ಬೆಂಗಳೂರು; ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ವಿದ್ಯುತ್ ಸರಬರಾಜು ಮಾಡಿದ್ದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಇನ್ನೂ 10.26 ಕೋಟಿ ರುಪಾಯಿಗಳನ್ನು ಬಾಕಿ ಉಳಿಸಿಕೊಂಡಿದೆ.
ವಿದ್ಯುತ್ ಬಿಲ್ ಬಾಕಿ ಮೊತ್ತವನ್ನು ಪಾವತಿಸದ ಕಾರಣಕ್ಕೆ ಸರ್ಕಾರಿ ಶಾಲೆಗಳಿಗೆ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳು ನೋಟೀಸ್ ನೀಡುತ್ತಿರುವ ಬೆನ್ನಲ್ಲೇ ಇದೀಗ ಬೆಸ್ಕಾಂ, ಮೆಸ್ಕಾಂ, ಚೆಸ್ಕಾಂ, ಜೆಸ್ಕಾಂ ಸೇರಿದಂತೆ ಇತರೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪಾವತಿಬೇಕಾದ ಮೊತ್ತದ ವಿವರಗಳು ಮುನ್ನೆಲೆಗೆ ಬಂದಿವೆ.
ಎಸ್ಕಾಂಗಳಿಗೆ ಪಾವತಿಸಬೇಕಿರುವ ವಿದ್ಯುತ್ ಬಿಲ್ ಬಾಕಿ ಮೊತ್ತದ ಕುರಿತು ಸಚಿವ ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ. ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ವಿದ್ಯುತ್ ಸರಬರಾಜು ಕಂಪನಿಗಳಿಗೆ ಪಾವತಿಸಬೇಕಾದ ವಿದ್ಯುತ್ ಬಿಲ್ ಮೊತ್ತದ ವಿವರಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ವಿಶೇಷವೆಂದರೇ ವಿದ್ಯುತ್ ಸರಬರಾಜು ಕಂಪನಿಗಳಿಗೆ 2024ರ ಏಪ್ರಿಲ್‌ನಿಂದ ಡಿಸೆಂಬರ್ 2024ರ ಅವಧಿವರೆಗೆ ಒಟ್ಟಾರೆ 10.26 ಕೋಟಿಯಷ್ಟು ಬಾಕಿ ಇರುವುದು ಗೊತ್ತಾಗಿದೆ.
ಬೆಸ್ಕಾಂಗೆ 2024ರ ಏಪ್ರಿಲ್‌ನಿಂದ ಡಿಸೆಂಬರ್ 2024ರವರೆಗೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯುತ್ ಬಿಲ್ ಒಟ್ಟಾರೆ 2.37 ಕೋಟಿ ರು ಬೇಡಿಕೆ ಇತ್ತು. ಈ ಅವಧಿಯ ಬೇಡಿಕೆ ಪ್ರಕಾರ 2.37 ಕೋಟಿ ರುಗಳನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯುಕ ಪಾವತಿಸಿತ್ತು. ಹೆಸ್ಕಾಂ ಗೆ 2024ರ ಏಪ್ರಿಲ್‌ನಿಂದ 2025ರ ಮಾರ್ಚ್ ಅವಧಿಯವರೆಗೆ 2.88 ಕೋಟಿ ರು ಬೇಡಿಕೆ ಇತ್ತು. ಈ ಪೈಕಿ 2.00 ಕೋಟಿ ರು ಪಾವತಿಸಿತ್ತು. ಇನ್ನುಳಿದ 88 ಲಕ್ಷ ರು ಬಾಕಿ ಇರಿಸಿಕೊಂಡಿತ್ತು.
