ಆರ್‍‌ಎಸ್‌ಎಸ್‌ ನೋಂದಾವಣೆಯಾಗದಿದ್ದರೂ ಬೈಠಕ್‌ ಆಯೋಜನೆ; ಮುನ್ನೆಲೆಗೆ ಬಂದ ಗೃಹ ಸಚಿವರ ಉತ್ತರ

ಬೆಂಗಳೂರು; ನೋಂದಾಯಿತವಲ್ಲದ ಸಂಸ್ಥೆಗಳ ಪಟ್ಟಿಯಲ್ಲಿರುವ   ರಾಷ್ಟ್ರೀಯ ಸ್ವಯಂ ಸೇವಕ ಸಂಘವು ರಾಜ್ಯದಲ್ಲಿ (ಆರ್‍‌ಎಸ್‌ಎಸ್‌)  ನೂರಾರು ಸಭೆ ಸಮಾರಂಭ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರು 6 ತಿಂಗಳ ಹಿಂದೆಯೇ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಮಾಹಿತಿ ಒದಗಿಸಿದ್ದರು.

 

ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಡೆಸುತ್ತಿರುವ ಬೈಠಕ್‌ನಂತಹ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರು  ಅಧಿಕೃತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಬೆನ್ನಲ್ಲೇ  ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರು ಸದನಕ್ಕೆ ನೀಡಿದ್ದ ಲಿಖಿತ ಉತ್ತರವು ಮುನ್ನೆಲೆಗೆ ಬಂದಿದೆ.

 

ವಿಧಾನ ಪರಿಷತ್‌ ಸದಸ್ಯ ಬಿ ಕೆ ಹರಿಪ್ರಸಾದ್‌ ಅವರುಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ  ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರು ನೋಂದಾಯಿತವಲ್ಲದ ಸಂಸ್ಥೆಗಳ ಪಟ್ಟಿಯಲ್ಲಿರುವ   ರಾಷ್ಟ್ರೀಯ ಸ್ವಯಂ ಸೇವಕ ಸಂಘವು ರಾಜ್ಯದಲ್ಲಿ   (ಆರ್‍‌ಎಸ್‌ಎಸ್‌)  ನೂರಾರು ಸಭೆ ಸಮಾರಂಭ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಹೇಳಿದ್ದರು.

 

ರಾಷ್ಟ್ರೋತ್ಥಾನ ಮತ್ತು ಯಾದವ ಸ್ಮೃತಿ ಕಟ್ಟಡಗಳ ಭದ್ರತೆ ದೃಷ್ಟಿಯಿಂದ ಬೆಂಗಳೂರು ನಗರದ ಸಿಎಆರ್ (ಕೇಂದ್ರ) ಘಟಕದಿಂದ ರಕ್ಷಣೆ ಒದಗಿಸಲಾಗಿದೆ ಎಂಬುದನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರವು ಒಪ್ಪಿಕೊಂಡಿತ್ತು.

 

ಆರ್‍‌ಎಸ್‌ಎಸ್‌ ಮತ್ತು ಅದರ ಸಂಘ ಸಂಸ್ಥೆಗಳ ವಿರುದ್ಧ ಸದಾ ಕಿಡಿ ಕಾರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು,  ರಾಷ್ಟ್ರೋತ್ಥಾನ ಮತ್ತು ಯಾದವ ಸ್ಮೃತಿ ಕಟ್ಟಡಗಳ ಭದ್ರತೆ ದೃಷ್ಟಿಯಿಂದ ಬೆಂಗಳೂರು ನಗರದ ಸಿಎಆರ್ (ಕೇಂದ್ರ) ಘಟಕದಿಂದ ರಕ್ಷಣೆ ಒದಗಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿತ್ತು.

 

ಪ್ರಶ್ನೆ-ಉತ್ತರವೇನು?

