24 ಕೆ ಜಿ ಗಾಂಜಾ ಸಾಗಣೆ ಪ್ರಕರಣದಲ್ಲಿ ಜಾಮೀನು; ಮೇಲ್ಮನವಿ ಸಲ್ಲಿಕೆಯಿಲ್ಲ, ಆರೋಪಿ ಪರ ನಿಂತ ಸರ್ಕಾರ?

ಬೆಂಗಳೂರು; ವಾಣಿಜ್ಯ ಉದ್ದೇಶಕ್ಕಾಗಿ ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆಯೇ ರೈಲಿನಲ್ಲಿ 24 ಕೆ ಜಿ 660 ಗ್ರಾಂ ತೂಕವುಳ್ಳ ಗಾಂಜಾ ಸಾಗಾಣಿಕೆ ಮಾಡುತ್ತಿದ್ದದ್ದು ತನಿಖೆಯಿಂದ ದೃಢಪಟ್ಟಿದ್ದರೂ ಸಹ  ಆರೋಪಿಗೆ ನ್ಯಾಯಾಲಯವು ನೀಡಿರುವ ಜಾಮೀನನ್ನು ಪ್ರಶ್ನಿಸಲು ‘ಯೋಗ್ಯ ಪ್ರಕರಣವಲ್ಲ’ ಎಂದು ಸರ್ಕಾರ ಷರಾ ಬರೆದಿರುವುದು ಇದೀಗ ಬಹಿರಂಗವಾಗಿದೆ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಹಂಕ ಪೊಲೀಸ್‌ ಠಾಣೆಯ ಪೊಲೀಸರು ಆರೋಪಿಯ ಕೃತ್ಯವನ್ನು ತನಿಖೆಯಲ್ಲಿ ದೃಢಪಡಿಸಿದ್ದರು. ಆದರೂ ನ್ಯಾಯಾಲಯವು ಜಾಮೀನು ನೀಡಿತ್ತು. ಈ ಜಾಮೀನನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅಗತ್ಯವಿದೆ ಎಂದು ರಾಜ್ಯ ಸರ್ಕಾರಿ ಅಭಿಯೋಜಕರು ನೀಡಿದ್ದ ಅಭಿಪ್ರಾಯವನ್ನೇ ಬದಿಗೊತ್ತಲಾಗಿದೆ.

 

ಈ ಪ್ರಕರಣದಲ್ಲಿ ಒಳಾಡಳಿತ ಇಲಾಖೆಯು ಮೇಲ್ಮನವಿ ಸಲ್ಲಿಸಲು ಈ ಪ್ರಕರಣವು ಯೋಗ್ಯವಾಗಿಲ್ಲ ಎಂದು ಅಭಿಪ್ರಾಯಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

ನ್ಯಾಯಾಲಯಗಳಲ್ಲಿರುವ ವಿವಿಧ ಪ್ರಕರಣಗಳು ಮತ್ತು ಅರ್ಜಿಗಳಿಗೆ ಸಂಬಂಧಿಸಿದಂತೆ ಮೇಲ್ಮನವಿಗಳನ್ನು ಸಲ್ಲಿಸುವ ಸಂಬಂಧ ಒಳಾಡಳಿತ ಇಲಾಖೆಯು ಇತ್ತೀಚೆಗಷ್ಟೇ ಸಭೆ ನಡೆಸಿತ್ತು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಒಳಾಡಳಿತ ಇಲಾಖೆಯು ಹಲವು ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸುವುರಿಂದ ಹಿಂದೆ ಸರಿದಿದೆ.
ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ, ಸಭೆಯ ನಡವಳಿಗಳ ಪ್ರತಿಗಳು ಲಭ್ಯವಾಗಿವೆ.

 

ಪ್ರಕರಣದ ವಿವರ

 

ವಾಣಿಜ್ಯ ಉದ್ದೇಶಕ್ಕಾಗಿ ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆಯೇ ಪ್ರಶಾಂತಿ ಎಕ್ಸ್‌ಪ್ರೆಸ್‌ನಲ್ಲಿ 24 ಕೆ ಜಿ 660 ಗ್ರಾಂ ತೂಕದ ಗಾಂಜಾವನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಯಲಹಂಕ ರೈಲ್ವೇ ನಿಲ್ದಾಣದಲ್ಲಿ ಪೊಲೀಸರು ಗಾಂಜಾ ಸಮೇತ ಪಶ್ಚಿಮ ಬಂಗಾಳ ಮೂಲದ ಆರೋಪಿ ಶಕೀಲ್‌ ಅನ್ಸಾರಿ ಸರ್ಕಾರ್‍‌ನನ್ನು ಬಂಧಿಸಿದ್ದರು. ಆರೋಪಿ ವಿರುದ್ಧ ಕಲಂ 20 (ಬಿ ಅ(ii) ಎನ್‌ಡಿಪಿಎಸ್‌ ಕಾಯ್ದೆ ಅಡಿ ಮೊಕದ್ದಮೆ ದಾಖಲಿಸಿದ್ದರು. ಈ ಸಂಬಂಧ ಕ್ರಿಮಿನಲ್‌ ಅರ್ಜಿ (ರಿಟ್‌ ಪಿಟಿಷನ್‌ ಸಂಖ್ಯೆ; 7474/2025) ದಾಖಲಿಸಿದ್ದರು.

