ಓಬಳಾಪುರಂ ಅಕ್ರಮ; 884 ಕೋಟಿ ವಸೂಲಿಗೆ ಸಿಬಿಐ, ಹೈದರಾಬಾದ್‌ನ ಎಸಿಬಿಯತ್ತ ಮುಖ ಮಾಡಿದ ಸರ್ಕಾರ

ಬೆಂಗಳೂರು; ಓಬಳಾಪುರಂನಲ್ಲಿನ ಅಕ್ರಮ ಗಣಿಗಾರಿಕೆಯಿಂದ ಸಂಭವಿಸಿರುವ ಆರ್ಥಿಕ ನಷ್ಟದ ಕುರಿತು ಸಿಬಿಐ ಮತ್ತು ಹೈದರಾಬಾದ್‌ನ ಭ್ರಷ್ಟಾಚಾರ ನಿಗ್ರಹ ದಳದಿಂದ ಮಾಹಿತಿ ಸಂಗ್ರಹಿಸಿದ ನಂತರ 884 ಕೋಟಿ ರು. ವಸೂಲಾತಿ ಪ್ರಕ್ರಿಯೆಗೆ ಕರ್ನಾಟಕ ಸರ್ಕಾರವು, ಸಿಬಿಐ ಮತ್ತು ಹೈದರಾಬಾದ್‌ನ ಭ್ರಷ್ಟಾಚಾರ ನಿಗ್ರಹ ದಳದತ್ತ ಮುಖ ಮಾಡಿದೆ.

 

ಈ ಪ್ರಕರಣವನ್ನು ಸಿಬಿಐ ಮತ್ತು ಹೈದರಾಬಾದ್‌ನ ಭ್ರಷ್ಟಾಚಾರ ನಿಗ್ರಹ ದಳವು ತನಿಖೆ ಮಾಡಿರುವ ಕಾರಣ ವಸೂಲಾತಿಗೆ ಸಂಬಂಧಿಸಿದ ಮಾಹಿತಿಯನ್ನು ಈ ಎರಡೂ ಸಂಸ್ಥೆಗಳಿಂದ ಮಾಹಿತಿ ಪಡೆದ ನಂತರವಷ್ಟೇ ವಸೂಲಿ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

 

ಬಳ್ಳಾರಿ ಜಿಲ್ಲೆಯ ಸಂಡೂರು ಕ್ಲಸ್ಟರ್ ಗುತ್ತಿಗೆಗಳಿಂದ ಓಬಳಾಪುರಂ ಸಮೂಹ ಘಟಕಗಳು 29 ಲಕ್ಷ ಟನ್ ಕಬ್ಬಿಣದ ಅದಿರನ್ನು ಹೊರತೆಗೆದಿತ್ತು. ಈ ಅದಿರಿನ ಪ್ರಮಾಣವು ₹884 ಕೋಟಿ ಮೌಲ್ಯದ್ದಾಗಿತ್ತು. ಈ ಹಣವನ್ನು ವಸೂಲು ಮಾಡಬೇಕು ಎಂದು ಗಣಿ ಉದ್ಯಮಿ ಟಪಾಲ್‌ ಗಣೇಶ್‌ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

 

ಈ ಪತ್ರವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದರು. ಈ ಸೂಚನೆಯಂತೆ ಇಲಾಖೆಯ ನಿರ್ದೇಶಕರು ಸರ್ಕಾರಕ್ಕೆ 2025ರ ಸೆ. 29ರಂದು ಬರೆದಿರುವ ಪತ್ರದಲ್ಲಿ ಈ ಮಾಹಿತಿಯಿದೆ.

 

ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ಪ್ರಕರಣವನನ್ನು ಸಿಬಿಐ ಮತ್ತು ಹೈದರಾಬಾದ್‌ನ ಎಸಿಬಿಯು ತನಿಖೆ ನಡೆಸಿದೆ. ಹೀಗಾಗಿ ನಷ್ಟ ವಸೂಲಾತಿ ಸಂಬಂಧ ಈ ಎರಡೂ ಸಂಸ್ಥೆಗಳಿಂದ ಮಾಹಿತಿ ಸಂಗ್ರಹಿಸುವುದು ಸೂಕ್ತವಾಗಿದೆ. ಸರ್ಕಾರದ ಮಟ್ಟದಲ್ಲಿ ಈ ಎರಡೂ ಸಂಸ್ಥೆಗಳಿಂದ ಮಾಹಿತಿ ಮತ್ತು ಅಭಿಪ್ರಾಯ ಸಂಗ್ರಹಿಸಲು ನಿರ್ಧಾರ ಕೈಗೊಳ್ಳಬಹುದು ಮತ್ತು ಸಂಬಂಧಿಸಿದವರಿಗೆ ಸೂಚಿಸಬಹುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರು, ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ತಿಳಿಸಿರುವುದು ಗೊತ್ತಾಗಿದೆ.

