್ರ ಕನ್ನೆನ್ನನ್ ಹಾಲ್, ಮಾಲೀಕರು ಮಾಡಿರುವ ಆರೋಪಗಳಿಗೆ ಸಂಬಂಧಿಸಿದೆ. ಇವರು 2008ರಲ್ಲಿ 6 ಗುಂಟೆ ಜಮೀನನ್ನು ಸರ್ವೆ ನಂ.115/10ರಲ್ಲಿ ಕೋರಮಂಗಲದಲ್ಲಿ ಖರೀದಿಸಿದ್ದರು. ಈ ಜಮೀನಿನ ಸಂಬಂಧ ಒಂದು ವಿವಾದವಿದೆ. ಈ ಮೂರು ಆರೋಪಗಳು ಇದಕ್ಕೆ ಸಂಬಂಧಿಸಿದಿವೆ. ಈ ಆರೋಪದಲ್ಲಿ ಆರೋಪಿತ ಅಧಿಕಾರಿಯವರು, ಲೋಕಾಯುಕ್ತರ ನಿವಾಸಕ್ಕೆ ಬರುವಂತೆ ಕರೆ ಮಾಡಿರುವುದಿಲ್ಲ. ಹಾಗೂ ಸಂಬಂಧಿಸಿದ ಎರಡು ಸಾಕ್ಷಿಗಳಿಗೆ ಒತ್ತಡ ಹಾಕಿರುವುದಿಲ್ಲ ಎಂದು ಆರೋಪವನ್ನು ಅಲ್ಲಗಳೆದಿರುವುದು ಗೊತ್ತಾಗಿದೆ.

 

7ನೇ ಆರೋಪಕ್ಕೆ ಸಂಬಂಧಿಸಿದಂತೆ ಹಲವು ಸಾಕ್ಷಿಗಳ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿತ ಅಧಿಕಾರಿಯವರನ್ನು ಪ್ರಶ್ನಿಸಿರುವುದಿಲ್ಲ. ಹಾಗೂ ಹೇಳಿಕೆಯನ್ನು ಪಡೆದಿರುವುದಿಲ್ಲ. ವಿಚಾರಣಾಧಿಕಾರಿಯವರು ಉದ್ದೇಶಪೂರ್ವಕವಾಗಿ ಸತ್ಯಾಂಶವನ್ನು ಮರೆಮಾಚಿರುತ್ತಾರೆ. ಹೀಗಾಗಿ ತಮ್ಮ ವಿರುದ್ಧದ ಶಿಸ್ತು ಪ್ರಕರಣವನ್ನು ಕೈಬಿಡಬೇಕು ಎಂದು ಕೋರಿದ್ದರು.

 

ಆರೋಪ-8ಕ್ಕೆ ಸಂಬಂಧಿಸಿದ ಸನ್ನಿವೇಶಗಳು, ಸಾಕ್ಷಿಗಳು, ಇತ್ಯಾದಿಗಳ ಬಗ್ಗೆ ವಿವರವಾಗಿ ವಿವರಣೆ ನೀಡಿದ್ಸದರು. ತಮ್ಮ ವಿರುದ್ಧದ ಆರೋಪ-8ನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಕೈಬಿಡುವಂತೆ ಸರ್ಕಾರವನ್ನು ಕೋರಿದ್ದರು. ಆರೋಪ-9ಕ್ಕೆ ಸಂಬಂಧಿಸಿದಂತೆ, ವಿಚಾರಣಾಧಿಕಾರಿಯವರ ವರದಿ ಹಾಗೂ ಈ ಸಂಬಂಧ ಸಾಕ್ಷಿಗಳ ಹೇಳಿಕೆಗಳನ್ನು ಉಲ್ಲೇಖಿಸಿ ಆರೋಪವನ್ನು ಅಲ್ಲಗಳೆದಿರುವುದು ತಿಳಿದು ಬಂದಿದೆ.

