ಸರ್ಕಾರಿ ಶಾಲೆಗಳ ಶೌಚಾಲಯ ನಿರ್ವಹಣೆ, ನೈರ್ಮಲ್ಯ ಸೌಕರ್ಯ; ಸಿಎಂ ತವರು ಜಿಲ್ಲೆಯಲ್ಲೇ ಕನಿಷ್ಠ ಪ್ರಗತಿ

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು  ಮೈಸೂರು ಜಿಲ್ಲೆಯಲ್ಲಿನ  ಸರ್ಕಾರಿ ಶಾಲೆಗಳಲ್ಲಿ  ಶೌಚಾಲಯಗಳ ನಿರ್ವಹಣೆ, ನೈರ್ಮಲ್ಯ  ಮತ್ತು ಶೌಚಾಲಯಗಳಿಗೆ ನೀರು ಸರಬರಾಜು ಮಾಡುವ  ಸೌಲಭ್ಯಗಳನ್ನು ಒದಗಿಸುವುದರಲ್ಲಿ ಹಿಂದುಳಿದಿದೆ.  ರಾಜ್ಯದ ನಾಲ್ಕು ವಿಭಾಗಗಳಲ್ಲೇ  ಮೈಸೂರು ವಿಭಾಗವು ಶೇ. 23 ರಷ್ಟು ಹಿಂದುಳಿದಿದೆ.

 

ಕರ್ನಾಟಕ ಸರ್ಕಾರದ ವಿತ್ತೀಯ ಕಾರ್ಯನೀತಿ ಸಂಸ್ಥೆಯು ನಡೆಸಿರುವ ಬಹುದೊಡ್ಡ ಅಧ್ಯಯನ ಮತ್ತು ಆರ್ಥಿಕ ಚರ್ಚೆಯಲ್ಲಿ ಈ ಸಂಗತಿಯು ಬಹಿರಂಗವಾಗಿದೆ. ಗ್ಯಾರಂಟಿ ಸಮಾವೇಶ, ಪತ್ರಿಕಾ ಜಾಹೀರಾತುಗಳಿಗೆ ಸಾವಿರಾರು ಕೋಟಿ ರುಪಾಯಿ ಖರ್ಚು ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು ವಿಭಾಗದಲ್ಲಿಯೇ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ, ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವುದರಲ್ಲಿ ಹಿಂದೆ ಬಿದ್ದಿರುವ ಸಂಗತಿಯು ಮುನ್ನೆಲೆಗೆ ಬಂದಿದೆ.

 

ಕರ್ನಾಟಕ ಸರ್ಕಾರದ ವಿತ್ತೀಯ ಕಾರ್ಯನೀತಿ ಸಂಸ್ಥೆಯು ನಡೆಸಿರುವ ಬಹುದೊಡ್ಡ ಅಧ್ಯಯನ ಮತ್ತು ಆರ್ಥಿಕ ಚರ್ಚೆಯ ವಿವರಗಳನ್ನೊಳಗೊಂಡ ಪ್ರಬಂಧವು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಕರ್ನಾಟಕದ ಜಿಲ್ಲೆಗಳಾದ್ಯಂತ ಆಯ್ದ ಸರ್ಕಾರಿ ಶಾಲೆಗಳಲ್ಲಿ ನೈರ್ಮಲ್ಯ ಸೌಲಭ್ಯಗಳ ಸ್ಥಿತಿ, ಬಳಕೆ, ಕಾರ್ಯಕ್ಷಮತೆ ಮತ್ತು ನಿರ್ವಹಣೆ ಕುರಿತು ಈ ಪ್ರಬಂಧದಲ್ಲಿ ಪರಿಶೀಲಿಸಿದೆ. ಇದು ಸ್ವಚ್ಛ ಭಾರತ ಮಿಷನ್-ಗ್ರಾಮೀಣ (SBM-G) ಕುರಿತು ಕರ್ನಾಟಕದಲ್ಲಿ ನಡೆದ ದೊಡ್ಡ ಅಧ್ಯಯನದ ಭಾಗವಾಗಿದೆ. ಈ ಪ್ರಬಂಧವು, 2023-24ರ ಶೈಕ್ಷಣಿಕ ವರ್ಷದಲ್ಲಿ ಸಂಗ್ರಹಿಸಿದ ಪ್ರಾಥಮಿಕ ದತ್ತಾಂಶವನ್ನು ಆಧರಿಸಿದೆ.

