ಮೆಗಾ ಮಾರುಕಟ್ಟೆಗೆ 10 ಕೋಟಿ; ಪ್ರಸ್ತಾವ ಮುಂದೂಡಲು ಹಿಂಬರಹ, ಸಿಎಂ ಕಚೇರಿ ಕದ ತಟ್ಟಿದ ಸಚಿವ

ಬೆಂಗಳೂರು;  ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಕ್ಷೇತ್ರದಲ್ಲಿ ಉದ್ದೇಶಿತ ಮೆಗಾ ಮಾರುಕಟ್ಟೆ ಕಟ್ಟಡ ಪೂರ್ಣಗೊಳಿಸಲು ಹೆಚ್ಚುವರಿ ಅನುದಾನ ಹೊಂದಿಸಲು ಸರ್ಕಾರವು ಏದುಸಿರು ಬಿಡುತ್ತಿದೆ. ಮೆಗಾ ಮಾರುಕಟ್ಟೆ ಕಟ್ಟಡ ಪೂರ್ಣಗೊಳಿಸಲು  ಎಸ್‌ಎಫ್‌ಸಿಯಲ್ಲಿ ಅನುದಾನವಿದ್ದರೂ ಸಹ ಮಂಜೂರು ಮಾಡಲು ಆರ್ಥಿಕ ಇಲಾಖೆ ಅಸಮ್ಮತಿ ವ್ಯಕ್ತಪಡಿಸಿದೆ.

 

ಮೆಗಾ ಮಾರುಕಟ್ಟೆಯ ಕಟ್ಟಡವನ್ನು ಪೂರ್ಣಗೊಳಿಸುವ ಸಂಬಂಧ ಪೌರಾಡಳಿತ ನಿರ್ದೇಶನಾಲಯವು ನಗರಾಭಿವೃದ್ಧಿ ಮತ್ತು ಆರ್ಥಿಕ ಇಲಾಖೆಗೆ ಹಲವು ಪತ್ರಗಳನ್ನು ಬರೆದಿತ್ತು. ಆದರೆ ಈ ಪ್ರಸ್ತಾವನೆಯನ್ನೇ ಮುಂದೂಡಬೇಕು ಎಂದು ಆರ್ಥಿಕ ಇಲಾಖೆಯು ಹಿಂಬರಹ ನೀಡಿದೆ. ಹೀಗಾಗಿ ಸಚಿವ ಶಿವಾನಂದ ಪಾಟೀಲ್ ಅವರು ಮುಖ್ಯಮಂತ್ರಿ ಕಚೇರಿ ಕದ ತಟ್ಟಿದ್ದಾರೆ.

 

ಮೆಗಾ ಮಾರುಕಟ್ಟೆ ಪೂರ್ಣಗೊಳಿಸುವ ಸಂಬಂಧ ಪೌರಾಡಳಿತ, ನಗರಾಭಿವೃದ್ಧಿ ಇಲಾಖೆಯು ಆರ್ಥಿಕ ಇಲಾಖೆಯೊಂದಿಗೆ ನಡೆಸಿರುವ ಪತ್ರ ವ್ಯವಹಾರಗಳ ಪ್ರತಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಬಸವನ ಬಾಗೇವಾಡಿಯಲ್ಲಿ ನಿರ್ಮಾಣವಾಗುತ್ತಿರುವ ಮೆಗಾ ಮಾರುಕಟ್ಟೆಯ ಕಾಮಗಾರಿಯನ್ನು ಸಚಿವ ಶಿವಾನಂದ ಪಾಟೀಲ್ ಅವರು ಈಚೆಗಷ್ಟೇ  ವೀಕ್ಷಣೆ ಮಾಡಿ ಪರಿಶೀಲನೆ ನಡೆಸಿದ್ದರು.