 

ಈ ಸಂಬಂಧ ಬೆಂಗಳೂರು ಗ್ರಾಮಾಂತರ ಪೊಲೀಸರು 2025ರ ಜನವರಿ 27ರಂದು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಇದನ್ನು ಆರೋಪಿಯು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ.

 

 

ಆರೋಪಿಗೆ ಜಾಮೀನು ನೀಡಿದ್ದ ನ್ಯಾಯಾಲಯ

 

ಬಂಧನಕ್ಕೆ ಒಳಪಡಿಸುವ ವ್ಯಕ್ತಿಗೆ ಬಂಧನಕ್ಕೆ ಅಗತ್ಯವಾದ ಆಧಾರಗಳನ್ನು ವ್ಯಕ್ತಿ, ಅರ್ಜಿದಾರನಿಗೆ, ಆತನ ಸಂಬಂಧಿಕರಿಗೆ ಭಾರತದ ಸಂವಿಧಾನದ ವಿಧಿ 22(1) ರ ಅಡಿಯಲ್ಲಿ ಒದಗಿಸಬೇಕು. ಆದರೆ ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲು ಅಗತ್ಯವಾದ ಆಧಾರಗಳನ್ನು ನೀಡಿರಲಿಲ್ಲ. ಅಲ್ಲದೇ ಆರೋಪಿಗೆ ಯಾವ ಕಾರಣಗಳಿಗಾಗಿ ಆರೋಪಿಯನ್ನು ದಸ್ತಗಿರಿ ಮಾಡಲಾಗಿದೆ ಎಂದು ತಿಳಿಸಿರಲಿಲ್ಲ. ಇದರಿಂದ ಬಿಎನ್‌ಎಸ್‌ಎಸ್‌ ಕಲಂ 47, 48, ಮತ್ತು ಭಾರತದ ಸಂವಿಧಾನದ ವಿಧಿ 22(1) ಉಲ್ಲಂಘನೆ ಆಗಿರುವುದು ಕಂಡು ಬರುತ್ತದೆ ಎಂದು ನ್ಯಾಯಾಲಯವು ತೀರ್ಪಿನಲ್ಲಿ ವಿವರಿಸಿತ್ತು.

 

 

ಪಂಕಜ್ ಬನ್ಸಾಲ್ vs. ಭಾರತ ಒಕ್ಕೂಟ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪು, (2024) 7 SCC 576, ಪ್ರಬೀರ್ ಪುರ್ಕಾಯಸ್ಥ vs. ರಾಜ್ಯ (NCT- ದೆಹಲಿ) – (2024) 8 SCC 254 ಮತ್ತು ವಿಹಾನ್ ಕುಮಾರ್ Vs. ರಾಜ್ಯ ಹರಿಯಾಣ – 2025 INSC 162 ತೀರ್ಪಿನ ಅಂಶಗಳನ್ನು ಅನ್ವಯಿಸಿ ಆರೋಪಿಯನ್ನು ರಿಮ್ಯಾಂಡ್‌ ಮಾಡಿರುವುದು ಕಾನೂನುಬದ್ಧವಾಗಿರುವುದಿಲ್ಲ .

 

 

ಮತ್ತು ಆರೋಪಿಯು ಜಾಮೀನು ಪಡೆಯಲು ಅರ್ಹನಿದ್ದಾನೆ ಎಂದು ಅರ್ಜಿದಾರನಿಗೆ ಜಾಮೀನು ನೀಡಿತ್ತು.

 

 

ನ್ಯಾಯಾಲಯವು ಹೊರಡಿಸಿರುವ ಆದೇಶವು ಸೂಕ್ತವಾಗಿರುವುದಿಲ್ಲ. ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅಗತ್ಯವಿರುತ್ತದೆ ಎಂದು ರಾಜ್ಯ ಸರ್ಕಾರಿ ಅಭಿಯೋಜಕರು ಅಭಿಪ್ರಾಯಪಟ್ಟಿದ್ದರು.
ಬಂಧನ ಕಾನೂನುಬಾಹಿರವಾಗಿಲ್ಲ

 

 

ಈ ಪ್ರಕರಣದಲ್ಲಿ ರಾಜ್ಯ ಸರ್ಕಾರಿ ಅಭಿಯೋಜಕರು ನೀಡಿದ್ದ ಅಭಿಪ್ರಾಯದ ಕುರಿತು ಸರ್ಕಾರದ ಉಪ ಕಾರ್ಯದರ್ಶಿ ಅವರೂ ಅಭಿಪ್ರಾಯ ನೀಡಿದ್ದರು. ಅಲ್ಲದೇ ರಾಜ್ಯ ಸರ್ಕಾರದ ವಿರುದ್ಧ ದರ್ಶನ್‌ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನೂ ಸಹ ಅವಲೋಕಿಸಿದ್ದರು.