 

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ಒದಗಿಸುವಲ್ಲಿ ಅಸಮಾನತೆಗಳು ಈಗಲೂ ಮುಂದುವರೆದಿವೆ. ಈ ಪ್ರಾದೇಶಿಕ ಅಸಮಾನತೆಗಳು ವಿದ್ಯಾರ್ಥಿಗಳ ಹಾಜರಾತಿ, ಕಲಿಕೆಯ ಫಲಿತಾಂಶಗಳು, ಆರೋಗ್ಯ ಮತ್ತು ಲಿಂಗ ಸಮಾನತೆಯ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ಪ್ರಬಂಧದಲ್ಲಿ ವಿಶ್ಲೇಷಿಸಿರುವುದು ಗೊತ್ತಾಗಿದೆ.

 

 

ಕಲಬುರಗಿ, ಯಾದಗಿರಿ, ಬಳ್ಳಾರಿ ಮತ್ತು ರಾಯಚೂರು ಮುಂತಾದ ಗ್ರಾಮೀಣ ಜಿಲ್ಲೆಗಳ ಶಾಲೆಗಳಲ್ಲಿ ನೈರ್ಮಲ್ಯವು ಅಸಮರ್ಪಕತೆಯಿಂದ ಕೂಡಿವೆ. ಅಗತ್ಯ ಮೂಲ ಸೌಕರ್ಯಗಳಿಲ್ಲ. ವಿಶೇಷವಾಗಿ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳ ಕೊರತೆ ಇದೆ. ಪ್ರತ್ಯೇಕ ಶೌಚಾಲಯಗಳಿಗಾಗಿ ವಿದ್ಯಾರ್ಥಿನಿಯರು ಈಗಲೂ ಹೋರಾಡುತ್ತಲೇ ಇದ್ದಾರೆ ಎಂಬುದು ಕರ್ನಾಟಕ ಸರ್ಕಾರದ ವಿತ್ತೀಯ ಕಾರ್ಯನೀತಿ ಸಂಸ್ಥೆ ನಡೆಸಿರುವ ಅಧ್ಯಯನವು ಬಹಿರಂಗಪಡಿಸಿದೆ.

 

ರಾಜ್ಯದ ಆಯ್ದ ಪ್ರದೇಶಗಳಲ್ಲಿ ಸರಾಸರಿ ಶೇ. 38 ರಷ್ಟು ಶಾಲೆಗಳಿಗೆ ಸ್ವಚ್ಛ ಭಾರತ್‌ ಮಿಷನ್‌ (ಗ್ರಾಮೀಣ) ಅಡಿಯಲ್ಲಿ ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ತೋರಿಸಲಾಗಿದೆ. ಎಸ್‌ಬಿಎಂ-ಜಿ ಅಡಿಯಲ್ಲಿ ಶಾಲೆಗಳಿಗೆ ಒದಗಿಸಿರುವ ನೈರ್ಮಲ್ಯ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಜಿಲ್ಲೆಗಳು ಮತ್ತು ಆಡಳಿತ ವಿಭಾಗಗಳು ಒದಗಿಸಿರುವ ಮಾಹಿತಿ, ಅನುಪಾತದಲ್ಲಿ ವ್ಯತ್ಯಾಸಗಳಿವೆ.

 