 

ಸಚಿವ ಶಿವಾನಂದ ಪಾಟೀಲ್‌ ಅವರು ಮೆಗಾ ಮಾರುಕಟ್ಟೆಯ ಕಾಮಗಾರಿ ಈಚೆಗಷ್ಟೇ ವೀಕ್ಷಿಸಿರುವುದು

 

ಇದರ ಬೆನ್ನಲ್ಲೇ ಮೆಗಾ ಮಾರುಕಟ್ಟೆ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಲು ಎಸ್‌ಎಫ್‌ಸಿ ಅನುದಾನ ಮಂಜೂರು ಮಾಡಲು ಆರ್ಥಿಕ ಇಲಾಖೆಯು ಅಸಮ್ಮತಿ ವ್ಯಕ್ತಪಡಿಸಿರುವುದು ಮುನ್ನೆಲೆಗೆ ಬಂದಿದೆ.

 

 

ಬಸವನ ಬಾಗೇವಾಡಿ ಪುರಸಭೆ ವ್ಯಾಪ್ತಿಯಲ್ಲಿ ಮೆಗಾ ಮಾರುಕಟ್ಟೆಯ ಕಟ್ಟಡವನ್ನು  ಪೂರ್ಣಗೊಳಿಸಲು ಎಸ್‌ಎಫ್‌ಸಿ ಅನುದಾನದಡಿಯಲ್ಲಿ 10 ಕೋಟಿ ರು ಅನುದಾನ ಅವಶ್ಯಕತೆ ಇದೆ. ಈ ಸಂಬಂಧ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು 2025ರ ಜುಲೈನಲ್ಲಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು.

 

ಅಲ್ಲದೇ ಮೆಗಾ ಮಾರುಕಟ್ಟೆ ಪೂರ್ಣಗೊಳಿಸುವ ಸಂಬಂಧ ಹೆಚ್ಚುವರಿ ಅನುದಾನದ ಅವಶ್ಯಕತೆ ಕುರಿತು ಸಮಗ್ರ ದಾಖಲೆ ಮತ್ತು ಸ್ಪಷ್ಟ ಅಭಿಪ್ರಾಯವನ್ನೂ ಸಲ್ಲಿಸಿದ್ದರು.  ಅಲ್ಲದೇ ವಿಜಯಪುರ ಜಿಲ್ಲಾಧಿಕಾರಿಗಳೂ ಸಹ ಪ್ರಸ್ತಾವವನ್ನೂ ಸಲ್ಲಿಸಿದ್ದರು.

 

 

 

ಮೆಗಾ ಮಾರುಕಟ್ಟೆಯ ಹಂತ -01 ಕಾಮಗಾರಿ (ಕೆಳಮಹಡಿ, ನೆಲ ಮತ್ತು ಮೊದಲನೇ ಮಹಡಿ) ಯನ್ನು ನಗರೋತ್ಥಾನ ಹಂತ 02 ಮತ್ತು ಎಸ್‌ಎಫ್‌ಸಿ ವಿಶೇಷ ಅನುದಾನ ಹಾಘೂ ಕೆಯುಡಿಎಫ್‌ಸಿಯಿಂದ ಸಾಲ ಪಡೆದು ನಡೆಸಲಾಗುತ್ತಿದೆ. ಮಳಿಗೆ ಹರಾಜಿನಿಂದ ಸಂಗ್ರಹವಾಗಿರುವ ಹಣವನ್ನು ಸಾಲದ ಮೊತ್ತ ಮರಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.  ಹೀಗಾಗಿ ಮಾರುಕಟ್ಟೆಯ ಕಾಮಗಾರಿ ಪೂರ್ಣಗೊಳಿಸಲು 10 ಕೋಟಿ ರು ಅನುದಾನ ಅವಶ್ಯಕತೆ ಇದೆ ಎಂದು ಪೌರಾಡಳಿತ  ನಿರ್ದೇಶನಾಲಯದ ನಿರ್ದೇಶಕರು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದರು ಎಂಬುದು ಪತ್ರದಿಂದ ತಿಳಿದು ಬಂದಿದೆ.