ಮೆಸ್ಕಾಂಗೆ 2024ರ ಏಪ್ರಿಲ್‌ನಿಂದ 2025 ಮಾರ್ಚ್‌ವರೆಗೆ 3.17 ಕೋಟಿ ರು, ಸಿಇಎಸ್‌ಸಿಗೆ ಇದೇ ಅವಧಿಯಲ್ಲಿ 3.20 ಕೋಟಿ ರು., ಜೆಸ್ಕಾಂಗೆ 2024ರ ಏಪ್ರಿಲ್‌ನಿಂದ 2024ರ ಡಿಸೆಂಬರ್‍ವರೆಗೆ 2.41 ಕೋಟಿ ರು ಬೇಡಿಕೆ ಇತ್ತು. ಆದರೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಈ ವಿದ್ಯುತ್ ಸರಬರಾಜು ಕಂಪನಿಗಳಿಗೆ ನಯಾ ಪೈಸೆಯನ್ನೂ ನೀಡಿಲ್ಲ.
ಒಟ್ಟಾರೆ 14.04 ಕೋಟಿ ರು ಬೇಡಿಕೆ ಪೈಕಿ ಕೇವಲ 4.37 ಕೋಟಿ ರು ಮಾತ್ರ ಪಾವತಿಸಿತ್ತು ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಸರ್ಕಾರಿ ಪದವಿಪೂರ್ವ ಕಾಲೇಜುಗಳ ವಿದ್ಯುತ್ ಬಿಲ್ ಬೇಡಿಕೆಯು 2024ರ ಏಪ್ರಿಲ್‌ನಿಂದ ಡಿಸೆಂಬರ್ 2024ರವರೆಗೆ ಒಟ್ಟಾರೆ 3.17 ಕೋಟಿ ರು ಇತ್ತು. ಈ ಪೈಕಿ 2.58 ಕೋಟಿ ರು ಪಾವತಿಸಲಾಗಿತ್ತು. ಪದವಿಪೂರ್ವ ಕಾಲೇಜುಗಳಿಗೆ ವಿದ್ಯುತ್ ಸರಬರಾಜು ಮಾಡಿದ್ದ ಬೆಸ್ಕಾಂ ಗೆ 2024ರ ಏಪ್ರಿಲ್ ನಿಂದ 2024 ರ ಡಿಸೆಂಬರ್‍ವರೆಗೆ 49.94 ಲಕ್ಷ ರು, ಹೆಸ್ಕಾಂಗೆ 2024ರ ಏಪ್ರಿಲ್‌ನಿಂದ 2025ರ ಮಾರ್ಚ್‌ವರೆಗೆ 30.78 ಲಕ್ಷ ರು ಬೇಡಿಕೆ ಪ್ರಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಪಾವತಿಸಿತ್ತು.
ಮೆಸ್ಕಾಂಗೆ 2024ರ ಏಪ್ರಿಲ್‌ನಿಂದ 2025ರ ಮಾರ್ಚ್‌ವರೆಗೆ 87.30 ಲಕ್ಷ ರು ಬೇಡಿಕೆ ಪೈಕಿ 66.59 ಲಕ್ಷ ರು ಪಾವತಿಸಿತ್ತು. ಸಿಇಎಸ್‌ಸಿಗೆ 2024ರ ಏಪ್ರಿಲ್‌ನಿಂದ 2025ರ ಮಾರ್ಚ್‌ವರೆಗೆ 38.81 ಲಕ್ಷ ರು ಬೇಡಿಕೆ ಇತ್ತು. ಆದರೆ ಈ ಪೈಕಿ ನಯಾ ಪೈಸೆ ಪಾವತಿಸಿಲ್ಲ. ಜೆಸ್ಕಾಂಗೆ 2024ರ ಏಪ್ರಿಲ್‌ನಿಂದ 2024ರ ಡಿಸೆಂಬರ್‍ವರೆಗೆ 1.11 ಕೋಟಿ ರು ಬೇಡಿಕೆ ಇತ್ತು. ಬೇಡಿಕೆ ಪ್ರಕಾರ ಈ ಮೊತ್ತವನ್ನು ಪಾವತಿಸಿದೆ.
ಒಟ್ಟಾರೆ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ವಿದ್ಯುತ್ ಸರಬರಾಜು ಕಂಪನಿಗಳಿಗೆ 17.22 ಕೋಟಿ ರು ಬೇಡಿಕೆ ಇತ್ತು. ಈ ಪೈಕಿ 6.95 ಕೋಟಿ ರು ಪಾವತಿಸಿದೆ. ಇನ್ನೂ 10.26 ಕೋಟಿ ರು ಬಾಕಿ ಉಳಿಸಿಕೊಂಡಿದೆ.

ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2024ರ ಮಾರ್ಚ್ 31ರವರೆಗೆ ಅಂದಾಜು 9.78 ಕೋಟಿ ರು ಮತ್ತು ರಾಜ್ಯದ ಎಲ್ಲಾ 1,234 ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಅಂದಾಜು 68,85, 483 ರು. ವಿದ್ಯುತ್ ಬಿಲ್ ಮೊತ್ತವು ಬಾಕಿ ಇತ್ತು. ಈ ಬಗ್ಗೆ ಖುದ್ದು ಸಚಿವ ಮಧು ಬಂಗಾರಪ್ಪ ಅವರು 2024ರ ಜುಲೈ 15ರಂದೇ ವಿಧಾನಪರಿಷತ್‌ಗೆ ಲಿಖಿತ ಉತ್ತರ ಒದಗಿಸಿದ್ದರು.

2023-24ನೇ ಸಾಲಿಗೆ ಸಂಬಂಧಿಸಿದ ಮಾರ್ಚ್‌ವರೆಗೆ ಬಾಕಿ ಇರುವ ವಿದ್ಯುತ್ ಬಿಲ್‌ಗಳನ್ನು 2024-25ನೇ ಸಾಲಿನ ಆಯವ್ಯಯ ಲೆಕ್ಕ ಶೀರ್ಷಿಕೆಯಡಿಯಲ್ಲಿ ಒದಗಿಸಿರುವ ಅನುದಾನದಿಂದಲೇ ಪಾವತಿಸಬೇಕು ಎಂದು ಇಲಾಖೆಯು ಸೂಚಿಸಿತ್ತು. ಅಲ್ಲದೇ ಪ್ರತೀ ಆರ್ಥಿಕ ವರ್ಷದಲ್ಲಿ ತ್ರೈಮಾಸಿಕವಾರು ಎಲ್ಲಾ ಸರ್ಕಾರಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳ ವಿದ್ಯುತ್ ಬಳಕೆಯ ಬಿಲ್‌ಗಳನ್ನು ತಂತ್ರಾಂಶದಲ್ಲಿ ಸೂಕ್ತವಾಗಿ ಅಳವಡಿಸಬೇಕು. ಶೂನ್ಯ ಬಿಲ್‌ಗಳನ್ನು ನೀಡಲು ವ್ಯವಸ್ಥೆ ಮಾಡಬೇಕು. ಹಾಗೆಯೇ ವಿದ್ಯುತ್ ಶುಲ್ಕದ ಬೇಡಿಕೆಯನ್ನು ಶಾಲಾ ಶಿಕ್ಷಣ ಆಯುಕ್ತರಿಗೆ ಸಲ್ಲಿಸಬೇಕು ಎಂದು ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸೂಚಿಸಿತ್ತು.
ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಉಚಿತ ವಿದ್ಯುತ್ ಮತ್ತು ನೀರಿನ ಸೌಲಭ್ಯವನ್ನು ಒದಗಿಸಲು ಸರ್ಕಾರವು ನಿರ್ಧರಿಸಿತ್ತು. ರಾಜ್ಯದ 46,829 ಸರ್ಕಾರಿ ಮತ್ತು 1,234 ಪದವಿಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಮತ್ತು ನೀರಿನ ಸೌಲಭ್ಯ ನಿಡಲು 25 ಕೋಟಿ ರು ವೆಚ್ಚವಾಗಲಿದೆ ಎಂದು ಅಂದಾಜಿಸಿತ್ತು.
ರಾಜ್ಯದ 46,829 ಸರ್ಕಾರಿ ಶಾಲೆಗಳು ಮತ್ತು 1,234 ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ 29.19 ಕೋಟಿ ರು.ಗಳ ಅಂದಾಜು ಮೊತ್ತದಲ್ಲಿ (ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ 25.85 ಕೋಟಿ ರು., ಪದವಿಪೂರ್ವ ಕಾಲೇಜುಗಳಿಗೆ 3.34 ಕೋಟಿ ರು) ವಿದ್ಯುತ್ ಮತ್ತು ನೀರಿನ ಬಿಲ್ ಪಾವತಿಸಲು ಉದ್ದೇಶಿಸಿತ್ತು. ಶಾಲಾ ಕಟ್ಟಡಗಳ ನಿರ್ವಹಣೆ ಉಪ ಶೀರ್ಷಿಕೆಯಡಿಯಲ್ಲಿ ಲಭ್ಯವಿದ್ದ ಅನುದಾನದ ಪೈಕಿ 10 ಕೋಟಿ ರು ಗಳನ್ನು ಒದಗಿಸಿತ್ತು. ಈ ಹಣವನ್ನು ನೇರವಾಗಿ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪಾವತಿಸಲು 2024ರ ಜೂನ್ 27ರಂದೇ ಆದೇಶಿಸಿತ್ತು.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 821 ವಸತಿ ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಯೋಜನೆಯಡಿಯಲ್ಲಿ 30 ಕೋಟಿ ಕೊಡಲು ಆರ್ಥಿಕ ಇಲಾಖೆಯು ಸಹಮತಿಸಿರಲಿಲ್ಲ. ಅಲ್ಲದೇ ವಸತಿ ಶಾಲೆಗಳಿಗೆ ಉಚಿತ ವಿದ್ಯುತ್ ಪೂರೈಸಲು ಅಂದಾಜು ವೆಚ್ಚ ನಿಗದಿಪಡಿಸಿ ಸಮಾಜ ಕಲ್ಯಾಣ ಇಲಾಖೆಯು ವರ್ಷದ ಹಿಂದೆ ಹೊರಡಿಸಿದ್ದ ಆದೇಶವು ಗೃಹಜ್ಯೋತಿ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ಆರ್ಥಿಕ ಇಲಾಖೆಯು ಹೇಳಿತ್ತು.
ಇಂಧನ ಇಲಾಖೆಗೆ 1,000 ಕೋಟಿಗೂ ಹೆಚ್ಚು ಅನುದಾನವನ್ನು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅಡಿಯಲ್ಲಿ ನೀಡಲಾಗುತ್ತಿದೆ. ಈ ಮೊತ್ತದಲ್ಲಿ ವರ್ಷಕ್ಕೆ ಕೇವಲ 30 ಕೋಟಿ ರು.ಗಳನ್ನು ಹೊಂದಾಣಿಕೆ ಮಾಡಲು ಆರ್ಥಿಕ ಇಲಾಖೆಯು ಒಪ್ಪಿರಲಿಲ್ಲ.