ದಕ್ಷಿಣ ಕರ್ನಾಟಕದಲ್ಲಿ ಕೇವಲ ಶೇ. 28 ರಷ್ಟು ಮಾತ್ರ ಇದ್ದರೇ, ಉತ್ತರ ಕರ್ನಾಟಕದಲ್ಲಿ, ಶೇ. 45 ರಷ್ಟು ಶಾಲೆಗಳು ನೈರ್ಮಲ್ಯ ಸೌಲಭ್ಯಗಳನ್ನು ಪಡೆದಿವೆ. ವಿಭಾಗೀಯ ಮಟ್ಟದಲ್ಲಿ, ಕಲಬುರಗಿ ವಿಭಾಗವು ಅತ್ಯಧಿಕ ಅಂದರೇ ಶೇ. 67 ತೋರಿಸಿದರೆ, ಮೈಸೂರು ವಿಭಾಗವು ಕೇವಲ ಶೇ. 23 ರಷ್ಟು ಮಾತ್ರ ಸೌಲಭ್ಯಗಳನ್ನು ಒದಗಿಸುವ ಮೂಲಕ ಶಾಲೆಗಳಲ್ಲಿ ಶೌಚಾಲಯಗಳಲ್ಲಿನ ನೈರ್ಮಲ್ಯ ಸೌಕರ್ಯ ಒದಗಿಸುವುದರಲ್ಲಿ ಹಿಂದುಳಿದಿದೆ ಎಂದು ಪ್ರಬಂಧದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಜಿಲ್ಲೆಗಳ ಪೈಕಿ ರಾಯಚೂರು ಪೂರ್ಣ ಶೇ. 100 ರಷ್ಟು ವ್ಯಾಪ್ತಿಯೊಂದಿಗೆ ಎದ್ದು ಕಾಣುತ್ತದೆ. ನಂತರ ಬಳ್ಳಾರಿ ಶೇ. 75, ಚಿಕ್ಕಬಳ್ಳಾಪುರ ಮತ್ತು ಚಾಮರಾಜನಗರ ಶೇ. 0ರ ವ್ಯಾಪ್ತಿಯನ್ನು ಹೊಂದಿಲ್ಲ. ತುಮಕೂರು, ದಾವಣಗೆರೆ, ಚಿಕ್ಕಮಗಳೂರು ಮತ್ತು ಬಾಗಲಕೋಟೆ ಸೇರಿದಂತೆ ಹಲವಾರು ಜಿಲ್ಲೆಗಳು ಶೇ. 50 ರಷ್ಟು ಮಧ್ಯಮ ವ್ಯಾಪ್ತಿಯನ್ನು ವರದಿ ಮಾಡಿವೆ. ಇದಕ್ಕೆ ವ್ಯತಿರಿಕ್ತವಾಗಿ, ಕಲಬುರ್ಗಿ ಶೇ. 20, ಉತ್ತರ ಕನ್ನಡ ಶೇ. 22, ಮೈಸೂರು ಶೇ. 25, ಮತ್ತು ಬೆಳಗಾವಿ ಶೇ. 25 ಹೊಂದುವ ಮೂಲಕ ಕೆಳಮಟ್ಟದಲ್ಲಿವೆ.

 

 

ಕರ್ನಾಟಕದ 48 ಹಳ್ಳಿಗಳಲ್ಲಿರುವ 63 ಸರ್ಕಾರಿ ಶಾಲೆಗಳಿಂದ ಅಧ್ಯಯನಕಾರರ ತಂಡವು ದತ್ತಾಂಶವನ್ನು ಸಂಗ್ರಹಿಸಿತ್ತು. ಸಮೀಕ್ಷೆಗೊಳಗಾದ ಎಲ್ಲಾ ಶಾಲೆಗಳು ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಸೌಲಭ್ಯಗಳನ್ನು ಹೊಂದಿವೆ. ಹುಡುಗಿಯರಲ್ಲಿ ಹೆಚ್ಚಿನ ಬಳಕೆ ಇದೆ ಎಂದು ಸಂಶೋಧನೆಗಳು ಬಹಿರಂಗಪಡಿಸುತ್ತವೆ. ಆದಾಗ್ಯೂ, ಶೌಚಾಲಯ ದುರಸ್ತಿ, ನಿರ್ವಹಣೆ ಮತ್ತು ನಿಯಮಿತ ನೀರಿನ ಪೂರೈಕೆಯಲ್ಲಿ ಸಮಸ್ಯೆಗಳು ಈಗಲೂ ಮುಂದುವರೆದಿವೆ ಎಂದು ಪ್ರಬಂಧದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ನೈರ್ಮಲ್ಯ ಮೂಲಸೌಕರ್ಯವನ್ನು ವಿಸ್ತರಿಸುವಲ್ಲಿ ಗಮನಾರ್ಹ ಸಾಧನೆಗಳನ್ನು ಸಾಧಿಸಲಾಗಿದೆ. ಆದರೂ ಸಹ ಇನ್ನೂ ಬಹತೇಕ ಸಂಖ್ಯೆಯಲ್ಲಿನ ಶೌಚಾಲಯಗಳು ಕಾರ್ಯನಿರ್ವಹಿಸುತ್ತಿಲ್ಲ. ಹಲವು ಶಾಲೆಗಳಲ್ಲಿನ ಶೌಚಾಲಯಗಳು ಕಳಪೆ ನಿರ್ವಹಣೆಯಿಂದ ಕೂಡಿವೆ. ಅನಿಯಮಿತ ಶುಚಿಗೊಳಿಸುವಿಕೆ ಮತ್ತು ಶೌಚಾಲಯಗಳಿಗೆ ನೀರು ಸರಬರಾಜು ಅಸಮರ್ಪಕವಾಗಿದೆ. ನೀರು ಸರಬರಾಜು ಮುಂತಾದ ಹಲವಾರು ಸವಾಲುಗಳು ಇನ್ನೂ ನೆಲಮಟ್ಟದಲ್ಲಿ ಮುಂದುವರೆದಿವೆ.