 

ಪ್ರಸ್ತಾವ ಮುಂದೂಡಲು ನಿರ್ದೇಶನ

 

ಪೌರಾಡಳಿತ ನಿರ್ದೇಶನಾಲಯದ ಕೋರಿಕೆಯಂತೆ ನಗರಾಭಿವೃದ್ಧಿ ಇಲಾಖೆಯು 10 ಕೋಟಿ ರು ಮೊತ್ತದ  ವಿಶೇಷ ಅನುದಾನ ಒದಗಿಸಲು ಆರ್ಥಿಕ ಇಲಾಖೆಯ ಕದ ತಟ್ಟಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ಪ್ರಸ್ತುತ ಪ್ರಸ್ತಾವನೆಯನ್ನು ಮುಂದೂಡಬೇಕು ಎಂದು ನಗರಾಭಿವೃದ್ಧಿ ಇಲಾಖೆಗೆ ತಿಳಿಸಿತ್ತು. ಈ ಸಂಬಂಧ 2025ರ ಆಗಸ್ಟ್ 18ರಂದು ಹಿಂಬರಹವನ್ನು ನೀಡಿತ್ತು.

 

 

ಮುಖ್ಯಮಂತ್ರಿ ಕಚೇರಿ ಕದ ತಟ್ಟಿದ ಸಚಿವ ಪಾಟೀಲ್

 

ಮೆಗಾ ಮಾರುಕಟ್ಟೆಯ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಲು 10 ಕೋಟಿ ರು ವಿಶೇಷ ಅನುದಾನ ಮಂಜೂರಾತಿ ಪ್ರಸ್ತಾವ ಮುಂದೂಡಿರುವ ಸಂಬಂಧ ಕೃಷಿ ಮಾರುಕಟ್ಟೆ  ಸಚಿವ ಶಿವಾನಂದ ಪಾಟೀಲ್ ಅವರು ಮುಖ್ಯಮಂತ್ರಿ ಕಚೇರಿ ಕದ ತಟ್ಟಿದ್ದಾರೆ. 2025ರ ಸೆ.10ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ವಿಧಾನಸಭೆ ಕ್ಷೇತ್ರದ ಬಸವನ ಬಾಗೇವಾಡಿ ಪಟ್ಟಣದಲ್ಲಿ ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿ ಅಗಲೀಕರಣ ಸಮಯದಲ್ಲಿ ರಸ್ತೆ ಪಕ್ಕದಲ್ಲಿರುವ ಸಾವಿರಾರು ವ್ಯಾಪಾರಸ್ಥರುಗಳ ಆಸ್ತಿಗಳು  ಹಾಳಾಗಿವೆ. ಅಲ್ಲದೇ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಅವಕಾಶ ಮಾಡಿಕೊಡುವ ಉದ್ದೇಶದಿಂದ ಸ್ಥಳೀಯ ಪುರಸಭೆಯಿಂದ ಜಗಜ್ಯೋತಿ ಬಸವೇಶ್ವರ ದೇವಸ್ಥಾನ ಪಕ್ಕದ ವಾಣಿಜ್ಯ ಉದ್ದೇಶದ ನಿವೇಶನದಲ್ಲಿ 32.73 ಕೋಟಿ ರು ಅನುದಾನದಲ್ಲಿ ಮೆಗಾ ಮಾರುಕಟ್ಟೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ. ಈ ಕಾಮಗಾರಿಗಳೀಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಅಲ್ಲದೇ ಇದೊಂದು ಬಹುಬೇಡಿಕೆಯ ಮಾರುಕಟ್ಟೆಯಾಗಿದೆ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಈ ಕಟ್ಟಡಕ್ಕೆ ಅನುದಾನ ಮಂಜೂರು ಮಾಡುವ ಕಡತವು ಆರ್ಥಿಕ ಇಲಾಖೆಯಲ್ಲಿ ಪರಿಶೀಲನೆಯಲ್ಲಿದೆ. ಆರ್ಥಿಕ ಇಲಾಖೆಯು ಈ ಪ್ರಸ್ತಾವನೆಯನ್ನು ಮುಂದೂಡಬೇಕು ಎಂದು ಹಿಂಬರಹ ನೀಡಿದೆ. ಹೀಗಾಗಿ ಈ ಕಡತವನ್ನು ತರಿಸಿಕೊಂಡು 10 ಕೋಟಿ ರು. ಮೊತ್ತದ ಅನುದಾನವನ್ನು ಎಸ್‌ಎಫ್‌ಸಿ ಅಡಿಯಲ್ಲಿ ಮಂಜೂರು ಮಾಡಲು ನಿರ್ದೇಶನ ನೀಡಬೇಕು ಎಂದು ಕೋರಿರುವುದು ತಿಳಿದು ಬಂದಿದೆ.