 

 

10 ರಿಂದ 12ನೇ ಆರೋಪಗಳಿಗೆ ಸಂಬಂಧಿಸಿದಂತೆ ಆರೋಪಿತ ಅಧಿಕಾರಿಯವರು ಸಂದರ್ಶಕರ ವಹಿ ಬಗ್ಗೆ ಮಾಡಿರುವ ಆರೋಪಗಳನ್ನು ಅಲ್ಲಗಳೆದಿದ್ದರು. ಇದೊಂದು ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು ವಿಚಾರಣಾಧಿಕಾರಿಯವರ ಎಲ್ಲಾ ಅವಲೋಕನೆಗಳನ್ನು ಆಧಾರರಹಿತವೆಂದು ತಿರಸ್ಕರಿಸಬೇಕು ಎಂದು ಕೋರಿದ್ದರು.

 

ಇದಲ್ಲದೇ ಈ ಪ್ರಕರಣವನ್ನು ಹೊರಗೆಳೆದಿದ್ದ ಹಿರಿಯ ಐಪಿಎಸ್ ಅಧಿಕಾರಿಯವರು ದಾಖಲೆಗಳು/ಸಾಕ್ಷಿಗಳು ಆರೋಪಿತ ಅಧಿಕಾರಿಯವರ ವಿರುದ್ಧ ಇಲ್ಲದಿದ್ದರೂ ಸರಿಯಾದ ದಾರಿಯಲ್ಲಿ ಕ್ರಮಿಸಿಲ್ಲ. ಸರಿಯಾದ ಕ್ರಮ ಕೈಗೊಂಡಿರಲಿಲ್ಲ. ಆರೋಪಿತ ಅಧಿಕಾರಿಯವರ ವಿರುದ್ಧ ಒಂದೇ ಒಂದು ಪದ ಅಥವಾ ಸಾಕ್ಷಿಯಿಲ್ಲದಿದ್ದರೂ ಆರೋಪಿತ ಅಧಿಕಾರಿಯವರನ್ನು ಬಂಧಿಸಲಾಗಿತ್ತು. ಅಲ್ಲದೇ ತಮ್ಮ ವಿರುದ್ಧ (ಕ್ರಿ.ಮೊ. ಸಂ.56/2015) ನ್ನು ಹೂಡಿರುತ್ತಾರೆ ಎಂದು ತಿಳಿಸಿದ್ದರು. ಆದರೆ ಸೋನಿಯಾ ನಾರಂಗ್‌ ಅವರ ಹೆಸರನ್ನು ಉಲ್ಲೇಖಿಸಿಲ್ಲ.

 

 

ಈ ಎಲ್ಲಾ ಅಂಶಗಳ ಬಗ್ಗೆ ವಿವರಣೆ ನೀಡಲು ಮುಖ್ಯ ಕಾರ್ಯದರ್ಶಿಯವರ ಮುಂದೆ ಹಾಜರಾಗಲು ಅವಕಾಶ ನೀಡಬೇಕು ಎಂದು ಆಪಾದಿತ ಅಧಿಕಾರಿ ಸೈಯದ್‌ ರಿಯಾಜ್‌ ಅವರು ಸಕ್ಷಮ ಪ್ರಾಧಿಕಾರವನ್ನು ಕೋರಿದ್ದರು.