 

ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛ ಮತ್ತು ಕ್ರಿಯಾತ್ಮಕ ಶೌಚಾಲಯಗಳ ಪ್ರವೇಶದಲ್ಲಿ ಸಾಕಷ್ಟು ಅಂತರವಿದೆ. ಇದು ವಿದ್ಯಾರ್ಥಿಗಳ ಆರೋಗ್ಯ, ಸುರಕ್ಷತೆ ಮತ್ತು ಶೈಕ್ಷಣಿಕ ತೊಡಗಿಸಿಕೊಳ್ಳುವಿಕೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಪ್ರಬಂಧದಲ್ಲಿ ವಿಶ್ಲೇಷಿಸಿರುವುದು ಗೊತ್ತಾಗಿದೆ.

 

ಇಂತಹ ಸಮಸ್ಯೆಗಳು, ಹದಿಹರೆಯದ ಹುಡುಗಿಯರು ಎದುರಿಸುತ್ತಿರುವ ಸವಾಲುಗಳನ್ನು ಮತ್ತಷ್ಟು ಉಲ್ಬಣಗೊಳಿಸಲು ಕಾರಣವಾಗಲಿದೆ. ಅಲ್ಲದೇ ಇದು ಸಾಮಾನ್ಯವಾಗಿ ಕಡಿಮೆ ಹಾಜರಾತಿ ಕಾರಣವಾಗುತ್ತದೆ. ಕರ್ನಾಟಕ ಹೈಕೋರ್ಟ್ ಸಹ ರಾಜ್ಯಾದ್ಯಂತ ಶಾಲೆಗಳಲ್ಲಿ ಸಾಕಷ್ಟು ಶೌಚಾಲಯ ಮತ್ತು ಕುಡಿಯುವ ನೀರಿನ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳುವ ತಕ್ಷಣದ ಅಗತ್ಯವನ್ನು ಒತ್ತಿ ಹೇಳಿತ್ತು.

 

ವಿಶೇಷವಾಗಿ ಗ್ರಾಮೀಣ ಮತ್ತು ಕಡಿಮೆ ಸೇವೆ ಸಲ್ಲಿಸಿದ ಶಾಲೆಗಳಲ್ಲಿ ಶೌಚಾಲಯಗಳನ್ನು ಒದಗಿಸಬೇಕು. ಇವು ಸುರಕ್ಷಿತ, ನೈರ್ಮಲ್ಯ ಮತ್ತು ಅಂತರ್ಗತ ಕಲಿಕಾ ವಾತಾವರಣವನ್ನು ಖಾತ್ರಿಪಡಿಸುವಲ್ಲಿ ನಿರ್ಣಾಯಕ ಅಂಶವಾಗಿದೆ. ಸ್ವಚ್ಛ ಮತ್ತು ಕ್ರಿಯಾತ್ಮಕ ಶೌಚಾಲಯ ಸೌಲಭ್ಯಗಳ ಪ್ರವೇಶವು ವಿದ್ಯಾರ್ಥಿಗಳ ಆರೋಗ್ಯ, ಹಾಜರಾತಿ ಮತ್ತು ಒಟ್ಟಾರೆ ಯೋಗಕ್ಷೇಮದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

 

