ಬೆಂಗಳೂರು: ರಾಜ್ಯದಲ್ಲಿರುವ 127 ರಾಜ್ಯ ಸಾರ್ವಜನಿಕ ವಲಯದ ಉದ್ದಿಮೆಗಳ ಪೈಕಿ 56 ಉದ್ದಿಮೆಗಳು ನಷ್ಟದಲ್ಲಿರುವುದು ಬೆಳಕಿಗೆ ಬಂದಿದೆ.
ಇವುಗಳ ಕ್ರೋಢೀಕೃತ ನಷ್ಟ 37,677.22 ಕೋಟಿ ರು.ಗಳಾಗಿವೆ. ಈ 56 ಸಾರ್ವಜನಿಕ ಉದ್ದಿಮೆಗಳ ಪೈಕಿ ನಾಲ್ಕು ಶಾಸನಬದ್ಧ ನಿಗಮಗಳಾದರೆ, ಉಳಿದ 52 ಸರ್ಕಾರಿ ಕಂಪನಿಗಳಾಗಿವೆ.
ಮಹಾಲೇಖಪಾಲರು (ಸಿಎಜಿ) 2020-21 ನೇ ಸಾಲಿನಿಂದ 2022-23ನೇ ಸಾಲಿನವರೆಗೆ ಸಾರ್ವಜನಿಕ ಉದ್ದಿಮೆಗಳ ಲೆಕ್ಕಪರಿಶೋಧನೆ ನಡೆಸಿದ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಈ ಸಿಎಜಿ ವರದಿಯನ್ನು ಇತ್ತೀಚೆಗೆ ನಡೆದ ವಿಧಾನಸಭೆಯ ಅಧಿವೇಶನದಲ್ಲಿ ಉಭಯ ಸದನಗಳಲ್ಲಿಯೂ ಮಂಡಿಸಲಾಗಿದೆ.
ರಾಜ್ಯ ಸಾರ್ವಜನಿಕ ಉದ್ದಿಮೆಗಳನ್ನು ಹಿಂದೆ ಸಾರ್ವಜನಿಕ ಉದ್ದಿಮೆಗಳ ಇಲಾಖೆ ನಿರ್ವಹಿಸುತ್ತಿತ್ತು. 2022ರ ಮೇನಲ್ಲಿ ಸಚಿವ ಸಂಪುಟ ಉಪ ಸಮಿತಿಯ ಶಿಫಾರಸಿನ ಮೇರೆಗೆ ಈ ಇಲಾಖೆಯನ್ನು ರದ್ದುಪಡಿಸಿ, ಉದ್ದಿಮೆಗಳನ್ನು ಆರ್ಥಿಕ ಇಲಾಖೆಗೆ ವಹಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆರ್ಥಿಕ ಇಲಾಖೆಯನ್ನು ನೋಡಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಅಂತಿಮಗೊಳಿಸಿರುವ ಲೆಕ್ಕಪತ್ರಗಳ ಅನುಸಾರ, 60 ರಾಜ್ಯ ಸಾರ್ವಜನಿಕ ವಲಯ ಉದ್ದಿಮೆಗಳು 46,814.47 ಕೋಟಿ ಮೊತ್ತದಷ್ಟು ಕ್ರೋಢೀಕೃತ ನಷ್ಟ ಹೊಂದಿದ್ದವು. ಈ ಪೈಕಿ 45 ರಾಜ್ಯ ಸಾರ್ವಜನಿಕ ವಲಯದ ಉದ್ದಿಮೆಗಳು 7,231.07 ಕೋಟಿ ರು. ನಷ್ಟ ಅನುಭವಿಸಿದ್ದವು. ಇನ್ನು 15 ರಾಜ್ಯ ಸಾರ್ವಜನಿಕ ವಲಯ ಉದ್ದಿಮೆಗಳು ತಮ್ಮ ಇತ್ತೀಚಿನ ಪ್ರಮಾಣೀಕೃತ ಲೆಕ್ಕಪತ್ರಗಳ ಅನುಸಾರಿ 3,551.88 ಕೋಟಿ ರು. ಕ್ರೋಢೀಕೃತ ನಷ್ಟ ಹೊಂದಿವೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ನಷ್ಟದಲ್ಲಿರುವ 60 ಸಾರ್ವಜನಿಕ ಉದ್ದಿಮೆಗಳಲ್ಲಿ, ಕರ್ನಾಟಕ ರಾಜ್ಯ ವಿನೀರ್ಸ್ ನಿಯಮಿತ, ಮೈಸೂರು ಕಾಸ್ಮೆಟಿಕ್ಸ್ ಲಿಮಿಟೆಡ್ ಮತ್ತು ಬೆಂಗಳೂರು ಏರ್‌ಪೋರ್ಟ್ ರೈಲ್ ಲಿಂಕ್ ಲಿಮಿಟೆಡ್‌ಗಳ ಸಮಾಪನ ಪ್ರಕ್ರಿಯೆ (ಮುಚ್ಚುವ ಕಾರ್ಯ) ನಡೆಯುತ್ತಿದೆ ಎಂದು ಸಿಎಜಿಯು ತನ್ನ ವರದಿಯಲ್ಲಿ ತಿಳಿಸಿದೆ.