 

ಆರೋಪಿತ ಅಧಿಕಾರಿಯು ತಮ್ಮ ಪ್ರತಿ ರಕ್ಷಣಾ ಹೇಳಿಕೆಯಲ್ಲಿ ವಿಚಾರಣಾಧಿಕಾರಿಯವರು ವಿಚಾರಣೆಯುದ್ದಕ್ಕೂ ಮೂಕ ಪ್ರೇಕ್ಷಕರಂತಿದ್ದರು. ಯಾವುದೇ ಪ್ರಶ್ನೆಯನ್ನು ಮಾಡಿರುವುದಿಲ್ಲ. ವಿಚಾರಣೆಯುದಕ್ಕೂ ಒಂದೇ ಒಂದು ಬಾರಿ ಸಹ ಸಾಕ್ಷಿದಾರರನ್ನು, ಮುಖ್ಯ ತನಿಖಾಧಿಕಾರಿ (CO), ತನಿಖಾಧಿಕಾರಿ(10) ಸಹಾಯಕ ತನಿಖಾಧಿಕಾರಿ (AIO) ಇವರನ್ನು ಪ್ರಶ್ನಿಸಿರುವುದಿಲ್ಲ. ಆದರೆ ಯಾವುದೇ ತರ್ಕವಿಲ್ಲದೇ, ಸಾಕ್ಷ್ಯವಿಲ್ಲದೇ ತಮ್ಮ ಅಭಿಪ್ರಾಯವನ್ನು ನೀಡಿರುವುದಾಗಿ ತಿಳಿಸಿದ್ದರು.

 

ವಿಚಾರಣಾಧಿಕಾರಿಯವರು ಸಾಕ್ಷಿದಾರನಾದ ಮಾನ್ಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಶಂಕರ್ ಭಟ್, ಹಿಂದಿನ ಹಾಗೂ ಬಿಡಿಎ ನ ಕಾನೂನು ಅಧಿಕಾರಿ, ಪಿ.ಎನ್.ಕೃಷ್ಣಮೂರ್ತಿ, ಹಾಗೂ ರಾಘವೇಂದ್ರ ಹೆಗಡೆ ಇವರ ಸಾಕ್ಷ್ಯಗಳನ್ನು ಸರಿಯಾಗಿ ಪರಿಗಣಿಸಿಲ್ಲ ಎಂದು ತಿಳಿಸಿದ್ದರು.

 

ಈ ಎಲ್ಲಾ ಅಂಶಗಳೊಂದಿಗೆ ಬಹಳಷ್ಟು ಅಂಶಗಳನ್ನು ಆರೋಪಿತ ಅಧಿಕಾರಿ ನೀಡಿದ್ದರು. ಅಲ್ಲದೇ ವಿಚಾರಣಾಧಿಕಾರಿಯವರ ವಿಚಾರಣಾ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು. ತಮ್ಮನ್ನು 12 ಆರೋಪಗಳಿಂದ ದೋಷಮುಕ್ತರನ್ನಾಗಿ ಮಾಡಬೇಕು ಎಂದು ಕೋರಿದ್ದರು ಎಂದು ಆದೇಶದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಆರೋಪಿತ ಸಮಜಾಯಿಷಿ ತಳ್ಳಿ ಹಾಕಿದ್ದೇಕೆ?

 

ಆರೋಪಿತ ಅಧಿಕಾರಿಯವರು ತಮ್ಮ ಪ್ರತಿ ರಕ್ಷಣಾ ಹೇಳಿಕೆಯಲ್ಲಿನ ಅಂಶಗಳನ್ನು ವಿಚಾರಣಾಧಿಕಾರಿಯವರು ಪರಿಶೀಲಿಸಿದ್ದರು. ಒಂದನೇ ಆರೋಪಕ್ಕೆ ಸಂಬಂಧಿಸಿದಂತೆ ಕೃತ್ಯಕ್ಕೆ ಬಳಸಲಾದ ಮೊಬೈಲ್ ಹ್ಯಾಂಡ್‌ಸೆಟ್ ಮತ್ತು ಸಿಮ್ ಕಾರ್ಡ್‌ಗಳನ್ನು ಶಂಕರೇಗೌಡರ ಮುಖಾಂತರ ನಾಶಪಡಿಸಿರುತ್ತಾರೆಂಬ ಆರೋಪಕ್ಕೆ ವಿಚಾರಣಾಧಿಕಾರಿಯವರು ಶಂಕರೇಗೌಡರವರ ಮುಖಾಂತರ ನಾಶಪಡಿಸಿದರೆಂಬ ಭಾಗವನ್ನು ಹೊರತುಪಡಿಸಿ ಉಳಿದ ಅಂಶಗಳು ಭಾಗಶಃ ಸಾಬೀತಾಗಿರುತ್ತದೆಂದು ತಿಳಿಸಿದ್ದರು.

