ಬೆಂಗಳೂರು; ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆಂದು ಒದಗಿಸಿದ್ದ ಅನುದಾನವನ್ನು ಪೌರ ಕಾರ್ಮಿಕರ ವಿಶ್ರಾಂತ ಕೊಠಡಿ, ಶೌಚಾಲಯ ನಿರ್ಮಾಣಕ್ಕೆ ಬಳಸಲು ಕೇಂದ್ರವು ತಡೆಯೊಡ್ಡಿದೆ. ಅಲ್ಲದೇ ಸ್ವಚ್ಛ ಭಾರತ ಮಿಷನ್ ಅಭಿಯಾನದಡಿಯಲ್ಲಿ ಕೇಂದ್ರ ಸರ್ಕಾರವು ನೀಡಿದ್ದ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವಲ್ಲಿ ರಾಜ್ಯ ಸರ್ಕಾರವು ಹಿಂದೆ ಬಿದ್ದಿದೆ.
ಅಲ್ಲದೇ ಇದೇ ಉದ್ದೇಶಕ್ಕಾಗಿ ನೀಡಿದ್ದ ಅನುದಾನವನ್ನು ಖರ್ಚು ಮಾಡದೇ ಇರುವ 133.54 ಕೋಟಿ ರು.ಗಳನ್ನು ಐಇಸಿ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಮುಂದಾಗಿದ್ದ ರಾಜ್ಯ ಸರ್ಕಾರದ ಕ್ರಮಕ್ಕೆ ಕೇಂದ್ರ ಸರ್ಕಾರವು ತಡೆಯೊಡ್ಡಿದೆ.
ಈ ಸಂಬಂಧ ಸ್ವಚ್ಛ ಭಾರತ್ ಮಿಷನ್‌ನ ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ರೂಪಾ ಮಿಶ್ರಾ ಅವರು 2025ರ ಜನವರಿ 17ರಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ದೀಪಾ ಚೋಳನ್ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಕೇಂದ್ರವು ಪ್ರಸ್ತಾಪಿಸಿರುವ ಅಂಶಗಳ ಕುರಿತು ಅಧಿಕಾರಿಗಳು ಸಚಿವ ಬೈರತಿ ಸುರೇಶ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೇಂದ್ರ ಸರ್ಕಾರವು ಬರೆದಿರುವ ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಸ್ವಚ್ಛ ಭಾರತ್ ಮಿಷನ್ ಅಭಿಯಾನದಡಿಯಲ್ಲಿ ನೀಡಿದ್ದ ಅನುದಾನದ ಪೈಕಿ 748.90 ಕೋಟಿ ರು. ಮೊತ್ತಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ನೀಡಿರುವ ಬಳಕೆ ಪ್ರಮಾಣಪತ್ರಗಳನ್ನು ಪರಿಷ್ಕರಿಸಲು ಕೇಂದ್ರವು ಮುಂದಾಗಿದೆ. ರಾಜ್ಯದಲ್ಲೇ ಉಳಿದಿರುವ ಈ ಹಣವನ್ನು ಯೋಜನಾ ನಿಧಿ ಎಂದೇ ಪರಿಗಣಿಸಲಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿರುವುದು ಗೊತ್ತಾಗಿದೆ.
ಇನ್ನುಳಿದ 515.48 ಕೋಟಿ ರು.ಗಳನ್ನು ಖರ್ಚು ಮಾಡದೇ ಇರುವ ಹಣ ಎಂದು ಪರಿಗಣಿಸಲಾಗುತ್ತದೆ. ಮತ್ತು 299.43 ಕೋಟಿ ರು ವೆಚ್ಚದ ಯೋಜನೆಗಳು ಪೂರ್ಣಗೊಂಡ ನಂತರ ಎಸ್‌ಎನ್‌ಎ ಸ್ಪರ್ಶ್ ಮೂಲಕ ಬಳಸಿಕೊಳ್ಳಬಹುದು. ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲಿನ ಅನುದಾನದಲ್ಲಿ ಖರ್ಚಾಗದೇ ಇರುವ ಮೊತ್ತದ ವಿವರಗಳನ್ನು ಸಲ್ಲಿಸಬೇಕು ಎಂದು ಪತ್ರದಲ್ಲಿ ನಿರ್ದೇಶಿಸಿರುವುದು ತಿಳಿದು ಬಂದಿದೆ.