 

ಮಾಜಿ ಸಚಿವ ಹಾಗೂ ಕಂಪನಿಯ ನಿರ್ದೇಶಕ ಜನಾರ್ದನ ರೆಡ್ಡಿ ಅವರು ಕರ್ನಾಟಕದಿಂದ ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಾಗಿಸಿದ್ದಾರೆ. ಅಲ್ಲದೇ ಆಂಧ್ರ ಪ್ರದೇಶದಲ್ಲಿ ಪಡೆದಿದ್ದ ಗುತ್ತಿಗೆಯ ಪರವಾನಿಗೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಕಂಪನಿಯಿಂದ 884 ಕೋಟಿ ವಸೂಲಿ ಮಾಡಬೇಕು ಎಂದು ಗಣಿ ಉದ್ಯಮಿ ಟಪಾಲ್‌ ಗಣೇಶ್‌ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ 2025ರ ಆಗಸ್ಟ್‌ 19ರಂದು ಈ ಮೇಲ್‌ ಮೂಲಕ ದೂರು ಸಲ್ಲಿಸಿದ್ದರು.

 

 

ಒಎಂಸಿ ಮತ್ತು ಅದರ ಸಮೂಹ ಕಂಪನಿಗಳಾದ ಎಂಬಿಟಿ ಹಿಂದ್‌ ಟ್ರೇಡರ್ಸ್‌ ಹಾಗೂ ಎನ್‌ ರತ್ನಯ್ಯ ಅವರು ಕರ್ನಾಟಕದ ಸಂಡೂರಿನ 14 ಬ್ಲಾಕ್‌ಗಳಲ್ಲಿ ಮತ್ತು ಆಂಧ್ರ ಪ್ರದೇಶದ ಗಡಿ ಭಾಗದಲ್ಲಿರುವ ಎಚ್‌ ಸಿದ್ದಾಪುರಂ ಮತ್ತು ಮಲಾಪನಗುಂಡಿ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದರು.
ಅಲ್ಲದೇ ಸರ್ವೋಚ್ಚ ನ್ಯಾಯಾಲಯವು 2011ರ ಮೇ 6ರಂದು ನೀಡಿದ್ದ ಸಿವಿಲ್ ವಿ.ಪಿ. ಸಂ. 7366-7367/2010) ತೀರ್ಪನ್ನು ಸಹ ಉಲ್ಲೇಖಿಸಿದ್ದರು. ಕೇಂದ್ರ ಉನ್ನತಾಧಿಕಾರ ಸಮಿತಿ ಒಟ್ಟು 166 ಗಣಿಗಳ ಗಡಿ ನಿರ್ಣಯಕ್ಕಾಗಿ ಪರಿಶೀಲಿಸಿತ್ತು. ಅವುಗಳಲ್ಲಿ ಏಳು ಗಣಿಗಳು ಕರ್ನಾಟಕ–ಆಂಧ್ರಪ್ರದೇಶ ಗಡಿಭಾಗದಲ್ಲಿ ಬಿ-1 ವರ್ಗಕ್ಕೆ ಸೇರಿದ್ದವು.

 

ದೂರಿನಲ್ಲಿ ಉಲ್ಲೇಖಿಸಿರುವ ಗಣಿಗಳು ಈ ಏಳು ಗಣಿಗಳಲ್ಲಿನ ನಾಲ್ಕು ಗಣಿಗಳಿಗೆ ಸಂಬಂಧಿಸಿದೆ ಎಂದು ಗಣಿ ಇಲಾಖೆ ನಿರ್ದೇಶಕರು ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಸಮೀಕ್ಷೆ ನಡೆಸಿದ್ದ ಸಿಇಸಿ ಸಂಸ್ಥೆಯು 2024ರ ಮಾರ್ಚ್‌ 14ರಂದು ವರದಿ ಸಲ್ಲಿಸಿದೆ. ಇದನ್ನು 2025ರ ಮೇ 16ರಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ. ಈ ವರದಿ ಪ್ರಕಾರ ಟಿ. ನಾ ರಾಯಣ ರೆಡ್ಡಿ ( 2527 B), ಎನ್. ರತ್ನಯ್ಯ (670 B) ಹಿಂದ್ ಟ್ರೇಡರ್ಸ್ (2548 B) ಮೆಹಬೂಬ್ ಟ್ರಾನ್ಸ್‌ಪೋರ್ಟ್ ಕಂಪನಿ (2568 B), ವಿಭೂತಿ ಗುಡ್ಡ ಮೈನ್‌ಸ್ ಪ್ರೈ. ಲಿ. (2542 B) ಸುಗ್ಗಲಮ್ಮ ಗುಡ್ಡ ಮೈನಿಂಗ್ & ಕೋ. (2541 C) ಬೆಳ್ಳಾರಿ ಮೈನಿಂಗ್ ಕಾರ್ಪೊರೇಶನ್ (2651 C) ಕಂಪನಿಗಳ ವರ್ಗೀಕರಣ ಮಾಡಿತ್ತು.