ಈ ಕುರಿತು ‘ದಿ ಫೈಲ್’, ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ವಸತಿ ಶಿಕ್ಷಣ ಸಂಸ್ಥೆಗಳ ವಿದ್ಯುತ್ ಬಾಕಿ; ಹಣ ಬಿಡುಗಡೆಗೆ ಆರ್ಥಿಕ ಇಲಾಖೆ ನಕಾರ, ಆದೇಶ ಹಿಂಪಡೆಯಲು ಸೂಚನೆ
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 821 ವಸತಿ ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಪೂರೈಸಲು ಅಂದಾಜು ವೆಚ್ಚ ನಿಗದಿಪಡಿಸಿ ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿತ್ತು.

ಇದರಡಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಮತ್ತು ನೀರಿನ ಸಂಪರ್ಕ ಒದಗಿಸಲಾಗುತ್ತದೆ. ವಿದ್ಯುತ್ ಮತ್ತು ನೀರಿನ ಬಿಲ್‌ಗಳಿಗಾಗಿ ಖರ್ಚಾಗುವ ಹಣವನ್ನು ಉಳಿಸಿ, ಶಿಕ್ಷಣದ ಗುಣಮಟ್ಟ ಮತ್ತು ಮೂಲಸೌಕರ್ಯ ಸುಧಾರಿಸಲು ಬಳಸಿಕೊಳ್ಳಲು ಮುಂದಾಗಿತ್ತು.

ಹಿಂದುಳಿದ ವರ್ಗಗಳ ವಸತಿ ಶಾಲೆಗಳ 7 ಕೋಟಿ ರು. ಬಿಲ್ ಅನ್ನು ಇದೇ ಇಲಾಖೆಯ ನಿರ್ವಹಣಾ ಲೆಕ್ಕ ಶೀರ್ಷಿಕೆಯಡಿ ಒದಗಿಸಲಾಗುವ ಅನುದಾನದಲ್ಲಿ ತ್ರೈಮಾಸಿಕವಾರು ಇಂಧನ ಇಲಾಖೆಗೆ ಮರುಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಿತ್ತು. ಉಚಿತ ವಿದ್ಯುತ್ ಸೌಲಭ್ಯವನ್ನು ಮಿತವಾಗಿ, ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಕೆ ಮಾಡಬೇಕೆಂದು ಪ್ರಾಂಶುಪಾಲರು, ಅಧಿಕಾರಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಆದೇಶದಲ್ಲಿ ವಿವರಿಸಿತ್ತು.
ಆರ್ಥಿಕ ಕ್ಲಿಷ್ಟತೆ, ಬೊಕ್ಕಸಕ್ಕೆ ಹೊರೆ; ವಿದ್ಯಾರ್ಥಿ ವೇತನಕ್ಕೆ ‘ಕೈ’ ಎತ್ತಿದ ಸರ್ಕಾರ, ರಾಗ ಬದಲಿಸಿತು ಸಮಾಜ ಕಲ್ಯಾಣ
ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ದಾಖಲಾತಿಯನ್ನು ಹೆಚ್ಚಿಸುವ ಸಂಬಂಧವೂ ಆರ್ಥಿಕ ಇಲಾಖೆಯು ಆರ್ಥಿಕ ಕ್ಲಿಷ್ಟತೆ ಎಂದು ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಈ ಕುರಿತು ‘ದಿ ಫೈಲ್’ ಕಳೆದ 2 ವರ್ಷದ ಹಿಂದೆಯೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
 
								 
								 
											