ಅಲ್ಲದೇ ಇದು ಶಿಕ್ಷಣದಲ್ಲಿ ಹುಡುಗಿಯರ ಭಾಗವಹಿಸುವಿಕೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಆಯ್ದ ಎಲ್ಲಾ ಹಳ್ಳಿಗಳಲ್ಲಿರುವ ಶಾಲೆಗಳಲ್ಲಿ ಸರ್ವ ಶಿಕ್ಷಾ ಅಭಿಯಾನ (ಎಸ್‌ಎಸ್‌ಎ), ಮಾಧ್ಯಮಿಕ ಶಿಕ್ಷಾ ಅಭಿಯಾನ (ಎಂಎಸ್‌ಎ), ಎಸ್‌ಬಿಎಂ-ಜಿ ಅಥವಾ ಸ್ವಂತ ಸಂಪನ್ಮೂಲಗಳು ಸೇರಿದಂತೆ ಇತರ ಮೂಲಗಳ ಮೂಲಕ ಶೌಚಾಲಯ ಸೌಲಭ್ಯವನ್ನು ನಿರ್ಮಿಸಲಾಗಿದೆ ಎಂದು ಕಂಡುಬಂದಿದೆ. ಕಲಿಕೆ ಮತ್ತು ಬೆಳವಣಿಗೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಶೌಚಾಲಯಗಳನ್ನು ಒದಗಿಸುವ ಸರ್ಕಾರವು ಬದ್ಧತೆ ಪ್ರದರ್ಶಿಸಬೇಕು ಎಂದು ಪ್ರಬಂಧದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ವಿದ್ಯಾರ್ಥಿಗಳು, ವಿಶೇಷವಾಗಿ ಹುಡುಗಿಯರು ಈ ಸೌಲಭ್ಯಗಳನ್ನು ಆತ್ಮವಿಶ್ವಾಸದಿಂದ ಬಳಸುವಂತೆ ಪ್ರೋತ್ಸಾಹಿಸಲು ಸೌಲಭ್ಯಗಳನ್ನು ಲಭ್ಯವಾಗಿಸಬೇಕು. ಹುಡುಗಿಯರಲ್ಲಿ, ಶೇಕಡಾ 85 ರಷ್ಟು ಜನರು ನಿಯಮಿತವಾಗಿ ನೈರ್ಮಲ್ಯ ಮೂಲಸೌಕರ್ಯವನ್ನು ಬಳಸುತ್ತಾರೆ. ಶೇಕಡಾ 13 ರಷ್ಟು ಜನರು ಅವುಗಳನ್ನು ಸಾಂದರ್ಭಿಕವಾಗಿ ಬಳಸುತ್ತಾರೆ. ಮತ್ತು ಶೇಕಡಾ 2 ರಷ್ಟು ಜನರು ಮಾತ್ರ ಶೌಚಾಲಯಗಳನ್ನು ಬಳಸುವುದಿಲ್ಲ.

 

ಹುಡುಗರಲ್ಲಿ, ಶೇಕಡಾ 76 ರಷ್ಟು ಜನರು ನೈರ್ಮಲ್ಯ ಮೂಲಸೌಕರ್ಯವನ್ನು ನಿಯಮಿತವಾಗಿ ಬಳಸುತ್ತಾರೆ. ಶೇಕಡಾ 14 ರಷ್ಟು ಜನರು ಅವುಗಳನ್ನು ಸಾಂದರ್ಭಿಕವಾಗಿ ಬಳಸುತ್ತಾರೆ. ಮತ್ತು ಶೇಕಡಾ 9 ರಷ್ಟು ಜನರು ನೈರ್ಮಲ್ಯ ಮೂಲಸೌಕರ್ಯವನ್ನು ಬಳಸುವುದಿಲ್ಲ. ಇದು ಹುಡುಗರಿಗಿಂತ ಹುಡುಗಿಯರಲ್ಲಿ ನೈರ್ಮಲ್ಯ ಮೂಲಸೌಕರ್ಯ ಬಳಕೆ ಹೆಚ್ಚಾಗಿದೆ ಎಂದು ಸೂಚಿಸುತ್ತದೆ.