 

ಆದರೆ ಆರೋಪಿತ ಅಧಿಕಾರಿಯು ಈ ಅಂಶವನ್ನು ರುಜುವಾತುಪಡಿಸಿರುವುದಿಲ್ಲ. ಆರೋಪ-2 ಮತ್ತು 3ಕ್ಕೆ ಸಂಬಂಧಿಸಿದಂತೆ ಆರೋಪಿತ ಅಧಿಕಾರಿಯು ಮಾಡಿರುವ ಕರೆಗಳ ಪಟ್ಟಿಯಿಂದ ಆರೋಪಿತ ಅಧಿಕಾರಿ ಹಾಗೂ ಇತರೆ ಆರೋಪಿಗಳ ನಡುವೆ ದೊಡ್ಡ ಸಂಖ್ಯೆಯ ಕರೆಗಳು ಮೊಬೈಲ್ ದೂರವಾಣಿ ಮುಖಾಂತರ ಆಗಿರುವುದು ಕಂಡು ಬಂದಿರುತ್ತದೆ. ಆರೋಪಿತ ಅಧಿಕಾರಿಯು ಕರೆಮಾಡಿರುವುದನ್ನು ಅಲ್ಲಗಳೆದಿರುವುದಿಲ್ಲ ಎಂದು ವಿವರಿಸಿರುವುದು ಗೊತ್ತಾಗಿದೆ.

 

ಆರೋಪ-4-6ಕ್ಕೆ ಸಂಬಂಧಿಸಿದಂತೆ ಪಿ.ಎನ್. ಕೃಷ್ಣಮೂರ್ತಿ ರವರು 2008ರಲ್ಲಿ ಖರೀದಿಸಿದ್ದ ಕೋರಮಂಗಲದ ಜಮೀನಿನ ಪ್ರಕರಣದಲ್ಲಿ ಆರೋಪಿತ ಅಧಿಕಾರಿಯು ಸೆಪ್ಟೆಂಬರ್ 2014ರಿಂದ ಏಪ್ರಿಲ್ 2015ರವರೆಗಿನ ಅವಧಿಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳೊಂದಿಗೆ ಸುಮಾರು 40 ಬಾರಿ ಕರೆಗಳನ್ನು ಮಾಡಿರುವುದು ದಾಖಲಾತಿಗಳಿಂದ ಕಂಡುಬಂದಿದೆ. ಹೀಗಾಗಿ ಆರೋಪಿತ ಅಧಿಕಾರಿಯ ಹೇಳಿಕೆಯನ್ನು ಒಪ್ಪಲು ಬರುವುದಿಲ್ಲ ಎಂದು ವಿಚಾರಣಾಧಿಕಾರಿಯವರು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

7ನೇ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿತ ಅಧಿಕಾರಿಯವರು ಪ್ರಕರಣವೊಂದರ ತನಿಖಾ ಮೇಲ್ವಿಚಾರಣಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರಾಗಿದ್ದ ಡಾ ಅಶ್ವಿನಿ ರವರಿಗೆ ತನಿಖಾ ಕಡತದೊಂದಿಗೆ ಚರ್ಚಿಸುವಂತೆ ನಿರ್ದೇಶನ ನೀಡಿ ಕರ್ತವ್ಯ ವ್ಯಾಪ್ತಿ ಮೀರಿ ಅಧಿಕಾರ ದುರುಪಯೋಗ ಪಡಿಸಿಕೊಂಡಿರುತ್ತಾರೆಂಬ ಬಗ್ಗೆ ವಿಚಾರಣಾಧಿಕಾರಿಯವರು ತಮ್ಮನ್ನು ಪ್ರಶ್ನಿಸಿರುವುದಿಲ್ಲ. ಹಾಗೂ ಹೇಳಿಕೆಯನ್ನು ಪಡೆದಿರುವುದಿಲ್ಲವೆಂಬ ಕಾರಣಕ್ಕೆ ಅಲ್ಲಗಳೆದಿರುತ್ತಾರೆ.