 

ಈ ಗಣಿ ಪ್ರದೇಶಗಳಲ್ಲಿ ಅಕ್ರಮವಾಗಿ 29 ಲಕ್ಷ ಮೆಟ್ರಿಕ್‌ ಟನ್‌ ಕಬ್ಬಿಣ ಅದಿರು ಹೊರತೆಗೆದಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಓಬಳಾಪುರಂ ಕಂಪನಿಯು ಮಾಡಿದ್ದ ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ, ಸಿಇಸಿ ಮತ್ತು ಆಂಧ್ರ ಪ್ರದೇಶ ಮತ್ತು ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾ ತಂಡ ಎಫ್‌ಐಆರ್‍‌ಗಳನ್ನು ದಾಖಲಿಸಿದೆ. ಹೈದ್ರಾಬಾದ್‌ನ ಸಿಬಿಐ ನ್ಯಾಯಾಲಯವೂ ಸಹ ತೀರ್ಪು ನೀಡಿದೆ. ಇವುಗಳನ್ನು ಸಹ ದೂರುದಾರರು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಗಣಿ ನಿರ್ದೇಶಕರು ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ಈ ಪ್ರಕರಣಗಳಲ್ಲಿ ಒಎಂಸಿ ಕಂಪನಿ ಮತ್ತು ಅದರ ನಿರ್ದೇಶಕರನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿದೆ. ಹೀಗಾಗಿ ಈ ಒಎಂಸಿ ಮತ್ತು ಇದರ ಸಮೂಹ ಕಂಪನಿಗಳಿಂದ 884 ಕೋಟಿ ರು.ಗಳನ್ನು ವಸೂಲು ಮಾಡಬೇಕು. ಇದರಲ್ಲಿ ಎಂಬಿಟಿ ಮತ್ತು ಎನ್‌ ರತ್ನಯ್ಯ ಅವರು ಗಣಿಗಾರಿಕೆ ಮಾಡಿರುವ ಪ್ರದೇಶಗಳು ಕರ್ನಾಟಕ ಸರ್ಕಾರದ ಅಡಿಯಲ್ಲಿ ಬರುತ್ತವೆ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ದೂರಿನಲ್ಲಿರುವ ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿದೆ. ಈ ಪ್ರಕರಣವು ಸಿಬಿಐ ಮತ್ತು ಹೈದರಾಬಾದ್‌ನ ಎಸಿಬಿಯು ತನಿಖೆ ನಡೆಸಿದೆ. ಆರ್ಥಿಕ ನಷ್ಟವನ್ನು ವಸೂಲಿ ಮಾಡಬೇಕಾದರೆ ಈ ಎರಡೂ ಸಂಸ್ಥೆಗಳಿಂದ ಮಾಹಿತಿ, ಅಭಿಪ್ರಾಯ ಮತ್ತು ದಾಖಲೆಗಳನ್ನು ಸಂಗ್ರಹಿಸಬೇಕಿದೆ ಎಂದು ನಿರ್ದೇಶಕರು ಪತ್ರದಲ್ಲಿ ಸರ್ಕಾರದ ಗಮನ ಸೆಳೆದಿರುವುದು ತಿಳಿದು ಬಂದಿದೆ.

 

ಈ ಪತ್ರದಲ್ಲಿನ ವಿಷಯಗಳ ಕುರಿತು ನಿರ್ದೇಶಕರು ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್‌ ಅವರೊಂದಿಗೆ ಚರ್ಚಿಸಿದ್ದಾರೆ. ಈ ಪ್ರಕರಣದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತರಲಾಗಿದೆ ಎಂದು ಗೊತ್ತಾಗಿದೆ.