ವಿವಿಧ ವಿದ್ಯುತ್ ಸರಬರಾಜು ಕಂಪನಿಗಳು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸೇರಿದಂತೆ ನಷ್ಟದಲ್ಲಿರುವ 40 ಉದ್ದಿಮೆಗಳ ನಿವ್ವಳ ಮೌಲ್ಯವು (ನೆಟ್‌ವರ್ತ್) ಕ್ರೋಢೀಕೃತ ನಷ್ಟಗಳಿಂದಾಗಿ ಶೂನ್ಯಕ್ಕಿಳಿದಿತ್ತು. ಈ ರೀತಿ ನಷ್ಟ ಅನುಭವಿಸಿರುವ ಉದ್ದಮೆಗಳ ಪೈಕಿ 19 ಉದ್ದಿಮೆಗಳು 2023ರ ಮಾರ್ಚ್ ಹೊತ್ತಿಗೆ ರಾಜ್ಯ ಸರ್ಕಾರಕ್ಕೆ ನೀಡಬೇಕಾಗಿದ್ದ ಸಾಲದ ಮೊತ್ತ 3,231.65 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿದ್ದವು ಎಂದು ಸಿಎಜಿ ವರದಿಯು ವಿವರಿಸಿದೆ.
ಅತಿ ಹೆಚ್ಚು ನಷ್ಟದಲ್ಲಿರುವ ಸಾರ್ವಜನಿಕ ಉದ್ದಿಮೆಗಳ ಪೈಕಿ, ಕರ್ನಾಟಕ ಟೆಲಿಕಾಂ ನಿಯಮಿತ, ಮೈಸೂರು ಅಸಿಟೇಟ್ ಮತ್ತು ಕೆಮಿಕಲ್ಸ್ ಕಂಪನಿ ನಿಯಮಿತ, ವಿಜಯನಗರ ಉಕ್ಕು ನಿಯಮಿತ, ಬೆಂಗಳೂರು ಸಬರ್ಬನ್ ರೇಲ್ ಕಂಪನಿ ನಿಯಮಿತ, ಕರ್ನಾಟಕ ಆಗ್ರೋ ಕೈಗಾರಿಕೆಗಳ ನಿಗಮ ನಿಯಮಿತ, ಮೈಸೂರು ಕ್ರೋಮ್ ಟ್ಯಾನಿಂಗ್ ಕಂಪನಿ ನಿಯಮಿತ, ಮೈಸೂರು ಮ್ಯಾಚ್ ಕಂಪನಿ ನಿಯಮಿತ, ಮೈಸೂರು ಲ್ಯಾಂಪ್ ವರ್ಕ್ಸ್ ನಿಯಮಿತ, ಮೈಸೂರು ಟೊಬ್ಯಾಕೊ ಕಂಪನಿ ನಿಯಮಿತ, ಕರ್ನಾಟಕ ಪಲ್ಪ್‌ವುಡ್ ನಿಯಮಿತ, ಎನ್‌ಜಿಇಎಫ್ ನಿಯಮಿತಗಳು ಕಾರ್ಯಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ನಷ್ಟದಲ್ಲಿರುವ ಉದ್ದಿಮೆಗಳಲ್ಲಿ ಸಾಮಾಜಿಕ ಆಶಯಗಳಿಂದ ಸ್ಥಾಪಿಸಿದ ಅಥವಾ ಕಾಮಗಾರಿಗಳ ನಿರ್ವಹಣೆಗಾಗಿ ಸ್ಥಾಪಿಸಲಾದ ಕಂಪನಿಗಳ ಸಂಖ್ಯೆಯೇ ಹೆಚ್ಚಿದೆ. ಬಹಳ ಮುಖ್ಯವಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ರಾಯಚೂರು ವಿದ್ಯುತ್ ನಿಗಮ ನಿಯಮಿತಗಳ ನಿವ್ವಳ ಮೌಲ್ಯವೇ ಸವೆದು ಹೋಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಲಾಭಗಳಿಸಬಹುದಾಗಿದ್ದ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ ಮತ್ತು ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಿಯಮಿತ, ಮೈಸೂರು ಸಕ್ಕರೆ ಕಂಪನಿ ನಿಯಮಿತ, ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ, ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ ನಿಯಮಿತ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಮಗ ನಿಯಮಿತಗಳು ಭಾರಿ ನಷ್ಟದಲ್ಲಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ನಷ್ಟದಲ್ಲಿರುವ 56 ಉದ್ದಿಮೆಗಳ ನಿವ್ವಳ ಮೌಲ್ಯ 40,684.65 ಕೋಟಿ ರು.ಗಳಾಗಿವೆ. ಇವುಗಳ ಪೈಕಿ ಹದಿನಾಲ್ಕು ಕಾರ್ಯಸ್ಥಗಿತವಾಗಿವೆ ಎಂದು ಸಿಎಜಿಯು ವರದಿಯಲ್ಲಿ ತಿಳಿಸಿದೆ.
ನಿಷ್ಕ್ರೀಯಗೊಂಡಿರುವ ಅಥವಾ ಸ್ಥಗಿತಗೊಳ್ಳುವ ಹಂತದಲ್ಲಿರವ ಈ ಉದ್ದಿಮೆಗಳನ್ನು ಸಂಪೂರ್ಣವಾಗಿ ಮುಚ್ಚಲು ವಿಳಂಬವಾಗಿರುವುದರಿಂದ ಸಾರ್ವಜನಿಕರ ಹಣಕಾಸಿನ ಮೇಲೆ ಒತ್ತಡ ಸೃಷ್ಟಿಯಾಗುತ್ತಿದೆ. ಇದನ್ನು ತಪ್ಪಿಸುವ ಸಲುವಾಗಿ ಸರ್ಕಾರವು ಇಂತಹ ನಿಷ್ಕ್ರಿಯ ರಾಜ್ಯ ಸಾರ್ವಜನಿಕ ವಲಯದ ಉದ್ದಿಮೆಗಳ ಮುಚ್ಚುವ (ಸಮಾಪನಗೊಳ್ಳುವಿಕೆಯ) ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ಸಿಎಜಿಯು ವರದಿಯಲ್ಲಿ ಶಿಫಾರಸು ಮಾಡಿದೆ.
ನಷ್ಟದಲ್ಲಿರುವ ಉದ್ದಿಮೆಗಳ ಹಣಕಾಸು ನಷ್ಟಗಳ ಮೂಲ ಕಾರಣಗಳಿಗೆ ಪರಿಹಾರ ಕಂಡುಹಿಡಿಯಲು ಸರ್ಕಾರವು ನಷ್ಟ ಅನುಭವಿಸುತ್ತಿರುವಂತಹ ರಾಜ್ಯ ಸಾರ್ವಜನಿಕ ವಲಯ ಉದ್ದಿಮೆಗಳ ವ್ಯಾಪಾರ-ವ್ಯವಹಾರಗಳ ಮಾದರಿಗಳನ್ನು ವಿಶ್ಲೇಷಿಸಬೇಕು. ವ್ಯಾಪಾರ-ವ್ಯವಹಾರ ಮಾದರಿಗಳು ಊರ್ಜಿತಗೊಳ್ಳುವ ಸ್ಥಿತಿಯಲ್ಲಿ ಇಲ್ಲದ ಮತ್ತು ನೆಟ್‌ವರ್ತ್ ಸಂಪೂರ್ಣವಾಗಿ ಕರಗಿಹೋಗಿರುವಂತಹ ಕಂಪನಿಗಳನ್ನು ಸರ್ಕಾರ ಪರಿಶೀಲನೆಗೊಳಪಡಿಸಬೇಕು ಎಂದೂ ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಅಗತ್ಯವೆನಿಸಿದರೆ ನಷ್ಟದಲ್ಲಿರುವ ಕಂಪನಿಗಳನ್ನು ಮುಚ್ಚುವುದನ್ನು ಮತ್ತು ತಾನು ಹೂಡಿರುವ ಬಂಡವಾಳ ಹಿಂಪಡೆಯುವುದನ್ನು ಸರ್ಕಾರ ಪರಿಗಣಿಸಬೇಕು ಎಂದು ಕೂಡ ಸಿಎಜಿ ಶಿಪಾರಸು ಮಾಡಿದೆ.