 

ಆದರೆ ಡಾ ಆಶ್ವಿನಿ, ಇವರಿಗೆ ಕರೆ ಮಾಡಿ ನಿರ್ದೇಶನ ನೀಡಿರುವುದನ್ನು ನಿರಾಕರಿಸಿರುವುದಿಲ್ಲ. ಹೀಗಾಗಿ ಆರೋಪಿತರ ಹೇಳಿಕೆಯನ್ನು ಒಪ್ಪಲು ಬರುವುದಿಲ್ಲ. 8ನೇ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿತ ಅಧಿಕಾರಿಯವರು ಹಲಸೂರು ಗೇಟ್ ಪೊಲೀಸ್ ಠಾಣೆಯ ಮಹಿಳಾ ಆರಕ್ಷಕ ನಿರೀಕ್ಷಕರಾಗಿದ್ದ ಹೆಚ್.ಎಂ. ಮೀನಾಕ್ಷಿ ರವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ್ದರು.

 

ಮತ್ತು ಹೇಳಿದ ರೀತಿಯಲ್ಲಿ ಮೊಕದ್ದಮೆ ದಾಖಲಿಸದೇ ಇರುವ ಬಗ್ಗೆ ಬೆದರಿಕೆ ಹಾಕಿ, ಒತ್ತಡ ಹೇರಿರುವ ಬಗ್ಗೆ ಇದ್ದು, ಇದನ್ನು ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿದ್ದರು ಹಲಸೂರು ಗೇಟ್ ಪೊಲೀಸ್ ಠಾಣಾ ದಿನಚರಿಯಲ್ಲಿ ನಮೂದಿಸಿರುವ ಬಗ್ಗೆ ದಾಖಲೆಯಿದೆ. ಹೀಗಾಗಿ ಆರೋಪಿತರ ಹೇಳಿಕೆಯನ್ನು ಈ ಕಾರಣಕ್ಕಾಗಿ ಒಪ್ಪಲು ಬರುವುದಿಲ್ಲ.

 

9ನೇ ಆರೋಪಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಗಂಗಾರಾಂ ಬಡೇರಿಯಾ ಅವರನ್ನು ಕರ್ನಾಟಕ ಲೋಕಾಯುಕ್ತರ ನಿವಾಸಕ್ಕೆ ಕರೆಯಿಸಿ, ಬೆದರಿಕೆ ಹಾಕಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಆರೋಪಿತ ಅಧಿಕಾರಿಯವರು ತನಿಖಾಧಿಕಾರಿಯವರಿಗೆ ತಾವು ಗಂಗಾರಾಂ ಬಡೇರಿಯಾರವರನ್ನು ಲೋಕಾಯುಕ್ತರ ನಿವಾಸಕ್ಕೆ ಕರೆಸಿರುವ ಬಗ್ಗೆ, ಸಾಕ್ಷ್ಯ ದೊರಕಿರುವುದಿಲ್ಲವೆಂದು ಹೇಳಿರುತ್ತಾರೆ.