 

ವಿಶೇಷವೆಂದರೇ ಸರ್ಕಾರಿ ಶಾಲೆಗಳಲ್ಲಿ ಶೇ.96.1ರಷ್ಟು ಬಾಲಕರ ಶೌಚಾಲಯಗಳ ಪೈಕಿ ಶೇ.94.5ರಷ್ಟು ಕಾರ್ಯನಿರ್ವಹಿಸುತ್ತಿವೆ. ಶೇ. 98.9ರಷ್ಟು ಶೌಚಾಲಯಗಳು ಬಾಲಕಿಯರಿಗಾಗಿಯೇ ಇವೆ. ಈ ಪೈಕಿ ಶೇ. 98.1ರಷ್ಟು ಶೌಚಾಲಯಗಳನ್ನೂ ಬಾಲಕಿಯರು  ಬಳಸುತ್ತಿದ್ದಾರೆ. ಆದರೆ ಈ ಶೌಚಾಲಯಗಳಲ್ಲಿ ನೈರ್ಮಲ್ಯತೆಯಲ್ಲಿ ಮಾತ್ರ ಹಿಂದೆ ಬಿದ್ದಿವೆ ಎಂದು ಅಧ್ಯಯನ ವರದಿಯಲ್ಲಿ ಕಂಡುಕೊಂಡಿರುವುದು ತಿಳಿದು ಬಂದಿದೆ.

 

 

ಅಲ್ಲದೇ ಶೌಚಾಲಯದಲ್ಲಿ ಸ್ವಚ್ಚತೆ ಕೆಲಸವನ್ನು ವಾರದಲ್ಲಿ ಒಮ್ಮೆ, ದಿನಂಪ್ರತಿ, ವಾರದಲ್ಲಿ ಎರಡು ದಿನ, ಆಗಾಗ್ಗೆ ವಾರದಲ್ಲಿ ಮೂರು ದಿನ ಹೀಗೆ ಮಾಡಲಾಗುತ್ತಿದೆ. ಶೇ.32ರಷ್ಟು ಶಾಲೆಗಳಲ್ಲಿ ವಾರಕೊಮ್ಮೆ ಶೌಚಾಲಯ ಶುಚಿಗೊಳಿಸಲಾಗುತ್ತಿದೆ.

 

 

ಪ್ರತಿ ದಿನವೂ ಶೇ. 29ರಷ್ಟು ಶಾಲೆಗಳಲ್ಲಿ ಶುಚಿಗೊಳಿಸಲಾಗುತ್ತಿದ್ದರೇ, ಶೇ. 19ರಷ್ಟು ಶಾಲೆಗಳಲ್ಲಿ ಶೌಚಾಲಯಗಳು ವಾರದಲ್ಲಿ ಎರಡು ಬಾರಿ ಮಾತ್ರ ಶುಚಿಗೊಳಿಸಲಾಗುತ್ತಿದೆ. ಶೇ. 13 ರಷ್ಟು ಶಾಲೆಗಳಲ್ಲಿ ಶೌಚಾಲಯಗಳನ್ನು ಆಗಾಗ್ಗೆ ಮಾತ್ರ ಶುಚಿಗೊಳಿಸಲಾಗುತ್ತಿದೆ. ಶೇ. 8ರಷ್ಟು ಶಾಲೆಗಳಲ್ಲಿ ವಾರಕ್ಕೆ ಮೂರು ಬಾರಿ ಮಾತ್ರ ಶುಚಿಗೊಳಿಸಲಾಗುತ್ತಿದೆ ಎಂದು ಅಧ್ಯಯನ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ವಿತ್ತೀಯ ಕಾರ್ಯನೀತಿ ಸಂಸ್ಥೆ ನಡೆಸಿರುವ ಅಧ್ಯಯನದ ವರದಿ

 

ಸ್ವಚ್ಛ ಭಾರತ್ ಮಿಷನ್-ಗ್ರಾಮೀಣ (SBM-G) ಅಡಿಯಲ್ಲಿ ನೈರ್ಮಲ್ಯ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಗಮನಾರ್ಹ ಸುಧಾರಣೆಗಳು ಕಂಡುಬಂದಿವೆ. ಆದರೂ ಸಹ ಈ ಸೌಲಭ್ಯಗಳ ನಿರ್ವಹಣೆ ಮತ್ತು ನಿರ್ವಹಣೆ ವಿಚಾರದಲ್ಲಿ ಗ್ರಾಮೀಣ ಕರ್ನಾಟಕದಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಪ್ರಮುಖ ಸವಾಲಾಗಿ ಉಳಿದಿದೆ.