 

ಮೆಗಾ ಮಾರುಕಟ್ಟೆಯ ಮಹಾದ್ವಾರಗಳನ್ನು ನಿರ್ಮಿಸಲು ಬಸವನ ಬಾಗೇವಾಡಿ ಪುರಸಭೆಯು 14.13 ಲಕ್ಷ ರು ಮೊತ್ತದ ಅಂದಾಜು ವೆಚ್ಚವನ್ನು ಸಿದ್ಧಪಡಿಸಿತ್ತು.

 

 

ಬಸವನ ಬಾಗೇವಾಡಿಯಲ್ಲಿ ಮೆಗಾ ಮಾರುಕಟ್ಟೆ ನಿರ್ಮಾಣ ಯೋಜನೆಯು  ಶಿವಾನಂದ ಪಾಟೀಲ್‌ ಅವರು ಈ ಹಿಂದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ ಸಂದರ್ಭದಲ್ಲೇ ಜಾರಿಗೊಂಡಿತ್ತು.

 

 

2016-17ರ ಷೆಡ್ಯೂಲ್ಡ್‌ ದರದಲ್ಲಿಯೇ 32.73 ಕೋಟಿ ಅಂದಾಜು ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಲಾಗಿತ್ತು.

 

 

ಈ ಯೋಜನೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯು ಅನುಮೋದಿಸಿತ್ತು. ಗುತ್ತಿಗೆಯನ್ನು ಆರ್‍‌ ಕೆ ಇನ್ಫ್ರಾ ಇಂಡಿಯಾ ಪ್ರೈವೈಟ್‌ ಲಿಮಿಟೆಡ್‌ಗೆ ವಹಿಸಲಾಗಿತ್ತು.

 

 

ಇದಕ್ಕಾಗಿ ಅನುದಾನವನ್ನೂ ಹೊಂದಿಸಿತ್ತು.

 

2016-17ನೇ ಸಾಲಿನ ಎಸ್‌ಎಫ್‌ಸಿ ಅನುದಾನದ ಅಡಿಯಲ್ಲಿ 10 ಕೋಟಿ, ಕೆಯುಐಡಿಎಫ್‌ಸಿ ಯಿಂದ 13 ಕೋಟಿ, ನಗರೋತ್ಥಾನ ಹಂತ 3 ರಲ್ಲಿ 4.17 ಕೋಟಿ, 2017-18ನೇ ವಿಶೇಷ ಅನುದಾನ 5 ಕೋಟಿ, ಬಸವನ ಬಾಗೇವಾಡಿ ಪುರಸಭೆ ನಿಧಿಯಿಂದ 0.56 ಕೋಟಿ ರು ಸೇರಿ ಒಟ್ಟಾರೆ 32.73 ಕೋಟಿ ರುಗಳನ್ನು ಹೊಂದಿಸಿಕೊಂಡಿತ್ತು.

 

 

 

32.73 ಕೋಟಿ ರು ವೆಚ್ಚ ಎಂದು ಅಂದಾಜಿಸಲಾಗಿತ್ತಾದರೂ ಆ ನಂತರ ಈ ಮೊತ್ತವನ್ನು 35.73 ಕೋಟಿಗೆ ಏರಿಕೆ ಮಾಡಲಾಗಿತ್ತು. ಟೆಂಡರ್‍‌ನಲ್ಲಿ 28.74 ಕೋಟಿ ನಮೂದಿಸಲಾಗಿತ್ತು.

 

 

ಕಾಮಗಾರಿ ಕಾರ್ಯಾದೇಶದಲ್ಲಿ 27.88 ಕೋಟಿ ರು ಎಂದು ತಿಳಿಸಿತ್ತು. ಇದು ಟೆಂಡರ್‍‌ಗಿಟ್ಟ ಮೊತ್ತಕ್ಕಿಂತ 7.85 ಕೋಟಿಯಷ್ಟು ಹೆಚ್ಚಾಗಿತ್ತು.

Your generous support will help us remain independent and work without fear.

Latest News

Related Posts