 

 

ಯಾವ ಕಾರಣಗಳಿಗಾಗಿ ಆರೋಪಿಯನ್ನು ದಸ್ತಗಿರಿ ಮಾಡಲಾಗಿದೆ ಎಂಬುದರ ಬಗ್ಗೆ ರಿಮ್ಯಾಂಡ್‌ ಅರ್ಜಿಯಲ್ಲಿ ಉಲ್ಲೇಖಿಸಿದಲ್ಲಿ ಸಾಕಾಗುತ್ತದೆ. ಪ್ರತ್ಯೇಕವಾಗಿ ಲಿಖಿತ ರೀತಿಯಲ್ಲಿ ಯಾವ ಕಾರಣಗಳಿಗಾಗಿ ಆರೋಪಿಯನ್ನು ದಸ್ತಗಿರಿ ಮಾಡಲಾಗಿರುತ್ತದೆ ಎಂದು ಉಲ್ಲೇಖಿಸಿರುವುದಿಲ್ಲವೆಂಬ ಕಾರಣಕ್ಕೆ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸುವುದು ಸೂಕ್ತವಾಗಿರಲಿಲ್ಲ.

 

ಯಾವ ಕಾರಣಗಳಿಗಾಗಿ ಆರೋಪಿಯನ್ನು ದಸ್ತಗಿರಿ ಮಾಡಲಾಗಿದೆಯೆಂದು ಲಿಖಿತ ರೀತಿಯಲ್ಲಿ ಆರೋಪಿಗೆ ಮಾಹಿತಿ ನೀಡಿಲ್ಲ ಎಂಬ ಕಾರಣಕ್ಕೆ ಆರೋಪಿಯ ಬಂಧನವು ಕಾನೂನುಬಾಹಿರವಾಗಿರುವುದಿಲ್ಲ. ಅಲ್ಲದೇ ಕೇವಲ ತಾಂತ್ರಿಕ ಅಂಶಗಳನ್ನು ಪರಿಗಣಿಸಿ ರಿಮ್ಯಾಂಡ್‌ ಆದೇಶವನ್ನು ರದ್ದುಗೊಳಿಸಿ ಜಾಮೀನು ನೀಡುವುದು ಸೂಕ್ತವಾಗಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಕೂಡ ನಿರ್ಣಯಿಸಿದೆ.

 

ಸರ್ವೋಚ್ಛ ನ್ಯಾಯಾಲಯದ ಈ ತೀರ್ಪು, ಈ ಪ್ರಕರಣಕ್ಕೂ ಸಹ ಅನ್ವಯವಾಗುತ್ತದೆ. ಈ ಪ್ರಕರಣದಲ್ಲಿ ಆರೋಪಿ/ಅರ್ಜಿದಾರನನ್ನು ಯಾವ ಕಾರಣಗಳಿಗಾಗಿ ದಸ್ತಗಿರಿ ಮಾಡಲಾಗಿದೆ ಎಂದು ರಿಮ್ಯಾಂಡ್‌ ಅರ್ಜಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಮತ್ತು ಆರೋಪಿಗೆ ದಸ್ತಗಿರಿ ಮಾಡಿರುವ ಬಗ್ಗೆ ಸಹಜವಾಗಿ ಮಾಹಿತಿ ನೀಡಿದೆ.

 

ಆರೋಪಿಯ ಮುಖಾಂತರ ನಿಷೇಧಿತ ಮಾದಕ ದ್ರವ್ಯ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಇದರಿಂದ ಯಾವ ಕಾರಣಗಳಿಗಾಗಿ ತಮ್ಮನ್ನು ಬಂಧಿಸಲಾಗಿರುತ್ತದೆಂಬುದು ಮಾಹಿತಿ ಇದೆ. ಆದರೂ ರಿಮ್ಯಾಂಡ್‌ ಆದೇಶವನ್ನು ರದ್ದುಗೊಳಿಸಿ ಜಾಮೀನು ನೀಡಿರುವುದು ಸೂಕ್ತವಾಗಿಲ್ಲ ಎಂದು ಜಾಮೀನು ನೀಡಿರುವುದು ಸಮಂಜಸವಾಗಿರುವುದಿಲ್ಲ ಎಂದು ಉಪ ಕಾರ್ಯದರ್ಶಿಯು ಅಭಿಪ್ರಾಯಿಸಿರುವುದು ಗೊತ್ತಾಗಿದೆ.

 

 

ಆದರೆ ಒಳಾಡಳಿತ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಈ ಪ್ರಕರಣದಲ್ಲಿ ಉಚ್ಛ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಯೋಗ್ಯ ಪ್ರಕರಣವಾಗಿರುವುದಿಲ್ಲ ಎಂದು ಅಭಿಪ್ರಾಯಿಸಿದ್ದಾರೆ.

Your generous support will help us remain independent and work without fear.

Latest News

Related Posts