ಪೌರಕಾರ್ಮಿಕ ವಿಶ್ರಾಂತಿ ಕೊಠಡಿಗಳು, ಯಾಂತ್ರಿಕೃತ ಸ್ವೀಪರ್‌ಗಳು ಮತ್ತು ಸಂಚಾರಿ (ಮೊಬೈಲ್) ಶೌಚಾಲಯಗಳ ನಿರ್ಮಾಣಕ್ಕಾಗಿ ಐಎಚ್‌ಎಚ್‌ಎಲ್/ಸಿಟಿ ಘಟಕವು 133.54 ಕೋಟಿ ಮೊತ್ತದ ಅನುದಾನ ಒದಗಿಸಿತ್ತು. ಆದರೆ ಇದನ್ನು ಖರ್ಚು ಮಾಡಿಲ್ಲ. ಖರ್ಚು ಮಾಡದ ನಿಧಿಯನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರವು ಕೇಂದ್ರಕ್ಕೆ ಕೋರಿಕೆ ಸಲ್ಲಿಸಿತ್ತು.
ಈ ಕೋರಿಕೆ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರವು ಸ್ವಚ್ಛ ಭಾರತ್ ಮಿಷನ್ ಮಾರ್ಗಸೂಚಿಗಳ ಪ್ರಕಾರ ಅನುಮತಿ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ 5 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ರಸ್ತೆ ಗುಡಿಸುವ ಸಂಬಂಧ 31 ಯಂತ್ರೋಪಕರಣಗಳನ್ನು ಖರೀದಿಸುವ ಕ್ರಿಯಾ ಯೋಜನೆ ಅನುಮೋದನೆ ನೀಡಿದೆ. ಹೀಆಗಿ ಕೇಂದ್ರ ಮತ್ತು ರಾಜ್ಯ ಪಾಲಿನ ಅನುದಾನದಲ್ಲಿ ಖರ್ಚು ಮಾಡದೇ ಇರುವ ಹಣವನ್ನು ಕೇಂದ್ರ ಸರ್ಕಾರದ ಸಂಚಿತ ನಿಧಿಯಲ್ಲಿ ಠೇವಣಿ ಇರಿಸಬೇಕು ಎಂದು ಪತ್ರದಲ್ಲಿ ಸೂಚಿಸಿರುವುದು ಗೊತ್ತಾಗಿದೆ.
ಅದೇ ರೀತಿ ಐಇಸಿ ಮತ್ತು ಸಿಬಿ ಘಟಕದ ಅಡಿಯಲ್ಲಿ ವೆಚ್ಚ ಮಾಡಲಾಗುವುದು ಎಂದು ರಾಜ್ಯವು ಕೇಂದ್ರದ ಮುಂದೆ ಪ್ರಸ್ತಾವಿಸಿತ್ತು. ಆದರೆ ಇದಕ್ಕೆ ಉತ್ತರಿಸಿರುವ ಕೇಂದ್ರವು ಸ್ವಚ್ಛ ಭಾರತ್ ಮಿಷನ್ ಮಾರ್ಗಸೂಚಿಗಳ ವ್ಯಾಪ್ತಿಗೆ ಒಳಪಟ್ಟಿಲ್ಲ ಮತ್ತು ಈ ಮಾರ್ಗಸೂಚಿಗಳ ಪ್ರಕಾರ ಅವುಗಳು ಸ್ವೀಕಾರಾರ್ಹ ಚಟುವಟಿಕೆಗಳು ಎಂದು ಕಂಡು ಬಂದಿಲ್ಲ ಸ್ಪಷ್ಟಪಡಿಸಿರುವುದು ತಿಳಿದು ಬಂದಿದೆ.