 

 

ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಮುಖ್ಯವಾಗಿ ನೀರು ಸರಬರಾಜು ಸೇರಿದಂತೆ ನೈರ್ಮಲ್ಯ ಮೂಲಸೌಕರ್ಯಗಳ ನಿರ್ವಹಣೆಗೆ ಜವಾಬ್ದಾರರಾಗಿರುತ್ತಾರೆ. ಆದರೂ ಅವರು ಮಧ್ಯಾಹ್ನದ ಊಟದ ಮೇಲ್ವಿಚಾರಣೆ, ಆಡಳಿತಾತ್ಮಕ ಕರ್ತವ್ಯಗಳು ಮತ್ತು ಶೈಕ್ಷಣಿಕ ಸೂಚನೆ ಮುಂತಾದ ಬಹು ಜವಾಬ್ದಾರಿ ನಿಭಾಯಿಸುತ್ತಾರೆ. ಹೀಗಾಗಿ ನೈರ್ಮಲ್ಯ ಮೇಲ್ವಿಚಾರಣೆ ಮತ್ತು ಶೌಚಾಲಯ ನಿರ್ವಹಣೆ ಪರಿಶೀಲಿಸಲು ಸಮಯಾವವಕಾಶವೇ ಸಿಗುವುದಿಲ್ಲ. ಮತ್ತು ಈ ಸೌಲಭ್ಯಗಳತ್ತ ಗಮನ ಹರಿಸಲೂ ಸಾಧ್ಯವಾಗುವುದಿಲ್ಲ.
ಇದಲ್ಲದೇ ನೈರ್ಮಲ್ಯ ಮೂಲ ಸೌಕರ್ಯಗಳಿಗೆ ಸರ್ಕಾರವು ನೀಡುತ್ತಿರುವ ಅನುದಾನವು ಅತ್ಯಲ್ಪವಾಗಿದೆ.

 

 

ವಿದ್ಯಾರ್ಥಿಗಳ ಸಂಖ್ಯಾ ಬಲವನ್ನು ಆಧರಿಸಿ ಶಾಲಾ ನಿರ್ವಹಣೆ ಅನುದಾನವನ್ನು ಪರಿಷ್ಕರಿಸಿದೆಯಾದರೂ ಈ ಅನುದಾನವೂ ಸಾಕಾಗುವುದಿಲ್ಲ. 50 ವಿದ್ಯಾರ್ಥಿಗಳವರೆಗಿನ ಶಾಲೆಗಳಿಗೆ ರೂ.20,000, 100 ವಿದ್ಯಾರ್ಥಿಗಳಿರುವ ಶಾಲೆಗಳಿಗೆ ರೂ.28,000, 500 ವಿದ್ಯಾರ್ಥಿಗಳಿಗೆ ರೂ.33,000 ಮತ್ತು 500 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಿಗೆ ರೂ.45,000 ರು ನೀಡಲಾಗುತ್ತಿದೆ.

 

ಈ ಅನುದಾನವು ನೈರ್ಮಲ್ಯಕ್ಕಾಗಿ ಮಾತ್ರ ನೀಡಿಲ್ಲ. ಶಿಕ್ಷಕರು ಸಾಮಾನ್ಯ ಶಾಲಾ ನಿರ್ವಹಣಾ ಅನುದಾನದ ಒಂದು ಭಾಗವನ್ನು ಶೌಚಾಲಯ ನಿರ್ವಹಣೆಗಾಗಿ ಹಂಚಿಕೆ ಮಾಡಬೇಕು. ಇದು ಸಾಮಾನ್ಯವಾಗಿ ಶುಚಿಗೊಳಿಸುವ ಸರಕುಗಳ ಸರಬರಾಜು, ಸಣ್ಣ ದುರಸ್ತಿ ಪಡಿಸಲು ಸಾಕಾಗಲಿದೆ. ಆದರೆ ಈ ಹಣದಿಂದ ಶೌಚಾಲಯ ಶುಚಿಗೊಳಿಸುವ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಸಾಕಾಗುವುದಿಲ್ಲ ಎಂದು ಪ್ರಬಂಧದಲ್ಲಿ ಗಮನಸೆಳೆಯಲಾಗಿದೆ.