 

ಈ ಪ್ರಕರಣವು ಪ್ರಾಥಮಿಕವಾಗಿ 2009ರಲ್ಲಿ ದಾಖಲಾಗಿತ್ತು. ಸುಮಾರು 13 ವರ್ಷಗಳಿಂದ ವಿಚಾರಣೆ ನಡೆಯುತ್ತಿರುವ ಈ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಸೇರಿದಂತೆ 9 ಮಂದಿಯನ್ನು ಆರೋಪಿಗಳೆಂದು ಸಿಬಿಐ ಹೆಸರಿಸಿತ್ತು ಹಾಗೂ ನಾಲ್ಕು ದೋಷಾರೋಪಪಟ್ಟಿಗಳನ್ನು ಸಲ್ಲಿಸಿತ್ತು. ಪ್ರಕರಣದ 9 ಮಂದಿ ಆರೋಪಿಗಳ ಪೈಕಿ ಐದು ಮಂದಿ ದೋಷಿಗಳೆಂದು ನ್ಯಾಯಾಲಯ ಘೋಷಿಸಿತ್ತು.

 

ಆಂಧ್ರಪ್ರದೇಶದ ಆನಂತಪುರ ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಯ ಅವಧಿಯಲ್ಲಿ ನ್ಯಾಯಾಲಯವು 3400ಕ್ಕೂ ಅಧಿಕ ದಾಖಲೆಗಳನ್ನು ಪರಿಶೀಲಿಸಿತ್ತು ಹಾಗೂ 219 ಮಂದಿ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಿತ್ತು.

 

ಓಎಂಸಿ ಸಂಸ್ಥೆಯ ವರಿಷ್ಠ ಗಾಲಿ ಜನಾರ್ದನ ರೆಡ್ಡಿ, ಓಎಂಸಿ ಆಡಳಿತ ನಿರ್ದೇಶಕ ಬಿ.ವಿ.ಶ್ರೀನಿವಾಸ ರೆಡ್ಡಿ , ಜನಾರ್ದನ ರೆಡ್ಡಿಯವರ ಆಪ್ತ ಸಹಾಯಕ ಮೆಹಫಾಝ್ ಅಲಿ ಖಾನ್ ಹಾಗೂ ಆಂಧ್ರಪ್ರದೇಶ ಗಣಿಗಾರಿಕೆ ಇಲಾಖೆಯ ಮಾಜಿ ನಿರ್ದೇಶಕ ವಿ.ಡಿ.ರಾಜಗೋಪಾಲ್ ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿತ್ತು.

 

ಭಾರತೀಯ ದಂಡಸಂಹಿತೆಯ ಸೆಕ್ಷನ್‌ಗಳಾದ 120 ಬಿ (ಕ್ರಿಮಿನಲ್ ಸಂಚು), 420 (ವಂಚನೆ),409 (ಕ್ರಿಮಿನಲ್‌ಸ್ವರೂಪದ ವಿಶ್ವಾಸದ್ರೋಹ) ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ಸಂಬಂಧಪಟ್ಟ ಸೆಕ್ಷನ್‌ಗಳಡಿ ಈ ದೋಷಾರೋಪಗಳನ್ನು ಹೊರಿಸಲಾಗಿತ್ತು. ಆದರೆ ಈ ಪ್ರಕರಣದ ಇತರ ಆರೋಪಿಗಳಾದ ಆಂಧ್ರಪ್ರದೇಶದ ಮಾಜಿ ಗಣಿಗಾರಿಕೆ ಸಚಿವೆ ಸಿಬಿತಾ ಇಂದ್ರ ರೆಡ್ಡಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೃಪಾನಂದಂ, ಐಎಎಸ್ ಅಧಿಕಾರಿಣಿ ವೈ.ಶ್ರೀಲಕ್ಷ್ಮೀ ಅವರನ್ನು ನ್ಯಾಯಾಲಯ ಈ ಮೊದಲೇ ದೋಷಮುಕ್ತಗೊಳಿಸಿತ್ತು. ಇನ್ನೋರ್ವ ಆರೋಪಿ, ಗಣಿ ಇಲಾಖೆ ಸಹಾಯಕ ನಿರ್ದೇಶಕ ಆರ್.ಲಿಂಗಾ ರೆಡ್ಡಿ ನಿಧನ ಹೊಂದಿದ್ದಾರೆ.