ಸ್ವಚ್ಛ ಭಾರತ್ ಮಿಷನ್ 2.0ರ ಪ್ರಕಾರ ಶೌಚಾಲಯ ನಿರ್ಮಾಣಕ್ಕೆ ಬಿಡುಗಡೆ 57.83 ಕೋಟಿ ರುಗಳನ್ನು 2025ರ ಜನವರಿ 7ರಂದು ಮಂಜೂರಾತಿ ನೀಡಲಾಗಿದೆ. ಈ ಶೌಚಾಲಯ ಆಸನಗಳ ಸಮರ್ಪಕತೆಯನ್ನು ನಿರ್ಣಯಿಸಲಾಗಿದೆಯೇ, ಹಾಗಿದ್ದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಹೆಸರು, ನಿರ್ಮಾಣದ ವರ್ಷ, ಕರ್ನಾಟಕಕ್ಕೆ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಪ್ರಸ್ತಾಪಿಸಲಾದ ಮತ್ತು ಮಂಜೂರು ಮಾಡಲಾದ ಶೌಚಾಲಯಗಳ ಸಂಖ್ಯೆ ಮತ್ತು ಅಂತರ ವಿಶ್ಲೇಷಣೆಯ ವಿವರಗಳನ್ನು ಒದಗಿಸಬೇಕು. ಈ ಪ್ರಸ್ತಾವನೆಗಳು ಗುರುತಿಸಲಾದ ಅಂತರದೊಂದಿಗೆ ಹೊಂದಿಕೆಯಾಗುತ್ತವೆಯೇ ಎಂದು ಸಹ ದೃಢೀಕರಿಸಬಹುದು ಎಂದು ಕೇಂದ್ರವು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಅದೇ ರಿತಿ 2014 ರ ಪೂರ್ವದಲ್ಲಿ ಮತ್ತು ನಂತರದ ಶೌಚಾಲಯಗಳ ನವೀಕರಣ, ಮರುಜೋಡಣೆ ಘಟಕಕ್ಕೆ ಸಂಬಂಧಿಸಿದಂತೆಯೂ ಮಾಹಿತಿ ಕೋರಿದೆ. ಈ ಶೌಚಾಲಯಗಳ ನಿರ್ಮಾಣವನ್ನು ಯಾವುದೇ ರಾಜ್ಯ ಮಟ್ಟದ ತಾಂತ್ರಿಕ ಸಮಿತಿಯು ಪರಿಶೀಲಿಸಿದೆಯೇ ಅಥವಾ ಅನುಮೋದಿಸಿದೆಯೇ ಎಂದು ತಿಳಿಸಬೇಕು. ಅಲ್ಲದೇ ಈ ಸಂಬಂಧಿತ ದಾಖಲೆಗಳನ್ನು ಒದಗಿಸಬೇಕು ಎಂದು ಸೂಚಿಸಿದೆ.
88 ಮಹತ್ವಾಕಾಂಕ್ಷೆಯ ಶೌಚಾಲಯಗಳಿಗೆ ಸಂಬಂಧಿಸಿದಂತೆ, ಪ್ರವಾಸೋದ್ಯಮ ಇಲಾಖೆಯ ಅಡಿಯಲ್ಲಿರುವ ಶೌಚಾಲಯಗಳು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯೊಳಗೆ ಬರುತ್ತವೆಯೇ , ಮತ್ತು ಈ ಶೌಚಾಲಯಗಳು ಗುರುತಿಸಲಾದ ಪ್ರವಾಸಿ ತಾಣಗಳಲ್ಲಿವೆಯೇ ಎಂದು ದೃಢೀಕರಿಸಬೇಕು ಎಂದೂ ನಿರ್ದೇಶಿಸಿರುವುದು ತಿಳಿದು ಬಂದಿದೆ.