 

ಪ್ರಶ್ನೆ; ರಾಜ್ಯದಲ್ಲಿ ಸಂಘ ಸಂಸ್ಥೆಗಳಿಂದ ನಡೆಸುವ ಸಭೆ, ಸಮಾರಂಭ ಕಾರ್ಯಕ್ರಮ ಮೆರವಣಿಗೆಗಳಿಗೆ ಪೊಲೀಸ್‌ ಅನುಮತಿ ಪಡೆಯುತ್ತಿಲ್ಲ ಎಂಬ ಬಗ್ಗೆ ಸಾರ್ವಜನಿಕರಿಂದ ಬಂದ ದೂರುಗಳು ಸರ್ಕಾರದ ಗಮನಕ್ಕೆ ಬಂದಿವೆಯೇ, ಬಂದಿದ್ದರೇ ಸರ್ಕಾರ ಕೈಗೊಂಡ ಕ್ರಮಗಳೇನು?

 

ಉತ್ತರ; ಸಂಘ ಸಂಸ್ಥೆಗಳು ನಡೆಸುವ ಬಹಿರಂಗ ಸಭೆ, ಸಮಾರಂಭ, ಕಾರ್ಯಕ್ರಮ, ಮೆರವಣಿಗೆಗಳಿಗೆ  ಪೊಲೀಸ್‌ ಅನುಮತಿಯೊಂದಿಗೆ ನಡೆಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಒಂದು ವೇಳೆ ಪೊಲೀಸ್‌ ಅನುಮತಿ ಪಡೆಯದೇ ಸಭೆ, ಸಮಾರಂಭ ನಡೆಸಿದ್ದಲ್ಲಿ ಅಂತಹವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ.

 

 

 

 

ಪ್ರಶ್ನೆ; ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್‍‌ಎಸ್‌ಎಸ್‌) ನೋಂದಾಯಿತವಲ್ಲದ ಸಂಸ್ಥೆಯಾಗಿರದೆ ನೂರಾರು ಸಭೆ ಸಮಾರಂಭ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ?

 

ಉತ್ತರ; ಹೌದು

 

ಪ್ರಶ್ನೆ; ಆರ್‍‌ಎಸ್‌ಎಸ್‌ನ ಈ ಕಾರ್ಯಕ್ರಮಗಳಿಗೆ ಅನುಮತಿ ಕೇಳದೇ ಮಾಹಿತಿಗಾಗಿ  ಎಂದು ಕೊಟ್ಟ ಪತ್ರದ ಆಧಾರದ ಮೇಲೆ ಪೊಲೀಸ್‌ ಅಧಿಕಾರಿಗಳು ಮೈಕ್‌ ಅನುಮತಿಯಾಗಲಿ ಕೊಡದೇ  ಭದ್ರತೆ ಕೊಡುತ್ತಿದ್ದಾರೆಂಬ ಬಗ್ಗೆ ಸರ್ಕಾರಕ್ಕೆ ಅರಿವಿದೆಯೇ?

 

ಉತ್ತರ; ಅನುಮತಿ ಪಡೆದ ನಂತರ ಅಗತ್ಯವಿದ್ದಲ್ಲಿ ಭದ್ರತೆ ಒದಗಿಸಲಾಗುವುದು

 

ಪ್ರಶ್ನೆ; ಈ ಕಾರ್ಯಕ್ರಮಗಳಿಗೆ ಅನುಮತಿಗಾಗಿ ಮನವಿ ಕೊಟ್ಟರೂ ಪೊಲೀಸ್‌ ಅಧಿಕಾರಿಗಳು ಆರ್‍‌ಎಸ್‌ಎಸ್‌ ನವರಿಗೆ ಪರೋಕ್ಷವಾಗಿ ಸಹಕರಿಸುವಂತೆ ಅನುಮತಿ ಕೊಡದೇ ಪೊಲೀಸ್‌ ಭದ್ರತೆ ಒದಗಿಸುತ್ತಿದ್ದಾರೆಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಅದ ವಿಷಯಗಳು ಗುಪ್ತಚರ ವಿಭಾಗದಿಂದ ಸರ್ಕಾರಕ್ಕೆ ಸಿಕ್ಕಿದೆಯೇ? ಸಿಕ್ಕಿದ್ದರೇ ಸರ್ಕಾರ ಕೈಗೊಂಡ ಕ್ರಮಗಳೇನು?

 

ಪ್ರಶ್ನೆ; ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‍‌ಎಸ್‌ಎಸ್‌) ನೋಂದಾಯಿತವಲ್ಲದ ಹಾಗೂ ಸ್ವಂತ ಅಥವಾ ಬಾಡಿಗೆ ಕಚೇರಿಗಳು ಇಲ್ಲವೆಂಬ ಮಾಹಿತಿ ಇದ್ದು, ಸರ್ಕಾರದಿಂದ ಕೇಶವಕೃಪ , ರಾಷ್ಟ್ರೋತ್ಥಾನ ಮತ್ತು ಯಾದವ ಸ್ಮೃತಿ ಕಟ್ಟಡಗಳಿಗೆ ಪೊಲೀಸ್‌ ರಕ್ಷಣೆ ಕೊಟ್ಟಿರುವುದು ನಿಜವೇ? ಈ ಕಟ್ಟಡಗಳಿಗೆ ಪೊಲೀಸ್‌ ರಕ್ಷಣೆ ಕೊಟ್ಟಿರುವುದು ಉದ್ದೇಶವೇನು?

 

 

ಉತ್ತರ; ರಾಷ್ಟ್ರೋತ್ಥಾನ ಮತ್ತು ಯಾದವ ಸ್ಮೃತಿ ಕಟ್ಟಡಗಳ ಭದ್ರತೆ ದೃಷ್ಟಿಯಿಂದ ಬೆಂಗಳೂರು ನಗರದ ಸಿಎಆರ್ (ಕೇಂದ್ರ) ಘಟಕದಿಂದ ರಕ್ಷಣೆ ಒದಗಿಸಲಾಗಿರುತ್ತದೆ.

 

ವಿಶೇಷವೆಂದರೇ ಗೃಹ ಸಚಿವ ಡಾ ಪರಮೇಶ್ವರ್ ಅವರು ನೀಡಿರುವ ಉತ್ತರದಲ್ಲಿ ಕೇಶವ ಕೃಪ ಎಂದು ಸ್ಪಷ್ಟ ಮತ್ತು ನಿರ್ದಿಷ್ಟವಾಗಿ ಹೆಸರಿಸಿರಲಿಲ್ಲ.

 

ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಉತ್ತರ ನೀಡಿದ 6 ತಿಂಗಳ ನಂತರ ಆರ್‍‌ಎಸ್‌ಎಸ್‌ನ ಕಾರ್ಯಕ್ರಮಗಳನ್ನು ನಿಷೇಧಿಸಬೇಕು ಎಂದು  ಸಚಿವ ಪ್ರಿಯಾಂಕ್‌ ಖರ್ಗೆ ಅವರು 2025ರ ಅಕ್ಟೋಬರ್‍‌ 4ರಂದು ಬರೆದಿರುವ ಪತ್ರವು ಚರ್ಚೆಗೆ ಗ್ರಾಸವಾಗಿದೆ.

 

2025ರ ಅಕ್ಟೋಬರ್‍‌ 4ರಂದೇ ಬರೆದಿರುವ ಪತ್ರದ ಮೇಲೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳುವುದು ಎಂದು ಒಕ್ಕಣೆ ಹಾಕಿದ್ದಾರೆ.

 

ಪ್ರಿಯಾಂಕ್‌ ಖರ್ಗೆ ಪತ್ರದಲ್ಲೇನಿದೆ?

 

ಜನಸಮುದಾಯದಲ್ಲಿ ದ್ವೇಷ ಬಿತ್ತುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅವುಗಳನ್ನು ನಿಗ್ರಹಿಸುವುದಕ್ಕಾಗಿ ಹಾಗೂ ದೇಶದ ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕಾಗಿ ಸಮಗ್ರತೆ, ಸಮಾನತೆ, ಮತ್ತು ಏಕತೆಯ ಮೂಲಭೂತ ತತ್ವಗಳನ್ನು ಒಳಗೊಂಡ ಸಂವಿಧಾನವು ನಮಗೆ ಅಧಿಕಾರ ನೀಡಿದೆ.

 

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂಬ ಹೆಸರಿನ ಸಂಘಟನೆಯು ಸರ್ಕಾರಿ ಮತ್ತು ಅನುದಾನಿತ ಶಾಲೆಗಳು, ಸಾರ್ವಜನಿಕ ಸರ್ಕಾರಿ ಮೈದಾನಗಳನ್ನು ಬಳಸಿಕೊಂಡು ಶಾಖೆ ನಡೆಸುತ್ತಾ ಘೋಷಣೆಗಳನ್ನು ಕೂಗುತ್ತಾ, ಮಕ್ಕಳು ಮತ್ತು ಯುವ ಸಮುದಾಯದ ಮನಸ್ಸಿನಲ್ಲಿ ಭಾರತದ ಏಕತೆ ವಿರುದ್ಧವಾಗಿ ಹಾಗೂ ಸಂವಿಧಾನದ ಆಶಯಗಳ ವಿರುದ್ಧವಾಗಿ ನಕಾರಾತ್ಮಕವಾಗಿ ಆಲೋಚನೆಗಳನ್ನು ತುಂಬುತ್ತಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರು ವಿವರಿಸಿದ್ದಾರೆ.

 

ಪೊಲೀಸ್‌ ಅನುಮತಿ ಪಡೆಯದೇ ದೊಣ್ಣೆಗಳನ್ನು ಹಿಡಿದು ಆಕ್ರಮಣಕಾರಿ ಪ್ರದರ್ಶನ ನಡೆಸುವ ಮೂಲಕ ಮುಗ್ಧ ಮಕ್ಕಳು , ಯುವ ಜನರ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಾಗುತ್ತಿದೆ.

 

 

 

‘ನಾಡಿನ ಮಕ್ಕಳು ಯುವ ಸಮುದಾಯ, ಸಾರ್ವಜನಿಕರು ಮತ್ತು ಸಮಾಜದ ಸ್ವಾಸ್ಥ್ಯದ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳು ಹಾಗೂ ಸರ್ಕಾರದ ಅನುದಾನಿತ ಶಾಲೆಗಳು, ಮೈದಾನಗಳು, ಉದ್ಯಾನಗಳು, ಮುಜರಾಯಿ ಇಲಾಖೆಯ ದೇವಸ್ಥಾನಗಳು, ಪುರಾತತ್ವ ಇಲಾಖೆಯ ಸ್ಥಳಗಳು ಸೇರಿದಂತೆ ಯಾವುದೇ ಸರ್ಕಾರಿ ಸ್ಥಳಗಳಲ್ಲಿ ಆರ್‍‌ಎಸ್‌ಎಸ್‌ ಸಂಘಟನೆಯ ಶಾಖೆ, ಸಾಂಘಿಕ್‌ ಅಥವಾ ಬೈಠಕ್‌ ಹೆಸರಿನಲ್ಲಿ  ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳಿಗೆ ನಿಷೇಧ ಹೇರಬೇಕು,’ ಎಂದು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.

 

ಅಲ್ಲದೇ ಹಾವೇರಿಯ ಸವಣೂರಿನಲ್ಲಿ ನಡೆದಿದ್ದ ಪ್ರತಿಭಟನೆ ಸಂದರ್ಭದಲ್ಲಿ ಆರ್‍‌ಎಸ್‌ಎಸ್‌ ವಿರೋಧಿ ಘೋಷಣೆ ಕೂಗಿದ್ದ 22 ಮಂದಿ ಅರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಲು ಇದೇ ಕಾಂಗ್ರೆಸ್‌ ಸರ್ಕಾರವು ಪೂರ್ವಾನುಮತಿ ನೀಡಿತ್ತು.

 

ಆರ್‌ಎಸ್‌ಎಸ್‌ ವಿರೋಧಿ ಘೋಷಣೆ; 22 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಪೂರ್ವಾನುಮತಿ

 

ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌), ಹಿಂದೂ ಮಹಾಸಭಾ, ಬಜರಂಗದಳ, ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳ ನಿಷೇಧಿಸುವ ಕುರಿತು ಮಾಹಿತಿ ಒದಗಿಸುವುದಕ್ಕೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರವು  ‘ವಿನಾಯಿತಿ’ ಹೆಸರಿನಲ್ಲಿ ರಕ್ಷಣೆ ಪಡೆದಿತ್ತು.

 

ಆರ್‌ಎಸ್‌ಎಸ್‌, ಎಸ್‌ಡಿಪಿಐ ಸಂಘಟನೆ ನಿಷೇಧ; ಮಾಹಿತಿ ನೀಡಲು ‘ವಿನಾಯಿತಿ’ ರಕ್ಷಣೆ ಪಡೆದ ಬಿಜೆಪಿ ಸರ್ಕಾರ

 

ಬೆಂಗಳೂರಿನ ಕಾಡುಗೊಂಡನಹಳ್ಳಿ, ಡಿ ಜೆ ಹಳ್ಳಿ ಮತ್ತು ಕಾವಲ್‌ ಬೈರಸಂದ್ರದಲ್ಲಿ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ನಡೆದಿದ್ದ ಗಲಭೆಯಲ್ಲಿ ಕೈವಾಡವಿದೆ ಎಂಬ ಆರೋಪದಡಿಯಲ್ಲಿ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಮಾಜಿ  ಸಚಿವ ಈಶ್ವರಪ್ಪ ಅವರು ಹೇಳಿಕೆ ನೀಡಿದ್ದರು. ಇದರ  ಬೆನ್ನಲ್ಲೇ ಸರ್ಕಾರ ಒದಗಿಸಿರುವ ಆರ್‌ಟಿಐ ಮಾಹಿತಿಯು ಚರ್ಚೆಗೆ ಗ್ರಾಸವಾಗಿತ್ತು.

 

ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಹಿಂದೂ ಮಹಾಸಭಾ, ಬಜರಂಗದಳ, ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸುವುದಕ್ಕೆ ಸಂಬಂಧಿಸಿದಂತೆ ನಡೆದಿದ್ದ ಸಭೆಗಳು ಮತ್ತು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಲಾಖೆಯಲ್ಲಿ ಕಡತವನ್ನು ತೆರೆದಿದ್ದರೆ ಅದರಲ್ಲಿರುವ ಸಂಪೂರ್ಣ ಹಾಳೆಗಳನ್ನು ಒದಗಿಸುವ ಕುರಿತು ‘ದಿ ಫೈಲ್‌’ ಆರ್‌ಟಿಐ ಅಡಿ 2020ರ ಜನವರಿ 20ರಂದು ಒಳಾಡಳಿತ ಮತ್ತು ಕಾನೂನು ಸುವ್ಯವಸ್ಥೆ ಇಲಾಖೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿತ್ತು.

 

ಒಳಾಡಳಿತ ಇಲಾಖೆಯು ಎರಡೂ ಅರ್ಜಿಗಳನ್ನು 2020ರ ಜನವರಿ 23ರಂದು ಪೊಲೀಸ್‌ ಮಹಾನಿರ್ದೇಶಕರ ಕಚೇರಿಗೆ ವರ್ಗಾಯಿಸಿತ್ತು. ಆದರೆ ಡಿಜಿಐಜಿ ಕಚೇರಿಯ ಕಾನೂನು ಸುವ್ಯವಸ್ಥೆ ಶಾಖೆಯು ಈ ಅರ್ಜಿಗಳನ್ನು ಸ್ವೀಕರಿಸಲು ನಿರಾಕರಿಸಿತ್ತು.

 

ಡಿಜಿಐಜಿ ಕಚೇರಿಯ ಕಾನೂನು ಸುವ್ಯವಸ್ಥೆ ಶಾಖೆಯು ಅರ್ಜಿಗಳನ್ನು ತೆಗೆದುಕೊಳ್ಳದ ಕಾರಣ ಒಳಾಡಳಿತ ಇಲಾಖೆಯು 2020ರ ಫೆ.4ರಂದು ರಾಜ್ಯ ಗುಪ್ತವಾರ್ತೆ ವಿಭಾಗಕ್ಕೆ ವರ್ಗಾಯಿಸಿತ್ತು. ಆದರೆ ಈ ವಿಭಾಗವೂ ಆರ್‌ಟಿಐ ಅರ್ಜಿಗೆ ಯಾವುದೇ ಮಾಹಿತಿ ಒದಗಿಸಿರಲಿಲ್ಲ.

 

ಮಾಹಿತಿ ನೀಡಲು ‘ವಿನಾಯಿತಿ’ ರಕ್ಷಣೆ

 

‘ಮಾಹಿತಿ ಹಕ್ಕು ಅಧಿನಿಯಮ 2005ರ ಅಡಿಯಲ್ಲಿ ಕೋರಿರುವ ಮಾಹಿತಿಯನ್ನು ಅರ್ಜಿದಾರರಿಗೆ ಒದಗಿಸುವಂತೆ ಸೂಚಿಸಲಾಗಿರುತ್ತದೆ. ಉಲ್ಲೇಖ-2(ಸರ್ಕಾರದ ಅಧಿಸೂಚನೆ ಸಂಖ್ಯೆ ಡಿಪಿಎಆರ್‌;44;ಆರ್‌ಟಿಐ;2004, ದಿನಾಂಕ 05-12-2015)ರ ಸರ್ಕಾರದ ಅಧಿಸೂಚನೆ ಅಡಿಯಲ್ಲಿ ಮಾಹಿತಿ ಹಕ್ಕು ಅಧಿನಿಯಮ 2005ರ ಅಡಿಯಲ್ಲಿ ರಾಜ್ಯ ಗುಪ್ತವಾರ್ತೆ ಘಟಕಕ್ಕೆ ವಿನಾಯಿತಿ ನೀಡಲಾಗಿದೆ,’ ಎಂದು ರಾಜ್ಯ ಗುಪ್ತವಾರ್ತೆಯ ಎಸ್‌ ಪಿ (ಭದ್ರತೆ) ಟಿ ಶ್ರೀಧರ್‌ ಅವರು 2020ರ ಫೆ.26ರಂದು ಮಾಹಿತಿ ಒದಗಿಸಿದ್ದರು.

 

ಮಂಗಳೂರು ಮತ್ತು ಇದಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ನಡೆದಿದ್ದ ಗಲಭೆಗಳಲ್ಲಿ ಆರ್‌ಎಸ್‌ಎಸ್‌, ಹಿಂದೂ ಮಹಾ ಸಭಾ, ಬಜರಂಗ ದಳದಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾಗಿದ್ದ ಹಲವರ ಹೆಸರುಗಳು ಪ್ರಸ್ತಾಪವಾಗಿದ್ದವು. ಅಲ್ಲದೆ ಇದಕ್ಕೆ ಸಮಾನಾಂತರವಾಗಿ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳಲ್ಲಿ ತೊಡಗಿಸಿಕೊಂಡವರು ಎಂದು ಆರೋಪಿಸಲಾಗಿದ್ದ ಹಲವರ ವಿರುದ್ಧವೂ ಆರೋಪಗಳು ಕೇಳಿಬಂದಿದ್ದವು.

 

ರಾಷ್ಟ್ರೀಯ ಸ್ವಯಂಸೇವಾ ಸಂಘ (ಆರ್‌ಎಸ್‌ಎಸ್‌) ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಿ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಹಿಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಆರ್‌ಎಸ್‌ಎಸ್‌ ಕೂಡ ಇಂತಹದ್ದೇ ಕೆಲಸಗಳನ್ನು ಮಾಡುತ್ತಿದೆ ಅದನ್ನು ಏನು ಮಾಡಬೇಕು ಎಂದು 2016ರ ಅಕ್ಟೋಬರ್‌ 30ರಂದು ಪ್ರಶ್ನಿಸಿದ್ದರು.

 

ಹೈಕಮಾಂಡ್ ಸಲಹೆ ಪಡೆದು ಆರ್‍ಎಸ್‍ಎಸ್ ನಿಷೇಧದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ 2018ರ ಜನವರಿ 5ರಂದು ಕಾರ್ಯಕ್ರಮವೊಂದರಲ್ಲಿ  ಸಿದ್ದರಾಮಯ್ಯ ಅವರು ಹೇಳಿದ್ದರು. ಈ ಹೇಳಿಕೆಯ್ನು ಖಂಡಿಸಿದ್ದ ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕರಾಗಿದ್ದ   ಸಚಿವ ಕೆ ಎಸ್‌ ಈಶ್ವರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಾಕತ್ತಿದ್ದರೆ ಆರ್‍ಎಸ್‍ಎಸ್ ಸಂಘಟನೆಗೆ ನಿಷೇಧ ಹೇರಲಿ ಎಂದು ಸವಾಲು ಹಾಕಿದ್ದರು.

 

ಆರ್‍ಎಸ್‍ಎಸ್ ಒಂದು ದೇಶಭಕ್ತ ಸಂಘಟನೆಯಾಗಿದೆ. ದೇಶದ ಸಂಸ್ಕೃತಿ,  ಭಾಷೆ, ಆಚಾರ, ವಿಚಾರ ಸಂಪ್ರದಾಯಗಳನ್ನು ಪಾಲನೆ ಮಾಡುವುದು ಆರ್‍ಎಸ್‍ಎಸ್ ಧ್ಯೇಯೋದ್ದೇಶ. ಇಂತಹ ಸಂಘಟನೆಗೆ ನಿಷೇಧ ಹೇರಿದರೆ ದೇಶಭಕ್ತರು ಬೀದಿಗಿಳಿಯಲಿದ್ದಾರೆ ಎಂದು ಎಚ್ಚರಿಸಿದ್ದರು. ಕರಾವಳಿ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಹೆಚ್ಚುತ್ತಿರುವ ಗಲಭೆಗೆ ಕೆಲವು ಮೂಲಭೂತ ಸಂಘಟನೆಗಳೇ ನೇರ ಕಾರಣ. ನಿಮ್ಮ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಜಾತಿ-ಜಾತಿ, ಧರ್ಮ-ಧರ್ಮಗಳ ನಡುವೆ ವಿಷ ಬೀಜವನ್ನು ಬಿತ್ತುತ್ತಿದ್ದೀರಿ. ಇದು ನಿಮಗೆ ಮುಂದೊಂದಿನ ಮುಳುವಾಗಲಿದೆ ಎಂದು ಗುಡುಗಿದ್ದನ್ನು ಸ್ಮರಿಸಬಹುದು.

 

ಆದರೆ ಇವೆಲ್ಲವೂ ರಾಜಕೀಯ ಹೇಳಿಕೆಗಳಾಗಿದ್ದವೆಯೇ  ಹೊರತು ಈ ಹಿಂದಿನ ಸರ್ಕಾರವೂ ಆರ್‌ಎಸ್‌ಎಸ್‌ ಸಂಘಟನೆಯನ್ನು ನಿಷೇಧಿಸಲು ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ. ಹಾಗೆಯೇ ಕೇಂದ್ರದ ಮಾಜಿ ಸಚಿವ ಬಿ ಜನಾರ್ದನ ಪೂಜಾರಿ ಅವರು ಸಹ ಮಹಾತ್ಮ ಗಾಂಧಿ ಹತ್ಯೆಯಾದ ದಿನ ಗೋಡ್ಸೆ ಪ್ರತಿಮೆ ಮತ್ತು ಭಾವಚಿತ್ರಕ್ಕೆ ಹಾರ ಹಾಕಲು ಮುಂದಾಗಿರುವ ಹಿಂದೂ ಮಹಾಸಭಾಕ್ಕೆ ದೇಶಾದ್ಯಂತ ನಿಷೇಧ ಹೇರಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಆಳ್ವಿಕೆಯಲ್ಲಿರುವ ರಾಜ್ಯಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

 

2008ರಿಂದ ಈವರೆವಿಗೆ ನಡೆದಿರುವ 17 ಕೊಲೆ ಹಾಗೂ ಅಪಹರಣ ಪ್ರಕರಣಗಳಲ್ಲಿ ಎಸ್‌ಡಿಪಿಐ ಮತ್ತು ಪಿಎಫ್‌ಐ ಕಾರ್ಯಕರ್ತರು ಭಾಗಿಯಾದ ಬಗ್ಗೆ ಪುರಾವೆಗಳಿವೆ ಎಂದು  ಮಾಜಿ  ಕಂದಾಯ ಸಚಿವ ಆರ್‌ ಅಶೋಕ್‌ ಅವರು ಹೇಳಿಕೆ ನೀಡಿದ್ದರು. ಮೈಸೂರಿನ ರಾಜು, ಮಡಿಕೇರಿಯ ಪುಟ್ಟಪ್ಪ, ಪ್ರವೀಣ್‌ ಪೂಜಾರಿ, ಶಿವಾಜಿನಗರದ ಆರ್‌ಎಸ್‌ಎಸ್‌ ಕಾರ್ಯಕರ್ತ ರುದ್ರೇಶ್‌, ಶರತ್‌ ಮಡಿವಾಳ ಕೊಲೆ ಪ್ರಕರಣಗಳನ್ನು ಸಚಿವ ಅಶೋಕ್‌ ಅವರು ಉಲ್ಲೇಖಿಸಿರುವುದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts