ಹಾಸ್ಟೆಲ್‌ಗಳಿಗೆ ಹಾಸಿಗೆ, ದಿಂಬು ಖರೀದಿ, ತೆಂಗಿನ ನಾರಿನ ಉತ್ಪನ್ನಗಳ ಕಡೆಗಣನೆ; ಸಿಎಂ ನಿರ್ದೇಶನಕ್ಕೂ ಕಿಮ್ಮತ್ತಿಲ್ಲ

ಬೆಂಗಳೂರು; ಹಾಸಿಗೆ, ದಿಂಬು, ಡೈನಿಂಗ್‌ ಟೇಬಲ್‌, ಫುಟ್‌ ಮ್ಯಾಟ್‌ ಸೇರಿದಂತೆ ತೆಂಗಿನ ನಾರಿನ ಇತರೆ ಉತ್ಪನ್ನಗಳನ್ನು ಸರ್ಕಾರದ ಇಲಾಖೆಗಳು, ಅಧೀನ ಸಂಸ್ಥೆಗಳು, ನಿಗಮ, ಮಂಡಳಿಗಳು ತೆಂಗಿನ ನಾರಿನ ಅಭಿವೃದ್ಧಿ ನಿಗಮದಿಂದಲೇ ಖರೀದಿಸಬೇಕು ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ನಿರ್ದೇಶನವನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳು ಪಾಲಿಸಿಲ್ಲ.

 

ಗರಿಷ್ಠ 50 ಲಕ್ಷ ರು. ಮೊತ್ತದಲ್ಲಿ ನೇರವಾಗಿ ಖರೀದಿಸಲು ಕೆಟಿಪಿಪಿ ಕಾಯ್ದೆ ಅಡಿಯಲ್ಲಿ ವಿನಾಯಿತಿ ನೀಡಿದ್ದರೂ ಸಹ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ನಿರೀಕ್ಷಿತ ಬೇಡಿಕೆ ಆದೇಶಗಳನ್ನು ನೀಡಿಲ್ಲ. ಹೀಗಾಗಿ ಕರ್ನಾಟಕ ರಾಜ್ಯ ತೆಂಗು ನಾರಿನ ಅಭಿವೃದ್ದಿ ನಿಗಮದ ವ್ಯಾಪಾರ, ವಹಿವಾಟು ಕುಂಠಿತಕ್ಕೆ ದಾರಿ ಮಾಡಿಕೊಟ್ಟಿದೆ. ಅಲ್ಲದೇ ಈ ನಿಗಮ ಮತ್ತು ತೆಂಗಿನ ನಾರಿನ ಉತ್ಪನ್ನಗಳನ್ನು ನಂಬಿರುವ ಸಾವಿರಾರು ಕುಟುಂಬಗಳನ್ನು ಬೀದಿಗೆ ತಂದಂತಾಗಿದೆ.

 

ಕೌಶಲ್ಯ ಅಭಿವೃದ್ಧಿಗೆ ಸರ್ಕಾರವು ಸಾವಿರಾರು ಕೋಟಿ ರು. ಗಳನ್ನು ಸುರಿಯುತ್ತಿದೆ. ಅಲ್ಲದೇ ವಿವಿಧ ರೀತಿಯ ಕೌಶಲ್ಯ ಅಭಿವೃದ್ಧಿಗೆ ಅಭೂತಪೂರ್ವ ಕೊಡುಗೆ ಮತ್ತು ಪ್ರಗತಿ ಸಾಧಿಸಿದೆ. ಆದರೂ ಸರ್ಕಾರಿ ಇಲಾಖೆಗಳು, ನಿಗಮ, ಮಂಡಳಿಗಳು ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ದಿ ನಿಗಮವು ತಯಾರಿಸುತ್ತಿರುವ ಉತ್ಪನ್ನಗಳನ್ನೇ ಖರೀದಿ ಮಾಡುತ್ತಿಲ್ಲ. ಮತ್ತು 4 ಜಿ ವಿನಾಯಿತಿಯನ್ನೂ ನೀಡುತ್ತಿಲ್ಲ.