 

ಇದರ ಪರಿಣಾಮವಾಗಿ ನೈರ್ಮಲ್ಯ ನಿರ್ವಹಣೆ ನಿರ್ಲಕ್ಷಿಸಲಾಗುತ್ತದೆ. ನೈರ್ಮಲ್ಯಕ್ಕಾಗಿ ನೀರಿನ ಲಭ್ಯತೆಯು ಸರಿಯಾಗಿಲ್ಲ.

 

 

ನೀರಿನ ಪೂರೈಕೆ ಇಲ್ಲದೆ, ಶುಚಿತ್ವವನ್ನು ಕಾಪಾಡಿಕೊಳ್ಳುವುದು ಅಸಾಧ್ಯ. ಹೀಗಾಗಿ ಅಗತ್ಯ ನೈರ್ಮಲ್ಯ ಚಟುವಟಿಕೆಗಳನ್ನು ನಡೆಸುವುದು ಸವಾಲಿನ ಸಂಗತಿಯಾಗಿದೆ. ರಾಜ್ಯದಲ್ಲಿ ಸರಾಸರಿ, ಶೇಕಡಾ 92 ರಷ್ಟು ಶಾಲೆಗಳು ನಿರಂತರವಾಗಿ ನೀರಿನ ಪೂರೈಕೆಯನ್ನು ಹೊಂದಿವೆ. ಉಳಿದ ಶೇಕಡಾ 8 ರಷ್ಟು ಶಾಲೆಗಳು ನೈರ್ಮಲ್ಯ ಉದ್ದೇಶಗಳಿಗಾಗಿ ನಿರಂತರ ನೀರಿನ ಪೂರೈಕೆಯನ್ನೇ ಹೊಂದಿಲ್ಲ.

 

 

 

ಬಳ್ಳಾರಿ, ಉತ್ತರ ಕನ್ನಡ, ಮೈಸೂರು, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳ ಶಾಲೆಗಳಲ್ಲಿ ನೈರ್ಮಲ್ಯ ಉದ್ದೇಶಗಳಿಗಾಗಿ ಮತ್ತು ನೀರು ಸರಬರಾಜುಗಾಗಿ ನೀರಿನ ಸಮಸ್ಯೆಗಳಿವೆ. ಮತ್ತು ಅಗತ್ಯವಿರುವ ನೀರಿನ ಸಂಗ್ರಹಣಾ ಸೌಲಭ್ಯಗಳನ್ನು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಖಚಿತಪಡಿಸಿಕೊಂಡಿಲ್ಲ.

 

ಪ್ರತ್ಯೇಕ ಶುಚಿಗೊಳಿಸುವ ಸಿಬ್ಬಂದಿಯ ಕೊರತೆಯು ಸಹ ಈ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಅನೇಕ ಶಾಲೆಗಳು ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಇಚ್ಛಿಸುವ ವ್ಯಕ್ತಿಗಳನ್ನು ನೇಮಿಸಿಕೊಳ್ಳುವಲ್ಲಿ ತೊಂದರೆ ಇದೆ ಎಂದು ವರದಿ ಮಾಡಿವೆ.

 

ವಿಶೇಷವಾಗಿ ದೂರದ ಗ್ರಾಮೀಣ ಪ್ರದೇಶಗಳಲ್ಲಿ. ಈ ಕೊರತೆಯು ಶೌಚಾಲಯಗಳ ಶುಚಿತ್ವದ ಮೇಲೆ ಪರಿಣಾಮ ಬೀರುತ್ತಿದೆ. ಮೂಲಸೌಕರ್ಯಗಳ ಕೊರತೆಯು ಕ್ರಮೇಣ ಕ್ಷೀಣತೆಗೆ ಕಾರಣವಾಗುತ್ತದೆ. ಕಾಲಾನಂತರದಲ್ಲಿ ಕೆಲವು ಸೌಲಭ್ಯಗಳು ನಿಷ್ಪ್ರಯೋಜಕವಾಗುತ್ತವೆ. ಕೆಲವು ಸಂದರ್ಭಗಳಲ್ಲಿ, ಶುಚಿಗೊಳಿಸುವ ಸಿಬ್ಬಂದಿ ಲಭ್ಯವಿಲ್ಲದ ಕಾರಣ ಶೌಚಾಲಯಗಳು ಲಾಕ್ ಆಗಿರುತ್ತವೆ ಎಂದು ಪ್ರಬಂಧದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

Your generous support will help us remain independent and work without fear.

Latest News

Related Posts