ಮುಚ್ಚಲು ಮುಂದಾದ ಸರ್ಕಾರ
ಈಗಾಗಲೇ ನಷ್ಟದಲ್ಲಿರುವ ರಾಜ್ಯ ಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಕೂಡ ತೀರ್ಮಾನಿಸಿದೆ. ಕಳೆದ ಜನವರಿ 30 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಆರ್ಥಿಕ ಇಲಾಖೆಯು ಈ ಸಂಬಂಧ ಕಳೆದ ಫೆಬ್ರವರಿ 15 ರಂದು (ಆದೇಶ ಸಂಖ್ಯೆ: ಎಫ್‌ಡಿ 10 ಐಎನ್‌ವಿ 20225, ಬೆಂಗಳೂರು, ದಿನಾಂಕ 15-02-2025) ಆದೇಶ ಕೂಡ ಹೊರಡಿಸಿದೆ.
ಆರ್ಥಿಕ ಇಲಾಖೆಯು ಕೂಡ ನಷ್ಟದಲ್ಲಿರುವ ರಾಜ್ಯ ಸಾರ್ವಜನಿಕ ಉದ್ದಿಮೆಗಳ ಪಟ್ಟಿ ಸಿದ್ಧಪಡಿಸಿತ್ತು. ಇದರ ಪ್ರಕಾರ 16 ರಾಜ್ಯ ಸಾರ್ವಜನಿಕ ಉದ್ದಿಮೆಗಳು ನಿಷ್ಕ್ರೀಯಗೊಂಡಿವೆ. 33 ಉದ್ದಿಮೆಗಳು ನಷ್ಟದಲ್ಲಿವೆ. 34 ಉದ್ದಿಮೆಗಳು ಮಾತ್ರ ಲಾಭದಲ್ಲಿ ನಡೆಯುತ್ತಿವೆ.
ನಷ್ಟದಲ್ಲಿರುವ ಉದ್ದಿಮೆಗಳ ಮೌಲ್ಯಮಾಪನ ಮಾಡಿ, ಮುಚ್ಚುವ ಅಥವಾ ವಿಲೀನಗೊಳಿಸುವ ಕುರಿತಂತೆ 2013ರ ಕಂಪನಿ ಕಾಯ್ದೆಯ ಅನ್ವಯ ಕ್ರಮ ತೆಗೆದುಕೊಳ್ಳಬೇಕೆಂದು ಆರ್ಥಿಕ ಇಲಾಖೆಯು ಆದೇಶದಲ್ಲಿ ಸೂಚಿಸಿದೆ. ಈ ಕುರಿತಂತೆ ಜುಲೈ 31ರ ಒಳಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಕೂಡ ಸಂಬಂಧಪಟ್ಟ ಆಡಳಿತ ಇಲಾಖೆಗಳಿಗೆ ಈ ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ.
ಸಾರ್ವಜನಿಕ ಉದ್ಯಮ ಇಲಾಖೆ ತಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲವೆಂದು ಒಪ್ಪಿಕೊಂಡ ಸಚಿವ
ರಾಜ್ಯದಲ್ಲಿ ಎಷ್ಟು ರಾಜ್ಯ ಸಾರ್ವಜನಿಕ ಉದ್ದಿಮೆಗಳು ನಷ್ಟದಲ್ಲಿವೆ, ನಷ್ಟದ ಮೊತ್ತವೆಷ್ಟು, ಎಷ್ಟು ಲಾಭದಲ್ಲಿವೆ ಎಂಬ ಮಾಹಿತಿಯನ್ನು ʻದಿ ಫೈಲ್ʼ 2023ರ ಆಗಸ್ಟ್‌ನಲ್ಲಿಯೇ ವಿವರವಾಗಿ ಪ್ರಕಟಿಸಿತ್ತು.
ಮುಚ್ಚಿರುವ ಎಂಪಿಎಂ ಸೇರಿ ನಷ್ಟದಲ್ಲಿರುವ ಕಂಪನಿಗಳಲ್ಲಿ 43,354.58 ಕೋಟಿ ರು ಹೂಡಿಕೆ; ಪತ್ತೆ ಹಚ್ಚಿದ ಸಿಎಜಿ
ನಷ್ಟದಲ್ಲಿರುವ ಸಾರ್ವಜನಿಕ ಉದ್ದಿಮೆಗಳ ಮೇಲೆ 2023-24ರ ವರೆಗೆ ರಾಜ್ಯ ಸರ್ಕಾರವು 43,354.58 ಕೋಟಿ ರು. ಹೂಡಿಕೆ ಮಾಡಿದೆ. ಇದಕ್ಕೆ ಸಿಎಜಿಯು ಆಕ್ಷೇಪಣೆ ವ್ಯಕ್ತಪಡಿಸಿತ್ತು. ಈ ಕುರಿತು ʻದಿ ಫೈಲ್ʼ ವರದಿ ಪ್ರಕಟಿಸಿತ್ತು.