 

ಈ ಸಂಬಂಧ ಕರ್ನಾಟಕ ರಾಜ್ಯ ತೆಂಗಿನ ನಾರಿನ ನಿಗಮದ ಅಧ್ಯಕ್ಷ ನಟರಾಜ್‌ ಜಾನಕಿರಾಮ್‌ ಅವರು 2025ರ ಆಗಸ್ಟ್‌ 8ರಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆದಿದ್ದಾರೆ.

 

ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

 

 

ಆದರೆ ಈ ಪತ್ರದ ಮೇಲೆ ಯಾವುದೇ ಕ್ರಮವಹಿಸಿಲ್ಲ. ಹೀಗಾಗಿ ನಿಗಮದ ಅಧ್ಯಕ್ಷರು 2025ರ ಆಗಸ್ಟ್‌ 21ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

 

 

 

ಪತ್ರದಲ್ಲೇನಿದೆ?

 

2025-26ನೇ ಸಾಲಿನ  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಮ ಶಾಲೆಗಳು, ಮೆಟ್ರಿಕ್‌ ಪೂರ್ವ, ಮೆಟ್ರಿಕ್‌ ನಮತರದ ವಿದ್ಯಾರ್ಥಿ ನಿಲಯಗಳಿಗೆ ಅವಶ್ಯವಿರುವ ಟೂಟೈರ್‍‌ ಕಾಟ್, ಹಾಸಿಗೆ, ದಿಂಬುಗಳನ್ನು ಖರೀದಿಸಲು ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮಕ್ಕೆ 4 ಜಿ ವಿನಾಯಿತಿ ನೀಡಬೇಕು ಎಂದು ಕೋರಿರುವುದು ಪತ್ರದಿಂದ ಗೊತ್ತಾಗಿದೆ.

 

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಮ ಶಾಲೆಗಳು ಮತ್ತು ಮೆಟ್ರಿಕ್‌ ಪೂರ್ವ, ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಿಗೆ ಟೂಟೈರ್‍‌ ಕಾಟ್‌, ಹಾಸಿಗೆ, ದಿಂಬು ಖರ್‍ಈದಿಸಲು ಒಟ್ಟಾರೆ 83 ಕೋಟಿ ರು ಅನುದಾನ ಮಂಜೂರಾಗಿದೆ ಎಂದು ಪತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದಿರುವುದು ತಿಳಿದು ಬಂದಿದೆ.

 

ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮವು ಕರ್ನಾಟಕ ಸರ್ಕಾರದ ಉದ್ಯಮವಾಗಿದೆ. ನಿಗಮದ ಉತ್ಪಾದನಾ ಕೇಂದ್ರಗಳಲ್ಲಿ ಗ್ರಾಮೀಣ ಭಾಗದ ಜನರಿಗೆ ಅದರಲ್ಲಿ ಹೆಚ್ಚಾಗಿ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ನೀಡುತ್ತಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಮಂಜೂರಾಗಿರುವ ಒಟ್ಟು ಮೊತ್ತದಲ್ಲಿ 33 ಕೋಟಿ ರು ಗಳ ಅನುದಾನವನ್ನು ಸರ್ಕಾರಿ ಸ್ವಾಮ್ಯದ ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮದಿಂದಲೇ  ಕಾಟ್‌, ಹಾಸಿಗೆ, ದಿಂಬುಗಳನ್ನು ಖರೀದಿಸಲು 4 ಜಿ ವಿನಾಯಿತಿ ನೀಡಬೇಕು. ಇದರಿಂದ ಆರ್ಥಿಕ ವಹಿವಾಟು ಸುಧಾರಿಸಲಿದೆ. ಮತ್ತು ಕಾರ್ಮಿಕರಿಗೆ ವೇತನ ಪಾವತಿಸಲು ಸಹಾಯಕವಾಗುತ್ತದೆ ಎಂದು ಅಧ್ಯಕ್ಷ ನಟರಾಜ್‌ ಜಾನಕಿರಾಮ್‌ ಅವರು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.

 

ಕರ್ನಾಟಕ ರಾಜ್ಯ ತೆಂಗಿನ ನಾರು ಅಭಿವೃದ್ದಿ ನಿಗಮದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು  2024ರ ಸೆ. 25ರಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಕಳೆದ ವರ್ಷವೂ  ಪತ್ರ  (ಕೆಎಸ್‌ಡಿಸಿ/ವ್ಯ/(ಮಾ) 4(ಜಿ)/ಕಾಯರ್‍‌/2024-25 ) ಬರೆದಿದ್ದರು.

 

 

 

ವಿಶೇಷವೆಂದರೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಮೊದಲ ಅವಧಿಯಲ್ಲಿ ಇದೇ ತೆಂಗಿನ ನಾರಿನ ಅಭಿವೃದ್ದಿ ನಿಗಮಕ್ಕೆ ನೆರವು ನೀಡುವ ತೆಂಗು ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿತ್ತು. ನಾರಿನ ಸಿದ್ಧ ವಸ್ತುಗಳು ಮತ್ತು ರಬ್ಬರ್‍‌ ಮಿಶ್ರಿತ ತೆಂಗಿನ ನಾರಿನ ಸಿದ್ಧ ವಸ್ತುಗಳನ್ನು 10.00 ಲಕ್ಷ ರು. ಗರಿಷ್ಠ ಮೊತ್ತದಲ್ಲಿ ಖರೀದಿಸಲು 4(ಜಿ) ವಿನಾಯಿತಿಯನ್ನೂ ನೀಡಲಾಗಿತ್ತು.

 

ಆದರೀಗ ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವ ಹೊತ್ತಿನಲ್ಲೇ ತೆಂಗಿನ ನಾರಿನ ಅಭಿವೃದ್ಧಿ ನಿಗಮಕ್ಕೆ ನಿರೀಕ್ಷಿತ ಬೇಡಿಕೆ ಆದೇಶಗಳು ನೀಡುತ್ತಿಲ್ಲ ಎಂದು ನಿಗಮದ ಅಧ್ಯಕ್ಷರು ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.

 

ಪತ್ರದಲ್ಲೇನಿದೆ?

 

ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ದಿ ನಿಗಮದ ತೆಂಗಿನ ನಾರಿನ ಉತ್ಪನ್ನಗಳನ್ನು 2024-25ನೇ ಸಾಲಿನಲ್ಲಿ ಗರಿಷ್ಠ 50.00 ಲಕ್ಷ ರು. ಮೊತ್ತದಲ್ಲಿ ನೇರವಾಗಿ ಖರೀದಿಸಲು ಕರ್ನಾಟಕ ಪಾರದರ್ಶಕ ಕಾಯ್ದೆ 1999ರ 4(ಜಿ) ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ.

 

ಸರ್ಕಾರದ ಎಲ್ಲಾ ಇಲಾಖೆಗಳು, ಅಧೀನ ಸಂಸ್ಥೆಳು, ನಿಗಮ, ಮಂಡಳಿಗಳು ತೆಂಗಿನ ನಾರಿನ ಉತ್ಪನ್ನಗಳನ್ನು ನೇರವಾಗಿ ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ದಿ ನಿಗಮದಿಂದ ಖರೀದಿಸಬೇಕು ಎಂದು ಈಗಾಗಲೇ ಮುಖ್ಯಮಂತ್ರಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸಹ ನಿರ್ದೇಶನ ನೀಡಿ ಪತ್ರ ಬರೆದಿದ್ದರು. ಆದರೆ ಇದುವರೆಗೂ ನಿಗಮಕ್ಕೆ ನಿರೀಕ್ಷಿತ ಬೇಡಿಕೆ ಆದೇಶಗಳು ಸ್ವೀಕೃತವಾಗಿರುವುದಿಲ್ಲ. ಇದರಿಂದ ನಿಗಮದ ವ್ಯಾಪಾರ ವಹಿವಾಟು ಕುಂಠಿತಗೊಳ್ಳುವುದಲ್ಲದೇ ಆರ್ಥಿಕ ಪಥದತ್ತ ಸಾಗಲು ಕಷ್ಟ ಸಾಧ್ಯವಾಗಿದೆ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ತೆಂಗಿನ ನಾರಿನ ಉತ್ಪನ್ನಗಳು ಪರಿಸರ ಸ್ನೇಹಿಯಾಗಿವೆ. ಜಿಯೋ ಟೆಕ್ಸ್‌ಟೈಲ್ಸ್‌ನ್ನು ರಸ್ತೆ ನಿರ್ಮಾಣ ಮತ್ತು ಕಡಲ ಕೊರೆತ ತಡೆಯಲು ಬಳಸಬಹುದು. ಕಾಯರ್‍‌ ಪಿತ್‌ ಗೊಬ್ಬರವನ್ನು ಕೃಷಿ ಮತ್ತು ತೋಟಗಾರಿಕೆಯಲ್ಲಿ ಬಳಸಬಹುದು. ಕಾಯರ್‍‌ ಕಾಂಪೋಸಿಟ್‌ ಬೋರ್ಡ್‌ ಬಳಕೆಯಿಂದ ಪರಿಸರ ಮೇಲೆ ಆಗುವ ದುಷ್ಪರಿಣಾಮವನ್ನು ತಡೆಯಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

‘ಈ ಅಂಶಗಳನ್ನು ಮನಗಂಡು ಸರ್ಕಾರಿ ಇಲಾಖೆಗಳು, ಅಧೀನ ಸಂಸ್ಥೆಗಳು, ಪ್ರಾಧಿಕಾರ ಹಾಗೂ ಎಲ್ಲಾ ನಿಗಮ, ಮಂಡಳಿಗಳು ತೆಂಗಿನ ನಾರಿನ ಉತ್ಪನ್ನಗಳ ಬೇಡಿಕೆಯಲ್ಲಿ ಖಡ್ಡಾಯವಾಗಿ ಕನಿಷ್ಠ ಶೇ.50ರಷ್ಟು ಉತ್ಪನ್ನಗಳನ್ನು ರಾಜ್ಯ ಸರ್ಕಾರದ ಸಂಸ್ಥೆಯಾಗಿರುವ ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ದಿ ನಿಗಮದಿಂದಲೇ ಖರೀದಿಸಲು ಪ್ರತ್ಯೇಕ ಅಧಿಸೂಚನೆ ಹೊರಡಿಸಬೇಕು,’ ಎಂದು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.

 

ತೆಂಗಿನ ನಾರಿನ ಕೈಗಾರಿಕೆಯು ಸಾಂಪ್ರದಾಯಿಕ ಹಾಗೂ ಕೃಷಿ ಆಧಾರಿತ ಕೈಗಾರಿಕೆಯಾಗಿದೆ. ಹೆಚ್ಚಿನ ರೀತಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸಲಿದೆ. ಮತ್ತು ರಫ್ತಿಗೆ ವಿಫುಲವಾದ ಅವಕಾಶವಿದೆ. ಭಾರತದಲ್ಲಿ ಕರ್ನಾಟಕ ರಾಜ್ಯ ತೆಂಗು ಬೆಳೆಯಲ್ಲಿ ಕೇರಳ ಹಾಗೂ ತಮಿಳುನಾಡಿನ ನಂತರದ ಸ್ಥಾನದಲ್ಲಿದೆ.

 

ನಾರು ಆಧರಿತ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸುವುದು ಹಾಗೂ ಖಾಸಗಿ ಕ್ಷೇತ್ರದಲ್ಲಿ ನಾರಿನ ಕೈಗಾರಿಕೆ ಅಭಿವೃದ್ಧಿಗಾಗಿ ಸರ್ಕಾರದ ಒಂದು ಕಾರ್ಯಕರ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ನಿಗಮವು 12 ನಾರು ಉತ್ಪಾದನಾ ಕೇಂದ್ರ, ನಾಲ್ಕು ಸುರುಳಿ ಹಗ್ಗ ಘಟಕ ಹಾಗೂ ಏಳು ಸ್ವಯಂಚಾಲಿಕ ಹುರಿ ತಯಾರಿಕಾ ಘಟಕಗಳನ್ನು ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸಿದೆ.

 

ನಿಗಮವು 75 ತೆಂಗಿನ ನಾರಿನ ಉತ್ಪಾದನಾ ಘಟಕಗಳನ್ನು ಹೊಂದಿದೆ. ಈ ಘಟಕಗಳು ಹುರಿ, ಹಗ್ಗ, ಕರ್ಲ್ಲಡ್ ರೋಪ್, ಮ್ಯಾಟಿಂಗ್ ಮತ್ತು ಮ್ಯಾಟ್‌ಗಳ ಉತ್ಪಾದನಾ ಚಟುವಟಿಕೆಯಲ್ಲಿ ತೊಡಗಿವೆ. ಸುಮಾರು 1,500 ಮಂದಿಗೆ ಗ್ರಾಮೀಣ ಭಾಗದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಇದಲ್ಲದೆ, ನಿಗಮ ತನ್ನ ಉತ್ಪನ್ನಗಳ ಮಾರಾಟಕ್ಕಾಗಿ 12 ಮಾರಾಟ ಮಳಿಗೆ ಹಾಗೂ ನಾಲ್ಕು ಮಾರಾಟ ಕೇಂದ್ರಗಳೊಂದಿಗೆ ಮಾರಾಟ ವಾಹನ ಹೊಂದಿದೆ.

 

ಸ್ಥಳೀಯ ಮಾರುಕಟ್ಟೆ ಬೇಡಿಕೆಗನುಗುಣವಾಗಿ ಉತ್ಪನ್ನಗಳು ಪೂರೈಸುತ್ತಿದೆ. ಹಾಗೂ ತನ್ನ ವ್ಯಾಪಾಟ ವಹಿವಾಟನ್ನು ದೆಹಲಿ ಗುಜರಾತ್ ಮುಂತಾದ ಹೊರ ರಾಜ್ಯಗಳಿಗೂ ಸಹ ವಿಸ್ತರಿಸಿದೆ. ತೆಂಗಿನ ಸಿಪ್ಪೆ ಶೇಖರಣೆಗಾಗಿ ಸ್ವಸಹಾಯ ಗುಂಪುಗಳಿಗೆ ಉತ್ತೇಜನ, ಸ್ವ‌ಉದ್ಯೋಗದಲ್ಲಿ ತೊಡಗುವಂತಾಗಲು ನಿರುದ್ಯೋಗಿಗಳಿಗೆ ಕೌಶಲ್ಯಾಭಿವೃದ್ಧಿಗೂ ಸಹಕಾರಿಯಾಗಿದೆ.

 

ಆದರೂ ಸರ್ಕಾರಿ ಇಲಾಖೆಗಳು ತೆಂಗು ಕಚ್ಛಾ ಸಾಮಗ್ರಿಗಳ ಗರಿಷ್ಟ ಬಳಕೆ ಹಾಗೂ ಮಾನವ ಸಂಪನ್ಮೂಲ ಮತ್ತು ಯಂತ್ರೋಪಕರಣಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುತ್ತಿಲ್ಲ. ಈ ಕುರಿತು ಸಚಿವ ಶಿವರಾಜ ತಂಗಡಗಿ ಸೇರಿದಂತೆ ಇನ್ನಿತರೆ ಸಚಿವರೂ ಸಹ ಗಮನಹರಿಸಿಲ್ಲ ಎಂದು ಗೊತ್ತಾಗಿದೆ.

Your generous support will help us remain independent and work without fear.

Latest News

Related Posts