 

 

ಆದರೆ ಗಂಗಾರಾಂ ಬಡೇರಿಯಾರವರು ಕರೆ ಮಾಡಿರುವ ಬಗ್ಗೆ, ಖಚಿತಪಡಿಸಿದ್ದಾರೆ. ಆಪಾದಿತರ ಹೇಳಿಕೆಯಂತೆ ಇವರ ಹೆಸರು ಇಲ್ಲದಿದ್ದ ಮಾತ್ರಕ್ಕೆ ಇವರು ಕರೆ ಮಾಡಿಲ್ಲವೆಂಬುದು ದೃಢಪಟ್ಟಿರುವುದಿಲ್ಲ. ಇವರು ಸಂಚು ನಡೆಸಿದ ತಂಡದ ಭಾಗವಾಗಿ ಮಾಡಿರಬಹುದಾಗಿದೆ. ಹೀಗಾಗಿ ಆರೋಪಿತ ಅಧಿಕಾರಿಯ ಹೇಳಿಕೆಯನ್ನು ಒಪ್ಪಲು ಬರುವುದಿಲ್ಲ ಎಂದು ವಿವರಿಸಿರುವುದು ತಿಳಿದು ಬಂದಿದೆ.

 

ಲೋಕಾಯುಕ್ತರ ನಿವಾಸವನ್ನು ದುರುಪಯೋಗಪಡಿಸಿಕೊಂಡಿರುವುದನ್ನು ಆರೋಪಿ ಅಧಿಕಾರಿ ತಳ್ಳಿ ಹಾಕಿರುವುದನ್ನೂ ವಿಚಾರಾಣಾಧಿಯವರು ಒಪ್ಪಿಲ್ಲ. ಆರೋಪಿತ ಅಧಿಕಾರಿಯವರನ್ನು ಭೇಟಿ ಮಾಡಲು ಬರುವವರ ಬಗ್ಗೆ ಲೋಕಾಯುಕ್ತ ಕಚೇರಿ ಸ್ವಾಗತ ವಿಭಾಗದ ಸಂದರ್ಶಕರ ವಹಿಯಲ್ಲಿ ದಾಖಲಿಸುತ್ತಿರಲಿಲ್ಲ. ಈ ಸಂಬಂಧ ಸಾಕ್ಷಿಗಳ ಹೇಳಿಕೆಯನ್ನು ಆಧರಿಸಿ, ಆರೋಪಿತರ ಹೇಳಿಕೆಯನ್ನು ಒಪ್ಪಲು ಬರುವುದಿಲ್ಲ ಎಂದು ವಿಚಾರಾಣಾಧಿಕಾರಿಯವರು ತೀರ್ಮಾನಿಸಿದ್ದಾರೆ.

 

ವಿಚಾರಣಾಧಿಕಾರಿಯವರ ವರದಿ ಮತ್ತು ಆರೋಪಿತ ಅಧಿಕಾರಿಯವರ ಪ್ರತಿ ರಕ್ಷಣಾ ಹೇಳಿಕೆಗಳನ್ನು ಪರಿಶೀಲಿಸಿದ್ದರು. ಆರೋಪಗಳನ್ನು ತಳ್ಳಿ ಹಾಕಬಹುದಾದಂತಹ ಯಾವುದೇ ನಿರ್ದಿಷ್ಟ ಸಕಾರಣಗಳನ್ನು/ಸಾಕ್ಷಿಗಳನ್ನು ಆರೋಪಿತ ಅಧಿಕಾರಿಯವರು ವಿಚಾರಣೆ ಸಮಯದಲ್ಲಿ ನೀಡಿಲ್ಲ. ಲೋಕಾಯುಕ್ತ ಸಂಸ್ಥೆಯ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ತನ್ನ ಸ್ಥಾನ, ಅಧಿಕಾರವನ್ನು ಬಳಸಿಕೊಂಡು ದುರ್ನಡತೆ ಎಸಗಿದ್ದಾರೆ ಎಂದು ಸಾಬೀತುಪಡಿಸಿರುವುದು ಗೊತ್ತಾಗಿದೆ.

Your generous support will help us remain independent and work without fear.

Latest News

Related Posts