 

ಓಎಂಸಿ ಕಂಪೆನಿಯ ಗಣಿಗಾರಿಕೆ ಕಾರ್ಯಾಚರಣೆಗಳನ್ನು ಸಿಬಿಐ ಪರಿಶೀಲಿಸಲಾರಂಭಿಸಿದ ಬಳಿಕ ಪ್ರಕರಣದ ತನಿಖೆ ಆರಂಭಗೊಂಡಿತ್ತು. ವೈ.ಎಸ್.ರಾಜಶೇಖರ ರೆಡ್ಡಿ ಅವರು ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗಾಲಿ ಜನಾರ್ದನರೆಡ್ಡಿ ಅವರ ಒಡೆತನದ ಒಬಳಾಪುರಂ ಮೈನಿಂಗ್ ಕಂಪೆನಿಯು ವಿಶೇಷ ಸವಲತ್ತುಗಳನ್ನು ಪಡೆದುಕೊಂಡಿತ್ತು.

 

ಓಬಳಾಪುರಂ, ಡಿ.ಹಿರೇಹಾಲ ಹಾಗೂ ರಾಯದುರ್ಗ ಮಂಡಲಗಳಲ್ಲಿ ಓಎಂಸಿ ಕಂಪೆನಿಗೆ ಅಕ್ರಮವಾಗಿ 68.5 ಹೆಕ್ಟೇರ್ ಹಾಗೂ 39.5 ಹೆಕ್ಟೇರ್‌ಗಳ ಗಣಿಗಾರಿಕೆ ಲೀಸ್‌ಗಳನ್ನು ನೀಡಲಾಗಿತ್ತು. ಇದೇ ವೇಳೆ ಗಣಿಗಾರಿಕೆಗಾಗಿ ಲೀಸ್‌ ಗೆ ಅರ್ಜಿ ಸಲ್ಲಿಸಿದ್ದ ಇತರ 23 ಮಂದಿಯ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು.

 

ಏನಿದು ಪ್ರಕರಣ?

 

ಆಂಧ್ರ-ಕರ್ನಾಟಕ ಗಡಿಯಲ್ಲಿರುವ ಒಬಳಾಪುರಂ ಬೆಟ್ಟದಲ್ಲಿ ಓಎಂಸಿ ನಡೆಸಿದ ಗಣಿಗಾರಿಕೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಅರಣ್ಯ ಇಲಾಖೆ, ಗಣಿ ಇಲಾಖೆಯ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಒಎಂಸಿ ಕಂಪೆನಿಯ ಅಕ್ರಮ ಗಣಿಗಾರಿಕೆಯಿಂದಾಗಿ ಸರಕಾರದ ಬೊಕ್ಕಸಕ್ಕೆ ಸುಮಾರು 884.13 ಕೋಟಿ ರೂ. ನಷ್ಟವಾಗಿದೆ ಹಾಗೂ 29 ಲಕ್ಷ ಟನ್‌ ಗೂ ಅಧಿಕ ಕಬ್ಬಿಣದ ಆದಿರನ್ನು ಲೂಟಿ ಮಾಡಲಾಗಿದೆ ಎಂದು ಸಿಬಿಐ ಆಪಾದಿಸಿತ್ತು.

 

ಸಿಬಿಐ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಸಂತೋಷಿ ಹಾಗೂ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ವಿಷ್ಣು ಮಾಜ್ಜಿ ವಾದಿಸಿದ್ದರು. ಈ ಪ್ರಕರಣದಲ್ಲಿ ಕೇವಲ ಗಣಿಗಾರಿಕೆಯ ನಿಯಮಗಳಷ್ಟೇ ಉಲ್ಲಂಘನೆಯಾಗಿಲ್ಲ, ಜೊತೆಗೆ ಅಧಿಕಾರ ಹಾಗೂ ಸಾರ್ವಜನಿಕ ವಿಶ್ವಾಸವನ್ನು ಲೆಕ್ಕಾಚಾರದೊಂದಿಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅವರು ಆಪಾದಿಸಿದ್ದರು.

 

ರಾಜ್ಯದಲ್ಲಿ ಹಿಂದೆ ನಡೆದ ಅಕ್ರಮ ಗಣಿಗಾರಿಕೆ ಮತ್ತು ಅಪರಾಧಗಳಿಂದ ಬಂದ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಸರ್ಕಾರ ಈಗ ಮುಂದಾಗಿದೆ. ಇದಕ್ಕಾಗಿ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ವಿ. ಕೃಷ್ಣರಾವ್ ಅವರನ್ನು ವಸೂಲಾತಿ ಆಯುಕ್ತರನ್ನಾಗಿ ನೇಮಿಸಿರುವುದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts