ಇಂದಿರಾ ಕ್ಯಾಂಟೀನ್‌ ಅವ್ಯವಹಾರ ಬೆಳಕಿಗೆ ಬರುವ ಭೀತಿ; ಲೆಕ್ಕಪರಿಶೋಧನೆಗೆ ದಾಖಲೆಗಳನ್ನೇ ನೀಡದ ಬಿಬಿಎಂಪಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಪ್ಪಳದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ, ಬಗೆ ಬಗೆಯ ತಿಂಡಿ ತಿನಿಸುಗಳನ್ನು ಸೇವಿಸಿದ ಸುದ್ದಿ ಮಾಸುವ ಮುನ್ನವೇ ಬಿಬಿಎಂಪಿಯು ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಲೆಕ್ಕಪರಿಶೋಧನೆಗೆ ಒದಗಿಸದೇ ಇರುವುದು ಬೆಳಕಿಗೆ ಬಂದಿದೆ.

 

ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ  ʻ2021-22 ಮತ್ತು 2022-23ನೇ ಸಾಲಿನ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕೋಢೀಕೃತ ವಾರ್ಷಿಕ ಲೆಕ್ಕಪರಿಶೋಧನಾ ವರದಿʼಯಲ್ಲಿ ಈ ವಿಷಯವನ್ನು ದಾಖಲಿಸಲಾಗಿದೆ. ಇಂದಿರಾ ಕ್ಯಾಂಟೀನ್‌ ನಿರ್ವಹಣೆಯಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿರುವುದರಿಂದ, ಇದು ಬೆಳಕಿಗೆ ಬರುವ ಭೀತಿಯಿಂದಾಗಿ ಬಿಬಿಎಂಪಿ ದಾಖಲೆಗಳನ್ನು ಒದಗಿಸಿಲ್ಲ ಎಂದು ಹೇಳಲಾಗುತ್ತಿದೆ.

 

bbmp indira canteen scam

 

ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ 175 ಇಂದಿರಾ ಕ್ಯಾಂಟೀನ್‌ಗಳಿವೆ. ಅಲ್ಲದೆ, 52 ಹೊಸ ಕ್ಯಾಂಟೀನ್‌ಗಳ ನಿರ್ಮಾಣ ಪ್ರಗತಿಯಲ್ಲಿದೆ. ಈಗಿರುವ ಕ್ಯಾಂಟೀನ್‌ಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ, ಶುಚಿತ್ವವನ್ನು ಕಾಪಾಡುತ್ತಿಲ್ಲ, ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಸರಿಯಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಅಲ್ಲದೆ, ಆಹಾರ ಮಾರಾಟದಿಂದ ಹಿಡಿದು, ಟೆಂಡರ್‌ ಪ್ರಕ್ರಿಯೆಯವರೆಗೆ ಸಾಕಷ್ಟು ಅಕ್ರಮ ನಡೆಯುತ್ತಿದೆ ಎಂಬ ದೂರುಗಳಿವೆ.

 

ಬೆಂಗಳೂರು ದಕ್ಷಿಣ ವಲಯದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಸುಮಾರು 7 ಕೋಟಿ ರು.ಗಳ ಅವ್ಯವಹಾರ ನಡೆಸಿದಕ್ಕಾಗಿ ಬಿಬಿಎಂಪಿ ವಲಯದ ಉಪ ಆರೋಗ್ಯಾಧಿಕಾರಿ ಡಾ. ಕಲ್ಪನಾ ಪಿ. ಅವರನ್ನು ಬಿಬಿಎಂಪಿಯೇ ಕಳೆದ ಮೇನಲ್ಲಿ ಅಮಾನತು ಮಾಡಿತ್ತು. ಡಾ.ಕಲ್ಪನಾ ಪಿ. ಅವರು ಆರ್ಡರ್‌ಗಳನ್ನು ಪರಿಶೀಲಿಸದೆ 2.27 ಕೋಟಿ ರು. ಪಾವತಿಸಬೇಕಾಗಿದ್ದಲ್ಲಿ 9.72 ಕೋಟಿ ರು. ಪಾವತಿಸಿದ ಆರೋಪ ಎದುರಿಸುತ್ತಿದ್ದಾರೆ. ಈ ರೀತಿಯ ಅವ್ಯವಹಾರ ನಡೆದಿರುವ ಅನೇಕ ಪ್ರಕರಣಗಳಿದ್ದು, ಬಿಬಿಎಂಪಿಯೇ ಎಫ್‌ಐಆರ್‌ ಕೂಡ ದಾಖಲಿಸಿದೆ.

 

ಹೀಗಿದ್ದರೂ ಕೂಡ ಬಿಬಿಎಂಪಿ  2019ರಿಂದಲೂ ಲೆಕ್ಕರಿಶೋಧನೆಗೆ ಅಗತ್ಯ ದಾಖಲೆಗಳನ್ನು ಒದಗಿಸುತ್ತಿಲ್ಲ. 2019-20ನೇ ಸಾಲಿನಲ್ಲಿ ಲೆಕ್ಕಪರಿಶೋಧನೆ ನಡೆಸಿದಾಗ, ಇಂದಿರಾ ಕ್ಯಾಂಟೀನ್‌ ಯೋಜನೆಯಲ್ಲಿ ಹಲವು ನ್ಯೂನತೆಗಳು ಬೆಳಕಿಗೆ ಬಂದಿದ್ದವು. ಈ ಸಂದರ್ಭದಲ್ಲಿ 14.92 ಕೋಟಿ ರು. ಹೆಚ್ಚುವರಿಯಾಗಿ ಪಾವತಿಸಿದ್ದನ್ನು ಕೂಡ ಲೆಕ್ಕ ಪರಿಶೋಧಕರು ಪತ್ತೆಹಚ್ಚಿದ್ದರು. ಆ ನಂತರ ಬಿಬಿಎಂಪಿಯು ತಿಂಡಿ, ಊಟ ಪೂರೈಸಿರುವ ಸಂಬಂಧ ಗುತ್ತಿಗೆ ಸಂಸ್ಥೆಗಳಿಗೆ ಕಾರ್ಯ ಹಂಚಿಕೆ ಮಾಡಿರುವ ಸ್ವರೂಪ ಮತ್ತು ಈ ಸಂಬಂಧದ ಕಡತಗಳನ್ನು ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿರಲಿಲ್ಲ.

 

 

2021-22 ಮತ್ತು 2022-23ನೇ ಸಾಲಿನ ಲೆಕ್ಕಪರಿಶೋಧನೆ ಸಂದರ್ಭದಲ್ಲಿ ಕೂಡ ಬಿಬಿಎಂಪಿಯು ಇದೇ ಚಾಳಿ ಮುಂದುವರಿಸಿದೆ. 2021-22ನೇ ಸಾಲಿನಲ್ಲಿ ಲೆಕ್ಕಪರಿಶೋಧನೆಯಲ್ಲಿ ಪರಿಶೀಲಿಸಿದಾಗ ಆರು ವಿಷಯಗಳ ವಿವರವನ್ನು ಲೆಕ್ಕಪರಿಶೋಧನೆಗೆ ಹಾಜರುಪಡಿಸುವಂತೆ (ಲೆಕ್ಕ ವಿಚಾರಣಾ ಪತ್ರ ಸಂಖ್ಯೆ:47/2023-24, ದಿನಾಂಕ:13.10.2023) ಕೋರಲಾಗಿತ್ತು. ಆದರೆ ಯಾವುದೇ ವಿವರವನ್ನು ಹಾಜರುಪಡಿಸಿರುವುದಿಲ್ಲ ಎಂದು ಲೆಕ್ಕಪರಿಶೋಧನಾ ವರದಿಯಲ್ಲಿ ಹೇಳಲಾಗಿದೆ.

 

bbmp indira canteen scam

 

ತಿಂಡಿ, ಊಟ ಸರಬರಾಜು ಸಂಬಂಧ ವಹಿಸಿರುವ ಸಂಸ್ಥೆಗಳಿಗೆ ಕಾರ್ಯ ಹಂಚಿಕೆ ಮಾಡಿದ ಸ್ವರೂಪ ಮತ್ತು ಈ ಸಂಬಧದ ಕಡತಗಳನ್ನು (ಷರತ್ತು ಮತ್ತು ನಿಬಂಧನೆಯೊಂದಿಗೆ) ಒದಗಿಸಬೇಕು, ಈ ಯೋಜನೆಯನ್ನು ಸರ್ಕಾರದ ವತಿಯಿಂದ ಆಯೋಜಿಸಿದ್ದು, ತಿಂಡಿ-ಊಟದ ವೆಚ್ಚದ ಬಾಡ್ತಿನಲ್ಲಿ ಸರ್ಕಾರದಿಂದ ಪ್ರತ್ಯೇಕವಾಗಿ ಅನುದಾನ ಬಿಡುಗಡೆಗೊಳಿಸಲಾಗುತ್ತಿದೆಯೇ ಅಥವಾ ಪಾಲಿಕೆಗೆ ಪಾಲಿಕೆಯಿಂದ ಭರಿಸಲಾಗುತ್ತಿದೆಯೇ ಎಂಬ ವಿವರ ನೀಡಬೇಕು, ತಿಂಡಿ-ಊಟಗಳಿಗೆ ನಿಗದಿಗೊಳಿಸಿದ ದರಕ್ಕೆ ಅನುಸರಿಸಿದ ಮಾನದಂಡ ಮತ್ತು ಸರ್ಕಾರದ ವತಿಯಿಂದ ಸಂಸ್ಥೆಗೆ ನೀಡುವ ಸಂಖ್ಯಾವಾರು ಸಹಾಯಧನವನ್ನು ಪರಿಗಣಿಸಿರುವುದಕ್ಕೆ ಪಾಲಿಸಿರುವ ಮಾನದಂಡವನ್ನು ತಿಳಿಸಬೇಕು ಎಂದು ಲೆಕ್ಕಪರಿಶೋಧಕರು ಕೋರಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

 

‘ತಿಂಡಿ-ಊಟ ಸರಬರಾಜು ಮಾಡಲು ಮೂರು ಸಂಸ್ಥೆಗಳಿಗೆ ಹಂಚಿಕೆ ಮಾಡಿದ್ದು, ಪ್ರತಿ ಮಾಹೆಯ ಬಿಲ್ ಪಾವತಿ ವೇಳೆ ಈ ಸಂಸ್ಥೆಗಳಿಗೆ ಶೇ. 20-30 ರಂತೆ ಪಾವತಿಸಲಾಗಿದೆ. ಈ ಸಂಬಂಧ ಬಿಲ್ ತಯಾರಿಕೆ ವೇಳೆ ಸರಬರಾಜು ಮಾಡಲಾದ ಮುಂಗಡ ಪಾವತಿ ಮೊತ್ತದ ಬಗ್ಗೆ ಹಾಗೂ ಊಟದ ಸಂಖ್ಯೆಗಳನ್ನು ಪರಿಗಣಿಸಿ ಪಾವತಿಸುವುದರ ಬಗ್ಗೆ ಮಾಹಿತಿ ಒದಗಿಸಬೇಕು, ಪ್ರತಿ ತಿಂಗಳು ಪಾವತಿಸಲಾದ ಬಿಲ್ಲುಗಳಿಂದ ಕಟಾಯಿಸಲಾದ ಶಾಸನಾತ್ಮಕ ಕಟಾವಣೆಗಳನ್ನು ಮುಂದಿನ ಮಾಹೆಯ ಮೊದಲ ವಾರದೊಳಗೆ ಆಯಾ ಲೆಕ್ಕ ಶೀರ್ಷಿಕೆಗಳಿಗೆ ಜಮಾ ಮಾಡಬೇಕಿರುತ್ತಿದೆ. ಇದನ್ನು ಪರಿಶೀಲಿಸಲಾಗಿ ಭಾಗಶಃ ಮೊತ್ತ ಜಮಾ ಮಾಡಲಾಗಿದೆ. ಇದಕ್ಕೆ ಕಾರಣವನ್ನು ನೀಡಬೇಕು ಎಂದು ಲೆಕ್ಕಪರಿಶೋಧಕರು ಬಿಬಿಎಂಪಿಯನ್ನು ಕೋರಿದ್ದರು. ಆದರೆ ಈ ಯಾವ ಮಾಹಿತಿಯನ್ನೂ ನೀಡಲಾಗಿಲ್ಲ,’  ಎಂದು ಲೆಕ್ಕಪರಿಶೋಧನಾ ವರದಿಯಲ್ಲಿ ತಿಳಿಸಲಾಗಿದೆ.

 

ಇಂದಿರಾ ಕ್ಯಾಂಟೀನ್ ಹಾಗೂ ಇದರ ಅಡುಗೆ ಮನೆಗಳಿಗೆ ʻಕರ್ನಾಟಕ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘʼದ ವತಿಯಿಂದ  ಓರ್ವ ಮುಖ್ಯ ಲೆಕ್ಕಾಧಿಕಾರಿ, 32 ಜೆ.ಸಿ.ಓ ಹಾಗೂ 436 ಮಾರ್ಶಲ್‌ಗಳನ್ನು  ನೇಮಿಸಿಕೊಳ್ಳಲಾಗಿದೆ. ಇವರುಗಳ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ವಿವರವನ್ನು ಲೆಕ್ಕಪರಿಶೋಧನೆಯ ವೇಳೆ ಕೇಳಲಾಗಿತ್ತು. ಆದರೆ ಬಿಬಿಎಂಪಿಯು ಈ ಮಾಹಿತಿಯನ್ನು ಕೂಡ ನೀಡಿಲ್ಲ. ಈ ನೇಮಕದಲ್ಲಿ ಯಾವುದೇ ಲೋಪದೋಷಗಳು ಕಂಡುಬಂದರೆ  ನೇಮಕಕ್ಕೆ ಸಂಬಂಧಿಸಿದ ಅಧಿಕಾರಿಗಳು ನೇರ ಹೊಣೆಗಾರರಾಗಿರುತ್ತಾರೆ ಎಂದು ಲೆಕ್ಕಪರಿಶೋಧನಾ ವರದಿಯಲ್ಲಿ ಎಚ್ಚರಿಸಲಾಗಿದೆ.

 

ಎಲ್ಲ ದಿನವೂ ಒಂದೇ ಪ್ರಮಾಣದ ಆಹಾರ ಖರ್ಚು!

 

ಕ್ಯಾಂಟೀನ್‌ ಅಥವಾ ಹೋಟೆಲ್‌ಗಳಲ್ಲಿ ಎಲ್ಲ ದಿನದ ವ್ಯಾಪಾರವೂ ಒಂದೇ ರೀತಿಯಾಗಿ ಇರಲು ಸಾಧ್ಯವಿಲ್ಲ. ಒಂದು ದಿನ ಹೆಚ್ಚು ಗಿರಾಕಿಗಳು ಬರಬಹುದು, ಇನ್ನೊಂದು ದಿನ ಕಡಿಮೆ ಗಿರಾಕಿಗಳಿರಬಹುದು. ಒಟ್ಟಾರೆ ವ್ಯಾಪಾರ ಹೆಚ್ಚು-ಕಡಿಮೆ ಆಗುತ್ತದೆ. ಆದರೆ ಬಿಬಿಎಂಪಿಯ  ಪಶ್ಚಿಮ ವಲಯ ವಿಭಾಗ ವ್ಯಾಪ್ತಿಯಲ್ಲಿ ಬರುವ ಇಂದಿರಾ ಕ್ಯಾಂಟಿನ್‌ಗಳಿಗೆ ಸಂಬಂಧಿಸಿದಂತೆ ಪಾವತಿ ಬಿಲ್ಲುಗಳನ್ನು  ಲೆಕ್ಕಪರಿಶೋಧನೆ ಸಂದರ್ಭದಲ್ಲಿ ಪರಿಶೀಲಿಸಿದಾಗ, ಪ್ರತಿ ವಾರ್ಡ್‌ಗಳ ಇಂದಿರಾ ಕ್ಯಾಂಟೀನ್ ಬಿಲ್ಲುಗಳು ಎಲ್ಲಾ ದಿನಗಳಲ್ಲಿಯೂ ಒಂದೇ ರೀತಿಯಾಗಿತ್ತು. ಒಂದೇ ಪ್ರಮಾಣದಲ್ಲಿ ಅಹಾರ ಸರಬರಾಜು ಮಾಡಲಾಗಿತ್ತು ಎಂದು ಲೆಕ್ಕ ಪರಿಶೋಧನಾ ವರದಿಯಲ್ಲಿ ಹೇಳಲಾಗಿದೆ.

 

ಈ ರೀತಿ ಒಂದೇ ಪ್ರಮಾಣದಲ್ಲಿ ಆಹಾರ ಸರಬರಾಜಾಗಿರುವುದನ್ನು  ಆರೋಗ್ಯ ಪರಿವೀಕ್ಷಕರು ಹಾಗೂ ಆರೋಗ್ಯ ವೈದ್ಯಾಧಿಕಾರಿಗಳು ಪ್ರಮಾಣಿಕರಿಸಿದ್ದರು. ಈ ಪ್ರಮಾಣವನ್ನು ಪ್ರಮಾಣಿಕರಿಸುವ ವೇಳೆ ಯಾವ ಮಾನದಂಡ ಬಳಸಿ ಪ್ರಮಾಣವನ್ನು ಪರಿಶೀಲಿಸಲಾಗುತ್ತಿದೆ ಎಂಬ ಬಗ್ಗೆ ವಿವರವನ್ನು ಬಿಬಿಎಂಪಿಯು ಒದಗಿಸಿಲ್ಲ ಎಂದು ವರದಿಯು ಎತ್ತಿ ತೋರಿಸಿದೆ.

 

bbmp indira canteen scam

 

ಆಹಾರ ಸರಬರಾಜು ಮಾಡುವ ವೇಳೆ ಎಲೆಕ್ಟ್ರಾನಿಕ್ ರಶೀದಿಗಳನ್ನು ಬಳಕೆ ಮಾಡಲಾಗುತ್ತಿದೆಯೋ ಅಥವಾ ಬೇರೆ ರಸೀದಿಗಳನ್ನು ಬಳಕೆ ಮಾಡಲಾಗುತ್ತಿದ್ದಲ್ಲಿ ರಸೀದಿಗಳ ಮುಖ ಬೆಲೆ ಮೊತ್ತದ ವಿವರಗಳನ್ನು ಹಾಗೂ ಸರಬರಾಜು ಮಾಡಲಾಗಿರುವ ಆಹಾರ ಸರಬರಾಜು ವಿವರಗಳ ದಾಸ್ತಾನು ವಹಿಯನ್ನು ಪರಿಶೀಲನೆಗೆ ಹಾಜರುಪಡಿಸಲಿಲ್ಲ.  ಪ್ರತಿ ತಿಂಗಳು ಇಂಡೆಂಟ್ ನೀಡುವಾಗ ಯಾವ ಮಾನದಂಡ ಬಳಸಿ ಅಹಾರ ಸರಬರಾಜಿನ ಪ್ರಮಾಣವನ್ನು ನಿಗದಿಪಡಿಸಲಾಗುತ್ತಿದೆ ಎಂಬುದಕ್ಕೆ ವಿವರಗಳನ್ನು ಬಿಬಿಎಂಪಿಯು ಒದಗಿಸಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

 

ಇಂದಿರಾ ಕ್ಯಾಂಟೀನ್ ಅಹಾರದ ಗುಣಮಟ್ಟ ಪರೀಕ್ಷೆ ಮಾಡಿರುವ ವರದಿ ಹಾಗೂ ನಿಯಮ ಉಲ್ಲಂಘನೆಯಾಗಿದ್ದಲ್ಲಿ ವಿಧಿಸಲಾಗಿರುವ ದಂಡದ ವಿವರ ಲಭ್ಯವಿಲ್ಲ. ದರ ನಿರ್ಧರಕ್ಕೆ ಸಂಬಂಧಿಸಿದ ಅದೇಶದ ಪ್ರತಿಯನ್ನು ಲೆಕ್ಕಪರಿಶೋಧನೆಗೆ ಒದಗಿಸಲಿಲ್ಲ. ಆಹಾರ ಸರಬರಾಜು ದಾರರನ್ನು ಯಾವ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ ಎಂಬ ಮಾಹಿತಿಯನ್ನು, ಸಂಬಂಧಿಸಿದ ದಾಖಲೆನ್ನು ಬಿಬಿಎಂಪಿಯು ನೀಡಿಲ್ಲ ಎಂದು ಲೆಕ್ಕಪರಿಶೋಧನಾ ವರದಿಯಲ್ಲಿ ತಿಳಿಸಲಾಗಿದೆ.

 

ಲೆಕ್ಕಪರಿಶೋಧನೆಗೆ ಅಗತ್ಯ ದಾಖಲೆಗಳನ್ನು ನೀಡದಿರುವ ಮತ್ತು ಲೆಕ್ಕಪರಿಶೋಧನೆಯ ವೇಳೆಯಲ್ಲಿ ಗಮನಿಸಲಾಗಿರುವ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಲು ಬಿಬಿಎಂಪಿಯು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಈ ಲೆಕ್ಕಪರಿಶೋಧನಾ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

 

ಇನ್ನೂ ಬರಲಿವೆ 93 ಕ್ಯಾಂಟೀನ್‌ಗಳು

 

2017ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸರ್ಕಾರ, ತಮಿಳುನಾಡಿನ ʻಅಮ್ಮ ಕ್ಯಾಂಟೀನ್‌ʼ ಮಾದರಿಯಲ್ಲಿ ಕಡಿಮೆ ದರದಲ್ಲಿ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ ʻಇಂದಿರಾ ಕ್ಯಾಂಟೀನ್‌ʼ ಯೋಜನೆಯನ್ನು ಜಾರಿಗೆ ತಂದಿತ್ತು. ಕಾಂಗ್ರೆಸ್‌ ಅವಧಿಯಲ್ಲಿ ಜಾರಿಗೆ ಬಂದಿದ್ದ ಈ ಯೋಜನೆ ಬಿಜೆಪಿ ಅಧಿಕಾರಾವಧಿಯಲ್ಲಿ ಕುಂಟುತ್ತಾ ಸಾಗಿತ್ತು. ಅತಿ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳನ್ನು ಹೊಂದಿರುವ ರಾಜಧಾನಿ ಬೆಂಗಳೂರಿನಲ್ಲಿಯೇ ಸರ್ಕಾರದ ಅನುದಾನದ ಕೊರತೆಯಿಂದಾಗಿ ಕೆಲ ಕ್ಯಾಂಟೀನ್‌ಗಳು ಮುಚ್ಚಿದ್ದವು.

 

ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ, ಎಲ್ಲ ಕ್ಯಾಂಟೀನ್‌ಗಳಿಗೆ ಮರು ಜೀವ ನೀಡಿದೆಯಾದರೂ ಅಗತ್ಯವಿರುವಷ್ಟು ಅನುದಾನ ಒದಗಿಸಿಲ್ಲ. ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್‌ಗಳಿಗೆ ಮರು ಜೀವ ನೀಡಿ, ಪೌಷ್ಟಿಕ ಆಹಾರ ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಘೋಷಿಸಿದ್ದರು.

 

ʻಗುಣಮಟ್ಟದ ಆಹಾರ ಎಲ್ಲರಿಗೂ ಸಿಗಬೇಕು, ಹಸಿದವರು ಉಪವಾಸದಿಂದ ಇರಬಾರದು ಎಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್‌ ಅನ್ನು ಎಲ್ಲ ವಾರ್ಡ್‌ಗಳಲ್ಲಿ ಆರಂಭಿಸಲಾಗುತ್ತದೆʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ 2023-24ನೇ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸಿದ್ದರಾದರೂ, ಹೊಸ ಕ್ಯಾಂಟೀನ್‌ಗಳು ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ಒಟ್ಟು 52 ಕ್ಯಾಂಟೀನ್‌ಗಳ ನಿರ್ಮಾಣ ಕಾರ್ಯ ಕುಂಟುತ್ತಾ ಸಾಗಿದೆ.

 

bbmp indira canteen scam

 

ಇದಲ್ಲದೆ, ರಾಜ್ಯದಲ್ಲಿ 93 ಹೊಸ ಇಂದಿರಾ ಕ್ಯಾಂಟೀನ್‌ಗಳು ನಿರ್ಮಾಣಗೊಂಡಿದ್ದು, ಅದರಲ್ಲಿ ಕೊಪ್ಪಳದಲ್ಲಿ ಒಂದು ಕ್ಯಾಂಟೀನ್‌ ಉದ್ಘಾಟನೆ ಗೊಂಡಿದೆ. ರಾಜ್ಯದಲ್ಲಿ ಈಗಾಗಲೇ ಆರಂಭಮಾಡಲಾಗಿರುವ ಕ್ಯಾಂಟೀನ್‌ಗಳಲ್ಲಿ ಯಾವುದೇ ಇಂದಿರಾ ಕ್ಯಾಂಟೀನ್‌ ಅನ್ನು ಸ್ಥಗಿತಗೊಳಿಸಲಾಗಿಲ್ಲ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್‌ ತಿಳಿಸಿದ್ದಾರೆ.

 

ಕಳೆದ ಆಗಸ್ಟ್‌ನಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಮಾನಪ್ಪ ಡಿ ವಜ್ಜಲ್‌ ಕೇಳಿದ ಪ್ರಶ್ನಗೆ ಉತ್ತರಿಸಿರುವ ಸಚಿವರು, ರಾಜ್ಯದಲ್ಲಿ ಮೊದಲ ಹಂತದಲ್ಲಿ 197 ಹಾಗೂ 2ನೇ ಹಂತದಲ್ಲಿ 186 ಒಟ್ಟು 383 ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸಲಾಗಿದೆ. ಈಗಾಗಲೇ 290 ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿದ್ದು, 93 ಕ್ಯಾಂಟೀನ್‌ನಗಳು ಲೋಕಾರ್ಪಣೆಗೊಳ್ಳುವ ಹಂತದಲ್ಲಿವೆ ಎಂದು ತಿಳಿಸಿದ್ದರು.

 

ಜಿಲ್ಲೆಗಳಲ್ಲಿನ ಇಂದಿರಾ ಕ್ಯಾಂಟೀನ್‌ ನಿರ್ವಹಣೆಯ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಒಟ್ಟಾರೆ ರಾಜ್ಯದಲ್ಲಿ 1,444 ಸಿಬ್ಬಂದಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಚಿವರು ವಿಧಾನಸಭೆಗೆ ಮಾಹಿತಿ ನೀಡಿದ್ದರು.

 

2023-24 ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ಇಂದಿರಾ ಕ್ಯಾಂಟೀನ್‌ ಯೋಜನೆಗೆ 100 ಕೋಟಿ ರು. ಹಣ ಹಂಚಿಕೆ ಮಾಡಿತ್ತು. ಇದರಲ್ಲಿ 71.29 ಕೋಟಿ ಬಿಡುಗಡೆಯಾಗಿದ್ದು, ಇಷ್ಟೂ ಹಣವನ್ನು ಬಳಸಲಾಗಿತ್ತು. 2024-25ನೇ ಸಾಲಿನಲ್ಲಿ 225.98 ಕೋಟಿ ಹಂಚಿಕೆ ಮಾಡಿದ್ದು, ಇಷ್ಟೂ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಆದರೆ 169 ಕೋಟಿಗಳನ್ನು ಮಾತ್ರ ವೆಚ್ಚ ಮಾಡಲಾಗಿದೆ ಎಂದು ಸಚಿವ ಬೈರತಿ ಸುರೇಶ್‌ ಈ ಸಂಬಂಧ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದರು.

 

ಪೌರಕಾರ್ಮಿಕರಿಗೆ ಬಿಸಿಯೂಟ; ಇಂದಿರಾ ಕ್ಯಾಂಟೀನ್‌ ಬದಲಿಸಿ ಇಸ್ಕಾನ್‌ಗೆ ಹಿಂಬಾಗಿಲಲ್ಲಿ ರತ್ನಗಂಬಳಿ

 

ಬಿಬಿಎಂಪಿಯು ಪೌರ ಕಾರ್ಮಿಕರಿಗೆ ಬಿಸಿಯೂಟ ನೀಡಲು ಯೋಜನೆ ರೂಪಿಸಿ, ಇಂದಿರಾ ಕ್ಯಾಂಟೀನ್‌ಗೆ ಬದಲಾಗಿ, ಟೆಂಡರ್‌ ಇಲ್ಲದೆಯೇ ಇಸ್ಕಾನ್‌ನ ಟಚ್‌ ಸ್ಟೋನ್‌ ಫೌಂಡೇಷನ್‌ಗೆ ವಹಿಸಲು ಮುಂದಾಗಿದ್ದ ಕುರಿತು ʻದಿ ಫೈಲ್‌ʼ ತನಿಖಾ ವರದಿ ಪ್ರಕಟಿಸಿತ್ತು.

Your generous support will help us remain independent and work without fear.

Latest News

Related Posts